ವೀಸಾ ಕಸಿವಿಸಿ …

Share Button

 

ವಿದೇಶ ಪ್ರಯಾಣ…  ವಾಹ್… ನಂಬ್ಲಿಕ್ಕೇ ಆಗ್ತಾ ಇಲ್ಲ. ಕನಸಲ್ಲೂ ಯೋಚಿಸದಿರುವ ವಿಷಯ ಇದು. ಹೌದು.. ವಿದೇಶದಲ್ಲಿ ಇರುವ ಮಗಳು ಮತ್ತು ಅಳಿಯನಿಂದ ಕರೆ ಬಂದಿತ್ತು. ಪಾಸ್‌ಪೋರ್ಟ್ ಮಾಡುವಂತೆ ಒತ್ತಡ ಬಂದಾಗ ಮಾಡಲೇ ಬೇಕಾಗಿತ್ತು,ಅದು ತಯಾರಾಗಿ ಕೂತಿತ್ತು. ಈಗ ವೀಸಾಕ್ಕೆ ತಯಾರಿ ಪ್ರಾರಂಭಿಸಲು ಸಲಹೆ ಬಂತು.  ತಗೊಳ್ಳಿ… ಎಷ್ಟೋ ವರ್ಷಗಳ ಹಿಂದೆ ಪರೀಕ್ಷೆಗಳಿಗೆ ಬರೆದು ಪಾಸಾಗಿ ಆಗಿತ್ತು.. ಆದರೆ ಈಗ ಚೆನ್ನೈ ಯಲ್ಲಿ ನಡೆಯಲಿರುವ ವೀಸಾ ಸಂದರ್ಶನ (ಪರೀಕ್ಷೆ??) ಕ್ಕೆ ತಯಾರಿ ನಡೆಸಬೇಕಿತ್ತು. ಪ್ರಶ್ನೆಪತ್ರಿಕೆಯನ್ನು ಮಗಳು ಕಳಿಸಿಕೊಟ್ಟರೆ, ಅಳಿಯ ಉತ್ತರ ಪತ್ರಿಕೆಯನ್ನು ಕಳಿಸಿಕೊಟ್ಟ….! ನಾವಿಬ್ಬರೂ ಉತ್ತರ ಉರು ಹೊಡೆದದ್ದೇ ಹೊಡೆದದ್ದು ….! ಚೆನ್ನೈಗೆ ಹೋಗುವ ವಾರದ ಮೊದಲೇ ನಮಗೆ    Skypeಲ್ಲಿ ಮಗಳ ಪರೀಕ್ಷೆ..! ಅವರು ಕೇಳಿದ ಪ್ರಶ್ನೆಗೆ ತಪ್ಪು ತಪ್ಪು ಉತ್ತರ ಕೊಟ್ಟು ಬೈಗಳು ತಿಂದದ್ದೂ ಆಯ್ತು. ವೀಸಾಕ್ಕಾಗಿ ಸ್ಪೆಷಲ್ ಆಗಿ ಫೋಟೋ ತೆಗೆಸಿಕೊಂಡದ್ದೂ ಆಯ್ತು.

ಚೆನ್ನೈಗೆ ಹೋಗುವ ದಿನ ಬಂತು. ಬೇಕದ್ದು ಬೇಡದ್ದು ಎಲ್ಲಾ ದಾಖಲೆಗಳ ಮೂಲಪ್ರತಿ ಹಾಗೂ ಝೆರಾಕ್ಸ ಪ್ರತಿಗಳನ್ನು ಹಿಡಿದುಕೊಂಡು ಹೊರಟೆವು… ಅಲ್ಲಿ ಕೇಳಿದರೆ ಬೇಕಲ್ಲಾ.. ಚೆನ್ನೈಯಲ್ಲಿ ನಮ್ಮ ಬಂಧುಗಳ ಮನೆಯಲ್ಲಿ ಉಳಕೊಂಡಿದ್ದು, ಅವರೇ ವೀಸಾ ಸಂದರ್ಶನಕ್ಕೆ ಕರೆದುಕೊಂಡು ಹೋದುದರಿಂದ ಆ ಕೆಲಸ ಒಂದು ಸುಲಭದಲ್ಲಿ ಆಯ್ತು ಬಿಡಿ…! ಸಂದರ್ಶನವೋ ಬೆಳಿಗ್ಗೆ 11ಗಂಟೆಗೆ ಇತ್ತು… ನಾವು  ಬೆಳಿಗ್ಗೆ 8ಗಂಟೆಗೇ ಹೋಗಿ ಆಗಲೇ ಅಲ್ಲಿದ್ದ ಮೈಲುದ್ದದ ಕ್ಯೂನಲ್ಲಿ ಸೇರಿಕೊಂಡೆವು.. ನಮಗಂತೂ ಹೆದರಿಕೆಯಿಂದ ಮೈ ಬೆವತೇ ಹೋಗಿತ್ತು! ನಮ್ಮ ಹಿಂದೆ ಮುಂದೆ ಇರುವವರನ್ನು ಮಾತನಾಡಿಸಿದಾಗ ಗಾಬರಿ ಇನ್ನೂ ಜಾಸ್ತಿ ಆಯ್ತು. ಕೆಲವರು ವೀಸಾ ಸಿಗದೆ ಎರಡನೆಯ ಅಥವಾ ಮೂರನೆಯ ಬಾರಿ ಸಂದರ್ಶನಕ್ಕೆ ಬಂದವರಾಗಿದ್ದರು!

ಅಂತೂ ನಮ್ಮ ಸರದಿ ಬಂದೇ ಬಂತು. ಎದೆ ಗಟ್ಟಿ ಮಾಡಿಕೊಂಡು ಒಳಗೆ ಹೋದೆವು. ಆ ಹೊತ್ತಿಗೆ ಸ್ವಲ್ಪ ಭಂಡ ಧೈರ್ಯವೂ ಬಂದಿತ್ತೆನ್ನಿ!. ಎದುರಲ್ಲೇ ಇದ್ದವರು ನಮ್ಮ ದಾಖಲೆಗಳನ್ನು ಪರಿಶೀಲಿಸಿದಾಗ ತಿಳಿಯಿತು.. ಮುಖ್ಯವಾಗಿ ನಮ್ಮ ಫೋಟೊವೇ ಸರಿ ಇರಲಿಲ್ಲ. ಅವರೇ ತೋರಿಸಿದಂತೆ, ಅಲ್ಲೇ ಇದ್ದ ಸ್ಟುಡಿಯೊದಲ್ಲಿ ಬೇಕಾದಂತೆ ನಮ್ಮ ಭಾವಚಿತ್ರ ತೆಗೆದರು.. ಅದಂತೂ ನೋಡಲೂ ಸಾಧ್ಯವಾಗದಷ್ಟು ಅಧ್ವಾನವಾಗಿ ಬಂದಿತ್ತು . ಅಂತೂ ಅದನ್ನು ಭದ್ರವಾಗಿ ಹಿಡಿದುಕೊಂಡು ಪುನಃ ಕ್ಯೂ ಸೇರಿಕೊಂಡೆವು.

ಮುಂದೆ ಹೋಗುತ್ತಿದ್ದಂತೆ ಸಿನಿಮಾ ಮಂದಿರದಲ್ಲಿರುವ ಟಿಕೆಟ್ ಕೌಂಟರಿನಂತಿರುವಲ್ಲಿ ಅಮೇರಿಕನ್ ಒಬ್ಬರು ಕೂತಿದ್ದರು. ನಮ್ಮ ಸರದಿ ಬೇಗನೇ ಬಂದಿತ್ತು. ಅಲ್ಲಿ ಪುನಃ  ದಾಖಲೆಗಳನ್ನು ಪರಿಶೀಲಿಸಿ ಮುಂದೆ ದೊಡ್ಡ ಹಾಲ್ ನಲ್ಲಿ ನಮ್ಮ ಸಂದರ್ಶನ ಎಂದೇ ನನ್ನ ಮನದಲ್ಲಿ ಇದ್ದುದರಿಂದ ನಿರಾಳವಾಗಿಯೇ ಇದ್ದೆ. ಅಲ್ಲಿ ನಮ್ಮನ್ನು ಚೆನ್ನಾಗಿಯೇ ಮಾತನಾಡಿಸಿದರು. ಅಮೇರಿಕದ ಇಂಗ್ಲಿಷ್.. ಸರಿಯಾಗಿ ಅರ್ಥ ಆಗದಾಗ ಪುನಃ ಪುನಃ ಕೇಳಿ ತಿಳಿದುಕೊಂಡು ಉತ್ತರಿಸಿದೆವು. ಅವರೂ ನಗು ನಗುತ್ತಾ ವಿಚಾರಿಸಿ, “ಸರಿ.. ನಿಮ್ಮ ಮಗಳಲ್ಲಿಗೆ ಹೋಗಿ ಬನ್ನಿ.. ನಿಮ್ಮ ವೀಸಾ ಇನ್ನು ಒಂದು ವಾರದಲ್ಲಿ ನಿಮಗೆ ತಲಪುತ್ತದೆ” ಎಂದರು. ನನಗಂತೂ ಅರ್ಥವಾಗಲೇ ಇಲ್ಲ! ನನ್ನ ಲೆಕ್ಕದಲ್ಲಿ ಸಂದರ್ಶನ ಇನ್ನೂ ಆಗಿರಲೇ ಇಲ್ಲ! ಕಕ್ಕಾಬಿಕ್ಕಿಯಾಗಿ ನಮ್ಮವರಲ್ಲಿ ಕೇಳಿದೆ.. ವೀಸಾ ಸಂದರ್ಶನ ಎಲ್ಲಿ.. ಇವರು ಯಾಕೆ ಹೀಗೆನ್ನುತ್ತಾರೆ ಎಂದು. ನಮ್ಮವರಿಗೂ ಅದೇ ಯೋಚನೆ ಇತ್ತೆನ್ನಿಸುತ್ತದೆ. ಅಕ್ಕಪಕ್ಕದವರಲ್ಲಿ ವಿಚಾರಿಸಿದಾಗ ತಿಳಿಯಿತು.. ಆಗ ನಡೆದದ್ದೇ ಸಂದರ್ಶನವಾಗಿತ್ತು..!! ಅಂತೂ ನಮ್ಮ ಮೊದಲನೇ ಪ್ರಯತ್ನದಲ್ಲೇ ಪಾಸಾಗಿದ್ದೆವು..!! ದೇವರ ಕೃಪೆಯೆಂದೆಣಿಸಿ ಖುಷಿಯಿಂದ ಹೊರಬಂದೆವು. ..ಅಮೇರಿಕ ಪ್ರವಾಸಕ್ಕೆ೧೦ವರ್ಷಗಳ ತನಕ  ಹೋಗಲು ಪರವಾನಿಗಿ ಸಿಕ್ಕಿತ್ತು..!!

 

-ಶಂಕರಿ ಶರ್ಮ. ಪುತ್ತೂರು

3 Responses

  1. Shruthi Sharma says:

    ನಿಮ್ಮ ವೀಸಾ ಸಂದರ್ಶನದ ಕಥೆ ಓದಿ ಖುಷಿ ಆಯ್ತು 🙂

  2. savithri s.bhat says:

    “ವೀಸಾ ಸಂದರ್ಶನ ” ಬಹಳ ಚೆನ್ನಾಗಿದೆ

  3. Shankari Sharma says:

    ಬರಹ ಮೆಚ್ಚಿದ ನಿಮಗೆಲ್ಲರಿಗೂ ಧನ್ಯವಾದಗಳು..

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: