ಮಾತು ಮನವ ಕೆಡಿಸದಿರಲಿ

Share Button

ಸುಮಾರು ಹದಿನೈದು ವರ್ಷಗಳ ಹಿಂದೆ ನಡೆದ ಘಟನೆ. ಅದೊಂದು ದಿನ ಬೆಳಿಗ್ಗೆ ಸ್ಟಾಫ್ ರೂಮಿನಲ್ಲಿ ಓದುತ್ತಾ ಕುಳಿತಿದ್ದೆ. ಎರಡು ದಿನಗಳಿಂದ ತರಗತಿಗಳಿಗೆ  ಗೈರುಹಾಜರಾಗಿದ್ದ ನನ್ನ ತರಗತಿಯ ವಿದ್ಯಾರ್ಥಿಯೊಬ್ಬ ತನ್ನ Calender ಪುಸ್ತಕದಲ್ಲಿ ನನ್ನ ಸಹಿ ಪಡೆಯಲು ಬಂದಿದ್ದ. ತಲೆ ನುಣ್ಣಗೆ ಬೋಡು ಹೊಡೆಸಿಕೊಂಡಿದ್ದ ಅವನ ಹತ್ತಿರ ಕೇಳಿದೆ “ಎಲ್ಲೋಗಿ ಬಂದೆ ಮಾರಾಯ? ತಿರುಪತಿಯಾ ಅಥವಾ ಧರ್ಮಸ್ಥಳವಾ?”. ಚಿಕ್ಕಮಗಳೂರು ಕಡೆಯವನಾಗಿದ್ದ ಅವನು ಮಂಗಳೂರಿನಲ್ಲಿ ಹಾಸ್ಟೆಲಿನಲ್ಲಿದ್ದುಕೊಂಡು ಓದುತ್ತಿದ್ದ. “ಇಲ್ಲ ಮೇಡಂ, ನಮ್ಮಪ್ಪ ತೀರ್ಕೊಂಡು ಬಿಟ್ಟರು”- ಆ ಹುಡುಗ ಹೇಳಿದ ಉತ್ತರ ಕೇಳಿ ಒಮ್ಮೆಗೆ ನನ್ನ ಬಗ್ಗೆ ನನಗೇ ಬೇಸರವಾಯಿತು. ಉತ್ತರ ಕರ್ನಾಟಕದ  ಹಾಗೆಯೇ ಘಟ್ಟದ ಮೇಲಿನ ಮಂದಿ ಪುಣ್ಯಕ್ಷೇತ್ರಗಳಿಗೆ ಹೋದರೆ ಹೆಂಗಸು ಗಂಡಸರೆನ್ನದೆ ತಲೆ ಬೋಡು ಹೊಡೆಸಿಕೊಳ್ಳುವುದನ್ನು ಕಂಡಿದ್ದ ನಾನು ಆ ಹುಡುಗನನ್ನು ನೋಡಿ ಅದೇ ಭಾವನೆಯಿಂದ ಪ್ರತಿಕ್ರಿಯಿಸಿದ್ದೆ. ನಂತರ ಆ ಹುಡುಗನ ಬಳಿ ಕ್ಷಮೆ ಕೇಳಿ, ಸಮಾಧಾನದ ಮಾತನಾಡಿದರೂ ಹಲವು ದಿನಗಳವರೆಗೂ ಆ ವಿಷಯ ನನ್ನನ್ನು ಕಾಡುತ್ತಿತ್ತು.

ಇನ್ನೊಂದು ಘಟನೆ ನೆನಪಿಗೆ ಬರುತ್ತಿದೆ. ಅದೊಂದು ದಿನ ನನ್ನ ಆತ್ಮೀಯ ಹಳೆ ವಿದ್ಯಾರ್ಥಿ ಸಿಕ್ಕಿದ್ದನು. ಐದಾರು ವರ್ಷಗಳ ಹಿಂದೆ ಅವನ ಮದುವೆಗೆ ಹೋಗಿ ಶುಭ ಹಾರೈಸಿ ಬಂದ ನಂತರ ಅವನನ್ನು ಭೇಟಿಯಾಗಿರಲಿಲ್ಲ. ತೀರಾ ಸಹಜವಾಗಿ ಸಲುಗೆಯಿಂದ “ಮಗು ಆಯ್ತಾ? ಹೆಣ್ಮಗೂನಾ, ಗಂಡ್ಮಗೂನಾ?” ಅಂತ ಪ್ರಶ್ನಿಸಿದೆ. ನಕಾರಾತ್ಮಕವಾಗಿ ತಲೆಯಲ್ಲಾಡಿಸಿದನವನು. ಯಾಕಾದ್ರೂ ಕೇಳಿದೆ ಅಂತನ್ನಿಸಿತು. ಮಗು ಆಗದಿರಲು ಹಲವು ಕಾರಣಗಳಿರಬಹುದು. ಬೇಕು ಅಂತಾನೇ ಮುಂದೂಡಿರಲೂಬಹುದು. ಆದರೂ ನಾನು ಕೇಳಬಾರದಿತ್ತು. ಇನ್ನು ಮುಂದೆ ಎಷ್ಟೇ ಆತ್ಮೀಯರಾದರೂ ಈ ತರದ ಪ್ರಶ್ನೆಗಳನ್ನು ಕೇಳುವುದಿಲ್ಲವೆಂದು ಅಂದೇ ನಿಶ್ಚಯಿಸಿದೆ. ಆ ವಿದ್ಯಾರ್ಥಿಗೆ ಇಬ್ಬರು ಮಕ್ಕಳು ಆದರೆನ್ನಿ.

ಮನುಷ್ಯ ಸಂಘಜೀವಿ. ಒಂಟಿಯಾಗಿ ಇರಲು ಎಂದಿಗೂ ಇಷ್ಟಪಡುವುದಿಲ್ಲ. ಮನದಲ್ಲಿ ಮೂಡುವ ಭಾವನೆಗಳನ್ನು ಮಾತಿನ ಮೂಲಕ ಅಭಿವ್ಯಕ್ತಪಡಿಸಬಲ್ಲ ಸಾಮರ್ಥ್ಯವು ಭಗವಂತನು ಮಾನವಜೀವಿಗಳಿಗಿತ್ತ ಬಹು ದೊಡ್ಡ ಕೊಡುಗೆಯೆಂದರೂ ತಪ್ಪಿಲ್ಲ. ಕೆಲವರು ಅತಿಭಾಷಿಗಳಾದರೆ, ಇನ್ನು ಕೆಲವರು ಮಿತಭಾಷಿಗಳು. ಜಾಸ್ತಿ ಮಾತಾಡಿದರೆ ವಾಚಾಳಿ, ಕಡಿಮೆ ಮಾತಾಡಿದರೆ ಮೌನಗೊಂಬೆ/ ಮೂದೇವಿ/Reserved ಅನ್ನುವ ಪುಕ್ಕಟೆ ಬಿರುದು. ಎಂತೆಂತಹಾ ಜನರಿರುವರು ಈ ಭೂಲೋಕದೊಳಗೆ!  ತನ್ನ ಮಾತುಗಳಿಂದ ಇತರರನ್ನು ಸಂತೋಷಪಡಿಸುವವರು, ಚುಚ್ಚಿ ಮಾತಾಡಿ ಇತರರಿಗೆ ನೋವುಂಟುಮಾಡುವವರು. ಹೇಳಬೇಕೆನಿಸಿದರೂ ಹೇಳದೆ ಮಾತುಗಳನ್ನು ಬಚ್ಚಿಟ್ಟುಕೊಂಡವರು, ಕಡ್ಡಿ ಮುರಿದಂತೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸುವವರು, ಸಮಯ ಸಂದರ್ಭ ನೋಡದೆ ಮಾತನಾಡುವವರು, ತಪ್ಪೋ ಸರಿಯೋ ಎಂದು ವಿಮರ್ಶಿಸದೆ  ಅಗತ್ಯವಿಲ್ಲದಿದ್ದರೂ ತಮಗನಿಸಿದ್ದನ್ನು ಕೂಡಲೇ ಹೇಳಿಬಿಡುವವರು, ನಾನು ಹೇಳಿದ್ದೇ ಪರಮಸತ್ಯ ಎಂದು ವಾದಿಸುವವರು,….. ಇತ್ಯಾದಿ. ಆದರೆ ಒಮ್ಮೆ ನಾಲಿಗೆಯಿಂದ ಜಾರಿದ ಮಾತನ್ನು ಹಿಂಪಡೆಯಲು ಸಾಧ್ಯವಿಲ್ಲ. ನಾವಾಡುವ ಮಾತು ಇತರರನ್ನು ನೋಯಿಸುವಂತಿರಬಾರದು. ಮಾತುಗಳು ಸಭ್ಯತೆಯ ಎಲ್ಲೆಯನ್ನು ಮೀರಬಾರದು.

ಇತ್ತೀಚೆಗೆ ನನ್ನ ಗೆಳತಿಯೊಬ್ಬಳು ಹೇಳಿದ ಸಂಗತಿ ನೆನಪಿಗೆ ಬರ್ತಿದೆ. ಅಪರೂಪಕ್ಕೆ ತನ್ನ ಮನೆಗೆ ಬಂದ ತಂಗಿಯೊಡನೆ ಶಾಪಿಂಗಿಗೆಂದು ಬಟ್ಟೆಯಂಗಡಿಗೆ ಹೋಗಿದ್ದಾಗ, ಅಲ್ಲಿ ಸಿಕ್ಕ  ಸಹೋದ್ಯೋಗಿಯೊಬ್ಬಳಿಗೆ  ತನ್ನ ತಂಗಿಯನ್ನು ಪರಿಚಯಿಸಿದಳಂತೆ. ಆಗ ಆ ಸಹೋದ್ಯೋಗಿ “ನಿಮ್ಮ ತಂಗಿಯಾ?ನಂಬಲಿಕ್ಕೇ ಸಾಧ್ಯವಿಲ್ಲ. ನೋಡಿದ್ರೆ ನೀವೇ ತಂಗಿಯ ತರಹ ಕಾಣುತ್ತೀರಿ” ಅಂತ ನೀಡಿದ ಒಂದೇ ಒಂದು ಪ್ರತಿಕ್ರಿಯೆಯಿಂದ ತಂಗಿ ತುಂಬಾ ನೊಂದುಕೊಂಡಳಂತೆ. ಕಂಡೂ ಕಾಣದ ಹಾಗೆ ಅಕ್ಕನ ಹತ್ತಿರವೂ ಸ್ವಲ್ಪ ಬೇಸರಪಟ್ಟುಕೊಂಡಳಂತೆ ಗೆಳತಿಯ ತಂಗಿ. ತಮ್ಮ ಮಾತಿನಿಂದ ಎದುರಿರುವವರು ನೊಂದುಕೊಳ್ಳಬಹುದು ಅನ್ನುವುದರ ಕನಿಷ್ಟ ಪ್ರಜ್ಞೆಯೂ ಇಲ್ಲದೆ, ನಾಲಗೆ ಮಾರುದ್ದ ಚಾಚುವ ಇಂತಹವರಿಗೆ ಏನು ಹೇಳೋಣ? ಅಯ್ಯೋ ತುಂಬಾ ದಪ್ಪ ಆಗಿದ್ದೇನೆ ಅಂತ ಮನಸ್ಸಿನಲ್ಲಿ ಕೊರಗುತ್ತಿರುವವರೆದುರು “ಇತ್ತೀಚೆಗೆ ನೀವು ತುಂಬಾ ದಪ್ಪ ಆಗಿದ್ದೀರಲ್ಲಾ” ಅಂತ ಕೇಳಿದರೆ ಹೇಗಾಗಬಹುದು. ನಾವಾಡುವ ಮಾತುಗಳ ಮೇಲೆ ನಾವೇ ನಿಗಾ ಇಟ್ಟುಕೊಂಡರೆ ಒಳ್ಳೆದಲ್ವೇ? ಹಾಗೆಯೇ ನಾವು ಕೇಳುವ ಚುಚ್ಚುಮಾತುಗಳಿಂದ ನೊಂದುಕೊಳ್ಳದಿರುವ ನಿಶ್ಚಯವೂ ಇರಲಿ. ಮಹಾಕವಿ ಸರ್ವಜ್ಞನೇ ಹೇಳಿರುವನಲ್ಲವೇ?

ಮಾತಿನಿಂ ನಗೆನುಡಿಯು । ಮಾತಿನಿಂ ಹಗೆ ಕೊಲೆಯು ।
ಮಾತಿನಿಂ ಸರ್ವ ಸಂಪದವು ಲೋಕಕ್ಕೆ ।
ಮಾತೆ ಮಾಣಿಕವು ಸರ್ವಜ್ಞ ॥

ಒಂದು ಕಿವಿಮಾತಿನೊಂದಿಗೆ ಈ ಲೇಖನದ ಮುಕ್ತಾಯ

ಆಡುವ ಮಾತಿನ ಮೇಲೆ ಇರಲಿ ಸದಾ ಎಚ್ಚರ
ನೆನಪಿಡು ಒಡೆದ ಕನ್ನಡಿ ಎಂದೂ ಮೊದಲಿನಂತಾಗದು
ಮಾತೇ ಸರ್ವಸ್ವ ಆದರೂ ಮಾತು ಮನವ ಕೆಡಿಸದಿರಲಿ

– ಡಾ.ಕೃಷ್ಣಪ್ರಭಾ, ಮಂಗಳೂರು 

14 Responses

  1. Anonymous says:

    ಚೆನ್ನಾಗಿ ಬರೆದಿದ್ದೀರಿ

  2. Vishwanathakana says:

    ನೀವು ತಪ್ಪಿ ಆಡಿದ ಮಾತಿನಿಂದ ಹುಡುಗನಿಗೆ ಆ ಕ್ಷಣದಲ್ಲಿ ಬೇಸರವಾಗಿದ್ದಿರಬಹದು.ಮಾತಿನಲ್ಲಿ ಹಾಸ್ಯ ಅಥವಾ ವ್ಯಂಗ್ಯ ಇರಲಿಲ್ಲ ಎಂದಾದಲ್ಲಿ ಹುಡುಗನೂ ಸಾವರಿಸಿಕೊಂಡಿರಬಹುದು. ಹುಡುಗನಿಗೆ ಅದು ದುಃಖದ ಸಮಯ. ನೀವು ಕ್ಷಮೆ ಕೇಳಿದರೂ ಸಮಾಧಾನ ಅಗಿರಲಿಕ್ಕಿಲ್ಲ. ಆದರೆ ಮುಂದೆ ನಿಮ್ಮ ಬಗ್ಗೆ ಆತ್ಮೀಯ ಭಾವನೆ ಉಂಟಾಗಿರಬಹುದು.
    ಇನ್ನೊಂದು ಪ್ರಶ್ನೆ ನಾನು ಇನ್ನೊಬ್ಬರನ್ನು ದಪ್ಪವಾಗಿದ್ದೀಯಾ ಅಂತ ಕೇಳದಿರಬಹುದು.ಆದರೆ ಇನ್ನೊಬ್ಬರು ನನ್ನಲ್ಲಿ ಕೇಳಬಾರದು ಎಂಬ ನಿರೀಕ್ಷೆ ನಮ್ಮ ಹಾಗೂ ಇನ್ನೊಬ್ಬರ ನಡುವೆ ವೈಷಮ್ಯಕ್ಕೆ ಕಾರಣವಾಗಲಾರದೆ.

    • Krishnaprabha says:

      ನಾನು ಆ ಹುಡುಗನ ಬಳಿ ಸೀದಾ ಕೇಳಿದ್ದು. ಹಾಸ್ಯ ಅಥವಾ ವ್ಯಂಗ್ಯವಿಲ್ಲದೆ.. ಆ ಹುಡುಗನ ತುಂಬಾ matured…ನಾನು ಪ್ರಶ್ನೆ ಕೇಳಿದಾಗಲೂ ಅವನು ವಿಚಲಿತನಾಗಿರಲಿಲ್ಲ.
      ಮತ್ತೆ ನೀವು ಕೇಳಿದ ಇನ್ನೊಂದು ಪ್ರಶ್ನೆಗೆ ನನ್ನ ಉತ್ತರ..ದಪ್ಪ ಆಗಿರುವೆನೆಂದು ನಮಗೇ ಗೊತ್ತಿರುವಾಗ, ಇನ್ನೊಬ್ಬರು ಅದನ್ನು ಹೇಳಿದರೂ ಮನಸ್ಸಿಗೆ ತೆಗೆದುಕೊಳ್ಳಬಾರದು

  3. Hema says:

    ನಿಜ. ಕೆಲವೊಮ್ಮೆ ಸಾಂದರ್ಭಿಕವಾಗಿ ಏನೋ ಮಾತನಾಡಿದರೂ, ನಮಗರಿವಿಲ್ಲದೆಯೇ ಇತರರಿಗೆ ನೋವಾಗುತ್ತದೆ. ಚೆಂದದ ಬರಹ.

    • Krishnaprabha says:

      ಧನ್ಯವಾದಗಳು ನಿಮ್ಮ ಮೆಚ್ಚುಗೆಯ ನುಡಿಗಳಿಗೆ ಮತ್ತು ನಿರಂತರ ಪ್ರೋತ್ಸಾಹಕ್ಕೆ

  4. ನಯನ ಬಜಕೂಡ್ಲು says:

    ಚಂದದ ಬರಹ. ಇತ್ತೀಚಿನ ದಿನಗಳಲ್ಲಿ ಎಲ್ಲರ ಮನಸ್ಸು ಬಹಳ ಸೂಕ್ಷ್ಮ ವಾಗುತ್ತಿದೆ. ಹೇಗೆ ಮಾತನಾಡೋದು ಅಂತ ಯೋಚಿಸುವಷ್ಟು.

    • Krishnaprabha says:

      ನಿಮ್ಮ ಮಾತು ನೂರಕ್ಕೆ ನೂರು ಸತ್ಯ…ಒಂದೋ ಅತಿಸೂಕ್ಷ್ಮ ಇಲ್ಲದಿದ್ದಲ್ಲಿ ಶುದ್ಧ ಒರಟು ಈಗಿನ ಮಕ್ಕಳು.

  5. Shankari Sharma says:

    ಸಹಜವಾಗಿ ಮೂಡಿಬಂದ ಚಂದದ ಲೇಖನ. ಈ ತರಹದ ಅನುಭವಗಳು ಆಗಾಗ ನಮಗೂ ನಿಮಗೂ ಆಗುತ್ತಿರುತ್ತವೆ ಹಾಗೂ ಪಾಠಗಳನ್ನೂ ಕಲಿಸುತ್ತವೆ ಅಲ್ಲವೇ..

    • Krishnaprabha says:

      ನಿಮ್ಮ ಮೆಚ್ಚುಗೆಯ ನುಡಿಗಳಿಗೆ ಧನ್ಯವಾದಗಳು..ಇಂತಹ ಅನುಭವಗಳು ಬದುಕಿನಲ್ಲಿ ಆದಾಗ, ಕಲಿತುಕೊಳ್ಳುವಂತಹ ಸರಳ ಸತ್ಯಗಳ ಅರಿವಾಗುತ್ತದೆ

  6. Santosh Kumar Shetty says:

    ಅರ್ಥ ಪೂರ್ಣ ಲೇಖನ…
    ಮನವ ಕೆಡಿಸುವ ಮಾತಿಗಿಂತ ಮೌನವೇ ಶ್ರೇಷ್ಠ.
    ಆದರೂ….. ಅನುಭವ ನಮ್ಮನ್ನ
    matured ಆಗಿರುಸುತ್ತವೆ.
    ಸುಂದರ ಬರಹ… ಎಂದಿನಂತೆ.

    • Krishnaprabha says:

      ಧನ್ಯವಾದಗಳು ಸಂತೋಷ್.. ನಿಮ್ಮ ಪ್ರೋತ್ಸಾಹದ ನುಡಿಗಳಿಗೆ.
      ಮೌನ , ಮಾತು ಎರಡೂ ಅತಿಯಾಗಬಾರದು

  7. Krishnaprabha says:

    ನನ್ನ ಅನುಭವ…. ಇತ್ತೀಚೆಗೆ ಸಮಾರಂಭವೊಂದರಲ್ಲಿ ತುಂಬಾ ಸಮಯದ ನಂತರ ಸಿಕ್ಕ ಪರಿಚಿತರಲ್ಲಿ ಕೇಳಿದೆ…. ನಿಮ್ಮ ಪತ್ನಿ ಬರ್ಲಿಲ್ವಾ ಎಂದು.ಆದರೆ ಅವರು ಎರಡು ವರ್ಷಗಳ ಹಿಂದೆಯೇ ತೀರಿಕೊಂಡಿದ್ದರು.ನನಗೆ ಗೊತ್ತೇ ಇರಲಿಲ್ಲ…..

    ಲೇಖನ ಓದಿ ನನ್ನ ಪರಿಚಿತರೊಬ್ಬರು ಕಳುಹಿಸಿದ ಪ್ರತಿಕ್ರಿಯೆ

  8. Anonymous says:

    ಎಷ್ಟು ಎಚ್ಚರ ವಹಿಸಿದರೂ ಒಂದಲ್ಲ ಒಂದು ಮಾತು ನಮ್ಮಿಂದ ಸಹಜವಾಗಿ‌ಬಂದುಬಿಡ್ತದೆ.ನಾಲಗೆ ಬಿಗಿಯಾಗಿ ಹಿಡ್ಕೊಂಡು ಬಿಡ್ಬೇಕಷ್ಟೆ.ಏನು ಮಾಡೂದು?
    ಲೇಖನ ಸೊಗಸಾಗಿದೆ ಎಂದಿನಂತೆ ನಿಮ್ಮ ಸರಳ ಶೈಲಿಯಲ್ಲಿ

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: