ಅನುಸಂಧಾನದ ದಾರಿಗುಂಟ

Share Button

ಪ್ರಕಾಶ ಕಡಮೆ

ಆಶಾ ಜಗದೀಶ ನಮ್ಮ ನಡುವಿನ ಸೂಕ್ಷ್ಮ ಸಂವೇದನೆಯ, ಪ್ರತಿಭಾವಂತ, ಸದ್ದುಗದ್ದಲವಿಲ್ಲದೇ ನಿರಂತರವಾಗಿ ಕಥೆ, ಕಾವ್ಯ, ಅಂಕಣ, ಪ್ರಬಂಧ, ವಿಮರ್ಶೆ ಬರೆಯುತ್ತಿರುವ, ಬೆರಗು ಹುಟ್ಟಿಸುವ ಬರಹಗಾರ್ತಿ. “ನಾದಾನುಸಂಧಾನ” ಇದು ‌ಇವರ ಪ್ರಥಮ‌ ಅಂಕಣ ಬರಹದ ಸಂಕಲನ. ಬಹುಶಃ ಈ ಎಲ್ಲಾ ಬರಹಗಳೂ “ಕೆಂಡ ಸಂಪಿಗೆ” ಯ ಅಂಕಣಗಳೇ. ಇಲ್ಲಿ ಪ್ರಮುಖವಾಗಿ ಪ್ರಸ್ತುತ ಸಂದರ್ಭದ‌ ಆಶಾದಾಯಕ ಬರಹಗಾರರ ಪುಸ್ತಕ ಪರಿಚಯ / ವಿಮರ್ಶೆಗಳೇ ಇರುತ್ತದೆ. ಆಶಾ ತಾವೂ ಬರೆದರು, ಸಮಕಾಲೀನ ಬರಹಗಾರರ ಬರಹಗಳನ್ನು ಬೆರಗುಗಣ್ಣಿನಿಂದ ಕಂಡು ಅವುಗಳ ಕುರಿತು ಪತ್ರಿಕೆ, ಅಂತರ್ಜಾಲಗಳಲ್ಲಿ ಬರೆದು‌ ಅವರ ಪುಸ್ತಕಗಳಿಗೂ ತಮ್ಮ‌ ಇತಿ ಮಿತಿಯ ನಡುವೆ ನ್ಯಾಯ ಒದಗಿಸಿದರು. ಚೌಕಟ್ಟು ಗೀಚಿಕೊಂಡು ಬದುಕಲು ನನಗೆ ಬರುವದಿಲ್ಲ ಎನ್ನುತ್ತಾ ಓದಿನ ವಿಸ್ತಾರದ ಹಿನ್ನೆಲೆಯಲ್ಲಿ ತಮ್ಮದೇ ಶೈಲಿಯಲ್ಲಿ ‌ಅನುಭವವನ್ನು ಹಂಚಿಕೊಳ್ಳುತ್ತಾ, ತನ್ನೊಳಗಿನ ತುಮುಲಗಳಿಗೆ, ಅಚ್ಚರಿಯ ತಾಕಲಾಟಗಳಿಗೆ ಚೆಂದದ ಭಾವ-ಭಾಷೆಗಳಿಗೆ ಸಾಕ್ಷಿಯಾಗಿರುವರು.

ಕಮಲಾ ಹೆಮ್ಮಿಗೆಯವರ ಸಂಕಲನದ ಕುರಿತು ಬರೆಯುತ್ತಾ ‌ಅವರು ದಾಖಲಿಸಿದ ಕೆಲ ಸಾಲುಗಳ ವಿಷಯಗಳು ನಿಜವಾಗಿಯೂ ‌ಆಘಾತಕಾರಿ‌ ಎಂದು ನೆನೆದಾಗ ಮೈ ಜುಂ ಎನ್ನುವದು. “ದೇವರ ನಾಡಲ್ಲಿ ( ಕೇರಳ ) ಹೆಣ್ಣುಕ್ಕಳು ತಮ್ಮ ಸ್ತನದ ಗಾತ್ರಕ್ಕೆ ತಕ್ಕಂತೆ ಕರಕಟ್ಟಬೇಕಿತ್ತು…… ಒಮ್ಮೆ‌ಒಬ್ಬ ಮಹಿಳೆ ತನ್ನ ಸ್ತನಗಳನ್ನು ಬಚ್ಚಿಟ್ಟುಕೊಂಡದ್ದಕ್ಕೆ ಆ ರಾಜ್ಯದ ರಾಣಿ ಅವಳ ಸ್ತನಗಳನ್ನು ಕೊಯ್ಯುವ ಶಿಕ್ಷೆಯನ್ನು ನೀಡುತ್ತಾಳೆ…. ” ಎಂಬ ದಿಗ್ಬ್ರಾಂತಿ ವಿಷಯಗಳೂ ಇಲ್ಲಡಗಿದೆ.

ಕಥಾ ಲೋಕದ ಹೊಸ ನೀರು ‌ಅಧ್ಯಾಯದಲ್ಲಿ ಯುವ ಕಥೆಗಾರರಾದ‌ ಅಜಿತ್ ಹೆಗಡೆ, ಹರೀಶ್‌ಟಿ.ಜಿ, ಸ್ವಾಮಿ ಪೊನ್ನಾಚಿ ಮತ್ತು ಟಿ.ಎಸ್.ಗೊರವರರ ಕಥೆಗಳ ಕುರಿತು‌ ಉಲ್ಲೇಖಿಸುತ್ತಾ, ಇತ್ತೀಚಿನ ಕಥಾ ಪ್ರಪಂಚ ಬಹಳ ಆಶಾದಾಯಕವಾಗಿದೆ ; ಹೊಸ ಕಥೆಗಾರರ ಹೊಸದೇ ಪರಿಭಾಷೆಯ ಕಥೆಗಳಿಂದಲೂ ವೇದ್ಯ. ಹೊಸ ಸಂವೇದನೆಯುಳ್ಳ ವೈಶಿಷ್ಟ್ಯಪೂರ್ಣ ಕಥೆಗಳು ಇಲ್ಲಿವೆ ‌ಎನ್ನುತ್ತಾ ‌ಇವರ ಕಥೆಗಳ ಹಂದರವನ್ನು ಹೃದಯಂಗಮವಾಗಿ ಬಿಚ್ಚಿಡುವರು.

ಇತ್ತೀಚಿಗೆ ಕಾವ್ಯಲೋಕದಲ್ಲಿ ಹೆಸರು ಮಾಡಿದ ಸ್ಮಿತಾ ಅಮೃತರಾಜ್‌ರ
ಎದೆಯೊಳಗೊಂದು ಚುಚ್ಚುವ ನೋವಿದ್ದರೆ ಮೂಗು
ಚುಚ್ಚಿಸಿಕೋ

ಕಾವ್ಯಾ ಮನೆಮನೆಯವರ
ಅಮ್ಮನೆದೆಯಲ್ಲಿ ನೂರು ಹೂಗಳ ಪರಿಷೆ
ಪೇಪರಿನ ಮರೆಯಲ್ಲಿ ತುಳುಕಿದ್ದು
ಅಪ್ಪನ ಮೀಸೆ

ಭುವನಾ ಹಿರೇಮಠರ
ನಾನು ನೀನು ಯಾವ ಮರದ ಚಿಗುರು
ಹಸಿರಾಗಿಯೇ ಇರಲು…

ಹೀಗೇ ಶುಭಾ ನಾಡಿಗ್, ವಿದ್ಯಾರಶ್ಮಿ ಪೆಲತ್ತಡ್ಕ, ಮಂಜುಳಾ ಹಿರೇಮಠ, ನಾಗರೇಖಾ ಗಾಂವಕಾರ, ನಂದಿನಿ ಹೆದ್ದುರ್ಗಾ, ಅನುರಾಧಾ ಸಾಮುಗ, ಪೂರ್ಣಿಮಾ ಸುರೇಶ್, ಕಾದಂಬಿನಿ, ಶೋಭಾ ಹಿರೇಕೈ,ರೂಪಶ್ರೀ ಕಲ್ಲಿಗನೂರರ ಕಾವ್ಯಗಳನ್ನು ವಿಶ್ಲೇಷಿಸಿ ಇಲ್ಲಿಯ‌ ಒಂದೊಂದು ಕವಿತೆಯೂ ಭಿನ್ನ ಮಾದರಿ, ಭಾಷೆಯನ್ನು‌ಅತ್ಯಂತ ಸಮರ್ಪಕವಾಗಿ ಬಳಸಿಕೊಳ್ಳಲಾಗಿದೆ. ಹೊಸ ತಲೆಮಾರಿನ ಕವಯತ್ರಿಯರು ಭರವಸೆ ಹುಟ್ಟಿಸುತ್ತಾ ಪ್ರಮಾಣಾತ್ಮಕವಾಗಿ ಬರೆಯುತ್ತಿರುವದು ನಿಜವಾಗಿಯೂ‌ ಆಶಾಕಿರಣವೇ. ಇಲ್ಲಿ ಕಣ್ಣೀರು, ಗೋಳಾಟ, ಹತಾಶೆಗಳ ಜೊತೆಯಲ್ಲೇ ಬದುಕಿನ ಲವಲವಿಕೆಗಳಿವೆ. ಈ ಎಲ್ಲಾ ಕವಿತೆಗಳೂ ಆತ್ಮ ವಿಶ್ವಾಸದ ಪ್ರತೀಕವಾಗಿದೆ’ ಎಂದಿರುವರು.

ಹಿರಿಯರಾದ ಜಯಂತ ಕಾಯ್ಕಿಣಿ, ಸಿದ್ಧಲಿಂಗಯ್ಯ, ಪಾರ್ವತಿ ಐತಾಳ, ವೈದೇಹಿ, ಕಮಲಾ ಹೆಮ್ಮಿಗೆ, ಗೋವಿಂದ ಹೆಗಡೆ, ಜಿ.ಕೆ.ರವೀಂದ್ರಕುಮಾರ, ಎಂ.ಆರ್. ಕಮಲಾ, ಪ್ರತಿಭಾ ನಂದಕುಮಾರ, ಗೀತಾ ವಸಂತರ ಬರಹಗಳನ್ನೂ ಸಮರ್ಪಕವಾಗಿ ವಿಶ್ಲೇಷಿಸಿ ತಮ್ಮದೇ ವೈಶಿಷ್ಟ್ಯತೆಗಳ ಮೂಲಕ ಅಕ್ಷರಗಳನ್ನು ಮೂಡಿಸಿರುವರು.

“ಮಗು ನೀನು ನನ್ನೊಡಲಲ್ಲಿ ಮೊಳಕೆಯೊಡೆದ ದಿನ ಜಗತ್ತಿನ ಯಾವ ಮಗುವೂ ಅನಾಥವಾಗದಿರಲಿ” ಎಂಬ ವಿಭಾಳ ಸಾಲುಗಳನ್ನು ನೆನಪಿಸುತ್ತಾ ….
ಈ ಸರಹೊತ್ತಿನಲಿ…. ಅಷ್ಟು ತೀವ್ರವಾಗಿ ಬದುಕು‌ ಅವಸರವೇನಿತ್ತು ‌ಎನ್ನುವ ಪ್ರಶ್ನೆಗಳ ನೆನಪಿಸಿರುವರು.

“ಅಡುಗೆ ಮನೆಯೆಂಬ ಅಕ್ಷಯಪಾತ್ರೆ” ಲೇಖನದಲ್ಲಿ ಮೀನುಗಳ ಬಗ್ಗೆ ಬರೆಯುತ್ತಾ, ಕಾಜೂರ ಸತೀಶ್, ರೇಣುಕಾ ರಮಾನಂದ, ಕಾವ್ಯಕಡಮೆ ನಾಗರಕಟ್ಟೆ, ಪ್ರತಿಭಾ ನಂದಕುಮಾರ್‌ರ ಸಾಲುಗಳ ನೆನಪಿಸಿ ಮೀನಪೇಟೆಯ “ಘಂ” ನೆಯ ಪರಿಮಳಕೆ ನಮ್ಮನ್ನು ಕೊಂಡ್ಯೊಯ್ಯುವರು; ಆಶಾ.

ರೇಣುಕಾಳ ಮೀನಿನ ಕವಿತೆ,
ಊಟದ ಜೊತೆ ಮೀನು ಫ್ರೈ
ಇಲ್ಲದಿದ್ದರೆ ಇವನಿಗೆ
ಸಿಟ್ಟು ಬರುತ್ತದೆ
ನನಗೋ ಕತ್ತು ಕತ್ತರಿಸಿ ಕರುಳು ಬಗೆದು
ಬ್ಯಾಡಗಿ ಮೆಣಸಿನ ಖಾರ
ಬಳಿಯುವಾಗ ಕಣ್ಣಲ್ಲಿ ನೀರು….. ಹಾಗೂ

ಕಾವ್ಯಾಕಡಮೆ ನಾಗರಕಟ್ಟೆಯ,
ಜ್ವಲಿಸುವ ಎಣ್ಣೆಯ ಕುರುಹಿನಂತೆ
ಚುಶ್‌ಚುಶ್ ಸದ್ದು ಮಾಡಿ
ಬೆಂದಿಲ್ಲವೆಂದು ಮೀನು ಸೂಚಿಸಬೇಕು
ಮೈಗೊತ್ತಿಕೊಂಡು ‌ಎಣ್ಣೆಯ ಕುದಿಯ
ಸಣ್ಣ ಬೆಂಕಿಯ ಮೇಲೆ ಬೇಯಬೇಕು
ಪ್ರತೀ ಹುರಿ ಮೀನ ರುಚಿಯ ಹಿಂದೆ
ಇಂಥವೇ‌ ಒಂದೊಂದು ಕಥನ…..

ಎನ್ನುತ್ತಾ ಮೀನಿನೊಂದಿಗೆ ಹೆಣ್ಣಿನ ಮನದ ತುಮುಲವನ್ನು ಚಿತ್ರಿಸಿದ್ದನ್ನು ಆಶಾ ಉಲ್ಲೇಖಿಸಿ ಅಕ್ಷಯ ಪಾತ್ರೆಯ ಹಿಂದಿನ ಮನೆಯೊಡತಿಯ ತ್ಯಾಗವನ್ನು ನೆನಪಿಸಿರುವರು.

ಹೀಗೆ ಈ “ನಾದಾನುಸಂಧಾನ” ದಲ್ಲಿ 26 ತಾಜಾತನದಿಂದ ಕೂಡಿದ ವೈವಿದ್ಯಮಯ ಲೇಖನಗಳಿವೆ. ಕಥಾಲೋಕದ ಹೊಸನೀರು, ಅವಳು ಮತ್ತು ಅವಳ ಅಸ್ಮಿತೆ, ಹೆಣ್ಮನಗಳ ಕಾವ್ಯದ ಜಾಡು ಹಿಡಿದು, ಕೇರಳ ಕಾಂತೇಯರು, ಈ ಭಾವಕ್ಕೆ‌ ಏನೆಂದು ಹೆಸರಿಡಲಿ, ಕಥೆಗಾರ ಕುವೆಂಪು….. ಮುಂತಾದವು ಈ ಪುಸ್ತಕದ ಮಹತ್ವಪೂರ್ಣ ಲೇಖನಗಳು.

ಪ್ರೀತಿಯನ್ನು ಮುಚ್ಚಿಟ್ಟುಕೊಂಡು ದ್ವೇಷವನ್ನೇ ಹಂಚಿಕೊಳ್ಳುವ ಕಾರಣವಾದರೂ ಏನು ?ಎಂದು ಪ್ರಶ್ನಿಸುವ ಆಶಾ ಜಗದೀಶ್, ತನ್ನ ‌ಎಲ್ಲಾ ಬರವಣಿಗೆಯ ಹಿಂದಿನ ಶಕ್ತಿ, ಕೆಂಡ ಸಂಪಿಗೆಯ‌ ಅಬ್ದುಲ್ ರಶೀದರನ್ನು ಮನಸಾರೆ ನೆನೆದು, ಅವರು ಕೊಟ್ಟ ‌ಅವಕಾಶದಿಂದ ನನ್ನ ಬರವಣಿಗೆ ರೂಪಗೊಂಡವು‌ ಎಂದು, ಆ ಬರಹಗಳಿಗೆ ಸಿಕ್ಕ ಸ್ಪಂದನೆ ಬದುಕಿನುದ್ದಕ್ಕೂ ಮರೆಯಲಾರೆ‌ ಎಂದಿರುವರು.

“ಛಂದ”ದ ಕಥೆ ಬರೆಯುವ ಪ್ರಮುಖ ಲೇಖಕಿ, ಶಾಂತಿ ಕೆ. ಅಪ್ಪಣ್ಣಾತಮ್ಮ ಬೆನ್ನುಡಿಯಲ್ಲಿ, “ಆಶಾ ಅವರ‌ ಅಂಕಣ ಬರಹಗಳು, ನಮ್ಮನ್ನು ಮೇಲ್ಮೇಲೆ ತೇಲಿಸಿದಂತೆ ಕರೆದೊಯ್ಯುವದಿಲ್ಲ… ಆಳಕ್ಕಿಳಿಸುತ್ತದೆ”  ಎಂದರೆ‌ ಇನ್ನೊಬ್ಬ ಹಿರಿಯ ಬರಹಗಾರ್ತಿ ಜಯಶ್ರೀ ಕಾಸರವಳ್ಳಿ “ನಿಮ್ಮ ಲೇಖನಗಳನ್ನು ಓದುವಾಗಲೆಲ್ಲಾ‌ ಅಂತಃಕರಣದಿಂದ ನೇರ ಬಂದ ಬರವಣಿಗೆಯಂತೆ ಅನಿಸುವದು. ಸಾಹಿತ್ಯದ ಆಳವಾದ ಅರಿವು ಇವೆಲ್ಲಾ ಲೇಖನಗಳನ್ನೂ ಸಂಗ್ರಹ ಯೋಗ್ಯವಾಗಿಸಿದೆ” ಎಂದಿರುವರು. ಅಂಕಣಕಾರ್ತಿ ದೀಪಾ ಹಿರೇಗುತ್ತಿ‌ ಇಲ್ಲಿಯ ಲೇಖನಗಳ ಕುರಿತು ಬರೆಯುತ್ತಾ ” ಆಶಾ ಇಲ್ಲಿ ತಮ್ಮ ಅನುಭವಗಳನ್ನು ದಾಖಲಿಸುತ್ತಾ ‌ಒಂದು ವಿಶಿಷ್ಟ ಎನ್ನಬಹುದಾದ ಶೈಲಿಯನ್ನು ರೂಢಿಸಿಕೊಂಡಿದ್ದಾರೆ. ಕವಯತ್ರಿ‌ ಎಂಬುದನ್ನು ಸಾಬೀತಪಡಿಸುವ ಗದ್ಯ ‌ಅವರದ್ದು” ಎಂದಿರುವರು.

ಇಂಗ್ಲಿಷ್‌ ಎಂ.ಎ ಓದಿ ಗೌರಿಬಿದನೂರಿನಲಿ ಶಿಕ್ಷಕಿಯಾಗಿರುವ ಆಶಾರ ಬದುಕು-ಬರಹ, ವೃತ್ತಿ-ಪ್ರವೃತ್ತಿಗೆ ಶುಭಕೋರುತ್ತಾ ಈ ಪುಸ್ತಕಕ್ಕಾಗಿ ಅಭಿನಂದಿಸುವೆನು.

-ಪ್ರಕಾಶ ಕಡಮೆ , ಹುಬ್ಬಳ್ಳಿ .

6 Responses

  1. Ajit S H says:

    ಓದುತ್ತಾ ಇದ್ದೇನೆ, ಒಳ್ಳೆಯ ಅಂಕಣ ಗುಚ್ಛ. ಧನ್ಯವಾದಗಳು.

  2. ನಯನ ಬಜಕೂಡ್ಲು says:

    ಚೆನ್ನಾಗಿದೆ ಪುಸ್ತಕ ಪರಿಚಯ

  3. ರೇಣುಕಾ ರಮಾನಂದ says:

    ಚಂದ ಬರೆದಿದ್ದೀರಿ

  4. Hema says:

    ಸೊಗಸಾದ ಪುಸ್ತಕ ಪರಿಚಯ.

  5. ಶಂಕರಿ ಶರ್ಮ says:

    ಉತ್ತಮ ಪುಸ್ತಕವೊಂದರ ಪರಿಚಯ ಮತ್ತು ವಿಮರ್ಶೆ ಸೊಗಸಾಗಿ ಮೂಡಿಬಂದಿದೆ. ಧನ್ಯವಾದಗಳು ಸರ್.

Leave a Reply to Hema Cancel reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: