ರಾತ್ರಿ ಕಾವಲುಗಾರರ ಬದುಕೋ ಬವಣೆಯೋ..

Spread the love
Share Button
Neelamma1

ನೀಲಮ್ಮ ಕಲ್ಮರಡಪ್ಪ, ಮೈಸೂರು

ನಾವು ಈ ಮೊದಲು ಆಫೀಸಿಗೆ ಹತ್ತಿರ ಇದ್ದು ಮೈಸೂರು ನಗರದ ಉದಯಗಿರಿ ಬಡಾವಣೆಯಲ್ಲಿ ವಾಸಿಸುತ್ತಿದ್ದೆವು. ನಮ್ಮ ನಿವೃತ್ತಿಯ ನಂತರ ನಗರದಿಂದ ಹೊರವಲಯದಲ್ಲಿರುವ ರೂಪನಗರ ಬಡಾವಣೆಯಲ್ಲಿ ಮನೆ ಕಟ್ಟಿಕೊಂಡು 2005 ರಿಂದ ವಾಸಕ್ಕೆ ಬಂದೆವು.

construction

ನಮ್ಮ ಮನೆ ಕಟ್ಟುವಾಗಲಿಂದ ರಾತ್ರಿ ಕಾವಲುಗಾರರ ಜೀವನವನ್ನು ಹತ್ತಿರದಿಂದ ನೋಡುವ ಅವಕಾಶ ಸಿಕ್ಕಿತು. ಮನೆ ಕಟ್ಟಲು ಆರಂಭಿಸುವಾಗ ಅವರಿಗೊಂದು ವಾಸಿಸಲು 4 ಗೋಡೆಗಳಿರುವ ಶೆಡ್ಡನ್ನು ಕಟ್ಟಿ ಕೊಡಲಾಗುವುದು. ಅದರವಿಸ್ತೀರ್ಣ 10 ಅಡಿ 8 ಅಡಿ ಇದ್ದರೆ ಹೆಚ್ಚು. ಅದರೊಳಗೆ ರಾತ್ರಿ ಕಾವಲುಗಾರನು ಕುಟುಂಬ ಸಮೇತ ವಾಸಿಸಬೇಕು. ಮಳೆ ಬಂದರೆ ಎಂದು ಸಿಮೆಂಟ್ ಚೀಲಗಳನ್ನು ಸಹ ಇಡಲಾಗುವುದು. ಅಷ್ಟರಲ್ಲೆ ಅಡಿಗೆ ಮನೆ ಸ್ನಾನದ ಮನೆ ಎಲ್ಲವೊ ಅಲ್ಲೆ. ಶೌಚಾಲಯ ಇರುವುದಿಲ್ಲ. ನಿವೇಶನಕ್ಕೆವಿದ್ಯುಚ್ಛಕ್ತಿ  ಬರುವವರೆಗೆ ಅವರು ದೀಪದ ಬೆಳಕಿನಲ್ಲಿ ಅವರ ಜೀವನ, ವಾಟರ್ ಕ್ಯೂರಿಂಗ್ , ಸಾಮಾನುಗಳ ರಕ್ಷಣೆ ಅವರ ಜವಾಬ್ದಾರಿ .ಅವರಿಗೆ ತಿಂಗಳಿಗಿಷ್ಟು ಸಂಬಳ ಎಂದು ಗೊತ್ತು ಪಡಿಸಲಾಗುವುದು. ಜೊತೆಗೆ ಅವರು ಗಾರೆ ಕೆಲಸ ಮಾಡಿದರೆ ಅದರ ಕೂಲಿ ಸಹ ನೀಡಲಾಗುವುದು.

ಅವರು ಒಂದು ಮನೆ ಕಟ್ಟಿ ಮುಗಿಯುವಷ್ಟರಲ್ಲಿ ಇನ್ನೊಂದು ಮನೆ ಕೆಲಸ ಹುಡುಕಿಕೊಳ್ಳಬೇಕು. ಮನೆ ಗೃಹಪ್ರವೇಶದ ಹೊತ್ತಿಗೆ ಇವರು ವಾಸಿಸುತ್ತಿದ್ದ ಮನೆಯನ್ನು ಒಡೆದು ಹಾಕಿ ಕಂಪೌಂಡ್ ಕೆಲಸ ಮುಗಿಸುತ್ತಾರೆ. ಮನೆ ನಿರ್ಮಾಣದ ಪ್ರತಿ ಹಂತವನ್ನು ನೋಡುತ್ತಾ ವಾಸಿಸುವ ಇವರಿಗೆ ನಮ್ಮದೆ ಒಂದು ಮನೆ ಇರಬೇಕು ಎನಿಸುವುದಿಲ್ಲ. ಈಗ 5 ವರ್ಷಗಳಿಂದ ರಾತ್ರಿ ಕಾವುಲುಗಾರ ಪುಟ್ಟಸ್ವಾಮಿ ಪರಿಚಯ ಆದ. ಅವನು ಮತ್ತು ಅವನ ತಂಗಿಯ ಮಕ್ಕಳಿಗೆ ಒಂದೆರಡು ವರ್ಷ ನಮ್ಮ ಮನೆಯಲ್ಲಿ ನಾನು ಮತ್ತು ನನ್ನವರು ಪಾಠ ಹೇಳಿ ಕೊಡುತ್ತಿದ್ದೆವು. ಮಕ್ಕಳು ಹೇಳಿದ ಪ್ರಕಾರ ಅವರು ಚಾಮರಾಜ ನಗರದವರೆಂದು ತಿಳಿದು ಬಂತು. ಅಲ್ಪ ಸ್ವಲ್ಪ ಜಮೀನಿದ್ದರೂ  ನೀರಿನ ಕೊರತೆಯಿಂದ ಬೆಳೆಯು ಆಗುವುದಿಲ್ಲ.

ಪುಟ್ಟಸ್ವಾಮಿ ಈಗ 5 ವರ್ಷಗಳ್ಲಲಿ 5 ನೇ ಮನೆ ಕಾವಲುಗಾರನಾಗಿ ಕೆಲಸಮಾಡುತ್ತಿದ್ದಾನೆ. ಅವರಿಗೆ ಅವರ ಕಣ್ಣಮುಂದೆ ಕಟ್ಟುವ ದೊಡ್ಡ ದೊ ಡ್ಡ ಮನೆಗಳನ್ನು ನೋಡಿ ನಮ್ಮದು ಒಂದು ಮನೆಇ ರಬೇಕು ಎನಿಸುವುದಿಲ್ಲವೆ ಎಂದು ಯೋಚನೆ ಆಗಾಗ ಕಾಡುತ್ತಿತ್ತು . ಆದರೆ ಅವನಾಗಲಿ ಅವನ ಹೆಂಡತಿ ಆಗಲಿ ಒಂದುದಿನವೂ ನಮ್ಮ ಹತ್ತಿರ ಅವರ ಕಷ್ಟ ಹೇಳಿಕೊಂಡವರಲ್ಲ . ಅವರ ಮಗ ಉಮೇಶ ಆಗಾಗ ಬರುತ್ತಿದ್ದ. ನನ್ನ ಮೊಮ್ಮಗ ರಜಾಕ್ಕೆ ಬಂದಾಗ ಅವನ ಜೊತೆ ಕ್ರಿಕೆಟ್ ಆಡಲು ಬರುತ್ತಿದ್ದ. ನೋಡುತ್ತಾ ನೋಡುತ್ತಾ ಉಮೇಶ 8 ನೇ ತರಗತಿಗೆ ಸೇರಿದ್ದಾನೆ. ರೂಪನಗರದ ಮಕ್ಕಳು ಸಹ ಇವನ ಸ್ನೇಹಿತರಾಗಿದ್ದಾರೆ. ಎಷ್ಟೆಲ್ಲಾ ಸರ್ಕಾರ ಯೋಜನೆಗಳನ್ನು ರೂಪಿಸಿದರೂ ತಲೆಮೇಲೆ ಸೂರಿಲ್ಲದೆ ಎಷ್ಟು ಜನ ಇದ್ದಾರೆ. ನಗರ ಪ್ರದೇಶಗಳಲ್ಲಿಯ ಮನೆ ಸಮಸ್ಯೆ ಹೇಳತೀರದ್ದು. ಬಾಡಿಗೆ ಕೊಡಲು ಆಗದವರು ಕೊಳಚೆಪ್ರ ದೇಶಗಳಲ್ಲಿ ವಾಸಿಸುತ್ತಿದ್ದಾರೆ. ಈ ಸ್ಲಮ್ ನಲ್ಲಿರುವವರ ಜೀವನವನ್ನು  Slum Dog Millionaire  ಚಿತ್ರಿಸಿ ಚಿತ್ರದ ನಿರ್ಮಾಪಕರು ಮತ್ತು ಚಿತ್ರದ  ಯೂನಿಟ್ ನವರೆಲ್ಲಾ ಕೊಟ್ಯಾಂತರ ರೂಪಾಯಿ ಹಣ ಮಾಡಿಕೊಂಡರು.

ಮಗು ಆಳದೆ ತಾಯಿಯೂ ಹಾಲು ಕುಡಿಸುವುದಿಲ್ಲ. ಅಂತಹದರಲ್ಲಿ ಯಾವುದೇ ವ್ಯಕ್ತಿಯಾಗಲಿ ತಾನು ಮೇಲೆ ಬರಬೇಕು ನನ್ನ ಜೀವನ ಚೆನ್ನಾಗಿರಬೇಕು ನನ್ನ ಮಕ್ಕಳಿಗೆ ಒಳ್ಳೆ ಭವಿಷ್ಯ ರೂಪಿಸಬೇಕೆಂಬ ಅಲೋಚನೆ, ಆಕಾಂಕ್ಷೆ ಪ್ರಯತ್ನವಿಲ್ಲದೆ ಅವರ ಜೀವನ ಬದಲಾಗುವುದಿಲ್ಲ. ಯಾರನ್ನು ಯಾರು ಉದ್ದಾರ ಮಾಡಲು ಸಾಧ್ಯವಿಲ್ಲ ಅದು ಅವರಿಗೆ ಬರಬೇಕು. ಆಗಲೇ ಅವರ ಜೀವನದಲ್ಲಿ ಮಾರ್ಪಾಡು ಬರಲು ಸಾಧ್ಯ. ಬೇಕಾದಷ್ಟು ಅಡಚಣೆಗಳಿರಬಹುದು ಆದರೆ ಜೀವನದ ಬಗ್ಗೆ ಕನಸು ಆಕಾಂಕ್ಷೆ  ಇಟ್ಟುಕೊಂಡು ಕನಸನ್ನು ಸಾಕಾರಗೊಳಿಸಲು ಸತತ ಪ್ರಯತ್ನ ಮಾಡಿದರೆ ಖಂಡಿತಾ ಆಸೆ ಈಡೇರಿಸಿಕೊಳ್ಳಲು ಸಾಧ್ಯ.

shedಈ ರಾತ್ರಿ ಕಾವಲುಗಾರರ ಹಣೆಬರಹವೂ ಅಷ್ಟೆ.ಅವರಿಗೇ ಅವರ ಜೀವನಶೈಲಿ ಬದಲಾಗಬೇಕು. ಎಲ್ಲರಂತೆ ಬಾಳಬೇಕು ಎಂಬ ಛಲ ಅವರಿಗೆ ಬಂದರೆ ದಾರಿ ತಾನಾಗೆ ಕಾಣುತ್ತದೆ. ಮನಸ್ಸಿದ್ದರೆ ಮಾರ್ಗ. ಅದಕ್ಕೆ ಉದಾಹರಣೆಯಾಗಿ ಪುಟ್ಟಸ್ವಾಮಿ ಜೊತೆ ಬಂದ ಅವನ ತಂಗಿಯ ಕುಟುಂಬದವರು ರೆವೆನ್ಯೂ ನಿವೇಶನ ಕೊಂಡು ಸ್ವಂತ ಮನೆ ಕಟ್ಟಿಕೊಂಡು ವಾಸಿಸುತ್ತಿದ್ದಾರೆ.

ಜನಗಳು ಬುದ್ದಿವಂತರಾದರೆ ಸರ್ಕಾರದ ಯೋಜನೆ ಬಗ್ಗೆ ತಿಳಿದುಕೊಂಡು ಅವರಿಗೆ ಸಿಗಬೇಕಾದ ಸೌಲಭ್ಯಗಳನ್ನು ಪಡೆದುಕೊಂಡು ಮುಂದುವರೆಯಬಹುದು, ಅಭಿವೃದ್ದಿಹೊಂದಬಹುದು ಜೊತೆಜೊತೆಗೆ ಸರ್ಕಾರದ ಯೋಜನೆಗಳನ್ನು ಸರಿಯಾದ ರೀತಿ ಅನುಷ್ಟಾನಗೊಳಿಸಿದರೆ ಎಷ್ಟೋ ಬದಲಾವಣೆಗೆಯನ್ನು ತರಬಹುದು.

ಒಟ್ಟಿನಲ್ಲಿ ನಮ್ಮ ದೇಶದಲ್ಲಿ ರಾತ್ರಿ ಕಾವಲುಗಾರರು  ನಗರಗಳಿಗೆ ಕೆಲಸವನ್ನು ಹುಡುಕಿಕೊಂಡು ಬಂದು ಗುಡಿಸಲುಗಳಲ್ಲಿ ವಾಸಿಸುವ ಜನರು, ಕೊಳಚೆ ಪ್ರದೇಶದಲ್ಲಿರುವವರು ಒಂದು ಸ್ವಚ್ಛ ಜೀವನವನ್ನು ತಮ್ಮದಾಗಿಸಿಕೊಳ್ಳಲು ಪ್ರಯತ್ನಿಸಲಿ ಎಂಬುದೇ ನನ್ನ ಆಶಯ. ನಿರ್ಮಲ ಭಾರತದ ನಿರ್ಮಾಣವಾಗಲಿ. ನಮ್ಮ ಸಹಯೋಗ ನೀಡೋಣ.

 

– ನೀಲಮ್ಮ ಕಲ್ಮರಡಪ್ಪ, ಮೈಸೂರು

1 Response

  1. Krishnaveni Kidoor says:

    ಕರುಣಾಜನಕ ಸ್ತಿತಿ .

Leave a Reply

 Click this button or press Ctrl+G to toggle between Kannada and English

Your email address will not be published.

Follow

Get every new post on this blog delivered to your Inbox.

Join other followers: