ಜಲ ಎಂದರೆ ಬರಿ ನೀರಲ್ಲ ಅಮೂಲ್ಯ ನಿಧಿ

Share Button

ಜೆಸ್ಸಿ ಪಿ ವಿ

“ಅಬ್ಬಬ್ಬಾ, ಏನು ಸೆಕೆ! ಕೆರೆಯೋ, ನದಿಯೋ ಇದ್ದಿದ್ದರೆ ಹಾರಿ ಬಿಡಬಹುದಿತ್ತು ಅನಿಸ್ತದೆ.” ನನ್ನ ಬಾಯಿಂದ ಹೊರಬಂದ ಈ ಮಾತುಗಳು ಸುಮ್ಮನೇ ಅಲಂಕಾರಿಕವಾಗಿ ಹೇಳಿದ್ದಲ್ಲ. ಬೇಸಿಗೆಯಲ್ಲಿ ನೀರಾಟದಲ್ಲಿ ಕಾಲ ಕಳೆಯುವ ಬಾಲ್ಯ ನನಗಿತ್ತು. ಬಾಳೆದಿಂಡನ್ನು ಹಿಡಿದು ಈಜು ಕಲಿತು,ಮೊದಮೊದಲು  ಸಾಕಷ್ಟು ನೀರು ಕುಡಿದು, ಮುಳುಗಿ ಎದ್ದು ತಕ್ಕಮಟ್ಟಿಗೆ ಈಜು ಕಲಿತ ನನಗೆ ನೀರಿನೊಂದಿಗಿನ ನಂಟು ಅವಿನಾಭಾವದ್ದು. ನನ್ನ ಭಾಗ್ಯ ಇರಬೇಕು, ನನ್ನ ತವರು ಮನೆಯ ಜಮೀನಿನಲ್ಲಿ ಸಾಕಷ್ಟು ನೀರಿತ್ತು. ಎತ್ತರವಾದ ಕಡೆಯಿಂದ ನಮ್ಮ ಜಮೀನಿನುದ್ದಕ್ಕೂ ಇಳಿಜಾರಲ್ಲಿ ಹರಿಯುವ ತೋಡು ಅಲ್ಲಲ್ಲಿ ಪುಟ್ಟ ಜಲಪಾತಗಳನ್ನು ನಿರ್ಮಿಸಿ, ಕಲ್ಲುಗಳ ಮಧ್ಯೆ ನೊರೆಯುಕ್ಕಿಸಿ ಜುಳುಜುಳು ನಾದದೊಂದಿಗೆ ಹರಿಯುತ್ತಿತ್ತು. ಕೃಷಿ ಉದ್ದೇಶಕ್ಕಾಗಿ ತೋಡಿದ ಒಂದೆರಡು ಕೆರೆಗಳು ಕೂಡಾ ತೋಟದ ನಡುವೆ ಇದ್ದವು. ನವೆಂಬರ್ ತನಕ ತೋಡಿನಲ್ಲಿ ನೀರಿನ ಸರಾಗ ಹರಿವಿರುತ್ತಿತ್ತು. ಮಕ್ಕಳು ನಾವೆಲ್ಲಾ ತೋಡಲ್ಲಿ ವಿಧವಿಧವಾದ ಆಟಗಳನ್ನು ಆಡುತ್ತಾ ಮೀನು ಹಿಡಿಯುತ್ತಾ ಸಮಯ ಕಳೆಯುತ್ತಿದ್ದೆವು. ಬಕಧ್ಯಾನ ಎಂದರೆ ಏನೆಂಬುದನ್ನು ಕಣ್ಣಾರೆ ಕಾಣುವ ಭಾಗ್ಯ ನಮಗಿತ್ತು. ಒಂಟಿಕಾಲಲ್ಲಿ ನಿಂತು ಹೊಂಚುಹಾಕಿ ಕೊಕ್ಕರೆ ಮೀನು ಹಿಡಿಯುವ ತನ್ಮಯತೆಯನ್ನು ನಾವು ತನ್ಮಯರಾಗಿ ನೋಡುತ್ತಿದ್ದೆವು. ಕೊಕ್ಕರೆಗೆ ಸವಾಲೆಸೆದು ತೋಡಿನ ಮೀನಿನಲ್ಲಿ ಪಾಲು ಪಡೆಯಲು ಬರುವ ನೀರುಕಾಗೆ ಹಾಗೂ ಮಿಂಚುಳ್ಳಿಗಳ ವೇಗದ ಚಲನೆಯನ್ನೂ ನಾವು ಕಣ್ತುಂಬಿಕೊಳ್ಳುತ್ತಿದ್ದೆವು. ತೋಡಿನ ಬದಿಯಿಂದ ಕಲ್ಲುಗಳನ್ನು ಹೆಕ್ಕಿತಂದು ನೀರಿಗೆ ಕಟ್ಟೆ ಕಟ್ಟಿ ನೀರು ನಿಲ್ಲಿಸಿ ಆಡುವ ಮಜಾವೇ ಅದ್ಭುತವಾದದ್ದು. ಇಳಿಜಾರಿನಲ್ಲಿ ನೀರು ಹರಿಯುವಲ್ಲಿ ಕಲ್ಲುಗಳ ಮಧ್ಯೆ ಮಲಗಿ ಆ ರಭಸವಾದ ನೀರಿನ ಮಸಾಜ್ ಹಾಗೂ ತುಂತುರು ಹನಿಗಳ ಸಿಂಚನಕ್ಕೆ ನಮಗಾಗುತ್ತಿದ್ದ ಖುಷಿ ವರ್ಣನಾತೀತ. ಅಕ್ಕನವರೆಲ್ಲಾ ಈಗಾಗಲೇ ಕೆರೆ ನೀರಲ್ಲಿ ಈಜುತ್ತಿದ್ದರು. ನನಗೂ ತಂಗಿಗೂ ಈಜು ಬರುತ್ತಿರಲಿಲ್ಲ. ಆಗ ಬಾಳೆದಿಂಡುಗಳನ್ನು ತಂದು ಕೆರೆಗೆ ಹಾಕಿ ಅದನ್ನು ಹಿಡಿದು ಕೈಕಾಲು ಬಡಿಯುವಂತೆ ಹೇಳುತ್ತಿದ್ದರು. ಹಾಗೇ ಮಾಡ್ತಾ ಮಾಡ್ತಾ ನಿಧಾನವಾಗಿ ಈಜು ಕಲಿತೆ.

ನಮ್ಮ ತೋಟದಲ್ಲಿದ್ದ ಒಂದು ಕೆರೆ ಸಣ್ಣದು. ಆದರೆ ಅದರ ನೀರು ಅತ್ಯಂತ ತಿಳಿ. ಸ್ಪಟಿಕ ಶುದ್ಧ. ನಮ್ಮ ಈಜಾಟ, ನೀರಾಟದ ನಡುವೆ ಕಾಲ್ಗೆಜ್ಹೆಯೋ ಕಿವಿಯೋಲೆಯೋ ಅದರಲ್ಲಿ ಕಳಚಿ ಬೀಳುವುದಿತ್ತು. ನೀರಿನಿಂದ ಮೇಲೆ ಬಂದ ಮೇಲೆ ನೀರು ತಿಳಿಯಾದ ಮೇಲೆ ದಡದಿಂದ ನೋಡುವಾಗ ತಳದಲ್ಲಿ ಅದು ಬಿದ್ದಿರುವುದು ಸ್ಪಷ್ಟವಾಗಿ ಕಾಣುತಿತ್ತು. ನಂತರ ಮೆಲ್ಲನೆ ಇಳಿದು ಮುಳುಗಿ ಅದನ್ನು ಹುಡುಕಿ ತರಬಹುದಿತ್ತು. ಬೇಸಿಗೆಯಲ್ಲಿ ಸುತ್ತಮುತ್ತ ಎಲ್ಲರ ಮನೆಗಳ ಕೆರೆ ಬಾವಿ ಬತ್ತಿ ನೀರಿನ ಸಮಸ್ಯೆ ಎದುರಾದರೂ ನಮ್ಮಲ್ಲಿ ನೀರಿರುತ್ತಿತ್ತು. ಹಾಗಾಗಿ ಸುತ್ತಮುತ್ತಲಿನ ಹೆಂಗಸರು ನಮ್ಮಲ್ಲಿಗೆ ಬಟ್ಟೆ ಒಗೆಯಲು ಬರುತ್ತಿದ್ದರು.

ಮೊದಮೊದಲು ನಮ್ಮಲ್ಲಿ ತೋಟಕ್ಕೆ ನೀರು ಹಾಯಿಸಲು ಸೀಮೆ ಎಣ್ಣೆಯಿಂದ ಚಾಲೂ ಮಾಡುವ  ಸಣ್ಣ ಪಂಪ್ ಇತ್ತು. ಅದನ್ನು ಸ್ಟಾರ್ಟ್ ಮಾಡಲು ಒಮ್ಮೊಮ್ಮೆ ಬಹಳ ಕಷ್ಟ ಪಡಬೇಕಾಗುತಿತ್ತು. ಅದರಿಂದ ಹೊರಬಂದ ನೀರು ಸ್ವಲ್ಪ ದೂರ ಪೈಪಲ್ಲಿ ಹರಿದು ನಂತರ ಪಾತಿಗಳಲ್ಲಿ (ಸಣ್ಣಕಾಲುವೆಯಂತಹ ರಚನೆ) ಹರಿಯುತ್ತಿತ್ತು. ಅಡಿಕೆ ಹಾಳೆ ಹಿಡಿದು ನೀರನ್ನು ಗಿಡಗಳ ಬುಡಕ್ಕೆ ಚಿಮ್ಮಿಸುವ  ಕೆಲಸ ನಮ್ಮದು. ನಂತರ ಐದು ಎಚ್ ಪಿಯ ಡೀಸೆಲ್ ಪಂಪ್ ಬಂತು. ತೋಟಕ್ಕೆಲ್ಲ ಸ್ಪ್ರಿಂಕ್ಲರ್ ಅಳವಡಿಸಲಾಯ್ತು. ಆದರೂ ಕೆಲವೆಡೆ ಪೈಪ್ ಹಿಡಿದು ನೀರು ಹಾಯಿಸಬೇಕಿತ್ತು. ನಂತರ ವಿದ್ಯುತ್ ಬಂತು. ವಿದ್ಯುತ್ ಪಂಪೂ ಬಂತು. ಮೊದಲಿಗಿಂತ ಹೆಚ್ಚು ನಿರಂತರವಾಗಿ ನೀರಾವರಿ ಮಾಡಲು ಆರಂಭವಾಯ್ತು. ಎಲ್ಲರೂ ಕೊಳವೆ ಬಾವಿ ಕೊರೆದಾಗ ನಮ್ಮಲ್ಲೂ ಬಂತು ಕೊಳವೆಬಾವಿ. ಯಥೇಚ್ಛ ನೀರಿದ್ದ ನಮ್ಮ ಕೆರೆ, ತೋಡುಗಳಲ್ಲಿ ನೀರಿಂಗಿತು. ಮಿಂಚುಳ್ಳಿ, ಕೊಕ್ಕರೆ, ನೀರುಕಾಗೆಗಳು ಕಡಿಮೆಯಾದವು. ನಮ್ಮ ಜಮೀನಿನಲ್ಲಿ ಹೇರಳವಾಗಿದ್ದ ಕಪ್ಪೆ, ಆಮೆ, ಏಡಿಗಳ ಸಂಖ್ಯೆಯೂ ಇಳಿಮುಖವಾಯಿತು. ಮದುವೆಯ ಬಳಿಕ ನಾನು ಪಟ್ಟಣ ವಾಸಿಯಾದೆ. ನೀರಲ್ಲೇ ಬೆಳೆದ ನನಗೆ ನೀರು ಅಪರಿಚಿತವಾಯಿತೆಂದೇ ಹೇಳಬಹುದು. ನೀರೆಷ್ಟು ಅಮೂಲ್ಯ ಎಂಬುದು ನನಗೆ ಅರಿವಾಯಿತು.  ಎರಡು ವರ್ಷಗಳ ಹಿಂದೆ ತೀವ್ರ ಬೇಸಗೆ ಕಾಡಿದಾಗ ಪ್ರೀತಿಯಿಂದ ಬೆಳೆಸಿದ ಒಂದಷ್ಟು ಗಿಡಗಳಿಗೆ ನೀರುಣಿಸುವುದು ಹೇಗೆಂದೇ ಚಿಂತೆಯಾಯಿತು.  ಆಗ ಅಡುಗೆ ಮನೆಯಲ್ಲಿ ಪಾತ್ರೆ ತೊಳೆಯುವ ನೀರಲ್ಲಿ ಸೋಪಿನಂಶ ಇಲ್ಲದ ನೀರನ್ನು ಬಕೆಟ್ಟಿನಲ್ಲಿ ಸಂಗ್ರಹಿಸಿ ಗಿಡಕ್ಕೆ ಹಾಕಿದೆ.ಗಿಡಗಳು ಉಳಿದವು. ಕಳೆದವರ್ಷ ಯಾಕೋ ನನಗೆ ಅಷ್ಟು ತೀವ್ರ ನೀರಿನ ಕೊರತೆ ಇದೆ ಅನಿಸಲಿಲ್ಲ. ಈ ವರ್ಷ ಇದುವರೆಗೂ ತೊಂದರೆಯಾಗಿಲ್ಲ. ಅಂತಹ ತೊಂದರೆ ಬಾರದಿರಲಿ ಎಂಬುದೇ ನನ್ನ ಪ್ರಾರ್ಥನೆ.

ಒಂದು ಕೊಡ ನೀರಿಗಾಗಿ ಹಲವು ಮೈಲು ದೂರ ನಡೆಯುವ, ವಾರಕ್ಕೊಮ್ಮೆ ಬರುವ ನೀರನ್ನು ಒಂದಷ್ಟು ಪಾತ್ರೆಗಳಲ್ಲಿ ಸಂಗ್ರಹಿಸಿಟ್ಟು ರೇಷನ್ನಿನಂತೆ ಬಳಸುವ, ಆಳವಾದ ಬಾವಿಯೊಳಗೆ ಇಳಿದು, ಅಲ್ಲಿನ ಪುಟ್ಟ ಗುಂಡಿಯಲ್ಲಿ ಉಳಿದಿರುವ ನೀರನ್ನು ಸಂಗ್ರಹಿಸಿ ಹೊತ್ತು ತರುವ, ನಲ್ಲಿಗಳ ಮುಂದೆ ಕಿಲೋಮೀಟರ್ ಗಟ್ಟಲೆ ಉದ್ದಕ್ಕೆ ಜೋಡುಸಿರುವ ಕೊಡಗಳನ್ನಿಟ್ಟು ಕಾಯುವ  ಜನರ ಫೋಟೋಗಳನ್ನು  ಪತ್ರಿಕೆಗಳಲ್ಲಿ ನೋಡುವಾಗ, ಟಿ.ವಿಯಲ್ಲಿ ನೀರಿಗಾಗಿ ಜನರು ಹಾಹಾಕಾರ ಪಡುವುದರ ಕುರಿತ ವರದಿಗಳನ್ನು ನೋಡುವಾಗ ಮನಸ್ಸು ಬಿಕ್ಕಳಿಸುತ್ತದೆ. ನೀರೆಂಬ ಅಮೂಲ್ಯ ನಿಧಿಯನ್ನು ಬೇಕಾಬಿಟ್ಟಿ ಬಳಸುವವರ ಮೇಲೆ ಆಕ್ರೋಶ ಭುಗಿಲೇಳುತ್ತದೆ. ಜಲಮಾಲಿನ್ಯ ಮಾಡುವವರಿಗೆ ಶಾಪ ಹಾಕುವ ಮನಸ್ಸಾಗುತ್ತಾರೆ. ಜಲದ ಮಹತ್ವ ತಿಳಿಸುವ ಶ್ರೀಪಡ್ರೆಯಂತವರನ್ನು ಮನಸ್ಸು ನೆನೆಯುತ್ತದೆ. ನಮಿಸುತ್ತದೆ. ಜಲಜಾಗೃತಿಯನ್ನು ಎತ್ತಲೂ ಹಂಚಲು ಮನಸ್ಸು ತುಡಿಯುತ್ತದೆ. ಜಲದ ಪ್ರತಿಕಣವೂ ಅಮೂಲ್ಯ ಅದನ್ನು ಸಂರಕ್ಷಿಸೋಣ. ಭೂಮಿಗೆ ಬಿದ್ದ ಒಂದು ಹನಿ ನೀರೂ ವ್ಯರ್ಥವಾಗದಂತೆ ಮಳೆಕೊಯ್ಲನು ಮಾಡೋಣ. ನೀರು ಕುಡಿದು ಬದುಕೋಣ. ಸಕಲ ಜೀವಜಾಲಗಳಿಗೂ ನೀರಿನಲ್ಲಿ ಪಾಲುಕೊಡೋಣ. ನಮ್ಮ ಮುಂದಿನ ತಲೆಮಾರು ಯಥೇಚ್ಛ ಶುದ್ಧ ನೀರನ್ನು ಮನದಣಿಯೆ ಬಳಸುವಂತಾಗಲು ನಾವು ಎಚ್ಚೆತ್ತುಕೊಳ್ಳೋಣ.

ಜೆಸ್ಸಿ ಪಿ.ವಿ ಪುತ್ತೂರು.
.

4 Responses

  1. ವೀರೇಶ್ ಮೇಟಿ says:

    ತುಂಬಾ ಅವಶ್ಯ ಅರಿವಿನ ಲೇಖನ ಜೆಸ್ಸಿ ಮೇಡಮ್ ಅಭಿನಂದನೆಗಳು….

  2. savithri bhat says:

    ಲೇಖನ ಮನ ಮುಟ್ಟುವಅಂತಿದೆ

  3. Raghunath Krishnamachar says:

    ನೀರಜಾಲ

  4. Nayana Bajakudlu says:

    ಚೆನ್ನಾಗಿದೆ. ಜಲ ಸಂರಕ್ಷಣೆಯ ಪ್ರತಿ ನಿಮ್ಮ ಕಾಳಜಿ ಬಹಳ ಇಷ್ಟ ಆಯಿತು. ಆ ಕೆರೆ, ಈಜು , ತೋಟಕ್ಕೆ ಅಡಿಕೆಯ ಹಾಳೆಯಲ್ಲಿ ಮರಗಳ ಬುಡಕ್ಕೆ ನೀರು ಹಾಯಿಸುತಿದ್ದ ರೀತಿ ಬಹಳ ಅಪ್ಯಾಯಮಾನವಾಗಿದೆ . ಬಹುಶಃ ಹೆಚ್ಚಿನವರ ಬದುಕಿನಲ್ಲಿ ಇಂತಹ ಸುಂದರ ಬಾಲ್ಯದ ದಿನಗಳು ಇದ್ದಿರಬಹುದು ಮತ್ತು ಈಗ ಮತ್ತೊಮ್ಮೆ ನೆನಪಲ್ಲಿ ಹಸುರಾಗಿರಬಹುದು

Leave a Reply to savithri bhat Cancel reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: