ಶಾಲೆಯಲ್ಲಿ ಮೊದಲ ‘ಇಂಚರ’

Share Button

“ಇಂಚರ, ಬೇಗ ಬೇಗನೆ ಊಟ ಮುಗಿಸು, ಇಲ್ಲದಿದ್ದರೆ ನಿನ್ನನ್ನು ಶಾಲೆಗೆ ಕಳುಹಿಸಲ್ಲ”, ಎಂದು ಎರಡೂವರೆ ವರ್ಷದ ನನ್ನ ಮಗಳನ್ನು ಗದರಿದೆ. ಮುಗ್ಧೆ ಇಂಚರ, “ಜೂನ್ ಬಂತಾ ಅಮ್ಮಾ?” ಎಂದು ನನ್ನನ್ನೇ ಪ್ರಶ್ನಿಸಿದಳು. “ಈಗಿನ್ನೂ ಮಾರ್ಚ್ ತಿಂಗಳು, ಏಪ್ರಿಲ್, ಮೇ ಕಳೆದ ನಂತರ ಜೂನ್ ಬರುತ್ತೆ, ಈಗ ಮೊದಲು ಊಟ ಮಾಡು” ಎಂದು ಹೇಳಿದರೆ, “ಈಗ ಯಾಕೆ ಜೂನ್ ಬಂದಿಲ್ಲ?” ಎಂದು ಮತ್ತೆ ಪ್ರಶ್ನೆ ಮಾಡಿದಳು ನನ್ನ ಮಗಳು. ಏನೆಂದು ಉತ್ತರಿಸಲಿ? ಉತ್ತರಿಸಿದಷ್ಟೂ ಪ್ರಶ್ನೆಗಳ ಸುರಿಮಳೆ.

ಇಂಚರಳಿಗೆ ಶಾಲೆಯ ಬಗ್ಗೆ ಸುಂದರವಾದ ಕಲ್ಪನೆ. ಶಾಲೆಯ ತುಂಬ ಅವಳದೇ ಪ್ರಾಯದ ಪುಟ್ಟ ಪುಟ್ಟ ಮಕ್ಕಳು, ವಿಧ ವಿಧದ ಆಟಿಕೆಗಳು, ಬರೆಯಲು ಬಣ್ಣ ಬಣ್ಣದ ಪೆನ್ಸಿಲ್ಗಳು, ಬಗೆ ಬಗೆಯ ಆಟಗಳನ್ನು ಆಡಿಸುವ ಟೀಚರ್ ಗಳು, ಹೊತ್ತು ಕಳೆದಷ್ಟೂ ಸಾಲದ ಸಂಭ್ರಮದ ವಾತಾವರಣವಿದೆಯೆಂಬುದು ಅವಳ ಕಲ್ಪನೆ. ನಾನೂ ಹಾಗೆಯೇ ವರ್ಣಿಸಿದ್ದೆ.  “ಶಾಲೆ ಎಂದರೆ ಏನಮ್ಮ?” ಎಂದು ಕೇಳಿದ ಬಾಲೆಗೆ ಮತ್ತೇನೆಂದು ಹೇಳಲಿ? ಏನಾದರೂ ಹಠ ಮಾಡಿದರೆ ಶಾಲೆಗೆ ಕಳುಹಿಸುವುದಿಲ್ಲ ಎಂದ ಕೂಡಲೇ ತನ್ನೆಲ್ಲ ಹಠ ಮರೆತು ಬಿಡುತ್ತಿದ್ದಳು. ಅಲ್ಲದೆ, ನಿತ್ಯವೂ ‘ಜೂನ್ ಬಂತೆ?’ ಎಂದು ವಿಚಾರಿಸುತ್ತಿದ್ದಳು. ತಾನೇಕೆ ಶಾಲೆಗೆ ಹೋಗಬೇಕು ಎಂಬುದು ಅವಳ ಪ್ರಶ್ನೆಯಾದರೆ, ಶಾಲೆಗೆ ಹೋಗಿ ತಾನು ಏನೇನೆಲ್ಲ ಮಾಡುವೆ ಎಂಬ ಪಟ್ಟಿ ಮಾಡಿ ಅವಳದೇ ಉತ್ತರ ಸಿದ್ಧ ಪಡಿಸುತ್ತಿದ್ದಳು.

ಶಾಲೆಯ ಕನಸಲ್ಲೇ ದಿನ ಕಳೆಯುತ್ತಿದ್ದ ಇಂಚರಳಿಗೆ ಮೇ ತಿಂಗಳಲ್ಲಿ  ‘ಇನಿಫಾಮ್’ ಸಮವಸ್ತ್ರ ಬಂತು. ಅವಳ ತೊದಲು ನುಡಿಯಲ್ಲಿ ಅದು ಇನಿಫಾಮ್ ಆಗಿ ಬಿಟ್ಟಿತ್ತು. ದಿನವೂ ಒಂದು ಬಾರಿ ಅದನ್ನು ತೊಟ್ಟು ತಾನು ಹೇಗೆ ಕಾಣಿಸುತ್ತಿದ್ದೇನೆ ಎಂದು ಕೇಳಿ, ಕನ್ನಡಿಯಲ್ಲೊಮ್ಮೆ ನೋಡಿ ಸಂಭ್ರಮಿಸುತ್ತಿದ್ದಳು. ಬಣ್ಣಗಳನ್ನು ಸರಿಯಾಗಿ  ಗುರುತಿಸಲು ಶುರು ಮಾಡಿದ್ದಳು. ಹಾಗಾಗಿ ಪದೇ ಪದೇ ತನ್ನ ಸಮವಸ್ತ್ರದ ಬಣ್ಣಗಳನ್ನು ಹೇಳಿ, ಅಮ್ಮನಿಗೇಕೆ ಸಮವಸ್ತ್ರವಿಲ್ಲ ಎಂದು ಕೇಳುತ್ತಿದ್ದಳು. ಬೇರೆ ಬಣ್ಣದ ಸಮವಸ್ತ್ರ ತೊಟ್ಟ ಮಕ್ಕಳು ಮನೆ ಮುಂದೆ ಹಾದು ಹೋಗುವಾಗ ಮತ್ತೆ ಪ್ರಶ್ನೆ, ‘ನನ್ನದೇಕೆ ಬೇರೆ ಬಣ್ಣ’ ಎಂಬುದು.

                                                                   (ಸಾಂದರ್ಭಿಕ ಚಿತ್ರ : ಅಂತರ್ಜಾಲದಿಂದ)

ಅಪ್ಪ ಆಫೀಸಿಗೆ ತೆಗೆದುಕೊಂಡು  ಹೋಗುತ್ತಿದ್ದ ನೀರಿನ ಬಾಟಲ್ ಮೇಲೆ ಇಂಚರಳಿಗೆ ಕಣ್ಣು. ‘ನಿನಗೂ ಶಾಲೆಗೆ ಹೋಗುವಾಗ ಬಾಟಲ್ ಕೊಡೋಣ’ ಎಂದರೆ, ‘ಈಗಲೇ ತರೋಣ’ ಎಂದಳು. ಅಪ್ಪ ಅಮ್ಮನ ಲಾಪ್ ಟಾಪ್ ಚೀಲ ನೋಡಿ ತನಗೊಂದು ಚೀಲ ಬೇಕೆಂಬ ಆಸೆ. ಅಂತೂ, ಶಾಲೆಗೆ ಹೋಗುವುದಾದ್ರೆ  ಬ್ಯಾಗ್,  ಬಾಟಲ್,ಲಂಚ್ ಬಾಕ್ಸ್ ಎಲ್ಲವೂ ಸಿಗುತ್ತದೆ ಎಂದು ತಿಳಿಯಿತು. ಹಾಗಾಗಿ ಶಾಲೆಗೆ ಹೋಗುವ ಉತ್ಸಾಹ ಇನ್ನಷ್ಟು ಹೆಚ್ಚಿತು.

ಅಂತೂ ಇಂತೂ , ಹತ್ತಾರು ಅಂಗಡಿ ಸುತ್ತಿ, ಮನಸ್ಸಿಗೊಪ್ಪುವ ಚೀಲ, ಬಾಟಲ್, ಬಟ್ಟೆ, ಚಪ್ಪಲಿ, ಬಳೆ ಎಂದು ಖರೀದಿಸಿ ಅಪ್ಪನ ಜೇಬನ್ನು ಕತ್ತರಿಸಿ ಆಯಿತು. ತಂಡ ಮೇಲೆ ಅವುಗಳನ್ನು ಅಕ್ಕ-ಪಕ್ಕದ ಮನೆಯವರಿಗೆ ಪ್ರದರ್ಶಿಸಿ ಖುಷಿ ಪಟ್ಟಿದ್ದೂ ಆಯಿತು. ಫೊಟೊ ತೆಗೆದು ಊರಲ್ಲಿರುವ ಅಜ್ಜ- ಅಜ್ಜಿಗೆ ಕಳುಹಿಸಿಯೂ ಆಯಿತು.

ಕೊನೆಗೂ ಇಂಚರ ಕುತೂಹಲದಿಂದ ಎದುರು ನೋಡುತ್ತಿದ್ದ ಜೂನ್ ತಿಂಗಳು ಬಂದೇ ಬಿಟ್ಟಿತು. “ನಾಳೆಯೇ ನಿನ್ನ ಶಾಲೆ ಶುರು”, ಎಂದ ನನಗೆ “ನಾಳೆ ಎಂದರೆ ಏನಮ್ಮ ?” ಎಂದು ಕೇಳಿದಳು. ಅದನ್ನು ಅವಳಿಗೆ ಹೇಗೆ ವಿವರಿಸಲಿ ಎಂದು ಆಲೋಚಿಸುತ್ತಿರುವಾಗಲೇ, “ಅಮ್ಮಾ, ಪೂತ್ತಿಗೆ (ಸ್ಪೂರ್ತಿ, ಅವಳದೇ ಪ್ರಾಯದ ಎದುರುಮನೆ ಹುಡುಗಿ) ಜೂನ್ ಬಂತಾ?” ಎಂದು ಕೇಳಿದಳು!

ಶಾಲೆಯಲ್ಲಿ ಮೊದಲ ದಿವಸ ಮುಕ್ಕಾಲು ಗಂಟೆಯ ಅವಧಿ. ಚಿಕ್ಕ ಮಕ್ಕಳಲ್ಲವೇ? ಅಭ್ಯಾಸವಾಗಬೇಕಷ್ಟೆ. ಶಾಲೆಗೆ ಹೋಗುವ ಖುಷಿಯಲ್ಲಿ ಪ್ರಯಾಸವಿಲ್ಲದೆ ತಿಂಡಿ ತಿಂದಳು. ಸ್ನಾನ ಮಾಡಿಸಲು ಅವಸರಿಸಿದಳು. ದೇವರಿಗೆ, ಅಪ್ಪ ಅಮ್ಮನಿಗೆ ನಮಸ್ಕರಿಸಿ, ದೃಷ್ಟಿ ತಾಗದಂತೆ ಹಣೆಗೆ, ಕೆನ್ನೆಗೆ ಕಪ್ಪು ಕಾಡಿಗೆ ಹಚ್ಚಿ, ಮೇಲೊಂದಿಷ್ಟು ಪೌಡರ್‍ ಬಳಿದು , ಹೊಸ ‘ಇನಿಫಾಮ್’ ತೊಟ್ಟು, ಶಾಲೆಗೆ ಹಾಕಲೆಂದೇ ಅಜ್ಜ ಕೊಡಿಸಿದ ಚಪ್ಪಲಿ ಹಾಕಿದಳು. ಅಷ್ಟರಲ್ಲಿ ಬ್ಯಾಗ್ ಮರೆತೇ ಹೋಯಿತು. ಅದೇಕೋ ಏನೋ ದುಃಖ ಬಂತವಳಿಗೆ. ಅಳುತ್ತಲೇ, “ಅಮ್ಮಾ, ನನ್ನ ಬ್ಯಾಗ್ ಎಲ್ಲಿಯಮ್ಮ?” ಎಂದು ಕೇಳಿದಳು. ಚೀಲಕ್ಕೆಲ್ಲ ತುಂಬಿಸಿ ಕೊಡುವಷ್ಟರಲ್ಲಿ ಮುಗ್ಧ ಮೊಗದಲ್ಲಿ ಮಂದಹಾಸ ಮೂಡಿತ್ತು. ಆದರೆ ಕಣ್ಣಂಚಲ್ಲಿ ಜಾರದೆ ಉಳಿದಿದ್ದ ಕಣ್ಣೀರಿನ ಹನಿಯೊಂದು ಸೂರ್ಯನ ಎಳೆ ಬಿಸಿಲಿಗೆ ನಕ್ಷತ್ರದಂತೆ ಮಿನುಗುತ್ತಿತ್ತು.

ಅಪ್ಪ ಅಮ್ಮನ ಜೊತೆ ಬೈಕಲ್ಲಿ ಶಾಲೆಗೆ ತೆರಳಿದಾಗ ಶಾಲೆಯ ಆವರಣದಲ್ಲಿ ತುಂಬ ಮಕ್ಕಳನ್ನೂ, ಅವರ ತಂದೆ ತಾಯಿಯರನ್ನು ನೋಡಿ, ಇಂಚರಳಲ್ಲಿ ಏನೋ ಹೊಸ ಅಳುಕು ಕಾಣಿಸಿತು. ಎಲ್ಲರದೂ ಪರಿಚಯವಿಲ್ಲದ ಮುಖ. ಒಂದಿಬ್ಬರು ಮಾತನಾಡಿಸಿದರೂ, ಸ್ವರ ಗಂಟಲಿನಿಂದಾಚೆಗೆ ಬರುತ್ತಲೇ ಇರಲಿಲ್ಲ. ಶಿಶುವಿಹಾರವನ್ನು ನೋಡಿಕೊಳ್ಳುವ ಶಿಕ್ಷಕಿಯರು ಮಕ್ಕಳನ್ನು ಕರೆದೊಯ್ಯುವಾಗ ಇಂಚರ ನನ್ನ ಕೈಯನ್ನು ಗಟ್ಟಿಯಾಗಿ ಹಿಡಿದಿದ್ದಳು. ಅವರು ಅವಳು ಮತ್ತು ನನ್ನ ಕೈಯನ್ನು ಬೇರ್ಪಡಿಸುವಾಗ ನನ್ನ ಮಗಳು ನನ್ನ ಕಣ್ಣಲ್ಲಿ ಕಣ್ಣಿಟ್ಟು ದೈನ್ಯ ಭಾವದಿಂದ ನೋಡಿದಾಗ ನನ್ನ ಹೃದಯವೇ ಕಿತ್ತು ಬರುವಂತಾಯಿತು. ಎಷ್ಟಾದರೂ ನಾನೂ ತಾಯಿಯಲ್ಲವೇ?

ಎಲ್ಲ ಮಕ್ಕಳ ಅಳು,ಕಿರುಚಾಟ ಹೊರಗಡೆ ಕುಳಿತಿದ್ದ ನಮಗೆ ಕೇಳಿಸುತ್ತಿತ್ತು. ಆಗೊಮ್ಮೆ ಈಗೊಮ್ಮೆ ಇಂಚರಳೇ ಅತ್ತಂತೆ , ಅವಳದೇ ಧ್ವನಿಯಂತೆ ಭಾಸವಾಗುತ್ತಿತ್ತು. ಆಗೆಲ್ಲ ಯಾರೋ ಹೊಟ್ಟೆಗೆ ಚೂರಿಯಿಂದ ಇರಿದಂತಾಗುತ್ತಿತ್ತು. ಅಲ್ಲಿಯೇ ಇದ್ದ ವಾಚ್ ಮನ್ ನಮ್ಮ ಮನಸ್ಸಿನ ತೊಳಲಾಟವನ್ನು ಅರಿತವನಂತೆ, “ಏನೂ ಆಗಲ್ಲಮ್ಮಾ. ಮಕ್ಕಳಿಗೆ ಹೊಸತು. ಹೋಗ್ತಾ ಹೋಗ್ತಾ ಹೊಂದಿಕೊಳ್ತಾರೆ” ಎಂದು ಸಮಾಧಾನಪಡಿಸಿದ.

ಮುಕ್ಕಾಲು ಗಂಟೆಯ ಅವಧಿ 2  ಗಂಟೆಗೂ ಅಧಿಕದಂತೆ ತೋರಿತು. ಮಕ್ಕಳನ್ನೆಲ್ಲ ಹೊರಗೆ ಕರೆದುಕೊಂಡು ಬಂದರು. ಇಂಚರ ಬರುವಾಗ,ಅವಳ ಮುಖ ಭಾವ ಈಗ ತಾನೇ ಜೋರಾಗಿ ಮಳೆ ಬಂದು ಬಿಟ್ಟಂತೆ ಕಾಣುತ್ತಿತ್ತು. ಅಂತೂ,ಅವಳ ಶಾಲೆಯ ಕಲ್ಪನೆ, ಕನಸಿಗೆ ಒಂದು ರೂಪು ಸಿಕ್ಕಿತ್ತು. ಅವಳ ಕಲ್ಪನೆಯ ತರಹ ಖಂಡಿತಾ ಇದ್ದಿರಲಿಕ್ಕಿಲ್ಲ. ಆದರೂ ಹೊಸ ವಾತಾವರಣದ ಅನುಭವ ಅವಳಿಗಾಗಿತ್ತು.

ನಾವಿಬ್ಬರೂ ಇಂಚರಳನ್ನು ‘ಅತ್ತೆಯಾ?’ ಎಂದು ಕೇಳಿದೆವು. “ಹೌದು, ಅತ್ತೆ, ನಿಲ್ಲಿಸಿದೆ. ಪುನಃ ಅತ್ತೆ, ನಿಲ್ಲಿಸಿದೆ” ಎಂದಳು. ಏಕೆಂದು ಕೇಳಿದೆವು. “ಬೇರೆಲ್ಲ ಮಕ್ಕಳು ‘ಅಮ್ಮಾ ಬೇಕೆಂದು ‘ ಅತ್ತರು. ನಂಗೂ ಅಮ್ಮಾ ಬೇಕಲ್ಲ! ಅದಕ್ಕೆ ನಾನೂ ‘ಅಮ್ಮಾ ಬೇಕು’ ಎಂದು ಅತ್ತು ಬಿಟ್ಟೆ” ಎಂದು ಹೇಳಿದಾಗ ನಮಗೆ ನಗುವೋ ನಗು.

ಇಂಚರಳ ಶಾಲೆಯ ಸಂಭ್ರಮ ಎರಡೇ ದಿನಗಳಿಗೆ ಕೊನೆಯಾಯಿತು. ಒಂದು ವಾರ ಕಳೆಯುತ್ತಿದ್ದ ಹಾಗೆ ಶಾಲೆ ಬೇಡ ಎಂದೆನಿಸಲು ಶುರುವಾಗಿದೆ. ಇನ್ನು, ‘ದಿನ ಕಳೆದ ಹಾಗೆ ಹೊಂದಿಕೊಳ್ಳುತ್ತಾಳೆ ‘ ಎಂದು ನನ್ನ ಅಮ್ಮ ನನ್ನನ್ನು ಸಮಾಧಾನಪಡಿಸುತ್ತಿದ್ದಾರೆ!

– ಸ್ವಪ್ನ ಪಿ. ಎಸ್.

7 Responses

  1. km vasundhara says:

    ಇಂಚರಳ ಶಾಲೋತ್ಸವದ ಬಗ್ಗೆ ಆಹ್ಲಾದಕರ ಬರವಣಿಗೆ. ಪುಟಾಣಿಯ ‘ಇನ್ಫಾಮ್’ ಫೋಟೋನೂ ಹಾಕಿದ್ದರೆ ನೋಡಿ ಸಂಭ್ರಮಿಸುತ್ತಿದ್ದೆವು..

    • Anonymous says:

      ಧನ್ಯವಾದಗಳು. ಇದು ನನ್ನ ಮಗಳು ಆದ್ಯಳ ಸಂಭ್ರಮದ ಕಥೆ.

  2. ನಯನ ಬಜಕೂಡ್ಲು says:

    So…….. Beautiful article ಸ್ವಪ್ನ ಅವರೇ . ನನ್ಗೆ ನನ್ನ ಮಗಳನ್ನು ಸ್ಕೂಲ್ಗೆ ಫಸ್ಟ್ ಟೈಮ್ ಬಿಡ್ಲಿಕ್ಕೆ ಹೋದ ದಿನ ನೆನಪಾಯಿತು . ನಾನು actually ಬಹಳ ಸ್ಟ್ರಾಂಗ್ , ಒಂದು ಮಟ್ಟಿನ ಯಾವ ಭಾವನೆಗಳಿಗೂ ಕರಗುವವಳಲ್ಲ , ಆದ್ರೆ ಆ ದಿನ ಮಾತ್ರ ನನ್ ಮಗಳಿಗಿಂತ ನಾನೇ ತುಂಬಾ ಅತ್ತು ಬಿಟ್ಟಿದ್ದೆ . ನಿಮ್ಮ ಲೇಖನ ಓದುವಾಗ ಆ ಘಟನೆ ಮತ್ತೊಮ್ಮೆ ನೆನಪಾಗಿ ನಗು ಬಂತು . ತುಂಬಾ ಆಪ್ತ , ಅಪ್ಯಾಯಮಾನವಾದ ಬರಹ .

  3. Shruthi Sharma says:

    ಅದೆಷ್ಟು ಅಂದದ ಬರಹ.. ನಾನು ಶಾಲೆಯ ಮೊದಲ ದಿನ ಬೊಬ್ಬಿರಿದು ಅತ್ತಿದ್ದೂ, ಒಂದಷ್ಟು ಸಮಯದ ಬಳಿಕ ಮನಸ್ಸೊಳಗೆ ಅಳುತ್ತಾ ಶಾಲೆಯಲ್ಲಿ ಕೂತಿದ್ದರ ನೆನಪು ಮರುಕಳಿಸಿತು.

  4. Anonymous says:

    Dhanyavadagalu

  5. Shankari Sharma says:

    ಎಲ್ಲರಿಗೂ ತಮ್ಮ ತಮ್ಮ ಅಥವಾ ಮಕ್ಕಳ ಅಂಗನವಾಡಿ ಯ ಮೊದಲ ದಿನಗಳನ್ನು ನೆನಪಿಸುವ ಅಪ್ತ ಬರಹ…ಚೆನ್ನಾಗಿದೆ.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: