ಮತ್ತೆ ಬಂದಿದೆ ಯುಗಾದಿ
ಮತ್ತೆ ಬಂದಿದೆ ಯುಗಾದಿ
ಹೊಸಿಲಾಚೆ ನಿಂತು ಕಾದಿದೆ
ನೊಂದು ಬೆಂದ ಜೀವಕ್ಕೆ
ಏನೋ ಹೇಳ ಹೊರಟಿದೆ.
ಮರ ಗಿಡ ಎಲ್ಲ ತಾನೇ
ಹಳೆಯ ವ್ಯಥೆಯ ಮರೆತಿವೆ
ಹಸಿರು ಚಿಗುರು ಹೊನ್ನ ತೇರ
ನಡುವೆ ಕವಿತೆಯೊಂದು ಹುಟ್ಟಿದೆ.
ಸರದಿಯಂತೆ ಸಾವು ನೋವು
ಹೃದಯ ಬಸಿದು ಆರಿದೆ
ಬರಡು ಒಡಲಿನಲ್ಲೂ ನಗೆಯ ಹೂವು
ಅರಳಿದೆ.
ನಲಿವೊಂದೇ ಬದುಕಲ್ಲ
ಸುಖವೊಂದೇ ಕನಸಲ್ಲ
ಯುಗಾದಿ ಪಾಠ ನಿತ್ಯ ನಿತ್ಯಕೂ
ಮರೆಯದಂತೆ ಕಾಡಿದೆ.
ಋತು ಚಕ್ರದ ಆವರ್ತನದಲಿ
ಮತ್ತೆ ಯುಗಾದಿ ಬಂದಿದೆ
ಬೇವು ಬೆಲ್ಲ ಮೆದ್ದ ಹೃದಯದಲ್ಲಿ
ಹದವರಿತ ಭಾವ ಬಲಿತಿದೆ.
-ಸ್ಮಿತಾ ಅಮೃತರಾಜ್, ಸಂಪಾಜೆ.
30/03/2014
ಸುಂದರ ಕವನ
ವಂದನೆಗಳು-ಸ್ಮಿತಾ