ಭಾಷೆ ಮತ್ತು ಸಾಮರಸ್ಯ

Share Button

ಭಾಷೆ ಸಂವಹನ ಮಾಧ್ಯಮವಾಗಿರುವಂತೆಯೇ ಬಾಂಧವ್ಯವನ್ನು ಬೆಸೆಯುವುದಕ್ಕೂ ಇರುವ ಸಾಧನ. ಅದೊಂದು ವ್ಯವಸ್ಥೆ. ಮನುಷ್ಯ ಸಮಾಜ ಜೀವಿಯಾಗಿರುವುದರಿಂದಲೇ ಈ ವ್ಯವಸ್ಥೆಯ ಅನಿವಾರ್ಯತೆ. ಒಂದು ಸಮುದಾಯಕ್ಕೆ ಒಳಪಟ್ಟವರು ತಮ್ಮ ಭಾವನೆಗಳನ್ನು , ವಿಚಾರಗಳನ್ನು ಬೇಕು ಬೇಡಗಳನ್ನು ವಿನಿಮಯ ಮಾಡಿಕೊಳ್ಳಲು ಭಾಷೆ ಒಂದು ಕೊಂಡಿ. ಮನುಕುಲ ತನ್ನ ವಿಕಾಸದ ಹಾದಿಯಲ್ಲಿ ಭಾಷೆ ಎಂಬ ಕೌಶಲವನ್ನು ಕಂಡುಕೊಂಡದ್ದೇ ಒಂದು ಅದ್ಭುತ. ಪ್ರಾಣಿಗಳಿಗಿಂತ ಭಿನ್ನವಾಗಿ ನೆಟ್ಟಗೆ ನಿಂತು ತನ್ನ ಕೈಗಳನ್ನು ಬೇರೆ ಬೇರೆ ಕೆಲಸಗಳಿಗೆ ಬಳಸಲು ತೊಡಗಿದ್ದು ಒಂದು ಮಹತ್ವದ ಹೆಜ್ಜೆಯಾಗಿರುವಂತೆಯೇ ಇದೂ ಕೂಡ. ನಾಗರಿಕತೆಯ ವಿಕಾಸದಲ್ಲಿ ಮನುಷ್ಯ‌ಏನೆಲ್ಲವನ್ನು ಸಾಧಿಸಿದ್ದಾನೋ ಅದರ ಹಿಂದೆ ಈ ಭಾಷಾ ಕೌಶಲದ ಪಾತ್ರ ಅತ್ಯಂತ ಮಹತ್ತರವಾದದ್ದು. ಆದರೆ ಭಾಷೆಯನ್ನು ಒಂದು ವರವಾಗಿ ಕಾಣಬೇಕಾಗಿರುವಾಗ ಅದನ್ನು ಒಂದು ಶಾಪವಾಗಿ ಕಾಣಬೇಕಾದ ಆತಂಕ ಬಹುಭಾಷೆಗಳ ನೆಲೆವೀಡಾದ ಭಾಷೆಯ ಆಧಾರದಲ್ಲಿ ಪ್ರಾಂತ್ಯಗಳಾಗಿ ಅಸ್ತಿತ್ವದಲ್ಲಿರುವ ಭಾರತದಲ್ಲಿ ಅನೇಕ ಬಾರಿ ಬಂದೊದಗುತ್ತದೆ. ಅದರಿಂದಲೇ ಭಾಷಾ ಸಾಮರಸ್ಯದ ಅಗತ್ಯ ಮತ್ತು ಮಹತ್ವ ಮನದಟ್ಟಾಗುತ್ತದೆ. ಬೆಸೆಯುವ ಕೊಂಡಿಯಾಗಬೇಕಾದ ಭಾಷೆ ಬೇರ್ಪಡಿಸುವ ಗೋಡೆ ಯಾಗುವುದಾದರೂ ಹೇಗೆ?

ಭಾಷೆ ಮತ್ತು ಸಂಸ್ಕೃತಿಗೆ ಅವಿನಾಭಾವ ಸಂಬಂಧ. ವ್ಯಕ್ತಿಯೊಬ್ಬರ ಹೃದಯದ ಪರಿಪಕ್ವತೆಯನ್ನು ಜ್ಞಾನದ ಬೆಳಕನ್ನು ಅವರಾಡುವ ಮಾತುಗಳ ತೇಜಸ್ಸಿನಲ್ಲಿ ಕಾಣಬಹುದು. ‘ಅಯ್ಯಾ ಎಂದಡೆ ಸ್ವರ್ಗ ಎಲವೋ ಎಂದಡೆ ನರಕ’ ಎಂದ ಬಸವಣ್ಣನ ಮಾತಿನಲ್ಲಿ ಮಾತು ಬೆಳಕಾಗಬೇಕಾದ ಅಗತ್ಯವನ್ನು ಒತ್ತಿಹೇಳಲಾಗಿದೆ.’ ಮಾತಿನಿಂ ಸಕಲಸಂಪದವು ಲೋಕಕ್ಕೆ ಮಾತೆ ಮಾಣಿಕವು ಎಂದ ಸರ್ವಜ್ಞ ಕೂಡ ಈ ಭಾಷೆ ಎಂಬ ಮಾಣಿಕ್ಯವನ್ನು ನಾವು ಹೇಗೆ ಬಳಸಬೇಕು ಎಂಬುದರ ಬಗ್ಗೆ ಸೂಚನೆ ನೀಡಿದ್ದಾನೆ. ಅದರ ಬೆಲೆಯನ್ನರಿಯದೆ ನಾವು ಮಾತನ್ನು ಬಳಸಿದರೆ ‘ಮಂಗನ ಕೈಯಲ್ಲಿ ಮಾಣಿಕ್ಯ ಕೊಟ್ಟಹಾಗೆ ‘ ನಮ್ಮ ಮೂರ್ಖತನ ಸಾಬೀತಾಗುತ್ತದೆ.

ತಮ್ಮ ನಡತೆಯಲ್ಲಿ ವ್ಯವಹಾರದಲ್ಲಿ ಕುಸಂಸ್ಕೃತಿಯನ್ನು ಕಾಣಿಸಿದ ವ್ಯಕ್ತಿಯ ಬಗ್ಗೆ ‘ಅವನಿಗೆ / ಅವಳಿಗೆ ಭಾಷೆ ಇಲ್ಲ ‘ ಎಂದು ಷರಾ ಬರೆಯುತ್ತೇವೆ. ಭಾಷೆ ಇರುವುದು ಸಂವಹನಕ್ಕೆ . ‘ಹೀಗೆ ಮಾಡು ಹೀಗೆ ಮಾಡಬೇಡ, ಅದು ಒಳ್ಳೆಯದು ಇದು ಕೆಟ್ಟದು ,ಅದು ಸಭ್ಯ ಇದು ಅಸಭ್ಯ ‘ಎಂದು ಭಾಷೆಯ ಮೂಲಕವೇ ತಿಳಿಸಲಾಗುತ್ತದೆ. ಒಬ್ಬ ವ್ಯಕ್ತಿಗೆ ಹಿರಿಯರಿಂದ, ಗುರುಗಳಿಂದ, ಪುಸ್ತಕಗಳಿಂದ ಈ ಸಂದೇಶ ರವಾನೆಯಾಗುತ್ತಿರುತ್ತದೆ. ಆದರೆ ಆತ ಅಥವಾ ಆಕೆ ಅದರಂತೆ ನಡೆಯದಿದ್ದಾಗ ‘ಅವರಿಗೆ ಭಾಷೆ ಇಲ್ಲ’ ಎಂಬ ಪ್ರಯೋಗ ಸಹಜವಾಗಿ ಬಳಕೆಯಾಗುತ್ತದೆ.

‘ಸರ್ವಭಾಷಾಮಯಿ ಸರಸ್ವತಿ’ ಎಂಬ ಹೇಳಿಕೆ ಇದೆ. ಯಾವ ಭಾಷೆಯನ್ನೂ ಒಂದಕ್ಕಿಂತ ಮತ್ತೊಂದು ಶ್ರೇಷ್ಠವೆಂದೋ ಕನಿಷ್ಠವೆಂದೋ ಹೇಳಲಾಗದು. ಒಂದು ಮೂಲ ಭಾಷೆಯಿಂದ ಕವಲೊಡೆದು ಮತ್ತೆ ವಿಕಾಸಗೊಂಡು ಬೇರೆ ಬೇರೆ ಸ್ವತಂತ್ರ ಭಾಷೆಗಳಾಗುತ್ತವೆ.ಉದಾಹರಣೆಗೆ ಇಂಡೋ ಯುರೋಪಿಯನ್ ಮೂಲದಿಂದ ಸಂಸ್ಕೃತ, ಲಾಟಿನ್, ಗ್ರೀಕ್ ಮುಂತಾದ ಭಾಷೆಗಳು, ಹಾಗೆಯೇ ಮೂಲದ್ರಾವಿಡ ದಿಂದ ಕನ್ನಡ ತುಳು, ತಮಿಳು, ತೆಲುಗು,ಮಲಯಾಳ ಮೊದಲಾದ ಭಾಷೆಗಳು ವಿಕಾಸಗೊಂಡವು ಎನ್ನಲಾಗಿದೆ .

ಜಗತ್ತಿನಲ್ಲಿ ಭಾಷೆಗಳನ್ನು ಕೇವಲ ಆಡುಭಾಷೆಗಳು ಮತ್ತು ಲಿಪಿಯನ್ನು ಒಳಗೊಂಡು ಬರಹದಲ್ಲಿಯೂ ಬಳಕೆಯಾಗುವ ಭಾಷೆಗಳು ಎಂದು ಎರಡು ವಿಧವಾಗಿ ಗುರುತಿಸಬಹುದು. ಲಿಪಿಯನ್ನು ಹೊಂದಿರುವುದು ಅಥವಾ ಹೊಂದದಿರುವುದು ಒಂದು ಭಾಷೆಯ ಕುರಿತಾದ ಮೇಲರಿಮೆಗೆ ಅಥವಾ ಕೀಳರಿಮೆಗೆ ಕಾರಣವಾಗ ಬೇಕಿಲ್ಲ. ಒಂದು ಭಾಷೆಯ ಘನತೆ ಅದರ ಸೌಂದರ್ಯ ತೇಜಸ್ಸುಗಳು ಆಭಾಷೆಯನ್ನು ಬಳಸುವ ವ್ಯಕ್ತಿಗಳನ್ನು ಹೊಂದಿರುತ್ತದೆ. ತಾಯಿಯ ಎದೆಹಾಲಿನಂತೆ ಸವಿಯಾದ ತಮ್ಮ ತಮ್ಮ ಮಾತೃಭಾಷೆಯನ್ನು ಪ್ರೀತಿಸುವ ಗೌರವಿಸುವ ಹಕ್ಕು ಎಲ್ಲರಿಗೂ ಇರುತ್ತದೆ. ತಮ್ಮ ತಾಯಿಯನ್ನು ಪ್ರೀತಿಭಕ್ತಿಗಳಿಂದ ಕಂಡರೆ ಅದೆಂದೂ ಮತ್ತೊಬ್ಬರ ತಾಯಿಯನ್ನು ಅಗೌರವಿಸಿದಂತಾಗುವುದಿಲ್ಲ. ನಿನ್ನ ತಾಯಿಯನ್ನು ನೀನು ಸಮಾಧಿ ಮಾಡು ನನ್ನ ತಾಯಿಯನ್ನೇ ನೀನೂ ಪೂಜಿಸು ಎನ್ನುವುದಿದೆಯಲ್ಲಿ – ಅದು ಭಾಷಾ ಸಾಮರಸ್ಯವನ್ನು ಹಾಳು ಮಾಡುತ್ತದೆ. ಭಾಷಾ ಹೇರಿಕೆಯಂತಹ ದಮನಕಾರಿ ಪ್ರವೃತ್ತಿ ‘ಭಾಷೆ ಇರುವವರಿಗೆ’ ಶೋಭಿಸುವುದಿಲ್ಲ. ಬಹುಭಾಷಾ ಪರಿಸರವಿರುವ ಗಡಿ ಭಾಗಗಳಲ್ಲಿ ಆಳುವ ಭಾಷೆಯ ಬಲವಂತದ ಹೇರಿಕೆ ತಮ್ಮ ತಮ್ಮ ಭಾಷೆಗಳನ್ನು ಪ್ರೀತಿಸುವ ಇತರ ಸಮುದಾಯದವರಲ್ಲಿ ಆತಂಕವನ್ನು ಮೂಡಿಸುತ್ತದೆ. ಅದರ ಪರಿಣಾಮವಾಗಿ ಸಂಘರ್ಷವೂ ತಲೆದೋರಬಹುದು. ಅದು ಭಾಷಾ ವೈಷಮ್ಯಕ್ಕೆ ಎಡೆಮಾಡಿಕೊಡುತ್ತದೆ. ತಮ್ಮ ತಮ್ಮ ಭಾಷೆಗಳ ಅಸ್ಮಿತೆಯನ್ನು ಉಳಿಸಿಕೊಂಡೇ ಸಹೋದರ ಭಾಷೆಗಳನ್ನು ಪ್ರೀತಿಸುವ ಗೌರವಿಸುವ ಮನೋಭಾವ ಮಾತ್ರ ಭಾಷಾ ಸಾಮರಸ್ಯವನ್ನು ಕಾಪಾಡಬಲ್ಲುದು.

-ಮಹೇಶ್ವರಿ ಯು

4 Responses

  1. Anonymous says:

    ಭಾಷಾ ಸಾಮರಸ್ಯ ಕ್ಕೆ ಬೇಕಾಗುವ ಆಯಾಮಗಳನ್ನು ಪಡಿಮೂಡಿಸಿರುವ ರೀತಿ ತುಂಬಾ ಆಪ್ತವಾಗಿದೆ ಚೆನ್ನಾಗಿ ಮೂಡಿ ಬಂದಿದೆ ಮೇಡಂ.ಅಭಿನಂದನೆಗಳು.

  2. ನಯನ ಬಜಕೂಡ್ಲು says:

    ಮಾತು ಹಾಗೂ ಭಾಷೆಯ ಮಹತ್ವವನ್ನು ತಿಳಿಸುವ ಬರಹ.

  3. ಶಂಕರಿ ಶರ್ಮ says:

    ನಮ್ಮದು ಬಹು ಭಾಷಾ ರಾಷ್ಟ್ರ. ಅವುಗಳ ಸಾಮರಸ್ಯತೆಯ ಅಗತ್ಯತೆಯನ್ನು ಮಾರ್ಮಿಕವಾಗಿ ನಿರೂಪಿಸಿರುವಿರಿ.. ಧನ್ಯವಾದಗಳು ಮೇಡಂ.

  4. ಮಹೇಶ್ವರಿ ಯು says:

    ಧನ್ಯವಾದಗಳು

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: