ಸ್ಕಾಟ್‌ಲ್ಯಾಂಡಿನಲ್ಲೊಂದು ಕುದುರೆಯ ಕಥೆ

Spread the love
Share Button


ಅಜ್ಜನ ಕೋಲಿದು ನನ್ನಯ ಕುದುರೆ
ಹೆಜ್ಜೆಗು ಹೆಜ್ಜೆಗು ಕುಣಿಯುವ ಕುದುರೆ
ಕಾಲಿಲ್ಲದಯೇ ಓಡುವ ಕುದುರೆ

ಎಂದು ಮುದ್ದು ಮುದ್ದಾಗಿ ಹಾಡುತ್ತಾ ಓಡುತ್ತಿದ್ದ ಮೊಮ್ಮಗಳು ದಿಶಾ – ಇಂದು ಇಷ್ಟು ಎತ್ತರದ ಕುದುರೆ ಸವಾರಿ ಮಾಡುತ್ತಿದ್ದಾಳಲ್ಲ ಎಂದು ಅಚ್ಚರಿ. ಹದಿನಾಲ್ಕರ ಪೋರಿ ಅವರಪ್ಪನ ಬಳಿ ಹಠ ಮಾಡಿ ತನ್ನ ಹುಟ್ಟು ಹಬ್ಬಕ್ಕೆಂದು ಕುದುರೆ ಕೊಡಿಸಿಕೊಂಡಳು. ಅದಕ್ಕೂ ಮುಂಚೆ ಕುದುರೆ ಸವಾರಿ ಕಲಿಸುವ ಶಾಲೆಯಲ್ಲಿ ತಕ್ಕ ಮಟ್ಟಿಗೆ ಕುದುರೆ ಸವಾರಿ ಕಲಿತಿದ್ದಳು. ಬಿಳಿ, ಬೂದು ಬಣ್ಣದ ಮೂರು ವರ್ಷದ ‘ಕೆವಿನ್’ ಬಹಳ ಆಕರ್ಷಕವಾದ, ಸಧೃಢವಾದ , ಸೌಮ್ಯ ಸ್ವಭಾವದ ಕುದುರೆ.

ಪಾಶ್ಚಿಮಾತ್ಯ ದೇಶಗಳಲ್ಲಿ ಕುದುರೆ ಸಾಕುವುದು ಒಂದು ದುಬಾರಿ ಹವ್ಯಾಸವೇ. ಕುದುರೆ ಲಾಯಗಳಲ್ಲಿ ಬಾಡಿಗೆಗೆ ಕುದುರೆಗಳನ್ನು ಬಿಡುವ ವ್ಯವಸ್ಥೆ ಇದೆ. ಕೆವಿನ್‌ಗಾಗಿ ಆರಿಸಿದ ಲಾಯ – ‘ಹಿಲ್ ಹೆಡ್ ಲಿವರಿ ಸ್ಟೇಬಲ್’. ಇಲ್ಲಿ ಸುಮಾರು ಮೂವತ್ತು ಕುದುರೆಗಳನ್ನು ಬಯಲಿನಲ್ಲಿಯೇ ಬಿಟ್ಟಿದ್ದರು, ಹಾಗೂ ಇಪ್ಪತ್ತು ಕುದುರೆಗಳನ್ನು ಕುದುರೆ ಲಾಯಗಳಲ್ಲಿ ಕೂಡಿದ್ದರು. ಬಯಲಿನಲ್ಲಿ ಇದ್ದ ಕುದುರೆಗಳು ಹಸಿರು ಹುಲ್ಲು ಮೇಯುತ್ತಾ ಸ್ವಚ್ಛಂದವಾಗಿ ತಿರುಗಾಡುತ್ತವೆ. ಆದರೆ ಗಂಡು ಮತ್ತು ಹೆಣ್ಣು ಕುದುರೆಗಳನ್ನು ಬೇರೆ ಬೇರೆಯಾಗಿ ಇಡುತ್ತಾರೆ. ಹೊಸದಾಗಿ ಸೇರ್ಪಡೆಯಾದ ತುಂಟ ಕುದುರೆಗಳನ್ನು ಬೇರೆ ಕಡೆ ಇಡುತ್ತಾರೆ. ಲಾಯಗಳಲ್ಲಿ ಇದ್ದ ಕುದುರೆಗಳ ಮಾಲೀಕರು ನಿತ್ಯ ಅಲ್ಲಿಗೆ ಬಂದು ಕುದುರೆಗಳ ಆರೈಕೆ ಮಾಡಬೇಕಾಗುತ್ತದೆ. ಕೊಟ್ಟಿಗೆ ಸ್ವಚ್ಛ ಮಾಡುವುದು, ಕುದುರೆಗಳಿಗೆ ಹುಲ್ಲು, ನೀರು ಹಾಕುವುದು ಇತ್ಯಾದಿ. ಹುಲ್ಲನ್ನು ಕಿಂಡಿ ಇರುವ ಚೀಲದಲ್ಲಿ ಇಟ್ಟು ಕುದುರೆಗಳ ಮುಂದೆ ನೇತು ಹಾಕಿರುತ್ತಾರೆ. ತಿಂಗಳಿಗೊಮ್ಮೆ ಪಶುವೈದ್ಯರು ಎಲ್ಲಾ ಕುದುರೆಗಳ ಆರೋಗ್ಯ ತಪಾಸಣೆ ಮಾಡುತ್ತಾರೆ. ಮೂರು ತಿಂಗಳಿಗೊಮ್ಮೆ ‘ಫ್ಯಾರಿಯರ್’ ಅಂದರೆ ಗೊರಸಿಗೆ ಲಾಳ ಹೊಡೆಯುವನು ಬರುತ್ತಾನೆ. ಅವರು ಕುದುರೆಗೆ ಶೂ ಹಾಕುವುದು ಎನ್ನುತ್ತಾರೆ.

ಕುದುರೆ ಸವಾರಿ ಕಲಿಸಲು ವಾರಕ್ಕೆ ಮೂರು ಬಾರಿ ಒಬ್ಬ ಮಾಸ್ತರ್ ಬರುತ್ತಿದ್ದ. ಅವನು ದಿಶಾಳಿಗೆ ಕಲಿಸಿದ ಮೊದಲ ಪಾಠ – ಕುದುರೆ ಒಂದು ಮಗುವಿನ ಹಾಗೆ. ಅದರ ಕತ್ತು, ಬೆನ್ನು ಸವರುತ್ತಾ, ಕಣ್ಣಲ್ಲಿ ಕಣ್ಣಿಟ್ಟು ನೋಡುತ್ತಾ ಅದರ ಜೊತೆಗೆ ಮಾತನಾಡು. ಮೊದಲು ನಿಮ್ಮಿಬ್ಬರ ನಢುವೆ ಪ್ರೀತಿ, ವಿಶ್ವಾಸದ ಸಂಬಂಧ ಬೆಳೆಯಬೇಕು. ಎರಡನೇ ಪಾಠ – ಕುದುರೆಗೆ ಸ್ನಾನ ಮಾಡಿಸುವುದು, ಅದರ ಲದ್ದಿ ಎತ್ತಿ ತಿಪ್ಪೆಗೆ ಹಾಕುವುದು, ಜೀನು ಹಾಕುವುದು, ಲಗಾಮು ಹಿಡಿದು ಓಡಾಡುವುದು ಮಾಡು. ನಂತರವೇ ಅದರ ಮೇಲೆ ಸವಾರಿ ಮಾಡಬಹುದು.

PC: Internet

ಕುದುರೆ ಸವಾರಿ ಕಲಿಯುವರಿಗಾಗಿಯೇ ಒಂದು ಮರಳಿನ ಚೌಕ ಮಾಡಿದ್ದಾರೆ. ಮೊದಲ ಹಂತ ನಡೆದಾಡುವುದು, ನಂತರ ‘ಟ್ರಾಟಿಂಗ್’, ‘ಕ್ಯಾಂಟರಿಂಗ್’, ಆಮೇಲೆ ‘ಗ್ಯಾಲಪಿಂಗ್’ ಹೀಗೆ ಕ್ರಮಬದ್ಧವಾಗಿ ಕಲಿಸಿಕೊಡುತ್ತಿದ್ದರು. ಕುದುರೆ ಸವಾರಿ ಕಲಿತಾದ ಮೇಲೆ ‘ಹರ್ಡಲ್ಸ್’ ಕಲಿಸುತ್ತಿದ . ಕೆಲವರು ಪಕ್ಕದಲ್ಲೇ ಇದ್ದ ಕಾಡಿನೊಳಗೆ ‘ಹೈಕಿಂಗ್’ ‘ಟ್ರೆಕ್ಕಿಂಗ್’ ಮಾಡುತ್ತಿದ್ದರು. ಕುದುರೆ ಸವಾರಿ ಮಾಡುವವರು ಕಡ್ಡಾಯವಾಗಿ ಹೆಲ್ಮೆಟ್, ಕವಚ, ಗ್ಲೌಸ್, ಸವಾರಿ ಶೂಗಳನ್ನು ಹಾಕಲೇಬೇಕು. ದಿಶಾ ಅಂತೂ ಈ ಉಡುಪಿನಲ್ಲಿ ರಾಜಕುವರಿಯ ಹಾಗೆ ಕಾಣುತ್ತಿದ್ದಳು. ಅವಳಿಗೆ ಅಜ್ಜಿಯ ಮುಂದೆ ತನ್ನ ಸಾಹಸ ಪ್ರದರ್ಶಿಸುವ ಕಾತುರ.. ಒಮ್ಮೆ ಕುದುರೆಯನ್ನು ವೇಗವಾಗಿ ಓಡಿಸಲು ಹೋಗಿ ಬಿದ್ದೇಬಿಟ್ಟಳು. ನನಗೆ ಗಾಬರಿಯಾಗಿ ಜೋರಾಗಿ ಕೂಗಿದೆ. ಅಲ್ಲಿದ್ದ ನಾಲ್ಕೈದು ಮಂದಿ ಓಡಿ ಬಂದರು. ಅಷ್ಟು ದೊಡ್ಡ ಕುದುರೆ ಪುಟ್ಟ ಹುಡುಗಿಯ ಮೇಲೇನಾದರೂ ಕಾಲಿಟ್ಟಿದ್ದಿದ್ದರೆ ಅವಳ ಗತಿ ಗೋವಿಂದ.

ಆದರೆ ಓಡುತ್ತಿದ್ದ ಕೆವಿನ್ ತಟ್ಟನೆ ನಿಂತು ಅವಳನ್ನು ತನ್ನ ಕಾಲಿನಿಂದ ಎಬ್ಬಿಸಲು ಪ್ರಯತ್ನಿಸುತಿತ್ತು. ಅದರ ಕಣ್ಣುಗಳಲ್ಲಿ ಪ್ರೀತಿ, ವಾತ್ಸಲ್ಯ ಜಿನುಗುತ್ತಿತ್ತು. ನನಗಂತೂ ಆ ಕ್ಷಣ ಮರೆಯಲಾಗದ ಅನುಭವ. ರಾಣ ಪ್ರತಾಪನ ‘ಚೇತಕ್’ ಕುದುರೆಯ ನೆನಪಾಯಿತು. ಕುದುರೆ ಲಾಯದ ಮೇಲ್ವಿಚಾರಕಿ ‘ಬಾಬ್ಸ್’ -‘ನೀನು ಮೊದಲು ನಿಧಾನವಾಗಿ ಸವಾರಿ ಮಾಡುವುದನ್ನು ಕಲಿ’ -ಅಂತ ಕೂಗಾಡಿದಳು.

ದಿನ ಕಳೆದಂತೆ ದಿಶಾ ಕುದುರೆ ಸವಾರಿಯಲ್ಲಿ ಪರಿಣಿತಿ ಪಡೆದಳು. ವಾರಕ್ಕೆ ಮೂರು ಬಾರಿ ಅವಳಮ್ಮ ದಿಶಾಳನ್ನು ತಪ್ಪದೇ ಕೆವಿನ್ ಬಳಿ ಕರೆದೊಯ್ಯುತ್ತಿದ್ದಳು ಹಾಗೂ ಎಲ್ಲ ಕೆಲಸದಲ್ಲೂ ಮಗಳ ಜೊತೆ ಕೈ ಜೋಡಿಸುತ್ತಿದ್ದಳು. ಕೆವಿನ್ ಅವರ ಮನೆಯ ಸದಸ್ಯನೇ ಆಗಿ ಹೋಗಿದ್ದ. ಚಳಿಗಾಲದಲ್ಲಿ ಬೆಚ್ಚನೆ ಹೊದಿಕೆ, ಬೇಸಿಗೆಯಲ್ಲಿ ಹಗುರಾದ ಹೊದಿಕೆ, ಮಳೆ ಬಂದಾಗ ರೈನ್ ಕೋಟ್. ಅದಕ್ಕೆ ತಿನ್ನಿಸಲು ಕೋಸು, ಕ್ಯಾರೆಟ್, ಸೇಬು, ಬಾಳೆಹಣ್ಣು ಇತ್ಯಾದಿ. ಕುದುರೆಗಾಗಿಯೇ ಇದ್ದ ರುಚಿಯಾದ ತಿನಿಸು ಕೊಂಡು ತಂದು ತಿನ್ನಿಸುತ್ತಿದ್ದಳು. ಹೀಗೆ ಅದಕ್ಕೆ ರಾಜೋಪಚಾರ. ಬೆನ್ನಿನ ಮೇಲಿನ ಕೂದಲನ್ನು ತಾಯಿ, ಮಗಳು ಸೇರಿ ವಿವಿಧ ಆಕಾರದಲ್ಲಿ ಟ್ರಿಮ್ ಮಾಡುವರು, ಅದರ ಬಾಲಕ್ಕೆ ಜಡೆ ಹಾಕಿ ರಿಬ್ಬನ್ ಕಟ್ಟುವರು. ಶಾಪಿಂಗ್ ಹೋದಾಗಲೆಲ್ಲ ದಿಶಾ ಕೆವಿನ್ ಗಾಗಿ ಏನಾದರೂ ತಪ್ಪದೇ ತರುತ್ತಿದ್ದಳು. ಕೆವಿನ್ ಅವಳ ಅಚ್ಚುಮೆಚ್ಚಿನ ಗೆಳೆಯನಾದ.

ಕೊವಿಡ್-19 ಬಂದ ನಂತರ ಈ ಲಾಯದಲ್ಲೂ ಕೆಲವು ಮಾರ್ಪಾಡುಗಳಾಯಿತು. ನಿಗದಿತ ಸಮಯದಲ್ಲಿಯೇ ಕೆವಿನ್‌ನನ್ನು ನೋಡಲು ಹೋಗಬೇಕಾಗಿತ್ತು. ಶಾಲೆಗೂ ರಜಾ, ಯಾವ ಚಟುವಟಿಕೆಗಳೂ ಇಲ್ಲದೇ ದಿಶಾ ಮಂಕಾದಳು. ಮೇ ತಿಂಗಳಲ್ಲಿ ಒಮ್ಮೆ – ಕೆವಿನ್ ಜೊತೆ ಕಾಡಿನಲ್ಲಿ ಸುತ್ತಾಡುತ್ತಿದ್ದ ದಿಶಾ ತನಗೆ ನಿಗದಿಪಡಿಸಿದ್ದ ಸಮಯ ಮುಗಿದಿದ್ದರೂ ಲಾಯಕ್ಕೆ ಹಿಂತಿರುಗಲೇ ಇಲ್ಲ. ಬಾಬ್ಸ್ ಅವರಮ್ಮನನ್ನು ತರಾಟೆಗೆ ತೆಗೆದುಕೊಂಡಿದ್ದಳು. ಕೊವಿಡ್‌ನಿಂದ ಹೆಚ್ಚು ಹೊತ್ತು ಅಲ್ಲಿ ಇರುವಂತಿರಲಿಲ್ಲ. ಯಾಕೋ ಅಂದು ದಿಶಾಗೆ ಕೆವಿನ್ ಬಿಟ್ಟು ಬರಲು ಮನಸ್ಸೇ ಇರಲಿಲ್ಲ. ಕೊನೆಗೆ ಅವರಮ್ಮ ತನಗೆ ಆಸ್ಪತ್ರೆಗೆ ಹೋಗಲು ಸಮಯವಾಗಿದೆ ಎಂದು ಬಲವಂತವಾಗಿ ಹೊರಡಿಸಬೇಕಾಯ್ತು. ಬಹುಶಃ ಅವಳ ಆರನೇ ಇಂದ್ರಿಯ ಮುಂದಾಗಲಿರುವ ವಿಪತ್ತಿನ ಬಗ್ಗೆ ಸೂಚನೆ ನೀಡಿತ್ತೋ ಏನೋ? ಮನೆಗೆ ಹಿಂತಿರುಗಿದ ಮೇಲೂ ದಿಶಾ ಕೆವಿನ್ ವಿಚಾರವೇ ಮಾತಾಡುತ್ತಿದ್ದಳು. ಆ ದಿನ ಸಂಜೆ ಒಂದು ಆಘಾತಕಾರಿ ಸಂಗತಿ ನಡೆಯಿತು. ಕುದುರೆ ಲಾಯದಿಂದ ಕರೆ ಬಂತು. ಕೆವಿನ್ ಕಾಂಪೌಂಡ್ ಹಾರಲು ಹೋಗಿ ಬೆನ್ನ ಮೇಲೆ ಬಿದ್ದಿದೆ ಎಂದು. ದಿಶಾ ಅಳಲು ಶುರು ಮಾಡಿದಳು. ಅವಳು ಒಂದು ಪುಸ್ತಕದಲ್ಲಿ ಓದಿದ್ದಳು – ಕಾಡಿನಲ್ಲಿರುವ ಕುದುರೆಗಳು ತಮ್ಮ ತಂಡದಲ್ಲಿನ ಕುದುರೆಯೇನಾದರೂ ಬೆನ್ನ ಮೇಲೆ ಬಿದ್ದರೆ ಅದನ್ನು ಅಲ್ಲೇ ಬಿಟ್ಟು ಹೋಗುತ್ತವೆ. ಏಕೆಂದರೆ ಅದರ ಸಾವು ಖಚಿತ ಎಂದು. ಕೆವಿನ್ ಪಕ್ಕದ ಕಾಂಪೌಂಡಿನಲ್ಲಿದ್ದ ಹೆಣ್ಣು ಕುದುರೆ ನೋಡಿ ಪ್ರಕೃತಿ ಸಹಜವಾದ ಬಯಕೆಯಿಂದ ಹಾರಿದೆ. ಆದರೆ ಗೋಡೆ ಎತ್ತರವಾಗಿದ್ದರಿಂದ ಹಾರಲಾಗದೆ ಕೆಳಗೆ ಬಿದ್ದಿದೆ. ನಾವು ತಕ್ಷಣವೇ ಲಾಯಕ್ಕೆ ಹೋದಾಗ ಆಗಲೇ ಅಲ್ಲಿ ಕುದುರೆ ಮೇಲೆತ್ತಲು ಮೂರು ಅಗ್ನಿಶಾಮಕ ದಳದವರು ಹಾಗೂ ಪಶು ವೈದ್ಯರೂ ಬಂದಿದ್ದರು. ಕುದುರೆಯನ್ನು ಕ್ರೇನ್ ಸಹಾಯದಿಂದ ಎತ್ತಿ ಒಂದು ತೆರೆದ ಆಲ್ಮೇರದಂತಿದ್ದ ಪೆಟ್ಟಿಗೆಯಲ್ಲಿ ಕೆವಿನ್‌ನನ್ನು ನಿಲ್ಲಿಸಿದರು. ನೋವು ನಿವಾರಕ ಮಾತ್ರೆ ನೀಡಿದರು. ಮಾರನೆಯ ದಿನ ಎಕ್ಸ್‌ರೇ ಮಾಡಿ ಯಾವ ಮೂಳೆಯೂ ಮುರಿದಿಲ್ಲ ಎಂದಾಗ ಸ್ವಲ್ಪ ಸಮಾಧಾನವಾಯಿತು. ಆದರೆ ದಿಶಾ ಮಾತ್ರ ಬೇಸರದಲ್ಲೇ ಇದ್ದಳು. ಯಾವ ಔಷಧಿಗೂ ಕೆವಿನ್ ಆರೋಗ್ಯ ಸುಧಾರಿಸಿದಂತೆ ಕಾಣಲಿಲ್ಲ. ದಿಶಾ ದಿನಕ್ಕೆ ಮೂರು ಬಾರಿ ಅದರ ಗಾಯಕ್ಕೆ ಹಾಕಿದ್ದ ಬ್ಯಾಂಡೇಜ್ ಬದಲಿಸುವುದು, ಮಾತ್ರೆ ಕೊಡುವುದು, ಅದರ ಕೊಟ್ಟಿಗೆ ಸ್ವಚ್ಛ ಮಾಡುವುದು, ಅದಕ್ಕೆ ಹುಲ್ಲು ತಿನ್ನಿಸುವುದು. ಕೊಟ್ಟಿಗೆಯ ಸುತ್ತ ನಿಧಾನವಾಗಿ ತಿರುಗಾಡಿಸುವುದು – ಎಲ್ಲಾ ಮನಸ್ಸಿಟ್ಟು ಮಾಡುತ್ತಿದ್ದಳು. ಅದರ ಜೊತೆ ಮಾತಾಡುತ್ತಿದ್ದಳು. ಒಂದು ತಿಂಗಳ ನಂತರ ವೈದ್ಯರು ಕೆವಿನ್‌ಗೆ-ಲ್ಯಾಮಿನೈಟಿಸ್ ಆಗಿದೆ. ಈ ರೋಗಕ್ಕೆ ಯಾವುದೇ ಮದ್ದಿಲ್ಲ. ದಿನೇ ದಿನೇ ಕುದುರೆಯ ನೋವು ಹೆಚ್ಚಾಗುತ್ತದೆ. ಅದ್ದರಿಂದ ದಯಾಮರಣವೇ ಸೂಕ್ತ – ಎಂದು ಹೇಳಿ ಬಿಟ್ಟರು. ಆದರೆ ಆ ಕಟು ಸತ್ಯವನ್ನು ನಮ್ಮಿಂದ ಅರಗಿಸಿಕೊಳ್ಳಲಾಗಲಿಲ್ಲ. ದಿಶಾ ಹಗಲೆಲ್ಲಾ ಕೆವಿನ್ ಜೊತೆಗೇ ಇರುತ್ತಿದ್ದಳು. ಮನೆಗೆ ಬಂದರೆ ಕೆವಿನ್ ಚಿತ್ರ ಬರೆಯುತ್ತಾ ಕೂತು ಬಿಡುತ್ತಿದ್ದಳು. ಊಟ, ತಿಂಡಿ, ನಿದ್ರೆ ಎಲ್ಲಾ ಬಿಟ್ಟು ಕೆವಿನ್, ಕೆವಿನ್ ಎಂದು ಕನವರಿಸುತ್ತಿದ್ದಳು.

PC: Internet

ಪಾಶ್ಚಿಮಾತ್ಯರ ಆಲೋಚನಾ ಪದ್ಧತಿ ನಮ್ಮದಕ್ಕಿಂತ ಭಿನ್ನ. – ಕುದುರೆ ಸವಾರಿಗೆ ಯೋಗ್ಯವಲ್ಲ, ಕುಂಟುತ್ತಾ ನಡೆಯುತ್ತದೆ – ಎಂದಾಗ ಅದಕ್ಕೆ ದಯಾಮರಣವೇ ಸೂಕ್ತ ಎಂದು ನಿರ್ಧರಿಸಿದರು. ಆದರೆ ನಾವು – ಎಲ್ಲಾದರೂ ಓಡಾಡಿಕೊಂಡು ಇರಲಿ. ಯಾವುದಾದರೂ ಜಮೀನಿನಲ್ಲಿ ಬಿಡೋಣ ಎಂದು ಯೋಚಿಸಿದೆವು. ಆಗ ನನ್ನ ಸೊಸೆಯ ಆಸ್ಪತ್ರೆಯಲ್ಲಿದ್ದ ನರ್ಸ್ ತನ್ನ ಫಾರ್ಮ್‌ನಲ್ಲಿ ಬಿಡಿ ಎಂದಾಗ ಸ್ವಲ್ಪ ನಿರಾಳವಾಯಿತು. ನಾವು ಕೆವಿನ್‌ನನ್ನು ಫಾರ್ಮ್‌ಗೆ ಸಾಗಿಸುವ ಸಿದ್ಧತೆಯಲ್ಲಿದ್ದಾಗ ಅದರ ಕಾಲಿನಲ್ಲ್ಲಿ ರಕ್ತ ಬಂತು. ಅಲ್ಲಿದ್ದ ವೈದ್ಯರು ಕೆವಿನ್ ತುಂಬಾ ನೋವಿನಲ್ಲಿದೆ. ಅದರ ನೋವು ದಿನೇ ದಿನೇ ಹೆಚ್ಚುತ್ತಲೇ ಹೋಗುವುದು. ದಯಾಮರಣವೇ ಸೂಕ್ತ ಎಂದರು. ಎರಡು ದಿನ ಮನೆಯಲ್ಲಿ ಯಾರಿಗೂ ನಿದ್ದೆ ಇಲ್ಲ. ಅಂತೂ ಕೊನೆಗೆ ದಯಾಮರಣಕ್ಕೆ ಒಪ್ಪಿಗೆ ನೀಡಲೇ ಬೇಕಾಯ್ತು. ದಿಶಾ ಅಂತೂ ಬಿಕ್ಕಿ ಬಿಕ್ಕಿ ಅಳುತ್ತಿದ್ದಳು. ಆದರೆ ನಾವು ಏನೂ ಮಾಡುವ ಸ್ಥಿತಿಯಲ್ಲಿರಲಿಲ್ಲ. ದಯಾಮರಣದ ಎರಡು ಆಯ್ಕೆಗಳು ಹೀಗಿವೆ – ಮೊದಲನೆಯ ಆಯ್ಕೆ – ಗುಂಡು ಹಾರಿಸಿ ಕೊಲ್ಲುವುದು. ಎರಡನೆಯದು – ಕೆಮಿಕಲ್ ಇರುವ ಇಂಜೆಕ್ಷನ್ ನೀಡುವುದು. ಮೊದಲನೆಯ ಆಯ್ಕೆ ತುಂಬಾ ಅಮಾನವೀಯ ಎಂದೆನಿಸಿತು. ಎರಡನೆಯ ಆಯ್ಕೆಗೆ ಒಪ್ಪಿಗೆ ಸೂಚಿಸಿದೆವು.

ಆ ದಿನ ಭಾನುವಾರ. ಎಲ್ಲರೂ ಕೆವಿನ್ ನೋಡಲು ಹೋಗಿದ್ದೆವು. ದಿಶಾ ಮೌನವಾಗಿದ್ದಳು. ಕೆವಿನ್‌ಗೆ ಅದರ ಅಚ್ಚುಮೆಚ್ಚಿನ ತಿಂಡಿ ತಿನ್ನಿಸಿ ಲಾಯದ ಹೊರಗೆ ಕರೆದೊಯ್ದು ಅದರ ಕುತ್ತಿಗೆ ಸವರುತ್ತಾ ಅಪ್ಪಿಕೊಂಡಳು. ಕೆವಿನ್ ಕಣ್ಣಲ್ಲಿ ನೀರು ಜಿನುಗುತ್ತಿತ್ತು. ಕೆವಿನ್‌ಗೂ ತನ್ನ ಸಾವಿನ ಸುದ್ದಿ ತಿಳಿದಿತ್ತೇನೋ. ದಿಶಾ ಓಡಿ ಬಂದು ಕಾರು ಹತ್ತಿದಳು. ನಾವೂ ಸುಮ್ಮನೇ ಅವಳನ್ನು ಹಿಂಬಾಲಿಸಿದೆವು. ಮನೆಗೆ ತಲುಪಿದ ಅರ್ಧ ಗಂಟೆಯಲ್ಲೇ ಕೆವಿನ್ ಸಾವಿನ ಸುದ್ದಿ ಬಂತು.

ನನ್ನ ಮನದಲ್ಲಿ ಕೆಲವು ಪ್ರಶ್ನೆಗಳು ಯಕ್ಷಪ್ರಶ್ನೆಗಳಂತೆ ಉಳಿದೇಬಿಟ್ಟವು. ಕೆವಿನ್ ಸಾವಿಗೆ ಕಾರಣ ಯಾರು? ಪ್ರಕೃತಿ ಸಹಜವಾದ ಬಯಕೆಗಳಿಂದ ಕಾಂಪೌಂಡ್ ಜಿಗಿದಿದ್ದು ಕೆವಿನ್ ತಪ್ಪೆ? ಈ ರೀತಿ ಗಂಡು, ಹೆಣ್ಣು ಕುದುರೆಗಳನ್ನು ಬೇರೆ ಬೇರೆಯಾಗಿ ಕೂಡುವುದು ನಾಗರೀಕತೆಯ ಲಕ್ಷಣವೇ? ಕೆವಿನ್ ಹೇಗೋ ಕುಂಟುತ್ತಾ ಬದುಕುಳಿಯುತ್ತಿತ್ತು. ಕೆವಿನ್ ಕೊಲ್ಲಲು ನಾವು ಯಾರು? ಈ ದಯಾಮರಣ ಎಷ್ಟು ಸರಿ ಎಂದು ಯಾರ ಬಳಿ ಕೇಳಲಿ?

ದಿಶಾಳನ್ನು ತನ್ನ ಬೆನ್ನ ಮೇಲೆ ಹೊತ್ತು ಸಂಭ್ರಮದಿಂದ ಓಡುತ್ತಿದ್ದ ಕೆವಿನ್, ಅವಳ ಕೈಯಿಂದ ತಿಂಡಿ ಕಸಿದು ಗಬಗಬನೆ ತಿನ್ನುತ್ತಿದ್ದ ಕೆವಿನ್, ಅವಳು ಮಾಲಿಷ್ ಮಾಡುವಾಗ ಅರ್ಧ ಕಣ್ಣು ಮುಚ್ಚಿ ಧ್ಯಾನ ಮಾಡುವಂತೆ ನಿಂತಿರುತ್ತಿದ್ದ ಕೆವಿನ್, ಅವಳು ಕೆವಿನ್ ಎಂದು ಕರೆದಾಕ್ಷಣ ಓಡಿ ಬರುತ್ತಿದ್ದ ಕೆವಿನ್ ..ಈಗ ಎಲ್ಲಿದ್ದೀಯಾ?

-ಡಾ. ಗಾಯತ್ರಿದೇವಿ ಸಜ್ಜನ್

14 Responses

 1. ನಯನ ಬಜಕೂಡ್ಲು says:

  ಹೊಸ ವಿಚಾರಗಳನ್ನೊಳಗೊಂಡ ಬರಹ, ಹೃದಯಸ್ಪರ್ಶಿಯಾಗಿದೆ

 2. ಬಿ.ಆರ್.ನಾಗರತ್ನ says:

  ಅಭ್ಭಾ ಲೇಖನ ಓದುತ್ತಾ ಓದುತ್ತಾ ಹೊಸ ಪ್ರಪಂಚ ನನ್ನ ಕಣ್ಣಿಗೆ ಕಟ್ಟಿದಂತಾಯಿತು..ಈ ವಿಷಯದ ಬಗ್ಗೆ ಅಲ್ಪಸ್ವಲ್ಪ ತಿಳಿದಿತ್ತು ಆದರೆ ಇಷ್ಟು ವಿಸ್ತಾರವಾದ ವಿವರಣೆ ಗೊತ್ತಿರಲಿಲ್ಲ.ಒಳ್ಳೆಯ ಉಪಯುಕ್ತ ಮಾಹಿತಿ ಕೊಟ್ಟಿದ್ದಕ್ಕೆ ಧನ್ಯವಾದಗಳು ಮೇಡಂ.

 3. Meghana Kanetkar says:

  ಮನಮಿಡಿಯುವ ಬರಹ

 4. Prameela says:

  ನಮಸ್ತೆ ಮೇಡಂ.. ನಾನು ಸಹ್ಯಾದ್ರಿ ಕಾಲೇಜು ನಲ್ಲಿ ನಿಮ್ಮ ವಿದ್ಯಾರ್ಥಿನಿ…. ಹೃದಯಸ್ಪರ್ಶಿ ಬರಹ… ಕಣ್ಣಲ್ಲಿ ನೀರು ಜಿನಿಗಿತು.. ಕೆವಿನ್ ಗೆ ಭಾವಪೂರ್ಣ ಶ್ರದ್ದಾಂಜಲಿಗಳು

 5. Hema says:

  ನಿಮ್ಮ ಬರಹದ ಮೂಲಕ ಬಾಲಕಿಯ ಮುಗ್ಧ ಪ್ರಾಣಿಪ್ರೀತಿ ಹಾಗೂ ವಿದೇಶದಲ್ಲಿ ಸಾಕುಪ್ರಾಣಿಗಳ ಬಗ್ಗೆ ಇರುವ ನಿಯಮಗಳನ್ನೂ ಸ್ವಲ್ಪ ತಿಳಿಯಲು ಅನುಕೂಲವಾಯಿತು. ಚೆಂದದ ಬರಹ. ಪಾಪ, ಕೆವಿನ್ ಸಾಯಬಾರದಿತ್ತು..

 6. ನಿಮ್ಮ ಪ್ರತಿಕ್ರಿಯೆ ನನಗೆ ಆಕ್ಸಿಜನ್ ಇದ್ದಂತೆ

 7. sudha says:

  i have suffered in the same way when our pet dog was put to sleep

 8. Samatha.R says:

  ಮನಸ್ಸು ತಟ್ಟಿದ ಬರಹ..ಆತ್ಮೀಯ ನಿರೂಪಣೆ..

 9. ಶಂಕರಿ ಶರ್ಮ says:

  ಕೆವಿನ್ ಕಥೆ ಓದಿ ಮನಸ್ಸು ಮಂಕಾಯಿತು. ನೀವಂದಂತೆ ತಪ್ಪು ಯಾರದೇ ಆಗಿರಲಿ, ಶಿಕ್ಷೆ ಮಾತ್ರ ಅದಕ್ಕೆ ಆಗಿ ಹೋಯಿತಲ್ಲಾ..ಪಾಪ..ಕೆವಿನ್

Leave a Reply

 Click this button or press Ctrl+G to toggle between Kannada and English

Your email address will not be published.

Follow

Get every new post on this blog delivered to your Inbox.

Join other followers: