ವಿಶ್ವ ಕೈಬರಹದ ದಿನ

Spread the love
Share Button

ಜನವರಿ 23 ವಿಶ್ವ ಕೈಬರಹ ದಿನ. ಬರೆಯುವ ಸಾಮಗ್ರಿಗಳ ಉತ್ಪಾದಕರ ಸಂಘ (Writing Instrument Manufacturers Association)ದವರು 1977  ರಲ್ಲಿ ಈ ದಿನವನ್ನು ಆಚರಿಸಲಾರಂಭಿಸಿದರು. ಕೈಬರಹಕ್ಕೆ ಅದರದೇ ಆದ ಸಾಮರ್ಥ್ಯ ಹಾಗೂ ಪಾವಿತ್ರ್ಯತೆಯಿದೆ. ಕೈಯಿಂದ ಬರೆಯುವ ಪ್ರಕ್ರಿಯೆಯು ಮನಸ್ಸಿಗೆ ಶಾಂತಿ, ನೆಮ್ಮದಿ ನೀಡುತ್ತದೆ ಅಲ್ಲದೆ ಏಕಾಗ್ರತೆಯನ್ನು ಹೆಚ್ಚಿಸುವಲ್ಲಿ ನೆರವಾಗುತ್ತದೆ. ಭಾವನೆಗಳನ್ನು ವ್ಯಕ್ತಪಡಿಸಲು ಕೈಬರಹವೂ ಒಂದು ಪ್ರಮುಖ ಸಾಧನ ಎಂದರೆ ತಪ್ಪಾಗಲಾರದು. ಕೈಬರಹದ ಮಹತ್ವವನ್ನು ಜನಸಾಮಾನ್ಯರಿಗೆ ತಿಳಿಸಲು ಈ ವಿಶ್ವ ಕೈಬರಹ ದಿನವನ್ನು ಆಚರಿಸಲಾಗುತ್ತದೆ.

ಕೈಬರಹದಿಂದಲೂ ಕೆಲವರ ವ್ಯಕ್ತಿತ್ವವನ್ನು ಅಳೆಯಬಹುದಂತೆ. ಅಮೆರಿಕಾದ ರಾಷ್ಟ್ರೀಯ ಪೆನ್ ಕಂಪನಿ ಮಾಡಿರುವ ಸಂಶೋಧನೆಯ ಪ್ರಕಾರ ನಮ್ಮ ಕೈಬರಹ ನಮ್ಮಲ್ಲಿನ ವ್ಯಕ್ತಿತ್ವವನ್ನು ಗುರುತಿಸುತ್ತದೆ. ಪ್ರತಿಯೊಬ್ಬರ ಅಕ್ಷರ ವಿನ್ಯಾಸದ ಶೈಲಿ ವಿಭಿನ್ನವಾಗಿರುತ್ತದೆ. ಕೆಲವರ ಅಕ್ಷರ ಮುತ್ತು ಪೋಣಿಸಿದಂತೆ ಸುಂದರ. ಇನ್ನು ಕೆಲವರದು ಸೊಟ್ಟಸೊಟ್ಟಗೆ. ಹೇಳಿಕೊಳ್ಳುವಷ್ಟು ಚಂದ ಇಲ್ಲದಿದ್ದರೂ ಓದಬಲ್ಲಂತಹ ಅಕ್ಷರಗಳು ಕೆಲವರದು. ಇನ್ನು ಕೆಲವರದು  ಮೋಡಿ ಮಾಡುವ ಕಲಾತ್ಮಕ ಅಕ್ಷರಗಳು. ಕೆಲವರದು ಯಾರೂ ಓದಲಾರದಂಥಾ ಬ್ರಹ್ಮಲಿಪಿ. ಹೆಚ್ಚಾಗಿ ವೈದ್ಯರು ಬರೆದುಕೊಡುವ ಚೀಟಿಯನ್ನು ಔಷಧಿ ಅಂಗಡಿಯವರು ಮಾತ್ರ ಕರಾರುವಾಕ್ಕಾಗಿ ಓದಬಲ್ಲರು. ಶಿಕ್ಷಕ ವೃತ್ತಿಯಲ್ಲಿರುವುದರಿಂದ ಅಕ್ಷರ ವೈವಿಧ್ಯಗಳನ್ನು ಗಮನಿಸುತ್ತಲೇ ಇರುವ ಸೌಭಾಗ್ಯ ನನಗೆ. ಕೆಲವು ವಿದ್ಯಾರ್ಥಿಗಳ ಅಕ್ಷರಗಳು ಎಡಕ್ಕೆ ವಾಲಿದ್ದರೆ, ಇನ್ನು ಕೆಲವರದು ಬಲಕ್ಕೆ ವಾಲಿರುತ್ತದೆ. ಕೆಲವರ ಅಕ್ಷರ ನೇರ. ಕೆಲವರು ಬರೆಯುವುದನ್ನು ಓದಬೇಕಾದರೆ ಭೂತಕನ್ನಡಿ ಬೇಕು. ಇನ್ನು ಕೆಲವರದು ಕುಂಬಳಕಾಯಿ ಗಾತ್ರದ ಅಕ್ಷರಗಳು. ಪ್ರತಿ ವಿಧದ ಶೈಲಿಗೂ ಒಂದು ರೀತಿಯ ಅರ್ಥವಿದೆಯಂತೆ. ಅದನ್ನು ಬರೆಯಹೊರಟರೆ ಇನ್ನೊಂದು ಲೇಖನವಾಗುವುದು. ಆದರೆ ಇಲ್ಲಿ ನಾನು ಬರೆಯಲು ಹೊರಟಿರುವುದು ಕೈಬರಹದೊಂದಿಗಿರುವ ನನ್ನ ಅನುಭವಗಳನ್ನು……

ಮನೆಯೆ ಮೊದಲ ಪಾಠಶಾಲೆ, ಜನನಿ ತಾನೇ ಮೊದಲ ಗುರುವು ಅನ್ನುವ ಮಾತು ನನ್ನ ಪಾಲಿಗೆ ಅಕ್ಷರ ಕಲಿಯುವುದಕ್ಕೂ ಅಕ್ಷರಶಃ ಸತ್ಯ. ಶಾಲೆಗೆ ಸೇರುವ ಮೊದಲೇ ಬಳಪದ ಕಡ್ಡಿ ಹಿಡಿದು ಸ್ಲೇಟಿನ ಮೇಲೆ ಅ ಆ ಇ ಈ.. ಬರೆಯಲು ನನ್ನಮ್ಮ ಕಲಿಸಿದ ಕಾರಣ ಒಂದನೇ ತರಗತಿಗೆ ಸೇರುವಾಗಲೇ ಪೂರ್ತಿ ಕನ್ನಡ ವರ್ಣಮಾಲೆಯನ್ನು ತಪ್ಪಿಲ್ಲದೆ ಬರೆಯುತ್ತಿದ್ದೆ. ಒಂದನೇ ಹಾಗೂ ಎರಡನೇ ತರಗತಿಯನ್ನು ನನ್ನಜ್ಜನ ಮನೆಯ ಹತ್ತಿರದ ಶಾಲೆಯಲ್ಲಿ ಮುಗಿಸಿದ್ದೆ. ಒಂದನೇ ತರಗತಿಯಲ್ಲಿ ನಮಗೆ ಕಲಿಸಲು ಬರುತ್ತಿದ್ದ ವಿಷ್ಣುಮೂರ್ತಿ ಮಾಸ್ತರರು ಹಲವು ಬಾರಿ ಐದನೆಯ ತರಗತಿಯಲ್ಲಿ ಓದುತ್ತಿದ್ದ ವಿದ್ಯಾರ್ಥಿಗಳ ಕೈಯಲ್ಲಿ ಒಂದನೇ ತರಗತಿಯ ವಿದ್ಯಾರ್ಥಿಗಳ ಅಕ್ಷರವನ್ನು ತಿದ್ದಿಸುತ್ತಿದ್ದರು. ನನಗಿನ್ನೂ ನೆನಪಿದೆ. ಹೆಚ್ಚಾಗಿ ಆಗ ಐದನೆಯ ತರಗತಿಯಲ್ಲಿ ಓದುತ್ತಿದ್ದ ಸಾವಿತ್ರಿ ಅಕ್ಕ ಮತ್ತು ಕೆಲವೊಮ್ಮೆ ಅದೇ ತರಗತಿಯ ಸುಜಾತಕ್ಕ ನನ್ನ ಕೈಯನ್ನು ಅವರ ಕೈಯಲ್ಲಿ ಹಿಡಿದು ಬರೆಸುತ್ತಿದ್ದದ್ದು ಬರೆಸುತ್ತಿದ್ದರು. ಎಲ್ಲರ ಅಕ್ಷರಗಳು ಚೆನ್ನಾಗಿರಬೇಕು ಅನ್ನುವುದು ವಿಷ್ಣುಮೂರ್ತಿ ಮಾಸ್ತರರ ಅಪೇಕ್ಷೆಯಾಗಿತ್ತು.

ಮೂರನೆಯಿಂದ ಏಳನೆಯವರೆಗೆ ನಮ್ಮೂರಿನ ಸರಕಾರಿ ಶಾಲೆಯಲ್ಲಿ ಓದುತ್ತಿದ್ದ ಐದು ವರ್ಷಗಳಲ್ಲಿ ಎರಡು ಬಾರಿ ಮಾತ್ರ ಶಾಲಾ ವಾರ್ಷಿಕೋತ್ಸವ ನಡೆದಿತ್ತು. ಮೂರನೇ ತರಗತಿಯಲ್ಲಿ ದುಂಡಗಿನ ಕೈಬರಹ ಸ್ಪರ್ಧೆಯಲ್ಲಿ ನನಗೆ ಪ್ರಥಮ ಬಹುಮಾನ ಬಂದದ್ದು ನನ್ನ ಜೀವನದ ಮೊದಲ ಬಹುಮಾನವಾಗಿತ್ತು. ಆಗ ತಾನೇ ಪ್ಲಾಸ್ಟಿಕ್ ಬಳಕೆ ಆರಂಭವಾಗಿತ್ತು. ಮುಖದ ಪೌಡರ್ ಹಾಕಲು ಉಪಯೋಗಿಸುವಂತಹ ಒಂದು ಪ್ಲಾಸ್ಟಿಕ್ ಕರಡಿಗೆ ಬಹುಮಾನವಾಗಿ ಸಿಕ್ಕಿತ್ತು. ಅದನ್ನು ಹಿಡಿದು ಸಂಭ್ರಮಿಸಿದ ಆ ದಿನಗಳನ್ನು ಮರೆಯಲುಂಟೇ?ಬಹುಮಾನ ಪಡೆಯಲು ಇರುವ ಒಂದೇ ಒಂದು ಸಂದರ್ಭ ಶಾಲಾ ವಾರ್ಷಿಕೋತ್ಸವ ಅನ್ನುವುದು ಅರಿವಿಗೆ ಬಂದು ಪ್ರತಿವರ್ಷವೂ ಶಾಲಾ ವಾರ್ಷಿಕೋತ್ಸವ ನಡೆಯುವಂತಾಗಲಿ ಅಂತ ದೇವರನ್ನು ಬೇಡುತ್ತಿದ್ದ ನೆನಪು. ಮತ್ತೆ ಪುನಃ ನಾನು ಆರನೇ ತರಗತಿಯಲ್ಲಿರುವಾಗ ಶಾಲಾ ವಾರ್ಷಿಕೋತ್ಸವ ನಡೆಯಿತು.  ಇಂಗ್ಲೀಷ್ ಮತ್ತು ಹಿಂದಿ ಕೈಬರಹ ಸ್ಪರ್ಧೆಯಲ್ಲಿ ಪ್ರಥಮ ಹಾಗೂ ಕನ್ನಡ ಕೈಬರಹ ಸ್ಪರ್ಹೆಯಲ್ಲಿ ದ್ವಿತೀಯ ಬಹುಮಾನ ಪಡೆದಿದ್ದೆ. ಆಗ ನನಗೆ ಬಹುಮಾನವಾಗಿ ದೊರೆತದ್ದು ಇಡ್ಲಿ ಬೇಯಿಸಲು ಬಳಸುವ Stainless Steelನ ಗಿಣ್ಣಲುಗಳು. ಆಗ Stainless Steel ಪಾತ್ರೆಗಳು ಬಡವರ ಅಡುಗೆಮನೆ ಪ್ರವೇಶಿಸದ ದಿನಗಳು. ನಾನಂತೂ ಹಿರಿ ಹಿರಿ ಹಿಗ್ಗಿದ್ದೆ.

ಹೈಸ್ಕೂಲ್ ಹಾಗೂ ಕಾಲೇಜು ದಿನಗಳಲ್ಲಿಯೂ  ಶಿಕ್ಷಕರಿಂದ, ಗೆಳತಿಯರಿಂದ, ಸಹಪಾಠಿಗಳಿಂದ ಕೈಬರಹದ ಬಗ್ಗೆ ಪ್ರಶಂಸೆಯ ನುಡಿಗಳು. ಸ್ನಾತಕೋತ್ತರ ಪದವಿ ವಿದ್ಯಾಭ್ಯಾಸದ ಸಂದರ್ಭದಲ್ಲಿ ನಾನು ನೋಟ್ಸ್ ತಯಾರಿಸುವಾಗ ಕೆಲವು ಸಹಪಾಠಿಗಳ ಕೋರಿಕೆಯಂತೆ   ಕಾರ್ಬನ್ ಕಾಗದ ಇಟ್ಟು ಇನ್ನೊಂದು ಪ್ರತಿ ಮಾಡಿ ಕೊಡುತ್ತಿದ್ದೆ.  ಆಗಷ್ಟೇ xerox ಯಂತ್ರ ಬಂದಿತ್ತು ಹಾಗೂ ಅದು ಬಡ ವಿದ್ಯಾರ್ಥಿಗಳಿಗೆ ದುಬಾರಿಯಾಗಿತ್ತು. ಕಾಲೇಜಿನಲ್ಲಿ ಉಪನ್ಯಾಸಕಿಯಾಗಿ ಸೇರಿದ ನಂತರ ಪ್ರತಿ ವರ್ಷ ಹೊಸ ತರಗತಿಗೆ ಹೋಗಿ ಕರಿಹಲಗೆಯ ಮೇಲೆ ಬರೆದಾಗ “ವಾವ್” ಎಂಬ ಉದ್ಗಾರ ವಿದ್ಯಾರ್ಥಿಗಳಿಂದ.  “ಅದು ಹೇಗೆ ಅಷ್ಟೊಂದು ನೀಟಾಗಿ ಬರೀತೀರಾ?” ಅನ್ನುವ ಪ್ರಶ್ನೆ ಬೇರೆ. ಕಂಪ್ಯೂಟರ್ ಪ್ರಿಂಟ್ ಔಟುಗಳು ದುಬಾರಿ ಇದ್ದಾಗ, A4 ಅಥವಾ ಲೀಗಲ್ ಸೈಝಿನ ಕಾಗದದ ಮೇಲೆ ನೋಟ್ಸ್ ಬರೆದು ಕೊಡುತ್ತಿದ್ದ ನೆನಪು.

ನನ್ನ ಮನೆಯಲ್ಲಿ ನಾನು ಹಿರಿಯವಳು. ಹಿರಿಯಕ್ಕನ ಚಾಳಿ ಮನೆಮಂದಿಗೆಲ್ಲ ಅನ್ನುವ ಗಾದೆ ನಮ್ಮ ಮನೆಯಲ್ಲಿ ಹಿರಿಯಕ್ಕನ ಕೈಬರಹದಂತೆ ತಂಗಿಯಂದಿರದು ಅಂತ ಬದಲಾಗಿದೆ. ಒಂದೇ ತರಹದ ಕೈಬರಹ ನಮ್ಮ ಮೂವರದು. ಸಾಮ್ಯತೆ ಎಷ್ಟೆಂದರೆ ಕೆಲವೊಮ್ಮೆ ಯಾರು ನಿಜವಾಗಿ ಬರೆದದ್ದು ಅನ್ನುವುದು ಗೊತ್ತಾಗದಷ್ಟು!  ಕಾಲೇಜಿನಲ್ಲಿ ನೀಡುವ  ಪ್ರಶಸ್ತಿಪತ್ರಗಳಲ್ಲಿ ಸ್ಪರ್ಧಾವಿಜೇತರ ಹೆಸರನ್ನು ಬರೆಯುವುದು ನನ್ನ ಇಷ್ಟದ ಕೆಲಸ. ಯಾರು ನನ್ನ ಕೈಬರಹವನ್ನು ಪ್ರಶಂಸಿಸಿದರೂ, ಕೂಡಲೇ ಮನದಲ್ಲಿ ನನ್ನ ಅಮ್ಮನಿಗೂ ಹಾಗೂ ವಿಷ್ಣುಮೂರ್ತಿ ಮಾಸ್ತರರಿಗೂ ನಮನಗಳನ್ನು ಸಲ್ಲಿಸುತ್ತೇನೆ.

ಕೊನೆಯದಾಗಿ ಒಂದು ಮಾತು. ಪೆನ್ನು, ಹಾಳೆ ಹಿಡಿದು ಬರೆಯುತ್ತಿದ್ದ ದಿನಗಳು ಕಳೆದು ಹೋಗಿವೆ. ಈಗ ಏನಿದ್ದರೂ ಮೊಬೈಲ್ ಮೇಲೆ ಅಥವಾ ಕಂಪ್ಯೂಟರ್ ಮುಂದೆ ಕುಳಿತು ಬರೆಯುವವರೇ ಜಾಸ್ತಿ. ತಂತ್ರಜ್ಞಾನದಲ್ಲಿ ನಡೆಯುತ್ತಿರುವ ಕ್ಷಿಪ್ರ ಬದಲಾವಣೆಗಳಿಂದಾಗಿ, ಇಂದಿನ ಯುವ ಪೀಳಿಗೆ ಕೈಬರಹದಿಂದ ವಿಮುಖವಾಗುತ್ತಿದೆ. ಕೈಬರಹದಿಂದ ಸಿಗುವ ಪ್ರಯೋಜನಗಳ ಬಗ್ಗೆ ಯುವಜನರಲ್ಲಿ ಹಾಗೆಯೇ ಹೆತ್ತವರಲ್ಲಿ ಜಾಗೃತಿ ಮೂಡಿಸುವ ಕೆಲಸವನ್ನು ಮಾಡುವುದು ಶಿಕ್ಷಕರ ಮತ್ತು ಮಾಧ್ಯಮಗಳ ಮಹತ್ತರ ಜವಾಬ್ದಾರಿಯಾಗಿದೆ. ಈ ಮಹತ್ತರ ಕಾರ್ಯದಲ್ಲಿ ನನ್ನ ಜೊತೆ ನೀವೂ ಕೈ ಜೋಡಿಸುತ್ತೀರಿ ತಾನೇ?

-ಡಾ.ಕೃಷ್ಣಪ್ರಭಾ.ಎಂ, ಮಂಗಳೂರು

5 Responses

 1. ನಯನ ಬಜಕೂಡ್ಲು says:

  Superb madam. ಕೈ ಬರಹದ ಪ್ರತಿ ಪ್ರತಿಯೊಬ್ಬರ ಜವಾಬ್ದಾರಿಯನ್ನು ತಿಳಿಯ ಪಡಿಸಿದ ರೀತಿ ತುಂಬಾ ಇಷ್ಟ ಆಯಿತು. ಈ ವಿಚಾರದಲ್ಲಿ ನಿಮ್ಮ ಮಾತಿಗೆ ನನ್ನ ಸಹಮತ ವಿದೆ. ಇನ್ನೊಂದು ತುಂಬಾ ಇಷ್ಟವಾದ ವಿಚಾರ ನಿಮ್ಮ ಲೇಖನದಲ್ಲಿ “ಸುರಹೊನ್ನೆಯ ಪ್ರತಿ ಕೃತಜ್ಞತೆ ವ್ಯಕ್ತ ಪಡಿಸಿದ ರೀತಿ”. ನಿಮ್ಮ ಬರಹಗಳಲ್ಲಿ ಈ ರೀತಿ ನೀವು ತೋರುವ ಚಿಕ್ಕ ಚಿಕ್ಕ ಕಾಳಜಿಗಳೇ ಇಷ್ಟವಾಗುತ್ತದೆ ಮೇಡಂ. ಭಾವನೆಗಳನ್ನು ವ್ಯಕ್ತಪಡಿಸುವಲ್ಲೂ ಕೈ ಬರಹ ಸಹಾಯಕ ಅನ್ನುವ ಮಾತೂ ನೂರಕ್ಕೆ ನೂರು ನಿಜ

 2. ASHA nooji says:

  ಚೆನ್ನಾಗಿ ಬರೆದಿರುವಿರಿ ಪ್ರಭಾರವರೇ .

 3. Santosh Kumar Shetty says:

  ಲೇಖನ ಅರ್ಥ ಪೂರ್ಣವಾಗಿದೆ.
  90 ರ ದಶಕದಲ್ಲಿ ವ್ಯಾಸಂಗ ಪೂರ್ಣ ಗಳಿಸಿದ ನಮಗೆ ತುಂಬಾ ಇನ್ನೂ ಪ್ರಸ್ತುತ.

  ಶಾಲೆಗೆ ಬರೆದ ರಜೆ ಅರ್ಜಿ, ವಿದಾಯದ ನೋವಲ್ಲಿ ಸಹ ಪಾಠಿಗಳಿಗೆ ಬರೆದ ಆಟೋಗ್ರಾಫ್, ಮದುವೆ ಯ ಹೊಸ್ತಿಲ ಲ್ಲಿ ಭಾವೀ ಸತಿಗೆ ಬರೆದ. …ಆ ಪತ್ರ ಗಳು.. ಎಷ್ಟೊಂದು ಭಾವನಾತ್ಮಕ! ಬರದವರಿಗೆ ನೆನಪು ಅವಿಸ್ಮರಣೀಯ.
  ತಮ್ಮ ಸುಂದರ ಲೇಖನ ದ ಮೂಲಕ ಮೆಲುಕು ಹಾಕುವ ಹಾಗೆ ಮಾಡಿದ ತಮಗೆ ತುಂಬಾ ಕ್ರತಜ್ನತೆಗಳು.

  .

 4. Shankari Sharma says:

  ಲೇಖನ ಚೆನ್ನಾಗಿದೆ.

 5. jyothi says:

  ಲೇಖನ ಚೆನ್ನಾಗಿದೆ

Leave a Reply

 Click this button or press Ctrl+G to toggle between Kannada and English

Your email address will not be published.

Follow

Get every new post on this blog delivered to your Inbox.

Join other followers: