ಸ್ನೇಹಕ್ಕೆ ಇರುವುದು ಒಂದೇ ಭಾಷೆ ಅದು ಪ್ರೀತಿ 

Spread the love
Share Button

ಮೀನು ಹೇಳಿತು ನೀರಿಗೆ; ಓ ನೀರೇ, ನೀನು ನನ್ನ ಕಣ್ಣೀರನ್ನು ಎಂದೆಂದೂ ಕಾಣಲಾರೆ. ನಿನ್ನೊಂದಿಗೇ ನಾನಿದ್ದರೂ ನನ್ನ ಕಣ್ಣೀರು ನಿನಗೆ ಕಾಣುವುದೆ? ನೀರು ಉತ್ತರಿಸಿತು: ಆದರೆ ನಾನು ನಿನ್ನ ಕಣ್ಣೀರನ್ನು ಅನುಭವಿಸಬಲ್ಲೆ. ಏಕೆಂದರೆ ನೀನು ನನ್ನ ಹೃದಯದಲ್ಲಿದ್ದಿಯೆ ಇದು ’ಸ್ನೇಹ ಸಂವೇದ’ಗೆ ಬಂದ ಒಂದು ಪುಟ್ಟ ಎಸ್.ಎಂ.ಎಸ್. ನೀರಿಗೂ ಮೀನಿಗೂ, ಭೂಮಿಗೂ ಬಾನಿಗೂ, ನಮಗೂ ನಿಮಗೂ ಶಬ್ದಗಳಿಲ್ಲದೆ ಅರ್ಥವಾಗುವ ಸಂವೇದನೆಯಿದು. ಮಾತು ಮೀರಿ ಬರುವ ಅನುಭವವಿದು. ಅದೇ ಸ್ನೇಹ. ಹೃದಯದ ಭಾಷೆ.

ಸ್ನೇಹಿತರಿಲ್ಲದ ಜಗತ್ತನ್ನು ಊಹಿಸಿಕೊಳ್ಳಲು ಸಾಧ್ಯವೆ? ಖಂಡಿತ ಇಲ್ಲ. ಆಬಾಲ ವೃದ್ಧರಿಗೂ ತಮ್ಮದೇ ಸ್ನೇಹ ಬಳಗಬೇಕು. LKG, UKG ಅಲ್ಲೂ ಅವರದ್ದೇ ಒಂದು ಸ್ನೇಹಕೂಟ. ಒಂದೇ ಚಾಕಲೇಟನ್ನು ಅಂಗಿಯ ಮರೆಯಲ್ಲಿ ಕಡಿದು ಅರ್ಧ ಅರ್ಧ ತಿನ್ನುವ ಸಂಭ್ರಮ. ಜಾರು ಬಂಡೆಯಲ್ಲಿ ಜೊತೆಯಾಗಿ ಜೀಕಿದ ಅನುಭವ. ಧೂಳಿನಲ್ಲಿ ಹೊರಳಿ, ತಲೆಯ ಮೇಲೆಲ್ಲಾ ಮಣ್ಣು ಸುರಿದು ಸುಖಿಸಿದ ಸುಖ.. ಒಂದಾ, ಎರಡಾ? ನೂರಾರು… ಸಿಹಿನೆನಹುಗಳು. ಹರೆಯಕ್ಕೆ ಕಾಲಿರಿಸಿದಾಗಲೂ ಅಲ್ಲಿ ಸ್ನೇಹಕ್ಕೆ ಅಗ್ರಸ್ಥಾನ. ಹನಿ ಹನಿ, ತುಂತುರು ಮಳೆಯಲ್ಲಿ ಕೊಡೆ ಇದ್ದರೂ ಬಿಡಿಸಿ ಹಿಡಿಯದೆ ಗೆಳೆಯರೆಲ್ಲ ಕೋಟೆ ಕೈ ಹಿಡಿದು ರಸ್ತೆಯಲ್ಲಿ ನಡೆಯುವ ಸಂಭ್ರಮ; ಅರಿಯದೇ ಕಣ್ಣು ತೆರದ ಪ್ರೇಮ ಪತ್ರವನ್ನೆಲ್ಲಾ ಗೆಳತಿಗೆ ಓದಿ ಹೇಳುವ ಗೆಳತಿಯ ಹಂಬಲ; ಗೆಳತಿಯ ಬೆನ್ನ ಹಿಂದಿನ ಮರೆಯಲ್ಲಿ ಮದುವೆ ವರನನ್ನು ನೋಡುವ ಚಪಲ. ಎಷ್ಟೆಷ್ಟು ತುಂಟಾಟಗಳು ಈ ಗೆಳತನದಲ್ಲಿ! ಸಂಜೆಗಣ್ಣಿನ ಹಿನ್ನೋಟಕ್ಕೂ ಗೆಳತನವೇ ಜೊತೆ. ಬೆಳಗು, ಸಂಜೆಯ ವಾಕಿಂಗ್‌ನಲ್ಲಿ ಕಲ್ಲು ಮಂಟಪದ ಮೇಲೆ ಕುಳಿತು ಬೊಚ್ಚುಬಾಯಿ ಅಗಲಿಸಿ ತಮ್ಮ ಗೆಳೆತನದ ನೆನಪು ಮಾಡಿಕೊಳ್ಳುವ ಅಜ್ಜ-ಅಜ್ಜಿ ಸ್ನೇಹದ ಮಾಲಿಕೆಯನ್ನೇ ತೊಟ್ಟು ಬದುಕುವಂತೆ ಕಾಣುತ್ತಾರೆ. ಮೇಲು-ಕೀಳು, ಶ್ರೀಮಂತ-ಬಡವ, ಗಂಡು-ಹೆಣ್ಣು, ಮುದುಕ-ಯುವಕ ಹೀಗೆ ಯಾವ ಅಂತರವೂ ಇಲ್ಲದೆ ಎಲ್ಲರನ್ನೂ ಒಂದುಗೂಡಿಸುವ ಸ್ನೇಹ ಸ್ವಾರ್ಥ ರಹಿತವಾದದ್ದು. ಸ್ನೇಹ ಕೊಡುತ್ತದೆಯೇ ವಿನಹ ಪಡೆದುಕೊಳ್ಳುವುದಿಲ್ಲ.
.
ಜಗತ್ತಿನ ಎಲ್ಲಾ ಸಂಬಂಧಗಳಲ್ಲೂ ಸ್ನೇಹ ಸ್ಥಾಯಿಯಾದುದು. ಗಂಡ ಹೆಂಡಿರ ಸಂಬಂಧವನ್ನೇ ತೆಗೆದುಕೊಂಡರೆ ಎಲ್ಲಾ ಸಂದರ್ಭದಲ್ಲೂ ಅವರು ಗಂಡು-ಹೆಂಡಿರಾಗಿ ಉಳಿಯುವುದಿಲ್ಲ, ಹಾಗೆ ಉಳಿಯಲು ಸಾಧ್ಯವೂ ಇಲ್ಲ. ಇಡೀ ಜೀವನದ ಸುದೀರ್ಘ ಪಯಣಕ್ಕೆ ಇಬ್ಬರ ನಡುವೆ ಸಂಬಂಧವನ್ನು ರೂಪಿಸುವುದು ಸ್ನೇಹ ಮಾತ್ರ. ಅಂತೆಯೇ ತಂದೆ-ತಾಯಿ-ಮಗ-ಮಗಳು-ಗುರು-ಶಿಷ್ಯರ ನಡುವಿನ ಸಂಬಂಧ. ಬೆಳೆದ ಮಗನನ್ನು ತಂದೆ ಸನ್ಮಿತ್ರನಂತೆ ಕಾಣಬೇಕು; ಅಂದರೆ son ಮಿತ್ರನಾಗುತ್ತಾನೆ. ಒಬ್ಬನ್ನೊಬ್ಬರು ಅರ್ಥೈಸುವ, ಹೊಂದಾಣಿಕೆ ಮಾಡಿಕೊಳ್ಳುವ ಸರಳಸೂತ್ರ ತಿಳಿದುಕೊಂಡಾಗಲೇ ಸಂಸಾರ ಸುಸೂತ್ರ. ’ಸಂಸಾರ’ ವೆಂಬ ನಡುವಿನ ’ಶೂನ್ಯ’ ವನ್ನು ಸ್ನೇಹಿತರು ತುಂಬಿದಾಗಲೇ ಇದು ‘ಸಂಸಾರ ’ ಯುಕ್ತವಾಗುತ್ತದೆ. ಇಲ್ಲವಾದರೆ ’ಸಸಾರ’ ವಾಗಿ ಬಿಡುತ್ತದೆ. ಸ್ನೇಹಹಸ್ತ ಚಾಚಿ ಹಿಡಿಯುವ ಸ್ನೇಹಿತರ ಮೊತ್ತ ಅಂದರೆ Sumಸಾರ, ಸಂಸಾರವಾಗುತ್ತದೆ.
FRIEND -ಒಮ್ಮೆ ಈ ಪದವನ್ನು ಬಿಡಿಸಿ ನೋಡಿ. Few Relations In the Earth Never Die. ಕೆಲವು ಸಂಬಂಧಗಳು ಈ ಭೂಮಿ ಮೇಲೆ ಎಂದೆಂದಿಗೂ ಸಾಯುವುದಿಲ್ಲ. ಅದು ಗೆಳೆತನ. One loyal friend is worth ten thousand relatives (ಒಬ್ಬ ಪ್ರಾಣ ಸ್ನೇಹಿತ ಹತ್ತು ಸಾವಿರ ಸಂಬಂಧಿಕರಿಗೆ ಸಮಾನನಾದವನು) ನಿಜ. ಸ್ನೇಹಕ್ಕೆ ಅಷ್ಟು ಮಹತ್ವವಿದೆ. ಅದು ದಿನವೂ ನವೀನ. ಸಂಸ್ಕೃತ ಸುಭಾಷಿತ ಒಂದು ಹೇಳುವ ಹಾಗೆ,
ಆದಿತ್ಯಸ್ಯೋದಯಂ ತತಾ, ತಾಂಬೂಲಂ, ಭಾರತೀ ಕಥಾ
ಇಷ್ಟಾ ಭಾರ್ಯಾ ಸುಮಿತ್ರಂ ಚ ಅಪೂರ್ವಾಣಿ ದಿನೇ ದಿನೇ’

ಅಂದರೆ ಸೂರ್ಯೋದಯ, ತಾಂಬೂಲ, ಮಹಾಭಾರತ ಕಥೆ, ಇಷ್ಟಳಾದ ಪತ್ನಿ, ಒಳ್ಳೆಯ ಸ್ನೇಹಿತ ಇವು ದಿನ ದಿನವೂ ಹೊಚ್ಚ ಹೊಸದಾಗಿರುತ್ತದೆ.

ಸ್ನೇಹವೂ ಸಂಪತ್ತು, ಅದನ್ನು ಕಷ್ಟ ಪಟ್ಟು ಸಂಪಾದನೆ ಮಾಡಿಕೊಳ್ಳುವಂತದ್ದು. ಸ್ನೇಹವೂ ಒಂದು ಜವಾಬ್ದಾರಿ, ಜೀವನದುದ್ದಕ್ಕೂ ನಿಭಾಯಿಸಿಕೊಂಡು ಹೋಗುವಂತದ್ದು. ಸ್ನೇಹಿತರನ್ನು ಕೈ ಮತ್ತು ಕಣ್ಣಿಗೆ ಹೋಲಿಸಲಾಗುತ್ತದೆ. ಕೈಗೆ ಗಾಯವಾಗಿ ನೋವು ಉಂಟಾದಾಗ ಕಣ್ಣು ನೀರು ಸುರಿಸುತ್ತದೆ. ಕಣ್ಣು ನೀರು ಸುರಿಸಿದರೆ ಕೈ ಅದನ್ನು ಒರೆಸುತ್ತದೆ. ಇದಕ್ಕಿಂತ ಸುಂದರ ವ್ಯಾಖ್ಯಾನ ಸ್ನೇಹಕ್ಕೆ ಬೇರುಂಟೆ? ‘ಸ್ನೇಹವೆಂದರೆ ಎರಡು ಶರೀರಗಳಲ್ಲಿ ವಾಸಿಸುವ ಒಂದೇ ಆತ್ಮ’ ಎಂಬ ಅರಿಸ್ಟಾಟಲ್‌ನ ಮಾತು ಈ ಅನ್ಯೋನ್ಯತೆಯನ್ನು ಕುರಿತಾಗಿಯೇ ಇರಬೇಕು.
.
ಹಿತರಲ್ಲಿ ಹಲವು ಬಗೆಗಳಿವೆ. ಪ್ರಾಣ ಸ್ನೇಹಿತರು, ದುಷ್ಟ ಸ್ನೇಹಿತರು, ಸಮಯ ಸಾಧಕರು, ಇತ್ಯಾದಿ. ದುಷ್ಟ ಸ್ನೇಹಿತರನ್ನು ಗುರುತಿಸಿಕೊಳ್ಳುವುದು ಸುಲಭ. ಆದರೆ ಸಮಯ ಸಾಧಕರನ್ನು ಗುರುತಿಸಿಕೊಳ್ಳುವುದು ಕಷ್ಟ. ಆತ್ಮೀಯರಂತೆ ನಟಿಸಿ, ನಮ್ಮಿಂದ ಎಲ್ಲಾ ಉಪಕಾರ ಪಡೆದು ಮತ್ತೆ ಗುರುತೇ ಇಲ್ಲದವರಂತೆ ಸಾಗುವ ಸಮಯ ಸಾಧಕರ ಬಗೆಗೆ ನಾವು ಎಚ್ಚರಿಕೆಯಿಂದಿರಬೇಕು. ಇನ್ನು ದುಷ್ಟ ಗೆಳೆಯರು ನಮ್ಮ ವ್ಯಕ್ತಿತ್ವದ ಅಧಃಪತನಕ್ಕೆ ಕಾರಣರಾಗುತ್ತಾರೆ. ಸ್ನೇಹಿತರ ಮೂಲಕವೇ ನಮ್ಮ ವ್ಯಕ್ತಿತ್ವವನ್ನಳೆಯುವುದರಿಂದ ಅಂತಹ ಗೆಳೆಯರಿಂದ ನಾವು ದೂರ ಇರುವುದು ಉತ್ತಮ. ಇನ್ನೂ ಕೆಲವರಿದ್ದಾರೆ. ಸಿನೇಮಾ ಗೆಳೆಯರು, ಕಾಫೀ-ಟೀ ಗೆಳೆಯರು, ಆಟದ ಗೆಳೆಯರು, ಟೆಮ್ ಪಾಸ್ ಗೆಳೆಯರು ಇತ್ಯಾದಿ.
ಆದರೆ ಸಜ್ಜನ ಸ್ನೇಹಿತರಿಂದ ಮಾತ್ರ ನಮಗೆ ಶ್ರೇಯಸ್ಸು. ಭರ್ತೃಹರಿ ತನ್ನ ನೀತಿ ಶತಕದಲ್ಲಿ ಸಜ್ಜನ ಸ್ನೇಹಿತರ ಬಗ್ಗೆ ಹೀಗೆ ಹೇಳುತ್ತಾನೆ.
ಜಾಡ್ಯಂ ಧಿಯೋ ಹರತಿ ಸಿಂಚತಿ ವಾಚಿ ಸತ್ಯಮ್
ಮಾನ್ನೋನ್ನತಿಂ ದಿಶತಿ ಪಾಪಮಪಾಕರೋತಿ|
ಚೇತಃ ಪ್ರಸಾದಯತಿ ದಿಕ್ಷು ತನೋತಿ ಕೀರ್ತಿಮ್
ಸತ್ ಸಂಗತಿ: ಕಥಯ ಕಿಂ ನ ಕರೋತಿ ಪುಂಸಾಮ್||
ಅರ್ಥಾತ್, ‘ಸಜ್ಜನರೊಡನೆ ಮಾಡುವ ಗೆಳೆತನ ಬುದ್ಧಿಯ ಜಡತೆಯನ್ನು ದೂರ ಮಾಡುತ್ತದೆ. ನಾಲಿಗೆಯಲ್ಲಿ ನಿಜವನ್ನು ನುಡಿಸುತ್ತದೆ. ಉನ್ನತ ಗೌರವವನ್ನು ತಂದು ಕೊಡುತ್ತದೆ. ಕೆಟ್ಟದ್ದನ್ನು ಪರಿಹರಿಸುತ್ತದೆ. ಮನಸ್ಸನ್ನು ಪ್ರಸನ್ನಗೊಳಿಸುತ್ತದೆ. ದಿಕ್ಕು ದಿಕ್ಕುಗಳಲ್ಲಿ ಕೀರ್ತಿಯನ್ನು ಹರಡುತ್ತದೆ. ಒಳ್ಳೆಯವರ ಗೆಳೆತನ ಮನುಷ್ಯನಿಗೆ ಏನನ್ನು ತಾನೆ ಮಾಡಲಾಗದು?
.

-ವಿದ್ಯಾಶ್ರೀ ಬಿ . ಬಳ್ಳಾರಿ

3 Responses

  1. ನಯನ ಬಜಕೂಡ್ಲು says:

    ಸ್ನೇಹವೆಂಬ ಸುಂದರ , ಅನ್ಯೋನ್ಯ ಭಾವದ ಕುರಿತಾದ ಬರಹ ಚೆನ್ನಾಗಿದೆ . ಎಲ್ಲ ಸಂಬಂಧಗಳಿಗಿಂತಲೂ ಮಿಗಿಲಾದದ್ದು ಈ ಸ್ನೇಹ, ಗೆಳೆತನ .

  2. Vishwanathakana says:

    ನಮ್ಮ ಅಣ್ಣ ಅತ್ತಿಗೆ ಇಲ್ಲದ ಒಂದು ದಿನ ನಮಗೆ ದೋಸೆ ಬೇಯಿಸಿ ಬಡಿಸುತ್ತಾ ಇದ್ದರು. ಅವರಿಗೆ ಅತ್ತಿಗೆ ದೋಸೆ ಮಾಡಿ ಬಡಿಸುತ್ತಿದ್ದಾಗ ಪಾಪ ನಾವೆಲ್ಲಾ ದೋಸೆ ತಿನ್ನುವ ವರೆಗೆ ಈಕೆ ಎಷ್ಟು ಹಸಿವೆಯನ್ನು ಸಹಿಸಿಕೊಳ್ಳಬೇಕಪ್ಪ ಅನ್ನಿಸುತ್ತತತ್ತಂತೆ. ಆ ದಿನ ನಮಗೆ ಸ್ವತಃ ದೋಸೆ ಬಡಿಸುತ್ತಿದ್ದಾಗ ಅವರಿಗೆ ಹಸಿವೆಯ ಅನುಭವ ಆಗುತ್ತಿರಲಿಲ್ಲವಂತೆ !. ಅತ್ತಿಗೆ ದೋಸೆ ಮಾಡಿ ಬಡಿಸುತ್ತಿದ್ದಾಗ ಇರುತ್ತಿದ್ದ ಹಸಿವೆ ನಮಗೆ ಬಡಿಸುತ್ತಿದ್ದ ಸಮಯದಲ್ಲಿ ಎಲ್ಲಿಗೆ ಹೋಗಿರಬಹುದು!?. ವಿದ್ಯಾಶ್ರೀಯವರು ಹೇಳಿದ ಸ್ನೇಹವೇ ಇಲ್ಲಿ ವರ್ಕೌಟ್ ಆಗಿದ್ದಿರಬಹುದೆ!?.

  3. Shankari Sharma says:

    ಜೀವನದಲ್ಲಿ ಗೆಳತನದ ಸಿಹಿ ಬಂಧ ಇಲ್ಲದಿರುತ್ತಿದ್ದರೆ ಅದೆಷ್ಟು ನೀರಸವೆನಿಸುತ್ತಿತ್ತು ಅಲ್ಲವೇ?

Leave a Reply

 Click this button or press Ctrl+G to toggle between Kannada and English

Your email address will not be published.

Follow

Get every new post on this blog delivered to your Inbox.

Join other followers: