ಪುಸ್ತಕ ನೋಟ: ಮೇಘದ ಅಲೆಗಳ ಬೆನ್ನೇರಿ

Share Button

ಶ್ರೀಮತಿ ಹೇಮಮಾಲಾ ಬಿ. ಮೈಸೂರು ಇವರು ಬರೆದ “ಮೇಘದ ಅಲೆಗಳ ಬೆನ್ನೇರಿ” ಅನ್ನುವ ಪ್ರವಾಸಕಥನದ ಪುಸ್ತಕದ ಬಗ್ಗೆ ಕಿರುವಿಮರ್ಶೆ.ಲಿವಿಂಗ್ ರೂಟ್ ಬ್ರಿಡ್ಜ್” (ಅಂದರೆ ಜೀವಂತ ಸೇತುವೆಗಳು) ಬಗ್ಗೆ ಕೇಳಿರುವಿರಾ? ಕಾಡ ತೊರೆಗಳನ್ನು ದಾಟಲು ಜೀವಂತ ಸೇತುವೆಗಳು. ಗುಡ್ಡಗಾಡು ಜನರ ಬುದ್ಧಿವಂತಿಕೆ ಹಾಗೂ ಪ್ರಕೃತಿಯ ಸಂಪನ್ನತೆ ಒಟ್ಟಿಗೆ ಮೇಳೈಸಿ ಹಲವು ಜೀವಂತ ಸೇತುವೆಗಳಿಗೆ ಸಾಕ್ಷಿಯಾಗಿರುವುದು ನಮ್ಮ ದೇಶದಲ್ಲಿರುವ ಪುಟ್ಟ ರಾಜ್ಯ ಮೇಘಾಲಯ. ಮೇಘಾಲಯ ಮಾತ್ರವಲ್ಲದೆ, ನಮ್ಮ ದೇಶದಲ್ಲಿರುವ ಹಲವು ರಾಜ್ಯಗಳ ಅಪರೂಪದ ತಾಣಗಳಿಗೆ ಚಾರಣಾಸಕ್ತರೊಡನೆ ಭೇಟಿ ನೀಡಿ, ತಮ್ಮ ಅನುಭವಗಳು, ಆ ಪ್ರದೇಶಗಳ ಭೌಗೋಳಿಕ ವಿಶಿಷ್ಟತೆ, ಸಂಸ್ಕೃತಿ, ಜನಜೀವನ ಇವೆಲ್ಲವನ್ನು ದಾಖಲಿಸಿ ಮೈಸೂರಿನ ಶ್ರೀಮತಿ ಹೇಮಮಾಲಾ ಬಿ ಅವರು “ಮೇಘದ ಅಲೆಗಳ ಬೆನ್ನೇರಿ” ಅನ್ನುವ ಕಿರುಹೊತ್ತಗೆಯನ್ನು ಬರೆದು ನಾಡಿನ ಎಲ್ಲಾ ನಿಸರ್ಗಪ್ರೇಮಿಗಳಿಗೆ ಹಾಗೂ ಚಾರಣಾಸಕ್ತರಿಗೆ ಅರ್ಪಣೆ ಮಾಡಿರುವರು. ಇವರು ಸುರಹೊನ್ನೆ ಅಂತರ್ಜಾಲ ಪತ್ರಿಕೆಯ ಸಂಪಾದಕಿಯೂ ಹೌದು.

ಪ್ರಕೃತಿಯ ಮಡಿಲಲ್ಲಿ ಅದೆಷ್ಟು ವೈಚಿತ್ರ್ಯಗಳು! ವಿಶ್ವವೊಂದಾದರೂ ಎಲ್ಲೆಡೆಯೂ ಒಂದೇ ಹವಾಮಾನವಿಲ್ಲ, ಒಂದೇ ರೀತಿಯ ಜನರಿಲ್ಲ. ಆಯಾಯ ಪ್ರದೇಶದ ಹವಾಮಾನ, ಸಂಸ್ಕೃತಿಗೆ ತಕ್ಕಂತೆ ಜನರ ಜೀವನ ಕ್ರಮ, ಆಹಾರ ಪದ್ಧತಿ, ಉಡುಗೆ ತೊಡುಗೆ, ಆಚರಣೆ ಎಲ್ಲವೂ ಬಿನ್ನವೇ. ಕೆಲವರಿಗೆ ವಿವಿಧ ಪ್ರದೇಶಗಳ ಜನರ ಬಗ್ಗೆ, ಅವರ ಜೀವನಶೈಲಿಯ ಬಗ್ಗೆ ತಿಳಿದುಕೊಳ್ಳುವ ಬಯಕೆ. ಇನ್ನು ಕೆಲವರಿಗೆ ಪಾರಂಪರಿಕ ಮತ್ತು ಐತಿಹಾಸಿಕ ಸ್ಥಳಗಳನ್ನು ನೋಡಿ, ಅಲ್ಲಿನ ಐತಿಹ್ಯವನ್ನು ತಿಳಿದುಕೊಳ್ಳುವ ಆಸೆ. ಇನ್ನು ಕೆಲವರಿಗೆ ಪ್ರಕೃತಿ ಮಾತೆಯ ಸೌಂದರ್ಯವನ್ನು ಮನಸೋ ಇಚ್ಛೆ ಸವಿಯುವ ಆಸೆ. ವಿವಿಧ ಊರುಗಳ ಪ್ರವಾಸಿ ತಾಣಗಳಿಗೆ ಪ್ಯಾಕೇಜ್ ಪ್ರವಾಸ ಏರ್ಪಡಿಸಿ ಜನರನ್ನು ಪ್ರವಾಸ ಕರೆದುಕೊಂಡು ಹೋಗುವ ಅದೆಷ್ಟೋ ಸಂಸ್ಥೆಗಳಿವೆ. ಅದೇ ರೀತಿ, ಸಾಹಸಿ ಪ್ರವೃತ್ತಿಯುಳ್ಳವರಿಗೆ ಪ್ರಕೃತಿಯೊಡನೆ ಒಂದಾಗಿ ಚಾರಣ ಹೋಗುವ ಬಯಕೆ. ಅಂತಹವರಿಗಾಗಿಯೇ ಚಾರಣ ಕಾರ್ಯಕ್ರಮಗಳನ್ನು ಆಯೋಜಿಸಿ, ಚಾರಣಕ್ಕೆ ಬೇಕಾದ ಸರ್ವ ವ್ಯವಸ್ಥೆಗಳನ್ನು ಮಾಡಿ, ಚಾರಣವನ್ನು ಯಶಸ್ವಿಗೊಳಿಸುವ ಹಲವು ಸಂಸ್ಥೆಗಳಿರುವುದು ಚಾರಣ ಪ್ರೇಮಿಗಳ ಪಾಲಿಗೆ ಸಂತಸದ ಸುದ್ದಿ. ಈ ಪುಸ್ತಕದಲ್ಲಿ ಹಲವು ಚಾರಣಯೋಗ್ಯ ಅಪರೂಪದ ತಾಣಗಳನ್ನು ಗುರುತಿಸಿ ವೈ.ಎಚ್. ಎ. ಐ.(YHAI) ಸಂಸ್ಥೆಯವರು ಹಮ್ಮಿಕೊಳ್ಳುವ ಸರಳ, ವ್ಯವಸ್ಥಿತ, ಮಿತವ್ಯಯಕರ ಚಾರಣಗಳ ಬಗ್ಗೆ ಮಾಹಿತಿ ಲಭ್ಯವಿದೆ.ಚಾರಣಪ್ರೇಮಿಗಳಿಗೆ ಅಗತ್ಯವಾಗಿ ಗೊತ್ತಿರಬೇಕಾದ ವಿಷಯ- ಯಾವ ಸ್ಥಳಕ್ಕೆ ಚಾರಣ ಹೋದರೆ ಒಳ್ಳೆಯದು, ಆ ಸ್ಥಳದ ಬಗ್ಗೆ ಸ್ವಲ್ಪವಾದರೂ ಪೂರ್ವ ಮಾಹಿತಿ ಇರಬೇಕಾಗುವುದು. ಚಾರಣಿಗರಿಗೆ ಉತ್ತಮ ಆರೋಗ್ಯ ಮತ್ತು ದೈಹಿಕ ಕ್ಷಮತೆ, ತಾಳ್ಮೆ, ಛಲ, ಯಾವುದೇ ಪರಿಸ್ಥಿತಿಯಲ್ಲೂ ಹೊಂದಿಕೊಂಡು ಹೋಗುವ ಮನೋಭಾವ, ಸಮಯದ ಪರಿಪಾಲನೆ, ಜೊತೆಗೆ ಚಾರಣಕ್ಕೆ ವ್ಯಯಿಸಲು ಬೇಕಾದ ಸಮಯ ಹಾಗೂ ಧನ ಎಲ್ಲವೂ ಇರಬೇಕಾಗುವುದು. ಇವೆಲ್ಲದರ ಜೊತೆಗೆ ಹವಾಮಾನದ ಪ್ರತಿಕೂಲ ಪರಿಣಾಮಗಳನ್ನು ಎದುರಿಸಲು ಬೇಕಾದಂತಹ ಎದೆಗಾರಿಕೆಯೂ ಬೇಕು. ಈ ಪುಸ್ತಕದಲ್ಲಿ ಇವುಗಳ ಬಗ್ಗೆಯೂ ಬಹಳಷ್ಟು ಮಾಹಿತಿಗಳು ಸಿಗುತ್ತವೆ.

‘ಮೇಘದ ಅಲೆಗಳ ಬೆನ್ನೇರಿ’
ಈ ಪುಸ್ತಕ ಓದುತ್ತಿದ್ದಂತೆ ಪ್ರಕೃತಿಯ ಹಲವಾರು ವಿಸ್ಮಯಗಳು, ಪ್ರಾಚೀನ ಸ್ಮಾರಕಗಳು- ಅವುಗಳ ಹಿಂದಿನ ಕಥೆಗಳು, ವಿವಿಧ ಪ್ರದೇಶಗಳ ಭೌಗೋಳಿಕ ಸ್ಥಿತಿ- ಅಲ್ಲಿನ ಜನರ ಜೀವನಕ್ರಮ, ಆಹಾರ ಪದ್ಧತಿ, ಉಡುಗೆ ತೊಡುಗೆಗಳು, ಪ್ರೇಕ್ಷಣೀಯ ಸ್ಥಳಗಳು ಅನಾವರಣಗೊಳ್ಳುತ್ತಾ ನಮ್ಮ ಕಣ್ಣ ಮುಂದೆ ಬರುತ್ತವೆ. ನವಿರಾದ ಸುಲಲಿತ ನಿರೂಪಣೆಯು ನಮ್ಮನ್ನು ಕಲ್ಪನಾ ಲೋಕಕ್ಕೆ ಕರೆದೊಯ್ಯುವಲ್ಲಿ ಸಫಲವಾಗಿದೆ. ತಾವು ನೋಡಿದ ಸ್ಥಳಗಳ ಭೌಗೋಳಿಕ ಭಿನ್ನತೆ, ವಿಶೇಷತೆ ಮಾತ್ರವಲ್ಲ ಅಲ್ಲಿನ ಜನರ ಆಹಾರ ಪದ್ಧತಿ, ಜೀವನ ಪದ್ಧತಿ, ಉಡುಗೆ ತೊಡುಗೆಗಳ ಬಗ್ಗೆಯೂ ಎಳೆ ಎಳೆಯಾಗಿ ವಿವರಿಸಿರುವ ಪರಿ ಓದುಗರನ್ನು ಹಿಡಿದಿಡುವಲ್ಲಿ ಯಶಸ್ವಿಯಾಗಿದೆ. ತಾವು ನೋಡಿದ ಕೆಲವು ಸ್ಥಳಗಳ ಐತಿಹಾಸಿಕ ಹಿನ್ನೆಲೆಯನ್ನೂ ಕೂಡಾ ಹಂಚಿಕೊಂಡಿದ್ದಾರೆ. ಅಷ್ಟು ಮಾತ್ರವಲ್ಲ ಆ ಸ್ಥಳಗಳನ್ನು ತಲುಪುವ ಬಗ್ಗೆಯೂ ಮಾಹಿತಿ ನೀಡಿದ್ದಾರೆ. ಚಾರಣದ ಸಮಯದಲ್ಲಿ ಸಂಭವಿಸಬಹುದಾದ ಸಮಸ್ಯೆಗಳ ಬಗ್ಗೆಯೂ ಬೆಳಕು ಚೆಲ್ಲಿರುವುದು ಮಾತ್ರವಲ್ಲ, ಚಾರಣದ ಸಿದ್ದತೆಯಲ್ಲಿರುವವರು ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆಯ ಕ್ರಮಗಳ ಬಗ್ಗೆಯೂ ಮಾಹಿತಿ ನೀಡಿದ್ದಾರೆ. ಪರಿಸರ ಪ್ರಜ್ಞೆ ಮೆರೆದ ಮಹನೀಯರನ್ನು, ಅಪರಿಚಿತರಾದ ತಮಗೆ ಪ್ರೀತಿಯ ಸಹೃದಯತೆ ತೋರಿದ ಜನರನ್ನು, ಪುಟ್ಟ ಸಹಾಯ ಮಾಡಿದವರನ್ನು ಕೂಡಾ ಸ್ಮರಿಸುವ ಲೇಖಕಿಯ ನಡೆ ತುಂಬಾ ಆಪ್ತವಾಗುತ್ತದೆ.
.
ಚಾರಣಾಸಕ್ತರ ಜೊತೆಗೆ ವಿವಿಧ ಸಮಯಗಳಲ್ಲಿ, ಮೇಘಾಲಯ, ಬಂಗಾಳ ಕೊಲ್ಲಿಯ ಸಮುದ್ರತೀರ, ಸುಂದರಬನ, ಟುರ್-ಟುಕ್, ನೇಪಾಳದ ಜೋಂಸಮ್, ಗುಜರಾತ್ ರಾಜ್ಯದ ಕಛ್, ತ್ರೀ ಈಡಿಯಟ್ಸ್ ಚಲನಚಿತ್ರದ ಮೂಲಕ ಪ್ರಸಿದ್ಧಿಯಾದ ರಾಂಚೋ ಸ್ಕೂಲ್, ಗುಜರಾತಿನ ಭುಜೋಡಿ ಸಂಸತ್ತು, ಕರ್ನಾಟಕದ ಭೀಮನ ಬೆಟ್ಟ, ಆಂಧ್ರಪ್ರದೇಶದ ಬೆಲಮ್ ಕೇವ್ಸ್, ಬದರಿ ಮುಂತಾದ ಸ್ಥಳಗಳಿಗೆ ಕೈಗೊಂಡ ಚಾರಣದ ಅನುಭವಗಳನ್ನು ದಾಖಲಿಸಿದ್ದಾರೆ. ಲೇಖನದ ಶೀರ್ಷಿಕೆಗಳು ಗಮನ ಸೆಳೆಯುತ್ತವೆ. ತಾವು ನೋಡಿದ ಪ್ರಕೃತಿ ಸೌಂದರ್ಯದ ವಿವರಣೆಗಳು ಅದೆಷ್ಟು ಸಹಜವಾಗಿವೆಯೆಂದದೆ ನಾವೇ ಅಲ್ಲಿದ್ದು ಆ ಸ್ಥಳಗಳನ್ನು ವೀಕ್ಷಿಸಿದಂತೆ ಭಾಸವಾಗುತ್ತದೆ. ಹಾಗೂ ಆ ಸ್ಥಳಗಳಿಗೆ ಭೇಟಿ ನೀಡುವ ಕನಸನ್ನು ಮೂಡಿಸುವಂತಿದೆ. ಒಟ್ಟಿನಲ್ಲಿ ಅಧ್ಯಯನ ಮಾಡುವವರಿಗೆ, ಚಾರಣಾಸಕ್ತರಿಗೆ, ನಿಸರ್ಗ ಪ್ರೇಮಿಗಳಿಗೆ ಹಾಗೂ ಪುಸ್ತಕಪ್ರೇಮಿಗಳಿಗೆ ತುಂಬಾ ಉಪಯುಕ್ತ ಪುಸ್ತಕ. ನೀವೂ ಕೊಂಡು ಓದುವಿರಲ್ಲವೇ?


– ಡಾ.ಕೃಷ್ಣಪ್ರಭಾ ಎಂ. ಮಂಗಳೂರು

8 Responses

  1. Hema says:

    ಡಾ.ಕೃಷ್ಣಪ್ರಭಾ ಅವರೇ, ಪ್ರವಾಸಕಥನವನ್ನು ಓದಿ, ಆತ್ಮೀಯವಾಗಿ ಪ್ರತಿಕ್ರಿಯಿಸಿದ ತಮ್ಮ ಪ್ರೀತಿಗೆ ಋಣಿ..

    • Krishnaprabha says:

      ನಿಮ್ಮ ವಿವರಣಾ ಶೈಲಿ ತುಂಬಾ ಚೆನ್ನಾಗಿದೆ. ಚಾರಣದ ಅನುಭವಗಳನ್ನು ದಾಖಲಿಸಿ, ಓದುಗರಿಗೆ ಮೇಘಾಲಯ ಹಾಗೂ ಇತರ ಪ್ರವಾಸಿ ತಾಣಗಳ ಪರಿಚಯವನ್ನು ಮಾಡಿಸಿರುವಿರಿ.

  2. ಬಿ.ಆರ್.ನಾಗರತ್ನ says:

    ಹೇಗಿದೆ ಅಲೆಗಳ ಬೆನ್ನೇರಿ ಪ್ರವಾಸ ಕಥನವನ್ನು ಅಡಕಗೂಂಡ ಲೇಖನ ಚೆನ್ನಾಗಿದೆ.ಅಭಿನಂದನೆಗಳು ಮೇಡಂ.

    • Krishnaprabha says:

      ನಿಮ್ಮ ಮೆಚ್ಚುಗೆಯ ನುಡಿಗಳಿಗೆ ಧನ್ಯವಾದಗಳು ನಾಗರತ್ನ ಅವರೇ….

  3. ನಯನ ಬಜಕೂಡ್ಲು says:

    ಮೇಘದ ಅಲೆಗಳ ಬೆನ್ನೇರಿ ಪ್ರವಾಸ ಕಥನ ಕನಸಿನ ಲೋಕದೊಳಗೆ ಸವಾರಿ ಮಾಡಿಸುತ್ತದೆ. ಚೆನ್ನಾಗಿದೆ ಮೇಡಂ ಪುಸ್ತಕ ಪರಿಚಯ.

    • Krishnaprabha says:

      ಮೆಚ್ಚುಗೆಯ ನುಡಿಗಳಿಗೆ ಧನ್ಯವಾದಗಳು ನಯನಾ. ನೀವೂ ಪುಸ್ತಕ ಓದಿರುವಿರಿ ಎಂದು ನನಗೆ ಗೊತ್ತು. ಪ್ರತಿಯೊಂದು ಸೂಕ್ಷ ವಿಷಯಗಳನ್ನು ದಾಖಲಿಸಿದ್ದಾರೆ ಹೇಮಮಾಲಾ ಅವರು. ಅಲ್ಲವೇ?

  4. ಶಂಕರಿ ಶರ್ಮ says:

    ವಿಶಿಷ್ಟವಾದ ಪುಸ್ತಕದ ಶೀರ್ಷಿಕೆಯೇ ವಿಶೇಷವಾಗಿದೆ..ಪ್ರಕೃತಿಯ ಸೊಗಡು ತುಂಬಿದೆ. ನವಿರಾದ ನಿರೂಪಣಾ ಶೈಲಿ, ತರ್ಕಬದ್ಧ ಸ್ಪಷ್ಟ ವಿವರಗಳಿಂದಾಗಿ ಹೇಮಮಾಲಾರವರ ಪ್ರವಾಸ ಲೇಖನಗಳು ಓದುಗರ ಮನದಲ್ಲಿ ವಿಶಿಷ್ಟ ಸ್ಥಾನವನ್ನು ಪಡೆದಿದೆ. ಅಷ್ಟೇ ಸತ್ವಪೂರ್ಣವಾಗಿ ಪುಸ್ತಕ ಪರಿಚಯ ಮಾಡಿದ ಪರಿ ತುಂಬಾ ಇಷ್ಟವಾಯಿತು… ಧನ್ಯವಾದಗಳು ಮೇಡಂ.

    • Krishnaprabha says:

      ನಿಮ್ಮ ಮೆಚ್ಚುಗೆಯ ಮಾತುಗಳಿಗೆ ಧನ್ಯವಾದಗಳು ಶಂಕರಿ ಮೇಡಂ

Leave a Reply to ಬಿ.ಆರ್.ನಾಗರತ್ನ Cancel reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: