ವಿಘಟನೆ

Share Button

ಬಹಳ ದಿನಗಳ ನಂತರ ಜಯನಗರದ ಮುಖ್ಯ ಬಸ್ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ಮುಖ್ಯ ರಸ್ತೆಯಲ್ಲಿ ಸುಮ್ಮನೆ ಹೊರಟಿದ್ದೆ. ಹೈಸ್ಕೂಲ್ ಓದುತ್ತಿದ್ದಾಗ  ಆಗ ಮಾಧವನ್ ಪಾರ್ಕ್ ಬಳಿ ಇದ್ದ ನಮ್ಮ ಮನೆಗೆ ಆ ರಸ್ತೆಯಲ್ಲೇ ಹೋಗುತ್ತಿದ್ದುದು.ಒಳಗಿನ  ಎಚ್ ಎ ಎಲ್ ಸಿಬ್ಬಂದಿ ಕಾಲೋನಿಯಲ್ಲಿ ನನ್ನ ಸಹಪಾಠಿಗಳಾದ ಅಶೋಕ,ಹರ್ಷ,ಸೂರ್ಯಪ್ರಕಾಶ್ ಮುಂತಾದವರು ಆಗ ವಾಸವಿದ್ದರು.

ಒಂದು ದೊಡ್ಡ ಮನೆಯ ಮುಂದೆ ಎರಡು ಜೆ ಸಿ ಬಿ ಯಂತ್ರಗಳು ಕಾರ್ಯಪ್ರವೃತ್ತವಾಗಿ  ಸದ್ದು ಮಾಡುತ್ತಿದ್ದವು.ನೆನಪಿಸಿಕೊಳ್ಳಲು ಯತ್ನಿಸಿದೆ .ಹೌದು ಅದು ಹೈಸ್ಕೂಲಿನಲ್ಲಿ ನನಗಿಂತ ಒಂದು ವರುಷ ಹಿರಿಯನಾಗಿದ್ದ ಸತ್ಯಬೋಧನ ಮನೆ.ಇಲ್ಲೇ ಅವನ ಮನೆ ಪಕ್ಕ ಅವನ ಸಹಪಾಠಿ ಗುರುದೇವನ ಮನೆ ಇತ್ತಲ್ಲ ಎಂದುಕೊಂಡು ಸಮೀಪಿಸಿದೆ.

ಒಂದಿಷ್ಟೂ ಬದಲಾಗಿರಲಿಲ್ಲ ಅವನ ಮನೆ. ಹಳೆಯ ಕಾಲದ ಮನೆಯಂತೆ ಗೋಪಿ ಸುಣ್ಣ,ಮನೆ ಪಕ್ಕ,ಮುಂದೆ,ಹಿತ್ತಲಲ್ಲಿ ಹೂ, ಹಣ್ಣು, ತುಳಸಿ ಗಿಡಗಳು. ಇಡೀ ರಸ್ತೆಯೇ  ಬದಲಾವಣೆಗೊಂಡಿದ್ದರೂ ಈ  ಮನೆಯದು  ಮಾತ್ರ ಅದೇ  ಅರವತ್ತೇಳರ ನೋಟ.ಯಾರೋ ತುಳಸಿಗಿಡದ ಹತ್ತಿರ ನಿಂತಿದ್ದರು.ಹತ್ತಿರ ಹೋಗಿ ಕಷ್ಟಪಟ್ಟು ನೆನಪಿಸಿಕೊಂಡೆ.ಹೌದು ಅದು ಗುರುದೇವನೇ.ಕ್ರಾಪ್ ತೆಗೆಸಿ ಪೂರ್ಣ ಜುಟ್ಟು ಬಿಟ್ಟಿದ್ದ.ಅದೇ ಕಪ್ಪು ಬಣ್ಣ ಸ್ವಲ್ಪ ಕುಳ್ಳು,ಶರೀರ.ನಾನು ಒಂದೆರಡು ಬಾರಿ ಹಳೆಯ ಸಂಸ್ಕೃತ ಪಠ್ಯಪುಸ್ತಕಗಳನ್ನು  ಅವನಿಂದ ಅರ್ಧಬೆಲೆ ಕೊಟ್ಟು ಖರೀದಿಸಿದ್ದೆ.ಅವನ ಚಿಕ್ಕಮ್ಮನ ಮನೆ  ಮಾಧವನ್ ಪಾರ್ಕ್ ಹತ್ತಿರ ಇತ್ತು.ಆಗಾಗ್ಗೆ ಅಲ್ಲಿಗೆ ಬರುತ್ತಿದ್ದ.ನಮ್ಮ ಮನೆಯೂ ಅದೇ ರಸ್ತೆಯಲ್ಲಿ ಇದ್ದುದರಿಂದ ನಮ್ಮ ಮನೆಗೂ ಹಲವಾರು  ಸಾರಿ ಬಂದಿದ್ದ. ಆಗ ನಮ್ಮ ಮನೆಯಲ್ಲಿ ಬೆಳೆಯುತ್ತಿದ್ದ ಸೀಬೆಹಣ್ಣು ,ನೆಲ್ಲಿಕಾಯಿಗಳೂ ಅವನಿಗೆ ಪ್ರಿಯವಾಗಿತ್ತು.

1.

ಹಾಗೇ ಅವನ ಮನೆಯ ಹತ್ತಿರ ಹೋಗಿ ನನ್ನ ಹೆಸರು ಹೇಳಿ ನೆನಪಿದೆಯೇ ಎಂದು ಕೇಳಿದೆ.

ಅವನಿಗೆ ಗುರುತು ಸಿಕ್ಕಿತು.” ಓ ಶಿವ ಪ್ರಸಾದ್ ಅಲ್ವೆ ಎಷ್ಟು ವರ್ಷ ಆಯ್ತಯ್ಯ ನೋಡಿ.ನಲವತ್ತೆಂಟು ವರುಷ ಆಗಿರಬಹುದೆ? ಎಂದ..

ನಾನು “ಆಗದೆ ಏನು ಐವತ್ತೇ ಆಗಿದೆ.ಅರವತ್ತೆಂಟನೆಯ   ಇಸವಿ ಅಲ್ಲವೇ?”ಎಂದೆ.

“ಈಗ ಎಲ್ಲಿ ಮನೆ” ಎಂದು ಕೇಳಿದ.

“ಉತ್ತರಹಳ್ಳಿ ಹತ್ತಿರ ಪೂರ್ಣಪ್ರಜ್ಞ ಬಡಾವಣೆ” ಎಂದಾಗ 

“  ಓ ಬೇರೆ ಊರೇ ಆಯ್ತು ಬಿಡು” ಎಂದು ನಕ್ಕ.

“ಪಕ್ಕದ್ದು ಸತ್ಯಬೋಧನ ಮನೆ ಅಲ್ವೆ?”ಕೇಳಿದೆ

“ಹೌದು,ಅವನದ್ದೇ .ಪಾಪ , ಹೋದ ವರುಷ ತೀರಿಕೊಂಡ.ಮೊನ್ನೆ  ತಾನೇ ವರ್ಷಾಬ್ಧಿಕ  ಎಲ್ಲ ಮುಗೀತು.ಇಬ್ಬರು  ಗಂಡು ಮಕ್ಕಳು ,ಒಬ್ಬಳೇ ಮಗಳು.ಸದ್ಯ ಎಲ್ಲಾರದ್ದೂ ಮದುವೆಯಾಗಿತ್ತು.ಮನೆಯನ್ನು ಈಗ ಮಾರಾಟ ಮಾಡಿದ್ದಾರೆ.

“ಯಾರು ಕೊಂಡಿದ್ದು?”

“ಇನ್ಯಾರು ಕೊಂಡುಕೊಳ್ತಾರೆ ಹೇಳು ಈ ಏರಿಯಾದಲ್ಲಿ . ದುಡ್ಡಿರೋ ವ್ಯಾಪಾರಿಗಳೇ ಇದಕ್ಕೆ ಲಾಯಕ್ಕು.ಅದೇ ಬಸ್ ಸ್ಟ್ಯಾಂಡ್    ಎದುರು ಬಟ್ಟೆ ಅಂಗಡಿ ಕಂಗಾನಿ ಟೆಕ್ಸ್ ಟೈಲ್ಸ್ ಇತ್ತಲ್ಲ,ಅದರ ಮಾಲೀಕನ ಮಕ್ಕಳು .ಎಲ್ಲ ಈಗ ಬೇರೆ ಬೇರೆ ವ್ಯಾಪಾರ ಮಾಡಿಕೊಂಡು ಜೋರಾಗಿದ್ದಾರೆ. ದೊಡ್ಡವನು ಸಂತೋಷ್ ಅಲ್ಲೇ ಇದ್ದಾನೆ ನೋಡು.” ಎಂದು  ಗುರುದೇವ ವಿವರಿಸಿದ .

“ನೆಲಸಮ ಮಾಡಿ ಏನು ಮಾಡ್ತಾರಂತೆ?”

“ಭಾರಿ ಸೌಧ ಬರುತ್ತದಂತೆ..ಕೆಳಗಡೆ ಪಾರ್ಕಿಂಗ್,ಅಲ್ಲೇ ಅವರ ಅಪ್ಪ ಅಮ್ಮನಿಗೆ ಚಿಕ್ಕ ಮನೆ.ಮೇಲೆ ಮೂರು ಜನ ಅಣ್ಣ ತಮ್ಮಂದಿರಿಗೆ ಒಂದೊಂದು ಮಹಡಿ.ಲಿಫ್ಟ್ ,ಜನರೇಟರ್ ಎಲ್ಲಾ ಇರ್ತದಂತಪ್ಪ”ಗುರುದೇವನ ಭಾವಿ ಮನೆಯ ಚಿತ್ರ ನೀಡಿದ.

ಗುರುದೇವನಿಗೆ ಒಬ್ಬನೇ ಮಗ ಪ್ರದ್ಯುಮ್ನ.ಅಮೆರಿಕಾ ವಾಸಿ.ಅವನೇ ಆಗಾಗ್ಗೆ ಬಂದು ಹೋಗುತ್ತಿದ್ದ .

ಗುರುದೇವನಿಗೆ “ಅಮೆರಿಕಾಕ್ಕೆ ಹೋಗುವುದಿಲ್ಲವೇ? “ಎಂದು ಕೇಳಿದೆ.

“ಇಲ್ಲವೇ ಇಲ್ಲ ,ನಾನು ಸಮುದ್ರೋಲ್ಲಂಘನ ಮಾಡೋದಿಲ್ಲ. “ಎಂದ.

ಮನೆಮಾರಿ  ಬೇರೆ ಕಡೆ ಒಳ್ಳೆ ಮನೆ ಕಟ್ಟೋಣ ಎಂದು ಮಗ ಹೇಳಿದಾಗ 

“ಬೇಡಪ್ಪ ,ನೀನೇನೂ ಅಲ್ಲಿಂದ ವಾಪಸು ಬರೋದಿಲ್ಲ. ಮನೆ ರಾಯರ ಮಠಕ್ಕೆ ಹತ್ತಿರ ಇದೆ.ಇರುವ ರೀತಿಯಲ್ಲೇ ನಾನು ಸುಖವಾಗಿದ್ದೇನೆ ಎಂದಿದ್ದ  ಮಗನಿಗೆ.

2.

“ಈ ತುಳಸಿಕಟ್ಟೆ ಏನು ಮಾಡೋದು?ಲಾರಿಗೆ ಹಾಕೋದಾ?” ಕೇಳಿದರು ಅವಶೇಷಗಳನ್ನು ಲಾರಿಗೆ ತುಂಬುತ್ತಿದ್ದ ಕೂಲಿಯವರು.

ಮನೆ ನೆಲಸಮವಾಗುತ್ತಿದೆ. ನಿಮ್ಮದೇನಾದ್ದರೂ ವಸ್ತು ಇಲ್ಲೇ ಉಳಿದುಕೊಂಡಿದ್ದರೆ ತೆಗೆದುಕೊಂಡು ಹೋಗಿ ಅಂತ ಮನೆ ಕೊಂಡಿದ್ದ ಸಂತೋಷ್ ಹೇಳಿಕಳಿಸಿದ್ದಕ್ಕೆ ಬಂದಿದ್ದರು ಅಣ್ಣತಮ್ಮಂದಿರು. 

 ಅಣ್ಣ ತಮ್ಮಂದಿಬ್ಬರೂ ಮಾತನಾಡಿಕೊಂಡರು.ಅಮ್ಮನಿಗೆ ಪೋನ್ ಮಾಡಿ “ಅಮ್ಮ,ತುಳಸಿಕಟ್ಟೆ ಏನು ಮಾಡೋದು?” ಅಂತ ಕೇಳಿದರು.

“ನಿಮ್ಮಪ್ಪನಿಗೆ ಬೃಂದಾವನ ಕಂಡ್ರೆ ಬಹಳ ಇಷ್ಟ ಇತ್ತು  ಕಣ್ರೋ.ಅದೂ ಅಲ್ಲದೆ ತುಳಸಿ  ಹಬ್ಬ ನಮ್ಮ  ಮನೇಲಿ ಎಷ್ಟು ವೈಭವದಿಂದ ನಡೀತಿತ್ತು ಅನ್ನೋದು  ಮರೆತೇಬಿಟ್ಟಿರಾ?ಹೋದ ವರ್ಷಾನೂ ಹಬ್ಬ ನಡೆದು ಒಂದು ವಾರಕ್ಕಲ್ಲವೆ  ನಿಮ್ಮಪ್ಪ  ಹೋದದ್ದು. ಬಿಸಾಕೋದು ಬೇಡ .ದಯವಿಟ್ಟು ನಿಮ್ಮಿಬ್ಬರಲ್ಲಿ ಯಾರಾದ್ರೂ  ಇಟ್ಟುಕೊಳ್ಳಿ”.ಎಂದು ಗೋಗರೆದರು.

ಅಣ್ಣ ತಮ್ಮಂದಿಬ್ಬರೂ ಮತ್ತೆ  ಮಾತಿಗೆ ತೊಡಗಿದರು.

“ಅಣ್ಣಾ ಬೃಂದಾವನ ಸದ್ಯಕ್ಕಂತೂ ನನಗೆ ಬೇಡ.ನಿನಗೇ ಗೊತ್ತಲ್ಲ.ನಾನು ಈಗ  ಹೋಗ್ತಿರೋದು ಚಿಕ್ಕ ಮನೆ.ಆ ಲೊಟ್ಟೆಗೊಲ್ಲಹಳ್ಳಿ ಸೈಟ್ ನಲ್ಲಿ ಮನೆ ಕಟ್ಟೋ ತನಕ ನನ್ನ ಮನೇ ಸಾಮಾನೇ ಒಂದು ಕಡೆ ಕಟ್ಟಿ ಇಡಬೇಕು.ನೀನಾದ್ರೆ ಮಾವನ ಮನೆ ಮೇಲೆ ತಕ್ಷಣಕ್ಕೆ ಮನೆ ಕಟ್ಟೋನು .”ಎಂದ ತಮ್ಮ.

“ಸುಂದರೂ ,ನನ್ನ ಪರಿಸ್ಥಿತೀನೂ ಅದೇ. ನಿನಗೇ ಗೊತ್ತಲ್ಲ.ಮಾವ ಏನೋ  ಮಹಡಿ ಮೇಲೆ ಮನೆ ಕಟ್ಟಕ್ಕೆ ಅನುಮತಿ ಕೊಟ್ಟಿರಬಹುದು .ಆದರೆ ಮನೆ ಪೂರ್ಣ ಆಗೋಕ್ಕೆ ಇನ್ನೂ ಇನ್ನೂ ಎಂಟು ತಿಂಗಳು ಬೇಡ್ವೆ?” ಅಣ್ಣನ ವಿವರಣೆ.

ಸ್ವಲ್ಪ ಚರ್ಚೆ ನಡೆಸಿ ಏನೋ ತೀರ್ಮಾನ ಮಾಡಿದವರಂತೆ ಭಾವ ಸತ್ಯನಾರಾಯಣ ಹತ್ತಿರ ಬಂದು

“ಭಾವಾ ನೀವೇ ಕಾಪಾಡಬೇಕು” ಎಂದರು ಒಕ್ಕೊರಲಿನಿಂದ.

ಏನು ವಿಷಯ ಎಂಬಂತೆ ನೋಡಿದರು ಭಾವ.

“ಹೇಗೂ ನಮ್ಮ ಇಬ್ಬರ ಮನೆ  ಮುಗಿಯುವವರೆಗೆ ಅಮ್ಮ ನಿಮ್ಮ ನಿಮ್ಮ ಮನೆಯಲ್ಲೇ ಇರ್ತಾರೆ.ಹಾಗೇನೇ ಈ ತುಳಸಿಕಟ್ಟೆಗೂ ಒಂದಿಷ್ಟು ಜಾಗ ಮಾಡಿ ಕೊಡಿ.’ದೊಡ್ಡವ ವಿನಂತಿಸಿದ.

“ಹೌದು ಭಾವಾ ಅಷ್ಟು ಉಪಕಾರ ಮಾಡಿದರೆ ನಮ್ಮ ಮನೆ ಗೃಹಪ್ರವೇಶದಲ್ಲಿ ನಿಮಗೆ ಸಫಾರಿ ಸೂಟ್ ಉಡುಗೊರೆ ಕೊಡ್ತೀನಿ”ಎಂದ ಕಿರಿಯವ.

ದೊಡ್ಡವನೂ ಹಿಂದೆ ಬೀಳಲಿಲ್ಲ.”ಭಾವಾ ನೀವು ದೈವಭಕ್ತರು.ನನ್ನ ಮನೆ ಗೃಹಪ್ರವೇಶದಲ್ಲಿ ನಿಮಗೆ ಕಲಾಪತ್ತು ಪಂಚೆ ಗ್ಯಾರಂಟಿ”..ಎಂದು ಭರವಸೆ ನೀಡಿದ.

‘ಅದರ ಬಗ್ಗೆ ಚಿಂತೆ  ಈಗ ಬೇಡ ,ತುಳಸಿಕಟ್ಟೆ ನಮ್ಮ ಮನೆಯಲ್ಲಿ ಇಟ್ಟುಕೊಳ್ಳಲು ತೊಂದರೆ  ಇಲ್ಲ.” ಎಂದರು ಭಾವ.

ತುಳಸಿಕಟ್ಟೆ ಭಾವನ ಕಾರ್ ಸೇರಿತು.

”ಇನ್ನು ಇಲ್ಲಿ ನನಗೇನು ಕೆಲಸ ,ಹೊರಡ್ತೀನಿ.ಬೇಗ ಮನೆ ಕಟ್ಟಿ. ನನ್ನ ಉಡುಗೊರೆ ಕೊಟ್ಟು ಬಿಡಿ “ಎಂದು ಅಣ್ಣತಮ್ಮಂದಿರಿಗೆ ತಮಾಷೆ ಮಾಡಿ ಹೊರಟರು ಭಾವ.

“ವಕೀಲರೇ ,ಈ ಅಣ್ಣತಮ್ಮಂದಿರ ಹತ್ತಿರ ಒಂದು ಎನ್ ಓ ಸಿಗೆ ಸಹಿ  ತೆಗೆದುಕೊಳ್ಳಿ ಖಾತೆ ಮಾಡಿಸೋವಾಗ ಬೇಕಾದೀತು”ಎಂದ ಸಂತೋಷ್ . ತನ್ನ ವಕೀಲರಿಗೆ .

“ತೊಗೊಂಡಾಯ್ತು ಸಂತೋಷ್ ಅವರೇ. ಅವರಿನ್ನು ಹೋಗಬಹುದು” ಎಂದರು ವಕೀಲರು.

ಅವಶೇಷಗಳು ಬೇಗ ಬೇಗ  ಲಾರಿ ಸೇರುತ್ತಿದ್ದವು .ಅರ್ಧ ಶತಮಾನ ಬಾಳು ನೀಡಿದ, ಒಳಿತು ಕೆಡಕುಗಳಿಗೆ ಸಾಕ್ಷಿಯಾಗಿದ್ದ ಮನೆ ಮತ್ತೆ ನೆಲದಾಕಾರ ತಾಳಿತು.ಸಂತೋಷ್  ಕೈಲಿ ಕಟ್ಟಡ ನಕ್ಷೆ ಹಿಡಿದಿದ್ದ ಎಂಜನಿಯರ್ ಒಂದಿಗೆ ಚರ್ಚಿಸುತ್ತ  ಸೈಟ್ ತುಂಬ ಸಂತೋಷದಿಂದ  ಓಡಾಡಿದ.

ಇತ್ತ ಅಣ್ಣ ತಮ್ಮಂದಿರಿಬ್ಬರೂ ಶುಷ್ಕವಾಗಿ ಒಬ್ಬರಿಗೊಬ್ಬರು ವಿದಾಯ ಹೇಳಿದರು.

3.

“ಗುರು ಬರ್ತೀನಿ” ಅಂದೆ .ಗುರುದೇವನಿಗೆ.

“ಕ್ಷಮಿಸು ಶಿವು ,ನನ್ನದಿನ್ನೂ ಸ್ನಾನ,ಪೂಜೆ ಎಲ್ಲಾ ಬಾಕಿ ಇದೆ.ಇನ್ನೊಂದಿನ ಊಟಕ್ಕೇ ಬಂದುಬಿಡು,ನಿಧಾನವಾಗಿ ಕೂತು  ಮಾತನಾಡೋಣ.”ಎಂದ ಗುರು.

“ಖಂಡಿತ ಬರ್ತೀನಿ” ಎನ್ನುತ್ತ ಅವನಿಂದ ಬೀಳ್ಕೊಂಡೆ.

ಅಲ್ಲಿಂದ ಯೋಚಿಸುತ್ತಾ ಹೊರಟೆ ಇಂಥ  ವಿಘಟನೆಗಳು ಬಹುಶಃ ಈ ಕಾಲದ ಅನಿವಾರ್ಯವೇನೋ ಎಂದೂ ಅನ್ನಿಸಿತು.  ############

-ಮಹಾಬಲ

 

3 Responses

  1. Sriprakash says:

    ಚೆನ್ನಾಗಿದೆ. ಅಭಿನಂದನೆಗಳು

  2. ಶಂಕರಿ ಶರ್ಮ says:

    ಈಗ ಎಲ್ಲೆಡೆ ಕಾಣಬಹುದಾದಂತಹ ಘಟನೆಗಳು..ಕಥೆ ಮನ ಮುಟ್ಟುವಂತೆ ಬರೆದಿದ್ದೀರಿ ಸರ್..ಧನ್ಯವಾದಗಳು.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: