ಸತ್ಯಮುರಿದ ಸತ್ಯಭಾಮೆ

Spread the love
Share Button

“ಸತ್ಯಭಾಮಾ ಒಂದು ಕಪ್ ಕಾಫಿ ಮಾಡಿತಾರೇ ಅತೀವ ಸುಸ್ತು”. ಆಫೀಸಿನಿಂದ ಬರುತ್ತಾ ಮಡದಿಯನ್ನು ಕರೆದ- ಆ ಮನೆಯ ಆಧುನಿಕ ಶ್ರೀಕೃಷ್ಣ.

ಊಹೂಂ.ಮಡದಿಯ ಸೊಲ್ಲು ಕೇಳದು!. ತಾನೇ ಅಡುಗೆ ಮನೆಗೆ ಬಂದು, ಆಕೆಯ ಸನಿಹ ನಿಂದು “ಕರೆದರೂ ಕೇಳದೆ ಸುಂದರಿ!. ನನ್ನಲ್ಲೇಕೆ ಈ ಮೌನ?”. ಗಲ್ಲ ಹಿಡಿದೆತ್ತಿ ರಮಿಸತೊಡಗಿದಾಗ….
“ಎಷ್ಟು ಸಾರಿ ಹೇಳೋದು ರೀ…ನಿಮಗೆ?.ಅಷ್ಟು ಉದ್ದಕೆ….ಸತ್ಯಭಾಮಾ ಎನ್ನಬೇಡಿ. ಬರೇ ಚುಟುಕಾಗಿ ‘ಭಾಮಾ’ ಅನ್ನಿ.ಅದೇ ಚೆನ್ನಾಗಿರುತ್ತೆ ಎಂದು. ಮತ್ತೆ  ಮತ್ತೆ ಅದೇ ರಾಗಾನಾ!?”. ಮೊಗ ಊದಿಸಿದಳು ಅರ್ಧಾಂಗಿ.

“ಅಲ್ಲ ಕಣೇ, ನಿನ್ನ ಅಪ್ಪ ನಿನಗಿಟ್ಟಿರೋ ಹೆಸರೇನು ಸತ್ಯಭಾಮೆ ಎಂದು ತಾನೇ?. ಅಷ್ಟುದ್ದ ನಿನಗಿಷ್ಟವಿಲ್ಲಾಂದ್ರೆ ಬೇಡ ಬಿಡು.  ಚಿಕ್ಕದಾಗಿ, ಮುದ್ದಾಗಿ ಸತ್ಯ ಎಂದು ಕರೀತೀನಿ. ಸರಿಯಾ…?”.
” ಸತ್ಯಾನು ಬೇಡ ,ಸುಳ್ಳೂನು ಬೇಡ. ನನ್ನನು ಭಾಮಾ ಎಂದೇ ಕರೀಬೆಕು”. ಬಂತು ಒಡತಿಯಾಜ್ಞೆ.
“ಛೇ..! ಯಾಕೆ ಹೀಗೆ ಸತ್ಯ ಮುರಿದು ಹಾಕ್ತಿಯಾ!?”.

“ಈಗ ಯಾರಿಗಿದೆ ಸತ್ಯ ಹೇಳಿ?.ಸತ್ಯ ಎಂದೋ ಸತ್ತುಹೋಗಿದೆ. ಈಗಿನ ಕಾಲಕ್ಕೆ ಸತ್ಯ ಹೇಳಿದವ ಸತ್ತು ಹೋಗ್ತಾನೆ. ಸುಳ್ಳು ಹೇಳಿದವನೇ ಸಂಸಾರ ಮಾಡ್ತಾನೆ. ನಿಮ್ಮ ಹಳೆಕಾಲದ ಸತ್ಯ ಈಗ ಯಾರಿಗೂ ಬೇಡದ್ದು..”.
“ಸತ್ಯ ಎಂದೂ ಸಾಯೋದಿಲ್ಲ ಕಣೆ. ಸತ್ಯ ಉಳಿಸೋದು, ಅಳಿಸೋದು ನಮ್ಮ ಕೈಯಲ್ಲೇ ಇದೆ. ಹಳೆ ಕಾಲದ್ದಕ್ಕೆಲ್ಲ ಇನ್ನಿನ್ನು ಬೇಡಿಕೆ ಬರುತ್ತೆ. ನೋಡುತ್ತಾ ಇರು”.
“ಯಾರೂ ಇಚ್ಛಿಸದ ಸತ್ಯ ನಿಮಗ್ಯಾಕ್ರೀ?. ನನ್ನನ್ನು ಭಾಮಾ ಎಂದು ಕರೆಯೋದರಲ್ಲಿ ನಿಮಗೇನು ತೊಂದರೆ?”.

“ತೊಂದರೆ, ಗಿಂದರೆ ಏನೂ ಇಲ್ಲ ಚಿನ್ನ. ನೀನು ಹೇಳಿದಂತೆ ಈಗ ಬೇರೆಲ್ಲೂ ಇರದ ಸತ್ಯ ನನ್ನ ಹೆಂಡತಿಯ ಬಳಿಯಲ್ಲಿ ಅ…ಲ್ಲ…ಲ್ಲ. ಹೆಂಡತಿಯ ಹೆಸರಲ್ಲಾದರೂ ಇದೆಯಲ್ಲ ಎಂಬ ಒಂದೇ ಒಂದು ಪುಟ್ಟ ಸಮಾಧಾನ. ನೋಡು. ಪುರಾಣದ ಸತ್ಯಭಾಮೆ ಎಂದರೆ ಶ್ರೀಕೃಷ್ಣನಿಗೆ ಎಷ್ಟೊಂದು ಅಕ್ಕರೆ!. ಅವಳಾಸೆ ಈಡೇರಿಸುವುದಕ್ಕಾಗಿ  ದೇವಲೋಕದಿಂದ ಪಾರಿಜಾತ ವೃಕ್ಷವನ್ನೇ ತಂದು ಕೊಟ್ಟಿಲ್ಲವೇ ಆತ!. ಹಾಗೇನೇ ನನಗೆ ನಿನ್ನ ಮೇಲೂ”.
“ಹಾಗೋ ವಿಷಯ! ನೋಡಿ, ಈ ಭಾಮೆಗೆ ಅಷ್ಟು ದೊಡ್ಡ ಆಸೆಯೇನೂ ಇಲ್ಲ.ಒಂದೇ ಒಂದು ಪುಟ್ಟ ಆಸೆಯಿದೆ ನಡೆಸಿಕೊಡ್ತೀರಾ?”.
” ಸರಿ…,ಹೇಳೋಣವಾಗಲಿ”.

“ತಾವು ಪಾರಿಜಾತ ಮರವೇನೂ ತರುವುದು ಬೇಡ.ಕೇವಲ ಹತ್ತು ದಿನ ಪಾರಿಜಾತ ಹೂ ತಂದು ನನ್ನ ಮುಡಿಗೆ ಮುಡಿಸಿ ನೋಡೋಣ. ಆ ಮೇಲೆ ಸತ್ಯಭಾಮ ಸತ್ಯಭಾಮಾ  ಎಂದು ಕೂಗಿ. ನಾನು ಕರೆದಿರಾ, ಕರೆದಿರಾ ಎಂದು ಓಡೋಡಿ ಬರ್ತೇನೆ”.

“ಏನು ಪಾ..ರಿ..ಜಾ..ತ  ಹೂ ತಂದು ಮುಡಿಸಿ , ಆ ಮೇಲೆ ಸತ್ಯಭಾಮಾ ಎನ್ನಬೇಕೆ?. ಸಾರ್ಥಕವಾಯ್ತು ಕಣೇ ನಿನ್ನ ಹೆಸರು. ಎಲ್ಲಿಂದ ತರಲಪ್ಪ ಪಾರಿಜಾತ ಹೂ. ಈ ಕೃಷ್ಣ ದೇವಲೋಕಕ್ಕೆ ಹೋದರೆ ಮತ್ತೆ ಬರುವುದು..?”.
“ಅಂದರೆ ಸಾಧ್ಯವಾಗದ ಮಾತೆಂದು ಒಪ್ಪಿಕೊಂಡಂತಲ್ಲವೇ?”.

ಈ ರೀತಿ ದಂಪತಿಯರ ವಾದ ಸರಣಿ ನಡೆಯುತ್ತಿರಬೇಕಾದರೆ ಕರೆಗಂಟೆ ಸದ್ದಾಯಿತು. ಸತ್ಯಭಾಮ ಎದ್ದು ಹೋಗಿ ಬಾಗಿಲು ತೆರೆದರೆ ಒಬ್ಬ ಆಕರ್ಷಕ ಯುವತಿ ನಿಂತಿದ್ದಳು.
“ಮಿಸ್ಟರ್ ಶ್ರೀಕೃಷ್ಣ ಇದ್ದಾರೇನ್ರೀ…?”. ಬಂತು ಕೋಗಿಲೆಯ ಕಂಠ.
“ಇದ್ದಾರೆ ಬನ್ನಿ.. ಒಳಗೆ”.ಚಂದದ ಚೆಲುವೆಯನ್ನು ಬರಮಾಡುತ್ತಾ ಆಕೆಯನ್ನೇ ದೃಷ್ಟಿ ಕೀಳದೆ ತುಸುಹೊತ್ತು ನೋಡಿದಳು ಸತ್ಯಭಾಮೆ.

ಯುವತಿ ಒಳಗಡಿಯಿರಿಸಿದಾಗ
“ಹಲೋ ರುಕ್ಮಿಣಿ” ಎಂದು ಆಕೆಗೆ ಒಳಗೆ ಆಹ್ವಾನಿಸುತ್ತಾ  “ಈಕೆ ನನ್ನ ಸಹೋದ್ಯೋಗಿ ರುಕ್ಮಿಣಿ”. ಮಡದಿಗೆ ಪರಿಚಯಿಸಿದ ಶ್ರೀಕೃಷ್ಣ.
ಶ್ರೀಕೃಷ್ಣ ಸತ್ಯಭಾಮೆಯರ ಮಧ್ಯೆ ರುಕ್ಮಿಣಿಯೇ!..
ಹೊಟ್ಟೆಯೊಳಗೆ ಏನೋ ತುಸು ಸಂಕಟವಾದಂತಾದರೂ ಸಾವರಿಸಿಕೊಂಡು ‘ನಮಸ್ತೇ’ ಎಂದಳು ಸತ್ಯಭಾಮೆ.
“ಇಲ್ಲೇ ನನ್ನ ಗೆಳತಿ ಮನೆಗೆ ಬಂದಿದ್ದೆ.  ಶ್ರೀಕೃಷ್ಣನಲ್ಲಿ ಒಂದಿಷ್ಟು ಮಾತಾಡಿ ಹೋಗೋಣಾಂತ ಬಂದೆ”. ಹೇಳಿದಳಾ ಚೆಲುವೆ.
ಕೃಷ್ಣನಲ್ಲಿ ಮಾತಾಡುವ ಗುಪ್ತವಾದ ವಿಷಯ ಏನದು!!
ಸತ್ಯಭಾಮೆಯ ಮನದೊಳಗೆ ಅದು ಮತ್ತೂ ಮಥಿಸತೊಡಗಿತು!. ಗರಬಡಿದಂತೆ ಯಾವುದೋ ಲೋಕದಲ್ಲಿ ಚಿಂತಿಸುತ್ತಾ ನಿಂತಿರುವ ಅರ್ಧಾಂಗಿಗೆ…
“ನೋಡೇ ಒಂದಿಷ್ಟು ಕಾಫಿ ಮಾಡಿ ತಾರೇ”. ಮಡದಿಗೆ ಶ್ರೀಕೃಷ್ಣ ಹೇಳಿದಾಗ ಈ ಪರಿಸ್ಥಿತಿಗೆ ಮಾಡಲೇಬೇಕಾಗಿ ಅಡಿಗೆ ಮನೆ ಹೊಕ್ಕಳು ಸತ್ಯಭಾಮೆ.

“ಅಮ್ಮಂಗೆ ಹುಶಾರಿಲ್ಲಾಂತ ಒಂದು ವಾರ ಆಫೀಸಿಗೆ ರಜೆಹಾಕಿದ್ದಿಯಲ್ಲಾ. ಈಗ ಹೇಗಿದ್ದಾರೆ?”. ಮಾತಿಗೆಳೆದ ಶ್ರೀಕೃಷ್ಣ ರುಕ್ಮಿಣಿಯೊಡನೆ.

“ಜ್ವರವೇನೋ ಬಿಟ್ಟಿದೆ.ಆದರೆ ಇನ್ನೂ ಚೇತರಿಸಿಕೊಂಡಿಲ್ಲ. ಇನ್ನೊಂದೆರಡು ದಿನಕ್ಕೆ ರಜೆ ಮುಂದುವರಿಸೋಣಾಂತಿದ್ದೇನೆ. ಇಲ್ಲೇ ಪಕ್ಕದ ಮನೆಗೆ ಬಂದವಳು ಈ ವಿಷಯ ತಿಳಿಸಿ ನಿಮ್ಮಲ್ಲಿ ಮಾತಾಡಿ ಹೋಗೋಣಾಂತ ಇಲ್ಲಿವರೆಗೂ ಸವಾರಿ ಬಿಟ್ಟೆ”.
“ತೊಂದರೆ ಇಲ್ಲ. ರುಕ್ಮಿಣೀ, ಅಮ್ಮ ಚೇತರಿಸಿಕೊಂಡ ಮೇಲೆ ಬಂದು ಬಿಡು.
ಮತ್ತೊಂದು ವಿಷಯ….
ನಿನಗೆ ತಿಳಿದಂತೆ ಪಾರಿಜಾತ ಮರ ನಿಮ್ಮ ಅಕ್ಕ- ಪಕ್ಕ ಎಲ್ಲಿಯಾದರೂ ಇದೆಯೇ ರುಕ್ಮಿಣಿ?”.
“ಪಾರಿಜಾತ ಮರವೇ…..! ಯಾಕೀಗ…! ಔಷಧಿಗೇನಾದರೂ…?.ಅದು ನಮ್ಮ ಹಿತ್ತಿಲಲ್ಲಿದೆ”.
“ಬೇಕಿತ್ತು ರುಕ್ಮಿಣಿ.ನನ್ನ ಪತ್ನಿಗೆ  ಹತ್ತು ದಿನ ನಾನು ಪಾರಿಜಾತ ಹೂ ಮುಡಿಸಬೇಕು.ಅದು ಅವಳಾಸೆ”. ಯೋಚಿಸಿದಳು ರುಕ್ಮಿಣಿ. ಅವಳಾಸೆ..! ಬಹುಶಃ  ಇವರ ಪತ್ನಿ ಗರ್ಭಿಣಿಯಿರಬೇಕು. ಪಾಪ  ಬಯಕೆ ತೀರಿಸಿಕೊಳ್ಳಲಿ!

“ಏನು ಯೋಚನೆ ಮಾಡ್ತಿಯಾ?”
“ಯೋಚನೆ ಏನೂ ಇಲ್ಲಸರ್. ಹತ್ತು ದಿನವೂ ನಮ್ಮಲ್ಲಿಗೆ ಬನ್ನಿ.ಹೂಮಾಲೆ ಮಾಡಿ ಕಾಯುತ್ತಿರುತ್ತೇನೆ”.
“ಸರಿ ನಾಳೆಯಿಂದಲೇ ಬರ್ತೇನೆ.ಪತ್ನಿಯ ಪಾರಿಜಾತದ ಆಸೆ  ಪೂರೈಸಬೇಕಿದೆ”.

ಹೊರಗಿನಿಂದ ಅವರಿಬ್ಬರ ಸಂಭಾಷಣೆ ಕೇಳಿಸಿಕೊಂಡ ಸತ್ಯಭಾಮೆಗೆ; ಆ ಮಾತುಗಳೆಲ್ಲ ಮನದಲ್ಲಿ ಮೊರೆದು ಗುದ್ದಾಟ ಮಾಡಲಾರಂಭಿಸಿದುವು. ಮಾತುಗಳ ನಿಜ ಅರ್ಥ ಕಳಕೊಂಡು ಅನರ್ಥ ಎನಿಸತೊಡಗಿದುವು.

ಕೃಷ್ಣ…ರುಕ್ಮಿಣಿ… ಪಾರಿಜಾತ… ಹೂಮಾಲೆ…ಕಾದಿರುತ್ತೇನೆ… ಆಸೆ ಪೂರೈಸುತ್ತೇನೆ….ಒಂದೊಂದು ಶಬ್ಧವೂ ಭೋರ್ಗರೆದು ಘರ್ಜನೆ ಮಾಡಿದಂತಾಗಿ ಹೆದರಿದಳಾಕೆ.
ಬೇಡ… ಬೇಡ…, ನಂಗೆ ಪಾರಿಜಾತ ಬೇಡವೇ ಬೇಡ. ಪಾರಿಜಾತ ನೆಪದಲ್ಲಿ ನನ್ನ ಶ್ರೀಕೃಷ್ಣ ರುಕ್ಮಿಣಿ ಪಾಲಾದರೆ..‌‌!!. ಖಂಡಿತಾ ಸಹಿಸಲಾರೆ. ನನ್ನ ಶ್ರೀಕೃಷ್ಣ ರಾಮನಂತಿರಬೇಕು. ರುಕ್ಮಿಣಿಗೆ ಒಲಿಯಲು ಆಸ್ಪದ ಕೊಡಲೇ ಬಾರದು. ಮಾತುಗಳೆಲ್ಲ ಮರುಕಳಿಸುತ್ತಿದ್ದಂತೆ ಮನ ಕುದಿಯಲಾರಂಭಿಸಿತು.

ಒಲೆಯಲ್ಲಿ ಹಾಲು ಡಿಕಾಕ್ಷನ್ ಕುದಿಯುತ್ತಿತ್ತು. ಅದನ್ನೂ ಮರೆತು ಬಾಣದಂತೆ ಹೊರಗೋಡಿ ಬಂದೆರಗಿದವಳು..
“ರ್ರೀ…ನಂಗೆ ಪಾರಿಜಾತ ಬೇಡಾರೀ…ಖಂಡಿತ ಬೇಡ. ನನ್ನ ಮರೆವಿಗಿಷ್ಟು…., ನನಗದರ ವಾಸನೆ ಆಗೋದಿಲ್ಲ!. ಚಿಕ್ಕದಿರುವಾಗ  ಯಾವಾಗಲೋ ಒಂದು ಬಾರಿ ಅದರ ವಾಸನೆ ಸಹಿಸಲಾರದೆ ಬಿದ್ದು ಬಿಟ್ಟಿದ್ದೆ!!”.

“ಏನು ಹೇಳುತ್ತಿದ್ದಿಯಾ ಸತ್ಯಭಾಮಾ…,ನಿನ್ನ ಮುಡಿಗೆ ಹತ್ತು ದಿನಗಳ ಕಾಲ ಪಾರಿಜಾತ ಹೂ ಮುಡಿಸಬೇಕು. ಆ ಮೇಲೆ ನಿನ್ನನ್ನು  ‘ಭಾಮಾ’ ಎಂದು ಕರೀಬೇಕು ಕಣೇ”.
“ಏನೂ ಬೇಡೀಂದ್ರೆ. ನೀವು ಹೇಗೆ ಹೆಸರಿಡಿದು ಕರೆದರೂ ಅಡ್ಡಿಯಿಲ್ಲ. ಒಲ್ಲೆ ಎನ್ನೋಲ್ಲ. ಪಾರಿಜಾತ ಮುಡಿಸುವ ಪ್ರಯತ್ನ ಬೇಡ ದಮ್ಮಯ್ಯ.ಇನ್ನು ಆ ಮಾತು ಎತ್ತಲಾರೆ”.
“ಅಲ್ಲ ಕಣೇ ನೀನು  ಹೆಸರಿನಿಂದ ಸತ್ಯ ಮುರಿಯೋಕೆ ಹೋಗಿ; ನಿನ್ನ ಮಾತಿನ ಸತ್ಯವನ್ನೇ ಮುರಿದೆಯಲ್ಲೇ!!. ಏನೇ ಇದು…”
ಶ್ರೀಕೃಷ್ಣ ನುಡಿದಾಗ ಸತ್ಯಭಾಮೆ ಸತ್ಯಕ್ಕೂ ಸುಸ್ತೋ ಸುಸ್ತು!!.

-ವಿಜಯಾಸುಬ್ರಹ್ಮಣ್ಯ,ಕುಂಬಳೆ

7 Responses

 1. ನಯನ ಬಜಕೂಡ್ಲು says:

  ಹ್ಹ ಹ್ಹ ಹ್ಹ. ತುಂಬಾ ಚೆನ್ನಾಗಿದೆ. ತಿಳಿ ಹಾಸ್ಯ ಮಿಶ್ರಿತ ಬರಹ

 2. Krishnaprabha says:

  ನೀವು ಬರೆದ ಪುರಾಣದ ಕಥೆಗಳನ್ನು ಮಾತ್ರ ಓದಿದ್ದೆ…ಈ ಬರಹ ಚೆನ್ನಾಗಿದೆ

 3. ಬಿ.ಆರ್.ನಾಗರತ್ನ says:

  ವಾರೆ ವಾಹ್ ‌‌‌ ಆಧುನಿಕ ಪಾರಿಜಾತ ಪರಿಣಾಮ ಕಥೆಯು ಚಂದದ ಚೌಕಟ್ಟಿನಲ್ಲಿ ಕಟ್ಟಿಕೊಟ್ಟಿರುವ ನಿಮ್ಮ ಪ್ರಯತ್ನದಲ್ಲಿ ನವಿರಾದ ಹಾಸ್ಯ ನಿರೂಪಣೆ ಚೆನ್ನಾಗಿದೆ ಮೂಡಿ ಬಂದಿದೆ ಮೇಡಂ ಅಭಿನಂದನೆಗಳು.

 4. Anonymous says:

  ಲೇಖನ ಪ್ರಕಟ ಪಡಿಸಿದ ಹೇಮಮಾಲಾ ಹಾಗೂ ಓದಿ ಮೆಚ್ಚಿದ ಬಳಗದವರಿಗೆ ವಂದನೆಗಳು.

 5. Anonymous says:

  ಚೆನ್ನಾಗಿ ದೆ,
  ವಿದ್ಯಾ

 6. Savithri bhat says:

  ಕೃಷ್ಣ,ಸತ್ಯಭಾಮೆಯ ರ ನವ ಕಥೆ ಕುತೂಹಲ ಕರವಾಗಿ ಚೆನ್ನಾಗಿದೆ.

 7. ಶಂಕರಿ ಶರ್ಮ says:

  ತಮ್ಮ ಎಂದಿನ ಪೌರಾಣಿಕ ಕಥೆಯನ್ನು ನಿರೀಕ್ಷಿಸಿದ್ದ ನನಗೆ, ಈ ತಿಳಿಹಾಸ್ಯ ಮಿಶ್ರಿತ ಆಧುನಿಕ ಪಾರಿಜಾತ ಪ್ರಕರಣ ನಿಜಕ್ಕೂ ಖುಶಿ ಕೊಟ್ಟಿತು ವಿಜಯಕ್ಕಾ.

Leave a Reply

 Click this button or press Ctrl+G to toggle between Kannada and English

Your email address will not be published.

Follow

Get every new post on this blog delivered to your Inbox.

Join other followers: