ಸದಾ ನಿಂತಲ್ಲೇ ನಿಂತಿದ್ದರೂ..

Share Button

ಒಂದಾನೊಂದು ಕಾಲದಲ್ಲಿ ಒಂದು ಕಾಡಿನಲ್ಲಿ ಸಿಂಹರಾಜ ವಾಸವಾಗಿದ್ದ. ಆ ಸಿಂಹರಾಜ ಬಹಳ ಕ್ರೂರಿಯಾಗಿದ್ದ. ತನಗೆ ಹಸಿವಾದಾಗೆಲ್ಲ ಕೈಗೆ ಸಿಕ್ಕ ಪ್ರಾಣಿಗಳನ್ನು ಬೇಟೆಯಾಡಿ ತಿಂದು ತನ್ನ ಹಸಿವನ್ನು ನೀಗಿಸಿಕೊಳ್ಳುತ್ತಿದ್ದ. ಇದರಿಂದಾಗಿ ಆ ಕಾಡಿನ ಉಳಿದೆಲ್ಲ ಪ್ರಾಣಿಗಳು ಜೀವ ಭಯದಿಂದ ಬದುಕುತ್ತಿರುತ್ತವೆ. ಅದೊಂದು ದಿನ ಕಾಡಿನ ಪ್ರಾಣಿಗಳೆಲ್ಲ ಸೇರಿ ಸಿಂಹರಾಜನಿಂದಾಗಿ ನಾವೆಲ್ಲರೂ ಪ್ರಾಣ ಭಯದಿಂದ ಬದುಕುವಂತಾಗಿದೆ. ಹೀಗಾದರೆ ನಾವು ನೆಮ್ಮದಿಯಿಂದಿರಲು ಸಾಧ್ಯವಿಲ್ಲ. ಪ್ರತಿದಿನ ಜೀವಭಯದಿಂದಲೇ ಬದುಕುತ್ತಿದ್ದೇವೆ. ಇನ್ಮುಂದೆ ಸರತಿಯಂತೆ ಒಂದೊಂದು ಪ್ರಾಣಿ ಸಿಂಹರಾಜನಿಗೆ ಆಹಾರವಾಗಿ ಹೋಗುವುದು. ಇದರಿಂದಾಗಿ ಬದುಕಿರುವಷ್ಟು ದಿನ ನಾವುಗಳು ಆನಂದದಿಂದ  ಜೀವುಸಬಹುದೆಂದು ನಿರ್ಧರಿಸುತ್ತವೆ. ಎಲ್ಲಾ ಪ್ರಾಣಿಗಳು ಹೋಗಿ ಸಿಂಹರಾಜನೆದುರು ತಮ್ಮ ನಿರ್ಧಾರವನ್ನು ತಿಳಿಸುತ್ತವೆ. ಸಿಂಹರಾಜನು ಇದಕ್ಕೆ ಒಪ್ಪಿಗೆ ಸೂಚಿಸುತ್ತಾನೆ. ಅದರಂತೆ ಒಂದೊಂದು ದಿನ ಒಂದೊಂದು ಪ್ರಾಣಿ ಸರದಿಯಂತೆ ಹೋಗಿ ಸಿಂಹರಾಜನಿಗೆ ಆಹಾರವಾಗುತ್ತಿರುತ್ತವೆ. ಹೀಗಿರುವಾಗ ಅದೊಂದು ದಿನ ಮೊಲದ ಸರದಿಯೂ ಬರುವುದು. ಆ ಮೊಲ ಜೀವ ಭಯದಿಂದಲೇ ಸಿಂಹರಾಜನ ಬಳಿ ಹೋಗುವುದು. ಹೋಗುವ ಹಾದಿಯಲ್ಲಿ ಅದಕ್ಕೊಂದು ಉಪಾಯ ಹೊಳೆಯುವುದು. ಮಾಡಿಕೊಂಡ ಉಪಾಯದಿಂದ ಬೇಕೆಂದು ತಡವಾಗಿ ಹೋಗುವುದು. ತಡವಾದ್ದರಿಂದ ಅದಾಗಲೇ ಹಸಿದಿದ್ದ ಸಿಂಹರಾಜ ಕುಪಿತನಾಗುತ್ತಾನೆ. ತಡವಾಗಿ ಬಂದಿದ್ದೇಕೆಂದು ಸಿಂಹರಾಜ ಘರ್ಜಿಸುತ್ತಾನೆ. ಬುದ್ದಿವಂತ ಮೊಲ ಸಿಂಹರಾಜನ ಬಳಿ ಹೀಗೆ ಹೇಳುವುದು. ನಾನು ಬರುವ ದಾರಿಯಲ್ಲಿ ನಿಮಗಿಂತಲೂ ದೊಡ್ಡ ಸಿಂಹ ನನ್ನನ್ನು ಅಡ್ಡಗಟ್ಟಿತ್ತು. ಅದರ ಕೈಯಿಂದ ತಪ್ಪಿಸಿಕೊಂಡು ಬರುವಾಗ ತಡವಾಯ್ತು.

ಏನೂ ನನಗಿಂತಲೂ ದೊಡ್ಡ ಸಿಂಹವೇ?! ಈ ಕಾಡಿಗೆ ನಾನೊಬ್ಬನೇ ರಾಜ. ಅದೆಲ್ಲಿದೆ ಆ ಸಿಂಹ ತೋರಿಸು ಅದನ್ನು ಕೊಂದುಬಿಡುತ್ತೇನೆಂದು ಸಿಂಹರಾಜ ಘರ್ಜಿಸುತ್ತಾನೆ. ಮೊಲ ಆ ಸಿಂಹರಾಜನನ್ನು ಬಾವಿಯ ಬಳಿ ಕರೆತಂದು ಆ ದೊಡ್ಡ ಸಿಂಹ ಈ ಬಾವಿಯ ಒಳಗಿದ್ದಾನೆಂದು  ಹೇಳುವುದು. ಸಿಂಹರಾಜ ನೀರೊಳಗಿನ ತನ್ನ ಬಿಂಬವನ್ನು ನೋಡಿ ಮತ್ತೊಂದು ಸಿಂಹವೆಂದು ತಿಳಿದು ಅದರೊಳಗೆ ಧುಮುಕಿ ಸಾವನ್ನಪ್ಪುತ್ತದೆ. ಆನಂತರ ಬುದ್ದಿವಂತ ಮೊಲದ ಉಪಾಯದಿಂದ ಕಾಡಿನ ಪ್ರಾಣಿಗಳೆಲ್ಲ ನೆಮ್ಮದಿಯಿಂದ ಜೀವಿಸುವವು.

ನಿಮಗೆಲ್ಲ ಈ ಕತೆ ನೆನಪಿರಬಹುದು. ನಾವು ಪ್ರೈಮರಿ ಶಾಲೆಯಲ್ಲಿ ಓದಿದ ಕತೆಯಿದು. ಇನ್ನೊಂದು ಇಂತಹದ್ದೇ ನಮ್ಮ ಬಾಲ್ಯದಲ್ಲಿ ಓದಿದ ಕತೆ. ನಾಯಿಯೊಂದು ಮೂಳೆಯನ್ನು ಬಾಯಲ್ಲಿ ಕಚ್ಚಿಕೊಂಡು ಹೋಗುವಾಗ ನೀರಿನಲ್ಲಿ ಕಾಣುವ ಬಿಂಬ ತನ್ನದೆಂದು ತಿಳಿಯದೇ ಬೊಗಳಲಾರಂಭಿಸಿ ಬಾಯಲ್ಲಿದ್ದ ಮೂಳೆಯೂ ನೀರು ಪಾಲಾಗುವುದು.

ಪ್ರತಿದಿನ ಕನ್ನಡಿಯನ್ನು ನೋಡಿಕೊಳ್ಳುವ ಅಭ್ಯಾಸ ಎಲ್ಲರಿಗೂ ಇದೆ. ಆದರೆ ನಾಗರಿಕತೆಯ ಆರಂಭದ ದಿನಗಳಲ್ಲಿ ಮನುಷ್ಯನು ಸಹ ಕೆರೆ ಹೊಂಡ ಸರೋವರಗಳಲ್ಲಿ ತನ್ನ ಮುಖವನ್ನು ನೋಡಿಕೊಳ್ಳುತ್ತಿದ್ದನಂತೆ. ಬಹುಶಃ ಅದೇ ಇರಬಹುದು ಮಾನವ ಬಳಸಿದ ಮೊಟ್ಟಮೊದಲ ಕನ್ನಡಿ. ಕನ್ನಡಿಯ ಉಗಮಕ್ಕೆ ಪರಿಕಲ್ಪನೆ ದೊರೆತದ್ದು ಅಲ್ಲಿಯೇ ಇರಬಹುದು. ಆನಂತರ ಕಾರ್ಗಲ್ಲನ್ನು ನಯವಾಗಿ ಉಜ್ಜಿ ಕನ್ನಡಿಯಂತೆ ಬಳಸಲಾರಂಭಿಸುತ್ತಾನೆ. ಅವುಗಳು ಅಷ್ಟಾಗಿ ಬಿಂಬವನ್ನು ಪ್ರತಿಫಲಿಸದ ಕಾರಣ ಬುದ್ಧಿವಂತ ಪ್ರಾಣಿ ಎನಿಸಿಕೊಂಡ ಮಾನವನ ಮೆದುಳು ಹೊಸ ಸಂಶೋಧನೆಗಳಿಗೆ ಮುಂದಾಗುವುದು. ಕ್ರಿ. ಶ. ಮೊದಲನೇ ಶತಮಾನದಲ್ಲಿ ಸಿಡೋನಿನಲ್ಲಿ ಮೊಟ್ಟ ಮೊದಲಿಗೆ ಲೋಹ ಲೇಪಿತ ಗಾಜಿನ ಕನ್ನಡಿಯನ್ನು ತಯಾರಿಸಿದರಂತೆ. ಅದೇ ಸಮಯದಲ್ಲಿ ಪ್ರಪಂಚದ ಹಲವು ಪ್ರದೇಶಗಳಲ್ಲಿ ಹಲವು ರೀತಿಯ ಕನ್ನಡಿಗಳು ಸಂಶೋಧನೆಯಾಗುತ್ತವೆ. ತಾಮ್ರ, ಬೆಳ್ಳಿ, ಸೀಸ, ಪಾದರಸದ ಮಿಶ್ರಣವನ್ನು ಗಾಜಿಗೆ ಲೇಪಿಸಿ ಕನ್ನಡಿಯನ್ನು ತಯಾರಿಸಲಾರಂಭಿಸುತ್ತಾರೆ. ಆದರೆ ಆನೆಯ ದಂತ, ಚಿನ್ನ, ಬೆಳ್ಳಿಯನ್ನು ಅವುಗಳ ಚೌಕಟ್ಟಿಗೆ ಬಳಸುತ್ತಿದ್ದು, ಇದರಿಂದಾಗಿ ಕನ್ನಡಿಯು ಅತ್ಯಂತ ದುಬಾರಿಯಾದ ಐಷಾರಾಮಿ ವಸ್ತುವೆನಿಸುವುದು. 1835ರಲ್ಲಿ ಜರ್ಮನಿಯ ಜಸ್ಟಸ್ ವೊನ್ ಲೀಬಿಗ್ ಎಂಬ ವಿಜ್ಞಾನಿ ಬೆಳ್ಳಿಯ ನೈಟ್ರೇಟ್ ಅನ್ನು ರಾಸಾಯನಿಕವಾಗಿ ಸಂಕುಚಿತಗೊಳಿಸಿ ಗಾಜಿನ ಮೇಲೆ ಬೆಳ್ಳಿಯ ತೆಳ್ಳನೆ ಪದರವನ್ನು ಅಳವಡಿಸಿ ಕನ್ನಡಿಯನ್ನು ತಯಾರಿಸುತ್ತಾರೆ. ಅಲ್ಲಿಯವರೆಗೂ ಐಷಾರಾಮಿಯ ಸಂಕೇತವಾಗಿದ್ದ, ದುಬಾರಿಯೆನಿಸಿಕೊಂಡಿದ್ದ ಕನ್ನಡಿಯು ಅಂದಿನಿಂದ ಜನಸಾಮಾನ್ಯರ ಕೈಸೇರುತ್ತದೆ.

ಮೇಲಿನ ಸಿಂಹರಾಜನ ಕತೆಯಲ್ಲಿ ಮೊಲಕ್ಕೆ ಬಾವಿಯೊಳಗಿನ ಬಿಂಬದ ಉಪಾಯ ಬಂದಿದ್ದಾದರೂ ಹೇಗೆ? ಆ ಸಿಂಹರಾಜನು ಬಾವಿಯಲ್ಲಿ ಕಾಣುವುದು ತನ್ನದೇ ಬಿಂಬವೆಂದು ತಿಳಿಯದಷ್ಟು ಮೂರ್ಖನೇ? ನಾಯಿಗೇಕೆ ನೀರಿನಲ್ಲಿರುವ ಬಿಂಬ ತನ್ನದೆಂಬುದು ಅರ್ಥವಾಗಲಿಲ್ಲ? ಕತೆಗಳಲ್ಲಿ ಪ್ರಾಣಿಗಳು ಮಾತನಾಡುತ್ತವೆಯಾದರೂ ವಾಸ್ತವಿಕವಾಗಿ ಅದು ಅಸಾಧ್ಯ. ಆದರೆ ಮನುಷ್ಯ ತನ್ನದೇ ಒಂದು ಭಾಷೆಯನ್ನು ಸೃಷ್ಟಿಸಿಕೊಂಡ. ಆಲೋಚಿಸುವುದನ್ನು ಕಲಿತುಕೊಂಡ. ಮೊದಮೊದಲು ಕೊಳ, ಸರೋವರಗಳಲ್ಲಿ ತನ್ನ ಬಿಂಬವನ್ನು ನೋಡಿಕೊಳ್ಳುತ್ತಿದ್ದ ಮನುಷ್ಯನಿಗೆ ಕನ್ನಡಿಯ ಪರಿಕಲ್ಪನೆಯು ಮೂಡಿ, ಕನ್ನಡಿಯನ್ನು ಸಂಶೋಧಿಸಿಕೊಂಡ.

ಸಾವಿಲ್ಲದ ಮನೆಯಲ್ಲಿ ಸಾಸಿವೆ ತರುವಂತೆ ಕಿಸಾಗೋತಮಿಗೆ ಮಹಾನುಭಾವ ಬುದ್ಧ ಹೇಳಿದ್ದನಂತೆ. ಸಾವಿಲ್ಲದ ಮನೆ ಸಾಸಿವೆ ಹೇಗೆ ಸಿಗಲಿಲ್ಲವೋ ಈಗ ಮೊಬೈಲ್ ಇಲ್ಲದ ಮನೆಯೂ ಇಲ್ಲವೆಂದು ಮೊನ್ನೆ ಯಾರೋ ಹೇಳುತ್ತಿದ್ದರು. ಆಗ ನನಗನ್ನಿಸಿತು: ಆಗ ಸಿಗದ ಸಾಸಿವೆ, ಈಗ ಸಿಗದಿರುವ ಮೊಬೈಲ್ ಇಲ್ಲದ ಮನೆಯಂತೆ, ಕನ್ನಡಿಯಿಲ್ಲದ ಮನೆಯೂ ಸಿಗುವುದು ಅಸಾಧ್ಯ!

ನೀವು ಗಮನಿಸಿ ನೋಡಿ  ವಾಷಿಂಗ್ ಮೆಷಿನ್, ರೆಫ್ರಿಜಿರೇಟರ್ ಇವುಗಳು ಸಹ ಇಂದಿನ ಜೀವನ ಶೈಲಿಗೆ ದಿನಬಳಕೆಯ ವಸ್ತುಗಳಾದರು ಸಹ ಸ್ವಲ್ಪ ಅನುಕೂಲಸ್ಥರ ಮನೆಗಳಲ್ಲಿ ಮಾತ್ರ ಇಂತಹ ಯಂತ್ರಗಳನ್ನು ಕಾಣಲು ಸಾಧ್ಯ. ಆದರೆ ಕನ್ನಡಿ ಹಾಗಲ್ಲ ದೊಡ್ಡ ಶ್ರೀಮಂತನ ಮನೆಯಿಂದ ಹಿಡಿದು ಪುಟ್ಟ ಗುಡಿಸಲಿನ ದಟ್ಟ ದರಿದ್ರನ ಮನೆಯವರೆಗೂ ಇದ್ದೇ ಇರುವ ದಿನಬಳಕೆಯ ವಸ್ತು. ಮನೆಯ ಆರ್ಥಿಕ ಸ್ಥಿತಿಗೆ ತಕ್ಕಂತೆ ಅದರ ಅಳತೆ ಆಕಾರ ವಿನ್ಯಾಸಗಳಿರಬಹುದು. ಆದರೆ ಕನ್ನಡಿಯು ಗೃಹಬಳಕೆಯ ವಸ್ತುವಾಗಿರುವುದರಿಂದ ಎಲ್ಲರ ಮನೆಯಲ್ಲೂ ಇರುವಂಥದ್ದು. ಮೊದಮೊದಲು ತನ್ನ ಬಿಂಬ ನೋಡಿಕೊಳ್ಳುವುದಕ್ಕೆ ಸಂಶೋಧಿಸಿದ ಕನ್ನಡಿಯನ್ನು ಅದೇ ಮನುಷ್ಯ ತನ್ನ ಐಷಾರಾಮಿ ಪ್ರದರ್ಶನಕ್ಕಾಗಿಯೂ ಬಳಸಲಾರಂಭಿಸಿದ. ಸಿರಿವಂತರ ಮನೆಗಳಲ್ಲಿ ಮಲಗುವ ಕೋಣೆಯಲ್ಲಿ, ಬಚ್ಚಲಿನಲ್ಲಿ, ಪಡಸಾಲೆಯಲ್ಲಿ ಹೀಗೆ ಎಲ್ಲೆಂದರಲ್ಲಿ ದುಬಾರಿಯಾದ ದೊಡ್ಡ ದೊಡ್ಡ ನಿಲುವುಗನ್ನಡಿಗಳು ಮನೆಯ ಸಿರಿವಂತಿಕೆಯನ್ನು ಪ್ರದರ್ಶಿಸುತ್ತವೆ. ಹಾಗೂ ಕಡು ಬಡವನ ಮನೆಯಲ್ಲಿಯೂ ಅಂಗೈಯಗಲದ ಪುಟ್ಟದೊಂದು ಕನ್ನಡಿ ಇದ್ದೇ ಇರುತ್ತದೆ.

ಅದೊಮ್ಮೆ ನಮ್ಮ ಬಂಧುಗಳ ಮನೆಯವರ ಮನೆದೇವರ ಕಾರ್ಯವಿತ್ತು. ನಮ್ಮ ಬಂಧು ಬಳಗವೆಲ್ಲ ಅವರ ಮನೆಯಲ್ಲಿ ಸೇರಿತ್ತು. ಬೆಳಿಗ್ಗೆ ಬಹಳ ಬೇಗನೆ ಪೂಜೆಯ ಕಾರ್ಯ ಇದ್ದುದರಿಂದ ದೂರದ ಊರುಗಳಿಂದ ಬರುವುದು ಅಸಾಧ್ಯ ಜೊತೆಗೆ ತ್ರಾಸದಾಯಕವೆಂದು ಒಂದಿನ ಮುಂಚಿತವಾಗಿಯೇ, ಅಂದರೆ ದೇವರ ಕಾರ್ಯದ ಹಿಂದಿನ ದಿನವೇ ಬಂಧುಗಳ ಮನೆ ಬಂಧು ಬಳಗದವರಿಂದ ತುಂಬಿ ತುಳುಕಿತ್ತು. ನನಗಂತೂ ಪರಸ್ಥಳದಲ್ಲಿ ನಮ್ಮ ಮನೆಯಂತೆ ನೆಮ್ಮದಿಯಾಗಿ ನಿದ್ರಿಸಲು ಸಾಧ್ಯವಾಗುವುದಿಲ್ಲ. ಆದ್ದರಿಂದ ಬಹಳ ಬೇಗನೆ ಎಚ್ಚರವಾಯ್ತು. ಅಷ್ಟರಲ್ಲೇ ಆ ಮನೆಯ ಹಿರಿಯರೊಬ್ಬರು ಬಚ್ಚಲಿ ಹಂಡೆಯೊಲೆಗೆ ಬೆಂಕಿ ಹಚ್ಚಿದ್ದರು. ಸ್ನಾನಕ್ಕೆ ಬಿಸಿನೀರು ಸಿದ್ಧವಾಗಿತ್ತು. ನಸುಕಿಗೆ ಒಬ್ಬೊಬ್ಬರಾಗಿ ಎದ್ದು ಸ್ನಾನ ಮುಗಿಸಿ ತಯಾರಾಗಿ ಬರುತ್ತಿದ್ದವರು ಪಡಸಾಲೆಯಲ್ಲಿದ್ದ ಕನ್ನಡಿಯ ಮುಂದೆ ನಿಂತು ಅಲಂಕರಿಸಿಕೊಳ್ಳುತ್ತಿದ್ದರು. ಪಡಸಾಲೆಯ ಕುರ್ಚಿಯೊಂದರಲ್ಲಿ ಕುಳಿತ ನಾನು ಗಮನಿಸುತ್ತಿದ್ದೆ. ಪಡಸಾಲೆಯ ಗೋಡೆಗೆ ನೇತುಹಾಕಿದ್ದ ಎರಡುಮೂರು ಮೊಳದುದ್ದ ಕನ್ನಡಿಯೆದುರು ಹೆಂಗಸರು ತಲೆಬಾಚಿ, ಆಭರಣ ತೊಟ್ಟು, ಸೌಂದರ್ಯವರ್ಧಕಗಳ ಹಚ್ಚಿಕೊಂಡು ಅಲಂಕರಿಸಿಕೊಳ್ಳುತ್ತಿದ್ದರು. ಹಿರಿಯ ಮುದುಕರು ನೆರೆತ ತಲೆಗೂದಲನ್ನು ಬಾಚಣಿಗೆಯಲ್ಲಿ ಕೆರೆದುಕೊಂಡು ಮೀಸಿ ತೀಡಿಕೊಳ್ಳುತ್ತಿದ್ದರು. ತರುಣರು ಪ್ಯಾಂಟಿನ ಕಿಸೆಯಲ್ಲಿದ್ದ ಪುಟ್ಟ ಬಾಚಣಿಗೆಯಿಂದ ತಲೆಗೂದಲಿಗೆ ಆಕಾರ ನೀಡುತ್ತಿದ್ದರು. ಒಟ್ಟಾರೆ ಆ ಮನೆಯಲ್ಲಿದ್ದ ಪ್ರತಿಯೊಬ್ಬರೂ ಒಮ್ಮೆ ಕನ್ನಡಿಯೆದುರು ಬಂದು ಹೋಗುತ್ತಿದ್ದರು. ಅರೆ! ಈ ಕನ್ನಡಿಗೆ ಅದೆಂತಹ ಶಕ್ತಿಯಿದೆ. ಎಲ್ಲರನ್ನೂ ತಾನಿರುವಲ್ಲಿಗೆ ಕರೆಸಿಕೊಳ್ಳುತ್ತಿದೆಯಲ್ಲ ಎಂದು ನನಗೆ ಕನ್ನಡಿಯ ಕುರಿತು ಕುತೂಹಲ ಶುರುವಾಯ್ತು. ಒಂದು ರೀತಿಯ ಆಶ್ಚರ್ಯವೂ.. ಅಂತಹ ಅದ್ಭುತ ಸಂದರ್ಭವನ್ನು ಕವಿಯಾದವನು ಕಾವ್ಯರಚನೆಗೆ ಬಳಸಿಕೊಳ್ಳದಿದ್ದರೆ ಹೊತ್ತಿನ ಜೊತೆ ಮುತ್ತು ಕಳೆದಂತೆಯೇ. ಆ ಸಂದರ್ಭದಲ್ಲಿ ಬರೆದ ಎರಡು ಕಿರುಗವಿತೆ ನಿಮ್ಮಗಳ ಓದಿಗೆ..

1
ಯಾರನ್ನೂ ನೆನಪಿಟ್ಟುಕೊಳ್ಳದ
ಕನ್ನಡಿ
ಎದುರಿಗೆ ಬಂದು
ನಿಂತ ತಕ್ಷಣ
ಗುರುತಿಸುವುದು
2
ಸದಾ ನಿಂತಲ್ಲೇ ನಿಂತಿದ್ದರು
ಪ್ರತಿದಿನ ಮನೆಯ
ಎಲ್ಲಾ ಸದಸ್ಯರ
ಮುಖದರ್ಶನವಾಗುತ್ತಿದೆ, ಕನ್ನಡಿಗೆ.

.

-ನವೀನ್ ಮಧುಗಿರಿ

2 Responses

  1. ನಯನ ಬಜಕೂಡ್ಲು says:

    ಮೊದಲು ಇದೇನು ಮಕ್ಕಳ ಕಥೆ ಬರೆದಿದ್ದಾರೆ ಅನ್ನಿಸಿತು, ಆದರೆ ಮುಂದೆ ಓದುತ್ತಾ ಹೋದಂತೆ ವಿಷಯ ಇಂಟೆರೆಸ್ಟಿಂಗ್ ಆಗ್ತಾ ಹೋಯಿತು. ಕವಿತೆಯೂ ಚೆನ್ನಾಗಿದೆ.

  2. ಶಂಕರಿ ಶರ್ಮ says:

    ಕನ್ನಡಿಯ ಉಗಮ, ಅದರ ವಿಶೇಷತೆ, ವೈಚಿತ್ರ್ಯಗಳ ಬಗೆಗಿನ ಉದಾಹರಣೆ ಸಹಿತದ ಲೇಖನ ಜಬರ್ದಸ್ತಾಗಿದೆ.

Leave a Reply to ನಯನ ಬಜಕೂಡ್ಲು Cancel reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: