ಕೆ ಎಸ್‌ ನ ಕವಿನೆನಪು 44 : ಕವಿಪತ್ನಿಯ ನೆನಪು.. 2

Share Button

ಅಮ್ಮನ ನಿರ್ಭಿಡೆಯ ಮಾತುಗಾರಿಕೆ ಕೆಲವು ಸಂದರ್ಭಗಳಲ್ಲಿ ಬಿಕ್ಕಟ್ಟನ್ನೂ ತಂದೊಡ್ಡುತ್ತಿತ್ತು. ಒಮ್ಮೆ ಬೆಂಗಳೂರು ದೂರದರ್ಶನದ ಕಾರ್ಯಕ್ರಮವೊಂದರಲ್ಲಿ ಅಮ್ಮನನ್ನು ಸಂದರ್ಶಿಸುತ್ತಿದ್ದ ನಿರೂಪಕಿ ”ಆಡಂಬರದ ವಿವಾಹದ ಬಗ್ಗೆ ನಿಮ್ಮ ಅಭಿಪ್ರಾಯವೇನು?” ಎಂದು ಕೇಳಿದರು. ಅದಕ್ಕೆ ಅಮ್ಮಏನು ಹೇಳೋದು  ಮೂರು ಹೆಣ್ಣು ಮಕ್ಕಳ ಮದುವೆ ಮಾಡಿ, ಬೀಗರನ್ನು ಸಹಿಸಿ  ನಾವೇ ದಣಿದಿದ್ದೀವಿ. ಹೆಣ್ಣು ಹೆತ್ತವರ ಕಷ್ಟ ಅರ್ಥವಾಗದವರೇ ಜಾಸ್ತಿ ಎಂದು ಉತ್ತರಿಸಿದ್ದರು. ಇದನ್ನು ಕೇಳಿದ, ಕಳೆದ ವರ್ಷವಷ್ಟೇ ವಿವಾಹವಾಗಿದ್ದ ನನ್ನ ತಂಗಿಯ ಅತ್ತೆ ಮಾವಂದಿರು ಕೋಪಗೊಂಡರು. ನಮ್ಮ ತಂಗಿ ಈ ಬಗ್ಗೆ ಅಮ್ಮನ ಹತ್ತಿರ  ವಿಷಯ ಹೇಳಿದಾಗ, “ಆ ಕ್ಷಣದಲ್ಲಿ ನನಗೆ ತೋಚಿದ್ದು ಹೇಳಿದೆ.ಅಷ್ಟೆ “ ಎಂದುಬಿಟ್ಟರು. ಆದರೆ ಅಂದು  ಆಡಿದ ಮಾತಿನ ಪರಿಣಾಮ ಬಹಳ ಕಾಲದವರೆಗೆ ಇತ್ತು.

ಅಮ್ಮನ ಮತ್ತೊಂದು ವಿಶೇಷವೆಂದರೆ ಪರಿಚಿತರಿರಲಿ, ಇಲ್ಲದಿರಲಿ ಪ್ರತಿಯೊಬ್ಬರನ್ನೂ ವರ್ಗಬೇಧವಿಲ್ಲದೆ ಮಾತನಾಡಿಸುವ ಛಾತಿ. ಮನೆಯ ಮುಂದೆ ವೃತ್ತಪತ್ರಿಕೆ ಓದುತ್ತಾ ಕುಳಿತಾಗ ಯಾರಾದರೂ ಹಸುಮಗುವನ್ನೆತ್ತಿಕೊಂಡು  ಬಂದರೆ ಅವಳ ಬಾಣಂತನದ ಬಗ್ಗೆ, ಆರೋಗ್ಯದ ಬಗ್ಗೆ ಕಳಕಳಿಯಿಂದ ವಿಚಾರಿಸುತ್ತಿದ್ದರು. ತಾಯಿ, ಮಗುವನ್ನು ಒಳಗೆ ಕರೆದು ಮಗುವಿನ  ನೆತ್ತಿಗೆ ಕೊಬ್ಬರಿ ಎಣ್ಣೆ ಸವರಿ, ಬಾಯಿಗೆ ಸಕ್ಕರೆ ಇಟ್ಟು ಹರಸುತ್ತಿದ್ದರು. ಅಮ್ಮನ  ಪ್ರೇರಣೆಯಿಂದ ನಮ್ಮ ಮನೆಯಲ್ಲಿ ಯಾರಾದರೂ ಮೊದಲ ಬಾರಿ ಮಗುವನ್ನು ಕರೆದುಕೊಂಡು  ಬಂದಾಗಲೂ ಇದೇ ಸಂಪ್ರದಾಯ ಮುಂದುವರೆದುಕೊಂಡು ಬಂದಿದೆ.

ಅಮ್ಮನ ಸಾಂಘಿಕ ಜೀವನ ಮತ್ತೊಂದು ಅದ್ಭುತ ನಿದರ್ಶನವೆಂದರೆ ಗೌರಿಹಬ್ಬದ ಸನ್ನಿವೇಶ. ನಮ್ಮ ಬೀದಿಯ ಹಾಗೂ ಪಕ್ಕದ ಬೀದಿಯ ಹಲವಾರು ಮಹಿಳೆಯರು ನಮ್ಮ ಮನೆಗೆ ಗೌರಿಪೂಜೆಗೆ ಬರುತ್ತಿದ್ದರು. ಎಂದೂ ದೇವರ ಪೂಜೆಗೆ ಗಮನ ಅಷ್ಟಾಗಿ ಕೊಡದಿದ್ದ ನಮ್ಮ ತಂದೆ ಅಂದು ಶುಭ್ರಸ್ನಾತರಾಗಿ, ಮಗುಟ ಉಟ್ಟುಕೊಂಡು ಶ್ರದ್ಧೆಯಿಂದ ಪೂಜೆ ಮಾಡಿಸುತ್ತಿದ್ದರು.  ಪ್ರತಿಯೊಬ್ಬರೂ ಉಪಾಯನ ದಾನವನ್ನು ನಮ್ಮ ತಂದೆಯವರಿಗೆ ನೀಡಿ ನಮಸ್ಕರಿಸುತ್ತಿದ್ದರು. ಒಬ್ಬ ಪ್ರಸಿದ್ಧ  ಕವಿ ಗೌರಿ ಪೂಜೆ ಮಾಡಿಸಿದರೆಂಬ ಹೆಮ್ಮೆ ಅವರಿಗೆ. ಆ ಸಮಯದಲ್ಲಿ ಅಮ್ಮ ತನ್ನ ಜೋರುದನಿಯಲ್ಲಿ ಹಾಡುತ್ತಿದ್ದ  “ಅಂದು ದಕ್ಷ ಯಜ್ಞದೊಳು” ಎಂದು ಆರಂಭವಾಗುವ  (ವಾಗೀಶ್ವರಿ ಶಾಸ್ತ್ರಿ ಅವರ ರಚನೆ) ಗೌರಿ ಕುರಿತ ಮಂಗಳಾಷ್ಟಕವನ್ನು ಹಾಡುತ್ತಿದ್ದುದು  ಇಂದೂ ನನ್ನ  ನೆನಪಿನಲ್ಲಿ ಹಸಿರಾಗಿದೆ.

ಅಮ್ಮನ ಮತ್ತೊಂದು ಪ್ರಿಯವಾದ  ಹವ್ಯಾಸ ತೋಟಗಾರಿಕೆ. ಯಾವುದೇ ಬಾಡಿಗೆ ಮನೆಗೆ ಹೋಗಲಿ ಇದ್ದ ಜಾಗದಲ್ಲೇ ಒಂದಿಷ್ಟು ಹೂವು, ಹಣ್ಣುಗಳ ಗಿಡ ಬೆಳೆವ ಉತ್ಸಾಹ. ಆಗೆಲ್ಲ ಲಾಲ್ಬಾಗ್ ನವರು ಮನೆಮನೆಗೆ ಬಂದು ಬೀಜಗಳನ್ನು ಉಚಿತವಾಗಿ ಕೊಟ್ಟು ಪ್ರೋತ್ಸಾಹಿಸುತ್ತಿದ್ದರು. ಈ ತೋಟಗಾರಿಕೆಗೆ ನಾನೂ ಸಹಾಯ ಮಾಡುತ್ತಿದ್ದರಿಂದ ಅಮ್ಮನಿಗೆ ನನ್ನ ಬಗ್ಗೆ ಮೆಚ್ಚುಗೆ ಇತ್ತು.

ನಾನು ಬೇರೆ ಊರುಗಳಲ್ಲಿದ್ದಾಗ, ನಮ್ಮ ಮನೆಗೆ ಭೇಟಿ ಕೊಟ್ಟಾಗಲೆಲ್ಲ ಅಮ್ಮ ಐದು ನಿಮಿಷಗಳಲ್ಲಿ ಕಾಫಿ ತಂದುಕೊಡುತ್ತಿದ್ದರು. ಊಟ, ಉಪಹಾರ ಏನೇ ಇರಲಿ ನನಗೆ  ಕಾಫಿ ಮೊದಲ ಪ್ರೀತಿಯೆಂದು ಅವರಿಗೆ ಚೆನ್ನಾಗಿ ಗೊತ್ತಿತ್ತು. ಒಮ್ಮೆ ಹಾಗೆ ಹೋದಾಗ “ಅಮ್ಮ ಇನ್ನು ಮೇಲೆ ಕಾಫಿಗೆ ಸಕ್ಕರೆ ಹಾಕಬೇಡ“ ಎಂದೆ. ಅದಕ್ಕೆ ಅಮ್ಮ “ಅಯ್ಯೋ ನಿನಗೂ ಸಕ್ಕರೆ ಕಾಯಿಲೆ ಬಂತೇನೋ, ನೀನೇನು ಜಾಸ್ತಿ ಸಿಹಿ ತಿನ್ನುತ್ತಾ ಇರಲಿಲ್ಲ. ಆದರೂ ಹುಷಾರು” ಎಂದು ಪರಿತಪಿಸಿದರು.

ಕೊನೆಯ ದಿನಗಳಲ್ಲಂತೂ ಸದಾ ತಂದೆಯವರನ್ನು ನೋಡಿಕೊಳ್ಳುವ ಧಾವಂತ ,ಬಂದು ಹೋಗುವವರನ್ನು ಗಮನಿಸುವ ಕಾಯಕಗಳಿಂದ ಸ್ವಂತ ಆರೋಗ್ಯದೆಡೆ ಲಕ್ಷ್ಯ ವಹಿಸಲಾಗದೆ  ಅಮ್ಮ ನಿತ್ರಾಣರಾದರು. ಆದರೆ ಜೀವನೋತ್ಸಾಹ ಹಾಗೂ ಮನೋಬಲಗಳಿಂದ ಚಟುವಟಿಕೆಯಿಂದಲೇ ಇರುತ್ತಿದ್ದರು.

ಕವಿಪತ್ನಿ ಕವಿಯ ಪ್ರೇಮ ಕವನಗಳ ರಚನೆಗೆ ಸ್ಪೂರ್ತಿಯಾದರೋ ಇಲ್ಲವೋ ಎಂಬುದು ಚರ್ಚೆಯ ವಿಷಯವಾದರೂ, ಒಟ್ಟಾರೆ  ಅಮ್ಮ ಅವರ ಸಾಹಿತ್ಯ ರಚನೆಗೆ ಪೂರಕ ಶಕ್ತಿಯಾಗಿದ್ದರೆಂಬುದು ನಿಸ್ಸಂದೇಹ. ಇದರ ಮಹತ್ವವನ್ನು ಮನಗಂಡು ಸರ್ಕಾರ ಸ್ಥಾಪಿಸಿರುವ ಕೆ ಎಸ್  ನ ಟ್ರಸ್ಟ್ ಪ್ರತಿ ವರ್ಷ ಒಬ್ಬ ಕವಿಪತ್ನಿಗೆ “ನಿನ್ನೊಲುಮೆಯಿಂದಲೇ” ಎಂಬ ಗೌರವ ಪ್ರಶಸ್ತಿ ನೀಡುತ್ತಿದೆ. ಅಂಥ ಮೊದಲ ಗೌರವ ಪಡೆದವರು ಶ್ರೀಮತಿ ಸತ್ಯಭಾಮಾ ಚಂದ್ರಶೇಖರ ಕಂಬಾರ ಅವರು.

(ಮುಂದುವರಿಯುವುದು)

ಈ ಲೇಖನ ಸರಣಿಯ ಹಿಂದಿನ ಸಂಚಿಕೆ ಇಲ್ಲಿದೆ:    http://surahonne.com/?p=32158

-ಕೆ ಎನ್ ಮಹಾಬಲ
(ಕೆ ಎಸ್ ನ ಪುತ್ರ, ಬೆಂಗಳೂರು)

5 Responses

  1. ನಯನ ಬಜಕೂಡ್ಲು says:

    ಮೇರು ವ್ಯಕ್ತಿತ್ವದ ಕೆ ಎಸ್ ನ ಅವರ ಜೊತೆ ಜೊತೆಗೆ ಅವರ ಪತ್ನಿಯವರ ಕುರಿತಾದ ಪರಿಚಯ ಬಹಳ ಆಪ್ತವಾಗಿದೆ.

  2. ಬಹಳ ಮುದಕೊಡುವ ಬರಹ ಚೆನ್ನಾಗಿ ಮೂಡಿ ಬರುತ್ತಿದೆ ಅಭಿನಂದನೆಗಳು ಸಾರ್.

  3. Padma Anand says:

    ಓದಿದಷ್ಟೂ ಇನ್ನೂ ಓದಬೇಕೆನ್ನಿಸುವ ಬರಹ. ಸೊಗಸಾಗಿದೆ.

  4. ಶಂಕರಿ ಶರ್ಮ says:

    ತಮ್ಮ ತಾಯಿಯವರ ಆಂತರಂಗಿಕ ವಿಷಯಗಳನ್ನು ತುಂಬಿ ಬಂದ ಬರಹ ಬಹಳ ಆತ್ಮೀಯವೆನಿಸಿತು ಸರ್ .. ಧನ್ಯವಾದಗಳು.

  5. Sayilakshmi S says:

    ನೇರನುಡಿಯ ಅಮ್ಮನ‌ ಮನೋಬಲ, ಅಸಹಾಯಕ‌ ಪರಿಸ್ಥಿತಿಯಲ್ಲೂ ಬಾಳ ಸಂಜೆಯ ದಾಂಪತ್ಯ‌ ನಿರ್ವಹಿಸಿದ ಅವರ ಸಾಮರ್ಥ್ಯ ಎಲ್ಲವೂ ನೆನಪಾಗಿ‌ ನೋವಾಗುತ್ತದೆ. ನಿಜವಾಗಿ ಕವಿ ಪತ್ನಿ ಪುರಸ್ಕಾರ ಅವರಿಂದಲೇ ಆರಂಭವಾಗಬೇಕಿತ್ತು. ಆಗ ಅದು ನಿಜದ ಅರ್ಥ,ಮಾನ್ಯತೆ ಸಾರ್ಥಕತೆ ಪಡೆಯುತಿತ್ತು.

Leave a Reply to ಬಿ.ಆರ್.ನಾಗರತ್ನ Cancel reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: