ಕರಿಬೇವೆಂಬ ಅಡುಗೆ ಮನೆಯ ಆಪ್ತ ಸಖಿ

Share Button

 

Smith Amritaraj

ಸ್ಮಿತಾ ಅಮೃತರಾಜ್, ಸಂಪಾಜೆ

ಕರಿಬೇವಿನ ಒಗ್ಗರಣೆಯಿಲ್ಲದ ಉಪ್ಪಿಟ್ಟನ್ನು ನೀವು ಊಹಿಸಬಲ್ಲಿರಾ..? ಎಷ್ಟೇ ರುಚಿಕಟ್ಟಾದ ಅಡುಗೆ ನೀವು ತಯಾರು ಮಾಡಿದರೂ,ಒಗ್ಗರಣೆ ಮಾಡಿದ ಮೇಲಷ್ಟೇ ಆ ಅಡುಗೆಗೊಂದು ಪೂರ್ಣತೆ ಒದಗಿ ಬರುವುದು. ಒಗ್ಗರಣೆಯೆಂದ ಮೇಲೆ ಕೊಂಚ ಎಣ್ಣೆ, ಚಿಟಿಕೆ ಸಾಸಿವೆ,ಎರಡೆಸಳು ಬೆಳ್ಳುಳ್ಳಿ,ಒಣ ಮೆಣಸು ತುಂಡು,ಹೀಗೆ ಅವರವರ ಹದಕ್ಕನುಗುಣವಾಗಿ,ಇಷ್ಟಾನುಸಾರ ಕೈ ತೂಕದ ಅಳತೆಗೆ ಬಿಟ್ಟ ವಿಷಯವಿದು. ಈ ಒಗ್ಗರಣೆಗೆ ಯಾವುದೇ ಒಂದು ವಸ್ತುವೂ ಕಡಿಮೆಯಾದರೂ ಅಡ್ಡಿಯಿಲ್ಲ. ಆದರೆ ಎರಡೆಲೆ ಕರಿಬೇವು ಹಾಕೋದು ನೀವು ಮರೆತು ಬಿಟ್ಟಿರೋ, ಈ ಕೊರತೆಯನ್ನು ಯಾವ ವಸ್ತುವೂ ನೀಗಲಾರದು ಅಂತನ್ನಿಸುತ್ತದೆ. ಕಾದ ಎಣ್ಣೆ ಮೇಲೆ ಸಿಡಿಯುವ ಸಾಸಿವೆ ಜೊತೆಗೆ ಕರಿಬೇವಿನೆಲೆ ಬಿದ್ದ ಮೇಲಷ್ಟೇ ಆ ಅಡುಗೆಗೊಂದು ಅರ್ಥೈಸಲಾಗದಂತಹ ಅಪೂರ್ವ ಪರಿಮಳ.ಅಡುಗೆ ಮನೆಯಿಡೀ ಘಂ ಎಂಬ ಘಮಲು.ಜೊತೆಗೆ ಬಡಿಸಿದ ಮೇಲೆ ನೋಡುವ ಕಣ್ಣಿಗೂ ಒಂದು ತೆರನಾದ ಹಿತವಾದ ಭಾವ.ಮನೆಯಲ್ಲಿಯೇ ಇರಲಿ, ಯಾವುದೇ ಸಮಾರಂಭಗಳಲ್ಲಿಯೇ ಆಗಲಿ ಒಗ್ಗರಣೆಯ ಸದ್ದಿನೊಂದಿಗೆ ಪಸರಿಸಿದ ಪರಿಮಳಕ್ಕೆ,ಇನ್ನು ಅಡುಗೆ ಮುಗೀತು,ಊಟಕ್ಕೆ ತಯಾರಾಗಬಹುದು ಎಂಬ ಕರೆಯೋಲೆ ಕೊಟ್ಟಂತಾಗುತ್ತದೆ.ಅಷ್ಟು ಹೊತ್ತಿಗಾಗಲೇ ಈ ತನಕ ಸುಮ್ಮನಿದ್ದ ಹೊಟ್ಟೆ ಚುರುಗುಟ್ಟಿ ಇನ್ನಿಲ್ಲದಂತೆ ಬ್ರಹ್ಮಾಂಡ ಹಸಿವು ಆವರಿಸಿಕೊಂಡು ಬಿಡುತ್ತದೆ.ಇಷ್ಟೆಲ್ಲಾ ಸದ್ದಿಲ್ಲದೇ ಸುದ್ದಿ ಮಾಡುವ ಕರಿಬೇವಿನ ಬಗ್ಗೆ ಸೂಕ್ಷ್ಮವಾಗಿ ಅವಲೋಕಿಸಿದರೆ ಎಷ್ಟೊಂದು ಸಂಗತಿಗಳು ತೆರೆದುಕೊಳ್ಳುತ್ತಾ ಹೋಗುತ್ತವೆ…

 

ಎಲ್ಲರ ಮನೆಯ ಹಿತ್ತಲಿನಲ್ಲೊಮ್ಮೆ ನಾವು ಹಣಕಿ ಹಾಕಿದರೆ ಗೊತ್ತಾಗುತ್ತೆ.ಹಿತ್ತಲ ಮೂಲೆಯಲ್ಲೊಂದು ಸೊಂಪಾಗಿ ಬೆಳೆದ ಕರಿ ಬೇವಿನ ಗಿಡ ಇದ್ದೇ ಇರುತ್ತೆ.ಲಗುಬಗೆಯಿಂದ ಕೆಲಸ ಮಾಡುವ ತರಾತುರಿಯಲ್ಲಿ ಮನೆಯಾಕೆಗೆ ಮರೆವು ಜಾಸ್ತಿ.ಹಾಗಾಗಿ ಒಲೆಯ ಮೇಲೆ ಸೌಟಿನಲ್ಲಿ ಎಣ್ಣೆ ಕಾಯಲು ಇಟ್ಟ ಮೇಲಷ್ಟೇ ಅವರಿಗೆ ಕರಿಬೇವಿನ ಸೊಪ್ಪಿನ ನೆನಪು.ಅದಕ್ಕೇ ಇರಬೇಕು ಎಣ್ಣೆ ಕಾದು ಸಾಸಿವೆ ಸಿಡಿದು ಕರಕಲಾಗದಷ್ಟು ಸಮಯದ ಅಂತರದಲ್ಲಿ ಪಕ್ಕನೆ ಓಡಿ ನಾಲ್ಕೆಲೆ ಕಿತ್ತು ತರಲು ಅನುಕೂಲವಾಗುವಂತೆ ಹಿಂದಣ ಹಿತ್ತಲಿನಲ್ಲಿ ಗಿಡ ಊರಿಟ್ಟದ್ದನ್ನು ಗಮನಿಸಿದರೆ ಅರಿವಾಗುವ ಚುರುಕು ಬುದ್ದಿ ಆಕೆಗಲ್ಲದೆ ಮತ್ತ್ಯಾರಿಗೆ ತಾನೆ ಇರಲು ಸಾಧ್ಯ?! cl-treeಒಗ್ಗರಣೆಯ ಕರಿಬೇವಿನಲ್ಲೂ ತರಾವರಿ ನಮೂನೆಗಳಿವೆ ಅಂತ ಮನೆಯೊಡತಿಯ ಸೂಕ್ಷ್ಮ ಮನಸ್ಸಿಗಷ್ಟೇ ತಿಳಿದ ರಹಸ್ಯ.ಅಕ್ಕಪಕ್ಕದ ಮನೆಯೊಡತಿಯರು ಒಂದೆಡೆ ಕಲೆತಾಗ ಅವರ ಮಾತಿಗೆ ಕಿವಿಯಾನಿಸಿದರೆ ಸ್ಪಷ್ಟವಾಗಿ ಬಿಡುತ್ತದೆ.ಇದು ಸಣ್ಣ ಎಲೆಯ ಬೇವು.ಇದಕ್ಕೆ ಹೆಚ್ಚು ಪರಿಮಳ.ನಮ್ಮ ಮನೆಯದ್ದು ದೊಡ್ಡ ಎಲೆಯಷ್ಟು ಗಾತ್ರದ ಸೊಪ್ಪು.ಜೊತೆಗೆ ಕಪ್ಪಿಗೆ ತಿರುಗಿದ ಕಡು ಹಸಿರು.ಈ ಚಿಗುರೆಲೆಯಂತಹ ಎಳೆ ಹಸಿರು ಬಣ್ಣದ ಕರಿಬೇವೇ ಒಗ್ಗರಣೆಗೆ ಸೂಕ್ತ ಮತ್ತು ಚೆಂದ ಅಂತ ಅನಿಸಿಕೆ ವ್ಯಕ್ತ ಪಡಿಸುತ್ತಲೇ ಅಲ್ಲೇ ಬಿದ್ದು ಹುಟ್ಟಿದ ಪುಟ್ಟ ಸಸಿಯನ್ನು ಕಿತ್ತು,ತಮ್ಮ ಮನೆಯ ಹಿಂಬದಿಯಲ್ಲಿ ಹಳೇ ಗಿಡಕ್ಕೆ ಸಾಥಿಯೆಂಬಂತೆ ನೆಟ್ಟ ಮೇಲಷ್ಟೇ ಆಕೆಗೆ ನಿರುಮ್ಮಳತೆ.

ಕರಿಬೇವು ಪ್ರತಿನಿತ್ಯ ಊಟದಲ್ಲಿ ತಪ್ಪದೆ ಕಾಣುವ ಅತಿಥಿಯಾಗಿರುವುದರಿಂದಲೇ ಏನೋ ಇದರ ಬಗ್ಗೆ ನಮಗೇ ಗೊತ್ತಿರದಂತಹ ಅಸಡ್ದೆ.ಅದರ ಬೆಲೆಯಾಗಲಿ, ಅದರ ಮಹತ್ವದ ಬಗ್ಗೆಯಾಗಲಿ ತಲೆಕೆಡಿಸಿಕೊಳ್ಳೋದಿಕ್ಕೆ ಹೋಗದಷ್ಟು.ಬೇವು ಆರೋಗ್ಯಕ್ಕೆ ಒಳ್ಳೇದು,ಅದು ಕೊಬ್ಬನ್ನು ಕರಗಿಸುತ್ತೆ ಅನ್ನೋ ಜಾಗೃತ ಪ್ರಜ್ನೆಯಿರುವ ಮನೆಯೊಡತಿಗೆ,ಮನೆಮಂದಿಯೆಲ್ಲಾ ತಿಂದುಂಡ ತಟ್ಟೆ ಕೊನೇಯಲ್ಲಿ ಬೇವಿನೆಲೆಗಳನ್ನ ಬಿಟ್ಟೇಳುವುದ ಕಂಡಾಗ ಕಳವಳಿಸುತ್ತಾ ತಡೆಯಲಾರದೆ ರೇಗಿಬಿಡುತ್ತಾಳೆ.ಅವರುಗಳೋ..ಊಟದ ಜೊತೆಗೆ ಸೊಪ್ಪು ಸದೆಯನ್ನು ತಿನ್ನಲು ಮತ್ತೊಂದು ಜನ್ಮದಲ್ಲಿ ಪ್ರಾಣಿಗಳಾಗಿಯೇ ಹುಟ್ಟುತ್ತೇವೆ ಅಂತ ಮುಸಿ ಮುಸಿ ನಗುತ್ತಾ ಎದ್ದು ಕೈ ಬಾಯಿ ತೊಳೆದು ಕೊಳ್ಳುತ್ತಾರೆ.ಆದರೂ ಮನೆಯೊಡತಿಯರಂತೋ ರುಬ್ಬುವ ಕಲ್ಲಿಗೇ ಬೇವಿನೆಲೆ ಉದುರಿಸಿ, ಆ ಮೂಲಕವಾದರೂ ದೇಹಕ್ಕೆ ಸೇರಲಿ ಅಂತ ಕಾಳಜಿ ವಹಿಸುವುದು ತೆರೆಮರೆಯ ಕತೆಯಾಗಿ ನೇಪಥ್ಯದಲ್ಲೇ ಉಳಿದು ಬಿಡುವ ನಿಜ ಸಂಗತಿ.

ದಡೂತಿ ಗೆಳತಿಯೊಬ್ಬಳು ತೆಳ್ಳಗಾಗಲು ಪ್ರಯತ್ನ ಪಟ್ಟು ಪ್ರಯೋಗಿಸಿದ ಮ್ಯಾಜಿಕ್‌ಗಳು ಅಷ್ಟಿಷ್ಟಲ್ಲ.ಏರುವ ತೂಕದೊಂದಿಗೆ ಪರ್ಸ್ ಖಾಲಿಯಾಗುತ್ತಾ ಸಣ್ಣದಾದದ್ದು ಈಗ ಹಳೇ ಕಥೆ.ಅವಳ ಜೊತೆಗೆ ಮತ್ತಿತರರದ್ದೂ ಇದೇ ವ್ಯಥೆ.ಆದರೆ ಮೊನ್ನೆ ಮೊನ್ನೆ ಆಕೆ ಬಳಕುವ ಬಳ್ಳಿಯಂತೆ ತೆಳ್ಳಗಾದದ್ದನ್ನು ಕಂಡು ಅಚ್ಚರಿ ತಡೆಯಲಾರದೆ ಕೇಳಿದರೆ,ಪಕ್ಕನೆ ಬಾಯಿ ಬಿಡದೆ ಏನೆಲ್ಲಾ ಸತಾಯಿಸಿದ ಮೇಲೆಯೇ ಗುಟ್ಟು ರಟ್ಟಾದದ್ದು …ಕವಡೆ ಕಾಸು ಖರ್ಚಾಗದೆ ದಕ್ಕಿದ ಕರಿಬೇವಿನ ಮ್ಯಾಜಿಕ್ ಮಂತ್ರ.
ಬೇವಿನ ಸೊಪ್ಪನ್ನು ನುಣ್ಣಗೆ ಅರೆದು ತಲೆಗೆ ಹಚ್ಚಿಕೊಂಡರೆ,ಕೂದಲುದುರುವುದು ತಹಬಂದಿಗೆ ಬಂದು ಸೊಂಪಾಗಿ ಕೂದಲು ಬೆಳೆದು ಕೇಶ ಲಕ ಲಕ ಹೊಳೆಯುತ್ತೆ ಅಂತ ಅಜ್ಜಿಯಂದಿರಿರುವ ಮನೆಯಲ್ಲಿ ಗೊತ್ತಿರುವ ಸಂಗತಿ.

 

ಅದೆಷ್ಟೋ ಮನೆಗಳಲ್ಲಿ ಇಂದಿಗೂ ಕೂಡ ಕೊಬ್ಬರಿ ಎಣ್ಣೆಗೆ ಕರಿಬೇವು ಗುದ್ದಿ ಹಾಕಿ curry leave-hairಕಾಯಿಸಿದ ಎಣ್ಣೆಯನ್ನೇ ಬಳಸುವುದು ರೂಡಿ.ಇನ್ನು ಬೇವಿನ ಸೊಪ್ಪನ್ನು ಸಣ್ಣಗೆ ಅರೆದು ಕಡ್ಲೆ ಹಿಟ್ಟಿನ ಜೊತೆ ಫೇಸ್ ಪ್ಯಾಕ್ ತರಹ ಮುಖಕ್ಕೆ ಹಚ್ಚಿಕೊಳ್ಳುವುದು ಉತ್ತಮ ಸೌಂದರ್ಯವರ್ಧಕವೆಂಬುದು ಯಾರಿಗೂ ಗೊತ್ತಿರದ ವಿಷಯವೇನಲ್ಲ.ಈ ಧಾವಂತದ ಯುಗದಲ್ಲಿ ಇಂತಹ ತ್ರಾಸದಾಯಕ ಕೆಲಸಗಳನ್ನು ಮಾಡುವಷ್ಟು ವ್ಯವಧಾನ ಕಡಿಮೆಯಾಗಿರುವುದರಿಂದಲೇ ಏನೋ ಮಾರುಕಟ್ಟೆಯಲ್ಲಿ ಹಣ ತೆತ್ತರೆ ಸುಲಭಕ್ಕೆ ಸಿಗುವ ಆರ್ಯುವೇದಿಕ್ ಶ್ಯಾಂಪು,ಕ್ರೀಂ ಗಳಂತಹ ಪ್ರಸಾಧನಗಳು ಕಣ್ಣಿಗೆ ಬಿದ್ದದ್ದೇ ತಡ,ಅದಕ್ಕೇ ದಡಬಡಿಸಿ ಮೊರೆ ಹೋಗುವುದ ಕಂಡಾಗ ಹಿತ್ತಲ ಗಿಡ ಮದ್ದಲ್ಲ ಅಂತ ಕರಿಬೇವು ಹಿತ್ತಲ ಮೂಲೆಯಲ್ಲಿ ತಣ್ಣಗೆ ಯೋಚಿಸುತ್ತಾ ನಿಂತಂತ್ತೆ ಭಾಸವಾಗುತ್ತದೆ.ಆದರೂ ಪೇಟೆ ಮಂದಿ ಸಂತೆಯಿಂದ ಹಣ ತೆತ್ತು ಒಗ್ಗರೆಣೆಗೋಸ್ಕರ ಕರಿ ಬೇವು ಕೊಂಡು ಹೋಗುವುದ ಕಾಣುವಾಗಲೆಲ್ಲಾ, ಹಳ್ಳಿ ಹೆಂಗಳೆಯರು ತಮ್ಮ ಭಾಗ್ಯವನ್ನು ಕೆಲ ಕ್ಷಣದ ಮಟ್ಟಿಗಾದರೂ ನೆನೆದು ಕೊಂಡಾಡಿಕೊಳ್ಳುವುದಂತೂ ಸುಳ್ಳೇನಲ್ಲ. ಆಗೆಲ್ಲಾ ಹಿತ್ತಲ ಬೇವಿನ ಮೇಲೆ ಮತ್ತಷ್ಟು ಅಭಿಮಾನ ಅಕ್ಕರೆ ಉಕ್ಕುಕ್ಕಿ ಹರಿದು ಬಿಡುತ್ತದೆ.ಆದರೂ ಒಗ್ಗರಣೆಯ ಕರಿಬೇವು ಊಟ ಮುಗಿದಾದ ಬಳಿಕ ತಟ್ಟೆಯ ಬದಿಯಲ್ಲಿ ಎಂಜಲಾಗಿ ಕೊನೆಗೆ ಕಾಲ ಕಸವಾಗುವುದ ಕಂಡಾಗಲೆಲ್ಲಾ ಕಸಿವಿಸಿಯಾಗುತ್ತಾ ನೂರೆಂಟು ಉತ್ತರ ಸಿಗಲಾರದ ಪ್ರಶ್ನೆಗಳು ನಮ್ಮ ಮುಂದೆ ಸುಳಿದು ಹೋಗಿ ಬಿಡುತ್ತದೆ.

ಎಷ್ಟೊಂದು ಮನೆಯೊಡತಿಯರು ಒಗ್ಗರಣೆಗೆ ಕರಿಬೇವು ಉದುರಿಸುತ್ತಾ ,ನಾವುಗಳೂ ಕರಿಬೇವಿನಂತಾದೆವೇನೋ ಅಂತ ಹಳ ಹಳಿಸುತ್ತಾ ನಿಟ್ಟುಸಿರ ಬಿಡುತ್ತಿದ್ದಾರೇನೋ ಈ ಹೊತ್ತಲ್ಲಿ.ಮತ್ತದು ಮಾಮೂಲಿ ಸಂಗತಿಯಷ್ಟೇ ಸಹಜವೆಂಬಂತೆ,ಎಲ್ಲ ಮರೆತವರಂತೆ ಮತ್ತೊಂದು ಕೆಲಸಕ್ಕೆ ಕೈ ಹಚ್ಚಿಕೊಳ್ಳುತ್ತಾ,ಸಂಜೆಯ ಏಕಾಂತ ಮೌನದಲ್ಲಿ ಕರಿಬೇವಿನ ಗಿಡದ ಜೊತೆಗೆ ಹಿತ್ತಲಿನಲ್ಲಿ ಮೌನ ಸಂವಾದಕ್ಕೆ ತೊಡಗಿಕೊಳ್ಳುತ್ತಾ ಉಲ್ಲಸಿತರಾಗಿಬಿಡುತ್ತಾರೆ.

ಆಟಕ್ಕುಂಟು ಲೆಕ್ಕಕ್ಕಿಲ್ಲದಂತಾದರೂ ಕರಿಬೇವಿನ ಅನುಪಸ್ಥಿತಿಯಲ್ಲಿ ಎಲ್ಲವೂ ಅಪರಿಪೂರ್ಣವಾಗುವಾಗ ಅಂದು ಹಾಕಿದ ಕರಿಬೇವಿಲ್ಲದ ಒಗ್ಗರಣೆ ಸಾಂಬಾರಿನ ಜೊತೆ ಪರಿಪೂರ್ಣತೆಯನ್ನು ಪಡೆಯಲು ಯಾಕೋ ಸಹಕರಿಸುವುದೇ ಇಲ್ಲ.

– ಸ್ಮಿತಾ ಅಮೃತರಾಜ್, ಸಂಪಾಜೆ

cl

 

 

5 Responses

  1. Shruthi says:

    ಉತ್ತಮವಾದ ಬರಹ 🙂

  2. BH says:

    ನಾವು ಲಘುವಾಗಿ ಕಾಣುವ ಕರಿಬೇವಿನ ಕುರಿತು ಇಷ್ಟೊಂದು ವಿಚಾರಗಳನ್ನು ಎಲ್ಲಿಂದ,ಹೇಗೆ ತಿಳಿದಿರಿ , ಸ್ಮಿತಾ ಅವರೇ? ನಿಮ್ಮ ಬರಹ ಹಾಗೂ ಕವನಗಳ ವಿಸ್ತಾರ, ವೈವಿಧ್ಯ ಹಾಗು ಬರವಣಿಗೆಯ ಶೈಲಿ ತುಂಬಾ ಮೆಚ್ಚಿಗೆಯಾಯಿತು. ಇನ್ನೂ ಬರೆಯುತ್ತಾ ಇರಿ.

  3. Ramya.V says:

    ಸೊಗಸಾದ ಬರಹ…

  4. ಹೌದು .ಕರಿಬೇ ವು ನಿಜವಾದ ಆಪ್ತ ಸಖಿ .ಮೊನ್ನೆ ಮೊನ್ನೆ ನನ್ನ ಅತ್ತಿಗೆಗೆ ಫೋನಾಯಿಸಿ ಕುಶಲೋ ಪರಿ ವಿಚಾರಿಸಿ ಅಡಿಗೆ ಯೇನೆ೦ದು ಕೇಳಿದೆ .ಕರಿಬೇವಿನ ತಂಬುಳಿ ಯೆ೦ದರು .ಅವರಿಗೆ ದಿನಾ ಕರಿಬೇವಿನ ತಂಬುಳಿ ಆಗಬೇಕಂತೆ .ಮೊನ್ನೆ ಬೇಟಿಯಾದಾಗ ತಿಳಿಯಿತು .ಕರಿಬೇವಿನ ತಂಬುಳಿ ಅಥವಾ ಕಷಾಯ ಕುಡಿದು ಅವರ ಭುಜ ,ಕುತ್ತಿಗೆ ನೋವು ಗುಣವಾಗಿದೆಯ೦ತೆ. ಸೊಗಸಾದ ಬರಹ ,ಮಾಹಿತಿಗಾಗಿ ಧನ್ಯವಾದಗಳು .

  5. smitha Amrithraj says:

    ಪ್ರತಿಕ್ರಿಯಿಸಿದ ಎಲ್ಲರಿಗೂ ವಂದನೆಗಳು-smitha

Leave a Reply to smitha Amrithraj Cancel reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: