ಹಿಮಗಿರಿಯ ಒಡಲು ಮುಕ್ತಿನಾಥದ ಮಡಿಲು ….ಭಾಗ 5

Share Button

ಜೋಮ್ ಸಮ್ ನಲ್ಲಿ ಒಂದು ದಿನ

ಜೋಮ್ ಸಮ್ ನಲ್ಲಿ ಏನಿದೆ ನೋಡೋಣ  ಅಲ್ಲಿದ್ದ  ಒಂದೇ ಬೀದಿಯಲ್ಲಿ ಅತ್ತಿಂದಿತ್ತ ನಡೆದೆವು. ಸುತ್ತಲೂ ಕಂದು ಬಣ್ಣದ ಬೋಳು ಬೆಟ್ಟಗಳು. ಅವುಗಳಲ್ಲಿ ಕೆಲವು ಶಿಖರಗಳು ಹಿಮಾವೃತವಾಗಿ  ಬೆಳ್ಳಿಯ ಹೊದಿಕೆ ಹೊದ್ದಿದ್ದುವು.  ಇದ್ದ ಒಂದೇ ಬೀದಿಯ ಪಾರ್ಶ್ವದಲ್ಲಿ, ಸಣ್ಣ ಶಾಲಾ ಮೈದಾನದಂತೆ ಇದ್ದ ಜಾಗವೇ  ‘ಜೋಮ್ ಸಮ್ ಏರ್ ಪೋರ್ಟ್’. ಅಲ್ಲಿದ್ದ ಸಿಬ್ಬಂದಿ ಒಬ್ಬರನ್ನು  ಹಿಂದಿಯಲ್ಲಿ ಮಾತನಾಡಿಸಿದೆವು.  ಏರ್‍ ಪೋರ್ಟ್ ವರ್ಷವಿಡೀ ತೆರೆದಿರುತ್ತದೆಯೆಂದೂ, ಹವೆ ಚೆನ್ನಾಗಿರುವ ಸಮಯ ನೋಡಿ, ಪ್ರವಾಸಿಗರನ್ನು ಹೊತ್ತ  ಪುಟಾಣಿ ವಿಮಾನಗಳು ಬರುತ್ತವೆಯೆಂದೂ ತಿಳಿಸಿದ. ವಿದೇಶಿ ಪ್ರಯಾಸಿಗರು ಆಗಾಗ್ಗೆ ಬರುತ್ತಾರೆ ಅಂದ.  ಇಲ್ಲಿ  ಭಾರತದ ವಿಮಾನ ನಿಲ್ದಾಣಗಳ ಆಸುಪಾಸಿನಲ್ಲಿರುವಂತೆ  ಗಡಿಬಿಡಿ, ಗದ್ದಲ ಇಲ್ಲ .   ಚೆಕ್ ಮಾಡುವ    ಸಿಬ್ಬಂದಿಗಳಾಗಲಿ, ಸ್ಕ್ಯಾನ್ ಮಾಡುವ ಯಂತ್ರಗಳಾಗಲಿ  ಕಾಣಿಸಲಿಲ್ಲ  . ಇನ್ನು ಸಾಲುಗಟ್ಟಿದ ಟ್ಯಾಕ್ಸಿಗಳು, ಜನರ ಓಡಾಟ ಇಲ್ಲವೇ ಇಲ್ಲ.

ರಸ್ತೆಯಲ್ಲಿ ಇದ್ದ ಹತ್ತಾರು ಅಂಗಡಿಗಳ ಹೆಸರುಗಳು ವಿದೇಶಿ ಪ್ರವಾಸಿಗರ ಆಕರ್ಷಣೆಗಾಗಿ ಎಂದು ಸ್ಪಷ್ಟವಾಯಿತು.  ನಮ್ಮ ಮನೆಗಳ ಕಾರ್ ಶೆಡ್ ನಷ್ಟು ದೊಡ್ಡದಿರಬಹುದಾದ   ಅಂಗಡಿ, ಹೋಟೆಲ್ ಗಳಿಗೂ  ಜರ್ಮನ್ ಬೇಕರಿ, ಇಟಾಲಿಯನ್ ರೆಸ್ಟೋರೆಂಟ್, ಚೈನೀಸ್  ಫುಡ್, ಮಾರ್ಕೊಪೊಲೋ ಹೋಟೆಲ್, ಮೊನಾಲಿಸಾ ಇತ್ಯಾದಿ ಅಂತಾರಾಷ್ಟ್ರೀಯ  ಖ್ಯಾತಿಯ ನಾಮಧೇಯಗಳು! ಹತ್ತು ನಿಮಿಷ ನಡೆದಾಗ ಜೋಮ್ ಸಮ್ ನಗರ ಪ್ರದಕ್ಷಿಣೆ  ಆಗಿಯೇ ಹೋಯ್ತು!  ಸೂರ್ಯಾಸ್ತವಾಗುತ್ತಿದ್ದಂತೆ, ಬಾನಿನಲ್ಲಿ ರಂಗೇರುತ್ತಿದ್ದ ಹಿಮಶಿಖರಗಳ ಚಿತ್ತಾರ ಮೂಡಿತು .  ಒಟ್ಟಿನಲ್ಲಿ,  ಶಾಂತತೆಯೇ ಮೈತಳೆದಂತಿದ್ದ  ಜೋಮ್ ಸಮ್  ಪಟ್ಟಣವು,  ಹಿಮಾಲಯ  ಎಂಬ ಅಮ್ಮನ ಮಡಿಲಿನಲ್ಲಿ ಬೆಚ್ಚನೆ ಹೊದ್ದು ಮಲಗಿ , ಈಗ ತಾನೇ ಕಣ್ಣು ಬಿಡುತ್ತಿರುವ ಪುಟ್ಟ ಮಗುವಿನಂತೆ  ಮುದ್ದಾಗಿ ಕಾಣಿಸಿತು.

ಸಂಜೆಯಾಗುತ್ತಿದ್ದಂತೆ ಚಳಿ ಹೆಚ್ಚಾಗತೊಡಗಿತು .  ‘ ಗೆಸ್ಟ್ ಹೌಸ್ ‘ ಗೆ ಬಂದೆವು. ವಿದ್ಯುತ್ ಆಗಾಗ್ಗೆ ಕೈಕೊಡುತಿತ್ತು. ಜಂಗ ಮತ್ತು ಮನೋಹರ ರೋಟಿ ತಯಾರಿಸುತ್ತಿದ್ದರು.  ತಂಡದವರೆಲ್ಲಾ, ಉಣ್ಣೆಯ ಬಟ್ಟೆಗಳನ್ನು ಧರಿಸಿ, ಹೀಟರ್ ನ ಅಕ್ಕಪಕ್ಕ ಕುಳಿತು ಹರಟೆ ಹೊಡೆದೆವು.  ಊಟ ಸಿದ್ದವಾಯಿತು.  ಅನ್ನ, ದಾಲ್, ರೋಟಿ ಬಿಸಿಬಿಸಿಯಾಗಿ ಮಾಡಿ ಬಡಿಸಿದ್ದರು. ಮೊಸರು ಸಿಹಿಯಾಗಿತ್ತು. ನಮಗೆ ‘ದಹೀ’ ಬೇಕಿತ್ತು, ‘ಲಸ್ಸಿ’ ಅಲ್ಲ, ಸಕ್ಕರೆ ಹಾಕಬಾರದಿತ್ತು ಎಂದೆವು.  ಜಂಗ “ ಇಧರ್  ಪ್ಯಾಕೆಟ್ ಕಾ ದಹೀ ಐಸಾ ಹೀ ಹೈ, ಮೇ ಚೀನೀ ನಹೀ ಡಾಲಾ” ಎಂದು ಪ್ಯಾಕೆಟ್ ಸಮೇತವಾಗಿ ವಿವರಿಸಿದ. ಅಂತೂ, ಅನ್ನಕ್ಕೆ ಆ ಮೊಸರನ್ನು ಆಗಲೇ ಕಲೆಸಿಕೊಂಡಾಗಿತ್ತು.   ಇನ್ನೇನು ಮಾಡುವುದು, ಆಹಾರವನ್ನು ಎಸೆಯಬಾರದು ಎನ್ನುತ್ತಾ, ಕಷ್ಟಪಟ್ಟು ಅನ್ನ- ಲಸ್ಸಿ ಸವಿದೆವು! ಇಂತಹ ದುರ್ಗಮವಾದ ಸ್ಥಳದಲ್ಲಿ ಜನಜೀವನ ಎಷ್ಟು ಕಷ್ಟ, ವಿರಮಿಸಲೊಂದು ಬೆಚ್ಚನೆಯ ಕೊಠಡಿ, ಹೊಟ್ಟೆಗೊಂದಿಷ್ಟು ಊಟ ಸಿಕ್ಕಿದುದು ನಮ್ಮ ಪುಣ್ಯ ಅಂತ ಆಗಲೇ ಅರ್ಥವಾಗಿತ್ತು. ಡಬಲ್ ರೂಮಿನಲ್ಲಿ ಇನ್ನೊಂದು ಬೆಡ್ ಹಾಕಿ, ಭಾರತಿ, ಮಾಲಾ ಮೋಹನ್ ಮತ್ತು ನಾನು ಮಲಗಿದೆವು. ಹೊದೆಯಲು ದಪ್ಪನೆಯ ರಜಾಯಿ ಕೊಟ್ಟಿದ್ದರು. ಹೊದ್ದು ಮಲಗಿದ ಎಲ್ಲರಿಗೂ  ಸುಖನಿದ್ದೆ.

 

ಹಿಮಗಿರಿಯ ಒಡಲು..ಮುಕ್ತಿನಾಥದ ಮಡಿಲು ….ಭಾಗ 4:  http://surahonne.com/?p=13860

– ಹೇಮಮಾಲಾ.ಬಿ                                                                                                                                                                (ಮುಂದುವರಿಯುವುದು)

 

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: