ಬದುಕಿನಲ್ಲಿ ತೃಪ್ತಿ ಎಲ್ಲಿದೆ?
ಬದುಕಿನಲ್ಲಿ ತೃಪ್ತಿ ಎಲ್ಲಿದೆ? ಇದು ತಲೆ ತಲಾಂತರಗಳಿಂದ ಮನುಷ್ಯನ ಅಂತರಂಗವನ್ನು ಕಾಡುತ್ತಿರುವ ಪ್ರಶ್ನೆ ಎಂದರೆ ತಪ್ಪಲ್ಲ!
ಭಾರತದಲ್ಲಿ ಕಳೆದ ಐದು ವರ್ಷಗಳಿಂದ ಪ್ರತಿ ವರ್ಷ ಸರಾಸರಿ 25 ಲಕ್ಷ ಹೊಸ ಕಾರುಗಳು ಮಾರಾಟ ಆಗಿವೆ! ಪ್ರತಿ ವರ್ಷ ಲಕ್ಷಾಂತರ ಮಂದಿ ಸ್ವಂತ ಕಾರು, ಮನೆ, ಸೈಟ್ ಕೊಳ್ಳುತ್ತಿದ್ದಾರೆ. ಸ್ವಂತ ಬಿಸಿನೆಸ್, ಇನ್ವೆಸ್ಟ್ ಮೆಂಟ್ ಅಂತ ಬಂಡವಾಳ ಶಾಹಿಗಳೂ ಆಗುತ್ತಿದ್ದಾರೆ! ಅದ್ಭುತ.
ಎಲ್ಲ ಓ.ಕೆ. ಆದರೆ ಸೂಕ್ಷ್ಮವಾಗಿ ಗಮನಿಸಿ…
ಅನೇಕ ಮಂದಿ, ಸಣ್ಣದೋ, ದೊಡ್ಡದೋ ಒಂದಿಲ್ಲೊಂದು ಅತೃಪ್ತಿಯಿಂದ, ಏನೋ ಕೊರತೆಯಿಂದ ಚಡಪಡಿಸುತ್ತಿದ್ದಾರೆ. ಅನೇಕ ಸೌಕರ್ಯಗಳಿದ್ದರೂ, ಏನೋ ಸಿಗದ, ಕೊನೆಯೇ ಇಲ್ಲದಂಥ ನೋವೇಕೆ?
ಬೇಕಾದರೆ ನೋಡಿ, ಯಾವುದೋ ಸಮಾರಂಭಕ್ಕೆ ಸಂಸಾರ ಸಮೇತ ಹೋಗಿರುತ್ತೀರಾ. ವಾಪಸ್ ಮನೆಗೆ ಬಂದಾಗ ಮಡದಿ ನಿಮ್ಮಲ್ಲಿ ಹೇಳಿರಬಹುದು. ಕತ್ತಿನಲ್ಲಿ ಚಿನ್ನ ಎಷ್ಟಿದೆ ಅಂತ ಅವರಿವರು ಗಮನಿಸುತ್ತಿದ್ದರು ಅಂತ! ಅದರರ್ಥ ಇನ್ನೊಂದಿಷ್ಟು ಬಂಗಾರದ ಸರ ಇದ್ದರೆ ಉತ್ತಮ ಎನ್ನುವುದೇ ಆಗಿರುತ್ತದೆ. ಇನ್ನು ಕೆಲವರು ಹೇಗೆ ಬಂದಿರಿ ಕಾರಿನಲ್ಲೇ? ಎನ್ನುತ್ತಾರೆ. ಅಲ್ಲ, ಸರಕಾರಿ ಬಸ್ಸಿನಲ್ಲಿ ಅಂದರೆ ಅವರ ಮಾತಿನ ಧಾಟಿ ಕೊಂಚ ಬದಲಾದೀತು. ಒಂದು ಸೆಕೆಂಡ್ ಹ್ಯಾಂಡ್ ಕಾರಾದರೂ ಕೊಳ್ಳಬಹುದಲ್ವೇ ಅಂದರಂತೂ ಮುಗಿದೇ ಹೋಯಿತು. ಕೀಳರಿಮೆಯಾಗಿ ಹಿಂಡಿ ಹಿಪ್ಪೆಯಾಗಬಹುದು. ಅಂದಹಾಗೆ ಎಲ್ಲರೂ ಇಂಥದ್ದೇ ಕಿರಿಕಿರಿಯಾಗುವ ಪ್ರಶ್ನೆ ಕೇಳುತ್ತಾರೆ ಮತ್ತು ಅಂತಸ್ತು ಅಳೆಯುತ್ತಾರೆ ಅಂತ ಇಲ್ಲಿ ಸಾರ್ವತ್ರೀಕರಣಗೊಳಿಸುವುದಿಲ್ಲ. ಆದರೆ ಅಂಥ ಪ್ರಶ್ನೆಗಳು ಮತ್ತು ನೋಟಗಳು ಸರ್ವೇ ಸಾಮಾನ್ಯವಂತೂ ಹೌದು.
ಯಾಕೆ ಹೀಗೆಲ್ಲಾ ಆಗುತ್ತದೆ? ಪ್ರಾಪಂಚಿಕ ವಸ್ತುಗಳ ಮೇಲೇಕೆ ತೀರದ ವ್ಯಾಮೋಹ? ಕಾರು, ಸ್ವಂತ ಮನೆ, ವಿದೇಶ ಪ್ರವಾಸ, ನಾನಾ ಬಿಸಿನೆಸ್, ಉದ್ಯೋಗ, ಸಮಾಜದಲ್ಲಿ ಉನ್ನತ ಸ್ಥಾನಮಾನ, ಚೆಲುವೆ ಹೆಂಡತಿ, ಮುದ್ದಾದ ಮಕ್ಕಳು, ಪ್ರಾಣ ಸ್ನೇಹಿತರು ಎಲ್ಲ ಇದ್ದರೂ, ಅನೇಕ ಮಂದಿ ಏನೋ ಕಳೆದುಕೊಂಡವರಂತೆ ಮತ್ತಷ್ಟು ಸುಖ-ಭೋಗಗಳಿಗೆ ಚಡಪಡಿಸುವುದೇಕೆ? ಮತ್ತಷ್ಟು ಕೋಟಿ ರೂ. ಗಳಿಸಲು ಮತ್ತಷ್ಟು ಕೋಟಿ ರೂ. ಬಂಡವಾಳ ಹೂಡುವುದೇಕೆ? ಲೌಕಿಕ ಸುಖ, ಸಂಪತ್ತು, ಸೌಕರ್ಯಗಳನ್ನು ಹೊಂದಿದಂತೆ, ನೆಮ್ಮದಿ ಮಾಯವಾಗುತ್ತಿರುವುದೇಕೆ? ಅದೇ ಕ್ಷುಲ್ಲಕ ಅಹಂ, ಸ್ವ ಪ್ರತಿಷ್ಠೆ, ಭೋಗಲಾಲಸೆ, ಸರಳತೆಯ ಕಡೆಗಣನೆ ಕಾರಣವಿರಬಹುದೇ?! ಅಥವಾ ವೃಥಾ ನರಳುವಿಕೆಯೇ ಹಿತ ಕೊಡುತ್ತದೆಯೇ?
ತೃಪ್ತಿ ಎನ್ನುವುದು ಮನಸ್ಸಿಗೆ ಸಂಬಂಧಿಸಿದ ವಿಚಾರವಾದರೆ, ಐಹಿಕ ಸುಖ, ಸಂಪತ್ತು, ಅಧಿಕಾರ, ಕೀರ್ತಿ, ಸನ್ಮಾನಗಳನ್ನು ಹೊಂದಬೇಕು, ಆಕರ್ಷಕವಾಗಿ ಕಾಣಿಸಿಕೊಳ್ಳಬೇಕು, ತನ್ನದೇ ವರ್ಚಸ್ಸು, ಜನಪ್ರಿಯತೆ ಗಳಿಸಿಕೊಳ್ಳಬೇಕು ಎನ್ನುವುದು ಪ್ರಾಪಂಚಿಕ ಆಸೆ ಆಕಾಂಕ್ಷೆಗಳಾಗಿವೆ. ಈ ಪ್ರಾಪಂಚಿಕ ಮೌಲ್ಯಗಳನ್ನು ಪಡೆಯಲು ಸಾಕಷ್ಟು ಕೆಲಸ ಮಾಡಬೇಕಾಗುತ್ತದೆ. ಯುಕ್ತಿಯನ್ನು ಉಪಯೋಗಿಸಬೇಕಾಗುತ್ತದೆ. ಎಲ್ಲರಿಗೂ ಅದು ಸುಲಭವಾಗಿ ಒಲಿಯುವುದಿಲ್ಲ. ಇದಕ್ಕಾಗಿ ಸಮಯ ಕೂಡ ಬೇಕಾಗುತ್ತದೆ. ಎಷ್ಟೋ ಸಲ ಈ ಪ್ರಯತ್ನಗಳು ರಸಹೀನವಾಗಿರುತ್ತವೆ. ಅಷ್ಟು ತಾಳ್ಮೆಯೂ ಇರದಿರಬಹುದು. ಪ್ರಾಪಂಚಿಕ ಯಶಸ್ಸಿಗೆ ಮುನ್ನುಗ್ಗುವ ಆತುರದಲ್ಲಿ, ಮಡದಿ, ಮಕ್ಕಳ ಮೋರೆ ನೋಡಲೂ ಸಮಯವಿಲ್ಲದಷ್ಟು ಬ್ಯುಸಿಯಾಗುವವರು ಇದ್ದಾರೆ.
ಅಸೂಯೆ ಹುಟ್ಟಿಸಬಲ್ಲ ಯಶಸ್ಸು!
ಪ್ರಪಂಚದಲ್ಲಿ ಯಾವುದೇ ಕ್ಷೇತ್ರವಿರಲಿ, ಯಶಸ್ಸಿನ ಶಿಖರವೇರಿಯೂ ಅಜಾತಶತ್ರುವಾಗಿ ಉಳಿಯುವವರು ಅಪರೂಪ. ಯಾಕೆಂದರೆ ಯಶಸ್ಸು ಸಾಧಿಸಿದವರ ಬಗ್ಗೆ ಸುತ್ತುಮುತ್ತಲು ಅನೇಕ ಮಂದಿಯಲ್ಲಿ ಒಂದು ಬಗೆಯ ಅಸೂಯೆ, ಮತ್ಸರ ಉಂಟಾಗುತ್ತದೆ. ಅದನ್ನು ಬಗೆಬಗೆಯ ರೀತಿಯಲ್ಲಿ ತೆಗಳುವ ಮೂಲಕ, ಕಂಡರೂ ಕಾಣದಂತೆ ಇರುವುದರ ಮೂಲಕ ಅಥವಾ ವೃಥಾ ಇಲ್ಲಸಲ್ಲದ್ದನ್ನು ಟೀಕಿಸುವ ಮೂಲಕ ವ್ಯಕ್ತಪಡಿಸುತ್ತಾರೆ ಕೂಡ! ಸಾಮಾನ್ಯವಾಗಿ ಪ್ರಾಪಂಚಿಕವಾಗಿ ಯಾವುದೋ ಗುರಿ ಸಾಧಿಸಿ ಗೆದ್ದಾತನ ಬಳಿ, ಗೆಲವುವಿನ ಒಂದು ಮಗ್ಗುಲು ಮಾತ್ರ ವೈಭವಯುತವಾಗಿ ಬಿಂಬಿತವಾಗುತ್ತದೆ. ಆದರೆ ಅದರ ಮತ್ತೊಂದು ಮಗ್ಗುಲು, ಆ ಹೋರಾಟ, ಕಹಿ ಅನುಭವಗಳು, ಮಾನಾಪಮಾನಗಳ ವಿವರ ಅಷ್ಟಾಗಿ ಹೊರಜಗತ್ತಿಗೆ ತಟ್ಟುವುದಿಲ್ಲ. ಒಂದು ವೇಳೆ ಗೊತ್ತಾದರೂ, ಅದನ್ನು ಮತ್ತೆ ತಮ್ಮದೇ ಕಾರಣಗಳನ್ನು ಮುಂದಿಟ್ಟು ಗಂಭೀರವಾಗಿ ತೆಗೆದುಕೊಳ್ಳದವರೇ ಹೆಚ್ಚು.
ಹಾಗಾದರೆ ತೃಪ್ತಿ ಎಲ್ಲಿದೆ? ಜನ ಯಾಕೆ ಪ್ರಾಪಂಚಿಕ ಸುಖ ಪ್ರಾಪ್ತಿಗೆ ಹಪಹಪಿಸುತ್ತಾರೆ? ಆದರೂ ಕೊರಗುತ್ತಾರೆ?
ಈ ನಿಟ್ಟಿನಲ್ಲಿ ಓಶೋ ಮಾತು ಸ್ವಾರಸ್ಯಕರ. ಪ್ರಾಪಂಚಿಕ ಯಶಸ್ಸು, ಕೀರ್ತಿ, ದುಡ್ಡು ಇತ್ಯಾದಿಗಳಿಗೆ ಕಸರತ್ತು ಮಾಡುವುದು ತಪ್ಪಲ್ಲ, ಅದನ್ನು ನೋಡುವ ರೀತಿ ಬದಲಾಗಬೇಕು ಎನ್ನುತ್ತಾರೆ ಓಶೋ ರಜನೀಶ್! “ಉದಾಹರಣೆಗೆ ವ್ಯಕ್ತಿಯೊಬ್ಬ ಹಣ ಗಳಿಕೆಯ ಯತ್ನದಲ್ಲಿದ್ದಾನೆ ಎಂದಿಟ್ಟುಕೊಳ್ಳಿ. ಅವನ ಬಳಿ ನಿಮಗೆ ಎಷ್ಟು ದುಡ್ಡು ಅಗತ್ಯ ಇದೆ ಎಂದರೆ, ಯಾವುದೋ ಒಂದು ಮೊತ್ತವನ್ನು ಹೇಳುತ್ತಾನೆ ಹಾಗೂ ಅದಕ್ಕಿಂತ ಕಡಿಮೆಯಾದರೆ ಸಾಲದು ಎನ್ನುತ್ತಾನೆ. ಆತ ಹೇಳಿದಷ್ಟು ದುಡ್ಡು ಕೊಟ್ಟರೂ, ಇದಕ್ಕಿಂತ ಕಡಿಮೆ ಆದರೆ ಆಗದು ಎನ್ನುತ್ತಾನೆ. ಅದರ ಅರ್ಥ? ಕಡಿಮೆಯಾದರೆ ಸಾಲದು ಎಂಬ ಆತಂಕವೇ ಆತನನ್ನು ಎಷ್ಟಿದ್ದರೂ ಸಾಲದ ಪರಿಸ್ಥಿತಿಗೆ ತಳ್ಳುತ್ತದೆ! ಹಾಗಂತ ಈ ಕಾತರತೆಯನ್ನು ನಿರಾಕರಿಸಬಾರದು. ಆಧ್ಯಾತ್ಮಕ ಜೀವನಕ್ಕೂ ಪ್ರಾಪಂಚಿಕ ಅಭ್ಯುದಯದ ತಳಹದಿ ಬೇಕಾಗುತ್ತದೆ. ದುಡ್ಡಿನಲ್ಲೊಂದು ಗುಣವಿದೆ. ಅದೇನೆಂದರೆ ಅದನ್ನು ಗಳಿಸುತ್ತಾ ಹೋದಂತೆಲ್ಲ, ಅದರ ನಿರರ್ಥಕತೆಯ ಬಗ್ಗೆಯೂ ಅರಿವಾಗುತ್ತದೆ. ಒಂದು ವೇಳೆ ದುಡ್ಡಿಲ್ಲದಿದ್ದರೆ, ಅದರ ನಿರರ್ಥಕತೆಯ ಬಗ್ಗೆಯೂ ಅಷ್ಟಾಗಿ ಗೊತ್ತಾಗದು” ಎನ್ನುತ್ತಾರೆ ಓಶೋ!
ಹಾಗಾದರೆ ಕೊನೆಯೇ ಇಲ್ಲದ ಪ್ರಾಪಂಚಿಕತೆಯ ವ್ಯಾಮೋಹದಿಂದ ಸಮಚಿತ್ತ ಕಾಪಾಡಿಕೊಳ್ಳುವುದು ಹೇಗೆ? ನಿಜವಾಗಿಯೂ ಬದುಕಿನಲ್ಲಿ ಸಂತೃಪ್ತಿಯನ್ನು ಕಂಡುಕೊಳ್ಳುವುದು ಹೇಗೆ?
ಇದಕ್ಕೆ ಉತ್ತರ, ಮೊದಲನೆಯದಾಗಿ ಇತರರೊಡನೆ ತಮ್ಮನ್ನು ಹೋಲಿಕೆ ಮಾಡುವುದನ್ನು ತ್ಯಜಿಸಬೇಕು! ದುಡ್ಡು ಗಳಿಕೆ, ಸ್ಥಾನ ಮಾನ, ಅಧಿಕಾರ, ಕೀರ್ತಿಯಲ್ಲಿ ನಮಗಿಂತ ಮುಂದಿದ್ದಾರೆ ಅಂತ ಅಂದುಕೊಂಡು ಕೀಳರಿಮೆಯಿಂದ ಕೊರಗುವುದನ್ನು ಶಾಶ್ವತವಾಗಿ ಬಂದ್ ಮಾಡಬೇಕು. ಜಗತ್ತಿನಲ್ಲಿ ನಿಮ್ಮ ಹಾಗೆ ಮತ್ತೊಬ್ಬರು ಇರಲಾರರು. ಅದುವೇ ನಿಮ್ಮ ವಿಶೇಷತೆ. ಅದನ್ನು ಇತರರೊಡನೆ ಹೋಲಿಸಿಕೊಳ್ಳಲು ಸಾಧ್ಯವೇ ಇಲ್ಲ! ಅದನ್ನು ಅರಿತಾಗ ಬಂಧುಮಿತ್ರರ ಯಶಸ್ಸು ನಿಮ್ಮನ್ನು ಖುಶಿಯಾಗಿಸುತ್ತದೆಯೇ ಹೊರತು, ಅತೃಪ್ತಿಗೆ ಖಂಡಿತ ಕಾರಣವಾಗುವುದಿಲ್ಲ.
– ಕೇಶವ ಪ್ರಸಾದ್.ಬಿ.ಕಿದೂರು