ಸೋಪಿನ ಸ್ಕೋಪ್…

Share Button

Hema 11 apr2015

ಸ್ನಾನ ಮಾಡಿ ಬಂದ ಮಗರಾಯ ‘ ನನ್ನ ಸೋಪ್ ಮುಗಿದಿದೆ..ಇನ್ನೊಂದು ತನ್ನಿ’ ಎಂದ. ಸುಮ್ಮನೆ ನಮ್ಮ ಬಾತ್ ರೂಮ್ ನತ್ತ ಕಣ್ಣು ಹಾಯಿಸಿದೆ. ಮೂರು ಸಾಬೂನು ಪೆಟ್ಟಿಗೆಗಳಲ್ಲಿ ಈಗಾಗಲೇ ಬಳಸುತ್ತಿದ್ದ ಮೂರು ಸೋಪುಗಳು ಇದ್ದುವು. ಒಂದರಲ್ಲಿ ಪತಂಜಲಿ ಸಂಸ್ಥೆಯ ಉತ್ಪನ್ನ ‘ಹಳದಿ -ಚಂದನ’ ಸೋಪು, ಇನ್ನೊಂದರಲ್ಲಿ ನಾನು ಬಳಸುವ ‘ವಿವೆಲ್ ‘, ಮತ್ತೊಂದರಲ್ಲಿ ಮಗನಿಗಾಗಿ ‘ಮೆಡಿಮಿ‍ಕ್ಸ್’ ಸೋಪು. ಮನೆಯ ಸದಸ್ಯರಿಗೆ ತಲಾ ಒಂದು ಎಂಬಂತೆ ಸೋಪ್ ಬಾಕ್ಸ್ ಗಳು ಕುಳಿತಿದ್ದುವು. ಇವಿಷ್ಟಲ್ಲದೆ, ಎಂದೋ ಕೊಂಡಿದ್ದ ಮೈಸೂರು ಸ್ಯಾಂಡಲ್ ಸೋಪು, ಎಲ್ಲೋ ಫ್ರೀ ಓಫರ್ ಎಂದು ಸಿಕ್ಕಿದ್ದ ನಾಲ್ಕೈದು ಸೋಪುಗಳು, ಪ್ರಯಾಣದ ಸಮಯದಲ್ಲಿ ಅನುಕೂಲವಾಗಲಿ ಎಂದು ಕೊಂಡಿದ್ದ ಪುಟಾಣಿ ಸೋಪುಗಳು, ಉಳಕೊಂಡಿದ್ದ ಹೋಟೆಲ್ ನಲ್ಲಿ ಇರಿಸಲಾಗಿದ್ದ ಕಾಂಪ್ಲಿಮೆಂಟರಿ ಸೋಪು ಚೆನ್ನಾಗಿತ್ತೆಂದು ಬ್ಯಾಗ್ ಗೆ ಹಾಕಿದ ಸೋಪು….. ಅಬ್ಬಬ್ಬಾ ಸಾಬೂನಿನ ಸಣ್ಣ ಅಂಗಡಿ ನಮ್ಮ ಮನೆಯಲ್ಲಿಯೇ ಇತ್ತು.

ನಮ್ಮ ಬಾಲ್ಯದಲ್ಲಿ ಮನೆಯಲ್ಲಿದ್ದ 8-10 ಮಂದಿ, ಬಂದು ಹೋಗುತ್ತಿದ್ದ ನೆಂಟರು ಎಲ್ಲರ ಬಳಕೆಗೂ ಸಾರ್ವಜನಿಕವಾಗಿ ಇದ್ದುದು ಒಂದೇ ಸೋಪು. ಅದೇ ‘ಲೈಫ್ ಬಾಯ್ ಎಲ್ಲಿದೆಯೋ ಅಲ್ಲಿದೇ ಆರೋಗ್ಯ’ ಎಂಬ ಜಾಹೀರಾತಿನ ಮೂಲಕ ಖ್ಯಾತವಾಗಿದ್ದ ಸಾಬೂನು. ಅದನ್ನು ಉಪಯೋಗಿಸಲು ಮುಖ್ಯ ಕಾರಣ ಅದು ಆಗ ಅಗ್ಗವಾಗಿತ್ತು, ಸುಲಭವಾಗಿ ಕರಗಿ ಬೇಗನೇ ಮುಗಿಯುತ್ತಿಲ್ಲ ಎಂಬುದಾಗಿತ್ತು.

‘ಈ ಸಾಬೂನು ಕಂಡರೇ ಅಸಹ್ಯ, ಹಿಸ್ಕಿನಂತೆ (ಬಸವನಹುಳದ ಲೋಳೆ ಎಂಬ ಅರ್ಥ) ಜಾರುತ್ತದೆ, ಅದರ ವಾಸನೆಗೆ ತೆಲೆ ಸಿಡಿಯುತ್ತದೆ..ಅದೆಲ್ಲಾ ನಿಮಗೇ ಸರಿ’ ಎಂದು ಬೈಯುತ್ತಾ ನಮ್ಮ ಮುತ್ತಜ್ಜಿ ತನ್ನ ಸ್ನಾನಕ್ಕೆ ಮತ್ತು ಬಟ್ಟೆ ಒಗೆಯುವುದಕ್ಕೆ ನೊರೆಕಾಯಿ (ಆಂಟುವಾಳಕಾಯಿ) ಬಳಸುತ್ತಿದ್ದರು. ಈಗೀಗ ಹಲವಾರು ಕಂಪೆನಿಗಳು ತಮ್ಮ ಉತ್ಪನ್ನಗಳನ್ನು ಪುಕ್ಕಟೆಯಾಗಿ ಸ್ಯಾಂಪಲ್ ಕೊಟ್ಟು, ಉಪಯೋಗಿಸಿ ಅಭಿಪ್ರಾಯ ತಿಳಿಸಿ ಎಂದು ಕೇಳುತ್ತವೆ. ಸದ್ಯ, ನಮ್ಮ ಮುತ್ತಜ್ಜಿಯ ಬಳಿ ಯಾರೂ ಸಾಬೂನಿನ ಬಗ್ಗೆ ಅಭಿಪ್ರಾಯ ಕೇಳದಿರುವುದು ಸಾಬೂನು ತಯಾರಕ ಕಂಪೆನಿಗಳ ಅದೃಷ್ಟ. .

ಮನೆಗೆ ಬಂದಿದ್ದ ಚಿಕ್ಕಮ್ಮ ತನ್ನ ಪುಟ್ಟ ಮಗಳಿಗಾಗಿ ತಂದಿದ್ದ ಬಿಳಿ ಬಣ್ಣದ ಘಮಘಮಿಸುವ ‘ಜಾನ್ಸನ್ ಬೇಬಿ ಸೋಪ್’ ಕಂಡಾಗ, ನನಗೆ ಜಗತ್ತಿನಲ್ಲಿ ಇರಬಹುದಾದ ಅತ್ಯಮೂಲ್ಯ ವಸ್ತು ಎಂದರೆ ಇದೇ ಇರಬೇಕು ಅನಿಸಿತ್ತು.

ನಮ್ಮಿಂದ ನಾಲ್ಕೈದು ವರ್ಷ ದೊಡ್ಡವರಾದ, ವರಸೆಯಲ್ಲಿ ಮಾವನಾಗುವ ನೆಂಟರೊಬ್ಬರು, ಆಗ ಪ್ರತಿಭಾನ್ವಿತ ಕಾಲೇಜು ವಿದ್ಯಾರ್ಥಿ ಎಂದು ಹೆಸರು ಗಳಿಸಿದ್ದರು. ಅದೇನೋ ಮಿಶ್ರಣಗಳನ್ನು ಬಳಸಿ, ಕುದಿಸಿ, ಕಾಯಿಸಿ, ಇಡ್ಲಿ ತಟ್ಟೆಗಳಲ್ಲಿ ಸುರಿದು ಮನೆಯಲ್ಲಿಯೇ ಸಾಬೂನು ತಯಾರಿಸುತ್ತಾರೆಂಬ ಸುದ್ದಿ ಸಿಕ್ಕಿ ಅವರ ಮನೆಗೆ ಲಗ್ಗೆ ಇಟ್ಟೆವು. ಹೊಸತನ್ನು ಕಲಿಯುವುದರ ಜತೆಗೆ ಶಾಲೆಯ ಸಯನ್ಸ್ ಕ್ಲಬ್ ನಲ್ಲಿ ನಮ್ಮ ತಿಳಿವಳಿಕೆಯನ್ನು ಪ್ರದರ್ಶಿಸಿ ಮೇಷ್ಟರಿಂದ ಶಹಭಾಷ್ ಎನಿಸಿಕೊಳ್ಳುವ ಹಂಬಲವೇ ಇದಕ್ಕೆ ಪ್ರೇರಣೆಯಾಗಿತ್ತು. ಮಾವ ಬಹಳ ಉತ್ಸಾಹದಿಂದ ತನ್ನ ಸಾಬೂನು ತಯಾರಿಕೆ ಬಗ್ಗೆ ತಿಳಿಸಿದರು. ಅವರ ಮನೆಯಲ್ಲಿ ಇಡ್ಲಿ ತಟ್ಟೆ, ಲೋಟ , ಕೊನೆಗೆ ತೆಂಗಿನಕಾಯಿಯ ಗೆರಟೆಯಲ್ಲಿ ಕೂಡ ಅಚ್ಚು ಹಾಕಿದ್ದ ಸಾಬೂನಿನ ವಿವಿಧ ಆಕೃತಿಗಳಿದ್ದವು. ಅದೇಕೊ ಬಣ್ಣ,ಸುವಾಸನೆ ಇಲ್ಲದ ವಿಚಿತ್ರಾಕಾರದ ಹೋಮ್ ಮೇಡ್ ಸಾಬೂನಿನ ಮುಂದೆ ಆಯತಾಕಾರದ ಕೆಂಬಣ್ಣದ ವಿಶಿಷ್ಟ ವಾಸನೆಯ ಲೈಫ್ ಬಾಯ್ ಎಷ್ಟೋ ಪಾಲು ವಾಸಿ ಎನಿಸಿ ಸಯನ್ಸ್ ಕ್ಲಬ್ ನಲ್ಲಿ ಪ್ರಸ್ತಾಪಿಸುವ ವಿಷಯವನ್ನು ಅಲ್ಲಿಗೆ ಕೈಬಿಟ್ಟೆವು.

ಈಗಂತೂ ಮಗು ಬೆಳೆಯುತ್ತಿದ್ದಂತೆ ಸೋಪು ಬದಲಾಗುತ್ತದೆ. ಎಳೆಯ ಕೋಮಲ ತ್ವಚೆಗೆ ಬೇಬಿ ಸೋಪ್, ಹದಿಹರೆಯದವರಿಗೆ ಲಾವಣ್ಯಭರಿತ ಜಾಹೀರಾತಿನ ಸೋಪ್ ಗಳು, ಶುಷ್ಕತ್ವಚೆಗೆ ಗ್ಲಿಸರಿನ್ ಯುಕ್ತ ಸೋಪ್ ….. ಇತ್ಯಾದಿ. ಹೀಗೆ ಸೋಪಿನ ಸ್ಕೋಪ್ ಬಾಲ್ಯದಿಂದ ವೃದ್ಧಾಪ್ಯದ ವರೆಗೆ ವಿಸ್ತಾರವಾಗಿ ಹರಡಿದೆ.

(ಚಿತ್ರಕೃಪೆ: ಆಂತರ್ಜಾಲ)

 

 – ಹೇಮಮಾಲಾ.ಬಿ

 

4 Responses

  1. Manju Kiran says:

    ವಯಸ್ಸೇ ಆಗದಿರಲು “ಸಂತೂರ್” ಸೋಪ್…ನಿಮ್ಮ ಸೋಪ್ ಪುರಾಣ ಸೊಗಸಾಗಿದೆ…

  2. Balasubramanya Hosoor says:

    ನಂದಿನಿ ದೂದ್ ಫೇಡಾ?

  3. Shankari Sharma says:

    ಮಾಲಾ…ಸೋಪ್ ಸ್ಕೋಪ್…ಸುಪರ್…

  4. ನಮ್ಮ ಮನೆಯ ಪುರಾಣವೇ ಅನ್ನಿಸಿತು. ನಮ್ಮಲ್ಲೂ ಅದೇ ಹಣೆ ಬರಹ…ಸ್ವಲ್ಪ ಚಿಕ್ಕದಾದರೆ ಸಾಕು ಮಗರಾಯರು ಅದನ್ನು ಬಳಸುವದೇ ಬಿಟ್ಟು ಬಿಡುತ್ತಿದ್ದರು
    ಅದನ್ನೆಲ್ಲಾ ಒಂದು ಸಣ್ನ ಬಾಟಲಿಯಲ್ಲಿಟ್ಟು ಸ್ವಲ್ಪ ನೀರು ಹಾಕಿ ಅದನ್ನೇ ಕೈತೊಳೆಯುವ ದೃವಸೋಪಾಗಿ ಮಾರ್ಪಡಿಸಿಕೊಂಡೆವು..’ಧನ್ಯವಾದಗಳು

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: