ಸಂತೆಯೊಳಗೊಂದು ಸುತ್ತು….
‘ಚಿಂತೆಯಿಲ್ಲದವನಿಗೆ ಸಂತೆಯಲ್ಲೂ ನಿದ್ದೆ’ ನಮ್ಮ ವಿದ್ಯಾಭ್ಯಾಸದ ಸಮಯದಲ್ಲಿ ಬಹಳಷ್ಟು ಸಾರಿ ಶಾಲೆಯಲ್ಲಿ ಗುರುಗಳು ಮತ್ತು ಮನೆಯಲ್ಲಿ ಹಿರಿಯರು ಮಕ್ಕಳಿಗೆ ಎಚ್ಚರಿಸಿ ಬುದ್ದಿ ಹೇಳುವಾಗ ಒಮ್ಮೆಯಾದರೂ ಅವರ ನಾಲಗೆಯ ಮೇಲೆ ಈ ಜನಪ್ರಿಯ ಗಾದೆ ಮಾತು ಮಿಂಚಿನಂತೆ ಸುಳಿದು ಹೋಗುತ್ತಿತ್ತು.
ನಾನು ಪ್ರೌಢಶಾಲೆ ಓದುವ ಸಮಯದಲ್ಲಿ ಮನೆ-ಸಂತೆ-ಶಾಲೆ ಇವು ಮೂರು ಒಂದು ರೀತಿ ಸರಪಳಿಯ ಕೊಂಡಿಗಳಂತೆ ಒಂದರೊಳಗೊಂದು ಬೆಸೆದಂತಿದ್ದವು. ನಾವಾಗ ಹೊಲದಲ್ಲಿ ತರಕಾರಿ ಬೆಳೆಯುತ್ತಿದ್ದೆವು. ಬೆಳಿಗ್ಗೆ ಶಾಲೆಗೆ ಹೋಗುವಷ್ಟರಲ್ಲಿ ತರಕಾರಿಗಳನ್ನೆಲ್ಲ ಬಿಡಿಸಿ, ಚೀಲಗಳಿಗೆ ತುಂಬಿಸಿ, ಸೈಕಲ್ಲಿನ ಮೇಲಿಟ್ಟುಕೊಂಡು ಬಸ್ಸಿನ ಬಳಿಗೆ ಹಾಕಬೇಕಿತ್ತು. ನಮ್ಮದೊಂದು ಚಿಕ್ಕ ಹಳ್ಳಿಯಾಗಿದ್ದು, ನಾವು ಬಸ್ಸಿಗೆಂದು ಹೋಗಬೇಕೆಂದರೆ ನಮ್ಮ ಹಳ್ಳಿಯಿಂದ ಒಂದೂವರೆ ಮೈಲಿ ದೂರದಷ್ಟಿರುವ ಗೇಟಿಗೆ ಹೋಗಬೇಕಿತ್ತು. ಅಲ್ಲಿಯೂ ಸಹ ಒಂದು ಬಸ್ಸು ತಪ್ಪಿದರೆ ಮತ್ತೊಂದು ಬಸ್ಸಿಗಾಗಿ ಗಂಟೆಗಟ್ಟಲೆ ಕಾಯಬೇಕಿತ್ತು. ಅಪ್ಪ ವಾರದಲ್ಲಿ ಮೂರ್ನಾಲ್ಕು ದಿನ ಬೇರೆ ಬೇರೆ ಸಂತೆಗೆ ಹೋಗುತ್ತಿದ್ದರು. ವಾರದಲ್ಲಿ ಆ ಮೂರ್ನಾಲ್ಕು ದಿನವು ನನಗಿದು ಖಾಯಂ ಕೆಲಸವಾಗಿತ್ತು. ಅಪ್ಪ ತರಕಾರಿಯಿಟ್ಟುಕೊಂಡು ಹೊರಡುವ ಬಸ್ಸಿನ ಸಮಯ ನನಗೆ ಶಾಲೆ ಶುರುವಾಗುವ ಸಮಯ ಒಂದೇ ಆಗಿದ್ದುದರಿಂದ, ಜೊತೆಗೆ ಬಸ್ ನಿಲುಗಡೆ ಸಹ ನಮ್ಮ ಶಾಲೆಯ ಪಕ್ಕದಲ್ಲೇ ಇದ್ದಿದ್ದು ನನಗೆ, ನಮ್ಮ ಮನೆಗೆ ಅನುಕೂಲವೆ ಆಗಿತ್ತು. ಬೆಳಿಗ್ಗೆಯೇ ಹೊಲಕ್ಕೆ ಹೋಗಿ ಮನೆಯವರ ಜೊತೆ ತರಕಾರಿ ಬಿಡಿಸಿ, ಚೀಲಕ್ಕೆ ತುಂಬಿಸಿ, ಮನೆಗೆ ಬಂದು ಶಾಲೆಗೆ ತಯಾರಾಗುತ್ತಿದ್ದೆ. ತರಕಾರಿ ಚೀಲಗಳನ್ನ ಸೈಕಲ್ಲಿನಲ್ಲಿ ಬಸ್ ನಿಲುಗಡೆಗೆ ಸಾಗಿಸಿ, ಅಲ್ಲಿಂದ ಶಾಲೆಗೆ ಹೋಗುತ್ತಿದ್ದೆ.
ಹೀಗೆ ವಾರದಲ್ಲಿ ಮೂರ್ನಾಲ್ಕು ದಿನ ಬೇರೆ ಬೇರೆ ಸಂತೆಗಳಿಗೆಂದು ಬಸ್ಸು ಹಿಡಿಯುತ್ತಿದ್ದ ಅಪ್ಪ ಮಂಗಳವಾರ ಬಸ್ಸಿಗೆ ಕಾಯುತ್ತಿರಲಿಲ್ಲ. ಯಾಕೆಂದರೆ ಆ ದಿನ ನಮ್ಮೂರ ಸಂತೆ. ಆದರೆ ಆ ಸಂತೆ ನಡೆಯುತ್ತಿದ್ದುದು ನಮ್ಮ ಪುಟ್ಟ ಹಳ್ಳಿಯಲ್ಲಲ್ಲ. ನಮ್ಮ ಶಾಲೆ ಮತ್ತು ಬಸ್ ನಿಲುಗಡೆಯ ಗೇಟಿನ ಸಮೀಪದಲ್ಲಿ ಒಂದು ಸಂತೆ ಮೈದಾನವಿದ್ದು, ಸಂತೆ ನಡೆಸುವ ಸಲುವಾಗಿಯೇ ಮೀಸಲಾದ ಪ್ರದೇಶದಲ್ಲಿ ಪ್ರತಿ ಮಂಗಳವಾರ ಸಂತೆ ಸೇರುತ್ತಿತ್ತು. ಸುತ್ತಮುತ್ತಲಿನ ಆರೇಳು ಹಳ್ಳಿಗಳಿಗೂ ಅದೊಂದೇ ಸಂತೆಯಾಗಿದ್ದು, ಅಷ್ಟೂ ಹಳ್ಳಿಯ ಜನರು ಅದನ್ನು ‘ನಮ್ಮೂರ ಸಂತೆ’ ಎಂದು ಒಪ್ಪಿಕೊಂಡಿದ್ದರು.
ನಾನಂತೂ ಸಂಜೆ ಶಾಲೆ ಬಿಟ್ಟ ಕೂಡಲೇ ಬೆರಗಿನಿಂದ ಸಂತೆಯ ವೈಭೋಗವನ್ನು ಕಣ್ತುಂಬಿಕೊಳ್ಳುತ್ತಿದ್ದೆ. ಆ ಸಂತೆಯ ಚಿತ್ರಣವಿನ್ನೂ ಕಣ್ಣಿಗೆ ಕಟ್ಟಿದಂತೆ ಮನದಲ್ಲಿ ದಾಖಲಾಗಿದೆ. ದೊಡ್ಡ ದೊಡ್ಡ ಹುಣಸೆ ಮರಗಳ ನೆರಳು ಸಂತೆಯ ಉದ್ದಗಲಕ್ಕೂ ಚಾಚಿಕೊಂಡಿರುತ್ತಿತ್ತು. ಸಂತೆ ಪ್ರವೇಶಿಸುವವರನ್ನು ಒಂದು ಬದಿಯಲ್ಲಿ ಜಿಲೇಬಿ ಮತ್ತು ಬೋಂಡದ ಅಂಗಡಿ ಸ್ವಾಗತಿಸಿದರೆ, ಇನ್ನೊಂದು ಬದಿಯಲ್ಲಿ ಬೀಗ ಮತ್ತು ಕೊಡೆ ರಿಪೇರಿಯ ಅಂಗಡಿ ಸಂತೆಯ ಬಾಗಿಲು ತೆರೆಯುತ್ತಿತ್ತು. ಒಂದು ಸಾಲಿನುದ್ದಕ್ಕೂ ತರಕಾರಿಯ ಅಂಗಡಿಗಳು, ಅದಕ್ಕೆ ಹೊಂದಿಕೊಂಡು ಎಲೆಯಡಿಕೆ ಹೊಗೆಪುಡಿ ಹೊಗೆಸೊಪ್ಪು ಮಾರುವವರು, ಪಕ್ಕದಲ್ಲಿ ಶೆಟ್ಟರ ದಿನಸಿ ಅಂಗಡಿ, ಅವರುಗಳ ಎದುರು ಸಾಲಿನಲ್ಲಿ ಈರುಳ್ಳಿ ಬೆಳ್ಳುಳ್ಳಿ ವ್ಯಾಪಾರಸ್ಥರು, ಅವರ ಪಕ್ಕಕ್ಕೆ ಸೀಗಡಿ ಮೀನಿನ ಅಂಗಡಿ, ನಾಲ್ಕು ಹೆಜ್ಜೆ ಮುಂದೆ ಸಾಗಿದರೆ ಬಟ್ಟೆ ವ್ಯಾಪಾರಿಗಳು, ಅದರ ಎದುರಿನಲ್ಲಿ ಕಡಲೆಪುರಿ ಉಪ್ಪುಕಡಲೆ ಚಿನುಕುರಳಿ ಮಾರುವ ಅಂಗಡಿ, ಮತ್ತೊಂದು ಸಾಲಿನಲ್ಲಿ ಅರಿಶಿಣ ಕುಂಕುಮ ವಿಭೂತಿ ಮಾರುವ ಅಂಗಡಿ, ಪಕ್ಕದಲ್ಲೆ ಕನ್ನಡಿ ಬಾಚಣಿಗೆ ಜೊತೆಗೆ ಬೀಗ ಕೊಡೆ ಮಾರುವವರು, ಇನ್ನೂ ಮುಂದೆ ಸಾಗಿದರೆ ತಟ್ಟೆ ಚೊಂಬು ಲೋಟಗಳ ಜೊತೆ ಸಣ್ಣಪುಟ್ಟ ಪಾತ್ರೆಗಳ ವ್ಯಾಪಾರಸ್ಥರು, ಹೊಂದಿಕೊಂಡು ಮಡಿಕೆ ಕುಡಿಕೆ ಮಾರುವ ಕುಂಬಾರರು, ಅಲ್ಲಿಂದ ಐದಾರು ಮಾರು ದೂರದ ಮರದ ನೆರಳಿನಲ್ಲಿ ಬೀಡಿ ಸೇದುತ್ತ ಕುಳಿತಿರುತ್ತಿದ್ದ ಎತ್ತುಗಳ ಲಾಳದ ಸಾಬರು.. ಹೀಗೆ ಸಂತೆಯೊಂದು ಹತ್ತು ಹಲವು ಜಾತಿಯ ಜನರನ್ನು ‘ವ್ಯಾಪಾರ ಧರ್ಮ’ದ ಸಲುವಾಗಿ ಒಂದೇ ಮೈದಾನದಲ್ಲಿ ಒಂದೆಡೆ ಕಲೆಹಾಕುತ್ತಿತ್ತು.
ಇಲ್ಲಿ ಮಡಿಕೆ ಕುಡಿಕೆ ಮಾರುವ ಕುಂಬಾರರು ಅದೇ ಊರಿನವರಾಗಿದ್ದರೂ ಸಹ ಮನೆಗೆ ಬಂದು ಕೊಳ್ಳಲೆಂದು ಮನೆಯಲ್ಲೆ ಕೂರುತ್ತಿರಲಿಲ್ಲ. ಉಳಿದ ದಿನಗಳಲ್ಲಿ ಹುಡುಕಿಹೋಗಿ ಮನೆಯ ಬಳಿ ಕೊಳ್ಳುವವರಿದ್ದರೂ, ಒಂಚೂರು ಹೆಚ್ಚುಕಮ್ಮಿಯಾದರೂ ಫಳ್ಳೆಂದು ಚೂರು ಚೂರಾಗುವ ಮಡಿಕೆ ಕುಡಿಕೆ ಜೊತೆಗೆ ಮಣ್ಣಿನ ಹಣತೆಗಳನ್ನ ಚಿಲ್ಲರೆ ಕೂಡಿಡುವ ಹುಂಡಿಗಳನ್ನ ಬಹಳ ಜಾಗ್ರತೆಯಿಂದ ಸಂತೆಗೆ ಸಾಗಿಸುತ್ತಿದ್ದರು. ವ್ಯಾಪಾರ ಧರ್ಮವೆಂದರೆ ಇದೇ ಇರಬಹುದು.
ಅದೇ ಊರಿನಲ್ಲಿ ಅಂಗಡಿಯಿಟ್ಟಿದ್ದ ಶೆಟ್ಟರದ್ದು ಸಹ ಹೆಚ್ಚುಕಡಿಮೆ ಇದೇ ರೀತಿಯ ಕೊಂಚ ಭಿನ್ನವಾದ ವ್ಯಾಪಾರದ ಕತೆ. ಸಂತೆಗೆ ಬರುವವರಿಗೆ ಅಂಗಡಿಯನ್ನು ಹುಡುಕಿ ಬರುವಷ್ಟು ಪುರುಸೊತ್ತು ಇರುತ್ತೋ ಇಲ್ಲವೋ? ಅಥವಾ ಸಂತೆ ಮುಗಿಸಿ ಅಂಗಡಿಗೆ ಬರುವವರು ಅಂಗಡಿಯಲ್ಲಿ ಕೊಳ್ಳುವ ಪದಾರ್ಥಗಳನ್ನು ಮರೆತು ಬಿಡಬಹುದು. ಅಲ್ಲಿಯೇ ಕಣ್ಣೆದುರಿಗಿದ್ದರೆ ಒಂದೆರಡು ಪದಾರ್ಥಗಳನ್ನ ಹೆಚ್ಚೆಚ್ಚು ಕೊಳ್ಳಬಹುದು. ಬೇರೆ ಬೇರೆ ಅಂಗಡಿಗಳಿಗೆ ಹೋಗುವವರು ಸಹ ಹೇಗೂ ಸಂತೆಗೆ ಬಂದಿದ್ದೇವೆ ದಿನಸಿ ಪದಾರ್ಥವನ್ನು ಇಲ್ಲಿಯೇ ಕೊಳ್ಳೋಣವೆಂದು ಯೋಚಿಸಬಹುದು. ಇದು ಶೆಟ್ಟರ ಲೆಕ್ಕಾಚಾರ! ಸಂತೆಗೆ ಬರುವ ಜನರು ಸಹ ತಮ್ಮ ಕೆಲಸ ಪೂರೈಸಿಕೊಂಡ ನಂತರ ಮಸಾಲೆ ಪದಾರ್ಥಗಳು ಒಣಮೆಣಸಿನಕಾಯಿ, ಸಕ್ಕರೆ ಬೆಲ್ಲ, ಕಾಫಿಪುಡಿ ಚಹಾದ ಪುಡಿ, ಬೇಳೆ ಕಾಳುಗಳು, ಅಡುಗೆ ಎಣ್ಣೆ- ಹೀಗೆ ಏನಾದರೊಂದಿಷ್ಟು ದಿನಸಿ ಪದಾರ್ಥಗಳನ್ನು ಕೊಳ್ಳುವ ಮೂಲಕ ಶೆಟ್ಟರ ಆಲೋಚನೆ ಅಥವಾ ಉದ್ದೇಶವನ್ನು ಈಡೇರಿಸಿ ಸಂತುಷ್ಟಗೊಳಿಸುತ್ತಿದ್ದರು.
ಸಂತೆ ಎಂಬುದು ಕೊಡು ಕೊಳ್ಳುವ ಸ್ಥಳವಾದರೂ ಅದು ಕೇವಲ ವ್ಯಾಪಾರ-ವ್ಯವಹಾರಕ್ಕಷ್ಟೇ ಸೀಮಿತವಾಗಿರಲಿಲ್ಲ. ಸಂತೆ ಎಂಬ ವ್ಯಾವಹಾರಿಕ ಜಗತ್ತಿನ ನಡುವೆ ಉತ್ತಮವಾದ ಸಂಬಂಧಗಳು, ಮಾನವೀಯ ಮೌಲ್ಯಗಳು ಉಸಿರಾಡುತ್ತಿದ್ದವು. ಅಕ್ಕಪಕ್ಕದ ಹಳ್ಳಿಯಲ್ಲಿದ್ದರು ಸಂಧಿಸಲಾಗದ ಬಂಧುಗಳು ಸಂತೆಯಲ್ಲಿ ಎದುರಾಗಿ, ಬೈಟು ಕಾಫಿ ಕುಡಿಯುತ್ತ ಕಷ್ಟ ಸುಖ ಹಂಚಿಕೊಳ್ಳುತ್ತಿದ್ದರು. ಅಜ್ಜ ಅಜ್ಜಿಯೊಂದಿಗೆ ಬರುತ್ತಿದ್ದ ಮಕ್ಕಳು ತಮ್ಮ ಬಹುದಿನಗಳ ಜಿಲೇಬಿ ತಿನ್ನುವ ಆಸೆಯನ್ನು ಈಡೇರಿಸಿಕೊಳ್ಳುತ್ತಿದ್ದರು. ವಿವಾಹಕ್ಕೆ ಸಂಬಂಧಿಸಿದ ವಿಷಯಗಳನ್ನು ಸಹ ‘ಸಂತೆ ದಿನ ಸಿಕ್ತೀನಿ ಬಿಡು’ ಎಂದು ಹೇಳಿದ್ದವರು ಸಿಕ್ಕಿ ಮಾತುಕತೆಯೊಂದಿಗೆ ಒಂದು ಇತ್ಯರ್ಥವಾಗುತ್ತಿತ್ತು. ತಂದೆಯೊಬ್ಬ ಸಂತೆಯನ್ನು ಮುಗಿಸಿ ಹೊರಡುವಾಗ ತನ್ನ ವಲ್ಲಿಬಟ್ಟೆಯಲ್ಲಿ ಕಡ್ಲೆಪುರಿ, ಪಕೋಡ ಇಲ್ಲವೇ ಉಪ್ಪುಕಡಲೆಯ ರೂಪದಲ್ಲಿ ತನ್ನ ವಾತ್ಸಲ್ಯವನ್ನು ಗಂಟುಕಟ್ಟಿ ಹೊರಡುತ್ತಿದ್ದನು.
ಸಂತೆ ಎಂದಕೂಡಲೇ ನನಗೆ ಇನ್ನೊಂದು ನೆನಪೆಂದರೆ ನರಸುಮ್ಮಣ್ಣ. ಆತನನ್ನು ಯಾರೊಬ್ಬರು ನರಸುಮ್ಮಣ್ಣ ಎಂದು ಕರೆದಿದ್ದು ಕೇಳಿಲ್ಲ. ಎಲ್ಲರೂ- ‘ಲೇ ನರ್ಸುಮ್ಮ ಬಾರೋ ಇಲ್ಲಿ. ನರ್ಸುಮ್ಮ ಇವತ್ತ್ ಬಂದಿಲ್ವಾ? ಎಲ್ಲೋದ ನರ್ಸುಮ್ಮ?’- ಎಂದೇ ಕೂಗುತ್ತಿದ್ದರು- ಕೇಳುತ್ತಿದ್ದರು. ನರಸುಮ್ಮಣ್ಣನ ಕಾಯಕವೆಂದರೆ, ತರಕಾರಿ ಚೀಲಗಳನ್ನ ಹೊತ್ತು ಬಸ್ಸಿಗೆ ಹಾಕುವುದು. ತರಕಾರಿ ಬೆಳೆದು ಚೀಲ ಮಾಡಿ ತಂದು ಬಸ್ ನಿಲುಗಡೆ ಬಳಿ ಹಾಕಿದ ಎಲ್ಲರಿಗೂ ನರಸುಮ್ಮಣ್ಣನ ಸಹಾಯ ಬೇಕೇಬೇಕಿತ್ತು. ಆತ ಎಲ್ಲರ ಚೀಲಗಳನ್ನು ತಲೆಮೇಲೆ ಹೊತ್ತು ಬಸ್ಸಿನ ಟಾಪಿಗೆ ಹಾಕುತ್ತಿದ್ದ, ಚೀಲಕ್ಕೆ ಎರಡು ರೂಪಾಯಿಯಂತೆ ವಸೂಲಿ ಮಾಡುತ್ತಿದ್ದ. ನಂತರ ಅದೇ ಬಸ್ಟಾಪಿನ ಟೀ ಅಂಗಡಿಯಲ್ಲಿ ಟೀ ಕುಡಿದು ಬೀಡಿ ಸೇದುತ್ತಾ, ಲಗೇಜು ಹೊತ್ತು ಬರುವ ಮತ್ತೊಂದು ಬಸ್ಸಿಗಾಗಿ ಕಾಯುತ್ತಿದ್ದ. ಬರೀ ತರಕಾರಿ ಮೂಟೆಗಳಲ್ಲದೆ ರೈತರು ಬಸ್ಸಿಗೆ ಏರಿಕೊಂಡು ತರುತ್ತಿದ್ದ ಕೃಷಿ ಚಟುವಟಿಕೆಯ ಸಲಕರಣೆಗಳು, ಪಂಪು ಮೋಟಾರು, ಪೈಪು ಕೇಬಲ್ ವಯರುಗಳನ್ನು ಇಳಿಸಿಕೊಡುವುದು. ಮಂಡಿಗೆ ಮಾರಲು ಹೊರಟ ರೈತರ ದವಸ ಧಾನ್ಯದ ಮೂಟೆಗಳನ್ನು ಎತ್ತಿಳಿಸುವುದು ನರಸುಮ್ಮಣ್ಣನ ಕಾಯಕವಾಗಿತ್ತು. ಪ್ರತಿದಿನ ತರಕಾರಿ ಚೀಲಗಳನ್ನ ಹೊತ್ತು ಬಸ್ಸಿನ ಮೇಲೇರುತ್ತಿದ್ದ ನರಸುಮ್ಮಣ್ಣ ಮಂಗಳವಾರ ಮಾತ್ರ ಚೀಲಗಳನ್ನ ಕೆಳಗಿಳಿಸುತ್ತಿದ್ದ. ಮಾತ್ರವಲ್ಲದೇ ಸಂತೆ ಮೈದಾನದವರೆಗೂ ಆ ಚೀಲಗಳನ್ನ ಹೊರುತ್ತಿದ್ದ. ಹೀಗೆ ಭಾರವಾದ ಮೂಟೆಗಳನ್ನು ಹೊರುವುದನ್ನೇ ಕಾಯಕ ಮಾಡಿಕೊಂಡಿದ್ದ ನರಸುಮ್ಮಣ್ಣನ ಮೇಲೆ ಹಿರಿಯರು ಮಕ್ಕಳಿಂದ ತುಂಬಿದ ಮನೆಯ ಸಂಸಾರದ ಭಾರವಿತ್ತು.
ಇನ್ನೂ ಸಂತೆಗೆ ತರಕಾರಿ ಕೊಳ್ಳಲಿಕ್ಕೆಂದೇ ಬರುವವರಲ್ಲದೇ ಮೇಲೆ ಹೇಳಿದಂತೆ ಯಾರನ್ನೋ ಭೇಟಿಯಾಗಲು, ಬೀಗ ಕೊಡೆ ಕೊಳ್ಳಲು ಅಥವಾ ರಿಪೇರಿ ಮಾಡಿಸಿಕೊಳ್ಳಲು, ಬಾಯಿ ಚಪಲಕ್ಕೆ ಬೋಂಡದ ಜೊತೆ ಚಹಾ ಸೇವಿಸಲು, ಕನ್ನಡಿ ಬಾಚಣಿಗೆ ಕೊಳ್ಳಲು, ಮಡಿಕೆ ಕುಡಿಕೆ, ಹೊಗೆಸೊಪ್ಪು ವೀಳ್ಯದೆಲೆ ಕೊಳ್ಳಲು ಬರುವ ಅಜ್ಜಿ ಅಜ್ಜಂದಿರು ಇದ್ದರು. ಹಬ್ಬ ಹತ್ತಿರವಾದ ದಿನಗಳಲ್ಲಿ ಸಂತೆಯ ಕಳೆ ಇನ್ನಷ್ಟು ಹೆಚ್ಚುತ್ತಿತ್ತು. ಶೆಟ್ಟರ ಅಂಗಡಿಯಲ್ಲಿ ದಿನಸಿಗಳು ಜೋರಾಗಿ ಬಿಕರಿಯಾಗುತ್ತಿದ್ದವು. ಆ ದಿನಗಳಲ್ಲಿ ಶೆಟ್ಟರು ತಮ್ಮ ಸಹಾಯಕ್ಕೆಂದು ಮಗನನ್ನು ಜೊತೆಯಲ್ಲಿರಿಸಿಕೊಳ್ಳುತ್ತಿದ್ದರು. ಅದೇ ರೀತಿ ಬಟ್ಟೆ ಜವಳಿ ಅಂಗಡಿಯವರಿಗೂ ಇದ್ದಕ್ಕಿದ್ದಂತೆ ವ್ಯಾಪಾರ ಹೆಚ್ಚುತ್ತಿತ್ತು. ಅಷ್ಟೂದಿನ ಬಂದು ಹೋಗುವ ಒಂದೆರಡು ಗಿರಾಕಿಗಳ ನಡುವೆ ಬಟ್ಟೆ ಮೇಲಿನ ಧೂಳು ಕೊಡವುತ್ತಾ ತೂಕಡಿಸುತ್ತಿದ್ದ ಜವಳಿ ಅಂಗಡಿಯವರು ಬಿಡುವಿಲ್ಲದಂತೆ ಕತ್ತರಿ ಟೇಪು ಕೈಯಲ್ಲೇ ಹಿಡಿದಿರುತ್ತಿದ್ದರು. ಹೆಂಗಸರು ಗಂಡಸರ ಬಟ್ಟೆಯಿಂದ ಹಿಡಿದು ಶಾಲೆಯ ಸಮವಸ್ತ್ರ, ಶಾಲೆಯ ಕೈಚೀಲ, ಅಜ್ಜಿಯರಿಗೆ ಅಡಿಕೆಲೆ ತಾಂಬೂಲದ ಚೀಲದವರೆಗೂ ಅವಳ ಬಳಿ ದೊರೆಯುತ್ತಿತ್ತು. ನಾನು ಪ್ರಾಢಶಾಲೆಗೆ ಸೇರಿದಾಗ ಶಾಲೆಯ ನಿಯಮದಂತೆ ಚಡ್ಡಿಯಿಂದ ಪ್ಯಾಂಟಿಗೆ ಬಡ್ತಿ ಪಡೆದು ನನ್ನ ಉಡುಗೆಯಲ್ಲಿ ಬದಲಾವಣೆಯಾಯ್ತು. ಆ ಸಮವಸ್ತ್ರವನ್ನು ಸಹ ಅಪ್ಪ ಸಂತೆಗೆ ಬರುವ ಜವಳಿ ವ್ಯಾಪಾರಿಗಳಲ್ಲೇ ಕೊಂಡು ಹೊಲಿಸಿದ್ದು. ನನ್ನ ಶಾಲೆಯ ಕೈಚೀಲವನ್ನು ಅಲ್ಲಿಯೇ ಕೊಂಡಿದ್ದು. ಹೀಗೆ ಒಂದೆರಡು ಒಟ್ಟಿಗೆ ಕೊಳ್ಳುವವರಿಗೆ ಒಟ್ಟು ದರದಲ್ಲಿ ಕೊಂಚ ರಿಯಾಯಿತಿ ಸಿಗುತ್ತಿತ್ತು. ಅಂದು ರಿಯಾಯಿತಿ ದೊರೆತ ಹಣದಲ್ಲಿ ಬಹಳ ಉದಾರತೆಯಿಂದ ಅಪ್ಪ ಪಕೋಡ, ಜಿಲೇಬಿ ಕೊಡಿಸಿದ್ದು ಈಗಲೂ ನೆನಪಿದೆ.
ಸುಮಾರು ಬೆಳಿಗ್ಗೆ ಹತ್ತುಗಂಟೆಗೆ ನಿಧಾನವಾಗಿ ಕಣ್ತೆರೆಯುತ್ತಿದ್ದ ಸಂತೆ ಮಧ್ಯಾಹ್ನದ ಹೊತ್ತಿಗೆ ಜೋರಾಗಿ ಕಲೆಯುತ್ತಿತ್ತು. ಗದ್ದಲ ಜೋರಾಗುತ್ತಿತ್ತು. ಹೊತ್ತು ಮುಳುಗುವ ಹೊತ್ತಿನಲ್ಲಿ ಕೊನೆಯ ಬಸ್ಸು ಬಂದುಹೋದ ನಂತರ ಬಿರುಸು ಮಳೆ ಬಂದು ನಿಂತಂತೆ ಒಮ್ಮೆಲೆ ಮೌನವಾಗುತ್ತಿದ್ದ ಸಂತೆ- ಕೊಳೆತ ತರಕಾರಿ, ಹರಿದ ಪೇಪರಿನ ತುಣುಕು, ಹೆಜ್ಜೆಗುರುತುಗಳನ್ನ ಮರುದಿನದ ವರೆಗೆ ತನ್ನ ಮಡಿಲಿನಲ್ಲಿ ಉಳಿಸಿಕೊಂಡಿರುತ್ತಿತ್ತು.
ಹೀಗೆ ಬೆಳಿಗ್ಗೆ ಶುರುವಾಗಿ ಸಂಜೆಗೆ ಖಾಲಿಯಾಗುತ್ತಿದ್ದ ಸಂತೆಯ ತಯಾರಿ ಮಾತ್ರ ಒಂದು ದಿನ ಮುಂಚಿತವಾಗಿ ನಡೆಯುತ್ತಿತ್ತು. ಮೂಟೆ ಹೊರುತ್ತಿದ್ದ ನರಸುಮ್ಮಣ್ಣ ವ್ಯಾಪಾರಸ್ಥರ ಆದೇಶದಂತೆ ಬಳಿಯವರ ವ್ಯಾಪಾರದ ಸ್ಥಳಗಳಲ್ಲಿ ಎತ್ತರಕ್ಕೆ ಮಣ್ಣು ಹಾಕಿ ಅವರುಗಳಿಂದ ಹಣ ಪಡೆಯುತ್ತಿದ್ದ. ಸಂತೆಯ ಮೈದಾನವನ್ನೆಲ್ಲ ಗುಡಿಸಿ ಸ್ವಚ್ಛ ಮಾಡಿ, ಸುಂಕ ವಸೂಲಿ ಮಾಡುವವರ ಬಳಿಯೇ ಹಣ ವಸೂಲಿ ಮಾಡುತ್ತಿದ್ದ. ಸಂತೆಗೆ ತರಕಾರಿ ಹೊತ್ತು ಹೋಗುವವರದ್ದೂ ಒಂದು ರೀತಿ ತಯಾರಿಯೇ ಆಗಿತ್ತು. ಸಂತೆಯ ಹಿಂದಿನ ರಾತ್ರಿ ಬೆಳಗ್ಗೆ ಬೇಗ ಏಳಬೇಕು, ಎದ್ದವರು ಇಂಥ ಗದ್ದೆ ತರಕಾರಿಗಳನ್ನ ಬಿಡಿಸಬೇಕೆಂದು ಮನೆಯಲ್ಲಿ ಜವಾಬ್ದಾರಿ ಹೊರಿಸುತ್ತಿದ್ದರು. ಬೆಳಗ್ಗೆ ನಮ್ಮ ನಮ್ಮ ಕೆಲಸ ನಾವು ಮಾಡಿದರೆ, ಅಪ್ಪ ಕೆಟ್ಟುಹೋದ, ಹುಳುಕಾದ, ಬಣ್ಣ ಬದಲಾದಂತೆ ಕಾಣುವ ತರಕಾರಿಗಳನ್ನ ಬೇರೆ ಮಾಡಿ- ನೋಟಕ್ಕೆ ಮತ್ತು ತಿನ್ನಲಿಕ್ಕೆ ಯೋಗ್ಯವೆನ್ನಿಸುವ ತರಕಾರಿಗಳನ್ನು ಮಾತ್ರ ಮಾರಲಿಕ್ಕೆಂದು ಸಂತೆ ಚೀಲಕ್ಕೆ ತುಂಬಿಸುತ್ತಿದ್ದರು. ಅಪ್ಪ ಬೇರ್ಪಡಿಸಿದ ತರಕಾರಿಗಳನ್ನ ಗಂಟುಕಟ್ಟಿ ಮನೆಗೆ ಹೊತ್ತು ತರುತ್ತಿದ್ದ ಅಮ್ಮ ಹೆಚ್ಚಾಗಿದ್ದರೆ ಅಕ್ಕಪಕ್ಕದ ಮನೆಯವರಿಗೆಲ್ಲ ಹಂಚುತ್ತಿದ್ದಳು. ತಾಜಾ ತರಕಾರಿಗಳನ್ನು ಬೆಳೆದು ಮಾರುತ್ತಿದ್ದ ನಮಗೆ ಮಾತ್ರ ತರಕಾರಿಯ ಅರ್ಥ ಹುಳುಕು ಭಾಗವನ್ನು ಬೇರ್ಪಡಿಸಿ, ಚೆನ್ನಾಗಿದೆ ಅನಿಸುತ್ತಿದ್ದ ಉಳಿದರ್ಧ ತರಕಾರಿಗಳಲ್ಲೆ ಅಮ್ಮ ಅಡುಗೆ ಮಾಡಿ ಬಡಿಸುತ್ತಿದ್ದಳು.
ತರಕಾರಿ ಚೀಲಗಳೊಂದಿಗೆ ಸಂತೆಗೆ ಹೋಗುತ್ತಿದ್ದ ಅಪ್ಪ ಕುಳಿತು ವ್ಯಾಪಾರ ಮಾಡಿದ್ದು ಕಡಿಮೆ. ಚೀಲಗಳನ್ನೇ ಇಂತಿಷ್ಟು ಹಣಕ್ಕೆಂದು ಒಟ್ಟು ಕೊಟ್ಟು ಬರುತ್ತಿದ್ದರು.
ಒಂದೆರಡು ತರಕಾರಿ ಇರುವ ನಮ್ಮ ಬಳಿ ಹೆಚ್ಚಾಗಿ ಜನರು ಕೊಳ್ಳಲು ಬರುವುದಿಲ್ಲ, ಒಟ್ಟಿಗೆ ಹತ್ತಾರು ತರಕಾರಿ ಸಿಗುವ ಕಡೆ ಕೊಳ್ಳುವರು. ಸದಾ ತರಕಾರಿ ಮಾರುವವರಿಗೆ ವ್ಯಾಪಾರದ ಕಲೆ ಗೊತ್ತು. ನಮಗೆ ಬೆಳೆಯುವುದಷ್ಟೇ ಗೊತ್ತು, ಮಾರುವ ಕಲೆ ತಿಳಿದಿಲ್ಲವೆಂಬ ಸತ್ಯವನ್ನು ನುಡಿಯುತ್ತಿದ್ದ. ನಮ್ಮೂರ ಸಂತೆಯಲ್ಲಿ ಒಮ್ಮೊಮ್ಮೆ ಆರಕ್ಕೆ ಮೂರರಂತೆ ಕೇಳಿದರೆಂದು ತಾನೇ ಮಾರಲು ಕೂರುತ್ತಿದ್ದ. ನಾವು ಬೆಳೆದ ತರಕಾರಿ ಸಂತೆಗೆ ಹೆಚ್ಚು ಬಂದಿಲ್ಲದ ದಿನ ಬೇಗನೆ ಅಪ್ಪನ ತರಕಾರಿಗಳೆಲ್ಲ ಖಾಲಿಯಾಗಿ ಖುಷಿಯಿಂದ ಮನೆಗೆ ಹೋಗಿರುತ್ತಿದ್ದ ಅಪ್ಪ ಕೆಲವೊಮ್ಮೆ ವ್ಯಾಪಾರವು ಇಲ್ಲದೇ, ಕೂರಲು ನೆಟ್ಟಗೆ ಜಾಗವು ಇಲ್ಲದೆ ಸಂಜೆ ಶಾಲೆ ಬಿಡುವ ಹೊತ್ತಲ್ಲಿ ಸೂರ್ಯನ ಎದುರು ಬಿಸಿಲಿಗೆ ಬಾಡಿದ ಮುಖದ ಜೊತೆ ಕೂತಿರುತ್ತಿದ್ದ. ಆ ದಿನ ಬಿಸಿಲಿಗೆ ಅಪ್ಪನ ಮೋರೆಯ ಜೊತೆ ತರಕಾರಿಗಳು ಬಾಡಿ ಹೋಗಿರುತ್ತಿದ್ದವು. ವರ್ಷಕ್ಕೊಮ್ಮೆ ಹರಾಜಿನಲ್ಲಿ ಕೂಗಿ ಸಂತೆ ಮೈದಾನವನ್ನು ಗುತ್ತಿಗೆ ಪಡೆದು, ಪ್ರತಿವಾರ ಸಂತೆಯಲ್ಲು ಸುಂಕ ವಸೂಲಿ ಮಾಡುತ್ತಿದ್ದಾತ, ನಿಗದಿತವಾಗಿ ಮಾರಾಟಕ್ಕೆ ಬರುವವರಿಗೆ ಒಳ್ಳೆಯ ಸ್ಥಳವನ್ನು ಕೊಟ್ಟು ಹೆಚ್ಚಿನ ಸುಂಕ ವಸೂಲಿ ಮಾಡುತ್ತಿದ್ದ. ಹಾಗೆ ಹೆಚ್ಚಿಗೆ ಸುಂಕ ಕೊಟ್ಟರು ಅವರಿಗೆ ಒಳ್ಳೆಯ ಸ್ಥಳ ಸಿಕ್ಕಿ ವ್ಯಾಪಾರವು ಉತ್ತಮವಾಗಿ ಆಗುತ್ತಿತ್ತು. ನಾವು ಸ್ಥಳಿಯರಾದರೂ ಅಪರೂಪಕ್ಕೆ ವ್ಯಾಪಾರಕ್ಕೆ ಕೂರುತ್ತಿದ್ದ ನಮ್ಮಂತವರಿಗೆ ಸಂತೆಯ ಯಾವುದೋ ಮೂಲೆಯೊಂದರಲ್ಲಿ ಜಾಗ ಮಾಡಿಕೊಟ್ಟು, ಸುಂಕ ಪಡೆಯುತ್ತಿದ್ದ. ಆತ ಮಾಡಿಕೊಟ್ಟ ಮೂಲೆಯ ಜಾಗಕ್ಕೆ ಹೆಚ್ಚಿನ ಜನ ಬರದೆ ಅಲ್ಲಲ್ಲಿಯೇ ಕೊಂಡು ಹೋಗುತ್ತಿದ್ದರು. ಆತನ ಈ ರೀತಿ ನಡೆಗೆ ಕಾರಣ ಸ್ಥಳಿಯರಿಂದ ಹೆಚ್ಚಿನ ಸುಂಕ ವಸೂಲಿ ಮಾಡಲು ಸಾಧ್ಯವಾಗುವುದಿಲ್ಲ.
ನಗರಗಳಲ್ಲಿ ಹುಟ್ಟಿ ಬೆಳೆಯುವ ಈಗಿನ ಮಕ್ಕಳು ಸಂತೆಯನ್ನು ಕೇವಲ ಸಿನಿಮಾಗಳಲ್ಲಿ ಮಾತ್ರ ನೋಡಬಹುದಷ್ಟೇ. ಅವರುಗಳ ಕೊಂಡುಕೊಳ್ಳುವ ಪ್ರಕ್ರಿಯೆಗಾಗಿ ಮಾರ್ಟ್ ಗಳು, ಮಾಲ್ ಗಳು ಈಗಾಗಲೇ ತಲೆಯೆತ್ತಿ ಬೆಳೆದು ನಿಂತಿವೆ. ಆದರೆ ಸಣ್ಣ ಪುಟ್ಟ ಪಟ್ಟಣಗಳಲ್ಲಿ, ಹಳ್ಳಿಗಳಲ್ಲಿ ಈಗಲೂ ವಾರಕ್ಕೊಮ್ಮೆ ಸಂತೆ ಕಲೆಯುತ್ತದೆಯಾದರೂ, ಈಗೀಗ ಸಂತೆಯು ಮೊದಲಿನ ಘನತೆ ವೈಭವಗಳನ್ನು ಉಳಿಸಿಕೊಂಡಿಲ್ಲ. ಈಗಂತೂ ನಮ್ಮೂರಿನ ಪ್ರತಿ ಹಳ್ಳಿಯಲ್ಲೂ ಲಗೇಜಿನ ಆಟೋಗಳಲ್ಲಿ ಮನೆ ಬಾಗಿಲಿಗೆ ತರಕಾರಿಗಳು ಬರುತ್ತವೆ. ಗೇಟಿನಲ್ಲಿದ್ದ ನಮ್ಮೂರ ಸಂತೆ ಕಳೆಗುಂದಿದೆ. ಮೈದಾನದ ತುಂಬಾ ಮೈತುಂಬಿಕೊಳ್ಳುತ್ತಿದ್ದ ಸಂತೆಯಲ್ಲೀಗ ಹತ್ತಾರು ಅಂಗಡಿಗಳಷ್ಟೇ ಕಾಣಬಹುದಾಗಿದೆ. ಎಲ್ಲರ ಮನೆಯಲ್ಲೂ ಸ್ಕೂಟರ್, ಮೋಟಾರ್ ಬೈಕುಗಳು ಬಂದು ಹತ್ತಾರು ಕಿಲೋಮೀಟರ್ ದೂರದ ಪೇಟೆ ಪಟ್ಟಣಗಳು ಹತ್ತಿರವಾಗಿವೆ. ನಮ್ಮೂರ ಸಂತೆ ಬಿಟ್ಟು ಪೇಟೆಗಳಲ್ಲಿ ನಡೆಯುವ ದೊಡ್ಡ ಸಂತೆಗಳಿಗೆ ಹೋಗಿಬರಲಾರಂಭಿಸಿದ್ದಾರೆ. ಕಳೆಗುಂದಿದ ಹಳ್ಳಿಯ ಸಂತೆ ಒಂದು ಕಾರಣವಾದರೆ, ಪೇಟೆಗೆ ಹೋದರೆ ಸಂತೆಯ ಜೊತೆ ಬೇರೆ ಕೆಲಸಗಳನ್ನು ಪೂರೈಸಿಕೊಂಡು ಬರಬಹುದು.
ಈ ವರ್ಷ ಶಾಲೆ ಶುರುವಾಗಿದ್ದರೆ ಎಲ್ ಕೆ ಜಿ ಮುಗಿಸಿದ್ದ ಮಗಳು ಯು ಕೆ ಜಿ ಓದಬೇಕಿತ್ತು. ನಮ್ಮ ಹಳ್ಳಿಯಿಂದ ಹದಿನೈದು ಕಿಲೋಮೀಟರ್ ದೂರದಲ್ಲಿ ಮಗಳ ಶಾಲೆಯಿದ್ದರೂ, ಹೋಗಿ ಬರಲು ಶಾಲೆಯದೇ ಬಸ್ಸಿನ ಸೌಕರ್ಯವಿದೆ. ಆದರೆ ಎಲ್ ಕೆ ಜಿ ಮತ್ತು ಯು ಕೆ ಜಿ ಮಕ್ಕಳಿಗೆ ಮಧ್ಯಾಹ್ನಕ್ಕೆ ಶಾಲೆ ಮುಗಿದು, ಸ್ಥಳೀಯ ಮಕ್ಕಳನ್ನು ಮಧ್ಯಾಹ್ನವೇ ಮನೆಗೆ ಕಳಿಸುತ್ತಾರೆ. ದೂರದ ಹಳ್ಳಿಗಳಿಂದ ಹೋಗುವ ಮಕ್ಕಳನ್ನು ಎಲ್ಲಾ ಮಕ್ಕಳೊಟ್ಟಿಗೆ ಒಂದೇ ಬಸ್ಸಿನಲ್ಲಿ ಸಂಜೆ ಮನೆಗೆ ಕಳಿಸುವ ವ್ಯವಸ್ಥೆಯಿದೆ. ಮಧ್ಯಾಹ್ನದ ನಂತರ ಆಟವಾಡಬಹುದು, ಓದಬಹುದು, ಬರೆಯಬಹುದು, ನಿದ್ದೆ ಬಂದ ಮಕ್ಕಳು ಮಲಗಲೂ ಬಹುದು! ಆದರೆ ಶಾಲೆಗೆ ಸೇರಿದ ಹೊಸದರಲ್ಲಿ ನನ್ನ ಮಗಳ ತಕರಾರು ನನ್ನನ್ನು ಮಧ್ಯಾಹ್ನವೇ ಮನೆಗೆ ಕಳಿಸಬೇಕೆಂದು. ಮೊದಮೊದಲು ಕ್ಲಾಸ್ ಟೀಚರ್ ಬಳಿ ಮಧ್ಯಾಹ್ನವೇ ಮನೆಗೆ ಕಳಿಸುವಂತೆ ಅತ್ತಿದ್ದಾಳೆ, ಹಠ ಮಾಡಿದ್ದಾಳೆ. ಆ ಸಮಯದಲ್ಲಿ ಅವಳನ್ನು ಮಧ್ಯಾಹ್ನವೇ ಕರೆತರಲು ನಾನು ಹೋಗಬೇಕಿತ್ತು. ದಿನ, ನಂತರ ದಿನ ಬಿಟ್ಟು ದಿನ, ಆನಂತರ ವಾರಕ್ಕೆರಡು ದಿನ, ಕೊನೆ ಕೊನೆಗೆ ಬುಧವಾರ ಸಂತೆಯ ದಿನ ಹೋಗಿ ಕರೆದುಕೊಂಡು ಬರುತ್ತಾ, ನಿಧಾನವಾಗಿ ಶಾಲೆಗೆ ಹೊಂದಿಕೊಳ್ಳುವಂತೆ ಮಾಡಿದ್ದಾಯ್ತು.
ಬೆಳಿಗ್ಗೆ ಶಾಲೆಗೆ ತಯಾರಾಗುವಾಗಲೇ ಮಗಳು ‘ಅಪ್ಪಾ, ಇವತ್ ಯಾವ್ ದಿನ ಏಯೂ? ವೆದ್ನಸ್ತೆ! ಇವತ್ ಶಂತೆ. ನೀನ್ ಬತ್ಚೀಯ ಅಂತ ನಂಗೊತ್ಚು’ ಎಂದು ಖುಷಿಯಿಂದಲೇ ಕೈಬೀಸಿ ಶಾಲೆಯ ಬಸ್ಸು ಹತ್ತುತ್ತಿದ್ದಳು. ಮಧ್ಯಾಹ್ನ ನಾನು ಹೋಗುವುದು ಒಂದರ್ಧ ಗಂಟೆ ತಡವಾದರೆ ಕ್ಲಾಸ್ ಟೀಚರ್ ಬಳಿ, ನಮ್ಮಪ್ಪ ಬೇಕು. ನಮ್ಮಪ್ಪನಿಗೆ ಫೋನ್ ಮಾಡಿ. ನಂಗೆ ಅಪ್ಪ ಬೇಕೆಂದು ಅಳುತ್ತಿದ್ದಳಂತೆ. ನಾನು ಮಧುಗಿರಿ ಪೇಟೆಯಲ್ಲಿನ ನನ್ನ ಕೆಲಸಗಳನ್ನೆಲ್ಲ ಮುಗಿಸಿ, ಶಾಲೆಯ ಬಳಿ ಹೋದರೆ ನಡೆದ ಘಟನೆಯ ವರದಿಯನ್ನ ಕ್ಲಾಸ್ ಟೀಚರ್ ನನಗೊಪ್ಪಿಸುತ್ತಿದ್ದರು. ಮಗಳನ್ನು ಜೊತೆಯಲ್ಲಿ ಕರೆದುಕೊಂಡು ಸಂತೆಯಲ್ಲಿ ಸುತ್ತಾಡಿ, ತರಕಾರಿಗಳ ಜೊತೆ ಮಗಳಿಗಿಷ್ಟವಾದ ಹಣ್ಣುಗಳನ್ನು ಕೊಂಡು, ಮಗಳಿಗೆ ಐಸ್ ಕ್ರೀಮ್ ಚಾಕೊಲೇಟ್ ಕೊಡಿಸಿ ಊರಿಗೆ ಹಿಂದಿರುಗುತ್ತಿದ್ದೆವು. ಒಮ್ಮೆ ಸಂತೆಯಲ್ಲಿ ಪೈನಾಪಲ್ ಹಣ್ಣನ್ನು ನೋಡಿದ ಮಗಳು ‘ಇದೇನೆಂದು?’ ಪ್ರಶ್ನಿಸಿದಳು. ಆ ಹಣ್ಣಿನ ಕುರಿತು ಹೇಳಿ, ಅದರ ಬಗ್ಗೆ ನಾಲ್ಕು ಸಾಲಿನ ಶಿಶುಗವಿತೆಯನ್ನು ಹೇಳಿಕೊಟ್ಟೆ. ಮನೆಗೆ ಬರುವಷ್ಟರಲ್ಲಿ ಮತ್ತೆ ಮತ್ತೆ ಹೇಳಿಕೊಂಡ ಮಗಳಿಗೆ ಆ ಶಿಶುಗವಿತೆ ಬಾಯಿಪಾಠವಾಗಿತ್ತು. ಮತ್ತೊಂದು ವಾರವು ಇನ್ನೊಂದು ಪೊಯೆಮ್ ಹೇಳಿಕೊಡುವಂತೆ ಮಗಳು ಕೇಳಿದಳು. ಅಂದು ಕೊಂಡ ತರಕಾರಿಯ ಕೈ ಚೀಲದಲ್ಲಿ ಹಸಿಮೆಣಸಿನ ಕಾಯಿಯು ಇತ್ತು. ಹಸಿರಾದ ಮೆಣಸಿನ ಕಾಯಿಯನ್ನು ಹಸಿರುಮೆಣಸಿನಕಾಯಿ ಎಂದು, ಹಣ್ಣಾಗಿ ಒಣಗಿದ ಮೆಣಸಿನಕಾಯಿಯನ್ನು ಒಣ ಮೆಣಸಿನಕಾಯಿ ಎಂದು ಕರೆಯುತ್ತಾರೆ. ಆದರೆ ಹಸಿರು ಹಣ್ಣಾದರೆ ಅದನ್ನು ಹಣ್ಣು ಮೆಣಸಿನ ‘ಕಾಯಿ’ ಎನ್ನುವುದರ ಬಗ್ಗೆ ನನ್ನ ಆಕ್ಷೇಪವಿದೆ. ಹಣ್ಣಾದ ಮೇಲೆ ಅದು ಕಾಯಿ ಹೇಗಾಗುತ್ತೆ? ಇದೇ ಪ್ರಶ್ನೆಯು ಪ್ರಶ್ನೆಯ ರೂಪದ ಶಿಶುಗವಿತೆಯೊಂದು ತಲೆಯಲ್ಲಿ ಮಿಂಚಿತು.
ಅಪ್ಪನ ಕೂದಲು
ಕಪ್ಪಗಿದೆ
ಅಜ್ಜನ ಕೂದಲು
ಬಿಳಿ ಯಾಕೆ?
ಹಸಿರಾಗಿದೆ
ಹಸಿಮೆಣಸಿನಕಾಯಿ
ಕೆಂಪಾದರೆ
ವಯಸ್ಸಾಯ್ತ ಮರಿ?
– ನವೀನ್ ಮಧುಗಿರಿ
ಚಂದದ ಬರಹ, ನಿಮ್ಮ ನೆನಪುಗಳ ಸರಮಾಲೆ ಓದುಗರಿಗೂ ಅಪ್ಯಾಯಮಾನ ಭಾವ ನೀಡುತ್ತದೆ
ನಿಮ್ಮ ಬಾಲ್ಯ,ಸಂತೆ,ಶಾಲೆ,ಮಗಳ ಶಾಲೆ ಎಲ್ಲವನ್ನೂ ಕಣ್ಣಿಗೆ ಕಟ್ಟುವಂತೆ ಬರೆದಿದ್ದೀರಿ. ಧನ್ಯವಾದಗಳು
ತುಂಬಾ ಚಂದದ ಬರಹ
ನಿಮ್ಮ ಸಂತೆಯ ಕಥಾನಕ ನನ್ನನ್ನು ಕೂಡಾ ಬಾಲ್ಯಕ್ಕೆ ಒಯ್ದು ನಮ್ಮೂರ ಸಂತೆಯಲ್ಲಿ ಸುತ್ತಾಡಿಸಿತು..ಚಂದದ ಬರಹ..ಧನ್ಯವಾದಗಳು.