ಕರ್ಪೂರ ಸಮಾಚಾರ …

Share Button
Hema-20122015

ಪೂಜಾ ಕಾರ್ಯಕ್ರಮಗಳು ಕರ್ಪೂರದಾರತಿ ಬೆಳಗಿದಾಗ ಸಂಪನ್ನವಾಗುತ್ತವೆ. ಮೂಳೆನೋವು-ಕೀಲುನೋವಿಗೆ ಔಷಧಿಯಾಗಿ ಬಳಸುವ ಹಲವಾರು ತೈಲ, ಮುಲಾಮುಗಳಿಗೆ ಕರ್ಪೂರವನ್ನು ಬಳಸುತ್ತಾರೆ. ನೆಗಡಿ, ಕೆಮ್ಮು ಕಾಡುತ್ತಿದ್ದರೆ ಮೂಗು,ಕತ್ತು ಮತ್ತು ಹಣೆಗೆ ಲೇಪಿಸುವ ವಿಕ್ಸ್, ಅಮೃತಾಂಜನದಂತಹ ಔಷಧಿಗಳಲ್ಲಿಯೂ ಕರ್ಪೂರದ ಅಂಶವಿರುತ್ತದೆ. ಶೀತ ಬಾಧೆಯಿಂದ ಮೂಗು ಕಟ್ಟಿಕೊಂಡಿದ್ದರೆ ಉಪಯೋಗಿಸುವ inhaler ಗಳಲ್ಲೂ ಕರ್ಪೂರವನ್ನು ಬಳಸುತ್ತಾರೆ.

ಬಟ್ಟೆಬರೆಗಳನ್ನು ಜೋಡಿಸಿರುವ ಕಪಾಟಿನಲ್ಲಿ ಕರ್ಪೂರದ ಗುಳಿಗೆಗಳನ್ನು ಇಟ್ಟರೆ ಬಟ್ಟೆಗಳು ಸುವಾಸಿತವಾಗಿರುದ ಜತೆಗೆ ಜಿರಳೆಗಳು ಸೇರಿಕೊಳ್ಳುವುದಿಲ್ಲ . ರೂಮ್ ಗಳಲ್ಲಿ ಚಿಕ್ಕ ಪಾತ್ರೆಯಲ್ಲಿ ಸ್ವಲ್ಪ ನೀರಿಟ್ಟು ಒಂದೆರಡು ಕರ್ಪೂರದ ಗುಳಿಗೆಗಳನ್ನು ಹಾಕಿದರೆ ಸೊಳ್ಳೆಯ ಕಾಟವೂ ತಪ್ಪುತ್ತದೆ. ಕರ್ಪೂರದ ಇನ್ನೊಂದು ರೂಪವಾದ ‘ಪಚ್ಚೆ ಕರ್ಪೂರವನ್ನು’ ಕೆಲವು ಸಿಹಿತಿಂಡಿಗಳ ಸುವಾಸನೆ ಹೆಚ್ಚಿಸಲೂ ಬಳಸುತ್ತಾರೆ.

ಅಚ್ಚ ಬಿಳಿಬಣ್ಣದ ಪುಡಿಯಾಗಿ, ಗೋಲಾಕಾರದ ಉಂಡೆಗಳಾಗಿ, ಚೌಕಾಕಾರದ ಬಿಲ್ಲೆಗಳಾಗಿ, ವಿವಿಧ ಬಣ್ಣಗಳಲ್ಲೂ ಕರ್ಪೂರ ಲಭ್ಯ. ಇಂತಹ ಬಹುರೂಪಿಯಾದ, ಬಹೂಪಯೋಗಿಯಾದ ಕರ್ಪೂರ ಎಲ್ಲಿ ಸಿಗುತ್ತದೆ, ಹೇಗೆ ತಯಾರಾಗುತ್ತದೆ ಎಂಬುದು ಕುತೂಹಲದ ಸಂಗತಿ.

camphor 1        camphor

ಕರ್ಪೂರವು ಒಂದು ಬಿಳಿ, ಕೊಂಚ ಜಿಗುಟಾದ ತೀಕ್ಷ್ನವಾಸನೆಯುಳ್ಳ ದ್ರವ್ಯ. ರಾಸಾಯನಿಕವಾಗಿ ಇದು ಟರ್ಪೆನಾಯ್ಡ್ ಗುಂಪಿಗೆ ಸೇರಿದೆ. ಕರ್ಪೂರವು ಬೋರ್ನಿಯೋ ಮತ್ತು ಟೈವಾನ್‌ಗಳಲ್ಲಿ ಹೆಚ್ಚಾಗಿರುವ ಕ್ಯಾಂಫರ್ ಲಾರೆಲ್ ಎಂಬ ಮರಗಳ ತಿರುಳಿನಲ್ಲಿ ಸಿಗುತ್ತದೆ. ಅಲ್ಲದೆ ಈಗ ಕರ್ಪೂರವನ್ನು ಸಾಮಾನ್ಯವಾಗಿ ರಾಸಾಯನಿಕ ಸಂಯೋಜನೆಯಿಂದ ಕೃತಕವಾಗಿ ಉತ್ಪಾದಿಸಲಾಗುತ್ತಿದೆ. ಟರ್ಪೆಂಟೈನ್ ತೈಲದಿಂದ ಸಹ ಕರ್ಪೂರವನ್ನು ಉತ್ಪಾದಿಸಬಹುದು. ಇದಕ್ಕಿರುವ ವಿವಿಧ ರಾಸಾಯನಿಕ ಹೆಸರುಗಳು 2-2-Bornanone; Bornan-2-one; 2-Camphanone; Formosa. ಸಾಮಾನ್ಯವಾಗಿ ವಸ್ತುಗಳು ಬಿಸಿಯಾದಾಗ ಘನರೂಪದಿಂದ ದ್ರವರೂಪಕ್ಕೆ ಬಂದು ಆಮೇಲೆ ಅನಿಲರೂಪ ತಾಳಿ ಆವಿಯಾಗುತ್ತವೆ. ಆದರೆ ಕರ್ಪೂರವು ಘನರೂಪದಿಂದ ನೇರವಾಗಿ ಆವಿಯಾಗುತ್ತದೆ. ಇದು ಕರ್ಪೂರದ ವೈಶಿಷ್ಟ್ಯ. ಇದನ್ನು ರಾಸಾಯನಿಕವಾಗಿ sublimation ಅನ್ನುತ್ತಾರೆ.

ಕರ್ಪೂರದ ಮರವು ಸಿನಮೋಮಮ್ ಕ್ಯಾಂಪೊರ (Cinnamomum camphora) ಎಂಬ ವೈಜ್ಞಾನಿಕ ಹೆಸರಿನ ನಿತ್ಯಹರಿದ್ವರ್ಣದ ದೊಡ್ಡ ಮರ. ಇದು ಚೀನ, ಜಪಾನ್ ಮತ್ತು ಫಾರ್ಮೋಸಗಳ ಮೂಲವಾಸಿ. ಭಾರತ ಮತ್ತು ಇತರ ಕೆಲವು ದೇಶಗಳಲ್ಲಿ ಈಚೆಗೆ ಇದನ್ನು ಬೆಳೆಸಲಾಗುತ್ತಿದೆ. (ಮೂಡುಬಿದಿರೆಯ ಸೋನ್ಶ್ ಫಾರ್ಮ್ ನಲ್ಲಿ ಕಂಡ ಕರ್ಪೂರದ ಮರದ ಚಿತ್ರ ಇಲ್ಲಿದೆ).

Camphor tree- Soans farm

 

ಸಾಮಾನ್ಯವಾಗಿ 5-6 ವರ್ಷಗಳ ವರೆಗೆ ಬೆಳೆದ ಕರ್ಪೂರದ ಮರದ ಎಲೆ ಹಾಗೂ ಬೊಡ್ಡೆಗಳನ್ನು ಕಡಿದು ಚಿಕ್ಕ ಚಿಕ್ಕ ತುಂಡುಗಳನ್ನಾಗಿ ಮಾಡಿ ಅದರ ಹುಡಿಯನ್ನು ತಯಾರಿಸುತ್ತಾರೆ. ಹುಡಿರಾಶಿಯನ್ನು ದೊಡ್ಡ ಕೊಳಾಯಿಯಲ್ಲಿ ಹಾಕಿ ಕುಲುಮೆಯಲ್ಲಿ ಕಾಯಿಸುತ್ತಾರೆ. ಆಗ ಈ ಹುಡಿ ಬೇಗನೆ ಬಾಷ್ಪೀಭವನ ಹೊಂದುವಂಥ ವಸ್ತುವಾಗುತ್ತದೆ. ತರುವಾಯ ಇದನ್ನು ಹಬೆಯೊಂದಿಗೆ ಸಂಸ್ಕರಿಸಿ ದೊರೆತ ದ್ರಾವಣಕ್ಕೆ ತಂಪು ತಗುಲಿಸಲು ಬಣ್ಣರಹಿತ ಸ್ಫಟಿಕದ ರೂಪದಲ್ಲಿ ಕರ್ಪೂರ ದೊರೆಯುತ್ತದೆ. ಸ್ಫಟಿಕ ಹಾಗೂ ದ್ರಾವಣದ ಈ ಮಿಶ್ರಣವನ್ನು ಸೋಸುವುದರಿಂದ ಸ್ಫಟಿಕಗಳು ಬೇರ್ಪಟ್ಟು ಎಣ್ಣೆಯಂಥ ಪದಾರ್ಥ ಉಳಿಯುತ್ತದೆ. ಇದನ್ನು ಪರಿಮಳಯುಕ್ತವಾದ ಸಾಬೂನು ತಯಾರಿಕೆಯಲ್ಲಿ ಉಪಯೋಗಿಸುವುದುಂಟು.

 

 – ಹೇಮಮಾಲಾ.ಬಿ

( ‘ಮಂಗಳ’ ವಾರಪತ್ರಿಕೆಯಲ್ಲಿ ಪ್ರಕಟಿತ ಬರಹ)

6 Responses

  1. sneha prasanna says:

    ಉತ್ತಮವಾದ ಮಾಹಿತಿ…ಇಷ್ಟವಾಯಿತು..

  2. Kamlesh Kundapur says:

    ಉಪಯುಕ್ತ ಮಾಹಿತಿಗಾಗಿ ಧನ್ಯವಾದಗಳು

  3. Vimalakshi Lingaiah says:

    ಮಾಹಿತಿಗಾಗಿ ಧನ್ಯವಾದಗಳು ಮೇಡಂ

  4. Kote Lingegowda says:

    ಉತ್ತಮ ಮಾಹಿತಿ ನೀಡಿದ್ದಕ್ಕಾಗಿ ತಮಗೆ ಧನ್ಯವಾದಗಳು

  5. Bhat says:

    ಪಚ್ಚ ಕರ್ಪೂರ ಎಂದರೇನು?

  6. savithri s bhat says:

    ಉತ್ತಮ ಮಾಹಿತಿ .ಧನ್ಯವಾದಗಳು

Leave a Reply to savithri s bhat Cancel reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: