ಕೂಡ್ಲು ತೀರ್ಥದ ಸೊಬಗು ನೋಡಿದಿರಾ?

Share Button

Kuglu teertha1

ಕರ್ನಾಟಕದ ಮಲೆನಾಡು ಪ್ರದೇಶಗಳನ್ನು ಬಹುಶಃ ಜಲಪಾತಗಳ ನಾಡು ಎಂದೇ ಕರೆಯಬಹುದು. ಏಕೆಂದರೆ ರಾಜ್ಯದ ಬಹುತೇಕ ಜಲಪಾತಗಳು ಈ ಮಲೆನಾಡಿನಲ್ಲೇ ಇವೆ. ಮಲೆನಾಡಿನ ಅತಿ ಸುಂದರ ಜಲಪಾತಗಳಲ್ಲಿ ಆಗುಂಬೆ ಬಳಿ ಇರುವ ಕೂಡ್ಲು ತೀರ್ಥ ಕೂಡ ಒಂದು. ಪಶ್ಚಿಮ ಘಟ್ಟಗಳ ಮಧ್ಯದಲ್ಲಿ ನೆಲೆಗೊಂಡಿರುವ ಕೂಡ್ಲು ತೀರ್ಥ ಜಲಪಾತ ಅತ್ಯಂತ ಸುಂದರವಾದ ಜಲಪಾತಗಳಲ್ಲೊಂದು.

ಆಗುಂಬೆ ಬಳಿ ಹರಿಯುವ ಪವಿತ್ರಾ ಸೀತಾ ನದಿಯಿಂದಾಗಿ ಕೂಡ್ಲು ತೀರ್ಥ ಜಲಪಾತ ಸೃಷ್ಟಿಯಾಗಿದ್ದು, ಸ್ಥಳೀಯವಾಗಿ ಈ ಸೀತಾನದಿಗೆ ಪವಿತ್ರ ಸ್ಥಾನವಿದೆ. ಈ ಸೀತಾನದಿಯನ್ನು ಹೆಬ್ರಿ ಸೀತಾ ನದಿ ಎಂದೂ ಕೂಡ ಸ್ಥಳೀಯರು ಕರೆಯುತ್ತಾರೆ. ಸೀತಾ ನದಿಯ ಒಂದು ಕೊಳದಿಂದ ಹರಿಯುವ ನೀರಿನಿಂದಾಗಿ ಈ ಕೂಡ್ಲು ತೀರ್ಥ ಜಲಪಾತ ಸೃಷ್ಟಿಯಾಗಿದ್ದು, ಈ ಕೊಳದಲ್ಲಿ ನೂರಾರು ವರ್ಷಗಳ ಹಿಂದೆ ಹಲವು ಋಷಿ ಮುನಿಗಳು ತಪಸ್ಸನ್ನಾಚರಿಸಿದ್ದರು ಎಂಬ ಪ್ರತೀತಿ ಇದೆ. ಈ ಕೊಳದಿಂದಾಗಿ ಸೃಷ್ಟಿಯಾಗಿರುವ ಕೂಡ್ಲು ತೀರ್ಥ ಜಲಪಾತ ಸುಮಾರು 126 ಅಡಿ ಮೇಲಿಂದ ಧುಮ್ಮುಕ್ಕುತ್ತದೆ.

ಇದು ಆಗುಂಬೆ ಮತ್ತು ಶಿವಮೊಗ್ಗ ಜಿಲ್ಲೆಗಳಿಗೆ ಪ್ರವಾಸ ಹೊರಡುವವರೆಲ್ಲರು ನೋಡಲೇಬೇಕಾದ ಒಂದು ಸುಂದರ ಜಲಪಾತವಾಗಿದೆ.

Kudlu teertha

ಕೂಡ್ಲು ತೀರ್ಥಕ್ಕೆ ಹೋಗುವುದು ಹೇಗೆ?
ಕೂಡ್ಲು ತೀರ್ಥ ಜಲಪಾತ ಉಡುಪಿಯಿಂದ ಸುಮಾರು 55 ಕಿ.ಮೀ ದೂರದಲ್ಲಿದ್ದು, ಆಗುಂಬೆಯಿಂದ ಕೇವಲ 26 ಕಿ.ಮೀ ದೂರದಲ್ಲಿದೆ. ಸಾರ್ವಜನಿಕ ಸಾರಿಗೆ ವಾಹನಗಳಲ್ಲಿ ಪ್ರಯಾಣಿಸುವವರು ತೀರ್ಥಹಳ್ಳಿ-ಉಡುಪಿ ಬಸ್ ಮೂಲಕ ಸೋಮೇಶ್ವರ ನಿಲ್ದಾಣದಲ್ಲಿ ಇಳಿಯಬೇಕು. ಸೋಮೇಶ್ವರದಿಂದ ಕೂಡ್ಲು ತೀರ್ಥ ಕೇವಲ 10 ಕಿ.ಮೀ ದೂರದಲ್ಲಿದ್ದು, ಅಲ್ಲಿಂದ ಕೂಡ್ಲು ತೀರ್ಥಕ್ಕೆ ಪ್ರಯಾಣಿಸಲು ಆಟೋಗಳ ಸೇವೆ ಇದೆ.

ಇನ್ನು ಬೈಕ್ ಮತ್ತು ಕಾರುಗಳಂತಹ ಸ್ವಂತ ವಾಹನಗಳಿದ್ದರೆ, ಆಗುಂಬೆಯ ಘಾಟಿಯಿಂದ ಕೆಳಗೆ ಸೊಮೇಶ್ವರಕ್ಕೆ ಹೋದರೆ, ಸುಮಾರು 1 ರಿಂದ 2 ಕಿ.ಮಿ ದೂರದಲ್ಲಿ ಎಡಕ್ಕೆ ತಿರುಗಿ ಸುಮಾರು 7 ಕಿ.ಮಿ ಕ್ರಮಿಸಬೇಕು. ಬಳಿಕ ಪ್ರವಾಸಿಗರು ಮೂರರಿಂದ ನಾಲ್ಕು ಕಿ.ಮೀ ದೂರವನ್ನು ಕಾಲ್ನಡಿಗೆಯಲ್ಲಿ ಕ್ರಮಿಸಿದರೆ ಮನೋಹರವಾಗಿ ಧುಮ್ಮುಕ್ಕುವ ಕೂಡ್ಲು ತೀರ್ಥ ಜಲಪಾತವನ್ನು ತಲುಪಬಹುದು.

 

– ಸುರೇಂದ್ರ ಪೈ, ಸಿದ್ಧಾಪುರ

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: