ಶ್ರೀ ಪುರಂದರದಾಸರು..

Share Button

Savithri Doddamani

15ನೇ ಶತಮಾನದ ಉತ್ತರಾರ್ಧ ಮತ್ತು 16ನೇ ಶತಮಾನದ ಪೂರ್ವಾರ್ದವು ಕರ್ನಾಟಕ ಸಂಗೀತ ಇತಿಹಾಸದಲ್ಲೆ ಬಹಳ ಪವಿತ್ರವಾದುದು.ಸರ್ವಶ್ರೇಷ್ಟ ವಾಗ್ಗೇಯಕಾರರಾದ ಪುರಂದರದಾಸರು ಈ ಶತಮಾನದಲ್ಲಿ ಅವತರಿಸಿದರು.ಕನ್ನಡನಾಡಿನಲ್ಲಿ ಮತ್ತು ನೆರೆಹೊರೆಯ ಪ್ರದೇಶಗಳಲ್ಲಿ ಪುರಂದರದಾಸರ ಹೆಸರು ತ್ಯಾಗರಾಜರ ಹೆಸರಿನಷ್ಟೇ ಪ್ರಸಿದ್ಧ ಹಾಗೂ ಜನಪ್ರಿಯವೂ ಆಗಿದೆ.ಭಗವಂತನ ಸಾಕ್ಷಾತ್ಕಾರಕ್ಕೆ ಜ್ಞಾನ,ಕರ್ಮಗಳಿಗಿಂತ ಭಕ್ತಿಯು ಹೆಚ್ಚು ಉತ್ತಮವಾದ ದಾರಿ ಎಂಬ ಭಾವನೆಯು ಮೂಡಿ ,ದಕ್ಷಿಣದಲ್ಲಿ ವೈಷ್ಣವ ಸಂತರೂ ವೀರಶೈವಶರಣರೂ ಮಹಾರಾಷ್ಟ್ರದ ಸಂತ ಮತ್ತು ಭಾವುಕರ ಪರಂಪರೆಯು ಬೆಳೆಯಿತು.ಈ ಪಂಥವು 8-9 ನೇಯ ಶತಮಾನ ಆರಂಭವಾಗಿ 7-18 ಶತಮಾನದ ವರೆಗೂ ಮುಂದುವರಿದು 11ನೇ ಶತಮಾನದಲ್ಲಿ ಶ್ರೀರಾಮಾನುಜಾಚಾರ್ಯರೂ 13ನೇ ಶತಮಾನದಲ್ಲಿ ಮಧ್ವಾಚಾರ್ಯರೂ ಹರಿ ಸರ್ವೋತ್ತಮ ತತ್ವವನ್ನು ಪ್ರಚಾರ ಮಾಡಿದರು.ಈ ರೀತಿಯಲ್ಲೆ ಭಗವಂತನನ್ನು ಪಡೆಯಲು ಭಕ್ತಿಮಾರ್ಗದಲ್ಲಿ ತೊಡಗಿದ ಗೃಹಸ್ಥರು ಹರಿದಾಸರೆನ್ನಿಸಿಕೊಂಡವರಲ್ಲಿ ಪುರಂದರದಾಸರು ಒಬ್ಬರು.

ಪುರಂದರದಾಸರು ಪುರಂದರಗಡವೆಂಬ ಊರಲ್ಲಿ ಹುಟ್ಟಿದರು.ಇವರ ತಂದೆ ವರದಪ್ಪನಾಯಕ ಶ್ರೀಮಂತ ರತ್ನಪಡಿ ವ್ಯಾಪಾರಿ.ತಾಯಿ ಕಮಲಾಂಬ.ಇವರು ಸ್ಮಾರ್ತದೇಶಸ್ಥರು.ಇವರ ಕುಲದೈವ ತಿರುಪತಿ ಸ್ವಾಮಿಯಾದ್ದರಿಂದ ಇವನಿಗೆ ಶ್ರೀನಿವಾಸನೆಂದು ಹೆಸರಿಟ್ಟರು.ಚಿಕ್ಕಂದಿನಿಂದಲೇ ಒಳ್ಳೆಯ ಶಿಕ್ಷಣ ಪಡೆದು ಸಂಸ್ಕೃತ,ಕನ್ನಡ ಮತ್ತು ಸಂಗೀತದಲ್ಲಿ ಉತ್ತಮ ಜ್ಞಾನಪಡೆದರು. 16ನೇ ವಯಸ್ಸಿನಲ್ಲಿ ಸರಸ್ವತೀಬಾಯಿ ಎಂಬವರನ್ನು ಮದುವೆಯಾದರು.ತಂದೆ ವರದಪ್ಪನಾಯಕರು ಶ್ರೀನಿವಾಸರ 24ನೇ ವಯಸ್ಸಿನಲ್ಲಿರುವಾಗಲೇ ಗತಿಸಿದರು. ತಂದೆಯ ಕಸುಬಾದ ರತ್ನಪಡಿ ವ್ಯಾಪಾರವನ್ನೇ ಮುಂದುವರಿಸಿದರು.ಅವರ ಬುದ್ಧಿಸಾಮಾರ್ಥ್ಯದಿಂದ ಹೆಚ್ಚು ಲಾಭ ಸಂಪಾದಿಸಿ ಅಪಾರ ಐಶ್ವರ್ಯಕ್ಕೊಡೆಯರಾಗಿ ನವಕೋಟಿ ನಾರಾಯಣ ಎಂಬ ಬಿರುದನ್ನು ಪಡೆದರು.ಹಣ ಸೇರಿದಂತೆಲ್ಲಾ ಜಿಪುಣತನ ಜಾಸ್ತಿಯಾಯಿತು.ಧರ್ಮಪತ್ನಿ ಸರಸ್ವತೀಬಾಯಿಯವರು ದಾನ,ಧರ್ಮ,ಪರೋಪಕಾರಗಳಲ್ಲಿ ಆಸಕ್ತರಾಗಿದ್ದರು.ಪುರಂದರದಾಸರೆಂಬ ನಾಮಾಂಕಿತದಿಂದ ಈಗಲೂ ಹೆಸರುವಾಸಿಯಾಗಲು ಇವರ ಧರ್ಮಪತ್ನಿಯೇ ಕಾರಣ.

ಒಂದುದಿನ ತನ್ನ ಮಗನಿಗೆ ಉಪನಯನಮಾಡಲು ಸಹಾಯಕ್ಕಾಗಿ ಒಬ್ಬ ಬಡ ಬ್ರಾಹ್ಮಣ ಇವರಲ್ಲಿಗೆ ಬಂದಾಗ ಶ್ರೀನಿವಾಸರಾಯರು ಆ ಬ್ರಾಹ್ಮಣನಿಗೆ;ನಾಳೆ,ನಾಳೆ ಎಂದು ಹೇಳುತ್ತಾ ಅನೇಕಬಾರಿ ನಿರಾಶೆಗೊಳಿಸಿದರು.ಬ್ರಾಹ್ಮಣನು ಬೇಸತ್ತು ಶ್ರೀನಿವಾಸರ ಧರ್ಮಪತ್ನಿ ಸರಸ್ವತೀಬಾಯಿಯವರಲ್ಲಿ ಮೊರೆಯಿಡಲು ಆಕೆಯು ತನ್ನ ಮೂಗುತಿಯನ್ನೇ ತೆಗೆದು ಆ ಬಡ ಬ್ರಾಹ್ಮಣನಿಗೆ ದಾನಮಾಡಿ ಹರಸಿ ಕಳುಹಿಸಿದರಂತೆ. ಆ ಬ್ರಾಹ್ಮಣ ಅದರ ಮೌಲ್ಯ ಕೇಳಲು ಶ್ರೀನಿವಾಸರ ಅಂಗಡಿಗೇ ಬಂದಾಗ; ಶ್ರೀನಿವಾಸರಿಗೆ ಈ ಒಡವೆ ತನ್ನ ಹೆಂಡತಿಯದೆಂದು ಅನುಮಾನಿಸಿ, ತನ್ನ ಪರಿಚಾರಕನನ್ನು ವಿಷಯ ತಿಳಿದುಕೊಂಡುಬರಲು ಕಳುಹಿಸಿದರಂತೆ.ಗಂಡನ ಕೋಪಕ್ಕೆ ಹೆದರಿ ನಿರ್ವಾಹವಿಲ್ಲದೆ ತನ್ನ ಪ್ರಾಣ ತ್ಯಾಗಮಾಡಲು ಸರಸ್ವತೀಬಾಯಿಯವರು ವಿಷಸೇವನೆ ಮಾಡಲು ಉದ್ಯುಕ್ತರಾದರು. ವಿಷದ ಬಟ್ಟಲಿನಲ್ಲಿ ತಾನು ದಾನಮಾಡಿದ ಮೂಗುತಿಯು ಗೋಚರವಾಯಿತು.ಇದರಿಂದಾಗಿ ಶ್ರೀನಿವಾಸರಿಗೆ ಜ್ಞಾನೋದಯವಾಯಿತು.ಆಗ ಅವರಿಗೆ ಕೇವಲ ಮುವ್ವತ್ತು ವರ್ಷ ವಯಸ್ಸಾಗಿತ್ತು.

Purandaradasa

ಈ ಘಟನೆಯ ಪರಿಣಾಮವಾಗಿ ವೈರಾಗ್ಯದಿಂದಕೂಡಿದ ಶ್ರೀನಿವಾಸರು ತನ್ನ ಸಕಲೈಶ್ವರ್ಯವನ್ನೂ ದಾನಮಾಡಿ;1525ರಲ್ಲಿ ವ್ಯಾಸರಾಯ ಸ್ವಾಮಿಗಳಲ್ಲಿಗೆ ಬಂದು ಅವರಲ್ಲಿ ಉಪದೇಶ ಪಡೆದು ಹರಿದಾಸಕೂಟಕ್ಕೆ ಸೇರಿದರು.ಈ ರೀತಿ ಶ್ರೀನಿವಾಸನಾಯಕರು ಪುರಂದರದಾಸರಾದರು. ಅವರು ಭಕ್ತಿಪರವಶರಾಗಿ “ಪುರಂದರವಿಠಲ”ನ ಅಂಕಿತ ಕೃತಿಗಳನ್ನು ರಚಿಸಿ ಹಾಡುತ್ತಾ ದೇಶದೆಲ್ಲೆಲ್ಲಾ ಸಂಚರಿಸಿ ತಮ್ಮ ದಿವ್ಯಸಂದೇಶವನ್ನು ಹರಡಿದರು. “ಇಂತು ನಾಲ್ಕುಲಕ್ಷ  ಎಪ್ಪತ್ತೈದುಸಾವಿರ ಕೃತಿಯ ಕಂತು ಜನಕನ ನಾಮ ಘನಮಹಿಮೆಯ ಸಂತಸದಿ ಶೃತಿ,ಸ್ಮೃತಿ ಸಮ್ಮತದಿಂದ ಪುರಂದರ ವಿಠಲ ವ್ಯಾಸಮುನಿಗಳು ಪೇಳಿದರು”  ಎಂಬ ಮಾತು ಇವರ ಕೀರ್ತನೆಯಿಂದ ತಿಳಿದುಬರಬಹುದು.ಪುರಂದರದಾಸರು ಕರ್ನಾಟಕ ಸಂಗೀತ ಪದ್ಧತಿಗೆ ಒಂದು ಕ್ರಮಬದ್ಧವಾದ ರೂಪು ಕೊಟ್ಟರು.ಸಂಗೀತವನ್ನು ಮಾಯಮಾಳವ ಗೌಳ ರಾಗದಿಂದ ಪ್ರಾರಂಭಿಸಿ ದ್ವಿಶೃತಿಗಳ ಅಂತರವಿರುವ ಸೌಲಭ್ಯವನ್ನು ಕಲ್ಪಿಸಿದರು.ಸರಳೆ,ಜಂಟಿವರಸೆ, ಅಲಂಕಾರ,ತಾರಸ್ಥಾಯಿ,ಮಂದ್ರಸ್ಥಾಯಿ,ಗೀತೆಗಳನ್ನು ಸಂಗೀತ ವಿದ್ಯಾರ್ಥಿಗಳ ಅಕ್ಷರಾಭ್ಯಾಸಕ್ಕೆ ಒಳ್ಳೆಯದೆಂದು ತೋರಿಸಿಕೊಟ್ಟಿದ್ದಾರೆ.ಕಲಾಜ್ಞಾನವು ಉತ್ತಮರೂಪಕ್ಕೆ ಬೆಳೆಯಲು ಇವು ತಳಹದಿಯಾಗಿದೆ.ಉಗಾಭೋಗಗಳು ದಾಸರಪದಗಳೆಂದು ಪ್ರಸಿದ್ಧವಾಗಿದೆ.ಇವರು ಭಕ್ತಿರಸ ಪ್ರಧಾನವಾದ ಉತ್ತಮೋತ್ತಮ ಸಾಹಿತ್ಯವುಳ್ಳ  ವೇದ,ಉಪನಿಷತ್ತುಗಳ ಸಾರಾಂಶವು ತುಂಬಿ ತುಳುಕುತ್ತಿರುವ ಇವರ ಕೃತಿಗಳನ್ನು ನಾನಾ ರಾಗದಲ್ಲಿ ಪಂಡಿತೋತ್ತಮರು ಈಗಲೂ ಹಾಡುತ್ತಾರೆ.ಇವರಿಗೆ ಶ್ರೀಮನ್ನಾರಾಯಣನು ಬಾಲಕೃಷ್ಣನಾಗಿ ಪ್ರತ್ಯಕ್ಷನಾಗಿದ್ದನೆಂದು ಹೇಳುತ್ತಾರೆ.ವಾಸುದೇವ ನಾಮಾವಳಿ ಎಂಬ ಕೃತಿಯಲ್ಲಿ ಒಂದು ಲಕ್ಷ ಎಪ್ಪತ್ತೈದು ಸಾವಿರ ಕೃತಿಗಳನ್ನು ರಚಿಸಿದ್ದಾರೆ.

ಪುರಂದರದಾಸರು ಭಾರತದ ಪುಣ್ಯಕ್ಷೇತ್ರದ ಸಂದರ್ಶನ ಮಾಡಿ ಅಲ್ಲಿನ ಕ್ಷೇತ್ರದೇವರ ಕುರಿತು ಕೀರ್ತನೆಗಳನ್ನು ರಚಿಸಿಕೊಂಡೇ ಹಾಡುತ್ತಿದ್ದರು.ತಮ್ಮ ಕೊನೆಗಾಲದಲ್ಲಿ ಹಂಪೆಯಲ್ಲಿ ನೆಲಸಿದರು.ಜನರಿಗೆ ನೀತಿ,ಭಕ್ತಿ ಮಾರ್ಗವನ್ನು ಉಪದೇಶಿಸಿ ನಿತ್ಯ ಜೀವನದಲ್ಲಿ ಧರ್ಮದ ಕುರಿತು ವಿವರಿಸಿ ,ಆಡಂಬರ ಮತ್ತು ತೋರಿಕೆಯ ಜೀವನವನ್ನು ಖಂಡಿಸಿ ಸಮಾಜದ ಸೇವಕನಾಗಿ ಶ್ರಮಿಸಿ ಸುಮಾರು 1564ರಲ್ಲಿ ನಿಜ ವೈಕುಂಕುಂಠಕ್ಕೆ ತೆರಳಿದರು.

 

–   ಸಾವಿತ್ರಿ .ಕೆ ಭಟ್. ದೊಡ್ಡಮಾಣಿ. ಎಡನಾಡು.

 

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: