ಚುನಾವಣೆಯ ಅಂಗಳದಲ್ಲಿ..

Spread the love
Share Button

ಮತ್ತೊಂದು ಮಹಾಚುನಾವಣೆಯ ಹೊಸ್ತಿಲಿನಲ್ಲಿದೆ ಭಾರತ. ಜಾಗತೀಕರಣ, ಉದಾರೀಕರಣ ಇತ್ಯಾದಿ ಗ್ಲೋಬಲ್ ಪ್ರಭಾವಗಳನ್ನು ಅರಗಿಸಿಕೊಳ್ಳುತ್ತ, ಸಾಧ್ಯವಾದರೆ ಅವುಗಳಿಂದ ಲಾಭ ಪಡೆಯುತ್ತ, ಬೆಲೆ ಏರಿಕೆ ಬಗ್ಗೆ ಕಳವಳ ವ್ಯಕ್ತ ಪಡಿಸುತ್ತ, ಹೀಗೆ ಸಾಗಿದೆ ಜನ ಸಾಮಾನ್ಯರ ಬದುಕು. ಬೇಳೆಕಾಳಿನ ದರದಿಂದ ಹಿಡಿದು , ಆಟೋ, ವಿಮಾನ ಯಾನದ ವರೆಗೆ ದಿನೇ ದಿನೇ ದುಬಾರಿಯಾಗುತ್ತಿರುವ, ಅದೇ ಹೊತ್ತಿಗೆ ಮಾಹಿತಿ ತಂತ್ರಜ್ಞಾನ ಸ್ಫೋಟದಿಂದಾಗಿ, ಮಾಧ್ಯಮಗಳು ಹುಟ್ಟುಹಾಕುವ ಅರಿವಿನಿಂದಾಗಿ, ವಿಶಿಷ್ಟವೂ ವಿನೂತನವೂ ಆದ ಚಾರಿತ್ರಿಕ ಸಂದರ್ಭದಲ್ಲಿ ನಾವಿದ್ದೇವೆ.

 

ನಮ್ಮ ದೇಶದ ಸಾಂಸ್ಕೃತಿಕ ಸಾಮಾಜಿಕ ಕಟ್ಟಳೆಗಳನ್ನನುಸರಿಸಿ ರಾಜಕೀಯದಲ್ಲಿ ಮಹಿಳಾ ಪ್ರತಿನಿಧೀಕರಣ ಬಹಳ ಕಡಿಮೆ. ಇತ್ತೀಚಿನ ವರದಿಯೊಂದರಂತೆ ಸಂಸತ್ತಿನಲ್ಲಿ ಮಹಿಳಾ ಪ್ರಾತಿನಿಧ್ಯದ ವಿಷಯದಲ್ಲಿ, ಭಾರತಕ್ಕೆ ಜಗತ್ತಿನ 185 ದೇಶಗಳಲ್ಲಿ 111 ನೆಯ ಸ್ಥಾನವಂತೆ!ಇನ್ನು ಗೃಹಕೃತ್ಯದಲ್ಲಿ ಸಹಾಯ ಮಾಡದೇ ಇರುವವರಲ್ಲಿ ಭಾರತದ ಪುರುಷರು ನಂಬರ್ 1 ಸ್ಥಾನದಲ್ಲಿದ್ದಾರಂತೆ!.

ಪ್ರಾಮಾಣಿಕವಾಗಿ ಹೇಳುವುದಿದ್ದರೆ ಮಹಿಳೆಯರಿಗೆ ರಾಜಕೀಯ ಪ್ರಜ್ಞೆ ಇದೆಯೇ ಎನ್ನುವುದೇ ಅನುಮಾನ (ನ್ಯೂಸ್ ಪೇಪರ್ ಓದುವುದೇ ಎಲ್ಲಾ ಕೆಲಸಕಾರ್ಯಗಳೆಲ್ಲ ಮುಗಿದು, ವಿರಾಮ ಸಿಕ್ಕು, ಸೀರಿಯಲ್ ಗಳನ್ನು ನೋಡಿ ಆದ ಮೇಲೆ). ಹಾಗಿದ್ದರೂ ತೊಟ್ಟಿಲು ತೂಗುವ ಕೈ ದೇಶವನ್ನಾಳಬಲ್ಲುದು ಎಂದು ಸಾಧಿಸಿ ತೋರಿಸಿದ ಮಹಿಳೆಯರು ಅನೇಕರು. ಇಲ್ಲಿ ಗಮನಿಸಬೇಕಾದ ಅಂಶವೇನೆಂದರೆ, ಸುಚೇತಾ ಕೃಪಲಾನಿ, ವಿಜಯಲಕ್ಷ್ಮಿ ಪಂಡಿತ್, ಇಂದಿರಾ ಗಾಂಧಿ, ಸೋನಿಯಾ ಗಾಂಧಿ, ವಸುಂಧರಾ ರಾಜೇ ಸಿಂಧ್ಯಾ, ಸುಷ್ಮಾ ಸ್ವರಾಜ್, ಬೃಂದಾ ಕಾರಟ್ ಹೀಗೆ ಎಲ್ಲರೂ , ಪ್ರತಿಷ್ಠಿತ, ಪ್ರಭಾವಿ ಸಿರಿವಂತ ವರ್ಗಕ್ಕೆ ಸೇರಿದವರೆನ್ನುವುದು. ಈ  ನಿಟ್ಟಿನಲ್ಲಿ ಗ್ರಾಮ ಪಂಚಾಯತುಗಳು ತಳಮಟ್ಟದ ಸಬಲೀಕರಣದತ್ತ ಉತ್ತಮ ಹೆಜ್ಜೆ.

ಸ್ವತಂತ್ರ ಭಾರತದ ಜ್ವಲಂತ ಸಮಸ್ಯೆಗಳು ನೂರಾರು, ಸಾವಿರಾರು. ಜಾತಿ ಪದ್ಧತಿ, ದಲಿತರ ಶೋಷಣೆ, ಮಹಿಳೆಯರ ಮೇಲಿನ ದೌರ್ಜನ್ಯ, ಹಣದುಬ್ಬರ, ಭ್ರಷ್ಟಾಚಾರ, ಬಡತನ, ಹಸಿವು, ನಿರಕ್ಷರತೆ   ಹೀಗೆ ಕಳೆದ ಅರುವತ್ತೈದು ವರ್ಷಗಳಿಂದ ಕೇಳುತ್ತಲೇ ಬಂದಿರುವ ಸಮಸ್ಯೆಗಳೊಂದಿಗೆ ಸೇರಿಕೊಂಡ ಸೈಬರ್ ಕ್ರೈಮ್, ಪರಿಸರ ವಿರೋಧಿ ಧೋರಣೆಗಳು, ನವವಸಾಹತುಶಾಹಿ ಉದ್ಯಮಗಳು ಇತ್ಯಾದಿ. ರಾಷ್ಟ್ರಮಟ್ಟದಲ್ಲಿ ಇಂತಹ ಘಟನೆಗಳಾದರೆ, ಸ್ಥಳೀಯ ಮಟ್ಟದಲ್ಲಿ ಪೋಲೀಸ್ ದೌರ್ಜನ್ಯ, ರಾಜಕೀಯ ಬಣಗಳೊಳಗಣ ವೈಷಮ್ಯ, ಮತೀಯ ಗಲಭೆಗಳು… ಹೀಗೆ.

ಬೆಲೆ ಏರಿಕೆ ಎಷ್ಟು ಇದೆ ಎಂದರೆ, ತಮ್ಮ ಪಾಡಿಗೆ ತಾವು ನೆಮ್ಮದಿಯಾಗಿದ್ದ ಗೃಹಿಣಿಯರು ಕೂಡ ಸಂಸಾರ ತೂಗಿಸಲು ಕಷ್ಟಪಡುತ್ತಿದ್ದಾರೆ. ಇನ್ನು ಕೋಮುವಾದ, ಭ್ರಷ್ಟಾಚಾರಗಳಿಗಿಂತಲೂ ಗಂಭೀರ ಸಮಸ್ಯೆ ಮಹಿಳೆಯನ್ನೊಂದು ಸಾಂಸ್ಕೃತಿಕ ಪ್ರತೀಕದಂತೆ, ಪರಂಪರೆಯನ್ನು ಉಳಿಸಿಕೊಂದು ಹೋಗುವ ಮಾಧ್ಯಮದಂತೆ ಕಾಣುವುದು. ದೇಶ ವಿಭಜನೆಯ ಸಂದರ್ಭದಿಂದ ಹಿಡಿದು ಈಗಿನವರೆಗೂ ಮಹಿಳೆಯನ್ನೊಂದು ಭೋಗವಸ್ತುವಿನಂತೆ, ಯಜಮಾನಿಕೆ ಸ್ಥಾಪಿಸುವ ಸೊತ್ತಿನಂತೆ ಪರಿಗಣಿಸಲ್ಪಡುತ್ತಿದ್ದಾಳೆ. ಮಹಿಳೆಯರ ಸುರಕ್ಷೆ, ಉನ್ನತಿ, ಆರ್ಥಿಕ ಸುಭದ್ರತೆಯ ಬಗ್ಗೆ ಬೇರೆ ಬೇರೆ ಚುನಾವಣಾ ಪ್ರಣಾಳಿಕೆಗಳು ಹೇಳುವ ವಿಚಾರಗಳು ಜಾರಿಗೆ ಬಂದಲ್ಲಿ ನಾಗರಿಕರ ಜೀವನ ಹಗುರವಾಗಬಹುದು.

ಜವಾಬ್ದಾರಿಯರಿತು ಮತ ಚಲಾಯಿಸುವುದು ನಮ್ಮ ಕರ್ತವ್ಯ. 

– ಜಯಶ್ರೀ .ಬಿ. ಕದ್ರಿ.

3 Responses

  1. Ghouse says:

    Very nice artilce written on the right time. Absolutely people should understand their responsibility to select a right candidate, stable and reliable government by putting their valuable votes.

  2. Ashok Mijar says:

    ಸಣ್ಣ ಲೇಖನವಾದರೂ ಮತದಾನದ ಬಗೆಗಿನ ವಿಶಾಲ ಮನೋಭಾವ ಇಷ್ಟವಾಯ್ತು.

  3. Krishnaveni Kidoor says:

    ಚೆನ್ನಾಗಿದೆ.

Leave a Reply

 Click this button or press Ctrl+G to toggle between Kannada and English

Your email address will not be published.

Follow

Get every new post on this blog delivered to your Inbox.

Join other followers: