ಬರಹದ ಬೆಂಬೆತ್ತಿ..

Share Button

ಯಾಕೋ ಏನೋ, ಬರಹ ಅಂದ ಕ್ಷಣ ನಮ್ಮ ಹಣೆಬರಹದ ನೆನಪಾಗ್ತದೆ ನನಗೆ. ಅದನ್ನು ಯಾವ ಲಿಪಿಯಲ್ಲಿ ಬರೆದಿದ್ದಾರೋ ಏನೋ.  ಹೌದು, ಅಕ್ಷರವು ಬರೆದಾತನ ಗುಣ ನಡತೆಗಳನ್ನು ಸೂಚಿಸುತ್ತದೆ ಎನ್ನುವರು. ನಮ್ಮ ರಾಶಿ ಭವಿಷ್ಯದ ತರಹ ಅದಕ್ಕಾಗಿಯೇ ಒಂದು  ಲಿಪಿ ಶಾಸ್ತ್ರ ವಿಭಾಗವೇ ಇದೆ. ಅಕ್ಷರ ಕಾಗೆ ಕಾಲಾದ್ರೂ, ಕೋಳಿ ಕಾಲಾದ್ರೂ ಏನೂ ತೊಂದ್ರೆ ಇಲ್ಲ ಅನ್ನಿಸುತ್ತದೆ ನನಗೆ. ಅಲ್ಲಾ..ಹೆಚ್ಚಿನ ಡಾಕ್ಟರ್ ಗಳು ಬರೆದುಕೊಡುವ ಚೀಟಿಗಳನ್ನು ಓದಲು ಆ ಬ್ರಹ್ಮನಿಂದಲೂ ಸಾಧ್ಯವಿಲ್ಲ! ಅಂತಾದ್ರಲ್ಲಿ ಔಷಧಿ ಅಂಡಿಯವರು ಅದು ಹೇಗೋ ಓದ್ತಾರೆ. ನನಗೆ ಕೆಲವೊಮ್ಮೆ ಭಯವಾಗುವುದೂ ಉಂಟು..ಎಲ್ಲಾದ್ರೂ ಔಷಧಿ ಬದಲಾದ್ರೆ ಅಂತ! ಆದರೆ ಒಮ್ಮೆಯಂತೂ ಔಷಧಿ ಅಂಡಿಯವರಿಗೇ ಚೀಟಿಯನ್ನು ಓದಲಾಗದೆ  ಡಾಕ್ಟರ್ ಗೇ ಹಿಂತಿರುಗಿಸಿದ ಆನುಭವ ನನಗೊಮ್ಮೆ ಆದುದು ಮಾತ್ರ ಸುಳ್ಳಲ್ಲ. ಕೆಲವು ಪ್ರಖ್ಯಾತ ವ್ಯಕ್ತಿಗಳ ಅಕ್ಷರಗಳು ಓದುವುದು ಬಿಡಿ ನೋಡುವುದೇ ಕಷ್ಟ.

ನಿಜವಾಗಿಯೂ ಹೇಳುವುದಾದರೆ, ನಮ್ಮ ಕನ್ನಡ ಅಕ್ಷರದಷ್ಟು ಚಂದದ ಅಕ್ಷರ ಬೇರೆ ಯಾವುದೇ ಭಾಷೆಯ ಅಕ್ಷರವಿಲ್ಲವೆಂದು ನನ್ನ ಸ್ವಂತ ಅಭಿಮತ. ನಮ್ಮ ನೋಟಿನಲ್ಲಿರುವ ಹದಿನೈದು ಭಾಷೆಗಳ ಲಿಪಿಗಳನ್ನೇ ನೋಡಿ, ನಮ್ಮ ಕನ್ನಡ ಎಷ್ಟು ಮುದ್ದಾಗಿದೆ.. ಮುತ್ತಿನಂತೆ ಉರುಟುರುಟು! ಇದನ್ನು ಕೇಳಿದರೆ ಬೇರೆ ಭಾಷೆಯವರು ಬೇಜಾರು ಮಾಡಿಕೊಂಡಾರೋ ಏನೋ. ನನ್ನ ತಮಿಳು ಬಂಧುಗಳೊಬ್ಬರಿಗೆ ಮಾತಾಡಲು ಕನ್ನಡ ಬರುವುದಾದರೂ, ಓದಲು ಬರುವುದಿಲ್ಲ. ಅವರ ಅಭಿಪ್ರಾಯದಂತೆ ನಮ್ಮ ಕನ್ನಡದ ಅಕ್ಷರಗಳೆಲ್ಲಾ ಸೊನ್ನೆ ಬರೆದಂತೆ ಕಾಣಿಸುತ್ತಿದೆಯಂತೆ! ಕುಣಿಯಲು ತಿಳಿಯದವಳು ವೇದಿಕೆಯೇ ಸರಿಯಿಲ್ಲ ಎಂದಳಂತೆ.. ಹಾಗಾಯ್ತು ಅಲ್ವಾ?.ಅಲ್ಲಾ..ಅವರಿಗೇನು ಗೊತ್ತು ಅದರ ಚಂದ, ಅಂದ. ಇರಲಿ. ನನಗೂ ಹಾಗೆಯೇ ಅಂದುಕೊಳ್ಳಬಹುದೇನೋ ಬೇರೆಯವರು; ಯಾಕೆ ಗೊತ್ತಾ? ಪಕ್ಕದ ಕೇರಳದ  ಮಲಯಾಳ ಅಕ್ಷರಗಳೂ ನನಗೂ ಬರೇ ಮಾಲೆ ಹೆಣೆದಂತೆ ತೋರುತ್ತದೆ, ಏನ್ಮಾಡ್ಳಿ?

ಸುಮಾರು ಅರುವತ್ತು ವರ್ಷಗಳ ಹಿಂದೆ ಆದ ನನ್ನ ಅಕ್ಷರಾಭ್ಯಾಸ..ಪುಟ್ಟ ಹಳ್ಳಿಯ ಸಣ್ಣ ಶಾಲೆಯಲ್ಲಿ. ದಪ್ಪಕ್ಕೆ ಎತ್ತರಕ್ಕಿದ್ದ ಮೇಸ್ಟ್ರು ಈ ನಾಲ್ಕೂವರೆ ವರ್ಷದ ಮಗುವನ್ನು ತಮ್ಮ ಮಡಿಲಲ್ಲಿ ಕುಳ್ಳಿರಿಸಿ ಅಕ್ಕಿ ಮೇಲೆ ಅರಸಿನ ತುಂಡಿನಲ್ಲಿ ಓಂಕಾರ ಬರೆಸಿ, ಅ.. ಆ.. ಬರೆಸಿದ್ದು ಇನ್ನೂ ಕನಸಿನಂತೆ ನೆನಪಿದೆ. ನನ್ನಕ್ಕ ಅದೇ ಶಾಲೆಯಲ್ಲಿ ಕಲಿಯುತ್ತಿದ್ದುದರಿಂದ, ಹಾಗೂ ಅವಳ ಜೊತೆಗೆ ಹೋಗುತ್ತಿದ್ದುದರಿಂದ ನನ್ನನ್ನು ಶಾಲೆಗೆ ಬೇಗನೇ ಸೇರಿಸಿದ್ದಿರ್ಬೇಕು. ಆಗ ಇದ್ದ ಎಲ್ಲಾ ಮೇಸ್ಟ್ರುಗಳ ಅಕ್ಷರಗಳೂ ಒಬ್ಬರಿಂದ ಒಬ್ಬರದ್ದು ತುಂಬಾ ಚಂದಕ್ಕೆ ದುಂಡಾಗಿತ್ತು.

ಆಗೆಲ್ಲಾ ಈಗಿನಂತೆ ಕೆ.ಜಿ. ಕ್ಲಾಸ್ ಗಳೇನೂ ಇರದ್ದು ನಮ್ಮ ಪುಣ್ಯ. ಸೇರಿದ್ದೇ ಸೀದಾ ಒಂದನೇ ಕ್ಲಾಸ್ ಗೆ. ಆಗ ಸಿಗುವ ಹೊಸ ಪಠ್ಯ  ಪುಸ್ತಕದ ಪರಿಮಳ ನನಗೆ ತುಂಬಾ ಇಷ್ಟ. ಆದರೆ ನನಗೆ ಸಿಗುತ್ತಿದ್ದುದು ನನ್ನಕ್ಕನ ಹಳೆ ಪುಸ್ತಕ, ಸ್ಲೇಟು, ಲಂಗ , ರವಿಕೆಗಳು. ಆಗ ಅದರ ವ್ಯತ್ಯಾಸವೇ ಗೊತ್ತಾಗುತ್ತಿರಲಿಲ್ಲ, ಎಲ್ಲಾ ಸಹಜವಾಗಿತ್ತು. ಈಗ ನೆನೆಸುವಾಗ ನಾನೇ ಹಿರಿಯಳಾಗಿದ್ರೆ ಎಲ್ಲಾ ಹೊಸತು ನನ್ನದಾಗುತ್ತಿತ್ತು ಎಂದು ನಗು ಬರುತ್ತದೆ. ಇನ್ನು ನಮ್ಮ ಅಕ್ಷರ ತಿದ್ದಲು ಇದ್ದುದು ಸ್ಲೇಟು ಮತ್ತು ಕಡ್ಡಿ. ಮೇಷ್ಟ್ರು ಬರೆದುಕೊಟ್ಟ ಅಕ್ಷರದ ಮೇಲೇಯೇ ಬರೆದು ದಪ್ಪಗೊಳಿಸುವುದೇ ಮಜಾದ ಕೆಲಸ. ಉರುಟಾದ ಅಕ್ಷರಗಳು ರೂಪುಗೊಳ್ಳಲು ಪ್ರಾರಂಭವಾಗುವುದೇ ಇಲ್ಲಿ. ಜೊತೆಗೆ ಅಪರೂಪಕ್ಕೆ ಸಿಗುತ್ತಿತ್ತು ಬಿಳಿ ಕಡ್ಡಿ. ಅದು ನಮಗೆ ಬೆಣ್ಣೆ ಕಡ್ಡಿಯಾಗಿತ್ತು. ಮೂರನೇ ಕ್ಲಾಸಿನಿಂದ ಮೂರು ಗೆರೆಗಳ ಕೋಪಿ ಪುಸ್ತಕದಲ್ಲಿ ಪೆನ್ಸಿಲ್ ಹಿಡಿದು ಬರೆಯುವ ಸಂಭ್ರಮವನ್ನು ಹೇಗೆಂದು ವರ್ಣಿಸಲಿ? ನಮ್ಮ ಮೇಸ್ಟ್ರುಗಳು ಎಷ್ಟು ಸ್ಟ್ರಿಕ್ಟ್ ಗಳಿದ್ದರು ಎಂದರೆ, ಅಕ್ಷರವು ಮೇಲಿನ ಮತ್ತು ಕೆಳಗಿನ ಗೆರೆಗಳಿಗೆ ತಗಲಿಸಿ ಸರಿಯಾಗಿ ಬರೆಯದಿದ್ದರೆ ಕೋಪಿಷ್ಟ ಮೇಸ್ಟ್ರ ಕೈಯಿಂದ, ಅಡಿಕೋಲಲ್ಲಿ ಕೈಗೆ ಹೊಡೆತ ಬೀಳುವುದು, ಕಿವಿ ಚಿವುಟಿ ಕೆಂಪಾಗುವುದು ಖಂಡಿತಾ! ನಾವು ಹುಡುಗಿಯರೆಲ್ಲಾ ಜಾಣ ಮಕ್ಕಳಂತೆ ಮುದ್ದಾಗಿ ಬರೆಯುತ್ತಿದ್ದರೆ, ಪೆಟ್ಟು ತಿನ್ನುವ ಸರದಿ ಹುಡುಗರದ್ದಾಗಿತ್ತು. ಈಗಲೂ ನೋಡಿ ಬೇಕಾದ್ರೆ, ಹುಡುಗರ ಅಕ್ಷರಕ್ಕಿಂತ ಹುಡುಗಿಯರ ಅಕ್ಷರವೇ ಚಂದ ಅಲ್ವಾ? ಕೆಂಪು ಶಾಯಿಯ ಪೆನ್ನಿಂದ ಕೋಪಿಗೆ ಹತ್ತರಲ್ಲಿ ಇಷ್ಟೆಂದು ಕೊಡುತ್ತಿದ್ದ ಮಾರ್ಕ್ಸ್ ನಲ್ಲಿ ಒಂಭತ್ತು ಮುಕ್ಕಾಲರ ವರೆಗೆ ತೆಗೆಯುವ ಪೈಪೋಟಿ‌. ತಪ್ಪಾಗಿದ್ದಲ್ಲಿ ಮೇಷ್ಟ್ರು ಅದರಲ್ಲೇ ಬರೆದು ತಿದ್ದುವುದು ನೆನಪಾಗುತ್ತಿದೆ ಈಗ. ಕೆಲವೊಮ್ಮೆ ಅವರಿಗೆ ತುಂಬಾ ಖುಷಿಯಾದರೆ ಹತ್ತರಲ್ಲಿ ಹನ್ನೊಂದು ಕೊಡುವುದೂ ಇತ್ತು. ಆ ದಿನ ನನಗೆ ಸ್ವರ್ಗಕ್ಕೆ ಮೂರೇ ಗೇಣು, ಗೆಳತಿಯರಿಗೆ ತೋರಿಸಿ ಸಂಭ್ರಮಿಸುವುದೇನು! ಐದನೇ ತರಗತಿಗೆ ಇಂಗ್ಲಿಷ್, ಆರನೇ ತರಗತಿಗೆ ಹಿಂದಿ ಪ್ರಾರಂಭ. ನಾಲ್ಕು ಮತ್ತು ಮೂರು ಗೆರೆಗಳ ಕೋಪಿ ಪುಸ್ತಕ ಆ ಅಕ್ಷರಗಳನ್ನು ಸಾಣೆ ಹಿಡಿಸುತ್ತಿತ್ತು.


ನಾನು  ಕಲಿತ ಆ ಶಾಲೆಯಲ್ಲಿ ಮೂರು ವರ್ಷಕ್ಕೊಮ್ಮೆ ಶಾಲಾ ವಾರ್ಷಿಕೋತ್ಸವ ನಡೆಯುತ್ತಿತ್ತು. ಆಗ ಚಂದದ ಚಿತ್ತಿಲ್ಲದ ಅಕ್ಷರಗಳಿಗೆ ಬಹುಮಾನವಿತ್ತು. ಹಾಗೊಮ್ಮೆ ನಾನು ಏಳನೇ ತರಗತಿಯಲ್ಲಿದ್ದಾಗ ಮೂರೂ ಭಾಷೆಗಳ ಅಕ್ಷರಗಳಿಗೂ  ಮೊದಲ ಬಹುಮಾನ ಸಿಕ್ಕಿದುದು ಹೆಮ್ಮೆಯ ವಿಷಯವೇ. ಆದರೆ ಅದು ಕಳೆದು ಒಂದು ವಾರದಲ್ಲಿ ನಮ್ಮ ಪ್ರೀತಿಯ ಮುಖ್ಯೋಪಾಧ್ಯಾಯರು ನನಗೊಂದು ಕೆಲಸ ವಹಿಸಿಕೊಟ್ಟರು. ಅವರು ಕೊಟ್ಟಿದ್ದ ನಾಲ್ಕು ಪುಟಗಳ ಕನ್ನಡ ಲೇಖನವನ್ನು ನನ್ನ ಕೈಯಲ್ಲಿರಿಸಿ ಒಂದೂ ಚಿತ್ತಿಲ್ಲದಂತೆ ಇನ್ನೊಂದು ಹಾಳೆಯಲ್ಲಿ ಬರೆದುಕೊಡಲು ಹೇಳಿದರು. ಅತ್ಯಂತ ಶ್ರದ್ಧೆಯಿಂದ, ಜಾಗರೂಕತೆಯಿಂದ ಬರೆದರೂ ಒಂದು ಚಿತ್ತು ಆಗಿಯೇ ಬಿಟ್ಟಿತ್ತು. ಬರೀ ಒಂದಲ್ವಾ, ತೊಂದರೆ ಇಲ್ಲ ಎಂದು ಯೋಚಿಸಿ, ನಾನು ಬರೆದುದನ್ನು ಅವರ ಕೈಗೆ ಕೊಟ್ಟಾಗ, ತಕ್ಷಣ ಅವರಿಗೆ ಅದು ಗೊತ್ತಾಗಿ ಬಿಟ್ಟಿತ್ತು. ನನ್ನತ್ತ ತೀಕ್ಷ್ಣವಾಗಿ ದಿಟ್ಟಿಸಿ, “ಸರಿಯಾಗಿ ಬರೆದು ತಾ” ಎಂದು ಪುನಃ ಬೇರೆ ಖಾಲಿ ಕಾಗದಗಳನ್ನು ಕೊಟ್ಟು ಹೊರಟು ಹೋದರು. ನನಗಾದ ಅವಮಾನ ಅಷ್ಟಿಷ್ಟಲ್ಲ. ಅಳುವನ್ನು ನುಂಗಿಕೊಂಡು  ಇನ್ನೊಮ್ಮೆ ನೀಟಾಗಿ ಬರೆದುಕೊಟ್ಟಾಗ ಅದನ್ನು ನೋಡಿ ಪ್ರಶಂಸಿಸಿದರು. ಆದರೆ ಇಂದಿಗೂ ಏನಾದರೂ ಬರೆಯ ಹೊರಟರೆ, ಅವರನ್ನು, ಆ ಘಟನೆಯನ್ನು ಮರೆಯದೆ, ನಾನು ಅವರಿಗಾಗಿಯೇ ಬರೆಯುವೆನೇನೋ ಎಂಬಂತೆ ನೀಟಾಗಿ ಬರೆಯಲು ಪ್ರಯತ್ನಿಸುವೆ.

ಚಿತ್ತಿಲ್ಲದ, ಸ್ಪಷ್ಟವಾದ, ನೀಟಾದ, ನೇರ ಗೆರೆಯ ಮುದ್ದಾದ ಬರಹ ಎಂದಿಗೂ ಚೆನ್ನ. ಪರೀಕ್ಷೆಯಲ್ಲಿ ಚಂದದ ಬರಹಕ್ಕೆಂದೇ ಮಾರ್ಕುಗಳಿವೆ. ಈಗಂತೂ  ಭಾಷಾ ಪರೀಕ್ಷೆಗಳಲ್ಲಿ ನೂರಕ್ಕೆ ನೂರು ಅಂಕ ತೆಗೆಯುವ ಮಕ್ಕಳನ್ನು ಕಂಡಾಗ ಆಶ್ಚರ್ಯವೆನಿಸುತ್ತದೆ, ಅಭಿಮಾನವೆನಿಸುತ್ತದೆ. ಆದರೂ ಈಗ ಅಕ್ಷರದ ಬಗ್ಗೆ ಕಾಳಜಿ ಕಡಿಮೆಯಾದಂತೆನಿಸುತ್ತದೆ ನನಗೆ. ಅಕ್ಷರ ಹೇಗಿದ್ದರೂ, ಮುಂದೆ ಕಂಪ್ಯೂಟರ್ ಮುದ್ದಾಗಿ ಬರೆದುಕೊಡುವುದೆಂಬ ನಂಬಿಕೆ ಎಲ್ಲರಿಗೂ. ಇನ್ನು ಮುಂದಕ್ಕೆ, ಈ ಆಧುನೀಕರಣದಿಂದಾಗಿ ಕೈ ಬರಹ ತಪ್ಫಿಯೇ ಹೋಗಬಹುದೇನೋ..ನಮ್ಮ ಅಂತರ್ದೇಶೀಯ ಪತ್ರದ ತರಹ, ಎಂಬ ಭಯವಿದೆ!

-ಶಂಕರಿ ಶರ್ಮ, ಪುತ್ತೂರು.

2 Responses

  1. ನಯನ ಬಜಕೂಡ್ಲು says:

    ಆಹಾ…. ಬರಹದ ತುಂಬಾ ಕನ್ನಡ ಕಸ್ತೂರಿಯ ಕಂಪು.
    ಲೇಖನ ಓದುತ್ತಾ ಓದುತ್ತಾ ಅಂಗನವಾಡಿಯಿಂದ ಹಿಡಿದು 7ನೇ ತರಗತಿ ವರೆಗಿನ ದಿನಗಳೊಳಗೆ ಹೊಕ್ಕು ಬಂದೆ. ಸೊಗಸಾದ ಲೇಖನ.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: