ಪುರಿ-ಡಾರ್ಜಿಲಿಂಗ್ ಪ್ರವಾಸ ಪುಟಗಳು: ಪುಟ 30

Share Button

ತಂಪು ತಾಣ ಡಾರ್ಜಿಲಿಂಗ್

ಸುಂದರ ನಾಮ್ಚಿ ಶಿವ ಮಂದಿರಗಳ ದರ್ಶನವು ಎಲ್ಲರಲ್ಲೂ ಧನ್ಯತಾ ಭಾವನೆ ಮೂಡಿಸಿತ್ತು. ಅಲ್ಲಿಂದ ಸುಮಾರು 50ಕಿ.ಮೀ. ದೂರದಲ್ಲಿದೆ, ಕನಸಿನ ತಂಪು ತಾಣ ಡಾರ್ಜಿಲಿಂಗ್ (ಗೇಂಗ್ಟೋಕ್ ನಿಂದ 98ಕಿ.ಮೀ). ವಾಹ್ ..! ಡಾರ್ಜಿಲಿಂಗ್ ಎಂದರೆ ಮೈಯೆಲ್ಲಾ ನವಿರೇಳುವುದು! ಪ್ರಕೃತಿದೇವಿಯ ಹಣೆ ಮೇಲಿನ ಸಿಂಧೂರದಂತೆ ರಾರಾಜಿಸುತ್ತಿದೆ ಇದು ಹಿಮಾಲಯದ ತಪ್ಪಲಲ್ಲಿ. ಭಗವಂತನ ಸೃಷ್ಟಿಯ ಅದ್ಭುತಗಳಲ್ಲೊಂದಾಗಿರುವ ಈ ಡಾರ್ಜಿಲಿಂಗ್, ಪಶ್ಚಿಮ ಬಂಗಾಳದ ಪ್ರಸಿದ್ಧ ಪಟ್ಟಣ ಹಾಗೂ ಡಾರ್ಜಿಲಿಂಗ್ ಜಿಲ್ಲೆಯ ಮುಖ್ಯ ಪಟ್ಟಣ ಅಲ್ಲದೆ ನಮ್ಮ ದೇಶದ ಪ್ರಸಿದ್ಧ  ಪ್ರವಾಸೀ ಕೇಂದ್ರವಾಗಿದೆ.

ಇದು 19 ನೇ ಶತಮಾನದ ಮೊದಲ ಭಾಗದಲ್ಲಿ ಸಿಕ್ಕಿಂ ರಾಜರ ಆಳ್ವಿಕೆಗೆ ಒಳಪಟ್ಟಿತ್ತು. ಉತ್ತರ ಹಿಮಾಲಯದ ತಪ್ಪಲಲ್ಲಿರುವ ಈ ಪ್ರದೇಶವು, ಪಶ್ಚಿಮ ಬಂಗಾಳದ ಉತ್ತರಕ್ಕೆ ಸಮುದ್ರಮಟ್ಟದಿಂದ ಸುಮಾರು 6,700ಅಡಿಗಳಷ್ಟುಎತ್ತರದಲ್ಲಿದೆ. UNESCOವು ಜಗತ್ತಿನ ಪಾರಂಪರಿಕ ತಾಣಗಳಲ್ಲೊಂದಾಗಿ ಇದನ್ನು ಗುರುತಿಸಿರುವುದು ಇಲ್ಲಿಯ ಹೆಗ್ಗಳಿಕೆ. 19ನೇ  ಶತಮಾನದಲ್ಲಿ ಬ್ರಿಟಿಷರು ಇಲ್ಲಿ ಕಪ್ಪು ಟೀ ಎಲೆಯ ಗಿಡಗಳ ಕೃಷಿಯನ್ನು ಪ್ರಾರಂಭಿಸಿದ ಬಳಿಕ ನೂರಾರು ಬ್ರಿಟಿಷರು  ಬಂದು ಇಲ್ಲಿ ನೆಲಸತೊಡಗಿದರು. ತದನಂತರದಲ್ಲಿ ಜಗತ್ತಿನಲ್ಲಿಯೇ ಅತೀ ಹೆಚ್ಚು ಬೇಡಿಕೆ ಇರುವ ಅತ್ಯುತ್ತಮ ಕಪ್ಪು ಟೀ ಎಲೆಗಳನ್ನು ಬೆಳೆಸುವ ಸ್ಥಳವಾಗಿ ಇದು ರೂಪುಗೊಂಡಿತು.

ಸುಮಾರು 1.3ಲಕ್ಷದಷ್ಟು ಜನಸಂಖ್ಯೆ ಹೊಂದಿರುವ ಈ ಸೊಗಸಿನ ಪ್ರವಾಸಿ ತಾಣದ ಜನರು ಹೆಚ್ಚಾಗಿ ಬಂಗಾಳಿ ಹಾಗೂ ನೇಪಾಳಿ ಭಾಷೆಗಳನ್ನು ಮಾತನಾಡುತ್ತಾರೆ. 1839- 1842ರಲ್ಲಿ ವಾಹನಗಳ ಓಡಾಟಕ್ಕಾಗಿ ರಸ್ತೆ ಪ್ರಾರಂಭವಾಯ್ತು. ನಂತರದ 1881ನೇ ಇಸವಿಯಲ್ಲಿ ಪ್ರಾರಂಭಿಸಲ್ಪಟ್ಟ, ಇಲ್ಲಿಯ ಅತೀ ಅಪರೂಪದ ನ್ಯಾರೋ ಗೇಜ್ ಉಗಿಬಂಡಿಯು ಇಂದಿಗೂ ಕಾರ್ಯ ನಿರ್ವಹಿಸುತ್ತಾ, ಈ ಪಟ್ಟಣವನ್ನು, ಕೆಳಗಿನ ಬಯಲು ಪ್ರದೇಶದ ಜನರೊಡನೆ ಬೆಸೆಯುವ ಪ್ರಮುಖ ಕೊಂಡಿಯಾಗಿದೆ. ಬ್ರಿಟಿಷರ ಪದ್ಧತಿಯಲ್ಲಿ ನಡೆಸಲ್ಪಡುವ ಖಾಸಗಿ ಶಾಲೆಗಳು,  ದೇಶದೊಳಗೆ ಮಾತ್ರವಲ್ಲದೆ  ಹೊರದೇಶಗಳಲ್ಲಿಯೂ ಇಂದಿಗೂ ಬಲು ಬೇಡಿಕೆಯುಳ್ಳವುಗಳಾಗಿವೆ. ಭೂಟಿಯಾ, ಶೇರ್ಪಾ, ಗೂರ್ಖ ಇತ್ಯಾದಿ ಪಂಗಡಗಳ ಸಂಸ್ಕೃತಿಗಳು ಇಲ್ಲಿಯ ಜನರಲ್ಲಿ ಹಾಸುಹೊಕ್ಕಾಗಿವೆ. ಸುಮಾರು 3,200ಚ.ಕಿ.ಮೀ ವಿಸ್ತಾರವಿರುವ ಈ ಪ್ರದೇಶವು 19ನೇ ಶತಮಾನದ ವರೆಗೆ ಸಿಕ್ಕಿಂ ರಾಜರ ಆಢಳಿತಕ್ಕೆ ಒಳಪಟ್ಟಿತ್ತು. ನಂತರ ಬ್ರಿಟಿಷರ ಆಳ್ವಿಕೆಯ ಕಾಲದಲ್ಲಿ, ಬಯಲು ಪ್ರದೇಶದ ಕಡುಬೇಸಿಗೆಯ ಸೆಕೆಯನ್ನು ತಡೆಯಲಾರದೆ, ಇದನ್ನು ತಂಪು ತಾಣ(Hill Station) ವನ್ನಾಗಿ ಉಪಯೋಗಿಸತೊಡಗಿದರು.

ಚಿತ್ರಕೃಪೆ:ಅಂತರ್ಜಾಲ

ವರ್ಷವಿಡೀ ಇರುವ ಇಲ್ಲಿಯ ತಂಪು ಹವೆಯು, ಬಯಲು ಪ್ರದೇಶದ ತಡೆಯಲಾಗದ  ಸೆಕೆಯ ಬಿರುಬೇಸಿಗೆಯಲ್ಲಿ ವಿಲಾಸೀ ಜನರನ್ನು ಈಗಲೂ ತನ್ನತ್ತ ಸೆಳೆಯುತ್ತಿದೆ. ಹಿಂದೆಲ್ಲಾ ಅತೀ ಶ್ರೀಮಂತರು, ರಾಜಕಾರಿಣಿಗಳೆಲ್ಲಾ ಬೇಸಿಗೆಯಿಡೀ ಡಾರ್ಜಿಲಿಂಗ್ ಲ್ಲಿ ಕಳೆಯುವುದು ತಿಳಿದಿತ್ತು.ಆದ್ದರಿಂದಲೇ ಇದು ಭೂಲೋಕದ ಸ್ವರ್ಗ! ಆದರೆ ಸ್ವತ: ನಾನೇ ಅಲ್ಲಿಗೆ ಹೋಗುವ ಸುವರ್ಣಾವಕಾಶ ಒದಗಿ ಬರಬಹುದೆಂದು ಅಂದು  ಕನಸಲ್ಲಿಯೂ ಕಲ್ಪಿಸಿರಲಿಲ್ಲ. ಅದೆಷ್ಟು ಚೆನ್ನಾಗಿರಬಹುದೆಂಬ ಕಲ್ಪನೆಯೇ ನನ್ನಲ್ಲಿ ಉತ್ಸಾಹ ತುಂಬಿತ್ತು. ಆದರೆ ಬಾಲಣ್ಣನವರು, “ಡಾರ್ಜಿಲಿಂಗ್ ಈಗ ಮೊದಲಿನಷ್ಟೆಲ್ಲಾ ಚೆನ್ನಾಗಿಲ್ಲ, ನಿಮಗೆ ನೋಡಿದಾಗ ನಿರಾಸೆಯಾಗಲೂ ಬಹುದು” ಎಂದು ಹೇಳಿದ ಮಾತು ಮನಸ್ಸಲ್ಲಿ ನಾಟಿ ಬಿಟ್ಟಿತ್ತು. ಆದರೆ ಡಾರ್ಜಿಲಿಂಗ್ ಹೆಸರೇ ರೋಮಾಂಚಕರ! ನಾವು ಅದೇ ಗುಂಗಿನಲ್ಲಿ ಡಾರ್ಜಿಲಿಂಗ್ ನ ಹೋಟೇಲ್ ಯುಮಕ್ಕೆ ತಲಪಿದಾಗ ಸಮಯ ರಾತ್ರಿ  7:45. ಹವೆ ಸುಖಕರವಾಗಿತ್ತಾದರೂ, ಸ್ವಲ್ಪ ಚಳಿಯೆನಿಸಿತು. ನಮಗೆ ನಿಗದಿಪಡಿಸಿದ ಸುಸಜ್ಜಿತ ಕೊಠಡಿಗಳ ಒಳ ಹೊಕ್ಕಾಗ ಮನಸ್ಸಿಗೇನೋ ಸಮಾಧಾನ. ನಮ್ಮ ಪ್ರವಾಸದ ಕೊನೆಯ ಹಂತ ಸಮೀಪಿಸಿತ್ತು. ಈ ವರೆಗೆ ನಿಯೋಜಿಸಲ್ಪಟ್ಟಿದ್ದ,( ಪಟ್ಟಿಯಲ್ಲಿ ಸೇರ್ಪಡೆಯಾಗಿರದ ನಾಥುಲಾ ಪಾಸ್ ಸಹಿತ!) ಎಲ್ಲಾ ಕಾರ್ಯಕ್ರಮಗಳೂ   ನಿರ್ವಿಘ್ನವಾಗಿ ಕೊನೆಗೊಂಡುದು ನಮ್ಮೆಲ್ಲರ ಅದೃಷ್ಟವೆಂದೇ ಹೇಳಬಹುದು. ಮರುದಿನ ಬೆಳ್ಳಂಬೆಳಗ್ಗೆ 4ಗಂಟೆಗೇ ಹೊರಟು ಸೂರ್ಯೋದಯ (ಇಲ್ಲಿ 5ಗಂಟೆಗೇ ಸೂರ್ಯೋದಯ!)ವೀಕ್ಷಿಸುವ ಕಾರ್ಯಕ್ರಮವಿದ್ದುದರಿಂದ, ಸಿದ್ಧವಿದ್ದ ಊಟವನ್ನು ಸವಿದು ನಿದ್ರಾದೇವಿಗೆ ಶರಣಾದೆವು… ಡಾರ್ಜಿಲಿಂಗ್ ವೀಕ್ಷಿಸುವ ಕಾತರತೆಯಿಂದ….

(ಮುಂದುವರಿಯುವುದು..)

– ಶಂಕರಿ ಶರ್ಮ, ಪುತ್ತೂರು.

4 Responses

  1. Jayalaxmi says:

    ಚೆನ್ನಾಗಿದೆ

  2. ಶಂಕರಿ ಶರ್ಮ..ಚೆನ್ನಾಗಿ ಮೂಡಿಬರುತ್ತಿದೆ ಪ್ರವಾಸಕಥನ..ಮುಂಉವರಿಯಲಿ…

  3. ನಯನ ಬಜಕೂಡ್ಲು says:

    ಭುವಿಯ ಮೇಲಿನ ಸ್ವರ್ಗ ಈ ಸುಂದರ ತಾಣ ಗಳು .

  4. ಶಂಕರಿ ಶರ್ಮ says:

    ಓದಿ ಮೆಚ್ಚಿದ ತಮಗೆಲ್ಲರಿಗೂ ಧನ್ಯವಾದಗಳು.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: