ಕವಿನೆನಪು 24: ಲಿಪಿ ಪ್ರಕಾಶನದ ಬಾಲಕೃಷ್ಣ (ಬಾಕಿನ) ಹಾಗೂ ಕೆ ಎಸ್  ನ

Share Button

ಕವಿ ಕೆ ಎಸ್  ನ

ಕೆ ಎಸ್ ನ ಅವರಿಗೆ  ಬೆಂಗಳೂರಿನ ಬ್ಯೂಗಲ್ ರಾಕ್ ರಸ್ತೆಯಲ್ಲಿರುವ ಲಿಪಿ ಪ್ರಕಾಶನದ ಮಾಲೀಕ ಬಾಕಿನ (ಬಾಲಕೃಷ್ಣ ಕಿಳಿಂಗಾರು ನಡುಮನೆ) ಅವರೊಂದಿಗೆ ಒಂದು ವಿಶೇಷ ಅಕ್ಕರೆ.ಒಮ್ಮೆ ಅವರು ಮನೆಗೆ ಭೇಟಿ  ನೀಡಿದರೆಂದರೆ ಸಾಹಿತ್ಯಲೋಕದ ಹಲವಾರು ಸ್ವಾರಸ್ಯಕರ ಸಂಗತಿಗಳ ಅಲೆಗಳೇ ತೇಲಿಬರುತ್ತಿದ್ದವು.

ಬಾಕಿನ ಅವರು ಒಮ್ಮೆ “ಕೇಳಿದ್ರಾ ಸಾರ್ ,ಮೊನ್ನೆ ನಡೆದ ಕವಿಗೋಷ್ಠಿಯಲ್ಲಿ ನೂರು ಜನ ಕವಿಗಳಿದ್ದರಂತೆ” ಎಂದು ಹೇಳಿದಾಗ ಅದಕ್ಕೆ ನಮ್ಮ ತಂದೆ “ಸರಿ,ಸರಿ ಕೌರವನ ಒಡ್ಡೋಲಗ”ಎಂದು ಉತ್ತರಿಸಿದರು.  ಬಾಲಕೃಷ್ಣ ಅವರಿಗೆ ನಗು ತಡೆಯಲಾಗಲಿಲ್ಲ. ”ಮಾಯಾಬಜಾರ್ ಚಿತ್ರದಲ್ಲಿ ದುರ್ಯೋಧನ ತೊಂಬತ್ತ ಒಂಬತ್ತು ಜನ ತಮ್ಮಂದಿರೊಂದಿಗೆ ಆಸ್ಥಾನದಲ್ಲಿ ಕುಳಿತದ್ದು ನೆನಪಿಗೆ ಬಂತು” ಎಂದು ಉದ್ಗರಿಸಿದರು.

ಮತ್ತೊಂದು ಬಾರಿ “ಸರ್ ನಿಸಾರರ ಕುರಿಗಳು ಸಾರ್ ಕವನವನ್ನು ಅನಂತಸ್ವಾಮಿ ಅವರು ಭಾವಗೀತೆಯಾಗಿ ಹಾಡ್ತಾರಂತೆ” ಎಂದು ಅವರು  ತಿಳಿಸಿದಾಗ “ಸರಿ ಬಿಡಪ್ಪ ಅವನಿಗೆ ಸಂಗೀತ ಚೆನ್ನಾಗಿ ಗೊತ್ತು. ವಾಚಕರ ವಾಣಿಗೆ ಬಂದ ಪತ್ರವನ್ನೂ ಬೇಕಾದರೆ ಹಾಡು ಮಾಡಿಬಿಡ್ತಾನೆ” ಎಂದು ಉತ್ತರಿಸಿದ್ದರು ನಮ್ಮ ತಂದೆ.

ತಮ್ಮ ಲವಲವಿಕೆಯ ಮಾತು, ನಗೆ, ಅಭಿಮಾನಗಳಿಂದ ನಮ್ಮ ತಂದೆಯವರ ಮನಸ್ಸನ್ನು ಗೆದ್ದಿದ್ದವರು ಬಾಕಿನ.

ಶ್ರೀ ಬಾಲಕೃಷ್ಣ (ಬಾಕಿನ)

ಬಾಕಿನ ಅವರ ಪರಿಚಯ ನಮ್ಮ ತಂದೆಯವರಿಗೆ ಬಹುಶಃ 1972 ರಲ್ಲಿ ಅಡಿಗರ ಮೂಲಕ ಆಯಿತೆಂದು ತೋರುತ್ತದೆ. ಬಾಕಿನ ಅವರು ಅಡಿಗರ ಸಮಗ್ರ ಕಾವ್ಯವನ್ನುಪ್ರಕಟಿಸಿದ್ದರು. ಅಡಿಗರ ಎಲ್ಲ ಕವನಗಳೂ ಕಾವ್ಯಾಭ್ಯಾಸಿಗಳಿಗೆ ಒಂದೆಡೆ ಲಭಿಸುವಂತೆ ಮಾಡಿದ ಕೀರ್ತಿ ಬಾಕಿನ ಅವರದ್ದು.ಮುಂದುವರೆದು ಪುತಿನ ಅವರ ಸಮಗ್ರ ಕಾವ್ಯವನ್ನೂ ಹೊರತಂದರು.

1977 ರಲ್ಲಿ ತೆರೆದ ಬಾಗಿಲು ಕವನ ಸಂಕಲನದ ಮುದ್ರಣದ ಜವಾಬ್ದಾರಿಯನ್ನು ಅವರು ವಹಿಸಿಕೊಂಡಾಗ, ಒಂದೇ ಒಂದು ಮುದ್ರಣ ದೋಷವೂ ಇರಬಾರದೆನ್ನುವ ನಮ್ಮ ತಂದೆಯವರ ಷರತ್ತನ್ನು ಅಕ್ಷರಶಃ ಪಾಲಿಸಿದವರು ಬಾಕಿನ.  1983 ರಲ್ಲಿ ಅವರು ತಮ್ಮ ಲಿಪಿ ಪ್ರಕಾಶನದ ಮೂಲಕ ಕೆ ಎಸ್ ನ ರ  “ನವಪಲ್ಲವ “ಎಂಬ ಕವನಸಂಕಲನವನ್ನೂ ಹೊರತಂದರು. ಆದರೂ  ಅವರಿಗೆ ಅವರಿದ್ದದ್ದು ಒಂದೇ ಕೊರಗು. ಕೆ ಎಸ್ ನ  ಅವರ  ಸಮಗ್ರ ಕಾವ್ಯ ಬರಬೇಕೆನ್ನುವುದು. “ಸಾರ್  ನಿಮ್ಮ ಸಮಗ್ರ  ಕಾವ್ಯ ತರಬೇಕಲ್ಲ” ಎಂದು ಒಂದು ಸಲ ಕೇಳಿಯೂ ಬಿಟ್ಟರು.

“ಆಗಲ್ಲಯ್ಯ.ಕಾಪಿ ರೈಟ್ ತಕರಾರು. ಸ್ಟಾಂಡರ್ಡ್ ಬುಕ್ ಡಿಪೊ ಕಮಲಾನಾಥ್, ಕಾವ್ಯಾಲಯದ ಕೃಷ್ಣಮೂರ್ತಿ, ಮತ್ತೆ ಡಿ ವಿ ಕೆ ಮೂರ್ತಿಯವರ ಹತ್ತಿರ ಸಿಕ್ಕಿಕೊಂಡಿದೆ.” ಎಂದು ನಮ್ಮ ತಂದೆ ಸಮಸ್ಯೆ ತಿಳಿಸಿದರು.

” ಸಾರ್ ನೀವು ಪ್ರಕಾಶನಕ್ಕೆ ನನಗೆ ಅನುಮತಿ ಕೊಡಿ.ಅವರನ್ನು ಒಪ್ಪಿಸುವ ಕೆಲಸ ನನ್ನದು.” ಎಂದು ನಮ್ಮ ತಂದೆಯವರ ಹತ್ತಿರ ಅನುಮತಿ ಪತ್ರ ಪಡೆದು ಸಂಬಂಧಪಟ್ಟ ಪ್ರಕಾಶಕರನ್ನು ಭೇಟಿ ಮಾಡಿ, ಒಂದು ಬಾರಿ ಸಮಗ್ರ ಕಾವ್ಯ ಪ್ರಕಟಣೆಗೆ ಅವರೆಲ್ಲರ ಅನುಮತಿ ಪಡೆದು “ಮೈಸೂರ ಮಲ್ಲಿಗೆ”ಯಿಂದ “ನವಪಲ್ಲವ”ದವರೆಗಿನ “ಮಲ್ಲಿಗೆಯ ಮಾಲೆ” ಹೆಸರಿನ ಸಮಗ್ರ ಕಾವ್ಯವನ್ನು 1986 ರಲ್ಲಿ ಬಿಡುಗಡೆ ಮಾಡಿಯೇ ಬಿಟ್ಟರು.

ಮುಂದೆ 2004 ರ ಜನವರಿಯಲ್ಲಿ “ಮೈಸೂರ ಮಲ್ಲಿಗೆ”ಯಿಂದ ಆರಂಭಿಸಿ  ಕೊನೆಯ ಸಂಕಲನವಾದ “ದೀಪ ಸಾಲಿನ ನಡುವೆ” ವರೆಗಿನ ಕವನಗಳ ಸಮಗ್ರ ಕಾವ್ಯವನ್ನೂ ಪ್ರಕಟಿಸಿದವರು ಇದೇ ಸಾಹಸಿ, ಛಲಗಾರರೇ. ಪುಸ್ತಕ ಬಿಡುಗಡೆಯಾದ ತಕ್ಷಣ ರಾಯಧನದ ಚೆಕ್ ಅನ್ನು ಮನೆಗೇ ತಂದು ನೀಡುತ್ತಿದ್ದ ಪ್ರಾಮಾಣಿಕ ವ್ಯವಹಾರಸ್ಥ ಬಾಕಿನ ಅವರು.

ಎಪ್ಪತ್ತರ ದಶಕದಲ್ಲಿ ಬಾಲಕೃಷ್ಣ ಅವರ ಲಿಪಿ ಮುದ್ರಣದ ಸಣ್ಣ ಆವರಣ ವೈ ಎನ್ ಕೆ,ಲಂಕೇಶ್, ನಿಸಾರ್ ಅಹಮದ್, ಕೆ ಎಸ್ ನ , ಅಡಿಗ, ಎಂ ಎನ್ ವ್ಯಾಸರಾವ್, ಸುಮತಿಂದ್ರ ನಾಡಿಗ,ದೊಡ್ಡರಂಗೇಗೌಡ, ಮುಂತಾದ ಕವಿ, ವಿಮರ್ಶಕರ ನಿತ್ಯದ ಭೇಟಿಯ ತಾಣವಾಗಿತ್ತು. ತಂತಮ್ಮ ಹೊಸ ಕಾವ್ಯ, ವಿಮರ್ಶೆಗಳ ವಿನಿಮಯದ ನಂತರ ಎಲ್ಲರೂ ಹಿಂದಿನ ರಸ್ತೆಯಲ್ಲಿದ್ದ ಸನ್ಮಾನ್ ಹೋಟೆಲಿನತ್ತ ಬೈ ಟೂ ಕಾಫಿಗೆ ಹೊರಡುತ್ತಿದ್ದರು.

ಇತ್ತೀಚೆಗೆ ಅನಾರೋಗ್ಯ ಹಾಗೂ ವಯಸ್ಸಾದ ಕಾರಣ ಬಾಕಿನ ಅವರ ಮುದ್ರಣ ಚಟುವಟಿಕೆ ಕ್ಷೀಣಿಸಿದೆ. ಅವರು ಹೊರತರುತ್ತಿದ್ದ ಗಾಂಧಿ ಬಜಾರ್ ಎಂಬ ಬಡಾವಣೆ ಪತ್ರಿಕೆಯೂ ಈಗ ಕಾಣದೇನೋ.

ಕಾಸರಗೋಡಿನಲ್ಲಿ ಹುಟ್ಟಿ, ಮಂಗಳೂರಿನಲ್ಲಿ ಪ್ರಾಥಮಿಕ ಶಾಲೆ ಓದಿ, ಬೆಂಗಳೂರಿನಲ್ಲಿ ಮುದ್ರಣ ತಂತ್ರಜ್ಞಾನದಲ್ಲಿ ಡಿಪ್ಲೊಮೊ ಪದವಿ ಗಳಿಸಿ, ಮುದ್ರಣ ಹಾಗೂ ಪ್ರಕಾಶನವನ್ನು ಉದ್ಯೋಗವಾಗಿಸಿ, ಸಾರಸ್ವತ ಲೋಕದಲ್ಲಿ ತಮ್ಮದೇ ಕೊಡುಗೆಯನ್ನು ಸಲ್ಲಿಸಿದ ಬಾಕಿನ ಅವರ ಬಗ್ಗೆ ನಮ್ಮ ತಂದೆಯವರಿಗೆ ಅಪಾರ ಮೆಚ್ಚುಗೆ ಇದ್ದಿತೆಂಬುದು ವಾಸ್ತವ ಸಂಗತಿ.

(ಮುಂದುವರಿಯುವುದು….)

ಈ ಲೇಖನ ಸರಣಿಯ ಹಿಂದಿನ ಸಂಚಿಕೆ ಇಲ್ಲಿದೆ:   http://surahonne.com/?p=30549

-ಕೆ ಎನ್ ಮಹಾಬಲ
(ಕೆ ಎಸ್ ನ ಪುತ್ರ, ಬೆಂಗಳೂರು)

8 Responses

  1. ನಯನ ಬಜಕೂಡ್ಲು says:

    ಹೊಸ ವಿಚಾರಗಳನ್ನೊಳಗೊಂಡ ಕೆ ಎಸ್ ನ ಕುರಿತಾದ ಸರಣಿ ಲೇಖನಮಾಲೆ ತುಂಬಾ ಚೆನ್ನಾಗಿ ಮೂಡಿ ಬರುತ್ತಿದೆ. ಪ್ರಸಿದ್ಧ ಕವಿ ವರ್ಯನ ಬದುಕು ಹೇಗಿತ್ತು ಅನ್ನುವ ಕುತೂಹಲಕ್ಕೊಂದು ಉತ್ತರ ಈ ಲೇಖನಗಳ ಸರಣಿ.

  2. km vasundhara says:

    ಪ್ರತಿವಾರವೂ ಹಲವು ಹೊಸ ವಿಚಾರಗಳಿಂದ ಕವಿಯೊಡನೆಯೇ ಸಂಭಾಷಿಸುತ್ತಿರುವಂತಿದೆ..!

  3. Anonymous says:

    ಚೆನ್ನಾಗಿ ಬಿಂಬಿತವಾಗುವ ಕವಿಯ ಕಲೆ ಸೂಪರ್.

  4. ರವೀಂದ್ರ ಕುಮಾರ್ ಎಲ್ವೀ says:

    ಬಾಕಿನ ಅವರ ಪ್ರಯತ್ನ ಸ್ತುತ್ಯಾರ್ಹ.
    ಅವರ ಬಗ್ಗೆ ತಿಳಿದೇ ಇರದಿದ್ದ ನಮಗೆ ಈ ಮೂಲಕ ಅವರ ಪರಿಚಯ ಮಾಡಿಸಿದ ನಿಮಗೆ ಧನ್ಯವಾದಗಳು

  5. ಪ್ರಮೋದಾ ಮೂರ್ತಿ says:

    ಕವಿ ಕೆ.ಎಸ್ ನ ಬದಃಕಿನ ಚಿತ್ರಣ ಹಾಗೂ ಬಾ ಕಿ ನ ಅಂತಹ ವ್ಯಕ್ತಿಗಳ ಪರಿಚಯ ಮಾಡಿ ಕೊಡುತ್ತಿರುವ ಮಹಾಬಲ ಅವರಿಗೆ ಧನ್ಯವಾದಗಳು. ಲೇಖನ ಚೆನ್ನಾಗಿ ಮೂಡಿ ಬರುತ್ತಿದೆ.

  6. ಮಹೇಶ್ವರಿ.ಯು says:

    ಬಾಕಿನ ಅವರ ಸಾಹಿತ್ಯ ಪ್ರೀತಿ ಮತ್ತು ಸಾಹಿತ್ಯ ಸೇವೆಯ ಬಗ್ಗೆ ಕೆ.ವಿ.ತಿರುಮಲೇಶ್, ಎಂ. ವ್ಯಾಸ, ಎಂ.ಗಂಗಾಧರ ಭಟ್ ಮುಂತಾದ ಹಿರಿಯರು ಮಾತನಾಡುವುದನ್ನು ಬಹಳಷ್ಟು ಬಾರಿ ಕೇಳಿಸಿಕೊಂಡಿದ್ದೆ.ಕಾಸರಗೋಡು ಮೂಲದವರಾಗಿದ್ದು ನನ್ನ ವಿಶೇಷ ಅಭಿಮಾನಕ್ಕೆ ಪಾತ್ರರಾದ ಅವರ ಜೊತೆ ಮಲ್ಲಿಗೆಯ ಕವಿ ಕೆ. ಎಸ್. ನ ಅವರ ಒಡನಾಟದ ನೆನಪಿನ ಓದು ಬಹಳ ಆಪ್ತವಾಯಿತು. ಕೃತಜ್ಞತೆಗಳು ಸರ್

  7. Anonymous says:

    Most informative & inspiring.very rare work in these days. I whole heartedly wish this to continue.

  8. ಶಂಕರಿ ಶರ್ಮ, ಪುತ್ತೂರು says:

    ಹಿರಿಯ ಕವಿಗಳ ವಿಶೇಷ ಮಾಹಿತಿಗಳನ್ನು ಹೊತ್ತ ಸೊಗಸಾದ ಲೇಖನಮಾಲೆ.. ಧನ್ಯವಾದಗಳು ಸರ್.

Leave a Reply to Anonymous Cancel reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: