ಶತಶೃಂಗ ಬೆಟ್ಟ- ಅಂತರಗಂಗೆ -ಭಾಗ 1

Spread the love
Share Button

ನೀವು ಸ್ವಲ್ಪಮಟ್ಟಿಗೆ ಸಾಹಸ ಪ್ರಿಯರೆ? ವಾರಾಂತ್ಯದ  ಒಂದೆರಡು ದಿನಗಳ ವಿರಾಮವಿದೆಯೆ?   ಸಣ್ಣಪುಟ್ಟ ಅಡಚಣೆಗಳಿಗೆ ಹೊಂದಾಣಿಕೆ ಮಾಡಿಕೊಂಡು, ತುಸು ಕಷ್ಟ ಎನಿಸಿದರೂ ಗುಡ್ಡಬೆಟ್ಟಗಳಿಗೆ ಚಾರಣ ಮಾಡಿ, ಬಂಡೆಗಳನ್ನೇರಿ,  ನಿಸರ್ಗ ನಿರ್ಮಿತ ಗವಿಗಳ ಒಳಹೊಕ್ಕು,   ಪ್ರಕೃತಿಯೊಂದಿಗೆ   ಸಮಯ ಕಳೆಯಲು ಆಸಕ್ತಿ ಇದೆಯೆ? ಹಾಗಿದ್ದರೆ, ಬೆಂಗಳೂರಿನಿಂದ  ಸುಮಾರು 70  ಕಿ.ಮೀ ದೂರದಲ್ಲಿರುವ  ಕೋಲಾರದ ಶತಶೃಂಗ ಬೆಟ್ಟಕ್ಕೆ ಹೋಗಬಹುದು.

ಡಿಸೆಂಬರ್  23, 2018 ರಂದು  ರಾತ್ರಿ, ನಲುವತ್ತು ಜನರಿದ್ದ ನಮ್ಮ ತಂಡವು, ಶ್ರೀ ಪರಶಿವಮೂರ್ತಿ ಮತ್ತು ಶ್ರೀ ಆಶಿಶ್ ಕುಮಾರ್ ಅವರ ನೇತೃತ್ವದಲ್ಲಿ, ಮೈಸೂರಿನ ವಾರ್ತಾಭವನದ ಬಳಿ ಬಸ್ಸನ್ನೇರಿ ಕೋಲಾರದೆಡೆಗೆ ಹೊರಟಾಗ ಮಧ್ಯರಾತ್ರಿಯ ಸಮಯ.  ಕತ್ತಲನ್ನು ಸೀಳುತ್ತಾ ಬಸ್ಸು ಹೊರಟಿತು, ಡಿಸೆಂಬರ್ ನ ಚಳಿಗೆ ಸ್ವೆಟರ್ , ಶಾಲುಗಳಿಂದ ಶೋಭಿತರಾಗಿ ಮುದುರಿ ಕುಳಿತಿದ್ದ ನಮಗೆ ನಿದ್ದೆಯ ಜೊಂಪು. ವೇಗವಾಗಿ ಸಾಗುತ್ತಿದ್ದ ಬಸ್ಸು  ಬೆಂಗಳೂರು ಮಾರ್ಗವಾಗಿ ಸಾಗುತ್ತಾ,  ಕೋಲಾರ ಪಟ್ಟಣವನ್ನು ದಾಟಿ ‘ ತೇರಹಳ್ಳಿ’ ಎಂಬ ಪುಟ್ಟ ಹಳ್ಳಿಯ ಸರಕಾರಿ ಶಾಲೆಯೆದುರು ನಿಂತಾಗ ಮುಂಜಾನೆ ನಾಲ್ಕುವರೆ ಗಂಟೆ. ಆ ಸಮಯದಲ್ಲಿಯೂ, ಎಚ್ಚರವಿದ್ದ ಸ್ಥಳೀಯ ಪುಟ್ಟ ಬಾಲಕನು  ಗುಲಾಬಿ ಹೂ ಕೊಟ್ಟು  ನಮ್ಮನ್ನು ಸ್ವಾಗತಿಸಿದ. ಕೋಲಾರ ಯೂಥ್ ಹಾಸ್ಟೆಲ್ಸ್ ಅಸೋಸಿಯೇಷನ್ ಘಟಕದ ಅಧ್ಯಕ್ಷ ಶ್ರೀ ಈಶ್ವರ್ ಮತ್ತು ತಂಡದವರು ನಮ್ಮನ್ನು ಸ್ವಾಗತಿಸಿ, ಕಾಫಿ ಕೊಟ್ಟು, ಸ್ವಲ್ಪ ವಿರಮಿಸಿ ಎಂದು ಆದೇಶಿಸಿದರು. ಇದ್ದ ಎರಡು ಕ್ಲಾಸ್ ರೂಮ್ ಗಳಲ್ಲಿ ಪುರುಷರು ಮತ್ತು ಮಹಿಳೆಯರು ಜಮಖಾನ , ಬೆಡ್ ಶೀಟ್ ಹಾಕಿ ಸ್ವಲ್ಪ ಸಮಯ ನಿದ್ರಿಸಿದೆವು. ಬೆಳಗಾಗುತ್ತಿದ್ದಂತೆ ಒಬ್ಬೊಬ್ಬರಾಗಿ, ಚಾರಣಕ್ಕೆ ಹೊರಡಲು ಸಿದ್ಧರಾಗತೊಡಗಿದೆವು.  ಇಡ್ಲಿ, ವಡೆ, ಉಪ್ಪಿಟ್ಟು, ಕೇಸರಿಭಾತ್ ಇದ್ದ ಪುಷ್ಕಳ ಉಪಾಹಾರವನ್ನು ಸೇವಿಸಿ,  ಪರಸ್ಪರ ಪರಿಚಯ ಮಾಡಿಕೊಂಡು ಹೊರಟೆವು.

ನಮ್ಮ ತಂಡದಲ್ಲಿ 5 ವರುಷದ ಮಗುವಿನಿಂದ ಹಿಡಿದು  75 ರ  ಹಿರಿಯನಾಗರಿಕರೂ ಇದ್ದರು. ಪ್ರಥಮ ಬಾರಿಗೆ  ಚಾರಣ ಮಾಡಲು ಬಂದ ಉತ್ಸಾಹಿಗಳ ಜೊತೆಗೆ  ಹಲವಾರು ಬಾರಿ ಸ್ಥಳೀಯ ಗುಡ್ಡಬೆಟ್ಟಗಳಲ್ಲಿ , ಹಿಮಾಲಯದ ಪರ್ವತ ಶ್ರೇಣಿಗಳಲ್ಲಿ ನಡೆದಾಡಿದ ಅನುಭವ ಚಾರಣಿಗರೂ ಇದ್ದರು.  ಕಾರ್ಯಕ್ರಮದ ಆಯೋಜಕರು ಮತ್ತು ಕೋಲಾರ  ಘಟಕದ ಅಧ್ಯಕ್ಷರು  ನಮಗೆ ಆ ದಿನದ ಚಾರಣದ ಬಗ್ಗೆ ಮಾಹಿತಿ ಕೊಡುತ್ತಾ, ಚಿರತೆಗಳು ಓಡಾಡುವ ಬೆಟ್ಟವಿದು, ಎಲ್ಲರೂ ಮಾರ್ಗದರ್ಶಕರ ಜೊತೆಗೆ ಒಂದೇ ಗುಂಪಾಗಿ  ನಡೆಯಿರಿ, ಗುಂಪಿನಿಂದ ಬೇರೆಯಾಗಿ ಹೋಗಲೇ ಬಾರದು, ಇಲ್ಲಿ ಸ್ಪಷ್ಟವಾದ ಕಾಲುದಾರಿಗಳಿಲ್ಲ, ಬಂಡೆಗಳನ್ನು ಹತ್ತಬೇಕು, ಗವಿಗಳ ಮೂಲಕ ಹೋಗಲಿದೆ, ಮುಳ್ಳುಕಂಟಿಗಳನ್ನು ಸವರಿಕೊಂಡು ದಾರಿ ಮಾಡಿಕೊಂಡು ಹೋಗಬೇಕಾಗುತ್ತದೆ, ಬೆನ್ನಿಗೆ ಹಾಕುವ ಬ್ಯಾಗ್ ನಲ್ಲಿ ಕುಡಿಯಲು ನೀರನ್ನು ಮರೆಯದೆ ಒಯ್ಯಿರಿ, ‘ ಇತ್ಯಾದಿ ಎಚ್ಚರಿಸಿದರು.

ಪ್ರಶಾಂತವಾದ ತಂಪಾದ ವಾತಾವರಣದಲ್ಲಿ, ಮಾರ್ಗದರ್ಶಕರ ಜೊತೆಯಲ್ಲಿ ಹೆಜ್ಜೆ ಹಾಕುತ್ತಾ  ಶತಶೃಂಗ ಬೆಟ್ಟದ ಕಡೆಗೆ ನಡೆಯಲಾರಂಭಿಸಿದೆವು. ಮುಂದೆ ಮಾರ್ಗವೇ  ಇರಲಿಲ್ಲ, ಅಸ್ಪಷ್ಟ ಕಾಲುದಾರಿ ಮತ್ತು ಚಿಕ್ಕ ದೊಡ್ಡ ಗಾತ್ರದ ಸಾವಿರಾರು ಬಂಡೆಗಳ ಸಾಮ್ರಾಜ್ಯ.  ಬೆಳೆದಿದ್ದ ಒಣಹುಲ್ಲು ಮತ್ತು ಮುಳ್ಳುಕಂಟಿಗಳನ್ನು ಮಚ್ಚಿನಲ್ಲಿ ಸವರುತ್ತಾ ಒಬ್ಬರು ಮಾರ್ಗದರ್ಶಕರು ಮುಂದೆ ಹೋಗುತ್ತಿದ್ದರು. ಸಾಲಾಗಿ ಹೋಗುತ್ತಿದ್ದ ನಮ್ಮ ಚಾರಣಕ್ಕೆ ಇದ್ದಕ್ಕಿದ್ದಂತೆ ಟ್ರಾಫಿಕ್ ಜಾಮ್ ಆಯಿತು. ಎದುರುಗಡೆ ಕಾಣಿಸುತ್ತಿದ್ದ 10-15  ಅಡಿ ಎತ್ತರ ಇದ್ದಿರಬಹುದಾದ ಕಡಿದಾದ  ಬಂಡೆಯನ್ನು  ಏರಬೇಕಿತ್ತು. ಚುರುಕಾಗಿದ್ದ ಎಳೆಯ ಯುವಕ ಯುವತಿಯರು ಸಮತೋಲನ ಸಾಧಿಸಿಕೊಂಡು ಬಂಡೆ ಏರಿದರು. ಮಧ್ಯವಯಸ್ಸಿನ ಹಾಗೂ ಹಿರಿಯ ನಾಗರಿಕರಾದ   ಕೆಲವರಿಗೆ ಒಂದಿಬ್ಬರ ಸಹಾಯ ಪಡೆದು ಮೇಲೇರುವುದೇ ಸಾಹಸವಾಯಿತು.  ಇದು ಆರಂಭ ಅಷ್ಟೆ. ಈಗಾಗಲೇ ಬಂಡೆ ಹತ್ತಿದವರು  ಇತರರಿಗೆ ಮೆತ್ತಗೆ..ಇಲ್ಲಿ ಎಡದ ಕಾಲು ಇಡಿ…..ಕಾಲಿಗೆ ಗ್ರಿಪ್ ಸಿಕ್ತಾ…ಹಾಂ..ಈಗ ಬಲದ ಕಾಲು ಇಡಿ…,,ಕೈ ಹಿಡ್ಕೊಳ್ಳಿ… ಕೈಕೊಡಿ…ಹಾಂ… ಹೆದರ್ಬೇಡಿ...” ಇತ್ಯಾದಿ ಸಹಕರಿಸುತ್ತಾ ಹುರಿದುಂಬಿಸುತ್ತಿದ್ದರು. ಈ ಹಂತದಲ್ಲಿ. ನನ್ನಂತಹ ಕೆಲವರಿಗೆ ಸಹಾಯ ಬೇಕಾಯಿತು., ಸಹಾಯ ಮಾಡುತ್ತಿದ್ದ ಸಹಚಾರಣಿಗರಿಗೆ ಮತ್ತು  ಸ್ಥಳೀಯ ಮಾರ್ಗದರ್ಶಕರಿಗೆ ಹಾಟ್ಸ್  ಆಫ್ ಸೆಲ್ಯೂಟ್!

-ಮುಂದುವರಿಯುವುದು 

 – ಹೇಮಮಾಲಾ.ಬಿ. ಮೈಸೂರು

3 Responses

  1. Nayana Bajakudlu says:

    ಮೇಡಂ ಬಹಳ ಕುತೂಹಲಕಾರಿಯಾಗಿದೆ ನಿಮ್ಮ ಚಾರಣ. ದಿನನಿತ್ಯದ ಸಣ್ಣಪುಟ್ಟ , ವಿಷಯಗಳನ್ನೂ, ದೈನಂದಿನ ಕೆಲಸಗಳನ್ನೂ ನೀವು ವಿವರಿಸುವ ರೀತಿ ಬಹಳ ಸುಂದರ. ಮುಂದಿನ ಭಾಗಕ್ಕಾಗಿ ಕಾತರದಿಂದ ಎದುರು ನೋಡುತ್ತಿದ್ದೇವೆ.

  2. Raghunath Krishnamachar says:

    ಚಾರಣ ಸಾಹಿತ್ಯ ಪ್ರಕಾರಕ್ಕೆ ಮಾದರಿ

  3. Shruthi Sharma says:

    Very interesting! ಮುಂದಿನ ಭಾಗಕ್ಕಾಗಿ ಕಾಯುತ್ತಿದ್ದೇನೆ

Leave a Reply

 Click this button or press Ctrl+G to toggle between Kannada and English

Your email address will not be published.

Follow

Get every new post on this blog delivered to your Inbox.

Join other followers: