ಬದಲಾಗದಿರಲಿ ಬೇಸಿಗೆ

Share Button

‘ಅಪ್ಪಾ ಸೆಖೆ’, ‘ಅಮ್ಮಾ.. ಸೆಖೆ’ , ಓ ಗಾಡ್ ಇಟ್ಸ್ ಟೂ ಹಾಟ್’ ‘ಕಿತನಾ ಘರ್ಮೀ ಹೈ’ ಇವೆಲ್ಲಾ ಈ ಮೂರು ತಿಂಗಳು ಕೇಳಿ ಬರುವ ಸಾಮಾನ್ಯ ಸಂಭಾಷಣೆಗಳು. ವಾತಾವರಣದ ವೈಪರೀತ್ಯಗಳಿಂದಾಗಿ ನಮ್ಮ ಬಾಯಿಂದ ತಂತಾನೇ ಹೊರಬರುವಂಥವು. ಏನೋ ಮಳೆ ಬರುವ ಹಾಗೇ.. ಮೋಡ ಮುಸುಕು,ಬೆವರು.ಮರುಘಳಿಗೆಯಲ್ಲೇ ಗಾಳಿಯೊಡಗೂಡಿ  ಒಂದು ಕ್ಷಣ ತಂಪಾಗಿಸಿ,ಸಂತೈಸಿ,ಓಡಿಬಿಡುವವು.ಓಡಿ ಆಯಾಸವಾದ ಘಳಿಗೆಯಲ್ಲಿ ಭಾರವಾಗಿ, ಕಲ್ಲಾಗಿಯೋ, ಹನಿಯಾಗಿಯೋ.. ಸುರಿದೇ ಬಿಡುವವು.ನಿಸರ್ಗದ ಬಗೆಗಿನ ನಿಶ್ಕಾಳಜಿಯಿಂದ ವರ್ತಿಸುವ ಮನುಜಕುಲ ಈ ಆಟಕ್ಕೆ ಸಿದ್ಧವಾಗಿರಲೇ ಬೇಕು.. ಸದಾ ಭೂತಾಯಿಯ ಸೇವೆಯಲ್ಲಿ ತೊಡಗಿಸಿಕೊಂಡ ರೈತರ ಪಾಡು ಮಾತ್ರ ಈಗ ಚಿಂತನೀಯ. ಸದಾ ಹಸಿರುಡುಗೆ ಉಡಿಸಿ ಸುಖ ಪಡುವ ಅವರಿಗೆ ಈ ವ್ಯವಸ್ಥೆ ಅಸಹನೀಯ.. ವರ್ಷಪೂರ್ತಿ ಕಷ್ಟಪಟ್ಟು ಬೆಳೆಸಿದ ಬೆಳೆ, ಬೇಸಿಗೆಯಲ್ಲಿ ನೀರಿಲ್ಲದೇ ಒಣಗುವಾಗಲೋ, ಅಕಾಲದಲ್ಲಿ ಮಳೆಯಾಗಿ ಬಂದ ಬೆಳೆಗೆ ಅಪಥ್ಯವಾಗಿ ,ಕೊಳೆಯುವಾಗಲೋ.. ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲವಲ್ಲಾ ಎಂಬ ಹತಾಶೆ ಅವರದ್ದು. ಇದು ಇತ್ತೀಚಿನ ಕೆಲವು ವರ್ಷಗಳಲ್ಲಿ ಕಂಡುಬರುತ್ತಿರುವ ಬೇಸಿಗೆ. ಯಾವ ಕೆಲಸವನ್ನೂ ಧೈರ್ಯದಿಂದ ಕೈಗೆತ್ತಿಕೊಳ್ಳುವ ಹಾಗಿಲ್ಲ.

ಬಹುಷಃ ಶಾಲಾ ಕಾಲೇಜುಗಳಿಗೆ ರಜೆ ಇರುವುದೆಂಬ ಕಾರಣಕ್ಕಿರಬಹುದು..ಬೇಸಿಗೆಯ ಎರಡು ತಿಂಗಳು ಮದುವೆ, ಮುಂಜಿ, ದೇವಕಾರ್ಯಗಳಿಗೆ ಸೂಕ್ತವಾದವು.ಮುಹೂರ್ತಗಳೂ ಇದೇ ಕಾಲದಲ್ಲಿ ಕೂಡಿಬರುವುದು ಕಾಕತಾಳೀಯ. ಈಗೆಲ್ಲ ಸಭಾಗೃಹಗಳಲ್ಲಿ ಮಾಡುವುದೇ ಹೆಚ್ಚು. ಆದರೂ ಉಷ್ಣಾಂಶ ಹೆಚ್ಚಿರುವುದರಿಂದ  ಸ್ವಲ್ಪವೇ ಕೆಲಸಕ್ಕೂ ಬಹಳ ದಣಿವು.ಬಂದ ನೆಂಟರಿಗೆ ಎಷ್ಟು ಬೇಗ ಮನೆ ತಲುಪಿ, ತಣ್ಣೀರ  ಸುರಿದು ತಂಪಾಗುವೆವೋ ಅನ್ನುವಷ್ಟು ಬಳಲಿಕೆ.ಮುಂಬರುವ ದಿನಗಳಲ್ಲಿ ಈ ವೈಪರೀತ್ಯ ಇನ್ನೂ ಹೆಚ್ಚಾದರೆ ಆಶ್ಚರ್ಯವೇನೂ ಇಲ್ಲ.

ನಾವು  ಕಳೆದ ಬೇಸಿಗೆಯ ದಿನಗಳಲ್ಲಿ ಹಪ್ಪಳ ಸಂಡಿಗೆಗಳ ಘಮಘಮ ಎಲ್ಲರ ಮನೆಯಲ್ಲೂ ಸಾಮಾನ್ಯವಾಗಿತ್ತು .ಉದ್ದಿನ ಹಪ್ಪಳ,ಹಲಸಿನಕಾಯಿ, ಬಾಳೆಕಾಯಿ ಹಪ್ಪಳ,ಸಬ್ಬಕ್ಕಿ,ಕುಂಬಳಕಾಯಿಯ ಸಂಡಿಗೆಗಳು, ದೊಡ್ಡ, ಸಣ್ಣ, ಬಗೆ ಬಗೆಯ ಬಣ್ಣಗಳಲ್ಲಿ ತಯಾರಾಗುತ್ತಿದ್ದವು. ಮಜ್ಜಿಗೆ ಮೆಣಸು ಮಳೆಗಾಲದಲ್ಲಿ ಊಟಕ್ಕೆ ಬಲು ಸೊಗಸು ಎಲ್ಲರಿಗೂ. ಇವೆಲ್ಲ ತಯಾರಿಸಲು ಬೇಸಿಗೆಯಲ್ಲೇ ಮುಹೂರ್ತ. ಹಲಸಿನ ಹಣ್ಣಿಗೂ ಬೇಸಿಗೆಗೂ ಬಹಳ ನಂಟು. ಅಡಿಗೆಯಲ್ಲಿ ಮಾವಿನ ಕಾಯಿ,ಹಣ್ಣಿನ ಪಾಲು  ದೊಡ್ಡದು. ಬೇಸಿಗೆಯಲ್ಲಿ ತಯಾರಿಸುವ ಮಾಮಿಡಿಯ ಉಪ್ಪಿನಕಾಯಿ ವರ್ಷ ಕಾಲಾವಧಿ ಊಟಕ್ಕೆ ರುಚಿ ಕೊಡುವುದು. ಇವೆಲ್ಲಾ ಬೇಸಿಗೆಯಲ್ಲಿ ಕಡ್ಡಾಯವಾಗಿ ತಯಾರಿಸುವ ಉತ್ಪನ್ನಗಳಾಗಿದ್ದವು. ಆದರೆ ಮೊದಲಿನಂತೆ ಈಗ ಮನೆಯಲ್ಲಿ ಇವುಗಳನ್ನೆಲ್ಲ ತಯಾರಿಸುವ ಆಸಕ್ತಿ ಜನರಲ್ಲಿ ಕಡಿಮೆಯಾಗಿದೆ. ಅತಿಯಾದ ಬಳಲಿಕೆಯೂ ಇದಕ್ಕೆ ಕಾರಣವಿರಬಹುದು. ಆಧುನಿಕತೆಯ ಮೆಟ್ಟಿಲೇರುತ್ತಿರುವ ಮಾನವ ಇವುಗಳನ್ನೂ ಕೈಗಾರಿಕಾ ಉತ್ಪನ್ನಗಳ ಪಟ್ಟಿಗೆ ಸೇರಿಸುತ್ತಿದ್ದಾನೆ. ಹಳೆಯ ಕಾಲದ ಪದ್ಧತಿ ನಿಧಾನವಾಗಿ ಕೈಜಾರುತ್ತಿದೆ. ಸಮಾರಂಭಗಳಿಂದ ಹಿಡಿದು ಮನೆಯ ಖರ್ಚಿಗೆ ಸಹ ಅಂಗಡಿಯಲ್ಲಿ ಸಿಗುವ ಹಪ್ಪಳ, ಸಂಡಿಗೆ,ಉಪ್ಪಿನಕಾಯಿಗಳ ಉಪಯೋಗವಾಗುತ್ತಿವೆ.ಇವೆಲ್ಲ ಬದಲಾವಣೆಗಳಿಗೆ ಹವಾಮಾನದ ವೈಪರೀತ್ಯವೇ ಮೂಲ ಕಾರಣ ಎನ್ನಬಹುದು.

                                                               (ಚಿತ್ರಕೃಪೆ: ಸಾಂದರ್ಭಿಕ, ಅಂತರ್ಜಾಲ)

ನಗರಗಳಲ್ಲಿ ಈ ಬೇಸಿಗೆಯ ಕಾಲ ಇನ್ನೂ ಅಸಹನೀಯ. ಎಲ್ಲೋ ಮೈಲಿಗೊಂದರಂತೇ  ಕಾಂಕ್ರೀಟ್ ಒಳಗೆ ನುಸುಳಿ ಬೇರುಕೊಟ್ಟ ಮರ ತಪ್ಪಿತಸ್ಥರಿಗೆ ಶಿಕ್ಷೆ ಎಂಬಂತೇ ನಿಂತು ನೋಡುತ್ತಿರುವಾಗ ಜನರಿಗೆ ತಂಪನೀಯುವುದಾದರೂ ಹೇಗೆ? ಮಧ್ಯಾಹ್ನ ಮನೆಯಿಂದ ಹೊರ ಬಂದರೆ ಕಾವಲಿಯ ಮೇಲೆ ಮುಚ್ಚಿ ಬೇಯಿಸಿದ ದೋಸೆಯಂತೇ ಕಾಯುವುದು ದೇಹ.ಎಲ್ಲಿ ನೋಡಿದರೂ ಮುಸುಕುಧಾರಿಗಳೇ ಕಾಣಸಿಗುವರು. ಬಾಯಾರಿಕೆ ತಗ್ಗಿಸಲು ಕಾರ್ಬೋನೇಟೆಡ್ ಪಾನೀಯಗಳಿಗೋ,ರಸ್ತೆ ಬದಿಯಲ್ಲಿ  ಮಾರುವ ಮಲಿನ ನೀರಿನಿಂದ ತಯಾರಿಸಿದ ಹಣ್ಣಿನ ರಸಗಳಿಗೋ ಮೊರೆ ಹೋಗುವವರೇ ಹೆಚ್ಚು. ಮನೆಯೊಳಗೂ ಅಷ್ಟೇ ಬಿಸಿ ಗಾಳಿ.ಕಿಟಕಿ ಮುಚ್ಚಿ, ಪರದೆ ಎಳೆದು ಉಸಿರುಗಟ್ಟಿಸುವ ವಾತಾವರಣದಲ್ಲಿ ಕಳೆಯಬೇಕು. ಇಲ್ಲವೇ ಹವಾನಿಯಂತ್ರಕಗಳಿಗೆ ಶರಣಾಗಬೇಕು.ದೇಹಸ್ಥಿತಿ,ಮನಸ್ಥಿತಿ ಎಲ್ಲವೂ ಏರುಪೇರು. ನಗರದ ಜನರಿಗೆ ಇದು ವರವೋ ಶಾಪವೋ ತಿಳಿಯದು. ಬೇಸಿಗೆಯಲ್ಲಿ ನಗರದ ಜನ  ತಂಪು ಪ್ರದೇಶಗಳಿಗೆ ಪ್ರವಾಸಕ್ಕೆ ಹೋಗುವುದೋ, ಅಥವಾ ಹಳ್ಳಿಗಳಲ್ಲಿ ಬೇಸಿಗೆ ಕಳೆದು ಬರುವುದೋ ಏನಾದರೊಂದು ಉಪಾಯ ಕಂಡುಕೊಳ್ಳಲೇ ಬೇಕು.

ಹಳ್ಳಿಗಳಲ್ಲಿ ಜನರಿಗೆ ಬೇಸಿಗೆಯ ವಾತಾವರಣ ಮೈಗೂಡಿ ಹೋಗಿದೆ. ಕಾಡು ಮೇಡುಗಳು ಕಡಿಮೆಯಾದರೂ ಉಸಿರಾಟಕ್ಕೊಂದಿಷ್ಟು ಹಿತವಾದ ಹವೆ ಇಲ್ಲಿಯತನಕ ಸಿಗುತ್ತಿದೆ. ಕಾಪಿಟ್ಟುಕೊಳ್ಳುವ ದೊಡ್ಡ ಸವಾಲೂ ಅವರ ಮುಂದಿದೆ. ಒಂದು ವರ್ಷದ ಹಿಂದೆ ನಾ ಕಂಡ ಊರು ಈಗ ಸಂಪೂರ್ಣ ಬದಲಾದ ಹಾಗಿದೆ. ಹಸಿರು ಕಂಗೊಳಿಸುವ ಜಾಗಗಳೆಲ್ಲ ಬಟ್ಟ ಬಯಲಾಗಿದೆ.ಅಂತರ್ಜಲದ ಕೊರತೆಯಿಂದಲೋ ಏನೋ ತವರೂರ ಕೆರೆಗಳೆಲ್ಲಾ ಬತ್ತಿವೆ. ಮೊದಲೊಂದು ಕಾಲದಲ್ಲಿ ನಾವೆಲ್ಲ ಊರ ಮಕ್ಕಳೊಡಗೂಡಿ ಈಜು ಕಲಿತು ಸಂಭ್ರಮಿಸಿದ ಹಳ್ಳ,ಬಂಡೆಯ ಮೇಲೆ ಕುಳಿತು ಕಾಲ ಇಳಿಬಿಟ್ಟು ಮೀನುಗಳಿಂದ ಕಚಗುಳಿ ಮಾಡಿಸಿಕೊಂಡು ನಗುತ್ತಿದ್ದ ಹೊಳೆ,ಎಲ್ಲವೂ ಸಂಪೂರ್ಣವಾಗಿ ಬತ್ತಿದೆ. ಮನೆಯ ಹೊರಜಗುಲಿಯ ಕಟ್ಟೆಯ ಮೇಲೆ ಕುಳಿತಾಗ ಗಾಳಿ ಅಟ್ಟಿಸಿಕೊಂಡು ಬರುತ್ತಿದ್ದ ನೀರಾವರಿಯ ಸ್ಪ್ರಿಂಕ್ಲರ್ ನ ಜಿನುಗು ಹನಿಗಳ ಸಿಂಚನದ ಸುಖ ಕೇವಲ ನೆನಪಾಗಿ ಉಳಿದಿದೆ.ತೋಟಕ್ಕೆ ನೀರು ಬಿಡುವ ನೆಪದಲ್ಲಿ ಅಕ್ಕಂದಿರ ಜೊತೆ ಹೋಗಿ , ನೀರಲ್ಲೇ ಹೊಡೆದಾಡಿ ಸಂಭಾವಿತರಂತೇ ಪೇಚು ಮುಖ ಮಾಡಿ ಅಮ್ಮನ ಎದುರು ನಿಂತು ಒಳಗೊಳಗೇ ಖಷಿ ಪಟ್ಟ ಕ್ಷಣಗಳು ಕನಸೋ ಎಂಬಂತಾಗಿದೆ. ಹೆದ್ದಾರಿಯ ಸಮೀಪದ ಎಷ್ಟೋ ಮನೆಗಳಲ್ಲಿ ಜನರು ನಗರ ನೀರು ಸರಬರಾಜಿನ ಮಖ್ಯ ಪೈಪ್ ಗಳಿಗೆ ರಂಧ್ರ ಮಾಡಿ ಚಿಮ್ಮುವ ನೀರನ್ನು ಅಡಿಗೆಗೆ ಬಳಸಿಕೊಳ್ಳುತ್ತಿರುವ ಅಸಹಾಯಕ ಪರಿಸ್ಥಿತಿ ತಲೆದೋರಿದೆ. ಬಾವಿಯಲ್ಲಿ ಬಗ್ಗಿದರೆ, ಕಣ್ಣಿಗೆ ಎಟುಕದಷ್ಟು ಕೆಳಗೆ ಬಿಂದಿಗೆಯೂ  ಮುಳುಗದ ರೀತಿಯಲ್ಲಿ ನೀರಿನ ಮಟ್ಟ ತಗ್ಗಿದೆ. ನೀರು ಸೇದುವ ಹಗ್ಗದ  ಉದ್ದ ಹೆಚ್ಚುತ್ತಲೇ ಇದೆ. ಕೊಳವೆ ಬಾವಿಗಳನ್ನು ಕಡಿಮೆ ಅಂತರಗಳಲ್ಲಿ ತೆಗೆಯುವುದರ ಪರಿಣಾಮ, ಅಂತರ್ಜಲದ ಮಟ್ಟ ಇನ್ನೂ ಕಡಿಮೆಯಾಗುತ್ತಿದೆ.

ಮನುಷ್ಯರಿಗೇ ಬಳಸಲು ನೀರಿಲ್ಲದಿರುವಾಗ ಇನ್ನು ಜಾನುವಾರುಗಳ ಪರಿಸ್ಥಿತಿ ಶೋಚನೀಯ.ಮೊದಲೆಲ್ಲಾ ಕೊಟ್ಟಿಗೆಯಲ್ಲಿ ಕಟ್ಟಲು ಜಾಗವಿರದಷ್ಟು ಆಕಳು, ಕರುಗಳು ತುಂಬಿರುತ್ತಿದ್ದವು. ಬೆಳಗಾದರೆ ಗುಡ್ಡದ ಕೆಳಗಿನ ಬಯಲಿಗೆ ಮೇಯಲು ಹೋಗುವ ದನ ಕರುಗಳು ಹಸಿಯ ಮೆಂದು,ಅಲ್ಲೇ ಕೊಳಗಳಲ್ಲಿ ನೀರು ಕುಡಿದು ಸಂಜೆಯಾಗುತ್ತಲೇ ಸಂತೃಪ್ತಿಯಿಂದ ಹಟ್ಟಿಯ ಸೇರುತ್ತಿದ್ದವು.ಅಂತಹ ದನಗಳ ಹಾಲೂ ಅಷ್ಟೇ ಹಿತವಾಗಿತ್ತು. ಸಾಕುವ ಖರ್ಚೂ ಎಲ್ಲರಿಗೂ ಕೈಗೆ ಎಟುಕುವ ರೀತಿಯಲ್ಲಿ ನಿರ್ವಹಣೆಯಾಗುತ್ತಿತ್ತು.

ಬೇಸಿಗೆಯಲ್ಲಿ   ಹಾಲು, ಮೊಸರು, ಮಜ್ಜಿಗೆ ,ಬೆಣ್ಣೆ, ತುಪ್ಪಗಳು ಯಥೇಚ್ಛವಾಗಿ ಉಪಯೋಗಿಸಲು ಸಿಗುತ್ತಿತ್ತು. ಆದರೆ ಈಗ.. ಮೇಯಲು ಹೋದ ದನ ಕರುಗಳು ಬರಡು ಭೂಮಿಯಲ್ಲಿ ಸುಮ್ಮನೆ ಕಾಲಾಡಿ, ಮಟ ಮಟ ಮಧ್ಯಾಹ್ನ ವೇ ಅಂಬಾ.. ಎನ್ನುತ್ತ ಬಾಯಾರಿ ಗೇಟಿನ ಬಳಿ ಬಂದು ನಿಲ್ಲುವ ದೃಶ್ಯಗಳೇ ಎಲ್ಲೆಲ್ಲೂ.ಸಾಮಾನ್ಯ ಮನುಷ್ಯರಿಗೆ ಜಾನುವಾರುಗಳ ಪಾಲನೆ ಕಷ್ಟಸಾಧ್ಯವಾಗಿದೆ.ಹೆಚ್ಚು ಹಾಲು ಕೊಡುವ ಮಿಶ್ರ ತಳಿಯ ಒಂದೇ ಆಕಳು ಹಟ್ಟಿಯಲ್ಲಿ.ಹಣ ತೆತ್ತು ದೂರದ ಊರಿಂದ ಲಾರಿಗಳಲ್ಲಿ ಒಣ ಮೇವು ತರಿಸಿ ಪೂರೈಸಿಕೊಳ್ಳುವುದು ದುಬಾರಿ ಎಂದು ಕಸಾಯಿ ಖಾನೆಗಳಿಗೆ ಹಸುಗಳನ್ನು ಮಾರುವ ಹೀನಾಯ ಪರಿಸ್ಥಿತಿ. ಎಷ್ಟೋ ಕಾಡುಪ್ರಾಣಿಗಳು ಅಳಿವಿನ ಅಂಚಿನಲ್ಲಿವೆ.ನೆಲಸಮವಾದ ಮರಗಳೇ ಇರುವ ಕಾಡ ಬಿಟ್ಟು ನಾಡ ಕಡೆ ಮುಖ ಮಾಡುತ್ತಿವೆ. ಒಟ್ಟಿನಲ್ಲಿ ಪಶು ಪಕ್ಷಿಗಳು ಮೂಕ ವೇದನೆಯಿಂದ ನರಳುವಂತಾಗಿವೆ.ಜಲಚರ ಪ್ರಾಣಿಗಳು ಬತ್ತಿದ ಹೊಳೆ, ಕೆರೆಗಳಲ್ಲಿ ಸಾಯುವಂತಾಗಿದೆ.

ನಾವು ಚಿಕ್ಕವರಿದ್ದಾಗ ಗುಡ್ಡ ಬೆಟ್ಟ ತಿರುಗಿ ತಿನ್ನುತ್ತಿದ್ದ ಕೌಳಿ ಹಣ್ಣು ,ಮುಳ್ಳೆ ಹಣ್ಣು, ಸಂಪಿಗೆ ಹಣ್ಣು,ಜಂಬುನೇರಳೆ ಗಿಡ ಮರಗಳೆಲ್ಲಾ ಇನ್ನೂ ಸ್ವಲ್ಪ ಮಟ್ಟಿಗೆ ಮಾತ್ರ ಅಸ್ತಿತ್ವ ಇಟ್ಟುಕೊಂಡಿವೆ.ಮೊನ್ನೆಯಷ್ಟೇ ಊರಿಗೆ ಹೋದಾಗ, ಮನೆಯಲ್ಲಿ ಕಾರ್ಯಕ್ರಮ ಇತ್ತು. ರಸಾಯನ ಮಾಡಲು ಮಾವಿನ ಹಣ್ಣನ್ನು ತರಲು ಸಂತೆಗೆ ಹೋದರೆ, ಸಿಕ್ಕಿದ್ದು ಹುಳಿ ಹಣ್ಣೇ.ತವರು ಮನೆಯ ಮಾಳಿಗೆಯ ಒಂದು ಕೋಣೆಯಲ್ಲಿ ಪೂರ್ತಿ ಮಾವಿನ ಹಣ್ಣುಗಳನ್ನು ಜೋಡಿಸಿಡುತ್ತಿರುವ ದಿನಗಳು ನೆನಪಾದವು. ಊರವರಿಗೇ ತಿನ್ನಲು ಹಣ್ಣಿಲ್ಲ. ಮಾರಿಗೆ ಒಂದೊಂದರಂತೇ ಇರುವ ಮಾಮರ, ಗೇರು ಮರಗಳೆಲ್ಲಾ ಎಲ್ಲೋ ಒಂದೊಂದು ಕಾಣ ಸಿಗುತ್ತವೆ.ಗೇರುಬೀಜದ ಫ್ಯಾಕ್ಟರಿ ಯವರು ಹೊರದೇಶಗಳಿಂದ ಆಮದು ಮಾಡಿಕೊಳ್ಳುವರಂತೆ.ಪರಿಸ್ಥಿತಿ ಇನ್ನೂ ಹದಗೆಡುವ ಮುನ್ನ ಎಚ್ಚೆತ್ತುಕೊಂಡರೆ ನಮಗೇ ಒಳಿತು.

ಇಂತಹ ಬದಲಾವಣೆ ಮುಂದುವರಿದರೆ ಜೀವಿಗಳ  ಇರುವಿಕೆ  ಕಷ್ಟಕರವಾಗಬಹುದು. ಅದಕ್ಕಾಗಿ, ಕಾಲಚಕ್ರದಲ್ಲಿ ಎಂಟು ತಿಂಗಳಿಗೊಮ್ಮೆ ಕಾಲೂರುವ ಬೇಸಿಗೆಯ ದೇವಕನ್ಯೆಯನ್ನು ಬರಮಾಡಿಕೊಂಬ ರೀತಿಯನ್ನು ನಾವು ಬದಲಾಯಿಸಬೇಕಾಗಿದೆ. ನಿಸರ್ಗದಲ್ಲಿ ಹಸಿರು ತೋರಣ ಕಟ್ಟಿ ಹೂಗುಚ್ಛಗಳ ಕೊಟ್ಟು,ನವ ವಧುವಿನಂತೇ ಸ್ವಾಗತಿಸಬೇಕಿದೆ. ಕೋಪಿಸಿಕೊಂಡವನಂತೇ ಸೂಸುವ ಸೂರ್ಯನ ಪ್ರಖರ ಕಿರಣಗಳನ್ನು ಶಾಂತಗೊಳಿಸಬೇಕಿದೆ. ಆಧುನಿಕ ತಂತ್ರಜ್ಞಾನವನ್ನು ಬೆನ್ನು ಹತ್ತುವ ಭರದಲ್ಲಿ ಪೃಕೃತಿಯ ರಕ್ಷಣೆಯ ಹೊಣೆಯನ್ನೂ ಗಮನದಲ್ಲಿಟ್ಟುಕೊಂಡು ಬದುಕಬೇಕಿದೆ. ಹಸಿರ ನೆಟ್ಟು, ಉಸಿರು ಪಡೆಯಬೇಕಿದೆ. ಪಸೆಯ ಕಾಪಿಡುವ ನೀರನ್ನು ತುಸುವೇ ಬಳಸುವುದರ   ಜೊತೆಗೆ, ಹರಿದು ಹೋಗಿ ಲವಣವಾಗುವುದನ್ನೂ ತಡೆಯಬೇಕಿದೆ.ಮಳೆರಾಯ ಸುರಿಸುವ ನೀರನ್ನು ಪಿತ್ರಾರ್ಜಿತ ಆಸ್ತಿಯಂತೇ ಕಾಪಾಡಿಕೊಳ್ಳಬೇಕಿದೆ.ಮಕ್ಕಳನ್ನು ಸಲಹುವ ಪರಿಯಲ್ಲೇ ನಿಸರ್ಗವನ್ನೂ ಸಲಹಬೇಕಿದೆ. ಬದಲಾಗಬೇಕಾದವರು ನಾವು.. ಪ್ರಕೃತಿಯ ಸೊಬಗಲ್ಲ.ಬೇಸಿಗೆಯ ಸಂಭ್ರಮ ಸದಾ ಹಸಿರಾಗಿರಲಿ. ಇದು ನಾವು ನಮ್ಮ ಮುಂದಿನ ಪೀಳಿಗೆಗೆ ಕೊಡುವ ಬಲುದೊಡ್ಡ ಕಾಣಿಕೆ.

-ಕಲಾ ಚಿದಾನಂದ , ಮುಂಬೈ.

21 Responses

  1. Smitha Amrithraj says:

    ಒಳ್ಳೆಯ ಬರಹ

  2. shashikala says:

    ಚೆಂದದ ಬರಹˌಸುಂದರ ನಿರೂಪಣೆˌ

  3. Shruthi Sharma says:

    ನಿಜ. ಪ್ರತಿ ವರುಷವೂ ‘ಕಳೆದ ಸೆಖೆಗಾಲಕ್ಕಿಂತ ಈ ಬಾರಿ ಸೆಖೆ ಹೆಚ್ಚು’ ಎನ್ನುವ ಮಾತು ಕೇಳುವಾಗ ಆತಂಕವಾಗುತ್ತದೆ. ಉತ್ತಮ ಬರಹ.

  4. ಕಲಾ ಚಿದಾನಂದ says:

    ಪ್ರೋತ್ಸಾಹಕ್ಕೆ ಸುರಹೊನ್ನೆ ಯವರಿಗೆ ಧನ್ಯವಾದಗಳು

  5. Nayana Bajakudlu says:

    ಸುಂದರವಾದ , ಪ್ರಸ್ತುತ ಪರಿಸ್ಥಿತಿಗೆ ಹೊಂದಿಕೆ ಆಗುವಂತಹ ಬರಹ . ಫಸ್ಟ್ ಓಫ್ ಆಲ್ ರೈತರ ಪ್ರತಿ , ವ್ಯವಸಾಯದ ಪ್ರತಿ ಕಾಳಜಿ ಬಹಳ ಇಷ್ಟ ಆಯಿತು. ಹಳ್ಳಿಗಳಲ್ಲಿ ಒಂದೊಂದೇ ಮೊದಲೆಲ್ಲ ಎಲ್ಲರೂ ಜೊತೆ ಸೇರಿ ಮಾಡುತಿದ್ದ ಕೆಲಸಗಳು ಹೇಗೆ ಮಾಯವಾಗುತ್ತಿವೆ ಅನ್ನುವುದನ್ನು ಮನ ಮುಟ್ಟುವಂತೆ ವಿವರಿಸಿದ್ದೀರಿ , ಈ ಬದಲಾವಣೆಗೆ ಒಂದು ಕಾರಣ ಆಧುನಿಕತೆ ತನ್ನ ದಾಪುಗಾಲನ್ನಿಟ್ಟು ಆವರಿಸಿಕೊಳ್ಳುತ್ತಿರುವುದು, ಇನ್ನೊಂದು ಹಣ ಒಂದಿದ್ರೆ ಏನೂ ಬೇಕಾದರೂ ಸಿಗುತ್ತದೆ ಅನ್ನೋ ಮನೋಭಾವ. ಇವೆಲ್ಲದರ ಹೊರತಾದ ನನಗನ್ನಿಸುವ ಅತಿ ದೊಡ್ಡ ಕಾರಣ ನಮ್ಮ ಸೋಂಬೇರಿತನ, ಯಾಕೆ ಕಷ್ಟ ಪಡಬೇಕು ಅನ್ನೋ ನಮ್ಮ ಮನೋಭಾವ. ದನ ಕರುಗಳ ವಿಷಯದಲ್ಲೂ ಆಧುನಿಕತೆಯ ಪ್ರಭಾವ ಎಲ್ಲಾ ಕೆಲಸಗಳನ್ನು ಅಸಾಧ್ಯ ಅನ್ನಿಸುವಂತೆ ಮಾಡಿದೆ . ತುಂಬಾ ಸೊಗಸಾದ , ಮನಮುಟ್ಟುವಂತಹ ಬರಹ .

  6. ಕಲಾ ಚಿದಾನಂದ says:

    ತುಂಬಾ ಧನ್ಯವಾದಗಳು

  7. Anonymous says:

    ಸುಂದರ ನಿರೂಪಣೆ. ಪ್ರತೀವರ್ಷ ಏರುತ್ತಿರುವ ಬಿಸಿಲ ತಾಪ ಆತಂಕಕಾರೀ ಬೆಳವಣಿಗೆ.

  8. K. C. Hegde says:

    Nice article

  9. CM Joshi says:

    Superb article, takes us through a brief tour of childhood, sweet village life.
    City people wash cars without fail daily and giving bath to cows and other animals is stopped. A harsh reality. Time to wake up and act as mentioned by writer.

  10. ನಾರಾಯಣ ಭಾಗ್ವತ says:

    ಸುಂದರ ಬರೆಹ ಲೇಖನದ ವಿಷಯದ ಆಯ್ಕೆ ಮೆಚ್ಚಿಕೆಯಾಯ್ತು ಪ್ರಚಲಿತ ವಿದ್ಯಮಾನ ತೆರೆದಿಟ್ಟ ರೀತಿ ಅದ್ಭುತ
    ಧನ್ಯವಾದಗಳು

  11. Hema says:

    ಬಾಲ್ಯದ ನೆನಪುಗಳೊಂದಿಗೆ ಈಗಿನ ವಾಸ್ತವವನ್ನು ತೆರೆದಿಟ್ಟ ಚೆಂದದ ಬರಹ ..

  12. Pallavi Bhat says:

    ಬದಲಾದ ಜೀವನ ಶೈಲಿಯಿಂದಾಗಿ ಬೇಸಿಗೆಯ ಕಾವು ಇನ್ನು ಹೆಚ್ಚುತಿರುವಂತಿದೆ. ಉತ್ತಮ ಬರಹ.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: