ಆನ್ ಲೈನ್ ಗ್ರಾಹಕರು

Spread the love
Share Button

ಮನೆಯ ಗಂಟೆ ಟ್ರಿಂಗ್ ಎಂದು ಸದ್ದು ಮಾಡಿತು. ಓಡೋಡಿ ಬಾಗಿಲು ತೆರೆದ ಪತಿರಾಯರ ಕೈಗೆ ದೊಡ್ಡ ಕಟ್ಟವೊಂದು ದೊರೆತಿತ್ತು. “ಏ ಗಿಫ್ಟ್ ಫ್ರಮ್ ಮಿ ಟು ಮೈ ಸೆಲ್ಫ್ (ನನ್ನಿಂದ ನನಗೇ ಬಂದಿರುವ ಉಡುಗೊರೆ)” ಎಂದು ಕುಣಿಯುತ್ತಾ ಒಳ ಬರುತಿದ್ದ ಇವರನ್ನು ನೋಡಿ ಮನದೊಳಗೇ ನಗತೊಡಗಿದೆ ನಾನು. ಜೊತೆಗೆ ಆನ್ ಲೈನ್ ಖರೀದಿ ಮಾಡುವ ವಸ್ತುಗಳು ಅದು ಹೇಗೆ ಉಡುಗೊರೆಯಾಗಲು ಸಾಧ್ಯ ಎಂಬ ಕುಚೋದ್ಯವೊಂದು ತಲೆಯೊಳಗೆ ಹೊಕ್ಕು ಕುಂತಿತು. ನಾವೇ ಹುಡುಕಿ, ನಾವೇ ಪಾವತಿಸಿ, ನಮ್ಮದೇ ಹೆಸರಿಗೆ ಬರಮಾಡಿಸಿ ಕೊಳ್ಳುವ ಈ ಆನ್ ಲೈನ್ ಸಾಮಗ್ರಿಗಳು ಉಡುಗೊರೆಗಳು ಹೌದೋ ಅಲ್ಲವೋ ಗೊತ್ತಿಲ್ಲ. ಆದರೆ ಈ ಆನ್ ಲೈನ್ ವಹಿವಾಟುಗಳ ಸರಳತೆಯು ಮಾತ್ರ ನಿಜವಾಗಿಯೂ ಒಂದು ಉಡುಗೊರೆಯೇ ಹೌದು.

ಅಂತರ್ಜಾಲದ ಮುಖಾಂತರ ನಡೆಸಲ್ಪಡುವ ವ್ಯಾಪಾರ ವ್ಯವಹಾರಗಳು ಇಂದು ಜನಜನಿತವಾಗಿ ಬಿಟ್ಟಿದೆ. ಸಣ್ಣ ಪುಟ್ಟ ಸಾಮಗ್ರಿಗಳಿಂದ ಹಿಡಿದು ಬೆಲೆಬಾಳುವ ಸಾಮಾನುಗಳವರೆಗೆ ಅದೇನೇ ಇರಲಿ, ಗಿರಾಕಿಗಳ ಇಚ್ಚಾನುಸಾರವಾಗಿ ಒದಗಿಸುವ ಸಾಮರ್ಥ್ಯವನ್ನು ಹೊಂದಿರುತ್ತವೆ ಈ “ಈ-ಕಾಮರ್ಸ್” ವೆಬ್ಸೈಟುಗಳು. ತಿಂಡಿ-ತಿನಿಸುಗಳು, ಬೇಳೆ-ಕಾಳುಗಳು, ತರಕಾರಿಗಳು, ಬಟ್ಟೆಬರೆಗಳು, ಇಲೆಕ್ಟ್ರಾನಿಕ್ ಸಾಮಾನುಗಳು, ಮೇಜು ಕುರ್ಚಿಗಳಂತಹ ಮನೆ ಸಾಮಗ್ರಿಗಳು, ಎಲ್ಲವೂ ಇಲ್ಲಿ ಲಭ್ಯ. ನಮ್ಮಿಷ್ಟದ ವಸ್ತುಗಳನ್ನು, ಅತಿ ಕಡಿಮೆ ದರಗಳಲ್ಲಿ, ನಿಯಮಿತ ಸಮಯದೊಳಗೆ ಮನೆಯ ಬಾಗಿಲಿಗೆ ತಲುಪಿಸುವುದೇ ಈ ಆನ್ ಲೈನ್ ಸೈಟುಗಳ ಕೆಲಸ. ಚಿಲ್ಲರೆಗಳನ್ನು ಹುಡುಕಿ ನಾವು ಇವರುಗಳಿಗಾಗಿ ಕಾಯಬೇಕೆಂದಿಲ್ಲ. ಪಾವತಿಯನ್ನೂ ಆನ್ ಲೈನ್ ಮುಖಾಂತರ ಮಾಡಬಹುದು. ಇದೆಲ್ಲವನ್ನು ಮಾಡಲು ಸ್ವಲ್ಪಮಟ್ಟಿನ ಕಂಪ್ಯೂಟರು ಅಥವಾ ಮೊಬೈಲಿನ ಜ್ಞಾನವಷ್ಟೇ ಸಾಕು. ಇಷ್ಟವಾಗಿಲ್ಲದುದರಲ್ಲಿ ವಸ್ತುಗಳನ್ನು ಹಿಂತಿರುಗಿಸುವ ವ್ಯವಸ್ಥೆಯೂ ಇವರ ಬಳಿ ಇದೆ. ಸರಳ ವಿಧಾನಗಳನ್ನು ಉಪಯೋಗಿಸಿಕೊಳ್ಳುವ ಈ ವೆಬ್ಸೈಟುಗಳು ತಮ್ಮ ಗಿರಾಕಿಗಳ ಜೀವನವನ್ನು ಸುಗಮವಾಗಿಸುವುದರಲ್ಲಿ ಯಶಸ್ವಿಯಾಗಿವೆ. ಹಾಗಾಗಿಯೇ ಇಂದಿನ ಬಿಡುವಿಲ್ಲದ ಜೀವನ ಶೈಲಿಯಲ್ಲಿ , ಕುಂತಲ್ಲಿಂದಲೇ ಕೊಳ್ಳಾಟವನ್ನು ಮಾಡಬಹುದಾದ ಈ ವ್ಯವಸ್ಥೆಯು ಒಂದು ವರವಾಗಿ ಬಿಟ್ಟಿದೆ ಎಂದರೆ ಅತಿಶಯೋಕ್ತಿಯಾಗಿರದು.

ಬೆಂಗಳೂರಿನಂತಹ ನಗರಗಳಲ್ಲಿ “ಟ್ರಾಫಿಕ್” ಎಂಬ ಪೆಡಂಭೂತದಿಂದ ತಪ್ಪಿಸಿಕೊಳ್ಳಲು ಇದೊಂದು ಮಾರ್ಗವೂ ಹೌದು. ಶಾಪಿಂಗಿನ ಹೆಸರಿನಲ್ಲಿ ಸುತ್ತಾಡುವ ಬಯಕೆ ಹಲವರಲ್ಲಿದ್ದರೂ, ಟ್ರಾಫಿಕ್ ಮಹಾರಾಜರು ಅದನ್ನು ಅನುಮತಿಸುವುದಿಲ್ಲ. ಮತ್ತುಳಿದ ಮಾರ್ಗವೇ ಆನ್ ಲೈನ್ ಕೊಳ್ಳುವಿಕೆ. ಇನ್ನು ಬ್ರಹ್ಮಚಾರಿಗಳ ಪಾಡು ಕೇಳುವುದೇ ಬೇಡ. ಗೆಳೆಯನೊಬ್ಬನ ದಿನಚರಿ ಹೀಗಿದೆ ಕೇಳಿ. ಆತನು ಕೆಲಸವನ್ನು ಮುಗಿಸಿ ಮನೆ ತಲುಪುವಷ್ಟರಲ್ಲಿ ಗಂಟೆ ಹತ್ತು ದಾಟಿರುತ್ತದೆ. ಅಡುಗೆಯ ಮನೆಗೆ ಕಾಲಿಡುವವನಲ್ಲ ಆ ಭೂಪ. ಹೋಟೆಲುಗಳನ್ನು ಹುಡುಕುವ ಹೊತ್ತೂ ಅದಲ್ಲ. ಇನ್ನು ಮಿಕ್ಕಿದ್ದು ಒಂದೇ ದಾರಿ. ಅಂತಹ ರಾತ್ರಿಗಳಲ್ಲಿ ಈತನ ಪಾಲಿಗೆ ಆನ್ ಲೈನ್ ವಿತರಣೆಕಾರರೇ ದೇವರುಗಳು. ಹಗಲು-ರಾತ್ರಿ ಎಂಬ ಭೇದವಿಲ್ಲದೆ ಆಹಾರವನ್ನು ತಲುಪಿಸುವವರ ದೊಡ್ಡ ಗುಂಪೊಂದಿದೆ ಇಂದು ನಗರಗಳಲ್ಲಿ. ಇಂತಹ ಆನ್ ಲೈನ್ ವ್ಯವಹಾರಗಳು ಹುಟ್ಟುಹಾಕಿರುವ ಉದ್ಯೋಗಾವಕಾಶಗಳೇನು ಕಡಿಮೆಯಲ್ಲ. ಆನ್ ಲೈನ್ ವಿತರಣೆಯು ಅದೆಷ್ಟೋ ಜನರಿಗೆ ಇಂದು ಜೀವನಮಾರ್ಗವಾಗಿದೆ.

ಇನ್ನು ಆನ್ ಲೈನ್ ಖರೀದಿಗಳಲ್ಲಿ ಅಚಾತುರ್ಯಗಳು ಸಂಭವಿಸುವುದೇ ಇಲ್ಲವೆಂದೇನಿಲ್ಲ. ಅಂತಹದ್ದೂ ಒಂದಿಷ್ಟು ಅನುಭವಗಳು ಎಲ್ಲರಿಗೂ ಆಗಿರುತ್ತವೆ. ಅದೊಂದು ದಿನ ಗೆಳೆತಿಯೊಬ್ಬಳು ಅದ್ಯಾವುದೋ ತಿಳಿಯದ ವೆಬ್ಸೈಟಿನಲ್ಲಿ ಒಂದು ಅಂಗಿಯನ್ನು ಖರೀದಿಸಿದಳು. ಇನ್ನು ಉಳಿದ ವೆಬ್ಸೈಟುಗಳಲ್ಲಿ ಅದರ ಬೆಲೆ ಸಾವಿರ ರೂಪಾಯಿ ಎಂದೂ, ತನಗಿದು ಬರೀ ಮುನ್ನೂರು ರೂಪಾಯಿಗಳಿಗೆ ದೊರೆಯಿತು ಎಂದೂ ಹಿಗ್ಗುತಿದ್ದಳು. ಒಂದು ವಾರ ಕಳೆಯುತ್ತಲೇ ದೊರೆಯಿತು ಆ ಆನ್ ಲೈನ್ ಉಡುಗೊರೆ. ಉಡುಗೊರೆಯನ್ನು ಬಿಚ್ಚಿನೋಡುತ್ತಲೇ ಕಣ್ಣೀರಿಡತೊಡಗಿದಳು ಗೆಳೆತಿ. ಅಂಗಿಯ ಬದಲಿಗೆ ದೊರೆತಿತ್ತು ಒಂದು ಚಿಕ್ಕ ಚೌಕದ ಬಟ್ಟೆ ತುಂಡು. ಉರಿದುಕೊಂಡು ಆ ವ್ಯಾಪಾರಿಯನ್ನು ಸಂಪರ್ಕಿಸಲು ನಾವು ಮಾಡಿದ ಪ್ರಯತ್ನಗಳೆಲ್ಲವೂ ವ್ಯರ್ಥವೇ ಸರಿ. ಅಷ್ಟೆಯೇಕೆ, ನನ್ನ ಪಾಲಿಗೂ ಬಂದಿವೆ ಒಂದಿಷ್ಟು ಕಹಿ ಅನುಭವಗಳು. ಪಕ್ಕದಲ್ಲೇ ಇರುವ ತರಕಾರಿ ಅಂಗಡಿಗೆ ಹೋಗಿ “ತೊಂಡೆಕಾಯಿ ಬೆಳೆದಿದೆ, ಮೆಣಸು ಬಾಡಿದೆ” ಎಂದೆಲ್ಲಾ ಗೊಣಗುತ್ತಾ ಕೊಂಡುಕೊಂಡರಷ್ಟೇ ನನಗೆ ನೆಮ್ಮದಿ. ಆದರೆ ಅದೊಂದು ದಿನ ಕೆಂಪು ಹರಿವೆ ತಿನ್ನುವ ಮನಸಾಗಿತ್ತು. “ಅದೆಲ್ಲಾ ಸಿಗಲ್ಲ ಮೇಡಂ” ಎಂದು ಹೇಳಿದ ಅಂಗಡಿಯವನ ಮಾತು ನನಗೆ ಒಂದಿಷ್ಟೂ ಹಿತವೆನಿಸಲಿಲ್ಲ. ಹುಡುಕಿದೆ ಆನ್ ಲೈನ್. ಸಿಕ್ಕೇ ಬಿಟ್ಟಿತು. ಆದರೆ ಬರೀ ಒಂದು ತರಕಾರಿಯನ್ನಷ್ಟೇ ಹೇಗೆ ಕೊಳ್ಳಲಿ ಎಂದನಿಸಿ ಇನ್ನೂ ಒಂದಷ್ಟನ್ನು ಖರೀದಿಸದೆ. ಬಂತು ನನ್ನ ಪ್ರೀತಿಯ ಉಡುಗೊರೆ. ಹರಿವೆಯ ಜೊತೆಗೆ ಬಂದಿತ್ತು ಬೆಳೆದ ತೊಂಡೆಕಾಯಿ ಹಾಗು ಕೊಳೆತ ಸೌತೆಕಾಯಿ. “ಕೆಂಪು ಹರಿವೆಯ ಜೊತೆಗೆ ಕೆಂಪು ತೊಂಡೆಯನ್ನೂ ಓರ್ಡರು ಮಾಡಿದ್ಯಾ?” ಎಂದು ಕಾಲೆಳೆಯತೊಡಗಿದರು ಪತಿರಾಯರು. ತಲೆಗೆ ಕೈ ಹೊತ್ತು ಕೂರುವ ಸರದಿ ನನ್ನದಾಗಿತ್ತು.

ಒಂದಷ್ಟು ಬಾರಿ ಸುಖವನ್ನು ಒದಗಿಸಿಕೊಂಡೂ , ಇನ್ನೊಂದಷ್ಟು ಬಾರಿ ಮೂರ್ಖನನ್ನಾಗಿಸಿಕೊಂಡೂ, ಆನ್ ಲೈನ್ ವ್ಯವಹಾರಗಳು ಇಂದು ನಗರವಾಸಿಗಳ ಜೀವನದ ಒಂದು ಅವಿಭಾಜ್ಯ ಅಂಗವಾಗಿಬಿಟ್ಟಿದೆ. ಇದಕ್ಕೆ ಅಪಾರ್ಟುಮೆಂಟುಗಳಲ್ಲಿ ಬಂದು ಬೀಳುವ ಕಟ್ಟಗಳೇ ಸಾಕ್ಷಿ. ಸಂಜೆಹೊತ್ತಲ್ಲಿ ದಿನವಿಡೀ ಬಂದು ಬಿದ್ದಂತಹ ಕಟ್ಟಗಳನ್ನು ಹಂಚುವ ನಮ್ಮ ಕಾವಲುಗಾರ ವಸಂತನನ್ನು ನೋಡುತ್ತಿದ್ದರೆ ಒಂದಷ್ಟು ವರುಷಗಳ ಹಿಂದೆ ಹೆಸರು ಕೂಗಿ, ಕಾಗದಗಳನ್ನು ಹಂಚುತ್ತಿದ್ದ ಹಾಸ್ಟೆಲ್ ವಾರ್ಡನುಗಳು ನೆನಪಿಗೆ ಬರುತ್ತಾರೆ. ಕಾಲ ಬದಲಾದ ಹಾಗೆ ಕಾಗದಗಳ ಜಾಗಕ್ಕೆ ಕಟ್ಟಗಳು ಬಂದು ಬಿದ್ದಿವೆ. ಇದೀಗ ನಗರಗಳಿಗಷ್ಟೇ ಸೀಮಿತವಾಗಿರುವ ಈ ವ್ಯವಸ್ಥೆಯು ಅತಿಶೀಘ್ರದಲ್ಲೇ ಸಣ್ಣ ಪಟ್ಟಣಗಳಿಗೂ, ಹಳ್ಳಿಗಳಿಗೂ ವ್ಯಾಪಿಸುವುದು ಖಂಡಿತ. ಈ ಸುಲಭ ವ್ಯವಸ್ಥೆಯು ಕೊಂಡುಕೊಳ್ಳುವಿಕೆಯನ್ನು ಸುಗಮವಾಗಿಸುತ್ತಿದ್ದರೂ, ಜೊತೆಗೆ ಮೈಗಳ್ಳತನವನ್ನೂ ಹೆಚ್ಚಿಸುತ್ತಿಲ್ಲವೇ ಎಂದನಿಸುವುದುಂಟು. ಅದೂ ಅಲ್ಲದೆ, “ರೀ , ಇದಕೆಷ್ಟು , ಅದಕೆಷ್ಟು?” ಎಂದು ಅಂಗಡಿಯಾತನೊಂದಿಗೆ ಚೌಕಾಶಿ ಮಾಡುವ ಅವಕಾಶವೂ ಇಲ್ಲಿ ದೊರೆಯಲ್ಲ. ಯಾರಿಗೆ ಗೊತ್ತು, ಮುಂದೊಂದು ದಿನ “ಅಂಗಡಿಯಾತನು” ಎಂಬ ಪರಿಕಲ್ಪನೆಯೇ ಉಳಿದಿರುವುದಿಲ್ಲವೇನೋ.!

— ಪಲ್ಲವಿ ಭಟ್ , ಬೆಂಗಳೂರು

14 Responses

 1. Hema says:

  ನಿಜ.ಆನ್ ಲೈನ್ ಖರೀದಿಯಲ್ಲಿ ಅನುಕೂಲವಿರುವಷ್ಟೇ ಅನಾನುಕೂಲಗಳೂ ಇವೆ. ಚೆಂದದ ನಿರೂಪಣೆ.

 2. Shruthi Sharma says:

  ಸೊಗಸಾದ ನಿರೂಪಣೆ. ಕೊತ್ತಂಬರಿ ಸೊಪ್ಪಿನಿಂದ ಹಿಡಿದು ಫ್ರಿಡ್ಜ್, ಹವಾನಿಯಂತ್ರಕದವರೆಗೆ ಲಭ್ಯವಿರುವ ಆನಲೈನ್ ಮಾರುಕಟ್ಟೆ ದಿನನಿತ್ಯದ ಜೀವನವನ್ನು ಅದೆಷ್ಟೋ ಸರಳಗೊಳಿಸಿದೆ ಎನ್ನಬಹುದು. ನೀವಂದಂತೆ ಕಿರಾಣಿ ಅಂಗಡಿಗಳಿಗಿದು ಅಪಾಯವೂ ಹೌದು.

 3. vb kailankaje says:

  ಆನು ಲೈನು ವ್ಯಾಪಾರಿ ಅಲ್ಲ. ಸೌಕರ್ಯವೂ ಇಲ್ಲಿ ಇಲ್ಲೆ.ಅಂತೂ ಲೇಖನ ಒಳ್ಳೆದಾಯಿದು. ಶುಭವಾಗಲಿ.ಯಜಮಾನರ ಗಿಫ್ಟ್ ಎಂತಾಗಿದ್ದತ್ತು?

 4. varun says:

  ಸರ್ವಂ ಆನ್ ಲ್ಯೆನ್ ಮಯಂ…ಸರಳವಾದ ನಿರೂಪಣೆ

 5. ನವಿರು ಹಾಸ್ಯ ತುಂಬಿದ ಈ ಲಘುಬರಹ ಬರೀ ಲಘುವಾಗಿರದೇ ವಾಸ್ತವಕ್ಕೆ ಕನ್ನಡಿ ಹಿಡಿದಿದೆ. ಅಂಗಡಿಯಿಟ್ಟವರು ತುಸು ಚುರುಕಾಗಿ ವಾಟ್ಸಾಪ್ ಪೂರೈಕೆ ಮಾಡಲೂ ಶುರು ಮಾಡಿದ್ದಾರೆ, ಆನ್ ಲೈನ್ ಭರಾಟೆಯಿಂದಾಗಿ. ನೀವಂದಂತೆ, ಆನ್ ಲೈನ್ ಮೋಸ ಸ್ವಲ್ಪ ಹೆದರಿಕೆ ಹುಟ್ಟಿಸುವಂತಿದ್ದರೂ ಮಾರಾಟಕ್ಕೆ ಕಾನೂನು ಬಿಗಿ ಮಾಡಿದರೆ ನಾವು ನಿರಾಳವಾಗಬಹುದು.

  ನಿಮ್ಮ ಬರವಣಿಗೆ ಶೈಲಿ ಮತ್ತು ಕೆಲವು ಪದಪ್ರಯೋಗಗಳು ತುಂಬ ಇಷ್ಟವಾದವು.

  • Pallavi Bhat says:

   ನಿಜ. ಸಣ್ಣ ಪುಟ್ಟ ವ್ಯಾಪಾರಿಗಳು ಇಂದು ಆನ್ ಲೈನ್ ಬಳಸತೊಡಗಿದ್ದರೆ. ಧನ್ಯವಾದಗಳು 🙂

 6. ವಾಸ್ತವ ಅಂಶ…ಉತ್ತಮ ಅಂಕಣದಲ್ಲಿ ನೈಜ ಘಟನೆಗಳು ಚೆನ್ನಾಗಿ ಮೂಡಿ ಬಂದಿದೆ…

 7. Mamatha says:

  ನಿಜವಾದ ಮಾತು… ಈಗಾಗಲೇ ‌ಸಣ್ಣ ಪಟ್ಟಣಗಳಿಗೂ ಹಬ್ಬಿದೆ…

Leave a Reply

 Click this button or press Ctrl+G to toggle between Kannada and English

Your email address will not be published.

Follow

Get every new post on this blog delivered to your Inbox.

Join other followers: