ಸಾಲದ ನಿರ್ವಹಣೆ ಹೇಗೆ?

Spread the love
Share Button

ಸಾಲವನು ಕೊಂಬಾಗ ಹಾಲೋಗರವನು ಉಂಡಂತೆ- ಎಂಬ ಸರ್ವಜ್ಞನ ಮಾತಿನಂತೆ ಪ್ರತಿಯೊಬ್ಬರಿಗೂ ಸಾಲ ಸಿಕ್ಕಿದಾಗ ಸಂಭ್ರಮವಾಗುವುದು ಸಹಜ. ಪ್ರತಿಯೊಬ್ಬ ವ್ಯಕ್ತಿಗೂ ಜೀವನದ ಪ್ರತಿಯೊಂದು ಹಂತದಲ್ಲೂ ತನ್ನ ಕನಸುಗಳನ್ನು ಸಾಕಾರಗೊಳಿಸಲು ಹಣ ಬೇಕು. ನಾಲ್ಕು ಪುರುಷಾರ್ಥಗಳಲ್ಲಿ ಧರ್ಮದ ನಂತರ ಬರುವುದೇ ಧನ! ಅಷ್ಟು ಪ್ರಾಮುಖ್ಯತೆ ಇದೆ ಅದಕ್ಕೆ. ಆದರೆ ಎಷ್ಟೋ ಸಂದರ್ಭಗಳಲ್ಲಿ ನಮ್ಮ ಬಳಿ ಇರುವ ಹಣದಲ್ಲಿ ಬಯಕೆಗಳನ್ನು, ಅಂದುಕೊಂಡ ಗುರಿಗಳನ್ನು ಸಾಧಿಸಲು ಸಾಧ್ಯವಾಗುವುದಿಲ್ಲ. ನೆಂಟರಿಷ್ಟರ ಬಳಿ ಪ್ರತಿ ಸಲವೂ ಕೇಳಲು ಸಾಧ್ಯವಾಗದು ಅಥವಾ ನಿಮಗೆ ಬೇಕಾಗುವಷ್ಟು ಹಣ ಕೊಡಲು ಅವರಿಂದ ಆಗದೆಯೂ ಇರಬಹುದು. ಹಾಗಂತ ಮನೆ, ಕಾರು, ಮಕ್ಕಳ ವಿದ್ಯಾಭ್ಯಾಸ ಇತ್ಯಾದಿ ಜೀವನಾವಶ್ಯಕ ಹಾಗೂ ಕನಸುಗಳನ್ನು ಕೈ ಬಿಡಲಾಗುವುದೇ? ನೆವರ್. ಆಗ ಸಾಲಕ್ಕೆ ಮೊರೆ ಹೋಗುವುದೇ ಏಕೈಕ ಮಾರ್ಗ. ಸಾಲ ಪಡೆಯುವುದು ಈಗ ಮುಜುಗರದ ಅಥವಾ ಕೀಳರಿಮೆಯ ವಿಚಾರವೇನಲ್ಲ. ಜನ ಸಾಮಾನ್ಯರಿಂದ ಆರಂಭಿಸಿ ಭಾರತದ ಅತ್ಯಂತ ಶ್ರೀಮಂತ ಮುಕೇಶ್ ಅಂಬಾನಿಯಾಗಿರಬಹುದು ಎಲ್ಲರೂ ಸಾಲ ಪಡೆದವರೇ. ಬದುಕಿನ ನಿರ್ಣಾಯಕ ಸಂದರ್ಭಗಳಲ್ಲಿ, ಕೈ ಹಿಡಿಯುವುದೇ ಈ ಸಾಲವೆಂಬ ದಿವ್ಯಾಮೃತ.

ಸರಕಾರಗಳು ಮತ್ತು ಬ್ಯಾಂಕ್‌ಗಳು ಜನ ಸಾಲ ಕೊಳ್ಳುವುದನ್ನು ಉತ್ತೇಜಿಸುತ್ತವೆ. ಇದು ಆರ್ಥಿಕ ಚಟುವಟಿಕೆಗಳನ್ನೂ ಹೆಚ್ಚಿಸುವುದು ಇದಕ್ಕೆ ಕಾರಣ. ಉದಾಹರಣೆಗೆ ಒಬ್ಬ ವ್ಯಕ್ತಿ ತನ್ನ ಜೀವಮಾನದ ಕನಸಾದ ಮನೆಯನ್ನು ಕಟ್ಟಿಸುತ್ತಾನೆ ಎಂದಿಟ್ಟುಕೊಳ್ಳಿ. ಏಳೆಂಟು ತಿಂಗಳುಗಳ ಕಾಲ ಹಲವಾರು ಮಂದಿಗೆ ಜೀವನೋಪಾಯಕ್ಕೆ ದಾರಿಯಾಗುತ್ತದೆ. ಅಂತಿಮವಾಗಿ ವ್ಯಕ್ತಿಗೆ ತನ್ನದೇ ಸ್ವಂತ ಮನೆಯ ಸೌಕರ್ಯ, ಸಂಭ್ರಮ ಲಭಿಸುತ್ತದೆ. ಸಾಲಗಳ ಮೂಲಕ ಕೇವಲ ಮನೆ ಮಠ ಕಟ್ಟಿಕೊಳ್ಳುವುದಷ್ಟೇ ಅಲ್ಲ, ಹೊಸ ವ್ಯಾಪಾರ, ಕೃಷಿ ವಿಸ್ತರಣೆ, ಜಮೀನು ಖರೀದಿ ಮುಂತಾದ ಹತ್ತಾರು ಗುರಿಗಳನ್ನು ತಲುಪಬಹುದು. ಜೀವನದಲ್ಲಿ ಯಶಸ್ಸು ಗಳಿಸಬಹುದು. ಹೀಗಾಗಿಯೇ ಸಾಲಗಳಲ್ಲಿ ಗೃಹ, ವಾಹನ, ಶಿಕ್ಷಣ, ವೈಯಕ್ತಿಕ, ಬೆಳೆ, ಉದ್ಯಮ ಸಾಲ ಇತ್ಯಾದಿ ನಾನಾ ವಿಧಗಳಿವೆ.

ನಿಮಗೆ ಸಾಲದ ಬಗ್ಗೆ ಪ್ರೀತಿ-ದ್ವೇಷದ ಭಾವ ಇರಬಹುದು. ಸಾಲದ ಕಂತುಗಳನ್ನು ಕಟ್ಟುವ ಸಂದರ್ಭ, ಯಾವಾಗ ಮುಕ್ತಾಯವಾಗುತ್ತದೋ ಎಂಬ ಗೊಣಗಾಟ, ಉದ್ಗಾರ ಉಂಟಾಗಬಹುದು. ಹೀಗಿದ್ದರೂ, ಬದುಕಿನ ಮಹತ್ವದ ಗುರಿಗಳನ್ನು ನೆರವೇರಿಸಲು ಸಾಲ ಇಲ್ಲದೆ ಅಸಾಧ್ಯವಾದೀತು. ಬದುಕಿನ ಸುಧಾರಣೆಗೆ ಸಾಲ ನಿರ್ಣಾಯಕವಾಗುತ್ತದೆ. ಯಾರ ಹಂಗೂ ಇಲ್ಲದೆ, ನೇರವಾಗಿ ಬ್ಯಾಂಕ್ ಅಥವಾ ಹಣಕಾಸು ಸಂಸ್ಥೆಯಿಂದ ಸಾಲ ಗಳಿಸಿ, ಯಾವುದೋ ಬಿಸಿನೆಸ್ ಮಾಡಿ, ಎಲ್ಲರೂ ನೋಡುತ್ತಿರುವಂತೆ ಕೋಟ್ಯಧೀಶರರಾದವರಿಗೆ ಹಲವು ಉದಾಹರಣೆಗಳು ನಮ್ಮಲ್ಲಿವೆ. ಕೆಲವು ಸಾವಿರ ರೂ.ಗಳ ವಹಿವಾಟು ನಡೆಸುತ್ತಿದ್ದವರು, ಲಕ್ಷಗಟ್ಟಲೆ ವ್ಯವಹಾರ ನಡೆಸುವ ಮಟ್ಟಕ್ಕೆ ಬೆಳೆದ ನಿದರ್ಶನಗಳಿವೆ. ಇನ್ನೂ ಅನೇಕ ಮಂದಿ ಸಾಲದ ದುಡ್ಡಿನಲ್ಲಿ ಓದಿ, ಎಂಜಿನಿಯರ್, ಡಾಕ್ಟರ್ ಅಥವಾ ಆರ್ಕಿಟೆಕ್ಟ್ ಮುಂತಾದ ವೃತ್ತಿಗಳಲ್ಲಿ ಮುಂದುವರಿದು ಜೀವನದಲ್ಲಿ ಸ್ವಾವಲಂಬಿಗಳಾಗಿ, ಮಾದರಿ ವ್ಯಕ್ತಿಗಳಾಗಿರುವ ನಿದರ್ಶನಗಳು ಹಲವಾರು.

ತಂತ್ರಜ್ಞಾನದ ಪರಿಣಾಮ ಸುಲಭ ಸಾಲ!

ಅದೃಷ್ಟವಶಾತ್ ಈಗಿನ ಡಿಜಿಟಲ್ ತಂತ್ರಜ್ಞಾನದ ಕಾಲದಲ್ಲಿ ಸಾಲ ಸುಲಭವಾಗಿ ಸಿಗುತ್ತದೆ. ನಿಮ್ಮ ಬ್ಯಾಂಕ್ ಖಾತೆಯಲ್ಲಿರುವ ಬ್ಯಾಲೆನ್ಸ್ ನೋಡಿಕೊಂಡು ಬ್ಯಾಂಕ್‌ಗಳು ಅಥವಾ ಎನ್‌ಬಿಎಫ್‌ಸಿಗಳು (ಬ್ಯಾಂಕೇತರ ಹಣಕಾಸು ಸಂಸ್ಥೆ) ನಿತ್ಯ ಕರೆ ಮಾಡಿ ಅಥವಾ ಎಸ್ಸೆಮ್ಮೆಸ್, ಇ-ಮೇಲ್ ಮೂಲಕ ಕ್ರೆಡಿಟ್ ಕಾರ್ಡ್ ಪಡೆಯಿರಿ ಎಂದು ದುಂಬಾಲು ಬೀಳಬಹುದು. ಕೆಲವು ಬ್ಯಾಂಕ್‌ಗಳು ಕಡಿಮೆ ಬಡ್ಡಿ ದರವನ್ನು ನೀಡುವುದಾಗಿ ಹೇಳುತ್ತವೆ. ಮತ್ತೆ ಕೆಲವು ಬ್ಯಾಂಕ್‌ಗಳು ಕ್ಷಿಪ್ರವಾಗಿ ಸಾಲ ಕೊಡುವುದಾಗಿ ತಿಳಿಸುತ್ತವೆ. ನಾನಾ ಆನ್‌ಲೈನ್ ವೆಬ್ ತಾಣಗಳು ನಿಮಗೆ ಕ್ಷಣಾರ್ಧದಲ್ಲಿಯೇ ನಿಮಗೆ ಎಲ್ಲಿ ಎಷ್ಟು ಅಗ್ಗದ ಸಾಲ ಹೇಗೆ ಸಿಗುತ್ತವೆ ಎಂಬುದನ್ನು ತುಲನೆ ಮಾಡಿ ತಿಳಿಸುತ್ತವೆ. ಕೆಲವೇ ನಿಮಿಷಗಳಲ್ಲಿ ನಿಮಗೆ ಸಾಲ ಮಂಜೂರಾಗಬಹುದು. ನೆಟ್ ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ಬ್ಯಾಂಕ್‌ಗಳು ತಮ್ಮ ಗ್ರಾಹಕರಿಗೆ ಕೆಲವೇ ನಿಮಿಷಗಳಲ್ಲಿ ವೈಯಕ್ತಿಕ ಸಾಲ ವಿತರಿಸುತ್ತವೆ. ಉದಾಹರಣೆಗೆ ಖಾಸಗಿ ವಲಯದ ಪ್ರತಿಷ್ಠಿತ ಬ್ಯಾಂಕ್ ಒಂದರ ವೆಬ್‌ಸೈಟ್ ಪ್ರಕಾರ, ಕೇವಲ ಕೆಲವೇ ಸೆಕೆಂಡ್‌ಗಳಲ್ಲಿ ನಿಮಗೆ ವೈಯಕ್ತಿಕ ಸಾಲ ಮಂಜೂರಾಗುತ್ತದೆ. ಹಾಗೂ ಮಂಜೂರಾತಿಯಾದ ೨೪ ಗಂಟೆಗಳೊಳಗೆ ನಿಮ್ಮ ಖಾತೆಗೆ ಸಾಲ ಜಮೆಯಾಗುತ್ತದೆ. ೫೦,೦೦೦ ರೂ.ಗಳಿಂದ ೨೦ ಲಕ್ಷ ರೂ. ತನಕವೂ ಸಾಲ ಗಳಿಸಬಹುದು!

ಸಾಲ ಪಡೆಯುವುದು ತಪ್ಪಲ್ಲ!

ನಿಜ. ಸಾಲ ಪಡೆಯುವುದು ಖಂಡಿತ ತಪ್ಪಲ್ಲ. ಎಷ್ಟೋ ಮಂದಿ ಸಾಲ ಪಡೆದು ತಮ್ಮ ಹಣಕಾಸು ಗುರಿಗಳನ್ನು ಯಶಸ್ವಿಯಾಗಿ ನಿಭಾಯಿಸಿದ್ದಾರೆ. ಈಗಂತೂ ಎಳೆಯ ವಯಸ್ಸಿನಲ್ಲಿಯೇ ಸಾಲ ತೆಗೆದುಕೊಳ್ಳುವವರು ಬಹಳ ಮಂದಿ. ಸಾಕಷ್ಟು ಮಂದಿ ಕಾಲೇಜಿನಲ್ಲಿರುವಾಗಲೇ ಸಾಲ ಪಡೆಯಲು ಆರಂಭಿಸುತ್ತಾರೆ.  ಅದು ಸಾಮಾನ್ಯವಾಗಿ ಅದು ಶಿಕ್ಷಣ ಸಾಲವಾಗಿರುತ್ತದೆ. ಅದು ೫ ಲಕ್ಷ ರೂ.ಗಳಿಂದ ೩೦-೪೦ ಲಕ್ಷ ರೂ. ತನಕ ಇರಬಹುದು. ನಂತರ ಉದ್ಯೋಗಕ್ಕೆ ಸೇರಿದೊಡನೆ ಕ್ರೆಡಿಟ್ ಕಾರ್ಡ್ ತೆಗೆದುಕೊಳ್ಳುತ್ತಾರೆ. ಭಾರತದಲ್ಲಿ ೨೦೧೮ರ ಜನವರಿ ವೇಳೆಗೆ ೩.೬೨ ಕೋಟಿ ಕ್ರೆಡಿಟ್ ಕಾರ್ಡ್‌ಗಳು ಚಾಲ್ತಿಯಲ್ಲಿವೆ. ಈ ಸಾಲದ ಜತೆಗೆ ಕ್ರೆಡಿಟ್ ಕಾರ್ಡ್ ಸಾಲ ಕೂಡ ಸುತ್ತಿಕೊಳ್ಳುತ್ತದೆ. ಸ್ವಲ್ಪ ಎಡವಿದರೆ ಸಾಲದ ಸುಳಿಗೇ ಬೀಳುವ ಪರಿಸ್ಥಿತಿ ನಿರ್ಮಾಣವಾಗಬಹುದು. ಆದ್ದರಿಂದ ಸಾಲವನ್ನು ಮರು ಪಾವತಿಸುವ ಸುವರ್ಣ ನಿಯಮಗಳನ್ನು ಅರಿತುಕೊಳ್ಳಬೇಕು. ನಿಶ್ಚಿತವಾಗಿಯೂ ಕೆಲವು ಮಾರ್ಗೋಪಾಯಗಳ ಮೂಲಕ ಸಾಲದ ನಿರ್ವಹಣೆಯನ್ನು ಅಚ್ಚುಕಟ್ಟಾಗಿಸಬಹುದು. ನಮ್ಮ ಗುರಿಗಳನ್ನು ಈಡೇರಿಸಬಹುದು.

ಸತೀಶ್ ಎಂಬುವರ ಚಿಂತೆ ಒಂದೇ. ಉತ್ತಮ ಸಂಬಳ ಇದ್ದರೂ ತಿಂಗಳ ಕೊನೆಗೆ ಚಿಕ್ಕಾಸೂ ಉಳಿಯದೆ ಬರಿಗೈ ಆಗುತ್ತದೆ. ಉದ್ಯೋಗಕ್ಕೆ ಸೇರಿ ಎರಡು ವರ್ಷ ಆಗಿದ್ದರೂ ಯಾವುದೇ ಉಳಿತಾಯ ಇರಲಿಲ್ಲ. ಕನಿಷ್ಠ ತುರ್ತು ನಿಧಿಯನ್ನು ಹೊಂದಲೂ ಸಾಧ್ಯವಾಗಿರಲಿಲ್ಲ. ಕಾರಣ ಸಾಲದ ಹೊರೆ! ಸತೀಶ್ ಅವರಿಗೆ ೩ ಸಾಲಗಳಿದ್ದು, ೩೦,೦೦೦ ರೂ. ಇಎಂಐ (ಸಮಾನ ಮಾಸಿಕ ಕಂತು) ರೂಪದಲ್ಲಿ ಹೋಗುತ್ತಿತ್ತು.  ಕ್ರೆಡಿಟ್ ಕಾರ್ಡ್ ಮೂಲಕ ೨ಲಕ್ಷ ರೂ. ಸಾಲ ಪಡೆದಿದ್ದರು. ಅದರ ಇಎಂಐ ಮಾಸಿಕ ೮,೦೦೦ ರೂ. ಆಗಿತ್ತು. ಇವೆಲ್ಲದರ ಪರಿಣಾಮ ತಿಂಗಳಿಗೆ ೬೦,೦೦೦ ರೂ. ವೇತನ ಇದ್ದರೂ, ತೀವ್ರ ಹಣಕಾಸು ಬಿಕ್ಕಟ್ಟಿನಲ್ಲಿದ್ದರು. ಕೊನೆಗೂ ವೃತ್ತಿಪರ ಹಣಕಾಸು ಸಲಹೆಗಾರರ ನೆರವು ಪಡೆದು ಅವರು ಸಮಸ್ಯೆಯಿಂದ ಹೊರಬಂದರು.

ಮರು ಪಾವತಿಯ ಸಾಮರ್ಥ್ಯ ಮರೆಯದಿರಿ:

ಬಹುತೇಕ ಎಲ್ಲ ಹಣಕಾಸು ಸಲಹೆಗಾರರ ಮೊದಲ ಟಿಪ್ಸ್ ಏನೆಂದರೆ, ಹಾಸಿಗೆ ಇದ್ದಷ್ಟೇ ಕೈಚಾಚು ಎಂಬುದು. ಮರು ಪಾವತಿಸುವ ಸಾಮರ್ಥ್ಯವನ್ನು ಪರಿಗಣಿಸಿದ ನಂತರ ಸಾಲ ಪಡೆಯಬೇಕು ಎನ್ನುತ್ತಾರೆ. ನಿಮ್ಮ ಎಲ್ಲ ಸಾಲಗಳ ಇಎಂಐ, ಮಾಸಿಕ ಆದಾಯದ ಶೇ.೫೦ಕ್ಕಿಂತ ಹೆಚ್ಚು ಇರಬಾರದು. ಗೃಹ ಸಾಲವಾಗಿದ್ದರೆ ನಿವ್ವಳ ಆದಾಯದ ಶೇ.೪೦ ದಾಟಬಾರದು. ಕಾರು ಸಾಲವಾಗಿದ್ದರೆ ಶೇ.೧೫ಕ್ಕೂ ಹೆಚ್ಚಿರಬಾರದು. ವೈಯಕ್ತಿಕ ಸಾಲವಾಗಿದ್ದರೆ ಶೇ.೧೦ನ್ನು ಮೀರಬಾರದು ಎನ್ನುತ್ತಾರೆ ಹಣಕಾಸು ಸಲಹೆಗಾರರು. ಕೇವಲ ನೀವು ಕಟ್ಟುವ ಬಡ್ಡಿಗೆ ತೆರಿಗೆ ವಿನಾಯಿತಿ ದೊರೆಯುತ್ತದೆ ಎಂಬ ಕಾರಣಕ್ಕೆ ಸಾಲ ತೆಗೆದುಕೊಳ್ಳದಿರಿ. ಸುಲಭವಾಗಿ ಪಾವತಿಸಲು ಸಾಧ್ಯ ಎನ್ನುವ ಇಎಂಐಗೆ ಎಷ್ಟು ಸಿಗುತ್ತದೆಯೇ ಅಷ್ಟು ಸಾಲವನ್ನು ಪಡೆಯಿರಿ.

ಸಾಲದ ವಿಧಗಳು:
ಸಾಲಗಳಲ್ಲಿ ಸೆಕ್ಯೂರ್ಡ್ ಹಾಗೂ ಅನ್ ಸೆಕ್ಯೂರ್ಡ್ ಎಂಬ ಎರಡು ವಿಧಗಳಿವೆ. ಸೆಕ್ಯೂರ್ಡ್ ಸಾಲಗಳಲ್ಲಿ ಗೃಹ ಸಾಲ, ವಾಹನ ಸಾಲ, ಚಿನ್ನದ ಸಾಲ, ಸಾಲಪತ್ರಗಳ ಮೇಲೆ ನೀಡುವ ಸಾಲ, ಪ್ರಾಪರ್ಟಿಗಳ ಆಧಾರಿತ ಸಾಲ ಇರುತ್ತವೆ. ಇಲ್ಲಿ ಬ್ಯಾಂಕ್‌ಗಳಿಗೆ ಅಪಾಯ ಕಡಿಮೆ. ಅನ್‌ಸೆಕ್ಯೂರ್ಡ್ ಸಾಲಗಳಲ್ಲಿ ಕ್ರೆಡಿಟ್ ಕಾರ್ಡ್ ಮೇಲಿನ ಸಾಲ, ವೈಯಕ್ತಿಕ ಸಾಲ, ಶಿಕ್ಷಣ ಸಾಲ ಇತ್ಯಾದಿ ಇರುತ್ತವೆ. ಸೆಕ್ಯೂರ್ಡ್ ಸಾಲಗಳಿಗೆ ಬಡ್ಡಿ ದರ ಕಡಿಮೆ. ಆದರೆ ಅನ್‌ಸೆಕೂರ್ಡ್ ಸಾಲಕ್ಕೆ ಬಡ್ಡಿ ಅಧಿಕ.

ಸಾಲದ ಮೇಲೆ ಹಿಡಿತವಿರಲಿ:
ಮೊದಲನೆಯದಾಗಿ ನಿಮ್ಮ ಸಾಲದ ಮೇಲೆ ನಿಮಗೆ ಹಿಡಿತವಿರಲಿ.  ನಿಮ್ಮೆಲ್ಲ ಸಾಲಗಳ ಬಡ್ಡಿ ದರಗಳನ್ನು ಪರಿಶೀಲಿಸಿ.  ನಿಗದಿತ ಕಾಲಕ್ಕೆ ಇಎಂಐ ಕಟ್ಟಿಕೊಳ್ಳಿ. ಎರಡನೆಯದಾಗಿ ಹೆಚ್ಚು ಬಡ್ಡಿ ದರ ಇರುವ ಸಾಲವನ್ನು ಮೊದಲು ತೀರಿಸಿ. ಸಾಮಾನ್ಯವಾಗಿ ಕ್ರೆಡಿಟ್ ಕಾರ್ಡ್ ಸಾಲಕ್ಕೆ ಬಡ್ಡಿ ಹೆಚ್ಚು. ಅದನ್ನು ಮೊದಲು ಕ್ಲಿಯರ್ ಮಾಡಿಕೊಳ್ಳಿ.
ಮೂರನೆಯದಾಗಿ ಬ್ಯಾಂಕ್‌ಗಳು ಒಟ್ಟಾರೆ ಸಾಲದ ಮೊತ್ತವನ್ನು ಇಎಂಐ ಆಗಿ ಪರಿವರ್ತಿಸುವ ಸೌಲಭ್ಯ  ನೀಡುತ್ತವೆ. ಈ ಬಗ್ಗೆ ಪರಿಶೀಲಿಸಿ. ಇದರಿಂದ ನಿಮಗೆ ಅನುಕೂಲವಾಗಬಹುದು. ನಾಲ್ಕನೆಯದಾಗಿ ೨-೪ ಸಣ್ಣ ಪುಟ್ಟ ಸಾಲಗಳಿದ್ದರೆ ಅವುಗಳನ್ನು ಒಂದಾಗಿಸಿ ಮರು ಪಾವತಿಸಿ. ಐದನೆಯದಾಗಿ ನಿಮ್ಮ ಆದಾಯ ಹೆಚ್ಚಿದಂತೆ ಇಎಂಐ ಮೊತ್ತವನ್ನೂ ಹೆಚ್ಚಿಸಿ. ಇದರಿಂದ ಬೇಗ ಋಣಮುಕ್ತರಾಗಬಹುದು. ಯಾವುದೋ ಮೂಲದಿಂದ ಹೆಚ್ಚುವರಿ ಲಾಭ ಸಿಕ್ಕಿದರೆ ಸಾಲ ತೀರಿಸಲು ಬಳಸಿಕೊಳ್ಳಿ. ಆರನೆಯದಾಗಿ ಆದಾಯವನ್ನು ಹೆಚ್ಚಿಸಿ, ಖರ್ಚುಗಳನ್ನು ಕಡಿಮೆ ಮಾಡಿ. ಏಳನೆಯದಾಗಿ ವೃತ್ತಿಪರ ಹಣಕಾಸು ಸಲಹೆಗಾರರ ನೆರವು ಪಡೆಯಿರಿ. ಹಾಗಂತ ಪ್ರತಿ ಸಂದರ್ಭದಲ್ಲೂ ಇಎಂಐಯನ್ನು ಹೆಚ್ಚಿಸಲು ಸಾಧ್ಯವಾಗದೆ ಇರಬಹುದು. ಆದಾಯ ಕಡಿಮೆಯಾಗಿದ್ದಾಗ ಇಎಂಐ ಕಡಿಮೆಯಾಗಿದ್ದರೇ ಅನುಕೂಲವಾಗುತ್ತದೆ. ಹಾಗಿದ್ದಾಗ ಸಾಲದ ಅವಧಿಯನ್ನು ದೀರ್ಘವಾಗಿಸಬೇಕು. ಆಗ ಇಎಂಐ ಕಡಿಮೆಯಾಗುತ್ತದೆ. ವರಮಾನ ವೃದ್ಧಿಸಿದ ನಂತರ, ಇಎಂಐ ಮೊತ್ತವನ್ನು ಹೆಚ್ಚಿಸಿಕೊಳ್ಳಬಹುದು. ಒಟ್ಟಿನಲ್ಲಿ ಸಾಲಗಾರ ತನ್ನ ಅನುಕೂಲ-ಅನಾನುಕೂಲವನ್ನು ಪರಿಗಣಿಸಿ ಸೂಕ್ತ ನಿರ್ಣಯ ತೆಗೆದುಕೊಳ್ಳಬೇಕು. ಸಾಲ ಪಡೆಯುವುದಕ್ಕೆ ಮುನ್ನ ಬೇರೆ ಬೇರೆ ಬ್ಯಾಂಕ್‌ಗಳಲ್ಲಿ ದೊರೆಯುವ ಲೋನ್ ಪ್ರಾಡಕ್ಟ್‌ಗಳ ಬಗ್ಗೆ ಚರ್ಚಿಸಿ, ಮಾಹಿತಿಗಳನ್ನು ಕಲೆ ಹಾಕಿ ತುಲನೆ ಮಾಡಿರಿ. ಇದೆಲ್ಲವೂ ಚೌಕಾಶಿಯ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ.

ಗೃಹ ಸಾಲದ ನಿರ್ವಹಣೆ ಹೇಗೆ?

ಸ್ವಂತ ಸೂರು ಹೊಂದುವುದು ಎಲ್ಲರ ಕನಸು. ಈಗಾಗಲೇ ಮನೆ ಇರುವವರಿಗೆ ಎರಡನೇ ಮನೆಯ ಕನಸು. ಇದಕ್ಕಾಗಿ ಗೃಹ ಸಾಲ ಕೊಳ್ಳುವವರು ಅಧಿಕ. ಜೀವನದಲ್ಲಿ ಅತಿ ಹೆಚ್ಚು ವೆಚ್ಚವನ್ನು ಬಯಸುವ ಗುರಿ ಇದು. ಆದರೆ ಅಷ್ಟೇ ಮಹತ್ವದ್ದೂ ಹೌದು. ಇತ್ತೀಚಿನ ವರ್ಷಗಳಲ್ಲಿ ಮನೆ ಎನ್ನುವುದು ಅತ್ಯವಶ್ಯಕ ವಿಷಯವಾಗಿದೆ. ಹೋಮ್‌ಲೋನ್‌ಗಳು ಹತ್ತಾರು ವರ್ಷ ಮುಂದುವರಿಯುವುದರಿಂದ ಕೆಲವು ಮಾರ್ಗೋಪಾಯಗಳ ಮೂಲಕ ಇದರ ಹೊರೆಯನ್ನೂ ಇಳಿಸಬಹುದು!

ಗೃಹ ಸಾಲದ ಅವಧಿಯನ್ನು ಸಾಧ್ಯವಿರುವಷ್ಟು ಕಡಿಮೆ ಮಾಡಿ. ಸಾಲದ ಅವಧಿ ಕಡಿಮೆಯಾಗಿದ್ದಷ್ಟೂ ಅನುಕೂಲ ಹೆಚ್ಚು. ಮರು ಪಾವತಿ ಬೇಗೆ ಸಾಧ್ಯ. ಮುಖ್ಯವಾಗಿ ಅವಧಿ ಕಡಿಮೆಯಾದಷ್ಟೂ ಸಾಲದ ಪ್ರಿನ್ಸಿಪಲ್ ಮೊತ್ತ ಬೇಗ ಮರುಪಾವತಿಯಾಗುತ್ತದೆ. ಪ್ರಿನ್ಸಿಪಲ್ ಮೊತ್ತ ಬೇಗ ಕಡಿಮೆಯಾಗುವುದನ್ನು ಖಾತರಿಪಡಿಸಿಕೊಳ್ಳಿ. ಸಾಧ್ಯವಾದರೆ ಇಎಂಐ ಮೊತ್ತವನ್ನು ಹೆಚ್ಚಿಸಿಕೊಳ್ಳಿ. ಗೃಹ ಸಾಲದ ಡೌನ್‌ಪೇಮೆಂಟ್ ಮೊತ್ತವನ್ನು ಸಾಧ್ಯವಾದಷ್ಟು ಹೆಚ್ಚಿಸಿಕೊಳ್ಳಿ. ಇದರಿಂದ ಸಾಲದ ಪ್ರಿನ್ಸಿಪಲ್ ಮೊತ್ತ ಕಡಿಮೆಯಾಗುತ್ತದೆ. ಸಾಲದ ಹೊರೆ ಇಳಿಯುತ್ತದೆ. ಬೋನಸ್ ಅಥವಾ ಡಿವಿಡೆಂಡ್ ಸಿಕ್ಕಿದ ಸಂದರ್ಭದಲ್ಲಿ ಸಾಲ ಮರು ಪಾವತಿಗೆ ಅದನ್ನು ಬಳಸುವುದಕ್ಕೆ ಮರೆಯದಿರಿ.


ಟರ್ಮ್ ಇನ್ಷೂರೆನ್ಸ್‌ನ ರಕ್ಷಣೆ ಇರಲಿ:

ಟರ್ಮ್ ಇನ್ಷೂರೆನ್ಸ್ ಖರೀದಿಸುವ ಮೂಲಕ ನಿಮ್ಮೆಲ್ಲ ಸಾಲಗಳಿಗೆ ವಿಮೆಯ ರಕ್ಷಣೆ ಹೊಂದುವುದು ಸೂಕ್ತ. ಇಡೀ ಕುಟುಂಬಕ್ಕೆ ಇದು ನೆರವಾಗಬಲ್ಲುದು. ಕುಟುಂಬಕ್ಕೆ ಆಧಾರ ಸ್ತಂಭ ಎನ್ನಿಸಿದವರು ಅಕಸ್ಮಾತ್ ಕೊನೆಯುಸಿರೆಳೆದರೆ ಅವರ ಪತ್ನಿ, ಮಕ್ಕಳು, ಪೋಷಕರು ಅಥವಾ ಇತರ ಅವಲಂಬಿತರಿಗೆ ಆರ್ಥಿಕ ಸಂಕಷ್ಟ ಎದುರಾಗದಂತೆ ನೋಡಿಕೊಳ್ಳಲು ವಿಮೆಯ ರಕ್ಷಣೆ ಅಗತ್ಯ. ಸಾಮಾನ್ಯವಾಗಿ ಗೃಹ ಸಾಲದಂಥ ದೀರ್ಘಕಾಲೀನ ಸಾಲ ಖರೀದಿಯ ವೇಳೆ ಬ್ಯಾಂಕ್‌ಗಳು ಅಥವಾ ಹಣಕಾಸು ಸಂಸ್ಥೆಗಳು ವಿಮೆಯನ್ನು ಜತೆಗೆ ಪಡೆಯಲು ಸೂಚಿಸುತ್ತವೆ.
ಟರ್ಮ್ ಇನ್ಸೂರೆನ್ಸ್‌ಗಳ ಪ್ರಯೋಜನ ಏನೆಂದರೆ ಅತಿ ಕಡಿಮೆ ಪ್ರೀಮಿಯಂಗೆ ಅತಿ ಹೆಚ್ಚು ಕವರೇಜ್ ಹೊಂದಿರುತ್ತವೆ. ಇರುವ ವಿಮೆ ಉತ್ಪನ್ನಗಳಲ್ಲಿ ಇವು ಬಹಳ ಸರಳ ಮತ್ತು ಅಗ್ಗವಾಗಿರುತ್ತವೆ. ಇತರ ವಿಮೆ ಮತ್ತು ಹೂಡಿಕೆಯ ಯೋಜನೆಗೆ ಹೋಲಿಸಿದರೆ ಟರ್ಮ್ ಇನ್ಷೂರೆನ್ಸ್‌ಗೆ ಪ್ರೀಮಿಯಂ ಮೊತ್ತ ಅಲ್ಪ. ಎಲ್ಲಕ್ಕಿಂತ ಮುಖ್ಯವಾಗಿ ಇದು ನಿಮಗೆ ಮಾನಸಿಕ ನೆಮ್ಮದಿ ನೀಡುತ್ತದೆ. ನಿಮ್ಮ ಕುಟುಂಬದ ಆರ್ಥಿಕ ಭವಿಷ್ಯದ ಬಗ್ಗೆ ನಿಶ್ಚಿಂತರಾಗಿರಬಹುದು. ಟರ್ಮ್ ಇನ್ಷೂರೆನ್ಸ್ ಖರೀದಿಯ ಪ್ರಕ್ರಿಯೆ ತ್ವರಿತವಾಗಿ ಸಾಧ್ಯವಿದೆ. ಯಾವುದು ಉತ್ತಮ ಆಯ್ಕೆ ಎಂಬುದರ ಬಗ್ಗೆ ಆನ್‌ಲೈನ್ ತಾಣದಲ್ಲಿ ಪರಿಶೀಲಿಸಬಹುದು. ಕಾಗದಪತ್ರಗಳ ಆವಶ್ಯಕತೆ ಇವುಗಳಿಗೆ ಅತ್ಯಲ್ಪ.

ಜೀವನ ಶೈಲಿಯನ್ನು ಬದಲಿಸಿಕೊಳ್ಳಿ:
ದೈನಂದಿನ ಜೀವನ ಶೈಲಿಯಲ್ಲೂ ಕೆಲವು ಸಣ್ಣ ಪುಟ್ಟ ಬದಲಾವಣೆಗಳಿಂದ ಬೇಗನೆ ಋಣಮುಕ್ತರಾಗಬಹುದು! ಹಣಕಾಸು ಆರೋಗ್ಯಕ್ಕೂ ಲೈಫ್‌ಸ್ಟೈಲ್‌ಗೂ ನೇರ ಸಂಬಂಧ ಇದೆ ಎಂದರೆ ಅಚ್ಚರಿಯಾದೀತು. ಆದರೆ  ಅದು ಸತ್ಯ ಎನ್ನುತ್ತಾರೆ ಹಣಕಾಸು ಸಲಹೆಗಾರರು. ಇದು ಹೇಗೆ ಸಾಧ್ಯ? ಮೊದಲು ಕುಟುಂಬ ಸದಸ್ಯರ ಜತೆಗೆ ಈ ಸಂಬಂಧ ಚರ್ಚಿಸಬೇಕು. ಇದರಿಂದ ಹಲವು ಸಲಹೆಗಳು ಸಿಗಬಹುದು. ಯಾವೆಲ್ಲ ಖರ್ಚು ವೆಚ್ಚಗಳನ್ನು ನಿಲ್ಲಿಸಿ, ಹೊಂದಾಣಿಕೆ ಮಾಡಬಹುದು ಎಂಬ ಪಟ್ಟಿಯನ್ನು ತಯಾರಿಸಬೇಕು. ಅನಗತ್ಯ ಹಾಗೂ ಐಷಾರಾಮಿ ವೆಚ್ಚಗಳನ್ನು ಗುರುತಿಸಿ, ಕಡಿತಗೊಳಿಸುತ್ತಾ ಹೋದರೆ ಪ್ರಯೋಜನ ಸಿಗುವುದು ಖಚಿತ. ಸಿನಿಮಾ ವೀಕ್ಷಣೆಯನ್ನು ಕಡಿಮೆ ಮಾಡುವುದು, ಹೊರಗಡೆ ಹೋಟೆಲ್ ಊಟೋಪಚಾರಗಳನ್ನು ಕಡಿಮೆ ಮಾಡಬಹುದು. ಚಿನ್ನದ ಖರೀದಿಯನ್ನು ಮುಂದೂಡಿ, ಗೃಹ ಸಾಲದ ಹೊರೆ ಇಳಿಕೆಗೆ ವಿನಿಯೋಗಿಸಬಹುದು. ಹೊಸ ಕಾರಿನ ಬದಲಿಗೆ ಉತ್ತಮ ಕಂಡೀಶನ್‌ನಲ್ಲಿಒರುವ ಹಳೆಯ ಕಾರು ಕೊಳ್ಳಲು ನಿರ್ಧರಿಸಬಹುದು. ಅಥವಾ ಕಾರು ಖರೀದಿಯನ್ನು ನಿರ್ದಿಷ್ಟ ಅವಧಿಯ ತನಕ ಮುಂದೂಡಬಹುದು. ಸಾರ್ವಜನಿಕ ಸಾರಿಗೆಯನ್ನು ಹೆಚ್ಚು ಬಳಸಬಹುದು. ಈ ಎಲ್ಲ ಕ್ರಮಗಳಿಂದ ಸಾಲದ ಹೊರೆ ಇಳಿಸಬಹುದು.

ಸ್ಕಾಟ್ಲೆಂಡ್‌ನ ಚಿಂತಕ ಥಾಮಸ್ ಕಾರ್ಲೆ ಒಂದು ಮಾತು ಹೇಳುತ್ತಾರೆ-“ ಸಾಲವನ್ನು ಮರು ಪಾವತಿಸಲು ಎರಡು ವಿಧಾನಗಳಿವೆ. ಉದ್ಯಮಶೀಲತೆಯ ನೆರವಿನಿಂದ ಆದಾಯವನ್ನು ಹೆಚ್ಚಿಸುವುದು, ಸೋವಿ ಅಥವಾ ಮಿತವ್ಯಯಿ ಆಗುವುದು” ಸಾಲ ತೆಗೆದುಕೊಂಡ ಬಳಿಕ ಮಿತವ್ಯಯ ಅತ್ಯಂತ ನಿರ್ಣಾಯಕ.

ಅದರಲ್ಲೂ ಗೃಹ ಸಾಲದಂಥ ದೊಡ್ಡ ಹಾಗೂ ದೀರ್ಘ ಸಾಲಗಳಿದ್ದಾಗ  ಜಾಗರೂಕತೆಯಿಂದ  ವೆಚ್ಚ ಮಾಡಬೇಕು.  ನಿಮ್ಮೆಲ್ಲ ಸಾಲಗಳ ಮೇಲೊಂದು ಕಣ್ಣಿಟ್ಟಿರಬೇಕು.  ಸಾಲವನ್ನು ಸಕಾಲಕ್ಕೆ ಮರು ಪಾವತಿಸಲು ಮರೆಯಬಾರದು. ಒಂದು ವೇಳೆ ಅಗತ್ಯವಿದ್ದರೆ ಚಾರ್ಟರ್ಡ್ ಅಕೌಂಟೆಂಟ್‌ಗಳು ಅಥವಾ ಹಣಕಾಸು ಸಲಹೆಗಾರರ ಬಳಿ ಉಪಯುಕ್ತ ಸಲಹೆಗಳನ್ನು ಪಡೆಯಿರಿ. ಯಾವ ಕಾರಣಕ್ಕೂ ದೃತಿಗೆಡಬಾರದು. ಹಲವಾರು ನ್ಯಾಯಬದ್ಧ ವಿಧಾನಗಳ ಮೂಲಕವೇ ಸಾಲವನ್ನು ಅಚ್ಚುಕಟ್ಟಾಗಿ ನಿರ್ವಹಿಸಬಹುದು.ಬ್ಯಾಂಕ್ ಜತೆಗೆ ನಿಮ್ಮ ವ್ಯಾವಹಾರಿಕ ಸಂಬಂಧ ಉತ್ತಮವಾಗಿದ್ದರೆ, ಹಳೆಯ ಸಾಲಗಳನ್ನು ಸಮರ್ಪಕವಾಗಿ ಮರು ಪಾವತಿಸಿದ್ದರೆ, ಕ್ರೆಡಿಟ್ ಸ್ಕೋರ್ ಸುಧಾರಿಸ್ದಿರೆ, ಬ್ಯಾಂಕ್ ಜತೆ ಮಾತುಕತೆ ನಡೆಸಿ, ಕಡಿಮೆ ಬಡ್ಡಿ ದರ ಲಭ್ಯವಾಗುವಂತೆ ನೋಡಿಕೊಳ್ಳಬಹುದು. ಬಡ್ಡಿ ದರಗಳನ್ನು ಕಡಿಮೆ ಮಾಡುವ ಅವಕಾಶಗಳ ಬಗ್ಗೆ ನೇರವಾಗಿ ಬ್ಯಾಂಕ್‌ಗೆ ತೆರಳಿ ವಿಚಾರಿಸಬಹುದು. ಅದರಲ್ಲೇನೂ ತಪ್ಪಿರುವುದಿಲ್ಲ. ಬ್ಯಾಂಕಿನ ನೀತಿ ನಿಯಮಗಳಿಗೆ ಅನುಗುಣವಾಗಿ ಲಭ್ಯವಿರುವ ಅವಕಾಶಗಳ ಬಗ್ಗೆ ಚರ್ಚಿಸಬಹುದು.

ಒಟ್ಟಿನಲ್ಲಿ ಸಾಲ ಪಡೆದು ಸುಗಮವಾಗಿ ಮರು ಪಾವತಿಸಿ, ಗುರಿ ಸಾಧಿಸುವುದು ಒಂದು ಅದ್ಭುತ ಕಲೆ. ಈ ಕಲೆಯಲ್ಲಿ ಕರಗತವಾಗುವುದು ಮುಖ್ಯ.
.
-ಕೇಶವಪ್ರಸಾದ್ ಬಿ. ಕಿದೂರು
,
.

1 Response

  1. Shankari Sharma says:

    ಸಾಲದ ಬಗ್ಗೆ ಪ್ರಬುದ್ಧ ಲೇಖನ

Leave a Reply to Shankari Sharma Cancel reply

 Click this button or press Ctrl+G to toggle between Kannada and English

Your email address will not be published.

Follow

Get every new post on this blog delivered to your Inbox.

Join other followers: