ಪುರಿ-ಡಾರ್ಜಿಲಿಂಗ್ ಪ್ರವಾಸ ಪುಟಗಳು : ಪುಟ 8   

Share Button


ಕೇದಾರ ಗೌರಿ ಸನ್ನಿಧಿಯಲ್ಲಿ

ಮೂರನೇ ದಿನ ಬೆಳಗ್ಗೆ ಬೇಗನೇ ಹೊರಡಬೇಕೆಂದು ಹಿಂದಿನ ರಾತ್ರಿಯೇ ಗಣೇಶಣ್ಣ ಹೇಳಿದ್ದರಲ್ಲಾ.. ಪುರಿಯಿಂದಲೇ ಕೋಲ್ಕತ್ತಾಕ್ಕೆ ರಾತ್ರಿ ರೈಲು ಹತ್ತಲಿರುವುದರಿಂದ ನಮ್ಮೆಲ್ಲರ ಸಾಮಾನು ಸರಂಜಾಮುಗಳನ್ನು ಜೊತೆಗೂಡಿಸಿಕೊಳ್ಳುವುದಿತ್ತು. ಎಂಟು ಗಂಟೆ ಹೊತ್ತಿಗೆ ಎಲ್ಲರೂ ರಮೇಶಣ್ಣನ ನಳಪಾಕವನ್ನು ಪೊಗದಸ್ತಾಗಿ ಹೊಡೆದು,  ತಮ್ಮ ತಮ್ಮ ಸಾಮಾನುಗಳನ್ನೆಲ್ಲಾ ಕ್ರೋಢೀಕರಿಸಿಕೊಂಡು ನಮ್ಮ ಬ್ರಹ್ಮರಥದಲ್ಲಿ ಆರೂಢರಾದಾಗ ಶರ್ಮರು   ದೇವರನಾಮದೊಂದಿಗೆ  ಶುಭಕೋರಿ ಪ್ರವಾಸಕ್ಕೆ ಚಾಲನೆ ನೀಡಿದರು.

80ಕಿ.ಮೀ. ದೂರದಲ್ಲಿರುವ ಪುರಿ ಶ್ರೀ ಜಗನ್ನಾಥ ದೇವರ ದರ್ಶನವು ದಿನದ ಕಾರ್ಯಕ್ರಮವಾಗಿತ್ತು. ಮಾರ್ಗ ಮಧ್ಯದಲ್ಲಿ, ಭುವನೇಶ್ವರ ಪಟ್ಟಣದೊಳಗೇ ಇದೆ ಸುಂದರವಾದ ಕೇದಾರ ಗೌರಿ ದೇವಸ್ಥಾನ. ಅಲ್ಲಿ ದರ್ಶನ ಮುಗಿಸಿಕೊಂಡು ಮುಂದುವರಿಯುವುದೆಂದರು ಬಾಲಣ್ಣನವರು.

ದೇಗುಲದ ಆವರಣದ ಒಳಗಡೆಗೆ ಕಾಲಿಡುತ್ತಿದ್ದಂತೆಯೇ, “ದೇವರು ಕೊಟ್ಟರೂ ಪೂಜಾರಿ ಬಿಡ” ಎಂಬ ಗಾದೆ ಇಲ್ಲಿ ನಿಜವಾಗಿದೆಯೋ ಎನಿಸಿತು ಒಮ್ಮೆ. ಒಳಗಡೆ ಮೊಬೈಲ್ ನಿಷಿದ್ಧ ಬೋರ್ಡ್.. ಆದರೆ ಅದನ್ನು ಗಮನಿಸದೆ, ನಮ್ಮ ಪ್ರವಾಸೀ ಗುಂಪಿನ ಮುಖ್ಯಸ್ಥರು ತಮಗೆ ಬಂದ ತುರ್ತು ಕರೆಗೆ  ಸ್ಪಂದಿಸಿದಾಗ ಅಲ್ಲಿಯ ಅರ್ಚಕರ ಸಹಸ್ರನಾಮಾರ್ಚನೆ.. ಆದರೆ ಅದೇ ಅರ್ಚಕರು ಅಲ್ಲಿಯೇ ಅವರ ಸ್ವಂತ ಮೊಬೈಲ್ ನ್ನು ಬೇಕಾದಂತೆ ಬಳಸುತ್ತಿರುವುದು ಕಂಡಿತು. ಇದು ಸರಿಯೇ?.. ಕಾನೂನು ಎಲ್ಲರಿಗೂ ಒಂದೇ ಅಲ್ಲವೇ?.. ಎಂಬುದೇ ನಮ್ಮನ್ನೆಲ್ಲ ಕಾಡಿದ ಪ್ರಶ್ನೆ!

ಕೇದಾರ ಗೌರಿ ಮಂದಿರ, ಭುವನೇಶ್ವರ (ಚಿತ್ರಕೃಪೆ ಅಂತರ್ಜಾಲ)

ತುಂಬಾ ಪ್ರಾಚೀನ ಪರಂಪರೆಯುಳ್ಳ ಈ ದೇಗುಲವು, ಶಾಂತವಾದ, ಸುತ್ತಲೂ ಧಾರಾಳ ಹಸಿರು ಮರಗಳಿಂದ ಆವೃತವಾದ, ತಂಪಾದ ಜಾಗದಲ್ಲಿದೆ. ಜನಜಂಗುಳಿಯ ಗಲಭೆಯಿಲ್ಲದ ಸುಂದರ ವಾತಾವರಣದಲ್ಲಿ ಕೇದಾರ ಗೌರಿ ದೇಗುಲವನ್ನು ಹೊರಗಿನಿಂದ ನೋಡಿದಾಗ ಲಿಂಗರಾಜ ದೇಗುಲದಂತೆಯೇ ಇರುವ ಕಳಿಂಗ ಶಿಲ್ಪ ಕಲೆಯನ್ನು ಗಮನಿಸಬಹುದು. ಆವರಣದಲ್ಲಿ ಇದೇ ರೀತಿಯ  ಒಂದೆರಡು ಶಿಲ್ಪ ಗುಡಿಗಳನ್ನು ಕಂಡರೂ, ಅವುಗಳಲ್ಲಿ ದೇವರನ್ನಿರಿಸಿ ಪೂಜೆಗೈಯುವುದು ಗೋಚರಿಸಲಿಲ್ಲ. ಆದರೆ ಅವುಗಳ ಹೊರಭಾಗದ, ಅಪರೂಪದ, ನಾಜೂಕಾದ ಶಿಲಾ ಕೆತ್ತನೆಗಳು ಕಣ್ಮನ ಸೆಳೆಯುವಂತಿದ್ದವು. ಇನ್ನುಳಿದ ಆಂಜನೇಯ, ಮುಕ್ತೇಶ್ವರ ಮತ್ತು ಸಿದ್ಧೇಶ್ವರ ಗುಡಿಗಳಲ್ಲಿರುವ ದೇವರಿಗೆ ನಮಿಸಿ ಮುನ್ನಡೆದಾಗ, ದೇಗುಲದ ಆವರಣದಲ್ಲಿದ್ದ ಹಚ್ಚಹಸುರಾದ ಹತ್ತಾರು ಬೇವಿನ ಮರಗಳೆಡೆಯಿಂದ ತಂಗಾಳಿ ತೇಲಿ ಬರುತ್ತಿತ್ತು. ಅಲ್ಲೇ ಪಕ್ಕದ ಹಸಿರು ಹಾಸಿನ ಮೇಲೆ ನಾಲ್ಕೈದು ಬಾತುಕೋಳಿಗಳು ಅಡ್ಡಾಡುತ್ತಾ ಬಂದು ನಮ್ಮನ್ನು ಮಾತನಾಡಿಸಿದವು. ದೇವಸ್ಥಾನದ ಪಕ್ಕದಲ್ಲಿರುವ ತಂಪಾದ ದೇವರ ಕೊಳದಲ್ಲಿ ಕೈ ಕಾಲಾಡಿಸಿ ಹೊರಬಂದಾಗ ಮನವೂ ತಂಪಾದುದು ಸುಳ್ಳಲ್ಲ.

ಕೇದಾರ ಗೌರಿ ದೇವಸ್ಥಾನದ ನಿರ್ಮಾಣದ ಹಿಂದಿರುವ ಒಂದು ರೋಚಕ ಕಥೆಯು ಹೀಗಿದೆ. ಬಹಳ ಹಿಂದೆ ಒಂದು ಹಳ್ಳಿಯಲ್ಲಿ ಕೇದಾರ ಎಂಬ ಹುಡುಗನೂ ಗೌರಿ ಎಂಬ ಹುಡುಗಿಯೂ ಪರಸ್ಪರ ಪ್ರೀತಿಸಿ ಮದುವೆಯಾಗಲು ನಿರ್ಧರಿಸಿದಾಗ ಈರ್ವರ ಮನೆಗಳಲ್ಲೂ ಅದನ್ನು ವಿರೋಧಿಸಿದರು. ಅದರಿಂದಾಗಿ ಅವರಿಬ್ಬರೂ ಮನೆ ಬಿಟ್ಟು ಹೊರಡುವಂತಾಯಿತು. ಹಾಗೆ ಕಾಡು ಮೇಡುಗಳಲ್ಲಿ ನಡೆಯುತ್ತಾ ಸಾಗಿದರು. ಗೌರಿಯು ತನಗೆ ತುಂಬಾ ಹಸಿವಾಗಿರುವುದರಿಂದ ಮುಂದೆ ನಡೆಯಲು ಅಶಕ್ತಳಾಗಿರುವುದಾಗಿ ಹೇಳಿದಾಗ, ಕೇದಾರನು ಅವಳನ್ನು ಒಂದು ಮರದ ಬುಡದಲ್ಲಿ ಕುಳ್ಳಿರಿಸಿ ಆಹಾರ ಹುಡುಕಿಕೊಂಡು ಕಾಡಿನೊಳಗೆ ಹೋದನು. ಎಷ್ಟು ಹೊತ್ತಾದರೂ ಅವನು ಹಿಂತಿರುಗಿ ಬಾರದಾಗ ಗಾಬರಿಗೊಂಡ ಅವಳಿಗೆ, ಹುಲಿಯೊಂದು ಅವನನ್ನು ಕೊಂದು ತಿಂದ ವಿಷಯ ತಿಳಿಯಿತು. ದುಃಖ ತಡೆಯಲಾರದ ಗೌರಿಯು ಇದೇ ಸ್ಥಳದಲ್ಲಿ ಕೆರೆಗೆ ಹಾರಿ ಪ್ರಾಣ ಕಳೆದುಕೊಂಡಳು. ಇವರಿಬ್ಬರಿಗೆ,  ಉತ್ಕಲದ ರಾಜನಾಗಿದ್ದ ಲಾಲತೇಂದು ಕೇಸರಿಯು ಈ ದೇಗುಲವನ್ನು ಕಟ್ಟಿಸಿದನೆಂದು ಪ್ರತೀತಿ. ಇಂದಿಗೂ, ಪರಸ್ಪರ ಪ್ರೀತಿಸಿದವರು, ಅವರ ಮದುವೆಗೆ ಯಾವ ವಿಘ್ನವೂ ಬಾರದಂತೆ ಇಲ್ಲಿ ಹರಕೆ  ಹೊತ್ತರೆ ಅವರ ಬೇಡಿಕೆಯು ಈಡೇರುವುದೆಂದು ನಂಬುತ್ತಾರೆ. ಮದುವೆಯಾಗದವರಿಗೆ ಮದುವೆಯೂ ಆಗುವುದೆಂಬ ನಂಬಿಕೆಯೂ ಇದೆ.

ಹೊರ ಬರುತ್ತಿದ್ದಂತೆಯೇ, ಪ್ರವೇಶ ದ್ವಾರದ ಬಳಿ ಕೂತಿದ್ದ, ದೇವರ ಫೋಟೋಗಳನ್ನು ಇರಿಸಿ ಬಿಕ್ಷೆ ಬೇಡುವ, ಎರಡನೇ ಉನ್ನತ ಮಟ್ಟದ ಬಿಕ್ಷುಕರಿಗೆ ದಕ್ಷಿಣೆ ಹಾಕಿ, ತುಂಡಾಗಿ ನೆಲದಲ್ಲಿ ಹರಡಿ ಬಿದ್ದಿದ್ದ ವಿದ್ಯುತ್ ತಂತಿಗಳನ್ನು ಹಾಯ್ದು ಬರಲು ತುಸು ವಿಳಂಬವಾದರೂ ಮನಸ್ಸು ಖುಷಿ ಗೊಂಡಿತ್ತು…ಪುರಿಯೆಡೆಗಿನ ಪ್ರಯಾಣಕ್ಕೆ ಮನ ಕಾತರಗೊಂಡಿತ್ತು…

(ಮುಂದುವರಿಯುವುದು..)

ಹಿಂದಿನ ಪುಟ ಇಲ್ಲಿದೆ  ; ಪುರಿ-ಡಾರ್ಜಿಲಿಂಗ್ ಪ್ರವಾಸ ಪುಟಗಳು : ಪುಟ 7

-ಶಂಕರಿ ಶರ್ಮ, ಪುತ್ತೂರು.

2 Responses

  1. ನಯನ ಬಜಕೂಡ್ಲು says:

    ಆ ವಯ್ಯಾ (,ಅರ್ಚಕ ) ಬಿಲ್ಡ್ ಅಪ್ ತಗೋಳ್ಳೋಕೆ ಹಾಗಾಡಿರ್ತಾನೆ ಮೇಡಂ, ನೀವುಗಳು ತುಸು ಅವರನ್ನ ಜಾಡಿಸಿ , ಜಾಲಾಡಿ ಬರ್ಬೇಕಿತ್ತು
    ಕೇದಾರ – ಗೌರಿಯ ಕಥೆ ಚೆನ್ನಾಗಿದೆ . ತಮಗಾದ ಅನ್ಯಾಯ ಬೇರೆ ಪ್ರೇಮಿಗಳಿಗೆ ಆಗ್ಬಾರ್ದು ಅಂತ ಭಕ್ತರ ಇಷ್ಟಾರ್ಥ ಮರೆಯಾಗಿದ್ದುಕೊಂಡೇ ನೆರವೇರಿಸ್ತಿರಬಹುದು. ಒಟ್ಟಲ್ಲಿ ಚೆನ್ನಾಗಿದೆ ಪ್ರವಾಸ ಕಥನ .

  2. Shankari Sharma says:

    ನೀವು ಹೇಳುವುದೇನೋ ಸರಿ ನಯನ ಮೇಡಂ. ಆದ್ರೆ ಹೊಸ ಊರಲ್ಲಿ ನಮಗೆ ಜಾಸ್ತಿ ಮಾತಾಡುವ ಹಾಗೆ ಇಲ್ವಲ್ಲ..
    ನಿಮ್ಮ ಮೆಚ್ಚುಗೆಗೆ ಧನ್ಯವಾದಗಳು.

Leave a Reply to Shankari Sharma Cancel reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: