ಸರ್ ಜಗದೀಶ್ ಚಂದ್ರ ಬೋಸ್ – ಸಸ್ಯಸಂವಾದಿ.

Share Button

ಕವಿಯೊಬ್ಬರು ಹೇಳುತ್ತಾರೆ :

ಚಿಕ್ಕ ತೋಟದ ನಡುವೆ ದ್ವನಿಯೊಂದು ಕೇಳಿತದೋ, ಚಲಿಸುತಿಹ ಪಾದಗತಿ ನಿಲಿಸಿ ನೋಡೆ..,
ಪುಟ್ಟ ಗಿಡವೊಂದು ತೊನೆದಾಡಿ ಕರೆಯಿತದು, ಮಾತಾಡೆ ಕಾತರದಿ ತನ್ನ ಬಳಿ ಬರಲು l
ಕೈ ಚಾಚಿ ನಲುಮೆಯಲಿ ಕೇಳಿದೆನು ಗಿಡದ ಬಳಿ “ಏನಾಗುತಿದೆ ನಿನಗೆ ಈ ವೇಳೆಯಲ್ಲಿ?”
“ಪರಿಶುದ್ಧ ಗಾಳಿಯಲಿ ತಂಪಾದ ಜಲದಲ್ಲಿ, ಮಿಂದು ತೋಯುತಿರುವೆ ದಿನವು ನಾನಿಲ್ಲಿ…” ll
(ಕವನ : ಶಂಕರಿ ಶರ್ಮ. ಪುತ್ತೂರು.)

ಸಸ್ಯಗಳಿಗೂ ಭಾವನೆಗಳಿವೆಯೇ? ಸಸ್ಯಗಳಿಗೆ ಹೊಡೆದರೆ ನೋವಾಗುವುದೇ? ಅವುಗಳೂ ನಮ್ಮಂತೆ ಉಸಿರಾಡುವವೇ? ರಾತ್ರಿ ನಿದ್ದೆ ಮಾಡಿ ಮುಂಜಾನೆ ಎಚ್ಚರವಾಗುವವೇ? ಹೌದೆಂದು, ಅದನ್ನು ವೈಜ್ಞಾನಿಕ ಪ್ರಯೋಗಗಳಿಂದ ಶತಮಾನ ಮೊದಲೇ ಸಾಧಿಸಿ ತೊರಿಸಿದವರು ಭಾರತದ ವಿಜ್ಞಾನಿ ಸರ್ ಜಗದೀಶ್ ಚಂದ್ರ ಬೋಸ್.

1901, ಮೇ 10 ರಂದು ಇಂಗ್ಲೆಂಡಿನ ರೋಯಲ್ ಸೊಸೈಟಿಯಲ್ಲಿ, ಬೋಸ್ ಅವರು ಒಂದು ಸಂಶೋಧನಾ ಲೇಖನವನ್ನು ಪ್ರಸ್ತುತಪಡಿಸುತ್ತಾ ಪ್ರಯೋಗಗಳ ಮೂಲಕ ನಿರ್ಧಿಷ್ಟ ಪರಿಸ್ಥಿತಿಗಳಿಗೆ ಸಸ್ಯಗಳು ತೋರಿಸುವ ಪ್ರತಿಕ್ರಿಯೆಗಳನ್ನು ಸಾದರಪಡಿಸಿದರು. ಕಳೆದ ಶತಮಾನದ ಆದಿಭಾಗದಲ್ಲಿಯೇ ಆಧುನಿಕ ತಂತ್ರಜ್ಞಾನಗಳಿಂದ ವಿನ್ಯಾಸಗೊಳಿಸಿದ ಆ ಉಪಕರಣದ ಹೆಸರು, ‘ಕ್ರೆಸ್ಕೊಗ್ರಾಫ್’. ಬೋಸ್ ಹೇಳುತ್ತಾರೆ, “ನಮ್ಮ ಸುತ್ತಲೂ ಗಿಡ, ಮರ, ಬಳ್ಳಿಗಳು ನಮ್ಮೊಡನೆ ನಿರಂತರವಾಗಿ ಸಂವಹನೆ ಮಾಡುತ್ತವೆ. ಆದರೆ, ನಾವು ಅದನ್ನು ಗಮನಿಸುವುದಿಲ್ಲ.”

ಸರ್ ಜಗದೀಶ್ ಚಂದ್ರ ಬೋಸ್

ಜಗದೀಶರು ಢಾಕಾ ಜಿಲ್ಲೆಯ ಫರೀದ್ಪುರದಲ್ಲಿ 1858 ನವಂಬರ 30 ರಂದು ಜನಿಸಿದರು. ಈಗ ಆ ಜಾಗ ಬಂಗ್ಲಾದೇಶಕ್ಕೆ ಸೇರಿದೆ. ತಂದೆ ಭಗವಾನ್ ಚಂದ್ರ ಬೋಸರು ಬ್ರಿಟಿಷ್ ಸರಕಾರದಲ್ಲಿ, ದೊಡ್ಡ ಅಧಿಕಾರಿಯಾಗಿದ್ದರೂ ಮಗನನ್ನು ಬಂಗ್ಲಾ ಭಾಷೆಯ ಒಂದು ಸಾಮಾನ್ಯ ಶಾಲೆಗೆ ಸೇರಿಸಿದರು. ಶಾಲೆಯಲ್ಲಿ ಜಗದೀಶರ ಬಲಬದಿಯಲ್ಲಿ ತಂದೆಯ ಕಚೇರಿಯ ಜವಾನರ ಮಗ ಮುಸಲ್ಮಾನ ಹುಡುಗ ಮತ್ತು ಎಡಬದಿಯಲ್ಲಿ ಮೀನುಗಾರರೊಬ್ಬರ ಮಗ, ಆಪ್ತ ಗೆಳೆಯರು. ಈ ಮಕ್ಕಳೊಂದಿಗೆ ಆಟವಾಡುತ್ತಾ ಹಳ್ಳ, ತೊರೆ, ಕಾಡು, ಗುಡ್ಡಗಳಲ್ಲಿ ಹಕ್ಕಿಗಳು, ಮೀನು, ಆಮೆ, ಮರ, ಗಿಡಗಳ ಪರಿಸರದಲ್ಲಿ ಅವುಗಳ ಕತೆಗಳನ್ನು ಹಂಚಿಕೊಳ್ಳುತ್ತಾ ದೊಡ್ಡವನಾದ ಜಗದೀಶರಿಗೆ ಪ್ರಕೃತಿಪ್ರೇಮ ಸ್ವಾಭಾವಿಕವಾಗಿಯೇ ಬಂತು. ಅಲ್ಲಿಯೇ ಅವರು ಸಸ್ಯಗಳೊಡನೆ ‘ಮಾತನಾಡಲು’ ಪ್ರಾರಂಭಿಸಿದರು.

ಜಗದೀಶರು ಹೈಸ್ಕೂಲು ವಿದ್ಯಾಭ್ಯಾಸ ಕಲ್ಕತ್ತೆಯಲ್ಲಿ ಮುಗಿಸಿ, ಹೆಚ್ಚಿನ ವ್ಯಾಸಂಗಕ್ಕೆ ಇಂಗ್ಲೆಂಡಿಗೆ ತೆರಳಿದರು (1880). ಐದು ವರ್ಷದ ನಂತರ ಲಂಡನ್ ವಿಶ್ವವಿದ್ಯಾಲಯದಿಂದ ಸಸ್ಯಶಾಸ್ತ್ರ, ಪ್ರಾಣಿಶಾಸ್ತ್ರ ಮತ್ತು ಭೌತಶಾಸ್ತ್ರಗಳಲ್ಲಿ D.Sc. ಪದವಿ ಪಡೆದು ಭಾರತಕ್ಕೆ ಹಿಂದಿರುಗಿದರು.

ಕಲ್ಕತ್ತೆಯ ಪ್ರೆಸಿಡೆನ್ಸಿ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿ ಸೇರಿದ ಮೊದಲ ಭಾರತೀಯ, ಜಗದೀಶ ಚಂದ್ರ ಬೋಸ್. ಬ್ರಿಟಿಷರ ಆಡಳಿತದಲ್ಲಿ ಜನಾಂಗೀಯ ತಾರತಮ್ಯಕ್ಕೆ ಗುರಿಯಾದವರಲ್ಲಿ ಜಗದೀಶರೂ ಒಬ್ಬರು. ಪ್ರಾಧ್ಯಾಕರ ಹುದ್ದೆಯಲ್ಲಿದ್ದ ಬ್ರಿಟಿಷರಿಗೆ ನೀಡುತ್ತಿದ್ದ ವೇತನಕ್ಕಿಂತ ತುಂಬಾ ಕಡಿಮೆ ಪಗಾರ ಪಡೆಯುತ್ತಿದ್ದ ಬೋಸರು ಇದರ ವಿರುದ್ಧ ಧ್ವನಿಯೆತ್ತಿದರು. ವಿಚಾರ ಇಂಗ್ಲೆಂಡಿನಲ್ಲಿ ಆಗಷ್ಟೇ ಭಾರತದ ವೈಸ್ ರಾಯ್ ಹುದ್ದೆಯಿಂದ ಮರಳಿದ್ದ, ಲಾರ್ಡ್ ರಿಪ್ಪನ್ ತಲುಪಿ ಅದನ್ನು ಸರಿಪಡಿಸಲಾಯಿತು. ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿದ್ದರೂ, ಪ್ರಯೋಗಾಲಯಗಳಿಗೆ ಭಾರತೀಯನಾದ ಜಗದೀಶರಿಗೆ ಪ್ರವೇಶ ನಿಷೇಧಿಸಲಾಗಿತ್ತು. ಛಲವಾದಿ ಬೋಸ್ ತಮ್ಮ ಪುಟ್ಟ 24 ಚ.ಅ. ಕೋಣೆಯಲ್ಲೇ ವಿಜ್ಞಾನದ ಪ್ರಯೋಗಗಳನ್ನು ಮತ್ತು ಸಂಶೋಧನೆಗಳನ್ನು ಮಾಡತೊಡಗಿದರು.

ಕಲ್ಕತ್ತೆಯ ಟೌನ್ ಹಾಲ್ ನಲ್ಲಿ ಜೆ.ಸಿ.ಬೋಸರು 1894 ರಲ್ಲಿ ಮಾಡಿ ತೋರಿದ ಪ್ರಯೋಗವೊಂದು ಉಲ್ಲೇಖನೀಯ. ‘ರೇಡಿಯೋ’ ಕಂಡುಹುಡುಕಿದವರಾರು ಎಂದೊಡನೆಯೇ ಸಾಮಾನ್ಯ ಬರುವ ಹೆಸರು, ಮಾರ್ಕೋನಿ. ನಿಜವೇನೆಂದರೆ, ರೇಡಿಯೋ ಎಂಬ ಉಪಕರಣವನ್ನು ಆವಿಷ್ಕರಿಸಿದವರು ಮಾರ್ಕೊನಿಯೇ ಆಗಿರದಿದ್ದರೂ, ‘ರೇಡಿಯೋ ಅಲೆ’ಗಳನ್ನು ಸಂವಹನಕ್ಕಾಗಿ ದೂರದೂರದ ಊರು, ದೇಶಗಳಿಗೆ ಸಂದೇಶಗಳ ಮೂಲಕ ಬಳಸಿದವರು ಮಾರ್ಕೊನಿಯವರೇ. ಆದರೆ, ಕಲ್ಕತ್ತೆಯ ಹಾಲ್ ಒಳಗೆಯೇ ರೇಡಿಯೋ ಅಲೆಗಳ ಮೂಲಕ ಸಂದೇಶಗಳನ್ನು ಕಳುಹಿಸುವುದು ಮತ್ತು ಈ ಸಂದೇಶಗಳನ್ನು ಹಿಡಿದು ಗ್ರಹಿಸುವುದನ್ನು ಜಗತ್ತಿನಲ್ಲೇ ಮೊದಲಬಾರಿಗೆ ಮಾಡಿತೋರಿಸಿದವರು ಭಾರತದ ವಿಜ್ಞಾನಿ ಬೋಸ್ ಅವರು! ‘ಸೆಮಿಕಂಡಕ್ಟರ್’ ಸಾಧನ, ಪಾದರಸ ಲೇಪಿತ ರಿಸೀವರ್ (Coherer) ಉಪಯೋಗಿಸಿ, ಮೊದಲ ರೇಡಿಯೋ ತಯಾರಾದುದು ಬೋಸ್ ಅವರ ಹಸ್ತದಿಂದಲೇ ಅನ್ನುವುದಕ್ಕೆ ಸಾಕ್ಷಿಗಳಿವೆ. ಆದರೇನು? ಈ ಉಪಕರಣದ ಪೇಟೆಂಟ್ ಮಾಡುವ ಗೋಜಿಗೇ ಬೋಸ್ ಅವರು ಹೋಗಲಿಲ್ಲ. ಬದಲಾಗಿ ನಾಲ್ಕು ವರ್ಷಗಳ ಅನಂತರ ಮಾರ್ಕೊನಿಯವರನ್ನು ಲಂಡನ್ ನಲ್ಲಿ ಭೇಟಿಯಾದಾಗ ‘ಕೊಹೆರರ್’ ತಂತ್ರಜ್ಞಾನವನ್ನು ಅವರಿಗೆ ತಿಳಿಸಿ, “ಇನ್ನು ನೀವೇ ಇದನ್ನು ಮುಂದುವರಿಸಿ” ಅಂದ ಮಹಾನುಭಾವ, ಬೋಸ್. ಏನಿದ್ದರೂ, ಬೋಸರ ಮುಖ್ಯ ಆಸಕ್ತಿ ಇದ್ದುದು ‘ಗಿಡ-ಮರ-ಸಸ್ಯ-ತರುಲತೆ’ಗಳ ಮೇಲಲ್ಲವೇ?



ಚಿತ್ರ
: ಬೋಸ್ ತಯಾರಿಸಿದಕ್ರೆಸ್ಕೊ ಗ್ರಾಫ್ ’ (ಆಚಾರ್ಯ ಭವನ ಸಂಗ್ರಹಾಲಯದಿಂದ)

‘ಕ್ರೆಸ್ಕೊಗ್ರಾಫ್’ ಎನ್ನುವ ಉಪಕರಣವನ್ನು ಬೋಸ್ ಅವರೇ ತಯಾರಿಸಿ ಇಷ್ಟ ಪಟ್ಟಿದ್ದು, ಇದರಲ್ಲಿ ಪ್ರಯೋಗಗಳನ್ನು ಅವರು ಇಂಗ್ಲಂಡ್, ಯುರೋಪ್ ಮತ್ತು ಅಮೇರಿಕಾದ್ಯಂತ ಮಾಡಿ ತೋರಿಸಿ, ವಿಜ್ಞಾನಿಗಳು, ಸಾಹಿತಿಗಳು ಮತ್ತು ರಾಜಕೀಯ ಮುಖಂಡರ ಪ್ರಾಮಾಣಿಕ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಗಿಡಗಳಿಗೆ ಚಲನೆ ಇಲ್ಲದಿದ್ದರೂ ಜೀವವಿದೆ, ನೋವುನಲಿವುಗಳು ಅವುಗಳ ನರಗಳಲ್ಲಿವೆ ಎಂದು ತೋರಿಸಲು ಉಪಯೋಗಿಸಿದ ಉಪಕರಣವೇ ‘ಕ್ರೆಸ್ಕೊಗ್ರಾಫ್’. ಒಂದು ಗಿಡಕ್ಕೆ ವಿಷದ (Bromine) ಇಂಜೆಕ್ಷನ್ ಕೊಟ್ಟಾಗ ಗಿಡದ ನರಗಳು ಹೇಗೆ ಒಮ್ಮಿಂದೊಮ್ಮೆಗೇ ಬಸವಳಿಯುತ್ತವೆ, ನರಳುತ್ತವೆ ಮತ್ತು ಸಾಯುತ್ತವೆ ಎಂಬುದನ್ನು ಈಗಿನ MRI ಪರದೆಯಲ್ಲಿ ಕಾಣಿಸುವಷ್ಟೇ ನಿಖರವಾಗಿ, ಬೋಸ್ 1901 ರಲ್ಲಿ ಜಗತ್ತಿಗೇ ತೋರಿಸಿದರು. ಲಂಡನಿನ ರೋಯಲ್ ಸೊಸೈಟಿಯಲ್ಲಿ ಅವರಿಗೆ ಫೆಲೋಶಿಪ್ ನೀಡಿ ಗೌರವಿಸಲಾಯಿತು. ಆಗಿನ ಬ್ರಿಟಿಷ್ ಸರಕಾರ ‘ನೈಟ್ ಹುಡ್’ ಪ್ರಶಸ್ತಿಯನ್ನು ಇಂಗ್ಲೆಂಡಿನ ರಾಣಿಯ ಹಸ್ತ ಕೊಡಿಸಿ, ‘ಸರ್’ ಉಪಾದಿಯಿಂದ ಕರೆದು ಸನ್ಮಾನಿಸಿತು. ಬೋಸ್ ಮಾಡಿದ ಆವಿಷ್ಕಾರಗಳ ಪಟ್ಟಿ ದೊಡ್ಡದಿದೆ. ಬೆಳಕಿನ ದ್ವಿಮುಖ ವಕ್ರೀಭವನ, ‘ವೇವ್ ಗೈಡ್’ ಮತ್ತು ವಿದ್ಯುತ್ಕಾಂತೀಯ ಅಲೆಗಳ ಪ್ರಸರಣ ಮತ್ತು ಗ್ರಹಣಮಾಡುವ ಸಾಧನಗಳು ಉಲ್ಲೇಖನೀಯ.

ಬೋಸ್ ಅವರ ಆತ್ಮೀಯ ಬಳಗವೂ ದೊಡ್ಡದೇ. ವಿಜ್ಞಾನಿಗಳಾದ ಐನ್ ಸ್ಟೈನ್, ಲಾರ್ಡ್ ಕೆಲ್ವಿನ್, ಲಾರ್ಡ್ ರಾಲೀ, ಮಾರ್ಕೋನಿ ಅಲ್ಲದೇ ಭಾರತದ ವೈಸ್ ರಾಯ್ ಆಗಿದ್ದ ಲಾರ್ಡ್ ರಿಪ್ಪನ್ ಅವರ ಜೊತೆ ಬೋಸ್ ನಿರಂತರ ಸಂಪರ್ಕದಲ್ಲಿದ್ದರು. ಹಲವಾರು ಗ್ರಂಥಗಳನ್ನು ಬರೆದ ಬೋಸ್ ಕೆಲವು ವೈಜ್ಞಾನಿಕ ಕತೆಗಳನ್ನೂ ಬರೆದಿರುತ್ತಾರೆ. ಎಲ್ಲಕ್ಕಿಂತ ಮಿಗಿಲಾಗಿ ಅವರ ಆತ್ಮೀಯ ಬಳಗದಲ್ಲಿದ್ದವರು, ಕವಿ ರವೀಂದ್ರನಾಥ ಠಾಗೋರರು. ಬೋಸ್ ಅವರ ವಿಜ್ಞಾನದ ಆಸ್ಥೆಯ ಕುರಿತು ಠಾಗೋರರು ರಚಿಸಿದ ಒಂದು ಕವಿತೆ ಆಗಿನ ಪತ್ರಿಕೆ ‘ಕಲ್ಪನಾ’ದಲ್ಲಿ ಪ್ರಕಟವಾಗಿ, ಎಲ್ಲರ ಮೆಚ್ಚುಗೆಗೆ ಪಾತ್ರವಾಗಿತ್ತು ಎಂದು ಬೇರೆ ಹೇಳಬೇಕಿಲ್ಲ. ಬೋಸ್ ಶಿಷ್ಯರನೇಕರಲ್ಲಿ ವಿಜ್ಞಾನಿಗಳಾದ ಸತ್ಯೇಂದ್ರನಾಥ್ ಬೋಸ್ (ಐನ್ ಸ್ಟೈನ್ ಅವರೊಡನೆ ಸಂಶೋಧನೆ ಮಾಡಿದ ವಿಜ್ಞಾನಿ) ಮತ್ತು ಮೇಘನಾಥ್ ಷಾ ಪ್ರಮುಖರು. ಸಿಸ್ಟರ್ ನಿವೇದಿತಾರ ಬೆಂಬಲ ಬೋಸ್ ಅವರಿಗೆ ಸದಾ ಕಾಲವಿತ್ತು. ಬೋಸ್ ಪತ್ನಿ ಅಬಲಾ ಬೋಸ್ ಪತಿಗೆ ಅನುರೂಪಳು ಮತ್ತು ಉತ್ತಮ ಸಮಾಜ ಸೇವಕಿಯಾಗಿದ್ದರು. ಬೋಸ್ ದಂಪತಿಯ  ಮಗುವೊಂದು ಎಳೆಯ ಪ್ರಾಯದಲ್ಲಿ ಅಸುನೀಗಿದ ಮೇಲೆ, ವಿದ್ಯಾರ್ಥಿಗಳನ್ನೇ ತಮ್ಮ ಮಕ್ಕಳಂತೆ ಕಾಣುತ್ತಿದ್ದರು.



ಚಿತ್ರ
: ಆತ್ಮೀಯ ಗೆಳೆಯರಾದ ಜಗದೀಶ್ ಚಂದ್ರ ಬೋಸ್ ಮತ್ತು ಕವಿ ಠಾಗೋರ್ ವಾರಕ್ಕೊಮ್ಮೆಯಾದರೂ ಭೇಟಿಯಾಗುತ್ತಿದ್ದರು.

ತನ್ನ 70 ನೇ ಜನುಮದಿನದಂದು ಬೋಸ್ ಅವರಿಗೆ ಕಲ್ಕತ್ತೆಯ ನಾಗರಿಕರು, ಕವಿ ರವೀಂದ್ರರ ಸಮ್ಮುಖದಲ್ಲಿ ಮಾಡಿದ ಸನ್ಮಾನ ಅವಿಸ್ಮರಣೀಯ. 1905 ರ ಠಾಗೋರ್ ವಿರಚಿತ “ಜನ ಗಣ ಮನ ಅಧಿನಾಯಕ …” ಗೀತೆಯಿಂದ (ಆಗಿನ್ನೂ ರಾಷ್ಟ್ರಗೀತೆ ಆಗಿರಲಿಲ್ಲ) ಪ್ರಾರಂಭವಾದ ಕಾರ್ಯಕ್ರಮದಲ್ಲಿ ಬೋಸ್ ಅವರ ಭಾಷಣ ಮೈ ನವಿರೇಳಿಸುವಂತೆ ಇತ್ತು. ಅವರ ಪ್ರೌಢಿಮೆ, ದೇಶಭಕ್ತಿ ಮತ್ತು ಜಗತ್ತಿನ ಎಲ್ಲಾ ಜನರ ಹಾಗೂ ಮುಖಂಡರ ಭ್ರಾತೃತ್ವಕ್ಕೆ ಅವರು ನೀಡಿದ ಕರೆ ಮತ್ತು ಅವರ ನಿಲುವಿನ ಸಾಕಾರವಾಗಿತ್ತು.

ಬೋಸ್ ಅವರ 60 ನೇ ಹುಟ್ಟುಹಬ್ಬದಂದು, ಅಂದರೆ ನವೆಂಬರ್ 30, 1917, ತಮ್ಮಲ್ಲಿರುವ ಆಸ್ತಿ ಮತ್ತು ಸಂಪಾದನೆಗಳನ್ನು ಸುರಿದು ಕಟ್ಟಿದ, ‘ಬೋಸ್ ಸಂಶೋಧನಾ ಸಂಸ್ಥೆ’ಯನ್ನು (Bose Research Institute) ದೇಶಕ್ಕಾಗಿ ಸಮರ್ಪಿಸಿದರು. ಆಗಿನ ಬ್ರಿಟಿಷ್ ಸರಕಾರ ಮತ್ತು ದಾನಿಗಳ ಕೊಡುಗೆಯೂ ಸಂಸ್ಥೆ ಕಟ್ಟುವಲ್ಲಿ ಸಹಾಯಕವಾಗಿತ್ತು.  ನವೆಂಬರ್ 30, 2017 ರಂದು ಈ ಸಂಸ್ಥೆಯು ಶತಮಾನ ಪೂರೈಸುತ್ತದೆ. 1902 ರಲ್ಲಿ ಬೋಸ್ ನಿರ್ಮಿಸಿದ ಕಲ್ಕತ್ತೆಯಲ್ಲಿರುವ ಅವರ ಮನೆಯನ್ನು ‘ಆಚಾರ್ಯ ಭವನ’ ಎಂದು ಹೆಸರಿಟ್ಟು ಒಂದು ಸಂಗ್ರಹಾಲಯವಾಗಿ ಮಾಡಲಾಗಿದೆ. ಚಂದ್ರನ ಮೇಲ್ಮೈಯಲ್ಲಿ ತುಂಬಾ ಕುಳಿಗಳಿವೆಯಲ್ಲವೇ? ಅದರಲ್ಲಿ ಒಂದು ಕುಳಿಯನ್ನು ‘ಬೋಸ್ ಕ್ರೇಟರ್’ ಎಂದು ಕರೆಯಲಾಗುತ್ತದೆ!

                         ಚಿತ್ರಬೋಸ್ ನಿವಾಸವಾಗಿದ್ದಆಚಾರ್ಯ ಭವನ ಈಗ ಸಂಗ್ರಹಾಲಯವಾಗಿದೆ.

ತನ್ನ 80 ನೇ ಜನುಮದಿನಕ್ಕೆ ವಾರವಿರಬೇಕಿದ್ದರೆ, ಅಂದರೆ ನವೆಂಬರ್ 23, 1937 ರಂದು ಬೋಸ್ ಕೊನೆಯುಸಿರೆಳೆದರು. ತನ್ನ ಕೊನೆಯದಿನಗಳಲ್ಲೊಮ್ಮೆ ಸರ್ ಜಗದೀಶ್ ಚಂದ್ರ ಬೋಸ್ ಕವಿ ರವೀಂದ್ರನಾಥ್ ಠಾಗೋರ್ ಗೆ ಪತ್ರವೊಂದನ್ನು ಬರೆದಿದ್ದರು: “ಈ ಭೂಮಿಯಲ್ಲಿ ನಾನು ನೂರು ಜನ್ಮ ತಾಳಬೇಕಾಗಿ ಬಂದರೆ, ಹಿಂದೂಸ್ಥಾನದ ಮಣ್ಣಿನಲ್ಲೇ ಹುಟ್ಟಲು ಬಯಸುವೆ”.

 

– ಡಾ. ಬಡೆಕ್ಕಿಲ ಶ್ರೀಧರ ಭಟ್ , ಪುತ್ತೂರು.     

3 Responses

  1. ಅಪ್ರತಿಮ ಭಾರತೀಯ ವಿಜ್ಞಾನಿಗಳನ್ನು ನೀವು ಪರಿಚಯಿಸುವ ಪರಿ ಅನನ್ಯ! ನಿಮ್ಮ ಲೇಖನಗಳನ್ನು ಓದಿ ಮುಗಿಸುವಷ್ಟರಲ್ಲಿ ಮನಸ್ಸು ಸ್ಫೂರ್ತಿ ಮತ್ತು ಉತ್ಸಾಹದ ಚಿಲುಮೆ. ಮಾರ್ಕೋನಿ, ಬೋಸರ ಆವಿಷ್ಕಾರವನ್ನು ಕದ್ದವರೆಂದುಕೊಂಡಿದ್ದೆ. ಆ ಮಿಥ್ಯೆಯ ಕಳೆದದ್ದಲ್ಲದೆ ದೇಶಪ್ರೇಮಿ ಬೋಸರ ಜೀವನದ ಹಲವು ವಿಸ್ಮಯಕಾರಿ ವಿಷಯಗಳನ್ನು ಅರಿವಿಗೆ ತಂದಿದ್ದೀರಿ. ಧನ್ಯವಾದಗಳು. ವಿಜ್ಞಾನ ಮತ್ತು ಕಲೆಯ ದ್ವಂದದಲ್ಲಿದ್ದ ನಾನು ಕಲೆಯನ್ನಾರಿಸಿಕೊಂಡು, ನಿಮ್ಮ ಶಿಷ್ಯೆಯಾಗುವ ಅವಕಾಶ ಕಳೆದುಕೊಂಡೆನೆನಿಸುತ್ತದೆ.

  2. Shankari Sharma says:

    ಮಹಾ ಸಸ್ಯವಿಜ್ನಾನಿ ಜಗದೀಶ್ ಚಂದ್ರ ಭೋಸ್ ಅವರ ಬಗ್ಗೆ ತುಂಬಾ ಮಹತ್ವಪೂರ್ಣ ಸಂಗತಿಗಳನ್ನೊಳಗೊಂಡ ನಿಮ್ಮ ಲೇಖನ ತುಂಬಾ ಚೆನ್ನಾಗಿದೆ ಸರ್…!!

  3. ಡಾ. ಬಡೆಕ್ಕಿಲ ಶ್ರೀಧರ ಭಟ್. says:

    ಸಿಂಧು,
    ನೀವು ಲೇಖನದ ಮೇಲೆ ಬರಿಯ ಕಣ್ಣು ಹಾಯಿಸಿದು ಮಾತ್ರವಲ್ಲ, ಮನಸು ನೀಡಿ ಓದಿದವರಿದ್ದೀರಿ ಎಂದು ನಿಮ್ಮ ಪ್ರತಿಕ್ರಿಯೆಯಲ್ಲಿ ವ್ಯಕ್ತವಾಗುತ್ತದೆ. ತುಂಬಾ ಸಂತೋಷ.
    ಒಬ್ಬ ಗುರು ಅಥವಾ ಶಿಕ್ಷಕನಿಗೆ ಸಿಗುವ ಉತ್ಕೃಷ್ಟ ಗೌರವವೆಂದರೆ, ಕಲಿಯುವ ಇಚ್ಛೆ ಉಳ್ಳ ವಿದ್ಯಾರ್ಥಿಗಳು ಅವರನ್ನು ನೆನಪಿಸಿಕೊಳ್ಳುವುದು. ಇದು ವಿದ್ಯಾರ್ಥಿಯ ಗೌರವವನ್ನೇ ಇಮ್ಮಡಿಗೊಳಿಸುತ್ತದೆ.
    ಒಳ್ಳೆಯ ಗುರು ಯಾವಾಗಲು ಒಳ್ಳೆಯ ಶಿಷ್ಯರಿಂದಲೇ ನಿರ್ಮಾಣವಾಗುತ್ತಾರೆ!

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: