ಜರ್ಮನಿ…ಹಿಟ್ಲರ್…ರಿಚರ್ಡ್ ಕೋರಿ

Share Button

KAM Ansari

ನನ್ನಂತಹ ಸೋಮಾರಿಗಳಿಗೆ ಇದು ಹೇಳಿ ಮಾಡಿಸಿದ ಜಾಗ. ಬೆಳಿಗ್ಗೆ ತಡವಾಗಿ ಉದಯಿಸುವ ಸೂರ್ಯ ನಿದ್ರಿಸುವುದೋ .. ಸಾಯಂಕಾಲ ಐದರ ಮೊದಲು …!!! ಕೇವಲ ನಾಲ್ಕು ದಿನದ ವಿದೇಶ ಪ್ರವಾಸದಲ್ಲಿದ್ದ ನಾನು ಬರ್ಲಿನ್ ನಗರದ ಜನನಿಬಿಡ ರಸ್ತೆಯಲ್ಲಿ ಒಂದೆರಡು ನಿಮಿಷ ನಡೆಯುವ ಅನಿವಾರ್ಯತೆ ಎದುರಾದಾಗ ಆ ನಿಮಿಷವನ್ನು ಚೆನ್ನಾಗಿ ಆಸ್ವಾದನೆ ಮಾಡಿದ್ದೆ ..

ನಮ್ಮವರಂತೆ ಬೊಜ್ಜು ಬೆಳೆಸಿದ ಆಂಟಿ ಅಂಕಲ್ ಗಳು ತೀರಾ ಕಡಿಮೆ .. ಶಿಲಾಬಾಲಿಕೆಯರಂತೆ ಕಾಣಿಸುವ ನಾರೀ ಮಣಿಗಳು … ಪೂರ್ಣ ವಸ್ತ್ರವೆಂದರೆ ಅಲರ್ಜಿ .ನಗು, ಆಲಿಂಗನ, ಚುಂಬನ .. ಇದೆಲ್ಲಾ ಸರ್ವೇ ಸಾಮಾನ್ಯ .. ಯಾರು ಯಾರನ್ನೂ ಗಮನಿಸುವುದೇ ಇಲ್ಲ .. ಕಂಡ ಕಂಡ ದೃಶ್ಯವನ್ನು ಮೊಬೈಲಲ್ಲಿ ಚಿತ್ರಿಸುವವರೂ ಇಲ್ಲ ..ಬೀದಿಗಳಲ್ಲಿ ನಡೆಯುವ ಗಂಡಸರ ಬಾಹ್ಯ ರೂಪ, ಉಡುಗೆ ತೊಡುಗೆ ನಡಿಗೆ .. ಇದನ್ನೆಲ್ಲಾ ನೋಡುತ್ತಿರಲು ಮನಸಿನೊಳಗಿಂದ ಮಿಂಚಿ ಮರೆಯಾದ ಇತಿಹಾಸದ ಎರಡು ವ್ಯಕ್ತಿಗಳು ನನ್ನೆದುರಿಗೆ ನಡೆದು ಹೋಗುತ್ತಿರುವಂತಹ ಭಾವನೆ …ಇನ್ನು ವಾಸ್ತವಕ್ಕೆ ಬರುತ್ತೇನೆ … ಆ ಎರಡು ವ್ಯಕ್ತಿತ್ವಗಳ ಕುರಿತು ಒಂದು ಸಣ್ಣ ವಿವರಣೆ …

ಮೊದಲನೆಯದಾಗಿ ಜಗತ್ತನ್ನೇ ಗೆಲ್ಲಲು ಹೊರಟ ಡಿಕ್ಟೇಟರ್ (ಅಲೆಕ್ಸಾಂಡರ್ ಮೊದಲಿಗ ಅನ್ನಬಹುದೇನೋ) ಅಡಾಲ್ಫ್ ಹಿಟ್ಲರ್ .
“If you win, you need not have to explain…If you lose, you should not be there to explain ”
ತಾನು ನುಡಿದಂತೆ ನಡೆದ … ಕೊನೆಯಲ್ಲಿ ಸೋಲನ್ನು ಅರಗಿಸಲಾಗದೆ ಆತ್ಮಹತ್ಯೆಗೆ ಶರಣಾದವನು . ಆಸ್ಟ್ರಿಯಾದಲ್ಲಿ ಹುಟ್ಟಿದ ಈತ ಸಾಧಿಸಿದ್ದು ಮಾತ್ರ ಜರ್ಮನಿ ಯಲ್ಲಿ .ಹಿಟ್ಲರ್ ಸಾಧಿಸಿದ್ದಾದರೂ ಏನು ? ಒಬ್ಬ ದಾರ್ಶನಿಕನಂತೆ ಹೇಳುವುದಾದರೆ, ಜನರ ಶಾಪ .. ಗಳಿಸಿದ್ದು ಶೂನ್ಯ!

Germany    Hitler

 

ಎರಡನೆಯದಾಗಿ ಅಮೆರಿಕನ್ ಕವಿ ಎಡ್ವಿನ್ ರಾಬಿನ್ಸನ್ ಬರೆದ ಕವಿತೆಯ ರಿಚರ್ಡ್ ಕೋರಿ ಎಂಬ ಕಥಾ ನಾಯಕ.ಕೋಟು ಸೂಟು ಬೂಟು ಹಾಕಿ ಘನ ಗಾಂಭೀರ್ಯದಲಿ ನಡೆಯುತ್ತಿದ್ದ ನಾಗರಿಕ. ಹೊರ ಪ್ರಪಂಚಕ್ಕೆ ಸಿರಿವಂತನತೆ ಕಾಣುವವ. ಆತ ಬೀದಿಯಲ್ಲಿ ನಡೆವಾಗ ಅವನ ಆಡಂಬರ ಕಂಡು ಜನರು ಮೂಗಿನ ಮೇಲೆ ಬೆರಳಿಟ್ಟು ಆತನನ್ನೇ ದಿಟ್ಟಿಸಿ ನೋಡುತ್ತಿದ್ದರು …ರಿಚರ್ಡ್ ಕೊರಿಯ ಧಿಮಾಕನ್ನು ಪದ್ಯದ ಸಾಲಿನಲ್ಲಿ ಈರೀತಿ ವಿವರಿಸಲಾಗಿತ್ತು.

Whenever Richard Cory went down town,
We people on the pavement looked at him:
He was a gentleman from sole to crown,
Clean favored, and imperially slim
……………………………………..
. ……
………………………………………….
And Richard Cory, one calm summer night,
Went home and put a bullet through his head…

ಸಂಕ್ಷಿಪ್ತವಾಗಿ ಹೇಳುವುದಾದರೆ,ರಿಚರ್ಡ್ ಕೋರಿ ಎಂಬ ಶ್ರೀಮಂತ ಬೀದಿಗಳಲ್ಲಿ ನಡೆಯುತಿರಲು ಜನಸಾಮಾನ್ಯನ ಭಾವನೆಗಳು ಹೇಗಿತ್ತು ಎಂಬುದರ ಬಗ್ಗೆ ವಿವರಣೆ. ಆದರೆ ಕೊನೆಯ ಸಾಲು .. ಕಥೆಯ ನಾಯಕ ರಿಚರ್ಡ್ ಕೋರಿ ತನ್ನ ಹಣೆಗೆ ಗುಂಡು ಹಾರಿಸಿ ಆತ್ಮಹತ್ಯೆಗೆ ಶರಣಾಗುವುದು .. !!!
ಮನುಷ್ಯನು ಎಷ್ಟು ಖುಷಿಯಾಗಿರುವಂತೆ ಹೊರ ಜಗತ್ತಿಗೆ ಕಂಡರೂ ಅವನ ಮನದ ತಳಮಳ ಯಾರೂ ಕಾಣುವವರಿರುವುದಿಲ್ಲ, ಇವನ ಆತ್ಮಹತ್ಯೆ
ಈ ಕವನದ ಒಂದು ಕ್ಲೈಮಾಕ್ಸ್ ..

ನಾನು ಹೇಳಿದ ಇಬ್ಬರು ನಾಯಕರ ಅಂತ್ಯವೂ ಬಂದೂಕಿನಿಂದಾಗಿತ್ತು … ! ಮನುಷ್ಯನಿಗೆ ಎಷ್ಟೇ ಸಂಪತ್ತು ಅಧಿಕಾರ ಇದ್ದರೂ ಮನಸ್ಸಿನ ತಳಮಳ .. ಏನನ್ನೂ ಸಾಧಿಸಲು ಹೋಗಿ ಎಡವಿದಾಗ ಬರುವ ನಿರಾಸೆ, ಸೋಲನ್ನು ಎದುರಿಸಲಾಗದ ಹೃದಯ, ಅತಿಯಾಸೆ … ಇದೆಲ್ಲಾ ದೊಡ್ಡವನನ್ನು ತೀರಾ ಸಣ್ಣವನನ್ನಾಗಿ ಮಾಡಿಬಿಡುತ್ತದೆ. ಸರ್ವಾಧಿಕಾರಿ ಹಿಟ್ಲರ್ ನಿಗೆ ಸೋಲನ್ನು ಸಹಿಸುವ ಶಕ್ತಿಯಿರಲಿಲ್ಲ ಆದರೆ ರಿಚರ್ಡ್ ಕೋರಿಗೆ ಮನಸ್ಸಿನಲ್ಲಿ ಖಿನ್ನತೆಯಿತ್ತು .ನಿರಾಶೆಯಿಂದ ಇಬ್ಬರೂ ಮೊರೆಹೊದದ್ದು ಆತ್ಮಹತ್ಯೆ ಎಂಬ ಮಹಾಪಾಪಕ್ಕೆ … !!!

ಎಲ್ಲಾ ಸುಖ ಸಂಪತ್ತು ಅನುಭವಿಸಿದ್ದರೂ ನೆಮ್ಮದಿಯಲ್ಲಿ ಕೊನೆತನಕ ಜೀವಿಸಲು ಸಾಧ್ಯವಾಗದ ಹತಭಾಗ್ಯರು .ಮನುಷ್ಯನ ಶ್ರೀಮಂತಿಕೆ ಮತ್ತು ಅಧಿಕಾರ ಕಂಡು ಅವನು ನೆಮ್ಮದಿಯಿಂದ ಇರವುವವನೇ ಇರಬಹುದೆಂಬ ಜನರ ಕಲ್ಪನೆ ಎಷ್ಟು ಸುಳ್ಳು ಎಂಬುದನ್ನು ಇವರಿಬ್ಬರೂ ಜನ ಸಾಮಾನ್ಯರಿಗೆ ತಮ್ಮ ಆತ್ಮಹತ್ಯೆಯ ಮೂಲಕ ಜನರಿಗೆ ತೋರಿಸಿಕೊಟ್ಟಿದ್ದರು..! ಕೇವಲ ಒಂದೆರಡು ನಿಮಿಷದ ನಡಿಗೆಯಲ್ಲಿ ಏನೆಲ್ಲಾ ತೋಚಿದವೋ … ಇನ್ನೂ ಬೀದಿಯತ್ತ ನೋಡಲು ಸಮಯವಿರಲಿಲ್ಲ. ತನಗಾಗಿ ಕಾದಿರಿಸಿದ್ದ ವಾಹನದತ್ತ ನಡೆವಾಗ ಹೆಜ್ಜೆಗಳು ಭಾರವಾದ ಅನುಭವ …ನನ್ನನ್ನೇ ನಾನು ಪ್ರಶ್ನಿಸಿದೆ … ಹಿಟ್ಲರ್ ಒಬ್ಬ ಜೀವಿಸಿದ್ದ,ಅದು ಇತಿಹಾಸ. ಆದರೆ ರಿಚರ್ಡ್ ಕೋರಿ ಎಂಬವನೂ ನಿಜವಾಗಿ ಒಬ್ಬ ವ್ಯಕ್ತಿಯೋ ಅಥವಾ ಕಾಲ್ಪನಿಕ ಕಥಾ ನಾಯಕನೋ … ???

Richard Cory

ಹಿಂದಿನಿಂದ ಏನೋ ಅಶರೀರವಾಣಿ ಕೇಳಿಸಿದಂತಿತ್ತು.” ಮನೋರೋಗ ವೈದ್ಯರು ತಪ್ಪದೇ ಉಪಯೋಗಿಸಬೇಕೆಂದು ತಿಳಿಸಿದ್ದ ಮಾತ್ರೆಗಳು ಎರಡು ದಿನಗಳಿಂದ ಇನ್ನೂ ಜೇಬಿನಲ್ಲಿದೆ … ಇನ್ನೊಂದು ದಿನ ಮುಂದೂಡಿದರೆ ರಿಚರ್ಡ್ ಕೋರಿಯ ಆತ್ಮ ನಿನ್ನನ್ನು ಸೇರಿಬಿಡುತ್ತೆ .. ಖಿನ್ನತೆ ಎಂಬ ಭೂತ ನಿನ್ನನ್ನೂ ಹಿಂಬಾಲಿಸುತ್ತದೆ ಎನ್ನುವ ಸತ್ಯ ನೆನಪಿರಲಿ …. “

ಥಟ್ಟನೆ ವಾಸ್ತವಕ್ಕೆ ಬಂದು ಎರಡು ದಿನದಿಂದ ತಪ್ಪಿದ್ದ ದಿನಚರಿ … ಆಹಾರದ ನಂತರದ ಎರಡು ಟ್ಯಾಬ್ಲೆಟ್ ಗಳು .. ಬೇಗನೆ ನುಂಗಿ … ಮೊಬೈಲ್ ನಲ್ಲಿ ನನ್ನವರಿಗೆ ಮೆಸೇಜ್ ಮಾಡಿದೆ. .. ಇಲ್ಲಿನ ಜನಜೀವನದ ಬಗ್ಗೆ ಒಂದಿಷ್ಟು ಗೆಳೆಯರಲ್ಲಿ ಶೇರ್ ಮಾಡಿದೆ ..ಮನಸ್ಸು ಒಂದಿಷ್ಟು ಶಾಂತವಾಗಿರಲೆಂದು ಕಣ್ಮುಚ್ಚಿ ಪ್ರಾರ್ಥಿಸುತ್ತಿರಲು ವಾಹನದ ಗಾಲಿಗಳು ತಿರುಗುತ್ತಿದ್ದುದು ಅರಿವಿಗೆ ಬರಲಿಲ್ಲ .. .. ಮನಸ್ಸು ಇದಕ್ಕಿಂತಲೂ ವೇಗವಾಗಿ ಓಡಿ ಎಲ್ಲೋ ತಲುಪಿ ನನ್ನ ನೋಡಿ ನಗುತಿತ್ತು … !!!

 

 – ಕೆ. ಎ. ಯಂ. ಅನ್ಸಾರಿ ಮೂಡಂಬೈಲ್

2 Responses

  1. Keshava Prasad B Kidoor says:

    ಲೇಖನ ಬಹಳ ಸೊಗಸಾಗಿದೆ.

  2. Hema says:

    ಬಹಳ ಉತ್ತಮವಾದ ಚಿಂತನಶೀಲ ಬರವಣಿಗೆ, ಹಿಂದೆ ನಾನು ಉದ್ಯೋಗ ನಿಮಿತ್ತ ಜರ್ಮನಿಯ ಮ್ಯೂನಿಚ್ ನಗರಕ್ಕೆ ಹೋಗಿದ್ದಾಗ ನನಗೂ ಆತನ ಹಿಂಸೆ-ದುರಾಚಾರಗಳು ನೆನಪಾಗಿ ಮನಸ್ಸು ಕಹಿಯಾಗಿತ್ತು. ಅಲ್ಲಿನ ‘ಡಕಾವ್ ; ಎಂಬಲ್ಲಿ ಹಿಟ್ಲರ್ ನ ಕ್ರೌರ್ಯಕ್ಕೆ ಸಾಕ್ಷಿಯಾಗಿರುವ Concentration camp ಸ್ಮಾರಕವಾಗಿ ಈಗಲೂ ಇದೆ.

Leave a Reply to Hema Cancel reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: