ಪುರಿ-ಡಾರ್ಜಿಲಿಂಗ್ ಪ್ರವಾಸ ಪುಟಗಳು : ಪುಟ 19

Share Button


ಗ್ಯಾಂಗ್ ಟೋಕ್ ನತ್ತ ಗಮನ..

ನಮ್ಮ ರೈಲು ಡಾರ್ಜಿಲಿಂಗ್ ಮೈಲ್ ಸುಮಾರು 650 ಮೈಲುಗಳನ್ನು ದೂರವನ್ನು ಕ್ರಮಿಸಲು ವೇಗವಾಗಿ ಸಾಗುತ್ತಿತ್ತು. ಮೇ 13ನೇ ದಿನ ಬೆಳಗಾಗುತ್ತಾ ಬಂದಂತೆಲ್ಲಾ ಎಲ್ಲರೂ ಎಚ್ಚೆತ್ತು ತಯಾರಾಗುತ್ತಿದ್ದಂತೆ, ನಾವು ಇಳಿಯಬೇಕಾದ ಪಶ್ಚಿಮ ಬಂಗಾಳದ ದೊಡ್ಡ ಪಟ್ಟಣವಾದ ಜಲ್ ಪಾಯ್ ಗುರಿ ನಿಲ್ದಾಣ ಎಷ್ಟು ಹೊತ್ತಿಗೆ ಬರಬಹುದೆಂದು ತಿಳಿದುಕೊಳ್ಳಲು ಪ್ರಯತ್ನಿಸುತ್ತಿದ್ದೆವು. ಆಗಲೇ ಮುಖ್ಯವಾದ ಸಮಾಚಾರವೊಂದು ನಮಗೆ ತಲಪಿತು. “ಏನೋ ತೊಂದರೆಯಿಂದಾಗಿ ಜಲ್ಪಾಯಿ ಗುರಿಯಲ್ಲಿ ಇಳಿಯಲು ಅಸಾಧ್ಯವಾದುದರಿಂದ ಹಿಂದಿನ ನಿಲ್ದಾಣವಾದ ಸಿಲಿಗುರಿಯಲ್ಲಿಯೇ ಇಳಿಯಬೇಕಂತೆ..”  ಸರಿ.. ನಾವು ಯಾರೂ ಇಳಿಯುವ ತಯಾರಿಯೇ ಮಾಡಿಕೊಂಡಿರಲಿಲ್ಲ! ರಭಸದಿಂದ ಓಡುತ್ತಿದ್ದ ರೈಲು..ಜೊತೆಗೆ ಎಲ್ಲರಿಗೂ ಇಳಿಯಲು ಸಿದ್ಧತೆ ಮಾಡಿಕೊಳ್ಳುವ ತುರಾತುರಿ. ರೈಲಿನೊಳಗೆ ಸಣ್ಣದಾಗಿ ಗಡಿಬಿಡಿ ಪ್ರಾರಂಭವಾಯಿತು. ಎಲ್ಲರೂ ತಮ್ಮ ತಮ್ಮ ಸಾಮಾನುಗಳನ್ನು ಜೊತೆ ಮಾಡಿಕೊಂಡು ತಯಾರಾಗಿ ನಿಂತರೂ ಮನಸ್ಸಲ್ಲಿ ಸ್ವಲ್ಪ ಹೆದರಿಕೆಯಿತ್ತು. ಟಿಕೇಟ್ ನಲ್ಲಿದ್ದಂತೆ, ರೈಲಿನ ಕೊನೆಯ ನಿಲ್ದಾಣದಲ್ಲಿ ಇಳಿಯುವುದಾದರೆ ಸಮಸ್ಯೆ ಇರುತ್ತಿರಲಿಲ್ಲ. ಆದರೆ ಈಗ ಮಧ್ಯದಲ್ಲಿ ಇಳಿಯಬೇಕಾಗಿರುವುದರಿಂದ ಆತಂಕವಿತ್ತು.  ರೈಲು ಸ್ವಲ್ಪವೇ ಸಮಯ  ನಿಲ್ಲುತ್ತಿದ್ದುದರಿಂದ, ಅತ್ಯಂತ ಚುರುಕಾಗಿ ನಾವು ಇಳಿಯುವ ಕೆಲಸ ಮಾಡಬೇಕಿತ್ತು. ಒಂದು ರೀತಿಯಲ್ಲಿ ಅದು  ಅನುಕೂಲಕರವಾಗಿಯೇ ಪರಿಣಮಿಸಿದ್ದು ವಿಶೇಷ. ಜಲ್ಪಾಯಿ ಗುರಿಯಿಂದ ಸಿಲಿಗುರಿಗೆ ಹಿಂತಿರುಗಿ ಬರುವ ಕೆಲಸ ಕಡಿಮೆಯಾಗಿತ್ತು; ಯಾಕೆಂದರೆ ಸಿಲಿಗುರಿಯಿಂದಲೇ ನಮ್ಮ ಮುಂದಿನ ಪ್ರಯಾಣ ಪ್ರಾರಂಭ.

ಪುಟ್ಟ ನಿಲ್ದಾಣ ಸಿಲಿಗುರಿಯಲ್ಲಿಳಿದಾಗ ಬೆಳಗ್ಗೆ ಗಂಟೆ 8:45. ಬಿಸಿಲ ಬೇಗೆಗೆ ಕಂಗೆಟ್ಟಿದ್ದ  ಕೋಲ್ಕತ್ತದಿಂದ ನೇರವಾಗಿ ತಂಪಾದ ಜಾಗಕ್ಕೆ ತಲಪಿದ್ದೆವು. ಸಣ್ಣಗೆ ಚಳಿಯ ಅನುಭವವಾಗುತ್ತಿತ್ತು.ಅಲ್ಲಿಂದ ನಮ್ಮ ಪಯಣ ಸಿಕ್ಕಿಂ ರಾಜ್ಯದ ರಾಜಧಾನಿ, ಸುಂದರ ಗ್ಯಾಂಗ್ ಟೋಕ್ ನತ್ತ. ಪರ್ವತ ಪ್ರದೇಶವಾಗಿದ್ದರಿಂದ ಅಲ್ಲಿಯ ರಸ್ತೆಗಳು ಏರಿಳಿತ ಹಾಗೂ ಇಕ್ಕಟ್ಟಾದ ತಿರುವುಗಳನ್ನು ಹೊಂದಿರುತ್ತವೆ. ಆದ್ದರಿಂದ ಮುಂದಿನ ನಮ್ಮ ಪ್ರವಾಸ‌, ಬಸ್ಸಿನ ಬದಲು ಟ್ಯಾಕ್ಸಿಗಳಲ್ಲಿ ಏರ್ಪಾಡಾಗಿತ್ತು. ಹಾಗೆಯೇ ನಾಲ್ಕು ಜನರ ಗುಂಪು ಮಾಡಿ, ಅವರವರ ಲಗೇಜ್ ಗಳನ್ನು ಆಯಾಯ ಟ್ಯಾಕ್ಸಿಗಳಲ್ಲಿ ಇರಿಸಲಾಯಿತು. ಮೊದಲನೇ‌ ಮುಖ್ಯ ಕೆಲಸ..ಹೊಟ್ಟೆ ಗಟ್ಟಿ ಮಾಡಿಕೊಳ್ಳುವ ಸಲುವಾಗಿ ಬೆಳಗ್ಗಿನ ಉಪಾಹಾರದ ಏರ್ಪಾಡು, *ಬಾಲಾಜಿ ಇನ್* ಹೋಟೆಲಿನಲ್ಲಿ. ನಮ್ಮ ಕಾರುಗಳೆಲ್ಲಾ ಶಿಸ್ತಿನ ಸಿಪಾಯಿಗಳಂತೆ ಹೋಟೇಲ್ ಕಡೆಗೆ ಸಾಗಿದಾಗ ಹಾಯೆನಿಸಿತು.

ಸ್ನಾನಾದಿಗಳನ್ನು ಮುಗಿಸಿ, ರೈಲು ಪ್ರಯಾಣದ ಸುಸ್ತು ಕಳೆಯಲು,  ಹೋಟೇಲಿನಲ್ಲಿ ನಮಗಾಗಿ ಕೆಲವು ಕೋಣೆಗಳನ್ನು ಉಪಯೋಗಿಸಲು ಸ್ವಲ್ಪ ಸಮಯಕ್ಕೆ ಬಿಟ್ಟು ಕೊಟ್ಟರು. ಸುಮಾರು ಗಂಟೆ 9:30ರ ಹೊತ್ತಿಗೆ ಬಿಸಿ ಬಿಸಿಯಾದ ರವಾ ಕೇಸರಿಬಾತ್ ಜೊತೆಗಿನ ಸೇವಿಗೆ ಉಪ್ಪಿಟ್ಟು.. ನಮ್ಮೊಡನಿದ್ದ ರಾಜೇಶಣ್ಣ, ಜಟ್ ಪಟ್ ರೆಡಿ ಮಾಡಿ ಕೊಟ್ಟುದನ್ನು ಎಲ್ಲರೂ ಖಾಲಿ ಮಾಡಿದ್ದೊಂದೇ ಗೊತ್ತು! ಮುಂದಿನ ಪ್ರಯಾಣದ ಮೊದಲು ಮಧ್ಯಾಹ್ನದ ಊಟವನ್ನೂ ಅಲ್ಲಿಯೇ ಮುಗಿಸಿ ಹೋಗುವುದೆಂದು ನಿರ್ಧರಿಸಲಾಗಿತ್ತು. ಮಧ್ಯಾಹ್ನ 11:30ಕ್ಕೆ ನಮ್ಮ ಕೋಣೆಗಳನ್ನು ಬಿಟ್ಟು ಕೊಡಬೇಕಾಗಿದ್ದುದರಿಂದ, ಬಿಡಿಸಿಟ್ಟಿದ್ದ   ಎಲ್ಲರ ಬ್ಯಾಗುಗಳೂ ಪುನಃ ತುಂಬಿಸಲ್ಪಟ್ಟು ಸಜ್ಜಾಗಿ ಹೋಟೆಲ್ ವರಾಂಡದಲ್ಲಿ ಶಿಸ್ತಿನಿಂದ ಜೋಡಿಸಲ್ಪಟ್ಟವು. ಆಗಲೇ, ಬಾಲಣ್ಣ ಮತ್ತು ಗಣೇಶಣ್ಣನವರು ಎಲ್ಲರಲ್ಲೂ ಗುರುತಿನ ಚೀಟಿಯನ್ನು ಕೇಳಿ ಪಡೆದು ಝೆರಾಕ್ಸ್ ಮಾಡಿಸುತ್ತಾ , ಎಲ್ಲರ ಬಳಿಯೂ ಎರಡೆರಡು ಫೋಟೋಗಳನ್ನು ಸಂಗ್ರಹಿಸಿದರು. ಕಾರಣ ಕೇಳಿದಾಗ ತುಂಬಾ ಖುಷಿಯಾಯಿತು..ನಾವೆಲ್ಲರೂ ಹೋಗುವುದಿತ್ತು, ಚೀನಾ-ಭಾರತ ಗಡಿ ಪ್ರದೇಶದ  ಪ್ರಸಿದ್ಧ *ನಾಥೂ ಲಾ ಪಾಸ್* ಗೆ ! ಅಲ್ಲಿಗೆ ಹೋಗುವುದು ಕಷ್ಟ ಸಾಧ್ಯವೆಂದು,  ನಮ್ಮ ಪ್ರವಾಸದಲ್ಲಿ ಕೊನೆ ಘಳಿಗೆಯಲ್ಲಿ ಅದನ್ನು ಕೈ ಬಿಟ್ಟಿದ್ದರು. ಆದರೆ ಎಲ್ಲರ ಬೇಡಿಕೆ ಮೇರೆಗೆ  ಅಲ್ಲಿಗೆ ಹೋಗಲು ಬೇಕಾದ ತಯಾರಿಯ ಪ್ರಯತ್ನದಲ್ಲಿದ್ದರು ಇಬ್ಬರೂ. ಆದುದರಿಂದ ಒಂದೊಳ್ಳೆಯ ಆಸೆ ಎಲ್ಲರ ಮನದಲ್ಲೂ ಮೊಳಕೆಯೊಡೆದಿತ್ತು.

ಅಷ್ಟು ಹೊತ್ತಿಗಾಗಲೇ ತಯಾರಾಗಿದ್ದ  ತೋವೆ, ಪಲ್ಯದೊಂದಿಗಿನ ರುಚಿಯಾದ ಮಧ್ಯಾಹ್ನದ ಊಟವನ್ನು ಸವಿದು ಮುಂದಿನ ಪ್ರಯಾಣಕ್ಕೆ ಸಿದ್ಧರಾದೆವು. ನಮ್ಮ ವಾಹನ ಸಂಗಾತಿಗಳಾಗಿದ್ದವರು ಗಣೇಶಣ್ಣ ಮತ್ತು ಪರಮೇಶ್ವರಿ ಅಕ್ಕ. 244 ನಂಬರ್ ಹೊಂದಿದ್ದ ನಮ್ಮ ಇನ್ನೋವ ಕಾರಿನ ಮಾಲಿಕ  ಬಿಶಾಲ್, ಹಸನ್ಮುಖಿ, ಸಂಯಮಿ ಚಾಲಕನಾಗಿದ್ದ. ಪ್ರವಾಸಿ ತಾಣಗಳೇ ತುಂಬಿರುವ ಸಿಕ್ಕಿಂ ರಾಜ್ಯದಲ್ಲಿ, ಟ್ಯಾಕ್ಸಿ ಖರೀದಿಸಿ ಚಾಲನೆ ಮಾಡುವುದೇ ದೊಡ್ಡ ಉದ್ಯಮವಾಗಿ ಬೆಳೆದಿದೆ. ಪದವೀಧರ ಯುವಕರಿಗೆ ವಾಹನ ಖರೀದಿಗೆ ಸರಕಾರದಿಂದ ಸಹಾಯವೂ ಸಿಗುವ ಬಗ್ಗೆ ಚಾಲಕನಿಂದ ಮಾಹಿತಿ ಲಭಿಸಿತು. ಉಳಿದ ಪ್ರವಾಸಿ ಬಂಧುಗಳು ಅವರಿಗಾಗಿ ಲಭಿಸಿದ ಟ್ಯಾಕ್ಸಿಗಳಲ್ಲಿ ಬೇರೆ ಬೇರೆ ಗುಂಪುಗಳಾಗಿ ಹೋಗುತ್ತಿರುವುದರಿಂದ ಎಲ್ಲರೂ ಒಟ್ಟಾಗಿ ಸೇರುವುದು ಊಟ ಮತ್ತು ತಿಂಡಿಗಳಿಗೆ ಮಾತ್ರವೇ ಆಗಿತ್ತು.

ನಮ್ಮೆಲ್ಲರ ಮುಂದಿನ   ಗಮ್ಯ ಸ್ಥಾನ..ಸುಮಾರು 114 ಕಿ.ಮೀ.ದೂರದ ಸಿಕ್ಕಿಂನ ಸ್ವರ್ಗ, ಗ್ಯಾಂಗ್ ಟೋಕ್. ಅಗಲ ಕಿರಿದಾದ ರಸ್ತೆ.. ಇಕ್ಕೆಲಗಳಲ್ಲಿ ಹಚ್ಚ ಹಸಿರು ಕಾಡಿನಿಂದ ಆವೃತವಾದ ಬೃಹದಾಕಾರದ ಬೆಟ್ಟಗಳ ಸಾಲುಗಳು..ರಸ್ತೆಯ ಪಕ್ಕದಲ್ಲಿಯೇ ಹರಿಯುತ್ತಿರುವ ದೊಡ್ಡ ನದಿ..ಪ್ರಕೃತಿ ಪ್ರಿಯರಿಗೆ ಮತ್ತಿನ್ನೇನು ಬೇಕು? ಪೂರ್ವ ಹಿಮಾಲಯದಲ್ಲಿ ಉಗಮವಾಗಿ; ಪಶ್ಚಿಮ ಬಂಗಾಳ, ಸಿಕ್ಕಿಂ, ಬಾಂಗ್ಲಾದೇಶದ ಮೂಲಕ ಸುಮಾರು 315ಕಿ. ಮೀ ದೂರವನ್ನು ಕ್ರಮಿಸಿ ಬಂಗಾಳಕೊಲ್ಲಿಯನ್ನು ಸೇರುತ್ತದೆ..  ಈ ತೀಸ್ತಾ ನದಿ. ಪ್ರಯಾಣದುದ್ದಕ್ಕೂ ಎಡ ಭಾಗದಲ್ಲಿ ಈ ನದಿಯೊಂದಿಗೇ ಸಾಗಿತ್ತು ನಮ್ಮ ಪಯಣ. ದಾರಿ ಮಧ್ಯೆ ನದೀ ತೀರದ ಹೋಟೇಲೊಂದರಲ್ಲಿ ಎಲ್ಲರಿಗೂ ತಿಂಡಿ ಪಾನೀಯಗಳ ಸಮಾರಾಧನೆಯಾಯ್ತು. ಒಂದರ್ಧ ತಾಸು ನೀರಿನ ಕಲರವವಕ್ಕೆ ಕಿವಿಗೊಡುತ್ತಾ,  ನೀರ ಹರಿವಿನ ಗಂಭೀರತೆಯನ್ನು ವೀಕ್ಷಿಸುತ್ತಾ, ಅಹ್ಲಾದಕರ ವಾತಾವರಣದಲ್ಲಿಯ  ಟೀ-ಮಿಕ್ಚರ್ ಸೇವನೆಯನ್ನು ನಿಜಕ್ಕೂ ಮರೆಯುವಂತಿಲ್ಲ. ಬೇಕಾದಷ್ಟು ಫೋಟೋಗಳನ್ನು ಕ್ಲಿಕ್ಕಿಸಿ, ಇಳಿ ಸಂಜೆ ಸುಮಾರು 7 ಗಂಟೆಗೆ ಸಿಕ್ಕಿಂನ ಸಿರಿ ನಗರಕ್ಕೆ ತಲಪಿದಾಗ ಏನೋ ಸಾಧಿಸಿದ ಆನಂದ. ಪ್ರವಾಸಿಗರ ದಟ್ಟಣೆಯಿಂದಾಗಿ ಎಲ್ಲರಿಗೂ ಒಂದೇ ಹೋಟೆಲಿನಲ್ಲಿ ಕೋಣೆಗಳು ಅಲಭ್ಯವಾಗಿತ್ತು. ಆದ್ದರಿಂದ ಇನ್ನೆರಡು ಹೋಟೆಲ್ ಗಳಲ್ಲಿ ರೂಮುಗಳನ್ನು ಕಾದಿರಿಸಿದ್ದರು. ನಮಗೆ ಸಿಕ್ಕಿದ ರೂಂ ಸ್ವಲ್ಪ ದೂರವೆನಿಸಿದರೂ, ಅತ್ಯಂತ ಐಶಾರಾಮಿ ಹಾಗೂ ಸುಸಜ್ಜಿತವಾಗಿದ್ದು ಅನುಕೂಲಕರವಾಗಿತ್ತು. ನಮ್ಮೊಂದಿಗಿದ್ದ ನಮ್ಮ ಅನ್ನಪೂರ್ಣೇಶ್ವರರು ಅದಾಗಲೇ ವಿವಿಧ ಪಾಕಗಳ ತಯಾರಿ ನಡೆಸಿದ್ದರೆ; ಪಕ್ಕದಲ್ಲಿದ್ದ ದೊಡ್ಡದಾದ ವೇದಿಕೆ ಸಹಿತದ ಸುಸಜ್ಜಿತ ಹಾಲ್ ಕಂಡು ಎಲ್ಲರೂ ಉತ್ಸಾಹಿತರಾಗಿ ಹಾಡು ಹಾಸ್ಯಗಳ ಹೊನಲೇ ಹರಿಯಲಾರಂಭಿಸಿತು!  ಊಟದ ಸಮಯದಲ್ಲಿ ಬಾಲಣ್ಣನೆಂದರು “ನಮ್ಮ, ನಳ ಮಹಾಶಯ ರಾಜೇಶ್ ತುಂಬಾ ಚೆನ್ನಾಗಿ ಹಾಡ್ತಾರೆ..ಕೇಳಿ”.‌. ಸರಿ, ಎಲ್ಲರ ಒತ್ತಾಯಕ್ಕೆ ಸಂಕೋಚದಿಂದಲೇ ಹಾಡಿದ ಅವರ ಗಾಯನವನ್ನು ಆಲಿಸಿದಾಗ.. ಎಲ್ಲರೂ ದಿಗ್ಮೂಢ! ದೈವದತ್ತ ಇಂಪಾದ ಸ್ವರದ ನಾದದಲ್ಲಿ ಎಲ್ಲರೂ ತಲ್ಲೀನ…. ಮರುದಿನದ ಪ್ರವಾಸದ ಬಗ್ಗೆ ನೆನೆಯುತ್ತಾ ಎಲ್ಲರೂ ತಮ್ಮ ತಮ್ಮ ರೂಂಗಳಲ್ಲಿ.. ನಿದ್ರಾಲೋಕದಲ್ಲಿ ಲೀನ..

(ಮುಂದುವರಿಯುವುದು..)

ಹಿಂದಿನ ಪುಟ ಇಲ್ಲಿದೆ  : http://surahonne.com/?p=25580

-ಶಂಕರಿ ಶರ್ಮ, ಪುತ್ತೂರು.

5 Responses

  1. Parvathikrishna says:

    ಬಹಳ ಚೆನ್ನಾಗಿ ಬರೆಯುತ್ತಿದ್ದೀರಾ …,ಆಸೆಪಟ್ಟು ಓದಲು ಕಾಯುತ್ತಿದ್ದೇನೆ ..ಧನ್ಯವಾದಗಳು .

  2. ನಯನ ಬಜಕೂಡ್ಲು says:

    ಸುಂದರವಾಗಿದೆ ಪ್ರವಾಸಕಥನ. ಇಷ್ಟು ದಿನಗಳ ಬರಹದ ಸರಣಿಯಲ್ಲಿ ಅಡಗಿರುವ ಸೂಕ್ಷ್ಮ ವಿಚಾರಗಳು ಹಲವಾರು. ಅದರಲ್ಲಿ ಪ್ರಮುಖವಾದದ್ದು ಹೊಂದಾಣಿಕೆ

  3. ಜಯಲಕ್ಷ್ಮಿ ಪಿ ರಾವ್ says:

    ಚೆನ್ನಾಗಿದೆ. ಮುಂದಿನ ಭಾಗಕ್ಕಾಗಿ ಕಾಯುತ್ತಿದ್ದೇನೆ.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: