ಅನಿರೀಕ್ಷಿತ ಆಪತ್ತುಗಳ ನಡುವೆ..

Share Button

Smitha Amritaraj-05082016

ಬದುಕು ಅನಿರೀಕ್ಷಿತ ಮತ್ತು ಆಕಸ್ಮಿಕಗಳ ಮೊತ್ತ ಅಂತ ತಿಳಿದವರು ಹೇಳುತ್ತಾರೆ.ಅಂತೆಯೇ ಈ ಮಾತು ಅಕ್ಷರಶ: ಸತ್ಯವೂ ಕೂಡ.ಬದುಕಿನ ಹಾದಿಯಲ್ಲಿ ಗಕ್ಕನೆ ತಿರುವುಗಳು ಬಂದೆರಗಿ ನಿಲ್ಲುತ್ತವೆ.ಕವಲೊಡೆದು ಕೆಲವೊಮ್ಮೆ ಭೀತಿ ಹುಟ್ಟಿಸುತ್ತದೆ. ನಡೆದಷ್ಟೂ ಮುಗಿಯದ ಹಾದಿಯ ಯಾವುದೋ ಒಂದು ತಿರುವಿನಲ್ಲಿ ಬದುಕು ಮುಗಿದೇ ಹೋಗುತ್ತದೆ ಎಂಬುದು ಮಾತ್ರ ಯಾವ ಕಾಲಕ್ಕೂ ಸತ್ಯ ಅನ್ನಿಸುವ ಸಂಗತಿ.ಎಳವೆಯಲ್ಲಿ ನನ್ನ ಪ್ರಾಥಮಿಕ ಶಾಲಾ ದಿನಗಳಲ್ಲಿ, ಒಂದನೇ ತರಗತಿಯ ಪುಟ್ಟು ಹುಡುಗಿಯೊಬ್ಬಳು, ಅಷ್ಟು ದೂರದಿಂದ ನಡೆದುಕೊಂಡು ಬರುತ್ತಿದ್ದವಳು, ಇನ್ನೇನು ಶಾಲೆ ಸಮೀಪಿಸಿತು ಅನ್ನುವಾಗ, ಕಾರ್ ಅಪಘಾತವಾಗಿ ಒಂದಷ್ಟು ದಿನ ಸಾವು-ಬದುಕಿನ ನಡುವೆ ಹೋರಾಡಿ ತೀರಿಕೊಂಡಳು. ಹಸಿ ಮನದಲ್ಲಿ ಹುಟ್ಟಿಕೊಂಡ ಸಾವಿನ ಬಗೆಗಿನ ಮೊದಲ ಭೀತಿ ಅದಾಗಿತ್ತು. ಹುಟ್ಟು-ಸಾವು ನಮ್ಮ ಕೈಯೊಳಗಿಲ್ಲ ಅನ್ನುವ ವೇದಾಂತದ ಮಾತು ಪದೇ ಪದೇ ಕಾಡುತ್ತಾ ನನ್ನನ್ನು ಹಾದು ಹೋಗುತ್ತಾ ಕಲಕಿಬಿಡುತ್ತದೆ.

ಎಲ್ಲಕಿಂತ ಹೆಚ್ಚಾಗಿ ಈ ಅಪಘಾತ ಭಯವೆಂಬುದು ಇವತ್ತು ಹೆಚ್ಚು ಆತಂಕವನ್ನು ಸೃಷ್ಠಿ ಮಾಡುತ್ತಿದೆ.ಅವನ ಆಯಸ್ಸು ಅಲ್ಲಿಗೆ ಮುಗಿದಿತ್ತು, ಹಾಗೆ ಅವ ತೀರಿಕೊಂಡ ಅಂತ ಸಾಮಾನ್ಯವಾಗಿ ಅಪಘಾತದಲ್ಲಿ ತೀರಿಕೊಂಡ ವ್ಯಕ್ತಿಗೆ ಹೇಳುವ ಮಾತಿದು.ವಾಹನ ಒಂದು ನೆವವಷ್ಟೆ .ಅದೂ ಆಗಿರಲೂ ಬಹುದು. ಆದರೆ ಈ ವಾಹನಗಳಿಂದ ಆಗುವ ಅನಾಹುತ ಮತ್ತು ಅಪಘಾತಗಳನ್ನು ನಾವೇ ಸೃಷ್ಠಿಸಿಕೊಂಡದ್ದು ಅನ್ನುವಂತದ್ದನ್ನ ನಾವು ಅಲ್ಲಗಳೆಯುವಂತಿಲ್ಲವಲ್ಲ?. ಒಂದಷ್ಟು ವರುಷಗಳ ಹಿಂದೆ ವಾಹನಗಳೆಂದರೆ,ಎತ್ತಿನ ಗಾಡಿ,ಕುದುರೆ ಸಾರೋಟ್ ..ಇಂತಹವುಗಳೆ.ಆಗ ಈ ರೀತಿಯಾದಂತಹ ಅಪಘಾತ ಜೀವ ಭಯ ಇರಲಿಲ್ಲವೆಂಬುದು ಸತ್ಯ ತಾನೇ?.ಇವತ್ತು ನಮ್ಮ ಬುದ್ದಿಮತ್ತೆಗೆ ಸವಾಲಾಗುವಂತಹ ವಾಹನಗಳನ್ನು ಸೃಷ್ಟಿಸಿಕೊಂಡು,ಅದು ಈಗ ಉಳ್ಳವರ ಮನೆಯ ಅನಿವಾರ್ಯ ಸ್ವತ್ತಾಗುವುದೆಂದರೆ ಹೇಗಿರಬೇಡ?ವಾಹನ ಸೌಕರ್ಯ,ನಮ್ಮ ಬದುಕಿನ ಅದೆಷ್ಟೋ ಸಂಗತಿಗಳನ್ನು,ಗುರುತರವಾದ,ಕಷ್ಟಕರವಾದ ಕೆಲಸಗಳನ್ನು ಸರಳೀಕರಣಗೊಳಿಸಿದೆಯೆಂಬುದು ಸುಳ್ಳಲ್ಲ.ವೇಗವಾಗಿ ಚಲಿಸುವ ಬದುಕಿನೊಡಗೊಡಿ ಚಲಿಸಲು ಈ ವಾಹನಗಳು ಸಹಕಾರಿಯಾಗಿದೆ ಎಂಬುದು ಮಾತ್ರ ಒಪ್ಪತ್ತಕ್ಕ ಮಾತೇ ಸರಿ.ನಾವು ಶಾಲಾ ದಿನಗಳಲ್ಲಿ ನಿಮಿಷಕ್ಕೊಂದು ವಾಹನ ಸೌಕರ್ಯವಿರಲಿಲ್ಲ. ಬೆಳಗ್ಗೆಯ ಬಸ್ಸು ಬಿಟ್ಟರೆ ಮತ್ತೆ ಸಂಜೆಯೇ.ನಮ್ಮ ಎಲ್ಲಾ ಮಹತ್ತರವಾದ ಕೆಲಸಗಳನ್ನು ಕೂಡ ನಾವು ಅದೇ ಸಮಯಕ್ಕೆ ಸರಿಯಾಗಿ ಹೊಂದಿಸಿಕೊಳ್ಳಬೇಕಿತ್ತು.ಯಾವೊತ್ತೋ ಒಂದೋ,ಎರಡೋ ವಾಹನಗಳು ಓಡಾಡುವ ಆ ರಸ್ತೆ ನಮಗೊಂದು ಬೆರಗಿನ ಸಂಗತಿಯಾಗಿ ಉಳಿದಿತ್ತು.ಹೊರಟು ಹೋದ ಬಸ್ಸಿನ ಕಪ್ಪು ಹೊಗೆಯ ಸುರುಳಿಯನ್ನು ನೋಡುತ್ತಲೋ,ಅದರ ಸದ್ದನ್ನು ಕಿವಿಯೊಳಗೆ ತುಂಬಿಕೊಳ್ಳುತ್ತಲೋ,ಯಾವುದೋ ಒಂದು ತೆರನಾದ ಸಂಭ್ರಮವನ್ನು ನಾವು ಅನುಭವಿಸುತ್ತಿದ್ದೆವು.ಅಕಾಸ್ಮಾತ್,ಯಾವೊತ್ತು ಒಮ್ಮೆ ಬಸ್ಸು,ಕಂದಕಕ್ಕೆ ಉರುಳಿಯೋ..ಅಥವಾ ಇನ್ಯಾವುದೋ ತಾಂತ್ರಿಕ ಕಾರಣಗಳಿಂದ ಎಲ್ಲೋ‌ಒಂದು ಅಪಘಾತ ಸಂಭವಿಸಿದರೆ,ನಾವು ತುಂಬಾ ವ್ಯಥೆ ಪಟ್ಟುಕೊಂಡು,ಅದೆಷ್ಟೇ ದೂರವಾದರೂ ಅಲ್ಲಿಗೆ ಧಾವಿಸಿ ಸಹಾಯಕ್ಕೆ ಒದಗುತ್ತಿದ್ದೆವು.ಆದರೆ ಡಿಕ್ಕಿ ಹೊಡೆದು ಅಪಘಾತ ಸಂಭವಿಸುವಂತಹ ವಾರ್ತೆಗಳು ಸಾಮಾನ್ಯವಾಗಿ ನಮಗೆ ಗೊತ್ತಿರುವ ಹಾಗೆ ಎಲ್ಲೂ ಸಂಭವಿಸುತ್ತಿರಲಿಲ್ಲ.

road-accident

ಆದರೆ,ಈಗ ಮನೆಯಿಂದಾಚೆಗೆ ರಸ್ತೆಗೆ ಇಳಿದು ನೋಡಬೇಕು.ಜಾತ್ರೆಗೆ ಹೊರಟಂತೆ ಗಿಜಿಗುಟ್ಟುವ ಬಸ್ಸು,ಲಾರಿ,ಕಾರು,ರಿಕ್ಷಾ..ಹೀಗೆ ತರಾವರಿ ವಾಹನಗಳು ಮೆರವಣಿಗೆಗೆ ಸಾಗಿದಂತೆ ಕಾಣುತ್ತದೆ.ಅಚ್ಚರಿಯ ಸಂಗತಿಯೆಂದರೆ,ಪಾದಚಾರಿಗಳಿಗೆ ಇಲ್ಲಿ ರಸೆ ದಾಟುವುದೊಂದು ಪವಾಡವೇ ಸರಿ.ಬದುಕು ಎಲ್ಲಿಯವರೆಗೆ ತಂದು ನಮ್ಮನ್ನು ನಿಲ್ಲಿಸಿದೆಯೆಂದರೆ ಆಶ್ಚರ್ಯವೂ ಭಯವೂ ಒಂದೇ ಸಮನೆ ಆಗುತ್ತಿದೆ.ಎಷ್ಟೇ ಸೌಕರ್ಯಗಳಿದ್ದರೂ ಮನೆಯಿಂದ ಹೊರಟವರು ಒಳಗೆ ಅಡಿಯಿಡುವವರೆಗೆ ಯಾರಿಗೂ ನೆಮ್ಮದಿಯಿಲ್ಲ.ಪ್ರತಿನಿತ್ಯ ಪತ್ರಿಕೆಗಳಲ್ಲಿ ಅಪಘಾತಗಳದ್ದೇ ಸುದ್ದಿ.ಯಾರಿಗೂ ವ್ಯವಧಾನವೇ ಇಲ್ಲ.ಓವರ್ ಟೇಕ್ ಮಾಡುವುದೇ ಒಂದು ರೈಡಿಂಗ್ ಕೌಶಲದಂತೆ ಗೋಚರಿಸುತ್ತದೆ.ಇಷ್ಟು ಗಂಟೆಯೊಳಗೆ ಕರಾರುವಕ್ಕಾಗಿ ಮುಟ್ಟಬೇಕೆಂದು ತರಾತುರಿಯಲ್ಲೇ ಎಕ್ಸಲೇಟರ್ ಮೇಲೆ ತುದಿಗಾಲನ್ನಿಟ್ಟಿರುತ್ತಾರೆ.ಆದರೆ ತುಂಬಾ ಅಘಾತಕಾರಿ ಮತ್ತು ಅಮಾನವೀಯ ಎನ್ನುವ ಸಂಗತಿಯೆಂದರೆ,ರಸ್ತೆ ತುಂಬಾ ವಾಹನಗಳಿದ್ದರೂ,ಜನ ನಿಭಿಡತೆಯಿದ್ದರೂ ಅಪಘಾತ ಸಂಭವಿಸಿದಾಗ ಯಾರೂ ಸಹಾಯಕ್ಕೆ ಬರುವುದಿಲ್ಲವೆಂಬುದೇ ದೊಡ್ಡ ದುರಂತ.ಬದುಕು ಇಷ್ಟೊಂದು ನಿಷ್ಕರುಣಿಯಾಗಿ ಬಿಟ್ಟಿದೆಯಾ..ಅಂತ ಹೃದಯ ತಲ್ಲಣಗೊಳ್ಳುತ್ತಿದೆ.

ಇತ್ತೀಚೆಗೆ ನಗರದ ಹೃದಯ ಭಾಗದಲ್ಲಿ ನಡೆದ ಅಪಘಾತವೊಂದರ ಚಿತ್ರಣ ಮತ್ತು ವಿವರಗಳನ್ನು ಓದುತ್ತಿದ್ದಂತೆಯೇ ಎದೆ ಢವಗುಟ್ಟಿ ತನ್ನಿಂತಾನೇ ಕಣ್ಣಂಚಲ್ಲಿ ನೀರು ಉಕ್ಕಿ ಬಿಟ್ಟಿತ್ತು.ಭೀಕರ ಅಪಘಾತಗೊಂಡ ವ್ಯಕ್ತಿ ಸಹಾಯಕ್ಕಾಗಿ ಧೈನ್ಯದಿಂದ ಯಾಚಿಸಿದರೂ ಯಾರೊಬ್ಬರೂ ನೆರವಿಗೆ ಬಾರದೇ ಇದ್ದದ್ದು ಮಾನವೀಯ ಪ್ರಪಂಚದ ಅದೆಷ್ಟು ದೊಡ್ಡ ಕ್ರೌರ್ಯ ಅಂತನ್ನಿಸಿತು. ಸಾಯುವ ಕೊನೇ ಕ್ಷಣದಲ್ಲೂ ಆ ವ್ಯಕ್ತಿ ತನ್ನ ದೇಹವನ್ನ ದಾನ ಮಾಡಿ ಆದರ್ಶ ಮೆರೆದ ಮಾನವೀಯತೆಗೆ ಮನಸು ಮೂಕವಾಯಿತು.

 

– ಸ್ಮಿತಾ ಅಮೃತರಾಜ್.ಸಂಪಾಜೆ

1 Response

  1. Shankari Sharma says:

    ನಿಜಕ್ಕೆ ತುಂಬಾ ಹತ್ತಿರವಾದ ಬರಹ…ಈಗೀಗ ಅಂತೂ ರಸ್ತೆಗೆ ಇಳಿಯುವಾಗಲೇ ಎದೆ ಡವಗುಟ್ಟುತ್ತದೆ..!!

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: