ಚೈತನ್ಯಮಯ ಚ್ಯವನ

Share Button

ತಪ್ಪು ಮಾಡಬಾರದು ಅದು ರಾಕ್ಷಸ ಗುಣ.ಒಂದು ವೇಳೆ ತಪ್ಪು ಮಾಡಿದರೆ ತಪ್ಪೆಂದು ತಿಳಿದಾಗ ಪಶ್ಚಾತ್ತಾಪ ಪಟ್ಟುಕೊಳ್ಳುವುದು ಮಾನವೀಯ ಗುಣ. ಅದಕ್ಕೂ ಮಿಗಿಲಾಗಿ ತಪ್ಪಿಗೆ ಪ್ರಾಯಶ್ಚಿತವಾಗಿ ತಾನೇ ಸ್ವತಃ ಶಿಕ್ಷೆ ಅನುಭವಿಸಿ ತೃಪ್ತಿ ಪಟ್ಟುಕೊಳ್ಳುವುದು ಜೀವ ದೇವ ಗುಣವಂತೆ. ಹಾಗೆಯೇ ತನಗೇನಾದರೂ ತೊಂದರೆಯಾದರೆ…!  ಬೇರೆಯವರಿಂದ ಅಪಘಾತವೋ ಅಂಗ ಊನತೆಯೋ ಬಂದೆರಗಿದರೆ  ಅವರನ್ನು ನಾಶ ಮಾಡುವ ಹುನ್ನಾರವನ್ನು ಇಂದಿನ ದಿನಗಳಲ್ಲಿ ಕಾಣುತ್ತೇವೆ. ಆದರೆ ಅದಕ್ಕೆ ಬದಲಾಗಿ ತನಗೆ ಕೆಡುಕುಂಟು ಮಾಡಿದವರನ್ನೇ ಮದುವೆಯಾಗಿ ಬಾಳಸಂಗಾತಿಯನ್ನಾಗಿ ಮಾಡಿಕೊಳ್ಳುವ ಉದಾಹರಣೆ ಪುರಾಣದೊಳಗಿದೆ. ಈ ಮೇಲಿನ ದೃಷ್ಟಾಂತಗಳಿಗೆ ಚ್ಯವನ  ಮಹರ್ಷಿಯ ಕಥೆ ನಮ್ಮ ಮುಂದಿದೆ.

ಭೃಗು ಮಹರ್ಷಿಗಳಿಗೆ  ಪುಲೋಮೆ ಎಂಬ ಪತ್ನಿಯಿದ್ದಳು.  ಅವಳು ಸದ್ಗುಣ ಸಂಪನ್ನೆಯೂ ಅನುರೂಪಳೂ ಆಗಿದ್ದಳು.  ಕೆಲವು ಕಾಲದಲ್ಲಿ ಪುಲೋಮೆ ಗರ್ಭವತಿಯಾದಳು. ದಿನ ತುಂಬಿದ ಗರ್ಭಿಣಿಯಾಗಿದ್ದ ಸಮಯದಲ್ಲಿ ಮಹರ್ಷಿಗಳು  ಸ್ನಾನಕ್ಕಾಗಿ  ಸ್ವಲ್ಪ ದೂರವಿದ್ದ ಸರೋವರಕ್ಕೆ  ತೆರಳಿದ್ದಾಗ ಸಮಯ ಕಾಯುತ್ತಿದ್ದ ‘ಪುಲೋಮ’ ಎಂಬ ರಾಕ್ಷಸನು ಆಶ್ರಮಕ್ಕೆ ನುಗ್ಗಿದನು. ಅವನು ಈ ಹಿಂದೆ ಪುಲೋಮೆಯನ್ನು  ಮದುವೆಯಾಗಲು ಬಯಸಿದ್ದನು. ಆಶ್ರಮಕ್ಕೆ ಬಂದಾತನನ್ನು ಅತಿಥಿಯಿಂದ ಸತ್ಕರಿಸಿದಳು ಮುಗ್ಧೆ ಪುಲೋಮೆ. ಆದರೆ ಆಕೆಯನ್ನು ಕಾಣಿಸಿದ್ದ ಪುಲೋಮನನ್ನು ಅವಳನ್ನು ಎತ್ತಿಕೊಂಡು ಓಡಿದನು. ಅಪಹೃತಳಾದ ಪುಲೋಮೆಗೆ ವಿಪರೀತ ಭಯದಿಂದಾಗಿ ಗರ್ಭದಲ್ಲಿದ್ದ ಶಿಶು ಚ್ಯುತವಾಗಿತ್ತು. ಆದರೆ ಆ ಶಿಶುವು  ಸೂರ್ಯನಿಗೆ ಸಮನಾದ ತೇಜಸ್ಸಿನಿಂದ ಕೂಡಿದ್ದು ಶಿಶುವಿನ ಕಣ್ಣಿನಿಂದ ಅಗ್ನಿಯು  ಹೊರಗೆ ಬಂದು ರಾಕ್ಷಸನನ್ನು ಬೂದಿ ಮಾಡಿತು. ಗರ್ಭ ಸ್ರಾವದಿಂದ ಜನಿಸಿದ ಆ ಮಗುವಿಗೆ ‘ಚ್ಯವನ’ ಎಂದು ಹೆಸರಿಡಲಾಯಿತು.  ರಾಕ್ಷಸರ ಗುರುವಾದ ಶುಕ್ರಾಚಾರ್ಯರೂ ಭೃಗು ಮಹರ್ಷಿಯ ಪುತ್ರನಾಗಿದ್ದು, ಚ್ಯವನ ಹಾಗೂ ಶುಕ್ರಾಚಾರ್ಯರು ಸಹೋದರರು.

ಚ್ಯವನನು ಯುವಕನಾದ ಮೇಲೆ ಮನು ಪುತ್ರಿಯಾದ ಆರುಷಿ ಎಂಬುವಳನ್ನು ಮದುವೆಯಾದನು.ಇವಳಲ್ಲಿ ‘ಔರ್ವ’ನೆಂಬ ಮಗನಿದ್ದನು. ಅನಂತರ ಚ್ಯವನನು ಕಾಡಿನಲ್ಲಿ ತಪಸ್ಸಿಗೆ ತೊಡಗಿದನು. ಅವನು  ಅದೆಷ್ಟು ಘೋರ ತಪಸ್ಸಿನಲ್ಲಿ ಲೀನ ಆಗಿದ್ದೇನೆಂದರೆ ಅವನ ಮೈಮೇಲೆ ಹೊತ್ತು ಬೆಳೆದುಬಿಟ್ಟಿತ್ತು.ಹೀಗಿರಲು ಒಮ್ಮೆ ಸೂರ್ಯವಂಶದ  ವೈವಸ್ವತ ಮನುವಿನ ಮಗ ಶರ್ಯಾತಿ ಎಂಬ ರಾಜನು ಬೇಟೆಯಾಡುವುದಕ್ಕಾಗಿ ತನ್ನ ಸೇನೆಯೊಂದಿಗೆ ಕಾಡಿಗೆ ಹೋಗಿದ್ದಾಗ ಚ್ಯವನ ಮುನಿಯ ಆಶ್ರಮದ ಬಳಿ ಬಿಡಾರ ಹೂಡಿದನು. ರಾಜನೊಂದಿಗೆ ಆತನ ಮಗಳಾದ ಸುಕನ್ಯೆಯೂ , ಸಖಿಯರೂ ವನ ವಿಹಾರಕ್ಕಾಗಿ ಬಂದಿದ್ದರು. ಸಖಿಯರೊಂದಿಗೆ ತಿರುಗಾಡುತ್ತಿದ್ದ ಸುಕನ್ಯೆಯು ಹತ್ತಿರದಲ್ಲಿದ್ದ ಹುತ್ತದಲ್ಲಿ ಎರಡು ಮಿಣುಕು ಹುಳುಗಳಂತೆ ಹೊಳೆಯುವುದನ್ನು ಕಂಡು ಹುಡುಗಾಟಿಕೆಯಲ್ಲಿ ಮುಳ್ಳಿನಿಂದ ಅದನ್ನು ಚುಚ್ಚಿದಳು. ನೋಡುತ್ತಿದ್ದಂತೆ ರಂಧ್ರಗಳಿಂದ ರಕ್ತ ಹರಿಯತೊಡಗಿತು. ಕೂಡಲೇ ಬೆರಗಾಗಿ ಭಯಪಟ್ಟು ಸಖಿಯರೊಡನೆ ಬಿಡಾರಕ್ಕೆ ಓಡಿದಳು. ವಿಷಯ ಮಾತ್ರ ಯಾರಲ್ಲೂ ಹೇಳಲಿಲ್ಲ. ಒಂದೆರಡು ದಿನಗಳಲ್ಲಿ ಶರ್ಯಾತಿ ರಾಜನ ಸೇನೆಯಲ್ಲಿ ಮತ್ತೊಂದು ಘಟನೆ ನಡೆಯಿತು. ಸೇನಾ ಪರಿವಾರದವರೆಲ್ಲ ಮಲಮೂತ್ರ ದಿಗಳ ಬಂಧನವಾಗಿ ರೋಗ ಪೀಡಿತರಾದರು. ರಾಜನು ಚಿಂತಾಕ್ರಾಂತನಾದ .ನಮ್ಮಿಂದ ಯಾರಿಗಾದರೂ ಏನಾದರೂ ಅನ್ಯಾಯ ನಡೆದಿದೆಯೇ ಎಂದು ವಿಚಾರಿಸುತ್ತಾ ರಾಜ ತಿರುಗಾಡತೊಡಗಿದನು. ಕಡೆಗೆ ಸುಕನ್ಯೆಯೇ  ತನ್ನ ತಂದೆಗೆ ನಡೆದಿದ್ದೆಲ್ಲವನ್ನೂ ವಿವರಿಸಿದಳು. ಕೂಡಲೇ ರಾಜನು ಹೋಗಿ ನೋಡಲಾಗಿ ಹುತ್ತದಲ್ಲಿ ಇರುವುದು ಮನುಷ್ಯ ಮಾತ್ರವಲ್ಲ, ಚ್ಯವನ ಮಹರ್ಷಿಯೆಂದು ತಿಳಿಯಿತು..ಮಗಳ ಪರವಾಗಿ ರಾಜನು ಮುನಿಯೊಡನೆ ಕ್ಷಮಾಪಣೆ ಕೇಳಿದರು. ಆಗ ಚ್ಯವನನು ‘ನಾನೀಗ ಕಣ್ಣು ಕಳೆದುಕೊಂಡು ಕುರುಡಾಗಿದ್ದೇನೆ. ನನ್ನ ಶುಶ್ರೂಷೆಗಾಗಿ ಸುಕನ್ಯೆಯನ್ನು  ಕೊಡಬೇಕೆಂದು ಕೇಳಿದ’ . ಆಗ ಸುಕನ್ಯೆ ‘ನನ್ನಿಂದಾಗಿ ಇಷ್ಟೆಲ್ಲಾ ಮಂದಿ ಪ್ರಾಣ ಕಳೆದುಕೊಳ್ಳುವುದು ಯುಕ್ತವಲ್ಲ, ನಾನು ಚ್ಯವನನನ್ನು ಮದುವೆಯಾಗಿ ಅವನ ಸೇವೆ ಮಾಡುತ್ತಾ ಅಲ್ಲಿರುವೆ’ನೆಂದಳು.

ಸುಕನ್ಯೆಯ ಗುಣಕ್ಕೆ ಎಣೆ ಇಲ್ಲ ಅಲ್ಲವೇ?  ಚ್ಯವನನ ಶುಶ್ರೂಷೆಯಲ್ಲಿ ದಿನ ಕಳೆಯುತ್ತಿದ್ದಳು ಸುಕನ್ಯೆ. ಒಂದು ದಿನ  ಕೊಳದಲ್ಲಿ ಮಿಂದು ಒದ್ದೆ ಬಟ್ಟೆಯಲ್ಲಿಯೇ ಬರುತ್ತಿದ್ದ ಸುಕನ್ಯೆಯನ್ನು ಅಶ್ವಿನಿ ದೇವತೆಗಳು ಕಂಡು ಮೋಹಗೊಂಡು ಆಕೆಯನ್ನು ತಡೆದು ತಮ್ಮ ಅಭಿಪ್ರಾಯ ತಿಳಿಸಿದರು.ಮಹಾಪತಿವ್ರತೆಯಾದ ಅವಳು ಶಪಿಸಲು ಉದ್ಯುಕ್ತವಾದಾಗ ಭಯಪಟ್ಟ ಅವರು ತಮ್ಮನ್ನೇ ನಿಜರೂಪವನ್ನು ತೋರಿಸಿ ವರವನ್ನು ಬೇಡಿಕೊಳ್ಳುವಂತೆ ಹೇಳಿದರು. ಆಗ ಸುಕನ್ಯೆಯು  ತನ್ನ ಪಾತಿವ್ರತ್ಯದ ಮಹಿಮೆಯಿಂದ ತನ್ನ ಪತಿಗೆ ದೃಷ್ಟಿ ಬರುವಂತೆ ಬೇಡಿದಳು. ಅಶ್ವಿನಿ ದೇವತೆಗಳ ಪರೀಕ್ಷೆಯಲ್ಲಿ ಜಯಶಾಲಿಯಾದಳು. ಅಶ್ವಿನಿ ದೇವತೆಗಳು ತಾವು ಕೊಟ್ಟ ಮಾತಿನಂತೆ ಚ್ಯವನರಿಗೆ ಯೌವ್ವನವನ್ನೂ, ದೃಷ್ಟಿಯನ್ನೂ  ದಯಪಾಲಿಸಿದರು.  ಅಂದು ಅಶ್ವಿನಿ ದೇವತೆಗಳು ಚ್ಯವನನನ್ನು ಯುವಕನನ್ನಾಗಿ ಮಾಡಲು ಉಪಯೋಗಿಸಿದ ಔಷಧಿ ಇಂದಿಗೂ ‘ಚ್ಯವನಪ್ರಾಶ’ವೆಂದು ಪ್ರಸಿದ್ಧಿಯಲ್ಲಿದೆ.

ಚ್ಯವನನೂ ಅಶ್ವಿನಿ ದೇವತೆಗಳು ಕರುಣಿಸಿದ ತಾರುಣ್ಯ ಮತ್ತು ದೃಷ್ಟಿ ಲಾಭದ ಪ್ರತಿಫಲಕ್ಕಾಗಿ ತನ್ನ ಮಾವನಾದ ಶರ್ಯಾತಿ ರಾಜನಿಂದ ಯಜ್ಞವನ್ನು ಮಾಡಿಸಿ ಯಜ್ಞದಲ್ಲಿ ಅಶ್ವಿನಿ ದೇವತೆಗಳಿಗೆ ಹರ್ವೀರ್ ಭಾಗ ಕೊಡಿಸುವ ನಿಂದು ಪ್ರತಿಜ್ಞೆ ಮಾಡಿದನು. ನೀರಿನಲ್ಲಿ ಮುಳುಗಿ ತಪಸ್ಸು ಮಾಡಿದನು.

ಒಮ್ಮೆ ಚ್ಯವನನು ನೀರಿನಲ್ಲಿ ಮುಳುಗಿ ತಪಸ್ಸು ಮಾಡುತ್ತಿದ್ದಾಗ ಅಕಸ್ಮಾತ್ ಬೆಸ್ತರ ಬಲೆಗೆ ಸಿಕ್ಕಿಬಿದ್ದನು. ಬೆಸ್ತರು ತಮಗೆ ಬರುವ ಮೀನು ನಷ್ಟವಾಯಿತೆಂದು ಹಲುಬಿ  ಬೆದರಿಸುತ್ತಿರಲಿ ಆ ದಾರಿಯಾಗಿ ನಹುಷ ರಾಜನು ಬಂದು ಬೆಸ್ತರಿಗೆ ಚ್ಯವನನ  ತೂಕದಷ್ಟು ಚಿನ್ನವನ್ನು ಕೊಡುವೆನೆಂದು ಬಿಡಿಸಿದನು. ಆದರೆ ನಹುಷ ರಾಜ್ಯದ ಎಲ್ಲಾ ಚಿನ್ನವನ್ನು ತಂದು ಸುರಿದರೂ ತಕ್ಕಡಿ ತೂಗದಿರಲು  ರಾಜನಿಗೆ ಚಿಂತೆ ಹತ್ತಿತು.  ಆಗ ಗವಿ ಜಾತ ನೆಂಬ ಮುನಿ (ಆತನು ಗೋವಿನಲ್ಲಿ ಜನಿಸಿ ಜನಿಸಿದವನೂ, ಗೋವಿನ ಮಹಾತ್ಮೆ ತಿಳಿದವನು ಆಗಿದ್ದನು) ಬಂದು ಇಂತೆಂದನು ‘ ಮಹಾರಾಜಾ, ಪವಿತ್ರವಾದ ಬ್ರಾಹ್ಮಣ ದೇಹಕ್ಕೆ ಸರಿದೂಗುವಂತ ವಸ್ತು ಗೋವು ಮಾತ್ರ ಬೇರೆ ಯಾವುದೂ ಆಗಲಾರದು.  ಗೋವು ಸರ್ವದೇವತಾ ಮುಖಿ ಯಾಗಿದ್ದು,  ಅನರ್ಘ್ಯವಾದುದು ಎಂದು ಗೋವನ್ನು ತರಿಸಿ ತೂಗಲು ತಕ್ಕಡಿ ಸಮತೂಕವಾಯಿತು.

ಅಂತೂ ಗೋಮಾತೆಯ ತೂಕಕ್ಕೆ ಸರಿದೂಗುವ ಚ್ಯವನನ ಕಥೆ ವಿಚಿತ್ರವೂ ವಿಶೇಷವೂ ಆಗಿದೆ. ತಾನು ಸೋತು, ಸದ್ದಿಲ್ಲದೆ ಗೆಲ್ಲುವ ಚೈತನ್ಯಮೂರ್ತಿ ಚ್ಯವನ, ‘ಚ್ಯವನಪ್ರಾಶ’ದ  ಮೂಲಕವೇ ನೆನಪಿಸುತ್ತಲೇ ಇರುತ್ತಾರೆ ಅಲ್ಲವೇ!

-ವಿಜಯಾಸುಬ್ರಹ್ಮಣ್ಯ,ಕುಂಬಳೆ.

7 Responses

  1. Anonymous says:

    ಲೇಖನವನ್ನು ಪ್ರಕಟಿಸಿದ ಹೇಮಮಾಲಾ ಹಾಗೂ ಓದುಗರಿಗೆ ಆತ್ಮೀಯ ಧನ್ಯವಾದಗಳು

  2. ಬಿ.ಆರ್.ನಾಗರತ್ನ says:

    ಪುರಾಣದ ಕಥೆಗಳನ್ನು ಚೆಂದವಾಗಿ ಕಟ್ಟಿಕೊಡುವ ನಿಮ್ಮ ಪ್ರಯತ್ನಕ್ಕೆ ನನ್ನದೂಂದು ಅಭಿನಂದನೆ ಮೇಡಂ.

  3. Krishnaprabha says:

    ಸುಂದರ ಕಥೆ. ಸುಂದರ ನಿರೂಪಣೆ

  4. ಶಂಕರಿ ಶರ್ಮ says:

    ಮರೆತು ಹೋಗಿದ್ದಂತಿದ್ದ ಪುರಾಣ ಕತೆಯನ್ನು ನವಿರಾದ ನಿರೂಪಣೆಯೊಂದಿಗೆ ವಿಜಯಕ್ಕ ಉಣಬಡಿಸಿರುವಿರಿ..ಧನ್ಯವಾದಗಳು.

  5. Anonymous says:

    ಓದಿ ಮೆಚ್ಚಿಕೊಂಡ ಎಲ್ಲರಿಗೂ ಧನ್ಯವಾದಗಳು.

  6. Anonymous says:

    ಓದಿದ ಎಲ್ಲರಿಗೂ ಧನ್ಯವಾದಗಳು.

Leave a Reply to Hema Cancel reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: