ಸೌಂದರ್ಯದ ಸಿರಿ ಮುಳ್ಳಯ್ಯನ ಗಿರಿಧಾಮ

Share Button
 
ಚಿಕ್ಕಮಗಳೂರು ತಾಲೂಕು ಕೇಂದ್ರದಿಂದ ಸುಮಾರು 20 ಕಿಲೋಮೀಟರ್ ಕಾಫಿ ಎಸ್ಟೆಟ್ ಮಾರ್ಗವಾಗಿ ಮುಗಿಲೆತ್ತರದ ಮರಗಳು  ಕಾಫಿ ತೋಟದ ಅಚ್ಚ ಹಸಿರನ್ನು  ಸವಿಯುತ್ತಾ ಸಂಚರಿಸಿದರೆ ದ್ರೋಣ ಪರ್ವತ ಸೀತಾಯ್ಯನ ಬೆಟ್ಟ ಮುಳ್ಳಯ್ಯನಗಿರಿ ಬೆಟ್ಟಗಳ ಸಾಲು  ತಣ್ಣನೆಯ ಗಾಳಿ ಜೊತೆಗೆ ಬೆಳ್ಳಿ ಮೋಡಗಳೊಂದಿಗೆ  ಪ್ರವಾಸಿಗರನ್ನು  ಆಕರ್ಷಿಸುತ್ತದೆ.
ಮುಳ್ಳಯ್ಯನಗಿರಿಗೆ ತೆರಳುವ ಚಾರಣಿಗರಿಗೆ ಸಾಮಾನ್ಯವಾಗಿ ಅಕ್ಟೋಬರ್ ನಿಂದ ಫೆಬ್ರವರಿ ತಿಂಗಳು ಸೂಕ್ತವಾದ ಸಮಯವಾಗಿದೆ. ಮಳೆ ಇರದ ಕಾರಣ ಚಾರಣ ಮಾಡಲು ಉತ್ತಮ ವಾತಾವರಣ ಈ ಸಮಯದಲ್ಲಿ ಸಿಗುತ್ತದೆ.  ಜನವರಿ ಹತ್ತರಂದು ನಾನು ನಮ್ಮ ಯೂನಿಯನ್ ಸಭೆಯ ಕಾರಣ ಚಿಕ್ಕಮಗಳೂರಿಗೆ  ಹೊರಟಿದ್ದೆ. ಪೂರ್ವ ನಿರ್ಧಾರದಂತೆ ನಾನು ಚಿಕ್ಕಬಳ್ಳಾಪುರ ಜಿಲ್ಲೆಯ ನನ್ನ ಸ್ನೇಹಿತರೊಂದಿಗೆ ಶನಿವಾರ ರಾತ್ರಿ ಬೆನಕ ವಸತಿ ಗೃಹ ದಲ್ಲಿ ವಾಸ್ತವ್ಯ ಮಾಡಿದ್ದೆ. ಬೆಳಿಗ್ಗೆ 5  ಗಂಟೆಗೆ ನಾವು ಮುಳ್ಳಯ್ಯನ ಗಿರಿ ಬೆಟ್ಟಕ್ಕೆ ತೆರಳುವ ನಿರ್ಧಾರವೂ ಆಯಿತು. ಪೂರ್ವನಿರ್ಧಾರದಂತೆ ನಸುಕಿನಲ್ಲೆ ಎದ್ದು ನಾವು ಐವರು ಮುಳ್ಳಯ್ಯನಗಿರಿ ಕಡೆಗೆ  ಕಾರಿನಲ್ಲಿ ಪ್ರಯಾಣ ಬೆಳೆಸಿದೆವು.
.
ರಾಜ್ಯದಲ್ಲೇ  ಅತೀ  ಎತ್ತರ  ಗಿರಿಧಾಮ  ಎಂಬ ಖ್ಯಾತಿಯನ್ನು  ಪಡೆದಿರುವ ಈ ಗಿರಿಧಾಮ    ಸಮುದ್ರ ಮಟ್ಟದಿಂದ  ಸರಿ ಸುಮಾರು  6330  ಅಡಿಗಳಷ್ಟು ಎತ್ತರದಲ್ಲಿದೆ  ಆದುದರಿಂದಲೇ ಇದು  ಚಾರಣಿಗರಿಗೆ  ಹೇಳಿಮಾಡಿಸಿದ  ಸ್ಥಳವಾಗಿದೆ. ಪ್ರಕೃತಿ ಪ್ರೀಯರಿಗೆ ಛಾಯಾಗ್ರಾಹಕರಿಗೆ ಇದು ಸ್ವರ್ಗ. ಬೆಟ್ಟದ  ಬುಡದಲ್ಲಿ ನಿಂತು  ತಲೆ ಎತ್ತಿ ಮೇಲೆ  ನೋಡಿದರೆ  ಮೋಡಗಳು  ತನ್ನ ಬಾಹುಗಳಲ್ಲಿ ಗಿರಿಶಿಖರವನ್ನು ಅಪ್ಪಿಕೊಂಡಿರಬಹುದು ಅನ್ನಿಸತ್ತದೆ. ಬೆಟ್ಟವೇರಿ ನೋಡಿದ ಮೇಲೆ ಎಲ್ಲೆಲ್ಲೂ ಬೆಟ್ಟಗಳ ಸಾಲು ಕಣ್ಣಿಗೆ ಹಬ್ಬ ತರುತ್ತದೆ.ನಾವು ಬೆಳಂಬೆಳಗ್ಗೆ ಹೊರಟಿರುವುದರಿಂದ   ಸುತ್ತಲೂ ಮಂಜಿನ ಹನಿಗಳು ಹಾಲಿನ ಮೋಡವೇ ಆಗಿ ಆವರಿಸಿಕೊಂಡಂತೆ  ಅನುಭವವಾಯಿತು. ಇಲ್ಲಿನ ಗಿರಿಶಿಖರವನ್ನು ಹತ್ತುವಾಗಲಂತೂ ಸಿಗುವ ಸಂತೋಷ ಬೇರೆಲ್ಲೂ ಸಿಗಲಾರದು ಅನ್ನಿಸುತ್ತದೆ.

ಕಿರಿದಾದ ಮಾರ್ಗ ಕಾರು ಬೈಕ್ ಗಳ ಹಾರನ್ ಸದ್ದು ಇದರಲ್ಲಿ ಸಂಚರಿಸುವಾಗ ನಾವೆಲ್ಲಿ ಹಿಮಾಲಯದ ಪರ್ವತದ ತಪ್ಪಲಿನಲ್ಲಿ ಇದ್ದೇವೇನೋ ಅನ್ನುವ ಅನುಭವದ  ಜೊತೆಗೆ ಸಣ್ಣಭಯ, ಒಂದು ಬದಿಯಲ್ಲಿ ಬೆಟ್ಟದ ಧರೆ ಇನ್ನೊಂದು ಬದಿಯಲ್ಲಿ ನೂರಾರು ಅಡಿಗಳಷ್ಟು ಆಳವಿರುವ ಕಂದಕ ಈ ಕಂದಕಗಳೆಲ್ಲವೂ ಮಂಜಿನಿಂದ ಆವರಿಸಿ ಹಾಲಿನ ಹೊಳೆಯಂತೆ ಕಾಣುತ್ತವೆ. ಇವುಗಳ ನಡುವೆ ಅಪಾಯಕಾರಿ ತಿರುವಿನಿಂದ ಕೂಡಿದ ರಸ್ತೆಗಳು  ಇದರಲ್ಲಿ ಸಂಚರಿಸುವಾಗ ಮೈ ಜುಮ್ಮೆನ್ನುವ ರೋಮಾಂಚಕ ಅನುಭವವಾಗುತ್ತದೆ.ಈ ಅನುಭವಕ್ಕೆ ತುಸು ತಾಳ್ಮೆ ಜೊತೆಗೆ ಸಹನೆ ಅತ್ಯಗತ್ಯ ಅನ್ನಿಸುತ್ತದೆ.

ಮುಳ್ಳಯ್ಯನಗಿರಿ ತಲುಪುವ ಮೊದಲು ಸಿಗುವ ಸ್ಥಳ ಸೀತಾಳಯ್ಯನ ಗಿರಿ. ಈ ಸ್ಥಳದಲ್ಲಿ ಸೀತಾಳಯ್ಯ ತಪಸ್ಸು ಮಾಡಿದ್ದರಿಂದ ಈ ಗಿರಿಗೆ ಸೀತಾಳಯ್ಯನ ಗಿರಿ ಎಂದು ಹೆಸರು ಬಂದಿದೆ ಎನ್ನುತ್ತಾರೆ ಸ್ಥಳಿಯರು.ಈ ಸೀತಾಳಯ್ಯನ ಬೆಟ್ಟದಲ್ಲಿ  ಈಶ್ವರನ ದೇವಾಲಯ ಇದೆ. ಇಲ್ಲಿಂದ ಪೂರ್ವದಿಕ್ಕಿನ   ಕಡೆ ನಡೆಯುತ್ತ ಹೊರಟರೆ ಸುಮಾರು ಎರಡು ಕಿ.ಮೀ ಗಳ ಅಂತರದಲ್ಲಿ ಕರ್ನಾಟಕದಲ್ಲೇ ಅತಿ ಎತ್ತರದ ಶಿಖರವೆಂದು ಹೆಸರು ಪಡೆದಿರುವ ಮುಳ್ಳಯ್ಯನ ಗಿರಿ ಶಿಖರದ ಕಲಶ ನಮಗೆ ಕಾಣಸಿಗುತ್ತದೆ.

ಈ ಬೆಟ್ಟದ ಅರ್ಧ ಭಾಗದವರೆಗೆ ವಾಹನ ಸಂಚಾರಕ್ಕೆ ಮಾರ್ಗವಿದ್ದು ನಂತರದ ಅನುಭವಕ್ಕಾಗಿ  ನಾವು 300ಕ್ಕೂ ಹೆಚ್ಚಿನ ಮೆಟ್ಟಿಲುಗಳನ್ನು ನಡೆದೇ ಸಾಗಬೇಕು. ಇದರಲ್ಲಿ ಸಿಗುವ ರೋಚಕ ಅನುಭವ ಮಾತಿನಲ್ಲಿ ವರ್ಣಿಸಲು ಅಸಾಧ್ಯ, ಮೆಟ್ಟಿಲುಗಳನ್ನು ಹತ್ತುತ್ತಿದ್ದಂತೆ ಬಲವಾಗಿ ಬೀಸುವ ಗಾಳಿ ಅವುಗಳನ್ನು ಸೀಳಿಕೊಂಡು ಮುನ್ನುಗುವ ಅನುಭವವೇ ರೋಚಕ, ಈ ಚಳಿಗಾಳಿಗೆ ಒಮ್ಮೆ ಮೈಯೊಡ್ಡಿ ನಿಂತರಂತೂ ಹಿತವಾದ ಅನುಭವ. ಚಿಕ್ಕಚಿಕ್ಕ ಮಕ್ಕಳಿಂದ ಹಿಡಿದು ವಯೋವೃದ್ದರು ಕೂಡ ಈ ಬೆಟ್ಟವನ್ನು ಪ್ರಯಾಸದಿಂದ ಏರುವುದನ್ನು ಕಾಣಬಹುದು. ನಾನೂ ಬೆಟ್ಟದ ತುದಿ ತಲುಪಬೇಕು ಎನ್ನುವ ಛಲ, ಇವೆಲ್ಲವನ್ನು ದಾಟಿ ಬೆಟ್ಟದ ತುದಿಗೆ ತಲುಪಿದಾಗ ಸಿಗುವುದೇ ಶ್ರೀ ಗುರು ಮುಳ್ಳಯ್ಯ ಸ್ವಾಮಿ ತಪಸ್ಸು ಮಾಡಿರುವ ಗದ್ದುಗೆ ಹಾಗೂ ದೇವಾಲಯ. ದೇವಾಲಯದ ಆವರಣದಲ್ಲಿ ಬಂದು ನಿಂತಾಗಲೂ ಕಿವಿಯಲ್ಲಿ ಗುಯ್ ಎನ್ನುವ ಗಾಳಿಯ ನಿನಾದ ಹೊರಹೊಮ್ಮುತ್ತಿರುತ್ತದೆ. ಸೂರ್ಯೋದಯವನ್ನು ಈ ಬೆಟ್ಟದಲ್ಲಿ ನೋಡುವುದೇ ಒಂದು ಭಾಗ್ಯ ಎನ್ನಬಹುದು. ಸೂರ್ಯನನ್ನ ಪ್ರಕೃತಿಯೇ ತನ್ನ ಕೈಯಾರಿ ಎತ್ತಿ ಮುದ್ದಾಡುತ್ತಿರುವಂತೆ ಒಂದು ಕ್ಷಣ ಭಾಸವಾಗುವುದು. ಅರೆಕ್ಷಣ ಹಾಲಿನ ಹೊಳೆಯಂತೆ ಕಾಣುವ ಮೋಡಗಳು,  ಬಿಸಿಲು  ಬೀಳ ತೊಡಗಿದ್ದಂತೆ ಮೋಡಗಳೆಲ್ಲ ಒಮ್ಮೆಲೆ ಓಡೋಡಿ ಹೋಗುವ ದೃಶ್ಯ ಯಾರೋ ಈ ಶಿಖರಕ್ಕೆ ಕೃತಕವಾಗಿ ಬೆಳಕು ಬಿಡುತ್ತಿದ್ದಾರೊ ಎನ್ನುವಂತೆ ಹೊಳೆಯುವ ಬೆಟ್ಟ. ಹೀಗೆ ಬೆಳಿಗ್ಗೆ ಸೂರ್ಯೋದಯ ಆದಾಗಿನಿಂದ ಮಧ್ಯಾಹ್ನ ವರೆಗೆ ಒಂದೇ ಬೆಟ್ಟದಲ್ಲಿ ಮೂರು ನಾಲ್ಕು ರೀತಿಯಲ್ಲಿ  ಪಕೃತಿ ನಳನಳಿಸುವುದನ್ನು ನಮ್ಮ ಕಣ್ಣಾರೆ ನಾವು ಮುಳ್ಳಯ್ಯನಗಿರಿಯಲ್ಲಿ ನೋಡಬಹುದಾಗಿದೆ. ಮಳೆಗಾಲದಲ್ಲಿ ಪ್ರಯಾಣ ತುಸು ಕಷ್ಟವಾದರೂ ಇನ್ನಷ್ಟು  ವಿಶಿಷ್ಟ ಅನುಭವವನ್ನು ಕಾಣಬಹುದಾಗಿದೆ.

– ಉಮೇಶ ಮುಂಡಳ್ಳಿ ಭಟ್ಕಳ

5 Responses

  1. ನಯನ ಬಜಕೂಡ್ಲು says:

    ಕನಸಿನ ಲೋಕವನ್ನು ಸೃಷ್ಟಿಸುವ ಬರಹ ಹಾಗೂ ಚಿತ್ರಗಳು.

  2. ಶಂಕರಿ ಶರ್ಮ says:

    ಅತ್ಯಂತ ಎತ್ತರದ ಮುಳ್ಳಯ್ಯನಗಿರಿ ಬೆಟ್ಟದ ಸೌಂದರ್ಯ ಸಿರಿಯನ್ನು ನಾವೂ ಸವಿದಂತೆ ಎನಿಸಿತು. ಸೊಗಸಾದ ಬರಹ.

  3. Savithri bhat says:

    ಸುಂದರ ಚಿತ್ರಗಳು,ಚಂದದ ನಿರೂಪಣೆ..

  4. B.k.meenakshi says:

    ಮುಳ್ಳಯ್ಯನ ಗಿರಿಯ ಎತ್ತರವನ್ನು ಪ್ರತಿದಿನ ಚಿಕ್ಕಮಗಳೂರಿನಿಂದ ಸವಿಯುತ್ತಿದ್ದೆವು. ಚಂದದ ಬರಹ

  5. Anonymous says:

    ನಮಸ್ಕಾರ, ನಿಮ್ಮ ವರ್ಣನೆ ಓದಿದ ಮೇಲೆ ನನಗೂ ಅ ಬೆಟ್ಟ ನೋಡಬೇಕೆನೆಸುತ್ತಿದೆ,ಸುಂದರ ಬರಹ.
    ವಂದನೆಗಳು.

Leave a Reply to ಶಂಕರಿ ಶರ್ಮ Cancel reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: