ಕಿಟಕಿ ಬದಿಯ ಸೀಟಿನ ಮ್ಯಾಜಿಕ್

Spread the love
Share Button


ಕಿಟಕಿ ಬದಿಯ ಸೀಟು ಅಂದ್ರೆ ಯಾರಿಗೆ ಇಷ್ಟವಾಗುವುದಿಲ್ಲ. ಸಣ್ಣ ಮಕ್ಕಳಿಂದ ಹಿಡಿದು ವೃದ್ಧರ ವರೆಗೂ ಕಿಟಕಿ  ಬದಿಯ ಸೀಟಿನ ಮೇಲೆ ಏನೋ  ಆಕರ್ಷಣೆ .  ಮಕ್ಕಳು ಈ ಸೀಟಿಗೆ ಜಗಳವಾಡಿದರೆ, ದೊಡ್ಡವರು “ನನಗೆ ಅಲ್ಲೇ ಬೇಕು ಅಂತೇನಿಲ್ಲಪ್ಪ, ಎಲ್ಲಾದ್ರೂ ಸರಿ” ಎಂದರೂ ಕಣ್ಣುಗಳು ಮಾತ್ರ ಅಲ್ಲೇ ನೆಟ್ಟಿರುತ್ತವೆ. ಇನ್ನು ವಾಕರಿಕೆ  ಮಾಡಿಕೊಳ್ಳುವವರಿಗೆ ಇದು ಹಕ್ಕಿನ ಸ್ಥಳ.  “ನಂಗೆ ಒಮಿಟ್ ಬಂದಂತೆ ಆಗುತ್ತಿದೆ” ಎಂದರೆ ಸಾಕು, “ಸದ್ಯ, ಮೈಗೆ ಮಾಡದಿದ್ದರೆ ಸಾಕು”  ಎಂದುಕೊಂಡು ಕೂಡಲೇ ಕೂತವರು ಜಾಗ ಬಿಟ್ಟು ಕೊಡುತ್ತಾರೆ.

ವೃದ್ಧರಿಗೆ ಗಮ್ಯ ತಲುಪುವವವರೆಗೆ  ನಿದ್ದೆ ಮಾಡುವ ತಾತ್ಕಾಲಿಕ ಜಾಗವಾದರೆ, ಪ್ರೇಮಿಗಳಿಗೆ ಮೊಬೈಲ್ ನಲ್ಲಿ ಪಿಸುಗುಟ್ಟುತ್ತಾ ಮಾತಾಡಲು ಪ್ರಶಸ್ಥವಾದ ಸ್ಥಳ.  ಮೊಬೈಲ್ ನಲ್ಲಿ ಮೆಲ್ಲಗೆ ಮಾತಾಡುವುದು ಒಂದು ವಿದ್ಯೆಯೇ ಸರಿ.  ಬಸ್ಸುಗಳ ಹಾರನ್ ಮಧ್ಯೆ, ಅಷ್ಟು ಮೆಲ್ಲಗೆ ಮಾತನಾಡಿದರೆ ಹೇಗೆ ಕೇಳಿಸುತ್ತದೆ ಎಂದು ಆಶ್ಚರ್ಯವಾಗುತ್ತದೆ. ಒಮ್ಮೆ ಏಕಲವ್ಯನಂತೆ, ನಾನೂ ಈ ವಿದ್ಯೆಯನ್ನು ಕಲಿಯಲೇಬೇಕು ಎಂದು ನಿರ್ಧರಿಸಿ  ಅಮ್ಮನಿಗೆ ಫೋನ್ ಮಾಡಿದೆ. ಇಯರ್ ಫೋನ್ ಹಾಕಿ ಸಣ್ಣಗೆ  ಮಾತಾಡಿದಾಗ  “ಅದೆಂತ ಹೇಳ್ತಿದ್ದೀಯ  ಸರಿಯಾಗಿ ಹೇಳು, ಮಾತು ಮಣಾಂತ ಮಂತ್ರೋಪದೇಶ ಮಾಡಬೇಡ “ ಎಂದು ಅಮ್ಮ  ಬೈಯಬೇಕೆ? ಅವತ್ತೇ   ಕಿಟಕಿಯ ಬದಿ ಪಿಸುಗುಟ್ಟುತ್ತಾ ಮಾತಾಡುವ ವಿದ್ಯೆಯ ಕಲಿಕೆಗೆ ತಿಲಾಂಜಲಿ ಇಟ್ಟೆ.

ನಂಗೂ ಕಿಟಕಿ ಬದಿಯ ಸೀಟು ಎಂದರೆ ತುಂಬಾ ಪ್ರೀತಿ. ಕಿಟಕಿಯ ಹೊರಗೆ ಕಾಣುವ ದೃಶ್ಯಗಳನ್ನು ನೋಡುತ್ತಾ ಕುಳಿತರೆ ಪಕ್ಕದಲ್ಲಿ ಕುಳಿತವರೊಡನೆ  ಮಾತಿಗಿಳಿಯಲೂ ಬೇಸರ. ಹಾಗೆಂದು ಮುಖಕ್ಕೆ ಹೊಡೆದಂತೆ ಹೇಳಲು ಮುಜುಗರವಾಗುತ್ತದೆ. ಅವರ ಮಾತನ್ನು ಕೇಳಿಸಿಕೊಳ್ಳುವಂತೆ ನಟಿಸುತ್ತಾ, ನಕ್ಕಾಗ ನಾನೂ  ಅರ್ಥವಾದವರಂತೆ ನಗುತ್ತೇನೆ (ಮರು ಪ್ರಶ್ನೆ ಹಾಕಿದರೆ ದೇವರೇ ಗತಿ!).  ಗಮ್ಯವೆಂದೂ ತಲುಪದಿರಲಿ, ಪ್ರಯಾಣ ಹೀಗೆ ನಿರಂತರವಾಗಿ ಸಾಗುತ್ತಿರಲಿ ಎಂದೆನಿಸುತ್ತದೆ.  ಇದರೊಂದಿಗೆ ಮಧುರ ಗೀತೆಗಳನ್ನೂ ಕೇಳುವಂತಿದ್ದರೆ ಊಟಕ್ಕೆ ಉಪ್ಪಿನಕಾಯಿ ಇದ್ದಷ್ಟೇ ಖುಷಿ. ಕಣ್ಣಲ್ಲಿ ದೃಶ್ಯವನ್ನು ತುಂಬಿಕೊಳ್ಳುತ್ತಾ, ಬಾಯಲ್ಲಿ ಹಾಡನ್ನು ಗುನುಗುತ್ತಾ, ಪದಗಳ ಭಾವಾರ್ಥಗಳನ್ನು ಅರಿಯುತ್ತಾ ಹಾಡನ್ನು ಕೇಳುತ್ತಿದ್ದರೆ ಉಂಟಾಗುವ ಅನುಭೂತಿ   ಆಹಾ,  ವರ್ಣಿಸಲು ಅಸಾಧ್ಯ.  ಕಣ್ಣುಗಳು, ಕಿವಿಗಳು ಕೆಲಸ ಮಾಡುತ್ತಿದ್ದರೆ   ಕೈ,ಕಾಲು  ಸುಮ್ಮನಿರಲು ಕೇಳಬೇಕಲ್ಲ?  ಹಾಡಿನ ತಾಳಕ್ಕೆ  ತಕ್ಕಂತೆ ಅವುಗಳೂ ನರ್ತಿಸಲಾರಂಭಿಸುತ್ತವೆ. ವಾಹನ ಖಾಸಗಿಯದ್ದಾದರೆ ಪರವಾಗಿಲ್ಲ.  ಸಾರ್ವಜನಿಕ ವಾಹನವಾದರೆ ಯಾರೂ ಗಮನಿಸದಂತೆ ನೋಡಿಕೊಳ್ಳಬೇಕು. “ಇವಳಿಗೆ ಹುಚ್ಚೇನು?” ಅಂದುಕೊಳ್ಳಬಾರದಲ್ಲ.

ದೂರ ಪ್ರಯಾಣವಾದರೆ ಮತ್ತೂ ಖುಷಿ. ಹೊರ ದೃಶ್ಯಗಳನ್ನು ನೋಡುತ್ತಾ ಇದ್ದಂತೆ ಮನದಲ್ಲಿ ಅದಕ್ಕೆ ತಕ್ಕುದಾದ ಅಸ್ಪಷ್ಟ  ಕಥೆಗಳೂ ಸೃಷ್ಟಿಯಾಗುತ್ತ ಇರುತ್ತದೆ.  ಸಣ್ಣ, ಸಣ್ಣ ಹಂಚಿನ ಮನೆಗಳನ್ನು ಕಂಡಾಗಲೆಲ್ಲಾ, ” ಆ ಮನೆಯ ಸದಸ್ಯರು ನೆಮ್ಮದಿಯಾಗಿರಬಹುದೇ? ಇಲ್ಲವೇ? ನಾನೂ ಆ ಮನೆಯವಳಾಗುತ್ತಿದ್ದರೆ ಹೇಗೆ ಬದುಕುತ್ತಿದ್ದೆ” ಅಂತಲೋ, ಕೊಡದಲ್ಲಿ  ಪುಟ್ಟ ಮಕ್ಕಳು ನೀರು ಹೊತ್ತು ಹೋಗುತ್ತಿರುವುದನ್ನು ಕಂಡಾಗ  “ಛೆ ಪಾಪ, ಎಷ್ಟು ಕಷ್ಟ ಪಡುತ್ತಾರೆ, ಆ ಮಕ್ಕಳ ಜಾಗದಲ್ಲಿ ನಾನಿರುತ್ತಿದ್ದರೆ ಹೇಗಿರುತ್ತಿತ್ತು ” ಅಂತಲೋ, ದೊಡ್ಡ ಅರಮನೆಯಂತಾ ಮನೆ ಕಂಡಾಗ ನಾನು ಈ ಮನೆಯ ಒಡತಿಯಾಗಿದ್ದರೆ ಏನು ಮಾಡುತ್ತಿರುತ್ತಿದ್ದೆ”  ಹೀಗೆ ಏನೇನೋ   ಯೋಚನೆಗಳು ಹರಿಯತೊಡಗುತ್ತವೆ.  ಒಟ್ಟಿನಲ್ಲಿ ಕಿಟಕಿ  ಪಕ್ಕದ ಸೀಟು ಹೊಸ ಹೊಸ  ಯೋಚನೆಗಳಿಗೆ ಎಡೆ ಮಾಡಿಕೊಡುತ್ತದೆ ಎಂಬುದರಲ್ಲಿ ಅನುಮಾನವೇ ಇಲ್ಲ.  ಬೇಕಾದರೆ ನೀವೂ ಪ್ರಯತ್ನಿಸಿ ನೋಡಿ!
.

– ಸೌಜನ್ಯ ಕಡಪ್ಪು,  ಬೆಳ್ತಂಗಡಿ

1 Response

  1. Shruthi Sharma says:

    ನಿಜ. ಕಿಟಕಿಯ ಪಕ್ಕದ ಸೀಟು ದಾರಿಯುದ್ದಕ್ಕೂ ಒಂದು ಚೆಂದದ ಪ್ರಪಂಚವನ್ನೇ ಬಿಚ್ಚುತ್ತಾ ಹೋಗುತ್ತದೆ. ಲೇಖನ ಚೆನ್ನಾಗಿದೆ. 🙂

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: