‘ನೆಮ್ಮದಿಯ ನೆಲೆ’-ಎಸಳು 1

Share Button

ಹೊಸವರ್ಷದಲ್ಲಿ, ಹೊಸ ಪ್ರಯತ್ನವಾಗಿ ಶ್ರೀಮತಿ ಬಿ.ಆರ್.ನಾಗರತ್ನ ಅವರ ‘ನೆಮ್ಮದಿಯ ನೆಲೆ’ ಕಾದಂಬರಿಯು ಸುರಹೊನ್ನೆಯಲ್ಲಿ ಮೂಡಿ ಬರಲಿದೆ…

ಮೈಸೂರಿನ ನಿವಾಸಿಯಾದ ಶ್ರೀಮತಿ ಬಿ.ಆರ್,ನಾಗರತ್ನ ಅವರು ಈಗಾಗಲೇ ತಮ್ಮ ಕಥೆಗಳು, ಕವನಗಳು, ಪ್ರಬಂಧಗಳು, ಅಂಕಣಬರಹಗಳ ಮೂಲಕ ಸಾಹಿತ್ಯಾಸಕ್ತರಿಗೆ ಪರಿಚಿತರು. ನಾಡಿನ ಹಲವಾರು ಪತ್ರಿಕೆಗಳಲ್ಲಿ ಇವರ ಬರಹಗಳು ಪ್ರಕಟವಾಗಿವೆ. ಕಥೆ, ವ್ಯಕ್ತಿಚಿತ್ರ, ಪ್ರಬಂಧ, ಚುಟುಕು, ಮಕ್ಕಳ ಕಥೆ ಸಂಕಲನಗಳು, ಆಧುನಿಕ ವಚನಗಳು..ಹೀಗೆ ವಿವಿಧ ಪ್ರಕಾರಗಳಲ್ಲಿ ಇವರು ಬರೆದ ಒಟ್ಟು 27 ಕೃತಿಗಳು ಪ್ರಕಟವಾಗಿವೆ. ಇವಲ್ಲದೆ, ಕೆಲವು ಕೃತಿಗಳ ಸಂಪಾದಕತ್ವದಲ್ಲಿಯೂ ಛಾಪು ಮೂಡಿಸಿದ್ದಾರೆ. ಮೈಸೂರಿನ ಹಲವು ಸಾಹಿತ್ಯಿಕ ಸಂಘಟನೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುತ್ತಿದ್ದಾರೆ. ಸಾಹಿತ್ಯಸೇವೆಗಾಗಿ, ಇವರಿಗೆ ‘ದ.ರಾ.ಬೇಂದ್ರೆ ಪ್ರಶಸ್ತಿ’, ‘ಕುಮಾರ ರಾಮ ಪ್ರಶಸ್ತಿ’, ‘ಅತ್ತಿಮಬ್ಬೆ ದತ್ತಿ ಪ್ರಶಸ್ತಿ’……ಹಾಗೂ ಇನ್ನಿತರ ಸಂಘ ಸಂಸ್ಥೆಗಳು ಕೊಡುವ ಗೌರವಗಳು ಸಂದಿವೆ. ಗೃಹಿಣಿಯಾಗಿ, ಹಿರಿಯ ಲೇಖಕಿಯಾಗಿದ್ದು, ಬಿಡುವಿಲ್ಲದಿದ್ದರೂ, ಕಲಿಕೆಗೆ ವಯಸ್ಸಿನ ಹಂಗಿಲ್ಲ ಎಂಬಂತೆ ಈಗಲೂ ಚಿತ್ರಕಲೆ ಕಲಿಯುತ್ತಿರುವುದು, ಮಕ್ಕಳಿಗಾಗಿ ಸಂಬಂಧಿಸಿದ ಸಂಸ್ಥೆಗಳಲ್ಲಿ, ಆಕಾಶವಾಣಿಯಲ್ಲಿ ಮಕ್ಕಳಿಗಾಗಿ ಕಥೆ ಹೇಳುವುದು, ಗ್ಲಾಸ್ ಪೈಂಟಿಂಗ್, ಕಸೂತಿ, ಟೈಲರಿಂಗ್ ಕಲಿಸುವುದು.. …ಹೀಗೆ ಇವರ ಆಸಕ್ತಿ ಹಾಗೂ ಕಾರ್ಯಕ್ಷೇತ್ರ ಬಹುಮುಖವಾಗಿದೆ. ಇವರ ಪ್ರಥಮ ಕಾದಂಬರಿ ಸುರಹೊನ್ನೆಯಲ್ಲಿ ಪ್ರಕಟವಾಗಲಿದೆ ಎಂಬುದು ಹೆಮ್ಮೆಯ ವಿಚಾರ.

ಇನ್ನು ಕಾದಂಬರಿಯನ್ನು ಓದೋಣ……
ಹೇಮಮಾಲಾ.ಬಿ
================

ನೆಮ್ಮದಿಯ ನೆಲೆ

.           ಗಂಡನ ಹಾದಿಯನ್ನು ಕಾಯುತ್ತಾ ಗೇಟಿನ ಬಳಿಗೆ ಬಂದು ನಿಂತು ನಮ್ಮವರನ್ನು ಕಾಯುತ್ತಿದ್ದ ನನ್ನ ದೃಷ್ಟಿ ಎದುರಿಗೆ ಇದ್ದ ಪಾರ್ಕಿನ ಕಡೆಗೆ ಹರಿಯಿತು, ವಾಯು ವಿಹಾರಕ್ಕೆಂದು ಬಂದಿದ್ದ ಹಿರಿಯರು, ಆಟವಾಡಲು ಬಂದಿದ್ದ ಮಕ್ಕಳು ಅಂದಿನ ಚಟುವಟಿಕೆಯನ್ನು ಮುಗಿಸಿ ಪರಸ್ಪರ ಬೀಳ್ಕೊಂಡು ತಮ್ಮತಮ್ಮ ಮನೆಗಳಿಗೆ ಹಿಂದಿರುಗಲು ಅಣಿಯಾಗುತ್ತಿದ್ದರು. ಇವತ್ತು ವಾಕಿಂಗ್ ಹೋಗದೇ ಇದ್ದದ್ದು ಆಗ ನೆನಪಾಯಿತು. ಹೌದು ಗೆಳತಿಯ ಮನೆಗೆ ಪೂಜೆಗೆಂದು ಹೋಗಿ ಹಿಂದಿರುಗಿದಾಗಲೇ ಸಂಜೆ ನಾಲ್ಕು ಗಂಟೆಯಾಗಿತ್ತು. ಅಲ್ಲಿ ಕೂತು ಕೂತು ಸಾಕಾಗಿತ್ತು. ಸ್ವಲ್ಪ ಹಾಗೇ ಉರುಳಾಡೋಣವೆಂದು ಅಡ್ಡಾಗಿದ್ದೆ. ಆದರೆ ಗಡದ್ದಾಗಿ ಉಂಡದ್ದರಿಂದ ಹೊಟ್ಟೆಯೂ ಭಾರವಾಗಿತ್ತು. ಪಟ್ಟಾಗಿ ನಿದ್ರೆ ಹತ್ತಿಬಿಟ್ಟಿತು. ಎದ್ದಾಗಲೇ ದಿನಕರನು ತನ್ನ ದೈನಂದಿನ ಕಾರ್ಯಮುಗಿಸಿ ಪಶ್ಚಿಮಕ್ಕೆ ಹೊರಟಾಗಿತ್ತು. ನಿಶಾದೇವಿಯ ಆಗಮನದ ಸೂಚನೆ ಕಂಡುಬಂದದ್ದರಿಂದ ಆಹಾರವನ್ನು ಅರಸಿ ಹೊರಕ್ಕೆ ಹೋಗಿದ್ದ ಹಕ್ಕಿಪಕ್ಷಿಗಳು ತಮ್ಮ ಗೂಡು ಸೇರುವ ತವಕದಿಂದ ಗುಂಪುಗುಂಪಾಗಿ ಆಕಾಶದಲ್ಲಿ ಹಾರುತ್ತಾ ಹೋಗುತ್ತಿವೆ. ಇತ್ತ ಹೋಗುತ್ತಿರುವವರನ್ನು ಅತ್ತ ಆಸರೆಯನ್ನು ಅರಸುತ್ತಾ ಬರುತ್ತಿರುವವರನ್ನು ಒಂದೆಡೆ ತಲೆಬಾಗಿ ನಮಸ್ಕರಿಸುತ್ತಾ, ಇನ್ನೊಂದೆಡೆ ಆಹ್ವಾನಿಸುತ್ತಿವೆಯೇನೋ ಎಂಬಂತೆ ಮರಗಿಡಗಳು ತಮ್ಮ ರೆಂಬೆಕೊಂಬೆಗಳನ್ನು ಅತ್ತಿತ್ತ ತೊನೆಯುತ್ತಾ ತಂಗಾಳಿಯನ್ನು ಬೀಸುತ್ತಿದ್ದವು. ಆಹಾ ! ಎಂಥಹ ಆಹ್ಲಾದಕರ ವಾತಾವರಣ. ಅದನ್ನು ಆಸ್ವಾದಿಸುತ್ತಾ ನಿಂತ ನನಗೆ ಮೊಬೈಲ್ ಸದ್ದು ಕೇಳಿಸಿತು. ಕರೆಮಾಡಿದ ನಂಬರ್ ಕಡೆಗೆ ಕಣ್ಣಾಡಿಸಿದೆ. ನನ್ನ ಪತಿಯದ್ದೇ ಕರೆ. ಅಲ್ಲಲ್ಲ, ಎಸ್.ಎಂ.ಎಸ್. ಸಂದೇಶ. ಸುಕನ್ಯಾ, ನಾನು ಬರುವುದು ಸ್ವಲ್ಪ ತಡವಾಗುತ್ತದೆ, ನನಗಾಗಿ ಕಾಯದೇ ಊಟ ಮುಗಿಸಿ ಮಲಗು. ನನ್ನ ಬಳಿ ಮನೆ ಮತ್ತು ಗೇಟಿನ ಬೀಗದ ಕೈಗಳಿವೆ. ಎಂದಿತ್ತು. ಸುಕನ್ಯಾಳಿಗೆ ಇದೇನೂ ಹೊಸದಲ್ಲ. ಆದರೂ ಏಕೋ ಏನೋ ಮನಸ್ಸಿಗೆ ನೋವಾಯಿತು. ಈಗಲಾದರೂ ಇವರು ಮನೆಯಲ್ಲಿ ನನ್ನೊಡನೆ ಇರಬಾರದೇ? ಒಂಟಿಯಾಗಿ ಎಷ್ಟೂಂತ ಕಾಲಕಳೆಯಲಿ. ಛೇ..ನಿಂತು ನಿಂತು ಕಾಲುಗಳು ಜೋಮು ಹಿಡಿಯಲು ಪ್ರಾರಂಭಿಸಿದವು. ಕಾಲುಗಳನ್ನು ಬದಲಾಯಿಸಿ, ಬದಲಾಯಿಸಿ ಸಾಕಾಗಿ ಮನೆಯೊಳಕ್ಕೆ ಬಂದು ಮುಂಬಾಗಿಲನ್ನು ಭದ್ರಪಡಿಸಿದೆ. ಹಾ ! ಈ ಮೂರ್ಖಪೆಟ್ಟಿಗೆಯೇ ನನಗೆ ಗತಿ ಎಂದುಕೊಂಡು, ತಡಿ ಒಂದು ಲೋಟ ಕಾಫಿ ಬೆರೆಸಿಕೊಂಡು ಬರೋಣವೆಂದು ಅಡುಗೆಮನೆಕಡೆಗೆ ನಡೆದೆ. ಸಿದ್ಧವಾಗಿದ್ದ ಡಿಕಾಕ್ಷನ್ ತೆಗೆದುಕೊಂಡು ಒಂದು ಪಾತ್ರೆಯಲ್ಲಿ ಹಾಕಿ ಅದಕ್ಕೊಂದಿಷ್ಟು ಬೆಲ್ಲ, ಕಾಯಿಸಿದ ಹಾಲನ್ನು ಹಾಕಿ ಕುದಿಸಿ ಲೋಟವೊಂದಕ್ಕೆ ಬಗ್ಗಿಸಿಕೊಂಡು ಕೈಯಲ್ಲಿಡಿದು ಹೊರಬಂದೆ. ನನ್ನ ಈ ಬೆಲ್ಲದ ಮೇಲಿದ್ದ ವ್ಯಾಮೋಹ ಮನೆಯವರೆಲ್ಲರಿಗೂ ಅಚ್ಚರಿಯ ವಿಷಯವಾಗಿತ್ತು. ಯಾರು ಎಷ್ಟೇ ಅಣಕವಾಡಿದರೂ ಅದನ್ನು ಇಷ್ಟಪಟ್ಟು ಉಪಯೋಗಿಸುವುದನ್ನು ನಾನು ಬಿಟ್ಟಿರಲಿಲ್ಲ. ಕಾಫಿ, ಟೀ, ಪಾನಕ ಎಲ್ಲದಕ್ಕೂ ಬೆಲ್ಲವೇ ನನ್ನ ಸಂಗಾತಿ. ಸಿಹಿ ಅಡುಗೆಗಳಲ್ಲಿ ಬೆಲ್ಲ ಹಾಕಿ ಮಾಡಿದ ತಿನಿಸುಗಳೇ ನನಗೆ ಬಹಳ ಇಷ್ಟ. ಮನೆಯವರಿಗೆಲ್ಲ ಅವರಿಗಿಷ್ಟವಾದದ್ದನ್ನೇ ಮಾಡಿಕೊಟ್ಟರೂ ನಾನು ಮಾತ್ರ ಈ ಪದ್ಧತಿಯನ್ನು ಮುಂದುವರೆಸಿಕೊಂಡು ಬಂದಿದ್ದೆ. ಹಾಲಿಗೆ ಬಂದು ಸೋಫಾದಲ್ಲಿ ಆಸೀನಳಾಗಿ ಟಿ.ವಿ.ರಿಮೋಟಿನ ಬಟನ್‌ಗಳನ್ನು ಒತ್ತುತ್ತಾ ಚಾನಲ್‌ಗಳನ್ನು ಬದಲಾಯಿಸಿದರೂ ಯಾವ ಕಾರ್ಯಕ್ರಮವೂ ಮನಸ್ಸಿಗೆ ಮುದಕೊಡವಂತೆ ಕಂಡುಬರದೆ ಬೇಸರದಿಂದ ಟ.ವಿ. ಸ್ವಿಚ್ ‌ಆಫ್ ಮಾಡಿದೆ. ಕಾಫಿ ಹೀರುತ್ತಾ ನನಗೆ ನನ್ನ ಐವತ್ತು ವರ್ಷಗಳ ನೆನಪಿನ ಸುರುಳಿ ಬಿಚ್ಚತೊಡಗಿತು.

.           ಮೈಸೂರಿನ ಒಂಟಿಕೊಪ್ಪಲಿನಲ್ಲಿದ್ದ ನನ್ನಪ್ಪನ ಮನೆ, ನಾನು ಆಡಿ ಬೆಳೆದ ಮನೆ, ವ್ಹಾ ! ಈಗಲೂ ಕಣ್ಣಿಗೆ ಕಟ್ಟಿದಂತಿದೆ. ಅದು ನನ್ನಪ್ಪನ ಅಪ್ಪ, ಅಂದರೆ ನನ್ನ ತಾತ ಆಗಿನ ಕಾಲದಲ್ಲಿ ಕಟ್ಟಿಸಿದ್ದು. ಅದೆಷ್ಟೋ ಚದರದ ಮನೆ. ಅದರ ಅಳತೆಯ ಬಗ್ಗೆ ಒಮ್ಮೆ ಅಪ್ಪನನ್ನು ಪ್ರಶ್ನೆ ಮಾಡಿದ್ದೆ. ಅವರು ವಿವರಗಳನ್ನು ತಿಳಿಸಿದ್ದರು. ಏಕೋ ಈಗ ನೆನಪಾಗುತ್ತಿಲ್ಲ. ಅದರ ವಿಶಾಲತೆಯ ಅರಿವಿದೆ. ದೊಡ್ಡದಾದ ತೊಟ್ಟಿಮನೆ. ಮುಂಭಾಗದಲ್ಲಿದ್ದ ಎರಡು ಭದ್ರವಾದ ಕಂಬಗಳು. ಅದರ ಇಕ್ಕೆಲಗಳಲ್ಲಿ ಎರಡು ಜಗುಲಿಗಳು. ಅದನ್ನು ಹತ್ತಿ ಕುಳಿತುಕೊಳ್ಳಲು ಅನುಕೂಲವಾಗುವಂತೆ ಮುಂಬಾಗಿಲ ಬಳಿ ಮೆಟ್ಟಿಲುಗಳಿದ್ದವು. ಬಾಗಿಲುದಾಟಿ ಒಳ ನಡೆದರೆ ಉದ್ದನೆಯ ವೆರಾಂಡಾ. ಅದರ ಎರಡೂ ಪಕ್ಕಗಳಲ್ಲಿ ಒಂದೊಂದು ರೂಮುಗಳಿದ್ದವು. ಮಕ್ಕಳು ಓದಿಕೊಳ್ಳಲು ಬಳಸುವಂತಿದ್ದವು. ಹಾಗೇ ಹೊರಗಿನವರ್‍ಯಾರಾದರೂ ಬಂದಾಗ ಅಲ್ಲಿ ಇರಲು ಅನುಕೂಲವಾಗಿತ್ತು. ವೆರಾಂಡಾ ದಾಟಿ ಒಳನಡೆದರೆ ದೊಡ್ಡದಾದ ನಡುಮನೆ. ಎಡ, ಬಲ ಭಾಗಗಳಲ್ಲಿ ಎರಡೆರಡು ರೂಮುಗಳಿದ್ದವು. ನಡುಮನೆಯಿಂದ ಒಳನಡೆದರೆ ಅಲ್ಲಿ ಸುತ್ತಲೂ ಶಾಲೆಯ ಆವರಣದಂತೆ ಜಾಗ. ಅದನ್ನು ಸುತ್ತುವರಿದ ಕಂಬಗಳು. ಅದಕ್ಕೆ ಹೊಂದಿಕೊಂಡಂತೆ ದೇವರಮನೆ, ಅಡುಗೆಮನೆ, ಬಚ್ಚಲುಮನೆ, ಪಕ್ಕದಲ್ಲಿ ಶೌಚಾಲಯ. ಹಿಂದಕ್ಕೆ ಸ್ವಲ್ಪ ಹಿತ್ತಲು. ಕಂಬಗಳ ಮಧ್ಯಭಾಗದಲ್ಲಿದ್ದ ತೊಟ್ಟಿಯಲ್ಲಿ ಬಟ್ಟೆ ಒಗೆಯಲು, ಪಾತ್ರೆ ತೊಳೆಯಲು ಕಲ್ಲು ಹಾಸಿನ ಅಂಗಳ. ನೀರಿನ ವ್ಯವಸ್ಥೆಯಿತ್ತು. ಅಲ್ಲಿಗೆ ಮಳೆ ಗಾಳಿ ಬಿಸಿಲು ಬೀಳದಂತೆ ಮೇಲೆ ಗೋಪುರಾಕಾರದ ಛಾವಣಿ. ಮನೆಗೆ ಪೂರ್ತಿ ಮಂಗಳೂರು ಹೆಂಚಿನದ್ದೇ ಛಾವಣಿ. ಗಾಳಿ ಬೆಳಕು ಧಾರಾಳವಾಗಿ ಬರುವಂತೆ ಅನುಕೂಲವಿತ್ತು. ಹಿತ್ತಲಲ್ಲಿದ್ದ ಬಾವಿಗೆ ಪಂಪು ಹಾಕಿಸಿದ್ದರು. ವಿದ್ಯುತ್ತಿನ ಅನುಕೂಲವಿದ್ದದ್ದರಿಂದ ನೀರಿಗೇನೂ ಅನಾನುಕೂಲವಿರಲಿಲ್ಲ. ಮನೆಯ ಸುತ್ತಲೂ ಆಳೆತ್ತರದ ಕಾಂಪೌಂಡು. ಮನೆಯ ಮುಂಭಾಗದಲ್ಲೂ ವಿಶಾಲವಾದ ಜಾಗವಿತ್ತು. ಆ ಮನೆಗೆ ನನ್ನ ಅಪ್ಪ ನರಸಿಂಹಯ್ಯ ಯಜಮಾನರು. ಮಾಧ್ಯಮಿಕ ಶಾಲೆಯಲ್ಲಿ ಮಾಸ್ತರರಾಗಿದ್ದರು. ಅವರ ಹೆಂಡತಿ ಭಾಗೀರಥಿ. ಅವರೇ ನನ್ನ ಹಡೆದಮ್ಮ. ಆ ದಂಪತಿಗಳಿಗೆ ಎರಡು ಗಂಡು, ಎರಡು ಹೆಣ್ಣುಮಕ್ಕಳು. ಅವರಲ್ಲಿ ನಾನೇ ಕಿರಿಯವಳು. ನನ್ನ ತಾತನವರಿಗೆ ನನ್ನಪ್ಪ ಒಬ್ಬರೇ ಸಂತಾನ. ಆದ್ದರಿಂದ ಪಿತ್ರಾರ್ಜಿತವಾಗಿ ಈ ಮನೆ ಅವರಿಗೆ ಬಂದಿತ್ತು. ಇದು ನಮ್ಮೆಲ್ಲರ ಆಶ್ರಯದ ಸಮಸ್ಯೆಯನ್ನು ನೀಗಿದರೆ ಮೈಸೂರಿನ ಸಮೀಪದ ಪಾಲಳ್ಳಿಯಲ್ಲಿದ್ದ ಜಮೀನಿನಿಂದ ಬರುತ್ತಿದ್ದ ಉತ್ಪತ್ತಿ ನಮ್ಮ ಅಶನಕ್ಕೆ ಆಧಾರ ನೀಡಿತ್ತು. ಜೊತೆಗೆ ನನ್ನಪ್ಪ ಮಾಸ್ತರರ ಕೆಲಸವನ್ನು ನಿಭಾಯಿಸುತ್ತಲೇ ಸಂಜೆ ಖಾಸಗಿ ಹೋಟೆಲ್ ಒಂದರಲ್ಲಿ ಲೆಕ್ಕಪತ್ರ ಬರೆಯುವ ಕರಣಿಕ ವೃತ್ತಿಯನ್ನೂ ಮಾಡುತ್ತಿದ್ದರು. ನಮ್ಮ ಅಮ್ಮ ಕೂಡ ಈ ಮನೆಗೆ ಸಿರಿಯನ್ನು ಹೊತ್ತು ತಂದಿದ್ದರು. ಆಕೆಯು ತನ್ನ ಚಿಕ್ಕಂದಿನಲ್ಲಿಯೇ ಹೆತ್ತಮ್ಮನನ್ನು ಕಳೆದುಕೊಂಡಿದ್ದರಿಂದ ಅಜ್ಜಿಯ ಆಶ್ರಯದಲ್ಲಿ ಬೆಳೆದವಳು. ತಕ್ಕಮಟ್ಟಿಗೆ ಓದುಬರಹ ಕಲಿತಿದ್ದರು. ನಮ್ಮಪ್ಪನ ಪಾಲಿಗೆ ಅದೃಷ್ಟದೇವತೆ. ತನ್ನಜ್ಜಿಯಿಂದ ಬಳುವಳಿಯಾಗಿ ಬಂದ ತೋಟ ನಮ್ಮಪ್ಪನ ಜಮೀನಿಗೆ ಹೊಂದಿಕೊಂಡಂತೆಯೇ ಇತ್ತು. ದೂರದ ನೆಂಟಸ್ತನ ಕುದುರಿ ಅಪ್ಪ ಅಮ್ಮ ದಂಪತಿಗಳಾಗೇ ಬಿಟ್ಟರು. ಅದೂ ಹೇಳಿ ಮಾಡಿಸಿದ ಜೋಡಿ. ಹೀಗಾಗಿ ಕುಟುಂಬ ನಿರ್ವಹಣೆ ಯಾವ ತಾಪತ್ರಯವಿಲ್ಲದೆ ಸಾಗುತ್ತಿತ್ತು.

(ಮುಂದುವರಿಯುವುದು)
-ಬಿ.ಆರ್ ನಾಗರತ್ನ, ಮೈಸೂರು

12 Responses

  1. Hema says:

    ಶುಭಾರಂಭ..ಸೊಗಸಾಗಿದೆ.

  2. ನಯನ ಬಜಕೂಡ್ಲು says:

    ಕಾದಂಬರಿಯ ಆರಂಭವೇ ಬಹಳ ಸೊಗಸಾಗಿದೆ. ಹಂತ ಹಂತವಾಗಿ ಇಳಿ ಸಂಜೆ ಆವರಿಸುವ ಪರಿ, ಕುಟುಂಬದ ಕುರಿತಾದ ವಿವರ, ಹಿರಿಯರ ಕಾಲದ ದೊಡ್ಡ ಮನೆಯ ಕುರಿತಾದ ವಿವರ ಎಲ್ಲವೂ ಆಕರ್ಷಕವಾಗಿದೆ, ಬಲು ಅಪ್ಯಾಯಮಾನ ಅನಿಸುತ್ತದೆ.

  3. ನಯನ ಬಜಕೂಡ್ಲು says:

    ಮುಂದಿನ ಭಾಗಕ್ಕೆ ಕಾಯುವಂತಾಗಿದೆ

  4. B.k.meenakshi says:

    ಕಾದಂಬರಿ ಆರಂಭದಲ್ಲೇ ಗಮನ ಸೆಳೆಯುತ್ತದೆ. ಬಹಳ ಹಿಡಿತದಿಂದ ಸಾಗುತ್ತದೆ. ಅಭಿನಂದನೆಗಳು ಮೇಡಂ

  5. Anonymous says:

    ಧನ್ಯವಾದಗಳು ಸಾಹಿತ್ಯ ಸಹೃದಯ ರಿಗೆ.

  6. Anonymous says:

    ನಾನು ಬರೆದ ಪ್ರಥಮ ಕಾದಂಬರಿಯ ಪ್ರಾರಂಭವನ್ನು ಓದಿ ಪ್ರತಿಕ್ರಿಯಿಸಿದ ಸಾಹಿತ್ಯ ಬಂಧುಗಳಿಗೆ ನನ್ನ ಧನ್ಯವಾದಗಳು.

  7. ಮಾಲತಿ says:

    ಕಥೆಯ ಪ್ರಾರಂಭ …ಸೂರ್ಯ, ಪಕ್ಷಿ , ತಾತನ ಮನೆಯ ವರ್ಣನೆ ಚೆನ್ನಾಗಿದೆ ಮತ್ತು ಸುಕನ್ಯಳ ಒಂಟಿತನ ಕುತುಹಲ ಮೂಡಿಸುತ್ತಿದೆ

  8. ಶಂಕರಿ ಶರ್ಮ, ಪುತ್ತೂರು says:

    ಇಳಿ ಸಂಜೆಯ ಸೊಗಸಾದ ವರ್ಣನೆಯೊಂದಿಗೆ ಪ್ರಾರಂಭವಾದ ಕಾದಂಬರಿಯು, ಹಳ್ಳಿ ಮನೆಯ ಚಿತ್ರಣದೊಂದಿಗೆ ಓದುಗರ ಮನವನ್ನು ಹಿಡಿದಿಟ್ಟಿದೆ. ಮುಂದಿನ ಭಾಗಗಳ ಕುತೂಹಲಕಾರಿ ಘಟ್ಟಗಳಿಗಾಗಿ ಕಾಯುವೆವು..ಧನ್ಯವಾದಗಳು ಮೇಡಂ.

  9. ಸುಮ ಕೃಷ್ಣ says:

    ಸುಲಲಿತವಾಗಿ ಓದಿಸಿಕೊಂಡು ಹೋಗುತ್ತದೆ, ಸಂಜೆಯ ವರ್ಣನೆ ಸೊಗಸಾಗಿದೆ, prapanchada
    ಯಾವ ಮೂಲೇಗೆ ಹೋಗಲಿ, ನೆಮ್ಮದಿ ಕಾಣುವುದು ನಮ್ಮ ಮನೆಯಲ್ಲಿಯೇ ಅನ್ನುವುದು ಸತ್ಯ, ಮುಂದುವರೆಯುವ ಭಾಗಕ್ಕೆ ಕಾತುರದಿಂದ ಕಾಯುತ್ತಿರುವೆ l

  10. ಬಿ.ಆರ್.ನಾಗರತ್ನ says:

    ಧನ್ಯವಾದಗಳು.

  11. Anonymous says:

    ಚೆನ್ನಾಗಿದೆ ಕತೆ ಓದಿಸಿಕೊಂಡು ಹೋಗುತ್ತದ

  12. Geetha says:

    ಕಥೆಯ ಆರಂಭ ಸೊಗಸಾಗಿ ಮೂಡಿಬಂದಿದೆ. ಮುಂದಿನ ಸಂಚಿಕೆಗೆ ಕುತೂಹಲದಿಂದ ಕಾಯುವಂತೆ ಮಾಡಿದೆ.

Leave a Reply to Hema Cancel reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: