ಪುಸ್ತಕ ಪರಿಚಯ : ಶೃಂಖಲಾ, ಲೇಖಕರು: ರೂಪಾ ರವೀಂದ್ರ ಜೋಶಿ

Share Button

ಕೃತಿಯ ಹೆಸರು: ಶೃಂಖಲಾ
ಪ್ರಬೇಧ: ಮಹಿಳಾ ಪ್ರಧಾನ ಹಾಗೂ ಸಾಮಾಜಿಕ ಕಾದಂಬರಿ
ಲೇಖಕರು: ರೂಪಾ ರವೀಂದ್ರ ಜೋಶಿ
ಪ್ರಕಾಶಕರು: ದಾಕ್ಷಾಯಿಣಿ ಪ್ರಕಾಶನ, ಮೈಸೂರು
ಪ್ರಥಮ ಮುದ್ರಣ: 2020

ಮಲೆನಾಡಿನಲ್ಲಿ ಹುಟ್ಟಿ ಬೆಳೆದ ಬಯಲು ಸೀಮೆಯ ಸೊಸೆಯಾಗಿರುವ ಲೇಖಕಿ ರೂಪಾ ರವೀಂದ್ರ ಜೋಶಿ ಅವರ ನಾಲ್ಕನೇ ಕೃತಿ ೨೦೨೦ ರಲ್ಲಿ ಪ್ರಥಮ ಮುದ್ರಣ ಕಂಡಿರುವ ಕಾದಂಬರಿ ಶೃಂಖಲಾ”. ವೃತ್ತಿಯಲ್ಲಿ ಅಕೌಂಟೆಟ್‌ ಹಾಗೂ ಜಿಎಸ್‌ಟಿ ಕನ್ಸಲ್ಟಂಟ್‌ ಆಗಿರುವ ಪ್ರಸ್ತುತ ಕಾದಂಬರಿಕಾರ್ತಿ ರೂಪಾ ಜೋಶಿಯವರು ಹವ್ಯಾಸದಲ್ಲಿ ರಂಗಭೂಮಿ ಕಲಾವಿದೆಯೂ ಹೌದು.

ಹಲವು ಚಂದದ ಕಥಾಗುಚ್ಚವನ್ನು ಹೊಂದಿರುವ ‘ಸಾಗುತ ದೂರಾ ದೂರಾ’ ಇವರ ಪ್ರಪ್ರಥಮ ಕಥಾಸಂಕಲನವಾದರೆ, ಹವಿಗನ್ನಡ (ಹವ್ಯಕ ಕನ್ನಡ) ಭಾಷೆಯಲ್ಲಿ ಅಂತಹದ್ದೇ ಶೈಲಿಯ ಕೌಟುಂಬಿಕ ಹಿನ್ನೆಲೆಯುಳ್ಳ ‘ಅಜ್ಙಾತೆ’(2019 ನೆ ಸಾಲಿನ ‘ಪುಸ್ತಕ ಪ್ರಶಸ್ತಿ’ ಲೇಖಿಕಾ ಸಾಹಿತ್ಯ ವೇದಿಕೆ, ಬೆಂಗಳೂರು) ಇವರ ಮೊದಲ ಕಾದಂಬರಿಯಾಗಿದೆ. ಮತ್ತು ‘ಕಾನುಮನೆ’ (2019 ನೆ ಸಾಲಿನ ಶ್ರೀಮತಿ ಭಾರತಿ ರಾಜಾರಾಮ್ ಮಧ್ಯಸ್ಥ ದತ್ತಿ ಪ್ರಶಸ್ತಿ)  ಇವರ ಮೊದಲ ಪತ್ತೇದಾರಿ ಕಾದಂಬರಿಯಾಗಿದೆ.  ಇದಾದ ನಂತರ ರೂಪಾ ಜೋಶಿಯವರ ಲೇಖನಿಯ ಪಸೆಯಲ್ಲಿ ವಿನೂತನ ಪ್ರಯೋಗದೊಂದಿಗೆ ಅರಳಿದ ಪೂರ್ಣ ಪ್ರಮಾಣದ ಕಾದಂಬರಿಯೆ ಈ “ಶೃಂಖಲಾ”.

ಉತ್ತರ ಕರ್ನಾಟಕದ ಸಾಂಪ್ರದಾಯಿಕ ಶೈಲಿಯ ಮತ್ತು ಅಂತಹದ್ದೇ ಕೌಟುಂಬಿಕ ಹಿನ್ನೆಲೆಯುಳ್ಳ ಕಾದಂಬರಿ ಇದು. ಶೃಂಖಲಾ ಎಂಬ ಶಿರೋನಾಮೆಯ ಈ ಕಾದಂಬರಿಯು ‘ಕಷ್ಟಗಳ ಸಂಕೋಲೆಯಿಂದ ಬಿಡುಗಡೆ ಹೊಂದಿದಾಕೆ’ ಎನ್ನುವ ತಾತ್ಪರ್ಯ ಒಳಗೊಂಡಿದೆ.

ಕಥೆಯು ಕಥಾನಾಯಕಿಯ ಹದಿಹರೆಯದ ವಯಸ್ಸಿನಿಂದ ಪ್ರಾರಂಭವಾಗಿ ಆಕೆಯ ವೈವಾಹಿಕ ಜೀವನದ ಎಲ್ಲ ರೀತಿಯ ತಿರುವುಗಳನ್ನು ಆಕೆಯ ಬದುಕಿನಲ್ಲಿ ಬಂದು ಹೋಗುವ, ಕೊನೆಯವರೆಗೂ ಆಕೆಯೊಂದಿಗೆ ಕಷ್ಟ-ಸುಖದಲ್ಲಿ ಜೊತೆಯಾಗಿ ನಿಲ್ಲುವ ಪಾತ್ರಗಳನ್ನು ಅಚ್ಚುಕಟ್ಟಾಗಿ ಪೋಷಿಸುವುದರ ಜೊತೆಗೆ ಅತ್ಯಂತ ಪ್ರಬುದ್ಧವಾದ ನಿರೂಪಣೆಯೊಂದಿಗೆ ನಾಯಕಿಯ ಸಾಧನೆಯ ಯಶಸ್ಸಿನೊಂದಿಗೆ ಓದುಗರ ಮೊಗದಲ್ಲಿ ವಿಶ್ವಾಸದ ನಗು ಮೂಡಿಸುವ ಮೂಲಕ ಕಥೆ  ಅಂತ್ಯವಾಗುತ್ತದೆ. ವಾಸ್ತವದಲ್ಲಿ, ನಿಜಕ್ಕೂ ಒಂದು ಶುಭಾರಂಭ ಆಗುವುದೇ ಅಲ್ಲಿ.

ಅವಿಭಕ್ತ ಕುಟುಂಕ್ಕೆ ಹಿರಿ ಸೊಸೆಯಾಗಿ ಬಂದ ಎಂಬ ಹೆಣ್ಣು ಮಗಳು ಮತ್ತು ಭವಿಷ್ಯದಲ್ಲಿ ಅವಳ ಸದ್ಗುಣಗಳನ್ನೆಲ್ಲ ಸಮ್ಮಿಳಿತಗೊಂಡು ಅಂಕುರವಾದ ಅವಳದೇ ಪಡಿಯಚ್ಚು ಹೊಂದಿರುವ ಮಗಳು  ಇಬ್ಬರೂ ಈ ಕಾದಂಬರಿಯ ಮುಖ್ಯ ಪಾತ್ರಗಳು. ಇವರೊಂದಿಗೆ ಅನೇಕ ಪಾತ್ರಗಳು ಬರುತ್ತವೆ. ಜೊತೆಯಲ್ಲೆ ಸಾಗುತ್ತವೆ. ಮುಖ್ಯ ಪಾತ್ರಗಳನ್ನು ಪೋಷಿಸುತ್ತವೆ. ಆದರೆ ಎಲ್ಲಿಯೂ ಕೂಡ ಯಾವ ಪಾತ್ರವೂ ಸಹ ಅತಿಯಾಗಿ ವಿಜೃಂಭಿಸದೆ, ಅರ್ಥವಿಲ್ಲದೆ ಅರ್ಧಕ್ಕೆ ನಿಂತು ಹೋಗದೆ, ಕೊಂಚವೂ
ಬೇಸರ ತರಿಸದೆ ಮೊದಲ ಪುಟದಿಂದ ಕೊನೆಯ ಪುಟದವರೆಗೂ ಬಹಳ ಆಸ್ಥೆಯಿಂದ ಓದಿಸಿಕೊಂಡು ಹೋಗುತ್ತೆ.

ಅಪ್ಪಟ ಬಯಲುಸೀಮೆ ಉತ್ತರ ಕರ್ನಾಟಕ ಭಾಗದ ಜವಾರಿ ಭಾಷೆಯನ್ನು ಬಹಳ ಮುತುವರ್ಜಿಯಿಂದ ಅಪಾರ ಸಹನೆಯಿಂದ ಪಾತ್ರಗಳ ಸಂಭಾಷಣೆಯಲ್ಲಿ ಬಳಸಿಕೊಂಡಿದ್ದಾರೆ ಲೇಖಕಿ ರೂಪಾ ಜೋಶಿಯವರು. ಅರ್ಥಾತ್‌ ಪ್ರತಿಯೊಂದು ಸಂಭಾಷಣೆಯನ್ನು ಪಾತ್ರಗಳ ಮೂಲಕ ನಮ್ಮೊಡನೆ ಮಾತನಾಡಿಸುತ್ತಾರೆ ಎಂದರೆ ಬಹುಶಃ ತಪ್ಪಾಗಲಾರದು. ಹೌದು, ಅದೆಷ್ಟು ಜೀವಂತಿಕೆಯಿಂದ ಕೂಡಿದೆ ಎಂದರೆ ಕೇಳಲು ಒರಟು, ಆಡಲು ಕಠಿಣ, ಆದರೆ ಮನಸಿಗೆ ಹಿತ ಎನಿಸುವ ಬಯಲುಸೀಮೆ ಭಾಷೆಯನ್ನು ಹೊಸಬರಿಗೆ ಸರಳವಾಗಿ ಅರ್ಥವಾಗುವಂತೆ ಶಬ್ಧಾರ್ಥಗಳ ಸಮೇತ ಪುಟಕ್ಕಿಳಿಸಿದ್ದಾರೆ.

ಅಪ್ಪಟ ಸಂಪ್ರದಾಯಸ್ಥ ಅವಿಭಕ್ತ ಕುಟುಂಬ, ಊರಿನ ಮಾಮಲೇದಾರರ ಮನೆತನಕ್ಕೆ ಹಿರಿಸೊಸೆಯಾಗಿ ಕಾಲಿಟ್ಟ ಘಳಿಗೆಯಿಂದಲೂ ಕೊನೆಯುಸಿರಿರುವವರೆಗೂ ಮನೆತನದ ಗೌರವಕ್ಕೆ ಚ್ಯುತಿ ಬರದಂತೆ ನಡೆದುಕೊಳ್ಳುವ ಜವಾಬ್ದಾರಿಯುತ ಹೆಣ್ಣುಮಗಳು ಭಾಗೀರಥಿಬಾಯಿ(ನಾಯಕಿಯ ತಾಯಿ), ಬಾಲ್ಯದಲ್ಲಿ ನೂರು ಕನಸ ಹೊತ್ತು ಸಾಗಿದವಳ ಭವಿಷ್ಯ ಬುಡ ಮೇಲಾದರೂ ಬದುಕು ಎಸೆಯುವ ಕಲ್ಲುಗಳನ್ನೆ ಆಯ್ದು ಭರವಸೆಯ ಕೋಟೆ ಕಟ್ಟುವ ಗಟ್ಟಿಗಿತ್ತಿ ರೇಣುಕಾ(ಕಥಾನಾಯಕಿ), ಮನೆಯ ಒಡೆತನದ ಹಪಹಪಿಗೆ ಮನೆಯ ಚಿತ್ರಣವನ್ನೆ ಅಲ್ಲೋಲ ಕಲ್ಲೋಲ ಮಾಡಿದ ಭಾಗೀರಥಿ ಬಾಯಿಯ ನೆಗೆಣ್ಣಿ ಸುಧಾ, ಭಾರೀ ಶಿಸ್ತುಳ್ಳ ನಾಟಕದ ಮಾಸ್ತರ್‌ ಗಂಗಪ್ಪ, ಏಕಲವ್ಯನಂತೆ ಗುರುವನ್ನು ಆಜ್ಞಾ ಪಾಲಕನಾಗಿ ಅನುಸರಿಸುವ ಗಂಗಪ್ಪ ಮಾಸ್ತರ್ ರ ಶಿಷ್ಯ ಶಿವು, ಕೆಲವು ಕಡೆ ಭಾಗೀರಥಿಬಾಯಿಯ ಛಾಯೆಯಂತೆ ತೋರುವ ಬೀಗಿತ್ತಿ ಅಂಬಕ್ಕ(ನಾಯಕಿಯ ಅತ್ತೆ), ಉಂಡಾಡಿ ಗುಂಡನಂತೆ ಬೆಳೆದು ಮಾಡಿದ ಪಾಪಕರ್ಮಗಳಿಗೆ ಬೆಲೆತೆತ್ತ ನಂತರ ಬುದ್ಧಿ ಕಲಿತ ಸುಧಾಕರ ನಾಡಗೌಡ(ನಾಯಕಿಯ ಗಂಡ), ತನ್ನ ತಾಯಿಯ ಖಾಸ ತಂಗಿ ತೋರಿದ ಮಲತಾಯಿ ಧೋರಣೆಗೆ ಕುಗ್ಗದೆ ಸವಾಲಾಗಿ ತೆಗೆದುಕೊಂಡು ಎತ್ತರಕ್ಕೆ ಬೆಳೆದು ನಿಲ್ಲುವ ಬಸವರಾಜ(ನಾಯಕಿಯ ಬಾಲ್ಯದ ಗೆಳೆಯ),  ಮನೆಯವರ ಮೋಸದ ಜಾಲಕ್ಕೆ ಬಲಿಯಾಗುವುದನ್ನು  ಕೂದಲೆಳೆ ಅಂತರದಲ್ಲಿ ತಪ್ಪಿಸಿಕೊಂಡು ಮಾದರಿಯಾಗಿ ಬದುಕು ಕಟ್ಟಿಕೊಳ್ಳುವ ಸವಿತಾ(ನಾಯಕಿಯ ಬಾಲ್ಯದ ಗೆಳತಿ), ಒಡತಿಯ ಶ್ರಮಕ್ಕೆ ಹೆಜ್ಜೆ ಹೆಜ್ಜೆಗೂ ನೆರಳಂತೆ ಸಹಕರಿಸುವ ನಿಷ್ಠಾವಂತ ಆಳುಗಳಾದ ಮುದುಕಪ್ಪ, ರುದ್ರವ್ವ ಮತ್ತು ಪುಟ್ಟವ್ವ, ಕೆಟ್ಟ ಮೇಲೆ ಬುದ್ಧಿ ಬಂತು ಎನ್ನುವಂತೆ ಕೊನೆಗೂ ಕ್ಷಮೆಯಾಚಿಸಿ ಕಾಲಿಗೆರಗಿದ ಕುಟಿಲ ಬುದ್ಧಿಯ ಭಂಡೂ (ಸುಧಾಳ ತಮ್ಮ)  ಹೀಗೆ ಇವರುಗಳೊಡನೆ ಬಂದು ಹೋಗುವ ಹತ್ತು ಹಲವು ಚಿಕ್ಕ ಪಾತ್ರಗಳು ಸಹಬಿಡದಂತೆ ಕಾಡಿ ಕಡೆಗೆ ಸುಖಾಂತ್ಯದೊಂದಿಗೆ ಮೊಗದಲ್ಲಿ ವಿಶ್ವಾಸದ ನಗು ಮೂಡಿಸುತ್ತದೆ.

ಇಲ್ಲಿರುವ ಪ್ರತಿ ಅಧ್ಯಾಯದಲ್ಲೂ ನೋವು-ನಲಿವು, ಸುಖ-ದುಃಖ, ಸೋಲು-ಗೆಲುವು,ಪ್ರೀತಿ-ದ್ವೇಷ, ನಂಬಿಕೆ-ಮೋಸ ಎಲ್ಲ ಭಾವಗಳು ತುಂಬಿದೆ. ಅಷ್ಟೆ ಅಲ್ಲದೆ ಪ್ರತಿಯೊಂದು ಪಾತ್ರಗಳು ಕೃಷಿ, ವಿಜ್ಞಾನ, ವ್ಯವಹಾರ, ವಹಿವಾಟು, ಕಲಾ ಕ್ಷೇತ್ರ, ಆಚಾರ-ವಿಚಾರ,ಸಂಸ್ಕೃತಿ-ಸಂಪ್ರದಾಯ ಹೀಗೆ ಎಲ್ಲ ಘಟ್ಟದಲ್ಲೂ ತನ್ನದೇ ಆದ ಸ್ವಂತಿಕೆ ಹೊಂದಿದೆ. ಯಾವ ಪಾತ್ರಗಳನ್ನೂ ಲೇಖಕಿ ಎಲ್ಲಿಯೂ ಅತಿರೇಕ ಅಥವಾ ಅಲ್ಪ ಎನ್ನಿಸದೆ ಬಹಳ ಶ್ರಮ ಮತ್ತು ಸಾಕಷ್ಟು ಪೂರ್ವತಯಾರಿಯೊಂದಿಗೆ ಜಾಣ್ಮೆಯಿಂದ ದುಡಿಸಿದ್ದಾರೆ. ಪ್ರತಿಯೊಂದು ಪಾತ್ರವು ದೋಷ ಮುಕ್ತವಾಗಿ ಪರಿಪೂರ್ಣತೆಯಿಂದ ಕೂಡಿದೆ.

ಆ ಮೂಲಕ ಪ್ರತಿಯೊಂದು ಪಾತ್ರದಲ್ಲೂ ಬದುಕಿಗೆ ಅಗತ್ಯವಿರುವ ಒಂದೊಂದು ಸಂದೇಶವನ್ನು ಇರಿಸಿದ್ದಾರೆ. ಇದರಲ್ಲೆ ತಿಳಿಯುತ್ತದೆ ಲೇಖಕಿಯು ಅದೆಷ್ಟು ಜವಾಬ್ದಾರಿಯಿಂದ, ಸಹನೆಯಿಂದ,ಎಲ್ಲಕ್ಕೂ ಹೆಚ್ಚು ಬಹಳ ಪ್ರೀತಿಯಿಂದ ಕಥೆಯನ್ನು ಕಣ್ಣಿಗೆ ಕಟ್ಟುವಂತೆ ಹೆಣೆದಿದ್ದಾರೆ ಎನ್ನುವುದು. ಪಾತ್ರಗಳನ್ನು ಯಶಸ್ವಿಯಾಗಿ ದುಡಿಸಿ ಕೊಳ್ಳುವಲ್ಲಿ ಒಬ್ಬ ನುರಿತ ಕಾದಂಬರಿಕಾರ/ರ್ತಿಗೆ ಇರಬೇಕಾದ ಬುದ್ಧಿವಂತಿಕೆ ಹಾಗೂ ಪಾತ್ರಗಳಲ್ಲಿ ಪರಕಾಯ ಪ್ರವೇಶ ಮಾಡಿಸುವ ಚಾಕಚಕ್ಯತೆ ಶೃಂಖಲಾ ದ ಲೇಖಕಿಯಲ್ಲೂ ಇರುವುದು ಶ್ಲಾಘನೀಯ.

ಪ್ರತಿ ಪಾತ್ರದಲ್ಲೂ ನಮ್ಮನ್ನು ನಾವು ಕಂಡುಕೊಳ್ಳುವಂತೆ ಪ್ರೇರೆಪಿಸುತ್ತಾ ಆಯಾಸವಿಲ್ಲದೆ ಕಥೆ ಸಾಗುತ್ತದೆ. ಈ ಕಾರಣದಿಂದಲೇ ಓದುಗನಲ್ಲಿ ಕಾದಂಬರಿಯ ಕುರಿತು ಒಂದು ಆಪ್ತ ಭಾವ ಮೂಡುತ್ತದೆ. ನಿಜ, ಲೇಖಕಿಯ ಶ್ರಮಕ್ಕೆ ಮೆಚ್ಚಿ ತಲೆದೂಗದಿರಲು ಸಾಧ್ಯವೇ ಇಲ್ಲ.

ಉತ್ತರ ಕರ್ನಾಟಕ ಭಾಗದ ಗ್ರಾಮೀಣ ಸೊಗಡಿನ ನೈಜತೆಯಿಂದ ಕೂಡಿದ ಇಂಥ ಪ್ರಬುದ್ಧವಾದ ಕಥಾನಕವನ್ನು ಅತ್ಯಂತ ಆಸ್ಥೆಯಿಂದ ಓದಿ, ವಿಮರ್ಶಿಸಿ ಸೊಗಸಾದ ಮುನ್ನುಡಿ ಬರೆದಿರುವುದಲ್ಲದೆ ಅಷ್ಟೇ ಪ್ರೀತಿಯಿಂದ ಶೃಂಖಲಾಳನ್ನು ಕನ್ನಡದ ಸಹೃದಯಿ ಓದುಗರೆದುರು ಲೋಕಾರ್ಪಣೆ ಮಾಡಿರುವ ಹೆಸರಾಂತ ಅಂಕಣಕಾರ, ಕಾದಂಬರಿಕಾರ, ಸಾಹಿತಿ ಸಂತೋಷಕುಮಾರ ಮೆಹಂದಳೆ ಯವರನ್ನು ಅಭಿನಂದಿಸಲೇಬೇಕು.

ಸಮಾಜಕ್ಕೆ ಉತ್ತಮ ಸಂದೇಶ ಸಾರುವ ಇಂತಹ ಮನೋಜ್ಙವಾದ ನಿರೂಪಣೆಯುಳ್ಳ ಕಾದಂಬರಿಯನ್ನು ಕನ್ನಡ ಸಾರಸ್ವತ ಲೋಕಕ್ಕೆ ನೀಡಿರುವ ಲೇಖಕಿ ರೂಪಾ ಜೋಶಿಯವರ ಲೇಖನಿಯಲ್ಲಿ ಮುಂಬರುವ ದಿನಗಳಲ್ಲಿ ಇನ್ನೂ ಹೆಚ್ಚೆಚ್ಚು ವಿಭಿನ್ನ ಮತ್ತು ಪ್ರಯೋಗಾತ್ಮಕ ಕಥಾವಸ್ತುವಿನೊಂದಿಗೆ ಅತ್ಯುತ್ತಮ ಕೃತಿಗಳು ಮೂಡಿ ಬರುತ್ತಲಿರಲಿ ಎಂದು ಮನದುಂಬಿ ಹಾರೈಸುತ್ತಾ…

ಪ್ರೀತಿಯಿಂದ,
– ಮೇಘನಾ ದುಶ್ಯಲಾ 
 (ಮೇಘನಾ ಕಾನೇಟ್ಕರ್) 

4 Responses

  1. ನಯನ ಬಜಕೂಡ್ಲು says:

    ಸೂಪರ್. ಸೊಗಸಾಗಿದೆ ಪುಸ್ತಕ ಪರಿಚಯ. ಪುಸ್ತಕ ಕ್ಕಿಂತಲೂ ಹೀಗೊಬ್ಬರು ಬರಹಗಾರ್ತಿ ಇದ್ದಾರೆ ಅನ್ನುವುದು ನಿಮ್ಮ ಲೇಖನದ ಮೂಲಕ ಗೊತ್ತಾಯ್ತು.

  2. ಪುಸ್ತಕ ಪರಿಚಯ ಅದ್ಬುತ. ಧನ್ಯವಾದಗಳು

  3. ಪುಸ್ತಕ ಪರಿಚಯ ಓದಿದ ಮೇಲೆ ಆ ಪುಸ್ತಕ ಹುಡುಕಿ ಓದಲೇಬೇಕೆಂದು ಪ್ರೇರಣೆ ನೀಡಿತು.ಧನ್ಯವಾದಗಳು ಮೇಡಂ.

  4. ಶಂಕರಿ ಶರ್ಮ says:

    ಸೊಗಸಾದ ಶೀರ್ಷಿಕೆಯನ್ನು ಹೊತ್ತ ಕಾದಂಬರಿಯ ವಿಶ್ಲೇಷಣೆ ಜೊತೆಗೆ ಬರಹಗಾರ್ತಿಯವರ ಬಗೆಗೂ ಬಹಳಷ್ಟು ವಿಶೇಷ ಮಾಹಿತಿಗಳನ್ನು ಒಳಗೊಂಡ ಲೇಖನ ಇಷ್ಟವಾಯ್ತು.. ಧನ್ಯವಾದಗಳು, ಮೇಘನಾ ಮೇಡಂ.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: