ಆನ್ ಲೈನ್ ಕ್ಲಾಸ್‌ನ ವಿಶಿಷ್ಟಾನುಭವಗಳು

Spread the love
Share Button

ವೀಡಿಯೋ ಕಾನ್ಫರೆನ್ಸ್, ವೆಬ್ ಮೀಟಿಂಗ್, ವೆಬ್ ಸೆಮಿನಾರ್ ಮೊದಲಾದವುಗಳ ಪರಿಚಯವಿದ್ದರೂ ಆನ್ ಲೈನ್ ಕ್ಲಾಸ್ ನಾನು ತೆಗೆದುಕೊಳ್ಳಬೇಕಾಗಿ ಬಂದದ್ದು ಕೊರೋನಾ ಕಾರಣದಿಂದ ಲಾಕ್ ಡೌನ್ ಘೋಷಣೆಯಾದ ಮೇಲೆಯೇ. ಆಯುರ್ವೇದ ವೈದ್ಯಕೀಯ ಕಾಲೇಜಿನಲ್ಲಿ ಬೋರ್ಡ್, ಎಲ್.ಸಿ.ಡಿ ಸ್ಕ್ರೀನ್, ಮೃತದೇಹ ಛೇದನದ ಮೂಲಕ ಅಂಗರಚನಾ ಶಾಸ್ತ್ರವನ್ನು ಬೋಧಿಸುವ ನನಗೆ ಇದು ಒಂದು ಹೊಸ ಅನುಭವ. ಲಾಕ್ ಡೌನ್ ನಿಂದಾಗಿ ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಅವರವರ ಮನೆಯಲ್ಲಿ ಬಂಧಿಯಾಗಿದ್ದೆವು. ಲಾಕ್ ಡೌನ್‌ನ ಅವಧಿಯು ನಿರ್ದಿಷ್ಟವಲ್ಲವಾದುದರಿಂದ ವಿದ್ಯಾರ್ಥಿಗಳ ಹಿತ ದೃಷ್ಟಿಯಿಂದ ಆನ್ ಲೈನ್ ಕ್ಲಾಸ್ ನಡೆಸುವಂತೆ ಕಾಲೇಜಿನಿಂದ ಸೂಚಿಸಲಾಯಿತು.

ಅದರಂತೆಯೇ ತರಗತಿಗಳನ್ನು ನಡೆಸಲು ಬೇಕಾದ ತಂತ್ರಾಂಶವೊಂದನ್ನು(Application) ಮೊಬೈಲ್ ಫೋನ್‌ಗೆ ಡೌನ್ಲೋಡ್ ಮಾಡಿಯೂ ಆಯಿತು. ಅದನ್ನು ಉಪಯೋಗಿಸುವ ಬಗೆಗಿನ ಪ್ರಾಥಮಿಕ ಜ್ಞಾನವನ್ನು ನನ್ನ ಯಜಮಾನರು ಹೇಳಿಕೊಟ್ಟರು. ಹೇಗೂ ನಮ್ಮ ವಿದ್ಯಾರ್ಥಿಗಳಿಗೆ ತಾನೇ ಕ್ಲಾಸ್ ಮಾಡುವುದು ಎಂಬ ವಿಶ್ವಾಸದಿಂದ ನಾನೂ ಅದರ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳಲಿಲ್ಲ.

ಮೊದಲ ಕ್ಲಾಸ್ ಮಾಡಲು ಕುಳಿತೆ. ಅದಕ್ಕಾಗಿ ಮೀಟಿಂಗ್ ಶುರು ಮಾಡಿ ಅದರ ಐ. ಡಿ ಮತ್ತು ಪಾಸ್ ವರ್ಡ್ ನ್ನು ವಿದ್ಯಾರ್ಥಿಗಳ ವಾಟ್ಸ್ ಆಪ್ ಗ್ರೂಪ್ ನಲ್ಲಿ ಕಳಿಸಿಕೊಟ್ಟು ಎಲ್ಲರೂ ಸೇರಿಕೊಳ್ಳಿ ಎಂದು ಹೇಳಿದೆ. ಕೆಲ ನಿಮಿಷಗಳಲ್ಲೇ ತೊಂಬತ್ತು ವಿದ್ಯಾರ್ಥಿಗಳು ಸೇರಿಕೊಂಡರು. ವಿದ್ಯಾರ್ಥಿಗಳು ಒಬ್ಬೊಬ್ಬರಾಗಿ ಸೇರುತ್ತಿದ್ದಂತೆಯೇ ಚಿತ್ರ ವಿಚಿತ್ರ ಶಬ್ದಗಳೂ ಕೇಳತೊಡಗಿ ನನಗೊಂದು ರೀತಿಯಲ್ಲಿ ಅಯೋಮಯವಾಗತೊಡಗಿತು. ಎಲ್ಲಿಂದಲೋ ಕೋಳಿಯ ಕೂಗು, ಮತ್ತೆಲ್ಲಿಯೋ ದನದ ಅಂಬಾ ಎಂಬ ಕರೆ, ಎನ್ನೆಲ್ಲಿಂದಲೋ ಸುದ್ದಿವಾಹಿನಯ ವರದಿಗಾರರೊಬ್ಬರ ಏರುಧ್ವನಿಯ ವರದಿವಾಚನ, ಮತ್ತೊಂದು ಕಡೆಯಿಂದ ಪುಟ್ಟ ಮಗುವಿನ ಅಳು, ಇನ್ನೂ ಏನೇನೋ. ಕೆಲವರ ವಿಡಿಯೋ ಕೂಡ ಸ್ಕ್ರೀನ್ ಮೇಲೆ ಬರುತ್ತಿತ್ತು. ಹಲವರು ಪುಸ್ತಕವನ್ನು ಮುಂದಿಟ್ಟು ಕುಳಿತಿದ್ದರೆ, ಅಲ್ಲೊಬ್ಬ ಶಿಷ್ಯೋತ್ತಮ ಕಿವಿಗೆ ಇಯರ್ ಫೋನ್ ಏರಿಸಿಕೊಂಡು ಎಲ್ಲೋ ನಡೆದುಕೊಂಡು ಹೋಗುತ್ತಿದ್ದಾನೆ( ಬಹುಷ: ನೆಟ್ವರ್ಕ್ ಹುಡುಕಿಕೊಂಡು ಹೋಗುತ್ತಿದ್ದನೋ ಏನೋ?!). ಅಷ್ಟರಲ್ಲಿ ವಿದ್ಯಾರ್ಥಿಗಳು ನಮಸ್ತೆ ಮೇಡಮ್, ಹೇಗಿದ್ದೀರಿ?, ನಿಮ್ ಕಡೆ ಕೊರೊನಾ ಹೆಂಗಿದೆ? ಎಂದು ಕುಶಲೋಪರಿ ಶುರುಮಾಡಿದರು. ನಾನೂ ಸಾವರಿಸಿಕೊಂಡು ಉತ್ತರಿಸುತ್ತಾ ಹೋದೆ. ನಂತರ ಅವರವರೊಡನೆ ಮಾತನಾಡತೊಡಗಿದರು. ಇನ್ನು ತಡಮಾಡಬಾರದೆಂದು ಕ್ಲಾಸ್ ಶುರುಮಾಡುತ್ತಿದ್ದೇನೆ, ನಾನು ಮೊದಲ ಬಾರಿ ಈ ಆಪ್ ಉಪಯೋಗಿಸುತ್ತಿದ್ದೇನೆ, ಆದ್ದರಿಂದ ಎಲ್ಲರೂ ಅವರವರೇ ಆಡಿಯೋ ಮತ್ತು ವಿಡಿಯೋ ಮ್ಯೂಟ್ ಮಾಡಿಕೊಳ್ಳಿ ಎಂದೆ. ನಾನು ಕ್ಲಾಸ್ ಶುರು ಮಾಡಿ ಸ್ವಲ್ಪ ಹೊತ್ತಾಗುತ್ತಿದ್ದಂತೆಯೇ ಕೆಲವರು ತಮಗೇನೂ ಕೇಳಿಸುತ್ತಿಲ್ಲ, ಬರೀ ಗಲಾಟೆ ಎಂದರು. ಒಬ್ಬ ಶಿಷ್ಯ, ನಾನು ಮೀಟಿಂಗ್ ಹೋಸ್ಟ್ ಆದ ಕಾರಣ ನಾನು ಎಲ್ಲರನ್ನೂ ಮ್ಯೂಟ್ ಮಾಡಬಹುದು ಎಂದ. ಆದರೆ ಅದು ಹೇಗೆ ಎಂದು ನನಗೆ ಗೊತ್ತಿಲ್ಲವಲ್ಲಾ? ಯಾವುದೇ ರೀತಿಯಲ್ಲೂ ಆಪ್ ನ ಬಗ್ಗೆ ಸರಿಯಾಗಿ ತಿಳಿಯದೆ ಕ್ಲಾಸ್ ಶುರು ಮಾಡಿದ್ದು ನನ್ನ ತಪ್ಪು ಎಂದೆನಿಸಿತು. ಸ್ಕ್ರೀನ್ ನ ಮೇಲೆ ಸ್ವಲ್ಪ ತಡಕಾಡಿದೆ, ನನಗೇನೂ ಅರ್ಥವಾಗಲಿಲ್ಲ. ಪುನ: ಎಲ್ಲರೂ ಮ್ಯೂಟ್ ಮಾಡಿಕೊಳ್ಳಿ ಎಂದೆ. ನನ್ನ ಮಾತು ಅಲ್ಲಿ ಅರಣ್ಯ ರೋದನವಾಯಿತು. ಯಾರೋ ಒಬ್ಬ ಕರುಣಾಳು ವಿದ್ಯಾರ್ಥಿ ಎಲ್ಲರೂ ನೀವು ‘ನೀವೇ ಮ್ಯೂಟ್ ಮಾಡ್ಕೊಳ್ರೋ, ಮೇಡಂ ಫಸ್ಟ್ ಟೈಂ ಆನ್ ಲೈನ್ ಕ್ಲಾಸ್ ಮಾಡ್ತಿದ್ದಾರಂತೆ ‘ ಎಂದು ಅರಚಿದ! ಅವನ ಮಾತನ್ನು ಅನುಸರಿಸಿದ ಕೆಲವರು ಮ್ಯೂಟ್ ಮಾಡಿಕೊಂಡರು. ಇನ್ನು ಕೆಲವರು ತಿಳಿದೋ ತಿಳಿಯದೆಯೋ ಸುಮ್ಮನಿದ್ದರು(ಆಗ ಅವರಿಗೂ ಆನ್ ಲೈನ್ ಕ್ಲಾಸ್ ಹೊಸತು, ಎಲ್ಲರಿಗೂ ಅದರ ಬಳಕೆ ತಿಳಿದಿರಲಿಲ್ಲ).


ನಾನು ಕ್ಲಾಸ್ ಮುಂದುವರೆಸಿದೆ. ನನ್ನದು ಅಂಗರಚನಾ ಶಾಸ್ತ್ರದ ಪಾಠವಾದುದರಿಂದ ಅದರ ಬೋಧನೆಗೆ ಚಿತ್ರಗಳ ಅವಶ್ಯಕತೆಯಿರುತ್ತದೆ. ಅದಕ್ಕಾಗಿ ಕೆಲವು ಚಿತ್ರಗಳನ್ನು ದೊಡ್ಡದಾಗಿ ಬಿಡಿಸಿ ಇಟ್ಟುಕೊಂಡಿದ್ದೆ.(ಚಿತ್ರಗಳನ್ನು ಡೌನ್ಲೋಡ್ ಮಾಡಿ/ ಪಿಪಿಟಿ ಮೂಲಕ ಸ್ಕ್ರೀನ್ ಮೇಲೆ ಹಾಕಬಹುದೆಂದು ಆಗ ನನಗೆ ಗೊತ್ತಿರಲಿಲ್ಲ). ಅವುಗಳನ್ನ ಹಿಡಿದುಕೊಂಡು ವಿವರಿಸುತ್ತಿದ್ದೆ. ಆಗ ಕೆಲವರು ಮೇಡಮ್, ಇದು ನಮಗೆ ಉಲ್ಟಾ ಕಾಣುತ್ತಿದೆ ಎಂದರು. ಅರೇ!! ನನಗದು ಹೊಳೆದಿರಲೇ ಇಲ್ಲ.ನಾನು ಕ್ಲಾಸ್ ಮಾಡುತ್ತಿದ್ದುದು ಸೆಲ್ಫೀ ಕ್ಯಾಮರಾದ ಮೂಲಕ, ಅದರಲ್ಲಿ ಉಲ್ಟಾ ತಾನೇ ಕಾಣುವುದು?!. ಕೊನೆಗೆ ಆ ಚಿತ್ರದ ಫೊಟೊ ಕಳುಹಿಸುತ್ತೇನೆಂದು ಸಮಾಧಾನಿಸಿದೆ.

ಸ್ವಲ್ಪದುದರಲ್ಲೇ ಥಟ್ಟನೆ ಸ್ಕ್ರೀನ್ ಮೇಲೆ ಅಮೇರಿಕಾದ ಮಾಜಿ ಅಧ್ಯಕ್ಷ ಬರಾಕ್ ಒಬಾಮಾ ಚಿತ್ರ ಪ್ರಕಟವಾಯಿತು. ಅರೇ! ಇದೆಲ್ಲಿಂದ ಬಂತು ಎಂದುಕೊಳ್ಳುತ್ತಿರುವಾಗಲೇ ಆ ಚಿತ್ರ ಮಾಯವಾಗಿ ಅಣ್ಣಾ ಬಾಂಡ್ ಎಂಬ ಬರಹದೊಂದಿಗೆ ಪಿಸ್ತೂಲ್ ಹಿಡಿದ ಪುನೀತ್ ರಾಜ್ ಕುಮಾರ್ ಚಿತ್ರ ತೆರೆಯ ಮೇಲೆ ಅಪ್ಪಳಿಸಿತು. ನಾನಂತೂ ಸಿಟ್ಟಿನಿಂದ ಯಾರೋ ಇದು, ತೆಗೀರಿ ಇದನ್ನಾ ಎಂದು ಗದರಿದೆ. ಯಾವ ಪ್ರಯೋಜನವೂ ಆಗಲಿಲ್ಲ. ಇನ್ನೇನು ಕ್ಲಾಸ್ ಮುಗಿಸುವ ಸಮಯವಾದುದರಿಂದ ಮನಸ್ಸಿನಲ್ಲೇ ಬೈದುಕೊಂಡು ಸ್ವಲ್ಪ ಹೊತ್ತು ಮುಂದುವರಿಸಿ ಅವತ್ತಿನ ಪಾಠ ಮುಗಿಸಿದೆ. ನಂತರ ಸ್ವಲ್ಪ ವಿಚಾರಿಸಿದಾಗ ತಿಳಿದ ವಿಷಯವೇನೆಂದರೆ ಆ ರೀತಿಯ ಚೇಷ್ಟೆಗಳನ್ನು ಮಾಡುತ್ತಿದ್ದುದು ಯಾರೋ ಹೊರಗಿನ ವಿದ್ಯಾರ್ಥಿಗಳೆಂದು. ಒಂದು ರೀತಿಯಲ್ಲಿ ನಮ್ಮ ವಿದ್ಯಾರ್ಥಿಗಳಲ್ಲವೆಂದು ಸಮಾಧಾನವಾಯಿತು. ಈ ರೀತಿ ಬೇರೆಯವರು ಐ ಡಿ ಮತ್ತು ಪಾಸ್ವರ್ಡ್ ಗಳ ದುರುಪಯೋಗವನ್ನು ಮಾಡುತ್ತಾರಲ್ಲ ಎಂಬ ಬೇಸರ ಮತ್ತು ಆತಂಕವೂ ಆಯಿತು. ಅವತ್ತೇ ನಿರ್ಧರಿಸಿದೆ, ಈ ಆಪ್ ನ್ನು ಚೆನ್ನಾಗಿ ಅರಿತ ನಂತರವೇ ಮುಂದಿನ ಕ್ಲಾಸನ್ನು ತೆಗೆದುಕೊಳ್ಳುವುದು ಎಂದು. ಅಂತೆಯೇ ಗೂಗಲ್ ನಲ್ಲಿ ಜಾಲಾಡಿ ಸಂಬಂಧಿತ ವೀಡಿಯೋಗಳನ್ನು ನೋಡಿ ಕೆಲವೊಂದು ಅಂಶಗಳನ್ನು ಕಲಿತು ಮುಂದಿನ ಕ್ಲಾಸ್ ಗೆ ಚೆನ್ನಾಗಿಯೇ ತಯಾರಾದೆ.

ಕ್ಲಾಸ್ ಶುರುಮಾಡುವ ಮೊದಲು ಸೆಟ್ಟಿಂಗ್ ನಲ್ಲಿ ಕೆಲವು ಬದಲಾವಣೆಗಳನ್ನು ಮಾಡಿ ಎಲ್ಲರನ್ನೂ ಮ್ಯೂಟ್ ಮಾಡಿ, ಯಾರೂ ಚಿತ್ರಗಳನ್ನು ಶೇರ್ ಮಾಡದಂತೆ ಬ್ಲಾಕ್ ಮಾಡಿದೆ. ಪವರ್ ಪೊಯಿಂಟ್ ಮೂಲಕ ಕ್ಲಾಸ್ ಮಾಡತೊಡಗಿದೆ. ಕ್ಲಾಸ್ ಇನ್ನೇನು ಮುಗಿಯುತ್ತಾ ಬರುತ್ತಿದ್ದಂತೆಯೇ ತೆರೆಯ ಮೇಲೆ ಒಂದು ಚುಕ್ಕಿ ಕಾಣಿಸಿತು. ಅದು ಒಂದು ಗೆರೆಯಾಗಿ, ಹನುಮಂತನ ಬಾಲದಂತೆ ಬೆಳೆಯುತ್ತಾ ಹೋಗಿ ಸುರುಳಿ ಸುರುಳಿಯಾಗಿ ಸುತ್ತಿಕೊಳ್ಳುತ್ತಾ ಹೋಗಿ ಪೂರಾ ಸ್ಕ್ರೀನ್ ಚಿಂದಿ ಚಿತ್ರಾನ್ನವಾಯಿತು.(ಈ ರೀತಿ ಬರೆಯುವುದನ್ನೂ ನಾನು ಸೆಟ್ಟಿಂಗ್ ನಲ್ಲಿ ಬ್ಲಾಕ್ ಮಾಡಬೇಕಿತ್ತು) ಬಂದ ಸಿಟ್ಟನ್ನು ಕಷ್ಟಪಟ್ಟು ನಿಯಂತ್ರಿಸಿದೆ. ಈ ಅದೃಶ್ಯ ಮಾನವರದ್ದೇ ದೊಡ್ಡ ಸಮಸ್ಯೆಯಾಗಿತ್ತು. ಇವರುಗಳ ಯೂಸರ್ ನೇಮ್ ಗಳೂ ಬಲು ವಿಚಿತ್ರ. ಗುಂಡ, ಸೊಪ್ಪು, ವಿಮಾನ ಚಾಲಕ ಮುಂತಾದ ಹೆಸರನ್ನಿಟ್ಟುಕೊಂಡು ಮೀಟಿಂಗ್ ಸೇರಿ ತೊಂದರೆ ಕೊಡುವುದು ಇವರ ಕೆಲಸ. ಕೆಲವೇ ದಿನಗಳಲ್ಲಿ ಇದಕ್ಕೆಲ್ಲಾ ಪರಿಹಾರ ಕಂಡುಕೊಂಡು ಈ ರೀತಿಯ ಚೇಷ್ಟೆಗಳಿಗೆಲ್ಲಾ ಕಡಿವಾಣ ಹಾಕಲಾಯಿತು.

ಈ ರೀತಿ ಮೂರ್ನಾಲ್ಕು ಕ್ಲಾಸ್ ಆಗುತ್ತಿದ್ದಂತೆಯೇ ವಿದ್ಯಾರ್ಥಿಗಳಿಗೂ ನನಗೂ ಆನ್ ಲೈನ್ ಕ್ಲಾಸ್ ಎಂಬುದು ರೂಢಿಯಾಯಿತು. ವಿಶ್ವವಿದ್ಯಾನಿಲಯದಿಂದ ಹಾಜರಿಯ ಬಗ್ಗೆ ಸುತ್ತೋಲೆ ಬಂದ ನಂತರ ವಿದ್ಯಾರ್ಥಿಗಳೂ ಇದರ ಗಂಭೀರತೆಯನ್ನು ಅರ್ಥ ಮಾಡಿಕೊಂಡು ಶಿಸ್ತಿನಿಂದ ತರಗತಿಗೆ ಹಾಜರಾಗುತ್ತಿದ್ದರು. ಸಂಶಯಗಳನ್ನು ಕೇಳಿ ಪರಿಹರಿಸಿಕೊಳ್ಳುತ್ತಿದ್ದರು. ಇದೆಲ್ಲದರ ಮಧ್ಯೆಯೇ ಅವರವರ ಮನೆಯಲ್ಲಿದ್ದುಕೊಂಡೇ ಕೊರೋನ ಬಗ್ಗೆ ಜನ ಜಾಗೃತಿ ಮೂಡಿಸುವಂತಹ ವಿಡಿಯೋ ಹಾಗೊ ಕೊಲಾಜ್ ಗಳನ್ನು ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಪಸರಿಸಿ ನಮ್ಮಿಂದ ಭೇಷ್ ಎನಿಸಿಕೊಂಡರು.

ಮನೆಯಲ್ಲಿ ಸದಾ ನನ್ನ ಹಿಂದೆಮುಂದೆಯೇ ಸುತ್ತುವ ನನ್ನ  11 ವರ್ಷದ ಮಗನಿಗೆ ಈ ಅವಧಿಯನ್ನು ಕಳೆಯುವುದೆಂದರೆ ಬಹಳ ಅಸಹನೀಯ. ಏಕೆಂದರೆ ಅವನಿಗೆ ಶಾಲೆಯಿಂದ ಬಂದ ಹೋಂ ವರ್ಕ್ ಮಾಡಲು ಅಥವಾ ಚಿತ್ರ ಬಿಡಿಸಲು ಹೇಳಿ ನಾನು ಒಂದು ಕೋಣೆಯಲ್ಲಿ ಚಿಲಕ ಹಾಕಿ ಪಾಠ ಮಾಡುತ್ತೇನೆ. ಸ್ವಲ್ಪ ಹೊತ್ತಿನ ನಂತರ ಅವ‌ನಿಗೆ ಬೋರಾಗಿ ಪೆನ್, ಪೆನ್ಸಿಲ್ ಎಂಬ ನೆಪ ಹೇಳಿಕೊಂಡು ಬಾಗಿಲು ಬಡಿಯುತ್ತಾನೆ ಇಲ್ಲವೇ ಕಿಟಿಕಿಯಲ್ಲಿ ಇಣುಕುತ್ತಾನೆ. ನನ್ನನ್ನು ಅಣಕಿಸುವುದು ಅಥವಾ ಅನುಕರಿಸುವುದು ಮೊದಲಾದ ಚೇಷ್ಟೆಗಳನ್ನು ಕಂಡೂ ಕಾಣದಂತೆ ನಾನು ಕ್ಲಾಸ್ ಮುದುವರಿಸಬೇಕಾಗುತ್ತದೆ.

ಆನ್ ಲೈನ್ ಕ್ಲಾಸ್ ನಲ್ಲಿ ಎಷ್ಟೇ ಪಾಠಮಾಡಿದರೂ ಮುಖಾಮುಖಿಯಾಗಿ ಮಾಡಿದಂತಾಗುವುದಿಲ್ಲ. ಅವರು ಆಡಿಯೋ ಮತ್ತು ವಿಡಿಯೋ ಮ್ಯೂಟ್ ಮಾಡುವುದರಿಂದ ನನಗೆ ಕಣ್ಣಿದ್ದೂ ಕುರುಡು, ಕಿವಿಯಿದ್ದೂ ಕಿವುಡು ಎಂಬಂತಹ ಪರಿಸ್ಥಿತಿ. ವಿದ್ಯಾರ್ಥಿಗಳಿಗೆ ಅರ್ಥವಾಗಿದೆಯೋ ಇಲ್ಲವೋ ಹಾಗೆಯೇ ಅವರು ನಿಜವಾಗಿಯೂ ಪಾಠ ಕೇಳುತ್ತಿದ್ದಾರೋ ಇಲ್ಲವೋ ಎಂಬುದು ನಮಗೆ ಸರಿಯಾಗಿ ಗೊತ್ತಾಗುವುದೇ ಇಲ್ಲ. ಕ್ಲಾಸ್ ನಡೆಯುವ ವೇಳೆ ಅವರ ಜೊತೆ ಸಂಪರ್ಕ ಕೇವಲ ಮೆಸೇಜ್ ಗಳ ಮೂಲಕ ಮಾತ್ರವೇ. ಜೊತೆಗೆ ನೆಟ್ವರ್ಕ್ ಸಿಗದಿರುವುದು, ನೆಟ್ ಪಾಕೇಜ್‌ನ ಕೊರತೆ,ಮೊಬೈಲ್ ಅತಿಯಾಗಿ ಬಿಸಿಯಾಗುವುದು, ಉಪಯೋಗಿಸುವ ಆಪ್‌ನ ಸುರಕ್ಷತೆಯ ಬಗ್ಗೆ ಸಂಶಯ -ಮೊದಲಾದ ಸಮಸ್ಯೆಗಳು. ಇವುಗಳ ಬಗ್ಗೆ ವಿದ್ಯಾರ್ಥಿಗಳು ನಮ್ಮಲ್ಲಿ ಬೇಸರ ವ್ಯಕ್ತಪಡಿಸುತ್ತಲೇ ಇರುತ್ತಾರೆ. ನಮ್ಮಿಂದ ಸಾಧ್ಯವಾದ ರೀತಿಯಲ್ಲಿ ಇವುಗಳನ್ನು ಪರಿಹರಿಸಲು ಯತ್ನಿಸುತ್ತೇವೆ. ಮಾತ್ರವಲ್ಲದೆ ವೃತ್ತಿಶಿಕ್ಷಣದಲ್ಲಿ ಥಿಯರಿ ಪಾಠದಷ್ಟೇ ಪ್ರಾಮುಖ್ಯತೆ ಪ್ರಾಯೋಗಿಕ/ಪ್ರಾಕ್ಟಿಕಲ್ ತರಗತಿಗಳಿಗೂ ಇವೆ. ಅವನ್ನು ಈ ರೀತಿ ಆನ್ಲೈನ್ ಮೂಲಕ ಮಾಡುವುದು ಕಷ್ಟ ಸಾಧ್ಯ. ಆದ್ದರಿಂದ ಲಾಕ್ ಡೌನ್ ಮುಗಿದ ನಂತರ ಅವುಗಳನ್ನೆಲ್ಲಾ ಮುಗಿಸಿ ವಿದ್ಯಾರ್ಥಿಗಳನ್ನು ಪರೀಕ್ಷೆಗೆ ತಯಾರಿ ಮಾಡುವುದೇ ದೊಡ್ಡ ಸವಾಲು. ಆದರೂ ಆನ್ಲೈನ್ ಕ್ಲಾಸ್ ಗಳ ಮೂಲಕ ವಿದ್ಯಾರ್ಥಿಗಳನ್ನು ಸ್ವಲ್ಪ ಮಟ್ಟಿಗಾದರೂ ಪಾಠಗಳ ಕಡೆಗೆ ಹಿಡಿದಿಟ್ಟುಕೊಳ್ಳಲು ಸಾಧ್ಯ ಎಂಬುದಂತೂ ಸುಳ್ಳಲ್ಲ.

ಏನೇ ಇರಲಿ, ಕೋವಿಡ್ 19 ಎಂಬುದು ಜಗತ್ತಿಗೇ ಒದಗಿರುವ ಸಂಕಷ್ಟವಾಗಿದ್ದು ಎಲ್ಲರೂ ಅದರ ವಿರುದ್ಧ ಹೋರಾಡುತ್ತಿರುವಾಗ ಅದಕ್ಕೆ ತಕ್ಕುದಾದ ರೀತಿಯಲ್ಲಿ ಹೊಂದಾಣಿಕೆ ಮಾಡಿಕೊಳ್ಳುವುದು ಅನಿವಾರ್ಯ. ಆದಷ್ಟು ಬೇಗ ಈ ಪರಿಸ್ಥಿತಿಯು ಕೊನೆಗೊಂಡು ಜನ ಜೀವನ ಸಹಜ ಸ್ಥಿತಿಗೆ ಮರಳಲಿ. ಹಾಗೆಯೇ ಶಾಲಾ ಕಾಲೇಜುಗಳು ಪುನರಾರಂಭಗೊಂಡು ತರಗತಿಗಳು ಸುಗಮವಾಗಿ ನಡೆಯುವಂತಾಗಲಿ ಎಂಬುದೇ ಎಲ್ಲರ ಆಶಯ.

-ಡಾ.ಹರ್ಷಿತಾ ಎಂ.ಎಸ್ , ಬಳ್ಳಾರಿ

  

18 Responses

 1. Savithri bhat says:

  ಆನ್ಲೈನ್ ಕ್ಲಾಸಿನ ವಿಶಿಷ್ಟ ಅನುಭವ ,ಅದರ ಕಷ್ಟ, ವಿದ್ಯಾರ್ಥಿಗ ಳ ಬಗ್ಗೆ ನಿಮ್ಮ ಕಾಳಜಿ ಚೆನ್ನಾಗಿ ವಿವರಣೆ ಕೊಟ್ಟಿರಿ. ಇಡೀ ಜಗತ್ತನ್ನೇ ಕಂಪನ ಗೊಳಿಸುತಿಹ ಕೋರೋನ ವೈರಸ್ ನಿರ್ನಾಮ ವಾಗಲಿ ಎಂದು ಪ್ರಾರ್ಥನೆ.

 2. Hema says:

  ನಿಮ್ಮ ಸಕಾಲಿಕ ಅನುಭವಗಳನ್ನು ಬಹಳಾ ರಸವತ್ತಾಗಿ ಬರೆದಿದ್ದೀರಿ. ನಕ್ಕೂ ನಕ್ಕೂ ಸುಸ್ತಾಯಿತು..

 3. Krishnaprabha says:

  ನನ್ನ ಮಗಳು ಕೂಡಾ ವೈದ್ಯಕೀಯ ವಿದ್ಯಾರ್ಥಿನಿ..ನೀವು ನಿಮ್ಮ ಲೇಖನದಲ್ಲಿ ವಿವರಿಸಿದ ಹಾಗೆ ಮ್ಯೂಟ್ option ಸರಿಯಾಗಿ set ಮಾಡದೆ ಇರುವಾಗ ಎಲ್ಲಾ ತರದ ಚೇಷ್ಟೆಗಳನ್ನು ವಿದ್ಯಾರ್ಥಿಗಳು ಮಾಡುವುದನ್ನು ಕಣ್ಣಾರೆ ಕಂಡಿದ್ದೇನೆ… ಒಳ್ಳೆಯ ಲೇಖನ…

 4. Ramya says:

  Tumba chennagide

 5. Sudarshana Rao says:

  mam… Namge start adaaga Ide reethiyaagi agtha Ithu…

 6. ಹರ್ಷಿತಾ says:

  ಲೇಖನವನ್ನು ಮೆಚ್ಚಿ ಪ್ರತಿಕ್ರಯಿಸಿದ ಎಲ್ಲರಿಗೂ ಧನ್ಯವಾದಗಳೂ

 7. V K Bhat says:

  Very good experience I heartily congratulations Go ahead God bless u

 8. Anonymous says:

  ತುಂಬಾ ಚೆನ್ನಾಗಿದೆ.

 9. ಶಂಕರಿ ಶರ್ಮ says:

  ಹೌದು, ಹೊಸದಾಗಿರುವಾಗ ಎಲ್ಲವೂ ಬಹು ಕಷ್ಟ. ತಮ್ಮ ಅನುಭವವನ್ನು ಚೆನ್ನಾಗಿ ಪ್ರಸ್ತುತ ಪಡಿಸಿರುವಿರಿ. ತಿಳಿ ಹಾಸ್ಯ ಮಿಶ್ರಿತ ತಮ್ಮ ಲೇಖನ ನಗುವಿನೊಂದಿಗೆ ಮುದನೀಡಿತು.

 10. ನಯನ ಬಜಕೂಡ್ಲು says:

  ಹ್ಹ… ಹ್ಹ… ಹ್ಹ…
  ನಿಮ್ಮ ಲೇಖನ ಓದಿ ನಗು ತಡೀಲಿಕ್ಕೆ ಆಗ್ತಿಲ್ಲ. ಚೆನ್ನಾಗಿದೆ ಮೇಡಂ ಆನ್ಲೈನ್ ಕ್ಲಾಸ್ಸು ಗಳ ನಿಮ್ಮ ಅನುಭವ ಸರಣಿ, ಸ್ಟೂಡೆಂಟ್ ಗಳು ಯಾವತ್ತಿದ್ರೂ ಮಂಗ ಬುದ್ದಿಯವುಗಳೇ, ಈಗ ಈ ಕ್ಲಾಸುಗಳಿಂದಲೂ ಅದೇ ಅನುಭವ.

 11. Shruthi says:

  ಹ ಹ ನಕ್ಕೂ ನಕ್ಕೂ ಸುಸ್ತಾಯ್ತು!

 12. Anonymous says:

  ಬಹಳ ಚೆನ್ನಾಗಿದೆ ಮಿಸ್..ಖುಷಿ ಆಯ್ತು ಮಿಸ್ ಇದನ್ನ ಓದಿ..
  ಧನ್ಯವಾದಗಳು…

 13. Anonymous says:

  Super mam..thank you for this wonderful article…

 14. ಹರ್ಷಿತಾ says:

  ಎಲ್ಲರಿಗೂ ಧನ್ಯವಾದಗಳು

 15. ಸಕಾಲಿಕ ನಗೆ ಬರಿಸುತ್ತಾ ಸಾಗುವ ಬರಹ.

 16. Anonymous says:

  ನಮ್ಮ ಮನೆಯಲ್ಲಿಯೂ ಮಗನದ್ದು ಆನ್ಲೈನ್ ಕ್ಲಾಸ್ ನಡೆದಿದೆ
  ಅವನದ್ದು ಇದೆ ಕಥೆ

  ತುಂಬಾ ಚೆನ್ನಾಗಿದೆ ಲೇಖನ

 17. Niranjan Acharya says:

  Well written Dr Harshita. God bless you.

 18. Parvathikrishna says:

  ನಮ್ಮಲ್ಲೂ ಹೀಗೆ ಪಾಠ ಕೇಳುವ ಹಾಗೂ ಮಾಡುವ ಎರಡೂ ಥರಹದ ಕ್ಲಾಸುಗಳು ..ಮನೆಯಎರಡು ಕೋಣೆಗಳಲ್ಲಿ.ನಗೆ..ವಿಚಾರಣೆ..ಜೋರುಮಾಡುವಿಕೆ…!! ತರಗತಿ ನಡೆಯುವಾಗ ಮತ್ತೆ ಮುಗಿದ ಮೇಲೆ ನನಗ ಪುಕ್ಕಟೆ ಮನೋರಂಜನೆ. ಇದೂ ಒಂದು ನವೀನ ಅನುಭವ .ಚೆನ್ನಾಗಿ ಬರೆದಿದ್ದೀರಿ.

Leave a Reply to Niranjan Acharya Cancel reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: