ಸ್ತ್ರೀ ಸಮಾನತೆ – ಸಾಧನಾ ಪರಂಪರೆ ಪುಟ 5

Share Button


(ಋ) ವಿಶಿಷ್ಟ ಜನಸಾಮಾನ್ಯ ಸ್ತ್ರೀಯರು

ಸ್ವಾತಂತ್ರ್ಯ ಹೋರಾಟಗಾರ್ತಿಯರು:

ಗಾಂಧೀಜಿಯವರ ನೇತೃತ್ವದಲ್ಲಿ ನಡೆದ ಸ್ವಾತಂತ್ರ್ಯ ಹೋರಾಟಕ್ಕಿಂತ ಮುಂಚೆ ಕ್ರಿಸ್ತಪೂರ್ವದಿಂದಲೂ ಬಗೆ ಬಗೆಯಾದ ಹೋರಾಟದಲ್ಲಿ ಭಾಗವಹಿಸಿದ ಬಹುಮಂದಿ ಸ್ತ್ರೀಯರು ಸಮಾಜದ ಉನ್ನತ ವರ್ಗಕ್ಕೆ ಸೇರಿದವರು. ಹೆಚ್ಚಿನ ಸವಲತ್ತುಗಳನ್ನು ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಪಡೆದ ಮನೆತನಕ್ಕೆ ಸೇರಿದವರು. ಇವರಿಗೆ ತಮ್ಮ ವ್ಯಕ್ತಿ-ವಿಶೇಷತೆಯನ್ನು ಪ್ರಕಟಪಡಿಸಲು ಪೂರಕವಾದ ಪರಿಸರವಿತ್ತು; ಸೂಕ್ತವಾದ ಶೈಕ್ಷಣಿಕ ತರಬೇತಿಯೂ ದೊರೆಯುತ್ತಿತ್ತು. ತಮ್ಮ ಜೀವನರೀತಿಗೊಂದು ವಿಶಿಷ್ಟ ಆಯಾಮ ಕೊಡಬೇಕೆಂಬ ವೈಯಕ್ತಿಕ ಮತ್ತು ಸಾಮಾಜಿಕ ಹಾಗೂ ರಾಜಕೀಯ ಒತ್ತಡ ಕೆಲವರಿಗಾದರೂ ಇತ್ತು.

ನಮ್ಮನ್ನು ಆಳುತ್ತಿದ್ದ ಬ್ರಿಟಿಷರ ವಿರುದ್ಧ ಗಾಂಧೀಜಿಯವರ ನೇತೃತ್ವದಲ್ಲಿ ನಡೆದ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದ ಬಹು ಮಂದಿ ಸ್ತ್ರೀಯರಾದರೋ ಸಾಧಾರಣವಾದ ಕೌಟುಂಬಿಕ ಹಿನ್ನೆಲೆಯವರಾಗಿದ್ದರು. ಅವರಿಗೆ ಅವರನ್ನೇ ಜೀವನ ನಿರ್ವಹಣೆಗೆ ಅವಲಂಬಿಸಿದ್ದ ಕುಟುಂಬವರ್ಗದವರು ಇದ್ದರು. ಆದರೂ ಇವರು ತಮ್ಮೆಲ್ಲ ಬೇಕು ಬೇಡಗಳನ್ನು ಬದಿಗಿರಿಸಿ ತಮ್ಮ ತನು ಮನ ಧನಗಳನ್ನು ದೇಶಕ್ಕಾಗಿ ಮೀಸಲಾಗಿಟ್ಟರು. ಇವರು ಹೋರಾಟದಲ್ಲಿ ಭಾಗಿಯಾದ ತಮ್ಮೊಂದಿಗಿನ ಪುರುಷರಿಗೆ ಯಾವ ರೀತಿಯಲ್ಲೂ ಕಡಿಮೆಯಾದವರು ಆಗಿರಲಿಲ್ಲ. ಜೊತೆಗೆ ಇಡೀ ಭಾರತೀಯ ಸಮಾಜವನ್ನು ಬಹುಸಂಖ್ಯೆಯಲ್ಲಿ ಪ್ರತಿನಿಧಿಸಿದರು ಎಂಬುದು ಸಮಾನತೆಯ ಸಾಧನೆಯ ಹಾದಿಯಲ್ಲಿ ಸ್ತ್ರೀಯರು ಪಡೆದ ಹೊಸ ಆಯಾಮ.

ಸಾರ್ವಜನಿಕ ಚಟುವಟಿಕೆಗಳಲ್ಲಿ ಭಾಗಿಯಾದವರು:

ಬ್ರಿಟಿಷ್ ಆಡಳಿತವು ಸಮಾಜದ ಎಲ್ಲಾ ಚಟುವಟಿಕೆಗಳನ್ನು ರಾಜಕೀಯ ನೀತಿ-ನಿರ್ಧಾರಗಳ ವ್ಯಾಪ್ತಿಗೆ ಒಳಪಡಿಸಿತ್ತು. ಇದರಿಂದಾಗಿ ಸ್ವದೇಶಿ, ಸ್ವಾವಲಂಬಿ, ಸ್ವರಾಜ್ಯಕ್ಕಾಗಿ ಹೂಡಿದ ಸ್ವಾತಂತ್ರ್ಯ ಹೋರಾಟವು ವೈಯಕ್ತಿಕ, ಸಾಂಸ್ಕೃತಿಕ ಔನ್ನತ್ಯ, ಸಮಾಜಸುಧಾರಣೆ, ರಾಷ್ಟ್ರಾಭಿಮಾನ, ಭಾರತೀಯ ಸಂಸ್ಕೃತಿ ಮತ್ತು ಮೌಲ್ಯಗಳ ಪ್ರತಿಷ್ಠಾಪನೆ ಹಾಗೂ ಪುನರ್ ಮೌಲ್ಯೀಕರಣ, ರಾಜಕೀಯ ಸಂಸ್ಥೆಗಳಲ್ಲಿ ಭಾರತೀಯರ ಪ್ರಾತಿನಿಧ್ಯ, ವೈಜ್ಞಾನಿಕ ತಾಂತ್ರಿಕ ಶಿಕ್ಷಣ, ದುರ್ಬಲರ ರಕ್ಷಣೆ, ಸರ್ವಧರ್ಮ ಸಮನ್ವಯತೆ, ಸ್ತ್ರೀ ಜಾಗೃತಿ ಮುಂತಾದವುಗಳನ್ನೆಲ್ಲಾ ಒಳಗೊಳ್ಳಬೇಕಾಗಿತ್ತು ಮತ್ತು ಅವುಗಳಿಗೆ ರಾಜಕೀಯ ಮುಖವನ್ನೂ ಕೊಡಬೇಕಾಗಿತ್ತು. ಎಂದೂ ನಾಲ್ಕು ಗೋಡೆಯ ಆವರಣ ದಾಟದಿದ್ದ ಸ್ತ್ರೀಯರು ಇಂಥ ಹೋರಾಟದ ಅವಿಭಾಜ್ಯ ಅಂಗವಾಗಿದ್ದ ಸಾರ್ವಜನಿಕ ಚಟುವಟಿಕೆಗಳಲ್ಲಿ ಯಶಸ್ವಿಯಾಗಿ ಭಾಗವಹಿಸಿದರು ಎನ್ನುವುದು ಸ್ತ್ರೀಯರ ಸಮಾನತೆಯ ಸಾಧನೆಯ ಹಾದಿಯಲ್ಲಿ ಅತ್ಯಂತ ಗಮನಾರ್ಹ ಸಂಗತಿ.

ಶೈಕ್ಷಣಿಕ ಕ್ಷೇತ್ರದಲ್ಲಿ ಪ್ರವೃತ್ತರಾದವರು:

ಆನಂದೀಬಾಯಿಯಂಥವರು ವಿದೇಶಕ್ಕೆ ಹೋಗಿ ವೈದ್ಯಕೀಯ ಶಿಕ್ಷಣ ಪಡೆದು ಸಾರ್ವಜನಿಕ ಆರೋಗ್ಯಭಾಗ್ಯಕ್ಕಾಗಿ ಶ್ರಮಿಸಿದರು. ಇದಕ್ಕಾಗಿ ಮನೆಯಿಂದ ಬಂದ ವಿರೋಧವನ್ನು ಕೌಟುಂಬಿಕ ಸುಖವನ್ನು ತ್ಯಾಗ ಮಾಡುವುದರ ಮೂಲಕ  ಎದುರಿಸಿದರು. ರುಕ್ಮಾಬಾಯಿಯಂತಹವರು ವಿಚ್ಛೇದನ ಪಡೆಯಲೂ ಸಹ ಸಿದ್ಧರಾದರು. ಪಂಡಿತ ರಮಾಬಾಯಿಯಂತಹವರು ಬಾಲಕಿಯರಿಗಾಗಿ ಶಾಲೆಗಳನ್ನು, ವಿಧವೆಯರಿಗಾಗಿ ವಿಧವಾಶ್ರಮಗಳನ್ನು ನಡೆಸಿದರು; ಅನಾಥ ಹೆಣ್ಣುಮಕ್ಕಳಿಗಾಗಿ ಮತ್ತು  ಗೃಹಿಣಿಯರಿಗಾಗಿ ವೃತ್ತಿ ತರಬೇತಿ ಕೇಂದ್ರಗಳನ್ನು ಸ್ಥಾಪಿಸಿದರು, ಅಕುಶಲಿ ಸ್ತ್ರೀಯರಿಗೂ ಉದ್ಯೋಗಾವಕಾಶಗಳನ್ನು ಕಲ್ಪಿಸಿದರು; ಆಪತ್ತಿನ ಸಂದರ್ಭಗಳಲ್ಲಿ ದುರ್ಬಲರಿಗಾಗಿ ಗಂಜಿಕೇಂದ್ರಗಳನ್ನು ತೆರೆದರು. ಕಾರ್ನೀಲಿಯಾ ಸೊರಾಬ್ಜಿಯಂತಹವರು ಕಾಲೇಜು ಅಧ್ಯಾಪಕಿಯರಾದರು, ಸ್ತ್ರೀಯರು ಉನ್ನತ ಶಿಕ್ಷಣವನ್ನು ಭಾರತದಲ್ಲಿಯೇ ಪಡೆಯಲು ಅವಕಾಶಗಳನ್ನು ಒದಗಿಸಿಕೊಟ್ಟರು; ಕಾನೂನು ಸಲಹೆಗಾರರಾಗಿ ನ್ಯಾಯ ಪಡೆಯಲು ಸ್ತ್ರೀಯರಿಗೆ ಸಹಾಯಮಾಡಿದರು.

ಮಹಿಳಾ ಒಕ್ಕೂಟಗಳು:

ಸ್ತ್ರೀ ಜಾಗೃತಿಗಾಗಿ ಮುತ್ತುಲಕ್ಷ್ಮಿ ರೆಡ್ಡಿಯಂತಹವರು ಅಖಿಲ ಭಾರತ ಮಹಿಳೆಯರ ಒಕ್ಕೂಟವನ್ನು ಸ್ಥಾಪಿಸಿದರು; ಎಲ್ಲ ಮಹಿಳೆಯರು ಒಂದು ಕಡೆ ಸೇರಿ ಚರ್ಚೆ ಮಾಡಲು ಅವಕಾಶ ಮಾಡಿಕೊಟ್ಟರು; ಅಭಿಪ್ರಾಯ ವಿನಿಮಯ ಮಾಡಿಕೊಂಡು ಸ್ತ್ರೀಯರ ಕಲ್ಯಾಣಕ್ಕಾಗಿ ಯೋಜನೆಗಳನ್ನು ರೂಪಿಸಿಕೊಳ್ಳುವಂತೆ ಮಾಡಿದರು. ಆನಿಬೆಸೆಂಟ್ ನಂತಹವರು ಸ್ವಾತಂತ್ರ್ಯಹೋರಾಟಕ್ಕಾಗಿ ರಚಿತಗೊಂಡಿದ್ದ ಕಾಂಗ್ರೆಸ್ಸಿನಲ್ಲಿ ಸಕ್ರಿಯ ಕಾರ್ಯಕರ್ತರಾಗಿ ಹೋರಾಟಮಾಡಲು ಸ್ತ್ರೀಯರನ್ನು ಒಂದುಗೂಡಿಸಿದರು. ಸರೋಜಿನಿ ನಾಯ್ಡುರಂತಹವರು ಪಿಕೆಟಿಂಗ್, ಉಪವಾಸ ಸತ್ಯಾಗ್ರಹ, ಕಾನೂನುಭಂಗ ಚಳುವಳಿ, ಉಪ್ಪಿನ ಸತ್ಯಾಗ್ರಹ, ಭಾರತ ಬಿಟ್ಟು ತೊಲಗಿರಿ ಮುಂತಾದ ಸ್ವಾತಂತ್ರ್ಯ ಚಳುವಳಿಗಳಲ್ಲಿ ಸ್ತ್ರೀಯರು ನೇತೃತ್ವ ವಹಿಸುವಂತೆ ಮಾಡಿದರು. ಮಾರ್ಗರೆಟ್ ಕಸಿನ್ ರಂತಹವರು ಮತದಾನದ ಹಕ್ಕಿಗಾಗಿ ಹೋರಾಟ ಮಾಡಲು ಸ್ತ್ರೀಯರನ್ನು ಒಟ್ಟುಗೂಡಿಸಿದರು; ಪ್ರಾಂತೀಯ ವಿಧಾನಸಭೆಗಳ ಚುನಾವಣೆಗಳಲ್ಲಿ ವಿಜೇತರಾಗಿ ದೇವದಾಸಿ ಪದ್ಧತಿಯಂಥ ಸ್ತ್ರೀವಿರೋಧೀ ಪದ್ಧತಿಗಳ ನಿಷೇಧದಂತಹ ಕಾನೂನುಗಳ ರಚನೆಯಾಗುವಂತೆ ಶ್ರಮಿಸಿದರು.

3

ಸ್ವತಂತ್ರ ಭಾರತದಲ್ಲಿ ಸಮಾನತೆಯ ಸಾಧನೆ

ಸಾಂವಿಧಾನಿಕ ಸಮಾನತೆ:

ಭಾರತ ಸ್ವತಂತ್ರ ಆಗುವವರೆಗೆ ಒಂದಲ್ಲ ಒಂದು ರೀತಿಯಲ್ಲಿ ತಮ್ಮನ್ನು ರಾಷ್ಟ್ರನಿರ್ಮಾಣದ ಕಾರ್ಯದಲ್ಲಿ ತೊಡಗಿಸಿಕೊಂಡ ಸ್ತ್ರೀಯರ ತ್ಯಾಗ, ಬಲಿದಾನ, ಸಹಕಾರ, ಕ್ರಾಂತಿ, ಭೂಗತ ಬಂಡಾಯಗಳ ಯಶೋಗಾಥೆ ಹಾಡದ ಭಾರತದ ಒಂದು ಮೂಲೆಯೂ ಇಲ್ಲವೆಂದೇ ಹೇಳಬೇಕು. ಸ್ತ್ರೀಯರ ಯಶಸ್ಸಿನಿಂದ ಪ್ರಭಾವಿತರಾದರೋ ಎಂಬಂತೆ ಸ್ವತಂತ್ರ ಭಾರತದ ನಿರ್ಮಾಪಕರು ಗಾಂಧೀಜಿಯವರ ಸ್ತ್ರೀಸಮಾನತೆಯ ಆಶಯಕ್ಕೆ ಸ್ಪಂದಿಸಿ ಎಲ್ಲ ಪ್ರೌಢ ಸ್ತ್ರೀ ಪುರುಷರಿಗೆ ಸಮಾನವಾಗಿ ಮತದಾನದ ಹಕ್ಕನ್ನೂ, ರಾಷ್ಟ್ರದ ಅತ್ಯುನ್ನತ ಹುದ್ದೆಯನ್ನೂ ಅಲಂಕರಿಸುವ ಅರ್ಹತೆ, ಅವಕಾಶ ಮತ್ತು ಸ್ವಾತಂತ್ರ್ಯವನ್ನು ಸಂವಿಧಾನಾತ್ಮಕವಾಗಿ ಕೊಟ್ಟಿದ್ದಾರೆ.

ಸಂವಿಧಾನದ 14, 15, 16, 21ನೇ ಅನುಚ್ಛೇದಗಳು – “ಸ್ತ್ರೀ ಪುರುಷರಿಗೆ ಸಮಾನವಾಗಿ ದುಷ್ಟವಲ್ಲದ ಸ್ವಾತಂತ್ರ್ಯವನ್ನು ಅನುಭವಿಸಲು ಹಕ್ಕು ಇದೆ; ಕಾನೂನಿಗೆ ಅನುಗುಣವಾಗಿ ರಕ್ಷಣೆ ಇದೆ; ಸರಕಾರಿ ಉದ್ಯೋಗಗಳನ್ನು ಕೈಗೊಳ್ಳಲು ಅವಕಾಶವಿದೆ; ಸೂಕ್ತ ಪ್ರಾತಿನಿಧ್ಯವಿಲ್ಲದವರಿಗೆ ಮೀಸಲಾತಿಯ ಮೂಲಕ ಪ್ರಾತಿನಿಧ್ಯ ಪಡೆಯುವ ಸವಲತ್ತು ಇದೆ; ಶಾಂತಿಯುತವಾಗಿ ಸಭೆ ಸೇರುವ, ಸಂಘ ಕಟ್ಟುವ ಸ್ವಾತಂತ್ರ್ಯ ಇದೆ; ಗೌರವ ಮತ್ತು ಘನತೆಯಿಂದ ಬದುಕುವ ಹಕ್ಕು ಇದೆ; ಇವೆಲ್ಲಕ್ಕೂ ಚ್ಯುತಿ ಬಂದಾಗ ಸಂವಿಧಾನಾತ್ಮಕವಾಗಿ ಪರಿಹಾರ ಪಡೆಯುವ ಹಕ್ಕು ಇದೆ” – ಎಂಬ ಭರವಸೆಯನ್ನು ಕೊಡುತ್ತವೆ. ಈ ಹಕ್ಕುಗಳ ಸದುಪಯೋಗ ಮಾಡಿಕೊಂಡು ವಿವಿಧ ಕ್ಷೇತ್ರಗಳಲ್ಲಿ ಸ್ವಾವಲಂಬಿ ಸ್ವ ಉದ್ಯೋಗಿಗಳಾಗಿ, ಉದ್ಯೋಗದಾತರಾಗಿ, ಆತ್ಮಗೌರವ ಆತ್ಮ ವಿಶ್ವಾಸಗಳಿಂದ ಬದುಕನ್ನು ಮುನ್ನಡೆಸುತ್ತಾ ಇರುವವರು ಇಂದು ಬೆರಳು ಮಡಚಿ ಹೇಳಿ ಮುಗಿಸಲು ಆಗದಷ್ಟು ದೊಡ್ಡ ಸಂಖ್ಯೆಯಲ್ಲಿಯೇ ಇದ್ದಾರೆ.

ದಾಪುಗಾಲಿನಲ್ಲಿ ಮಹಿಳೆಯರು:

ಸಂವಿಧಾನಾತ್ಮಕ ಹಕ್ಕು ಮತ್ತು ಸೌಲಭ್ಯ ಸೌಕರ್ಯಗಳಿಂದಾಗಿ ಸ್ತ್ರೀಯರು ಹೆಚ್ಚು ಹೆಚ್ಚು ವ್ಯಾಪಕವಾಗಿ ಸಮಾನತೆಯ ಹಾದಿಯಲ್ಲಿ ದಾಪುಗಾಲಿಡುತ್ತಿದ್ದಾರೆ ಎಂಬುದು ಸ್ತ್ರೀಯರ ಸಮಾನತೆಯ ಸಾಧನೆಯ ಹಾದಿಯಲ್ಲಿ ಗಮನಾರ್ಹ ಆಯಾಮ. ಸ್ವತಂತ್ರ ಭಾರತದಲ್ಲಿ ಇದುವರೆವಿಗೂ ಮಹಿಳೆಯರು ಮುಖ್ಯಮಂತ್ರಿ, ಸಹಾಯಕ ಮಂತ್ರಿ, ವಿವಿಧ ವಿಭಾಗಗಳ ಮಂತ್ರಿಗಳಾಗಿ, ರಾಜ್ಯಮಂತ್ರಿಗಳಾಗಿ, ಸಭಾಧ್ಯಕ್ಷರಾಗಿ ಗಣನೀಯವಾಗಿ ಕಾಣಿಸಿಕೊಂಡಿದ್ದಾರೆ. ರಾಷ್ಟ್ರಪತಿ, ಪ್ರಧಾನಮಂತ್ರಿ ಆದುದಕ್ಕೆ ಏಕಮಾತ್ರ ಉದಾಹರಣೆಗಳಿವೆಯಾದರೂ ಆ ಹುದ್ದೆಗಳಿಗೆ ಭೂಷಣಪ್ರಾಯರಾಗಿದ್ದರೆಂಬುದು ನಗಣ್ಯವಲ್ಲ. ಸ್ತ್ರೀಯರು ರಾಜಕೀಯ ಪಕ್ಷಗಳ ರಾಷ್ಟ್ರೀಯ ಅಧ್ಯಕ್ಷರಾಗಿ ಪಕ್ಷವನ್ನು ಸಮರ್ಥವಾಗಿ ಮುನ್ನಡೆಸಿದ್ದಾರೆ. ವಿವಿಧ ಸ್ಥಾಯೀ ಸಮಿತಿಗಳ ಅಧ್ಯಕ್ಷರು, ವಿವಿಧ ಅಂತರ್ರಾಷ್ಟ್ರೀಯ ನಿಯೋಗಗಳ ನೇತಾರರು ಮತ್ತು ಸದಸ್ಯರು ಆಗಿ ಕಾರ್ಯಕ್ಷಮತೆ ತೋರಿದ್ದಾರೆ. ವಿವಿಧ ದೇಶಗಳಲ್ಲಿ ಮಾತ್ರವಲ್ಲದೆ ವಿಶ್ವಸಂಸ್ಥೆಯಲ್ಲಿಯೂ ಭಾರತದ ರಾಯಭಾರಿಗಳಾಗಿದ್ದಾರೆ.

ದೇಶದ ರಕ್ಷಣಾ ವಲಯದ ಮೂರೂ ವಿಭಾಗಗಳಲ್ಲೂ ಸ್ತ್ರೀಯರು ಕಾರ್ಯಮಗ್ನರಾಗಿದ್ದಾರೆ. ಐ.ಎ.ಎಸ್, ಐ.ಪಿ.ಎಸ್, ಐ.ಸಿ.ಎಸ್, ಐ.ಎಫ್.ಎಸ್. ಅಧಿಕಾರಿಗಳಾಗಿ ಹಗಲೂ ರಾತ್ರಿ ದುಡಿಯುತ್ತಿದ್ದಾರೆ. ದೈಹಿಕ ಪರಿಶ್ರಮವನ್ನು ಬೇಡುವ ಪೋಲೀಸ್, ಅರಣ್ಯ ಇಲಾಖೆಗಳಲ್ಲೂ ಯಶಸ್ವಿಯಾಗಿ ಕೆಲಸ ಮಾಡುತ್ತಿದ್ದಾರೆ. ಇಂಜನಿಯರ್, ಡಾಕ್ಟರ್, ಸೈಂಟಿಸ್ಟ್ ಗಳಾಗಿಯೂ ಸಮರ್ಥ ಸೇವೆ ಸಲ್ಲಿಸುತ್ತಿದ್ದಾರೆ. ಆಟೋ ಡ್ರೈವಿಂಗ್ ನಿಂದ ಹಿಡಿದು ಸೆಕ್ರೆಟರಿ, ಮ್ಯಾನೇಜಿಂಗ್  ಡೈರೆಕ್ಟರ್ ಹುದ್ದೆಯೇ ಮೊದಲಾದ ಹಿರಿದಾದ ಜವಾಬ್ದಾರಿಯುತ ಹುದ್ದೆಗಳನ್ನು ನಿರ್ವಹಿಸುವವರೆಗೆ ತಮ್ಮ ಕಾರ್ಯಕ್ಷೇತ್ರವನ್ನು ಹಿಗ್ಗಿಸಿದ್ದಾರೆ. ಪ್ರವಾಸೋದ್ಯಮ, ಹೋಟೆಲ್ ಉದ್ಯಮ, ಬ್ಯಾಂಕಿಂಗ್ ಉದ್ಯಮವೇ ಮೊದಲಾದ ಉದ್ದಿಮೆಗಳಲ್ಲಿ ಪರಿಣತಿ, ಚತುರತೆಗಳನ್ನು ತೋರಿದ್ದಾರೆ, ಉದ್ಯಮಪತಿಗಳಾಗಿದ್ದಾರೆ.

ಸಮಗ್ರ ಹಿತದ ಗ್ರಹಿಕೆಯುಳ್ಳವರಾಗಿ:

ಸ್ತ್ರೀಯರ ಸಾಮರ್ಥ್ಯದ ಎಲ್ಲಾ ಮಗ್ಗುಲುಗಳನ್ನು ಅನಾವರಣಗೊಳಿಸುವುದು ಸಾಧ್ಯವಾಗುವುದು ಮತ್ತು ಸಾಧ್ಯವಾಗುತ್ತಿರುವುದು ಆರ್ಥಿಕವಾಗಿ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ, ರಾಜಕೀಯವಾಗಿ ಬಲಿಷ್ಠರಾದವರಿಗೆ ಮತ್ತು ಸುಸಂಘಟಿತರಾದವರಿಗೆ ಹಾಗೂ ಸರ್ಕಾರದ ಮತ್ತು ಜನಸಮೂಹದ ಬೆಂಬಲವಿದ್ದವರಿಗೆ ಮಾತ್ರ ಎಂಬುದನ್ನು 80ರ ದಶಕದ ನಂತರದಲ್ಲಿ ಸ್ತ್ರೀಯರು ಅರ್ಥಮಾಡಿಕೊಂಡದ್ದು ಅವರ ಸಮಾನತೆಯ ಸಾಧನಾ ಮಾರ್ಗದಲ್ಲಿಯ ಮತ್ತೊಂದು ಗಮನಾರ್ಹ ಆಯಾಮ. ಇಂದು ಲಿಂಗ, ವರ್ಣ, ಧರ್ಮ, ರಾಜಕೀಯ ಸಿದ್ಧಾಂತ ಇತ್ಯಾದಿ ಭೇದವಿಲ್ಲದೆ ಎಲ್ಲ ಸ್ತ್ರೀಯರಿಗೂ ಸ್ವಾತಂತ್ರ್ಯ, ಸಮಾನತೆ ದೊರೆಯಬೇಕಾಗಿರುವುದನ್ನು ಭಾವಿಸಿ ಜಗತ್ತಿನಾದ್ಯಂತ ಸ್ತ್ರೀಯರು ಪರಸ್ಪರ ಸ್ನೇಹ, ಸೌಹಾರ್ದತೆ, ಒಗ್ಗಟ್ಟುಗಳಿಂದ ಬದುಕಲು ಪ್ರೇರಣೆ ನೀಡುವ ರಾಷ್ಟ್ರೀಯ ಫೆಡರೇಷನ್ ನ ಸ್ಥಾಪನೆಯಾಗಿದೆ.

ಅಖಿಲ ಭಾರತ ಸ್ತ್ರೀ ಫೆಡರೇಷನ್ ಪ್ರಮುಖವಾಗಿ ಭಾರತೀಯ ಸ್ತ್ರೀಯರು ಸಾಮಾಜಿಕವಾಗಿ, ಆರ್ಥಿಕವಾಗಿ ಪುರುಷರಂತೆ ಸಬಲರಾಗಲು ಬೇಕಾದ ಅರಿವನ್ನು ಮೂಡಿಸಬೇಕಾಗಿರುವುದನ್ನು ಗಮನಿಸಿದೆ. ಸ್ತ್ರೀಯರ ಬೌದ್ಧಿಕ ಬೆಳವಣಿಗೆ, ವೃತ್ತಿಪರ ಪರಿಣತಿ, ಕಲಾತ್ಮಕ ಪ್ರಜ್ಞೆ, ನೈತಿಕ ದೃಢತೆ, ಸುರಕ್ಷಿತ ಮಾತೃತ್ವವೇ ಮೊದಲಾದವುಗಳಿಗೆ ಸಂಬಂಧಿಸಿದ ಸರ್ಕಾರಿ ಕಾರ್ಯ ಯೋಜನೆಗಳನ್ನು ಸ್ತ್ರೀಯರಿಗೆ ತಲುಪಿಸುವ ಪ್ರಯತ್ನ ಮಾಡುತ್ತಿದೆ.

(ಮುಂದುವರಿಯುವುದು….)

ಈ ಲೇಖನ ಸರಣಿಯ ಹಿಂದಿನ ಸಂಚಿಕೆ ಇಲ್ಲಿದೆ : http://surahonne.com/?p=32006

ಕೆ.ಎಲ್. ಪದ್ಮಿನಿ ಹೆಗಡೆ,   ಮೈಸೂರು 

4 Responses

  1. ಮಹಿಳೆಯರಿಗೆ ಸಮಾನತೆಗಾಗಿ ಹೊರಾಟ ಮಾಡಿದವರಲ್ಲಿ ಸಾವಿತ್ರಾಬಾಯಿ ಫುಲೆ ದಂಪತಿಗಳು ಹಾೂ ಸಂವಿಧಾನ ಬದ್ದ ಹಕ್ಕುಗಳು ಕೊಟ್ಟವರು ಸಂವಿಧಾನ ಶಿಲ್ಪಿ ಡಾ ಅಂಬೇಡ್ಕರ್ ಮಾತ್ರ.ಇಂಥ ಮಹಾ ಪುರುಷರ ಕುರಿತು ಎಲ್ಲಿಯೂ ಪ್ರಸ್ತಾಪ ಬರಹದಲ್ಲಿಲ್ಲ. ಮಹಿಳೆಯ ಈ ಮಹಾ ನಾಯಕರನ್ನು ಪ್ರತಿದಿನ ನೆನಯಬೆಕು. ಈ ಲೇಖನ ಮೆಚ್ಚುಗೆಯಾಗಿಲ್ಲ.

  2. ನಯನ ಬಜಕೂಡ್ಲು says:

    ಹಂತ ಹಂತವಾಗಿ ಮಹಿಳೆ ಸಾಧನೆ ಯ ಹಾದಿಯಲ್ಲಿ ಹೆಜ್ಜೆ ಹಾಕಿದ ರೀತಿಯ ಪರಿಚಯ.

  3. ಶಂಕರಿ ಶರ್ಮ says:

    ಹಿಂದಿನಿಂದಲೂ ಸಮಾಜದಲ್ಲಿ ಮಹಿಳೆಯು ಪುರುಷ ಸಮಾನವಾಗಿ ಮೇಲೇರಲು ಬಹಳ ಅಡೆತಡೆಗಳಿದ್ದರೂ, ಅವುಗಳನ್ನು ಮೆಟ್ಟಿ ನಿಂತು ಹೇಗೆ ಹಂತ ಹಂತವಾಗಿ ಮೇಲೆದ್ದಳು ಎಂಬುದರ ಬಗ್ಗೆ ಸವಿವರ ಮಾಹಿತಿಯುಳ್ಳ ವಿಚಾರಪೂರ್ಣ ಲೇಖನ..ಇಷ್ಟವಾಯ್ತು..ಧನ್ಯವಾದಗಳು ಮೇಡಂ.

  4. sudha says:

    Very informative article

Leave a Reply to sudha Cancel reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: