ಷಾಪಿಂಗ್‌ನ ಮೋಡಿ

Share Button

Jayashreeb

‘ಹಳ್ಳಿ ಮೇಲೋ ಪೇಟೆ ಮೇಲೋ’ ಎನ್ನುವುದು ಅನಾದಿ ಕಾಲದಿಂದಲೂ ಚರ್ಚೆಯ ವಿಷಯ. ಭಾರತದ ಬೆನ್ನೆಲುಬು ಹಳ್ಳಿಗಳು ಎಂದೇನೇ ಹೇಳಲಿ ಹೆಚ್ಚುತ್ತಿರುವ ನಗರೀಕರಣ ದೇಶದ ಆರ್ಥಿಕ, ಸಾಂಸ್ಕೃತಿಕ, ಭಾವ ಜಗತ್ತನ್ನೇ ಬದಲಾಯಿಸಿದೆ. ಇದು ನಿಚ್ಚಳವಾಗಿ ಕಾಣಿಸುತ್ತಿರುವುದು ನಮ್ಮ ಉದ್ಯೋಗ ಆಯ್ಕೆಗಳಲ್ಲಿ ಹಾಗೂ ಖರ್ಚು ಮಾಡುವ ವಿಧಾನದಲ್ಲಿ ಮಿತವ್ಯಯ, ಸರಳ ಜೀವನವೆಂಬ ಮೌಲ್ಯಗಳು ಬದಲಾಗಿ ಆ ಜಾಗದಲ್ಲಿ ಕೊಳ್ಳುಬಾಕತನ, ಸರಕು ಸಂಸ್ಕೃತಿ ಬಂದಿದೆ. ಆಧುನಿಕತೆಯ ಭರಾಟೆಯಲ್ಲಿನ ಖಾಲಿತನವನ್ನು ತುಂಬಿಕೊಳ್ಳಲು ಮತ್ತೆ ಮತ್ತೆ ವಸ್ತುಗಳನ್ನು ತಂದು ಮನೆಯಲ್ಲಿ ಕೂಡಿಟ್ಟುಕೊಳ್ಳುತ್ತೇವೆ. Consumerism ಎನ್ನುವುದು ಈಗ ಚಾಲ್ತಿಯಲ್ಲಿರುವ ಶಬ್ಧ. ಗ್ರಾಹಕರನ್ನು ಸೆಳೆಯುವ ಜಾಹೀರಾತುಗಳು, ಡಿಸ್ಕೌಂಟ್ ಸೇಲ್ ಗಳು ಹೆಚ್ಚೇಕೆ ಮನೆಯಲ್ಲಿ ಬೋರಾಗುತ್ತದೆ ಎಂಬ ಏಕೈಕ ಕಾರಣಕ್ಕೋಸ್ಕರ ಶಾಪಿಂಗ್‌ಗೆ ಹೊರಡುತ್ತೇವೆ.

ತಿಂಗಳಿನ ಅಗತ್ಯಕ್ಕೆ ಬೇಕಾದಷ್ಟೇ ಸಾಮಾನುಗಳನ್ನು ತಂದು ಮೊದಲು ಜೋಡಿಸಿಟ್ಟುಕೊಳ್ಳುತ್ತಿದ್ದರೆ ಈಗ ಲೇಟೆಸ್ಟ್ ಆಗಿ ಏನು ಬಂದರೂ (ಹಣವಿದ್ದರೆ) ತೆಗೆದುಕೊಳ್ಳುತ್ತೇವೆ. ಗ್ರಾಹಕರನ್ನು ಆಕರ್ಷಿಸಲು ಕಂಪೆನಿಗಳು, ಹೊಸ ಹೊಸ ತಂತ್ರಗಳನ್ನು ರೂಪಿಸುತ್ತಲೇ ಇರುತ್ತವೆ. ಉದಾ: ಫ್ರೀ ಗಿಫ್ಟ್‌ಗಳು, ಕೂಪನ್‌ಗಳು ಹೀಗೆ. ಪಾಸಿಟಿವ್ ಆಗಿ ಯೋಚಿಸುವುದಿದ್ದರೆ ಈಗಿನ ಷಾಪಿಂಗ್ ನಮಗೆ ಹೆಚ್ಚಿನ ಆಯ್ಕೆಯನ್ನೂ, ವೆರೈಟಿಯನ್ನೂ ಕೊಡುತ್ತದೆ.

ಬಳೆಗಾರ ಚೆನ್ನಯ್ಯನ ಬಳಿ ಲಿಮಿಟೆಡ್ ಸ್ಟಾಕ್ ಇದ್ದಿರಬಹುದು. ಈಗ ಫ್ಯಾನ್ಸಿ ಸ್ಟೋರ್‌ಗೆ ಹೋದರೆ ಬಳೆಯಿಂದ ಹಿಡಿದು ಚಪ್ಪಲಿ ತನಕ ಅಡಿಯಿಂದ ಮುಡಿವರೆಗೆ ನಿಮ್ಮನ್ನು ಸುಂದರವಾಗಿಸಲು ರೆಡಿ ಇರುತ್ತಾರೆ!

ಷಾಪಿಂಗ್ ಎನ್ನುವ ಪರಿಕಲ್ಪನೆಯೇ ಈಗ ಬದಲಾಗಿದೆ. ಹಳ್ಳಿ ಊರಿನ ನಸುಗತ್ತಲಿನ ಕಿರಾಣಿ ಅಂಗಡಿಗಳಿಗಿಂತ ಝಗಮಗ ಹೊಳೆಯುವ, ಸ್ವಚ್ಛವಾಗಿ ನವಿರು ಪರಿಮಳ ಬೀರುವ ಮಾಲ್‌ಗಳು, ಶಾಪಿಂಗ್ ಕಾಂಪ್ಲೆಕ್ಸ್‌ಗಳು ಜನಮನ ಸೆಳೆಯುತ್ತವೆ. ಅದು ಮನುಷ್ಯ ಸ್ವಭಾವ ಕೂಡ. ದೇಶದಲ್ಲಿ ವಿದೇಶಿ ಕಂಪೆನಿಗಳ ಆಕ್ರಮಣ, ಏಕರೂಪಿ ಸಂಸ್ಕೃತಿ ಇವೆಲ್ಲ ಆ ಕ್ಷಣದಲ್ಲಿ ನಮಗೆ ಮುಖ್ಯವಾಗುವುದಿಲ್ಲ.

 

ಮಾನ್ಯ ವೀರೇಂದ್ರ ಹೆಗ್ಗಡೆಯವರು ತಮ್ಮ ಭಾಷಣವೊಂದರಲ್ಲಿ ಹೇಳುತ್ತಿದ್ದರು. ಒಂದು ರೀತಿಯಲ್ಲಿ ಕಲಿಯುಗವೇ ಜನಸಾಮಾನ್ಯರಿಗೆ ಜಾಸ್ತಿ ಕಂಫರ್ಟಬೆಲ್ ಎಂದು. ಹಿಂದೆ ರಾಜ ಮಹಾರಾಜರಿಗೆ ಕೂಡಾ ಸೆಖೆಯಾದಲ್ಲಿ ಚಾಮರ ಬೀಸಬೇಕಿತ್ತು; ವಿಷಯಗಳನ್ನು ತಿಳಿದುಕೊಳ್ಳಲು, ತಲುಪಿಸಲು ದೂತರನ್ನು ಅವಲಂಬಿಸಬೇಕಿತ್ತು. ಹೌದು. ಅತ್ಯಂತ ಶ್ರೀಮಂತರಿಗೂ ಹಿಂದೆ ಕಷ್ಟವಾಗಿದ್ದ ಎಷ್ಟೋ ಸೌಕರ್ಯಗಳು ನಮಗಿವೆ. ಸ್ವಿಚ್ಛ್ ಅದುಮಿದರೆ ತಣ್ಣನೆಯ ಗಾಳಿ, ಫ್ರಿಜ್ಜಿನಲ್ಲಿಯ ತಂಪು ಪಾನೀಯಗಳು, ಓಡಾಡಲು ಬಸ್ಸು, ಸ್ಕೂಟರು, ರಿಕ್ಷಾ ಹೀಗೆ ಕೆಳಮಧ್ಯಮ ವರ್ಗದವರಿಗೂ ಅನೇಕಾನೇಕ ಸೌಲಭ್ಯಗಳಿವೆ. ಮೊಬೈಲ್, ಟಿವಿ, ಕಂಪ್ಯೂಟರ್, ಐಪಾಡ್ ಹೀಗೆ ಇನ್‌ಫಾರ್ಮೇಷನ್ ಕ್ರಾಂತಿಯೇ ನಮ್ಮ ಮುಂದಿದೆ. ಇದರ ಇನ್ನೊಂದು ಉತ್ತಮ ಫಲಿತಾಂಶವೆಂದರೆ ಸಮಾಜದಲ್ಲಿನ ಶ್ರೇಣೀಕೃತ ವರ್ಗ ಅಸಮಾನತೆ ಮಸುಕಾಗುತ್ತಿರುವುದು. ಪಿಜ್ಜಾ ಹಟ್‌ಗಳಲ್ಲಿ, ಮಾಲ್‌ಗಳಲ್ಲಿ ಯಾವುದೇ ಜಾತಿ ಆಧಾರಿತ ಸಂಘರ್ಷಗಳಿಲ್ಲ. ಈಗ ಏನಿದ್ದರೂ ಎರಡೇ ಜಾತಿ. ಹಣ ಇರುವವರು ಹಾಗೂ ಇಲ್ಲದವರು ಎಂದು. ಮಹಿಳೆಯರೂ ಉದ್ಯೋಗಕ್ಕೆ ಹೋಗುವುದರಿಂದ ಕೌಟುಂಬಿಕ ಅಸಮಾನತೆಗಳೂ ಕಡಿಮೆಯಾಗುತ್ತಿವೆ. ಮುಖ್ಯವಾಗಿ ಅವರಿಗೂ ಖರೀದಿಯ ವಿಷಯಗಳಲ್ಲಿ ದನಿಯೆತ್ತಲು ಸಾಧ್ಯವಾಗುತ್ತದೆ.

ಒಮ್ಮೆ ಶುರುವಾದ ಕೊಳ್ಳುಬಾಕ ಪ್ರವೃತ್ತಿ ಸುಲಭಕ್ಕೆ ನಮ್ಮನ್ನು ಬಿಡುವುದಿಲ್ಲ. ನಮ್ಮ ಜೀವನವನ್ನು ಗಡಿಬಿಡಿಯ ಜೀವನ ಶೈಲಿಯನ್ನು ಅವು ಸರಳಗೊಳಿಸುತ್ತವೆಯೇನೋ ಎನ್ನುವ ಭ್ರಮೆಯಲ್ಲಿ ಮತ್ತಷ್ಟು ಸಲಕರಣೆಗಳನ್ನು ಅನಾವಶ್ಯಕವಾಗಿ ತಂದು ಗುಡ್ಡೆ ಹಾಕುತ್ತೇವೆ.

 

ಮಾಲ್‌ಗಳ ಧನಾತ್ಮಕ ಅಂಶವೆಂದರೆ Uniformity. ಮೈಸೂರಿನಲ್ಲೋ, ಬೊಂಬಾಯಿಯಲ್ಲೋ ಮಾತ್ರ ಸಿಗುತ್ತಿದ್ದ ಐಟಂಗಳು ಈಗ ನಮ್ಮೂರಿನಲ್ಲಿಯೂ ಒಂದೇ ಸೂರಿನಡಿಯಲ್ಲಿ ಸಿಗುತ್ತವೆ. (ಇದು ವ್ಯಾಪಾರದ ತಂತ್ರ ಕೂಡ). ಕ್ವಾಲಿಟಿಯನ್ನು ಅವರು ಕಾಯ್ದುಕೊಳ್ಳುವ ಕಾರಣ ಮುಗ್ಗಿದ ತೊಗರಿಬೇಳೆ, ಬಣ್ಣ ಕಳೆದುಕೊಂಡ ಮೆಣಸಿನ ಪುಡಿ, ಅಲ್ಲಿ ತಪ್ಪಿಯೂ ಸಿಗುವುದಿಲ್ಲ. ಉದಾ: ಫುಡ್‌ವರ್ಲ್ಡ್. ಕ್ಲೀನಾದ ವಾತಾವರಣ, ನಗುಮುಖದ ಸೇವೆ ನಮ್ಮಿಂದ ಹಣವನ್ನು ಸಂತೋಷದಿಂದಲೇ ಖರ್ಚು ಮಾಡಿಸುತ್ತಿರುತ್ತದೆ. (ನಮ್ಮ ಕಿರಾಣಿ ಅಂಗಡಿಯವರು ಬಹುಶ: ಈ ವಿಷಯಗಳಲ್ಲಿ ಎಡವುತ್ತಿರುತ್ತಾರೆ.)

ಮಾರ್ಕೆಟಿಂಗ್ ಎನ್ನುವುದು ಎಷ್ಟು ವಿಸ್ತಾರವಾಗಿ ಕ್ರಿಯೇಟಿವ್ ಆಗಿ ಯೋಚಿಸುತ್ತಿದೆಯೆಂದರೆ ಸಮಾಜದ ಎಲ್ಲ ಸ್ತರದವರಿಗೂ ಬೇಕಿರಲಿ ಬೇಡದಿರಲಿ ‘ಕೊಳ್ಳುವುದರ’ ರುಚಿ ಕಲಿಸುತ್ತಿದೆ. ಅಂಗಡಿಗಳಲ್ಲಿ ಕೂಡಾ ಫೇರ್‌ನೆಸ್ ಕ್ರೀಮ್‌ಗಳು, ಡಿಶ್‌ವಾಷಿಂಗ್ ಲಿಕ್ವಿಡ್‌ಗಳು, ಕುರ್ ಕುರೆಯಂತಹ ಜಂಕ್‌ಫುಡ್ ಕಾಣಸಿಗುತ್ತವೆ. ಬಡವರ್ಗದವರನ್ನು ಆಕರ್ಷಿಸಲು ಸಣ್ಣ ಪ್ಯಾಕೆಟ್‌ಗಳಲ್ಲಿ ಶ್ಯಾಂಪೋ, ಸೋಪು, ಟೂತ್ ಪೇಸ್ಟ್‌ಗಳು, ಸ್ವದೇಶಿ ಕಂಪೆನಿಗಳಿಂದ ವಿದೇಶಿ ಕಂಪೆನಿಗಳೇ ಈ ವಿಷಯದಲ್ಲಿ ಜಾಸ್ತಿ ರಿಸರ್ಚ್ ಮಾಡಿ, ಒಟ್ಟಿನ ಮೇಲೆ ಷಾಪಿಂಗ್ ಎನ್ನುವುದು ಗೀಳಾಗಿ ಪರಿಣಮಿಸದಂತೆ, ನಮ್ಮ ಆರ್ಥಿಕ ಬ್ಯಾಲೆನ್ಸ್‌ನ್ನು ಕುಸಿಯದಂತೆ ನೋಡಿಕೊಳ್ಳುವುದು ನಮ್ಮದೇ ಜವಾಬ್ದಾರಿ.

 

-ಜಯಶ್ರೀ ಬಿ.ಕದ್ರಿ

4 Responses

  1. ಲೇಖ ನ ಸೂಪರ್ ಆಗಿದೆ

  2. Hema says:

    ಉತ್ತಮ ಲೇಖನ, ಸಾಂದರ್ಭಿಕವಾಗಿದೆ.
    ಇದರಲ್ಲಿ ಉಲ್ಲೇಖಿಸಲಾದ “ಸಮಾಜದ ಎಲ್ಲ ಸ್ತರದವರಿಗೂ ಬೇಕಿರಲಿ ಬೇಡದಿರಲಿ ಕೊಳ್ಳುವುದರ ರುಚಿ ಕಲಿಸುತ್ತಿದೆ ” ಎಂಬ ಮಾತು ಅಪ್ಪಟ ಪ್ರಸ್ತುತ.

  3. Shruthi Sharma says:

    ಬಹಳ ಸತ್ಯವಾದ ಬರಹ!

  4. Shankari Sharma says:

    ಜಾಗತೀಕರಣ…ಒಂದೇ ಸೂರಿನಡಿಯಲ್ಲಿ ಸರ್ವವೂ ಸಿಗುವುದೇನೋ ನಿಜ. ಆದರೆ ಸಣ್ಣ ಅಂಗಡಿಗಳಲ್ಲಿ ಇರುವ ಮಾನವೀಯ ಮೌಲ್ಯಗಳು ಇಲ್ಲಿ ಕಾಣಸಿಗದು..ಎಲ್ಲಾ ಯಾಂತ್ರಿಕ..”ಭಾರತ್ ಸ್ಟೋರ್ಸ್” ಸಿನಿಮಾ ನೆನಪಾಗ್ತಾ ಇದೆ..!! ಲೇಖನ ಚೆನ್ನಾಗಿದೆ…

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: