ಪುರಿ-ಡಾರ್ಜಿಲಿಂಗ್ ಪ್ರವಾಸ ಪುಟಗಳು: ಪುಟ 24

Spread the love
Share Button


ತಾಳಮದ್ದಳೆಯಲಿ ತೇಲಿ…

ಗಂಟೆ 8:30 ಆಗುತ್ತಾ ಬಂತು. ಸುಮಾರು ಮುಕ್ಕಾಲಂಶ ಸಹ ಪ್ರವಾಸಿ ಬಂಧುಗಳ ಆಗಮನವಾಗಿದ್ದರಿಂದ ತಾಳಮದ್ದಳೆ ಪ್ರಾರಂಭಕ್ಕೆ ಹಸಿರು ನಿಶಾನೆ ತೋರಿಸಿದರು, ಕೇಶವಣ್ಣ. ನಮ್ಮ ಚೆಂಡೆಗಾಗಿ ತಯಾರಾಗುತ್ತಿದ್ದನು, ಬಾಲ ಕಲಾವಿದ ಭಾರ್ಗವ ಕೃಷ್ಣ(ಜ್ಯೋತಿ ಲಕ್ಷ್ಮಿ-ಚಂದ್ರ ಕುಮಾರ್ ದಂಪತಿಗಳ ಪುತ್ರ).. ಅಲ್ಲೇ ಸಿಕ್ಕಿದ ತರಕಾರಿ ಹಚ್ಚುವ ಮರದ ಮಣೆ ಹಾಗೂ ಕೋಲುಗಳೊಂದಿಗೆ. ಹಿರಿಯ ಸಜ್ಜನ ಗೋಪಾಲಕೃಷ್ಣಣ್ಣನವರು ತಮ್ಮ ಸಿರಿಕಂಠದ ಭಾಗವತಿಗೆಗಾಗಿ ತಾಳ ಹಿಡಿದು ಸಜ್ಜಾಗಿ ಕುಳಿತಿದ್ದರೆ, ಪಾತ್ರಧಾರಿಗಳು ಮುಂದಿನ ಸೀಟಿನಲ್ಲಿ ಆಸೀನರಾಗಿ ಕಾಯುತ್ತಾ ಕುಳಿತೆವು. ತಾಳಮದ್ದಳೆಯ ಪ್ರಸಂಗ ಅರ್ಜುನ ಸನ್ಯಾಸ..ಅದರ ಪೂರ್ವಾರ್ಧ ಮಾತ್ರ. ಸನ್ಯಾಸಿ ವೇಷದಲ್ಲಿದ್ದ ಅರ್ಜುನನ ಸೇವೆ ಮಾಡಲು ಸುಭದ್ರೆಯನ್ನು ಅವಳ ಅಣ್ಣಂದಿರು ಒಪ್ಪಿಸುವುದು.

ಹಿಮ್ಮೇಳದಲ್ಲಿ:
ಭಾಗವತರು: ಗೋಪಾಲಕೃಷ್ಣ ಭಟ್, ಪಕಳಕುಂಜ
ಚೆಂಡೆಯಲ್ಲಿ: ಭಾರ್ಗವ ಕೃಷ್ಣ
ಪಾತ್ರ ವರ್ಗದಲ್ಲಿ:
ಕೃಷ್ಣ: ಶಾಮ್ ಪ್ರಸಾದ್
ಬಲರಾಮ: ದಿವಾಣ ಕೇಶವ ಭಟ್
ಸತ್ಯಭಾಮೆ: ವನಿತ ಪ್ರಸಾದ್
ಅರ್ಜುನ: ಚಂದ್ರ ಕುಮಾರ್
ಸುಭದ್ರೆ: ಶಂಕರಿ ಶರ್ಮ
ವನಪಾಲಕರು: ಮಹಾಲಿಂಗೇಶ್ವರ( ಮಹೇಶ) ಭಟ್ ಮತ್ತು ಮಧುಕೇಶ
ಗಣಪತಿ ಸ್ತುತಿಯೊಂದಿಗೆ ಆರಂಭವಾದಾಗ ಪ್ರೇಕ್ಷಕರ ಭರ್ಜರಿ ಕರತಾಡನದ ಸ್ವಾಗತ.

ಮೊದಲನೇ ದೃಶ್ಯದಲ್ಲಿ ಬಲರಾಮ, ಕೃಷ್ಣರು  ತಮ್ಮ ತಂಗಿ ಸುಭದ್ರೆಯ ವಿವಾಹದ ಬಗ್ಗೆ ನಡೆಸಿದ ಸಂವಾದ. ಘಟಾನುಘಟಿ ಅರ್ಥದಾರಿಗಳಾದ ಕೇಶವಣ್ಣ ಮತ್ತು ಶಾಮ್ ಪ್ರಸಾದಣ್ಣನವರ ನಡುವೆ ಅರ್ಥಗರ್ಭಿತವಾಗಿ ನಡೆದು ಎಲ್ಲರ ಮನ ಸೂರೆಗೊಂಡಿತು.

ಎರಡನೇ ದೃಶ್ಯದಲ್ಲಿ ವನಿತಕ್ಕ ಮತ್ತು ಶಾಮ್ ಪ್ರಸಾದಣ್ಣನವರ ಸತ್ಯಭಾಮೆ-ಕೃಷ್ಣ ಪಾತ್ರಗಳು ನವಿರಾದ ಹಾಸ್ಯ, ನಸುಗೋಪದಿಂದ ಒಬ್ಬರನ್ನೊಬ್ಬರು ಛೇಡಿಸುತ್ತಾ ನಡೆದ ಸಂಭಾಷಣೆಯು ತುಂಬಾ ಚೆನ್ನಾಗಿ ಮೂಡಿ ಬಂದು ಎಲ್ಲರ ಮೊಗದಲ್ಲಿ ನಗುವರಳಿಸಿತು.  ವನಿತಕ್ಕ, ಮೊತ್ತ ಮೊದಲ ಬಾರಿಗೆ ಪಾತ್ರ ಮಾಡಿದವರೆಂದೇ ತಿಳಿಯದಂತೆ, ಒಳ್ಳೆ ಪಳಗಿದ ಮಾತಗಾರಿಕೆ ನೋಡಿ ತುಂಬಾ ಖುಷಿಯಾಯ್ತ…ಜೊತೆಗೇ ನನಗೆ ಹೆದರಿಕೆ..ನನ್ನ ಅವಸ್ಥೆ ಏನಾಗುವುದೋ ಎಂದು! ನನ್ನದು ಮೂರನೇ ದೃಶ್ಯ. ಕೊನೆಗೂ ನನ್ನ ಸರದಿ ಬಂದೇ ಬಂತು. ಹಿರಿಯರಾದ ಕೇಶವಣ್ಣನವರು ಬಲರಾಮರಾದರೆ, ನನಗೆ ಅವರ ತಂಗಿ ಸುಭದ್ರೆ ಪಾತ್ರ. ಅವರೋ, ತುಂಬಾ ಪಳಗಿದ ಅತ್ಯುತ್ತಮ ಅರ್ಥದಾರಿಗಳು. ನನಗಿಲ್ಲಿ ಕೈಕಾಲು ನಡುಕ! ಆದರೂ ಧೈರ್ಯದಿಂದಲೇ ಅವರೆದುರು ಕುಳಿತೆ. ಮೊದಲೇ ನಮ್ಮೊಳಗೆ ಒಪ್ಪಂದ ಆಗಿದ್ದಂತೆ, ಎಷ್ಟಿದೆಯೋ ಅಷ್ಟನ್ನು ಮಾತ್ರ ಅವರು ಹೇಳಬೇಕು..ಜಾಸ್ತಿ ಮಾತಾಡಿದರೆ ನಾನು ತಬ್ಬಿಬ್ಬಾಗುವುದು ಖಂಡಿತ ಎಂದು ನನಗೆ ಗೊತ್ತಿತ್ತು! ಒಳ್ಳೆ ಗುರುಗಳಾದ ಅವರು ನನಗೆ ನೀಡಿದ ತುಂಬು ಪ್ರೋತ್ಸಾಹವನ್ನು ಮರೆಯುವಂತೆಯೇ ಇಲ್ಲ.

ನನಗೆ ಮಾತು ಜಾಸ್ತಿಯಾಗುವುದು ಬೇಡವೆಂದು ಗೋಪಾಲಣ್ಣ ಮತ್ತು ಕೇಶವಣ್ಣ ಸೇರಿ ಪ್ರಸಂಗದ ಹಾಡನ್ನೇ ಕೊನೆಯಲ್ಲಿ ಸ್ವಲ್ಪ ತುಂಡರಿಸಿದ್ದರು! ಅಂತೂ, ಎಲ್ಲೂ ತಪ್ಪದೆ ಒಪ್ಪಿಸಿದ ನೆಮ್ಮದಿ ನನ್ನದು. ಒಂದು ಪುಟ್ಟ ಪರೀಕ್ಷೆಯನ್ನು ಪಾಸು ಮಾಡಿದ ಸಂಭ್ರಮ! ಇನ್ನು ಮುಂದೊಮ್ಮೆ ಈ ರೀತಿ ಪಾತ್ರ ಮಾಡ್ತೇನೋ ಇಲ್ವೋ ಗೊತ್ತಿಲ್ಲ… ಆದರೆ ಇದು ನನ್ನ ಜೀವಮಾನದ ಆಸೆ ಫಲಿಸಿದ ಕ್ಷಣ.. ಎಂದೂ ಮರೆಯುವಂತಿಲ್ಲ. ಪ್ರತಿ ಹಂತದಲ್ಲೂ ನಮ್ಮ ಪ್ರವಾಸಿ ಬಂಧುಗಳ ಕರತಾಡನದ ಪ್ರೋತ್ಸಾಹ ನಡೆದೇ ಇತ್ತು. ಮುಂದಕ್ಕೆ ವನ ಪಾಲಕರಾಗಿ ಮಹೇಶಣ್ಣ ಮತ್ತು ಮಧುಕೇಶ(ನಾರಾಯಣಣ್ಣ- ವೀಣಾ ದಂಪತಿಗಳ ಪುತ್ರ)ರ ಸಂವಾದ ಬಲರಾಮನೊಡನೆ. ತುಂಬು ಹಾಸ್ಯದ ಚಿನಕುರುಳಿ ಮಾತುಗಳಿಂದ ಎಲ್ಲರ ಹೊಟ್ಟೆ ಹುಣ್ಣಾಗಿಸಿದರು ಇಬ್ಬರೂ. ವನ ಪಾಲನೆಯಲ್ಲಿ ಅವರ ಮುತುವರ್ಜಿಯನ್ನಂತೂ ಹೇಳತೀರದು… ಬಲರಾಮ ಒದಗಿಸಿಕೊಟ್ಟ ಪೈಪುಗಳು ಹಾಗೂ ಹನಿ ನೀರಾವರಿಯ ಯಥೇಚ್ಛ ಬಳಕೆಯನ್ನು ಹೇಳಿದಾಗಲಂತೂ ಸಭಾಂಗಣದ ತುಂಬೆಲ್ಲಾ ನಗು ಸಾಗರದಲೆಗಳ ಬಡಿತ!! ನನಗಂತೂ ಈಗಲೂ ಅವರ ಈ ಮಾತುಗಳು ನೆನಪಿಗೆ ಬಂದು ನನ್ನೊಳಗೇ ನಗು ತಡೆಯಲಾಗುವುದಿಲ್ಲ. ಅರ್ಜುನನಾಗಿ ಚಂದ್ರಣ್ಣನವರ ಅರ್ಥಗಾರಿಕೆ ಸುಪರೋ..ಸುಪರ್!! ಗೋಪಾಲಣ್ಣನವರ ಭಾಗವತಿಗೆ..ಭಾರ್ಗವನ ಚೆಂಡೆಪೆಟ್ಟು..ಸಭಾಂಗಣದಲ್ಲಿ ರಿಂಗುಣಿಸುತ್ತಿತ್ತು. ಸಭಿಕರು, ತಾಳಮದ್ದಳೆಯ ಜೊತೆಗೇ  ತಮ್ಮ ರಾತ್ರಿಯೂಟದ ಸವಿಯನ್ನೂ ಆಸ್ವಾದಿಸುತ್ತಾ ಆನಂದಿಸುತ್ತಿದಂತೆಯೇ ಕಾರ್ಯಕ್ರಮದ ವೀಡಿಯೋ ಕೂಡಾ ಮೊಬೈಲ್ ಗಲ್ಲಿ ದಾಖಲಾಗುತ್ತಿತ್ತು.

ಸಾಧಾರಣ ಒಂದು ತಾಸು ನಡೆದ ಅಭೂತಪೂರ್ವ ತಾಳಮದ್ದಳೆಯು ಹಲವಾರು ಕಾರಣಗಳಿಂದ ಚಿರಸ್ಮರಣೀಯವಾಯಿತು. ಸುಮಾರು ರಾತ್ರಿ 9:30 ಆದರೂ ಊಟ, ನಿದ್ದೆಯ ಪರಿವೆಯಿಲ್ಲದೆ ಕುಳಿತು ವೀಕ್ಷಿಸಿ ಪ್ರಚಂಡ ಕರತಾಡನದ ಮೂಲಕ ಪ್ರೋತ್ಸಾಹಿಸಿದ ಎಲ್ಲಾ ಪ್ರೀತಿಯ ಬಂಧುಗಳಿಗೂ ಎಲ್ಲರ ಪರವಾಗಿ ಧನ್ಯವಾದನ್ನರ್ಪಿಸಲು ಸಂತಸವೆನಿಸುತ್ತದೆ.  ಸಿಕ್ಕಿದ ಅತ್ಯಲ್ಪ ಸವಲತ್ತುಗಳನ್ನೇ ಬಳಸಿಕೊಂಡು ಯಶಸ್ವಿಯಾಗಿ ಕೊನೆಗೊಂಡ, ನಮ್ಮ ಈ ಪ್ರವಾಸದ ಎರಡನೇ ತಾಳಮದ್ದಳೆಯಿದು. ಕಾರ್ಯಕ್ರಮ ಮುಗಿದ ಮೇಲೆ ಅದೇ ಗುಂಗಿನಲ್ಲಿ ರುಚಿಯಾದ ಭೋಜನ ಸವಿದು ಎಲ್ಲರೂ ತಮ್ಮ ತಮ್ಮ ರೂಮುಗಳಿಗೆ ತೆರಳುವಾಗ ಎಲ್ಲರ ಮೊಗದಲ್ಲಿ ಸಂತಸದ ನಗು ನಲಿದಾಡುತ್ತಿತ್ತು…‌

(ಮುಂದುವರೆಯುವುದು..)

ಹಿಂದಿನ ಸಂಚಿಕೆ ಇಲ್ಲಿದೆ :  ಪುರಿ-ಡಾರ್ಜಿಲಿಂಗ್ ಪ್ರವಾಸ ಪುಟಗಳು : ಪುಟ 23

-ಶಂಕರಿ ಶರ್ಮ, ಪುತ್ತೂರು.

4 Responses

  1. ಜಯಲಕ್ಷ್ಮಿ ಪಿ ರಾವ್ says:

    ಚೆನ್ನಾಗಿತ್ತು.

  2. ನಯನ ಬಜಕೂಡ್ಲು says:

    Nice. ಇಲ್ಲಿ, ಪ್ರವಾಸದಲ್ಲಿ ಎಲ್ಲರೂ ಒಂದೇ ಮನೆಯವರಂತೆ ಬೆರೆಯುತ್ತಾ, ಪರಸ್ಪರರನ್ನು ಪ್ರೋತ್ಸಾಹಿಸುತ್ತ ಸಾಗುವ ಬಗೆಯೇ ಚಂದ.

Leave a Reply

 Click this button or press Ctrl+G to toggle between Kannada and English

Your email address will not be published.

Follow

Get every new post on this blog delivered to your Inbox.

Join other followers: