ಮತ್ತೆ ಚಿಗುರಿದಾಗ….

Share Button

 

ಅದೊಂದು ಹಣ್ಣಿನ ಗಿಡ. ಸಣ್ಣ ಗಾತ್ರದ ಮರವೆಂದರೂ ಅಡ್ಡಿಯಿಲ್ಲ. ಬಹುಶಃ ಯಾರೂ ಅದನ್ನು ಅಲ್ಲಿ ನೆಟ್ಟದ್ದಲ್ಲ ಅನ್ನಿಸುತ್ತದೆ. ಆ ಮರಕ್ಕೆ ಮನಸೋ ಇಚ್ಛೆ ಬೆಳೆಯೋ ಸ್ವಾತಂತ್ರ್ಯವೂ ಇಲ್ಲ ಏಕೆಂದರೆ ಆ ಮರದ ಎಡಗಡೆಗೆ ಪಾಗಾರ ಗೋಡೆ, ಮುಂದುಗಡೆ ರಸ್ತೆ, ಎತ್ತರಕ್ಕೆ ಬೆಳೆದರೆ ತಾಗುವ ವಿದ್ಯುತ್ ತಂತಿಗಳು. ಪರಿಣಾಮವೇ ವಿದ್ಯುತ್ ಇಲಾಖೆಯವರಿಂದ ಮರದ ಬುಡಕ್ಕೇ ಕೊಡಲಿ ಪ್ರಹಾರ. ಆ ಜಾಗದಲ್ಲಿ ಹುಟ್ಟಿದ್ದು ಮರದ ತಪ್ಪೇ? ಖಂಡಿತಾ ಅಲ್ಲ.   ಆ ಮರಕ್ಕೆ ಬದುಕುವ ಹಂಬಲ. ನೋಡನೋಡುತ್ತಿದ್ದಂತೆ ಕೊಡಲಿಯೇಟಿಗೆ ತುತ್ತಾಗಿದ್ದ ಮರದ ಬುಡದಲ್ಲಿ ಚಿಗುರೆಲೆಗಳ ಆಗಮನದ ಸಂಭ್ರಮ. ವಾವ್! ಚಿಗುರೆಲೆಗಳ  ಮೋಹಕ ಬಣ್ಣವನ್ನು ನೋಡಿ ಕಾಣದ ಸೃಷ್ಟಿಕರ್ತನಿಗೆ ಮನದಲ್ಲೇ ವಂದಿಸಿದೆ. ನನ್ನ ಕಣ್ಣಿಗೆ ಬಿದ್ದ ಈ ಸುಂದರ ಚಿತ್ತಾರವನ್ನು ಮೊಬೈಲ್ ಕ್ಯಾಮೆರಾದಲ್ಲಿ ಸೆರೆಹಿಡಿದೆ.

ನೀನೊಲಿದರೆ ಕೊರಡು ಕೊನರುವುದಯ್ಯಾ ಎಂಬ ವಚನದ ಸಾಲುಗಳು ನೆನಪಾದುವು.  ಮಾನವನ ಧಾಳಿಗೆ ತುತ್ತಾದರೂ, ಮರವನ್ನು ಜೀವಂತವಾಗಿಡುವಲ್ಲಿ ಭೂಮಿಯಾಳಕ್ಕೆ ಇಳಿದು ಭದ್ರವಾಗಿದ್ದ ಬೇರು ಸಹಕಾರಿ. ತನ್ನ ಮೇಲೆ ನಡೆಯುವ ಆಕ್ರಮಣಕ್ಕೆ ಸಡ್ಡು ಹೊಡೆದಂತೆ ಮತ್ತೆ ಚಿಗುರಿ ನಳನಳಿಸುತ್ತದೆ ಮರ. ಕೆಲ ಸಮಯದ ಬಳಿಕ ಹಣ್ಣನ್ನು ನೀಡುತ್ತದೆ. ಎಂತಹ ಅದ್ಭುತ ಜೀವನ ಪಾಠ, ಉದಾತ್ತ ಸಂದೇಶ ಸಾರುತಿದೆ ಸ್ವಾರ್ಥಿ ಮಾನವನಿಗಾಗಿ!  ಮನಸ್ಸಿನೊಳಗೆ ಧೃಢವಾದ ಆತ್ಮವಿಶ್ವಾಸವಿದ್ದರೆ, ಎಷ್ಟೇ ಕಷ್ಟದ ಪ್ರತಿಕೂಲಕರ ಸನ್ನಿವೇಶಗಳು ಎದುರಾದರೂ, ಆ ವ್ಯಕ್ತಿ ಸೋಲಿನಿಂದ ಕಂಗೆಡುವುದಿಲ್ಲ. ಬದಲಾಗಿ ಹೊಸ ಉತ್ಸಾಹದೊಡನೆ ಮುನ್ನಡೆಯುವ ಅದಮ್ಯ ಚೈತನ್ಯ ಮನದೊಳಗೆ. ಎಲ್ಲರ ಮನದಲ್ಲೂ ಆತ್ಮವಿಶ್ವಾಸವೆಂಬ ಬೇರು ಭದ್ರವಾಗಿ ಬೇರೂರಲಿ. ಪ್ರಕೃತಿ  ಮಾನವನಿಗೆ ಎಷ್ಟೊಂದು  ಪಾಠಗಳನ್ನು ಕಲಿಸುತ್ತದೆ ಅಲ್ಲವೇ? ನೋಡುವ ಕಣ್ಣು, ಅರ್ಥವಿಸಿಕೊಳ್ಳುವ ಬುದ್ಧಿ ಇದ್ದರೆ ಸಾಕು ಅಷ್ಟೇ…

-ಡಾ.ಕೃಷ್ಣಪ್ರಭಾ, ಮಂಗಳೂರು

10 Responses

  1. Harshitha says:

    ಕಡಿದು ಬಿದ್ದಿದ್ದ ಮರದಲ್ಲಿ ಮೂಡಿದ ಚಿಗುರಿನ ಮೂಲಕ ಜೀವನ ಪಾಠವನ್ನು ಸುಂದರವಾಗಿ ತಿಳಿಸಿದ್ದೀರಿ ಮೇಡಮ್..

  2. ನಯನ ಬಜಕೂಡ್ಲು says:

    Superb madam. ಸುಂದರವಾದ ಬದುಕಿನ ಪಾಠವನ್ನೊಳಗೊಂಡಂತಹ ಲೇಖನ . ಒಂದು ಸಾಲಿನೊಂದಿಗೆಯೇ ಬದುಕು ಮುಗಿಯಿತಿ ಅನ್ನುವವರಿಗೆ ಚಿಗುರಿ ಮತ್ತೆ ತಲೆ ಎತ್ತಿ ನಿಂತ ಆ ಮರ ಪ್ರೇರಕವಾಗಬಲ್ಲುದು . ಸೂಕ್ಷ್ಮವಾಗಿ ಗಮನಿಸಿದರೆ ನಮ್ಮ ಪ್ರಕೃತಿಯೊಡಲಲ್ಲಿ ಇಂತಹ ಹಲವಾರು ಚೈತನ್ಯ ತುಂಬುವಂತಹ ಪಾಠಗಳಿವೆ, ಅವನ್ನು ಸೂಕ್ಷ್ಮವಾಗಿ ಗಮನಿಸುವ ಮನಸಿರಬೇಕಷ್ಟೆ . ಉತ್ಸಾಹ ತುಂಬುವಂತಹ ಬರಹ

    • Krishnaprabha says:

      Nayana Bajakudlu ಧನ್ಯವಾದಗಳು ನಯನ… ಆ ದೃಶ್ಯ ಮನವನ್ನು ತುಂಬಾ ಕಾಡಿತು… ಹಲವು ಲೇಖನಗಳಿಗೆ ಸ್ಫೂರ್ತಿ ಈ ಚಿತ್ರ ಅಲ್ವಾ?

  3. Anonymous says:

    ನೋಡುವ ಕಣ್ಣು,ಅರ್ಥೈಸಿಕೊಳ್ಳುವ ಬುದ್ಧಿ ಮನುಜನಿಗೆ ಇದೆಯೇ.ನಿಮ್ಮ ಲೇಖನ ಫೊಟೋ ಎರಡೂ ತುಂಬಾ ಚೆನ್ನಾಗಿದೆ

  4. Shankari Sharma says:

    ಚಂದದ ಅರ್ಥಪೂರ್ಣ ಲೇಖನ.

  5. Santosh Kumar Shetty says:

    ಹೈಸ್ಕೂಲ್ ಜೀವ ನದಲ್ಲಿ ಓದಿದ ಕಥನಕವನವೊಂದರ ನೆನಪಾಯಿತು.

    ಯುದ್ಧ ದಲ್ಲಿ ವಿಫಲ ಯತ್ನವ ಮಾಡಿಹತಾಶನಾದ ರಾಜ, ಏಳು ಬಾರಿ ಬಿದ್ದರೂ ಮತ್ತೆ ಯತ್ನ ವ ಮಾಡಿ ಗೆದ್ದ ಜೇಡವೊಂದರಿಂದ ಸ್ಪೂರ್ತಿ ಯ ಪಡೆದು ಯುದ್ಧ ದಲ್ಲಿ ಎದುರಾಳಿ ಯನ್ನು ಸೋಲಿಸಿ ದ ಕಥೆ!

    ಧೃಢವಾದ ಆತ್ಮವಿಶ್ವಾಸ ಇದ್ದರೆ ವ್ಯಕ್ತಿಯು ಸೋಲಿನಿಂದ ಕಂಗೆಡುವುದಿಲ್ಲ….. ಅರ್ಥ ಪೂರ್ಣ ಧನಾತ್ಮಕ ಚಿಂತನೆ.

    • Krishnaprabha says:

      ಧನ್ಯವಾದಗಳು ಸಂತೋಷ್ ಅವರಿಗೆ…
      ನೆನಪಿನಾಳದಿಂದ ಬಗೆದ ಉದಾಹರಣೆಯ ಜೊತೆಗೆ ಮೆಚ್ಚುಗೆ ವ್ಯಕ್ತಪಡಿಸಿರುವಿರಿ

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: