ಪ್ರೇಮಿಯೂ, ಪ್ರಾರ್ಥನೆಯೂ

Share Button

 

ananth-ramesha-3

ಅವಳು ಆಗಮಿಸುವಾಗಲೆಲ್ಲ

ನನ್ನೊಳಗೆ ಉಸುರುತ್ತವೇಕೆ ಆಸೆ

ಕಂಡಾಗ ಇವಳ ನಡೆಯ ಹುರುಪು

ಹೃದಯದೊಳಗೇಕಿಷ್ಟು ಬಿಸುಪು .

ಸ್ಪುರಿಸಿ ಅವಳಾಗಮನದ ಬೆಳಕು

ಒಳಗಿನಾಸೆ ದರ್ಶನವಾಗಬಹುದೆ!

ಯಾರವಳ ಮೆಚ್ಚು ತಿಳಿಯಬಹುದೆ

ಗಟ್ಟಿ ಗುಟ್ಟು ನಿಚ್ಚಳವಾಗಬಹುದೆ?

 .

ಸುಡುವಯಸ್ಸು ಜಾರಿದ ನಡು

ವಯಸ್ಸಿನ ಜಾಣೆ ಈ ಮಂದಸ್ಮಿತೆ

ತುಟಿ ಪದಗಳನರಳಿಸುವ ಪ್ರಸನ್ನೆ

ಪ್ರಚ್ಛನ್ನ ಪ್ರೇಮಸೋಂಕಿನ ವದನೆ !

..

ಪದ ಪದಗಳ ಪೋಣಿಸಿ ಪಲುಕಿ

ಮಾಲೆ ಮಾಡುವ ಚೆಲುವೆ ಚಾಲಾಕಿ

ಅವಳುಸುರುವಾಗಿನ ನುಡಿ ಲಾಲಿತ್ಯ

ರಾಗ ಮಾಲಿಕೆಯ ಸುಸ್ವರ ಸಾಹಿತ್ಯ!

 .

ನಿವೇದಿಸಿ ನಿರಾಳನಾಗುವೆನೆಂದ ಕ್ಷಣ

ಅವಳೊಳಗೆ ಹೊಳೆವ ಹುಸಿ ಜಾಣತನ

ಸುರಿಸಿ ಸುಳ್ಳು ಹರಿಸಿ ಹುಚ್ಚಿನ ಹೊಳೆ

ತೋಯಿಸಿ ಮಿಂಚುವ ಸಂಚಿನ ಎಳೆ !

 .

ಎನಿತೋ ವರ್ಷ ಕಾಯ್ದಿಟ್ಟ ಸಲ್ಲಾಪ

ಅದುಮಿಟ್ಟ ಆಸೆ ಗೂಡ ಪಂಜರದ ಹಕ್ಕಿ

ಹಾರಿಸುವಳೆಂಬ ಭ್ರಮೆನಿರಸನಿಸಿ

ಹೊದೆಯುತ್ತಿದ್ದಾಳೆ ಗೂಢತೆಯ ಹೆಕ್ಕಿ

 .

ಉತ್ಸುಕತೆಯಲ್ಲಿಅವಳ ಕಣ್ಣ ನೋಟ

ಅಷ್ಟೇ ಜಾಗರೂಕತೆಯ ಕಳ್ಳ ಆಟ

ಒಳಗಿನಾಸೆ ಉಳಿಸುವ ಕೆಂದುಟಿಯ

ತುದಿಯ ತುಂಟ ನಗುವಿನ ಪಾಠ!

 .

ಸಮಯ ಜಾರುತ್ತ ಸಂಯಮದ ಕಟ್ಟೆ

ಒಡೆಯದಂತಿರಿಸುವ ಕವಾಯಿತು

ಈ ಗಟ್ಟಿಗಿತ್ತಿಯಲ್ಲಿ ಬತ್ತದ ಹೊಸತು

ಮತ್ತೂ ಒಸರುವ ಜೇನು ಮಾತು

 .

ಕ್ಷಣ ನಿಮಿಷ ಘಂಟೆಗಳೆ ಸ್ತಬ್ಧಿಸಿರಿ

ದಿನಮಾನಗಳೆ ಉರುಳಿ ಹೋಗದಿರಿ

ವರ್ಷಗಳಿಗೆ ಇನಿತೂ ಎಡೆಗೊಡದಿರಿ

ಪರಿವೆ ಇಲ್ಲದ ಕಾಲವ ಮಲಗಿಸಿರಿ!

 .

ವರ್ತಮಾನವೆ   ನಿಲ್ಲು ನಿಲ್ಲು

ನಲ್ಲೆ ಮೇಲಿನ ನೆರೆ ದಾಳಿ ಕೊಲ್ಲು

ಇಂತಿದ್ದ ಪಾತರಗಿತ್ತಿ ಅಂತೆಯೆ ಇರಲಿ

ಮುಂದಿಗೂ ಎಂದಿಗೂ ಹಾರುತ್ತಲಿರಲಿ

 .

ಹರೆಯದ ಪೊರೆ ಕಳಚುತ್ತಿರುವವಳಿಗೆ

ಕನಸ ಕೊಬ್ಬಿಸುವ  ನಲ್ಲ ನಾನಾಗುವರೆಗೆ

ಅವಳ ಮಾತಿನ ಪರಿಗೆ ಸೋತವನಿಗೆ

ಗರಿಬಿಚ್ಚುವವರೆಗು ಕಾದೇನು ಗೆಲ್ಲುವರೆಗೆ

 .

ಅಯ್ಯಾ,  ದಿನವೆ ಉರುಳಬೇಡ

ವರ್ಷಗಳಿಗೆ ಎಡೆಗೊಡಬೇಡ !

 

  – ಅನಂತ ರಮೇಶ್

2 Responses

  1. ಪ್ರೇಮಿಯ ಆಶಾವಾದ ಎಂದೂ ಬತ್ತದ ಒರತೆಯ ಹಾಗೆ. ಅದನ್ನು ಬಿಂಬಿಸುವ ಸೊಗಸಾದ ಯಾಚನೆ, ಯಾತನೆ ಪ್ರೇಮಾಲಾಪ !

Leave a Reply to Anantha Ramesh Cancel reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: