ಶುನಕ ಯೋಗಾಸನಗಳೂ ಆರೋಗ್ಯಭಾಗ್ಯವೂ..

Spread the love
Share Button

ಶ್ರುತಿ ಶರ್ಮಾ, ಬೆಂಗಳೂರು.

ಬೆಳಗಿನ ಚುಮು ಚುಮು ಛಳಿಯಲ್ಲಿ ಇಂದು ವಾಕ್ ಹೋಗುತ್ತಿದ್ದಾಗ ಬೀದಿ ನಾಯಿಯೊಂದು ಸೊಂಟವನ್ನೆತ್ತಿ ಅಧೋಮುಖವಾಗಿ ನಿಂತು ಶರೀರವನ್ನು ಸೆಟೆಸಿ ಕೆಲವು ನಿಮಿಷಗಳ ಕಾಲ ನಿಂತಿದ್ದು ನೋಡಿದೆ. ಇದು ದಿನನಿತ್ಯದ ದೃಶ್ಯವಾಗಿದ್ದರೂ ಸ್ವಲ್ಪ ಹೆಚ್ಚೇ ಹೊತ್ತು ಸ್ಟ್ರೆಚ್ ಮಾಡಿದ್ದ ನಾಯಿ ಗಮನ ಸೆಳೆಯಿತು. ಬಳಿಕ ಪರ್ಯಾಯವಾಗಿ ಬೆನ್ನಿನ ಭಾಗವನ್ನು ಬಗ್ಗಿಸಿ ಕಾಲುಗಳನ್ನು ಹಿಂದಕ್ಕೆ ಸೆಟೆಸಿ ಊರ್ಧ್ವ ಮುಖವಾಗಿ ಶರೀರವನ್ನು ಬಾಗಿಸಿ ಕೆಲ ಸಮಯ ನಿಂತು ನಡುಗಿಸುವ ಛಳಿಗೆ ಸಡ್ಡು ಹೊಡೆದು ನಾಯಿ ಓಡತೊಡಗಿತು.

ಛಳಿಯ ಮಾತಿರಲಿ, ದಷ್ಟಪುಷ್ಟವಾಗಿದ್ದರೂ ನಾಯಿಯ ಹೊಟ್ಟೆ ಒಂದಿಷ್ಟೂ ಕೊಬ್ಬಿನಂಶವಿಲ್ಲದೆ ಸಮವಾಗಿತ್ತು!

ಅಧೋಮುಖ, ಊರ್ಧ್ವಮುಖ ಶ್ವಾನಾಸನಗಳಿಗೆ ಯೋಗಾಸನ ಅಭ್ಯಾಸದಲ್ಲಿ ಬಹಳವೇ ಪ್ರಾಮುಖ್ಯವಿದೆ. ಕಾಲು, ಕೈಗಳನ್ನು ಶಕ್ತಿಯುತಗೊಳಿಸುವುದರೊಂದಿಗೆ, ಜೀರ್ಣಾಂಗಗಳನ್ನು ಆರೋಗ್ಯವಾಗಿಟ್ಟು, ಅಮಿತ ಕೊಬ್ಬಿನಂಶವನ್ನು ಕರಗಿಸುವಲ್ಲೂ ಇವು ಸಹಕಾರಿ.


“ನಾಯಿಗಳ ಹೊಟ್ಟೆ ಮನುಷ್ಯರಂತೆ ಗುಂಡಗೆ ಕೊಬ್ಬಿನಿಂದ ಕೂಡಿ ಉಬ್ಬಿದ್ದು ನೋಡೇ ಇಲ್ಲ” ಎಂಬ ನನ್ನ ಮಾತಿಗೆ “ನಾನು ನೋಡಿದ್ದೇನೆ”, ಎಂದು ಪತಿಯ ಉತ್ತರ. “ಮನುಷ್ಯರು ಅತಿಯಾಗಿ ಪ್ಯಾಕೇಜ್ಡ್ ಆಹಾರಗಳನ್ನು ಕೊಟ್ಟು ಮನೆಯೊಳಗೆ ಕೂಡಿಟ್ಟು ಮುದ್ದು ಮಾಡಿ ಸಾಕಿದ ನಾಯಿಗಳಲ್ಲಿ ಕೆಲವಕ್ಕೆ ಮನುಷ್ಯರಂತೆ ಸ್ಥೂಲಕಾಯತೆಯಿರುತ್ತದೆ!”. ನಿಜ! ನಾನೂ ಇಂತಹವನ್ನು ನೋಡಿದ್ದ ನೆನಪಾಯಿತು.

ನಾಯಿಗಳಲ್ಲಿ ಸ್ಥೂಲಕಾಯತೆ ಕೂಡಾ ಒಂದು ಸಮಸ್ಯೆ. ಹೆಚ್ಚಾಗಿ ಮಧ್ಯವಯಸ್ಕ ನಾಯಿಗಳಲ್ಲಿ, ಅಂದರೆ ಐದರಿಂದ ಹತ್ತು ವರ್ಷ ಪ್ರಾಯದ ನಾಯಿಗಳಲ್ಲಿ ಕಂಡುಬರುವ ಬೊಜ್ಜಿನ ಸಮಸ್ಯೆ ಕೆಲವೊಮ್ಮೆ ಇತರ ದೈಹಿಕ ಆರೋಗ್ಯ ಸಂಬಂಧಿತ ಸಮಸ್ಯೆಗಳಿಂದಲೂ ಬರಬಹುದು. ಇದಕ್ಕೆ ಹಲವು ಕಾರಣವಾಗಳಿರಬಹುದಾದರೂ ಹೆಚ್ಚಾಗಿ ನಾಯಿಯ ದೈಹಿಕ ಚಟುವಟಿಕೆ ಯಾವಾಗ ಸೇವಿಸಿದ ಕ್ಯಾಲೋರಿಗಳನ್ನು ಕರಗಿಸಲು ಸಾಕಾಗುವುದಿಲ್ಲವೋ, ಆಗ ಶರೀರದಲ್ಲಿ ಬೊಜ್ಜು ಶೇಖರಣೆಯಾಗುವ ಸಾಧ್ಯತೆಯಿರುತ್ತದೆ.

ಅಮಿತ ಕ್ಯಾಲೋರಿಯುಕ್ತ ಆಹಾರ, ಆಗಾಗ ಬದಲಾಯಿಸುವ ಆಹಾರಪದ್ಧತಿ, ಅತಿಯಾಗಿ ತಿನ್ನಿಸುವಿಕೆ ಇತ್ಯಾದಿಗಳಿಂದಾಗಿ ನಾಯಿಯು ಈ ಸಮಸ್ಯೆಗೆ ತುತ್ತಾಗಬಹುದು. ಪಶುವೈದ್ಯ ತಜ್ನರು ಇದಕ್ಕಾಗಿ ಹೆಚ್ಚು ನಾರಿನಂಶ, ಪ್ರೋಟೀನ್ ಯುಕ್ತ, ಆದರೆ ಕಡಿಮೆ ಕೊಬ್ಬಿನಂಶವಿರುವ ಆಹಾರಗಳು, ವೇಳಾಪಟ್ಟಿಯ ಜೊತೆ ವ್ಯಾಯಾಮಗಳ ಸಲಹೆಯನ್ನು ಕೊಡಬಲ್ಲರಾದರೂ ಕೆಲವು ಬಾರಿ ಅತಿಯಾದ ಬೊಜ್ಜು ನಾಯಿಗಳನ್ನು ವ್ಯಾಯಾಮ, ವಾಕಿಂಗ್ ಕೂಡ ಮಾಡಲು ಅಶಕ್ಯವಾಗಿಸುವ ಸಾಧ್ಯತೆಯಿರುತ್ತದೆ.

ಸ್ವತಃ ತಮ್ಮ ಶರೀರದ ಆರೋಗ್ಯ ಕಾಯ್ದಿಡುವ ವ್ಯಾಯಾಮಗಳನ್ನು ಬೆಳೆಯುತ್ತಲೇ ಅರಿಯುವ ಪ್ರಾಣಿಗಳಿಗೆ ಮನುಷ್ಯರು ಅನಾರೋಗ್ಯಕರ ಆಹಾರಗಳನ್ನು ಕೊಟ್ಟು ಅವುಗಳ ಅನಾರೋಗ್ಯಕ್ಕೆ ಕಾರಣವಾಗುವುದು ಅವುಗಳ ಶರೀರದಲ್ಲಿ ಅಸಹಜತೆಯಿಂದ ಕೂಡಿದ ಏರುಪೇರುಗಳಿಗೆ ಕಾರಣವಾಗಿತ್ತದೆ. ಒಂದೆಡೆ ಪ್ರಾಚೀನ ಯೋಗಶಾಸ್ತ್ರದ ಆಸನಾಭ್ಯಾಸ ಪ್ರಕ್ರಿಯೆಯಲ್ಲಿ ನಾಯಿ, ಬೆಕ್ಕು ಇತ್ಯಾದಿ ಪ್ರಾಣಿಗಳ ಉಸಿರಾಟ, ಸ್ಟ್ರೆಚ್ ಇತ್ಯಾದಿಗಳನ್ನು ಗಮನಿಸಿ ಅಳವಡಿಸಿ ಮನುಷ್ಯರು ಅಭ್ಯಸಿಸುವಾಗ ಇನ್ನೊಂದೆಡೆ ಒಂದಷ್ಟು ಸಾಕು ಪ್ರಾಣಿಗಳು ಅನೈಸರ್ಗಿಕ, ಅನಿಯಮಿತ ಆಹಾರದ ಸೇವನೆ, ದೈಹಿಕ ಚಟುವಟಿಕೆಯ ಕೊರತೆಯಿಂದ ಅನಾರೋಗ್ಯಕ್ಕೆ ತುತ್ತಾಗುವುದು ವಿಷಾದಕರ. ಹಿತಮಿತವಾದ ಪೌಷ್ಟಿಕ ಆಹಾರ, ವ್ಯಾಯಾಮಪದ್ಧತಿ ಸಾಕುಪ್ರಾಣಿಗಳನ್ನು ಸೇರಿದಂತೆ ಮನೆಯ ಸದಸ್ಯರ ಆರೋಗ್ಯಕ್ಕೂ ಆಗೆಯೇ ಮಾನಸಿಕ ನೆಮ್ಮದಿಗೂ ಸಹಕಾರಿ.

– ಶ್ರುತಿ ಶರ್ಮಾ, ಬೆಂಗಳೂರು.

3 Responses

  1. Nayana Bajakudlu says:

    ಚೆನ್ನಾಗಿದೆ, ಕಣ್ಣ ಮುಂದೆಯೇ ಇದ್ದರು ಇಷ್ಟರವರೆಗೆ ಗಮನಿಸಿರದಂತಹ ವಿಷಯ

  2. Shankari Sharma says:

    ಪ್ರಕೃತಿದತ್ತ ಯೋಗಾಸನ ..ಬರಹ ಚೆನ್ನಾಗಿದೆ .

  3. Pallavi Bhat says:

    ನಿಜ. ಪ್ರದರ್ಶನಕ್ಕೆಂದೇ ಸಾಕುವ ಒಂದಷ್ಟು ನಾಯಿಗಳನ್ನು ನಾನೂ ನೋಡಿದ್ದೇನೆ. ಪೆಡಿಗ್ರಿ ಪ್ಯಾಕೆಟುಗಳನ್ನು ಖಾಲಿ ಮಾಡುವುದಷ್ಟೇ ಪ್ರಧಾನ ಕೆಲಸ. ಶವನಾಸನಗಳೇನೆಂದೂ ಆ ಶ್ವಾನಗಳಿಗೆ ತಿಳಿದಂತಿಲ್ಲ. 😀

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: