ವೀರರಾಣಿ ಅಹಲ್ಯಾಬಾಯಿ ಹೋಳ್ಕರ್

Spread the love
Share Button

ಅಹಲ್ಯಾಬಾಯಿ ಸಾಹೀಬ್ ಹೋಳ್ಕರ್

ವೀರ ವನಿತೆಯರು ಎಂದರೆ ಥಟ್ಟನೆ ನೆನಪಾಗುವುದು ಝಾನ್ಸಿಯ ರಾಣಿ ಲಕ್ಷ್ಮೀಬಾಯಿ ಹಾಗೂ ಕಿತ್ತೂರಿನ ರಾಣಿ ಚೆನ್ನಮ್ಮ ನ ಹೆಸರು ಮತ್ತು ಅವರ ಸಾಹಸಗಾಥೆಯ ಬಗ್ಗೆ. ಆದರೆ ಇತಿಹಾಸದ ಪುಟಗಳಲ್ಲಿ ಕಳೆದು ಹೋದ ವೀರ ವನಿತೆ ಮಹಾತಾಯಿ ಅಹಲ್ಯಾಬಾಯಿ ಸಾಹೀಬ್ ಹೋಳ್ಕರ್ ಬಗ್ಗೆ ಎಲ್ಲಿಯೂ ಉಲ್ಲೇಖ ಆಗದಿರುವುದು ವಿಷಾದನೀಯ.

ಈಕೆಯೊಬ್ಬ ಸಾಮಾನ್ಯ ಕುಟುಂಬದಿಂದ ಬಂದಿದ್ದರೂ ಮುಂದೆ ಜೀವನ ನೀಡಿದ ತಿರುವುಗಳಿಗೆ ಹೊಂದಿಕೊಳ್ಳುತ್ತಲೇ ಧೈರ್ಯವಂತೆ ದಿಟ್ಟೆ ಸಾಹಸಿಯಾಗಿ ಬರೊಬ್ಬರಿ ಮೂವತ್ನಾಲ್ಕು ವರ್ಷಗಳ ಕಾಲ ಪೇಶ್ವೆ ಮನೆತನದ ಸೊಸೆಯಾಗಿ ಇಂದೋರ್ ನ ಮಹಾರಾಣಿಯಾಗಿ ಆಡಳಿತ ನಡೆಸುತ್ತಾಳೆ. ಕುರಾಸನ್ನರು ಮೋಘಲರು ಮುಂತಾದ ಪರಕೀಯ ದೇಶದ್ರೋಹಿಗಳಿಂದ ಹಿಂದೂ ದೇವಾಲಯಗಳನ್ನು ರಕ್ಷಿಸಿ ನಶಿಸಿ ಹೋಗುತ್ತಿದ್ದ ಸನಾತನ ಧರ್ಮವನ್ನು ಉದ್ಧರಿಸಿದ ಮಹಾತಾಯಿ ಎಂದೇ ಪ್ರಖ್ಯಾತಳಾದ  ವೀರ ರಾಣಿ ಅಹಲ್ಯಾಬಾಯಿ ಹೋಳ್ಕರ್ ಭವ್ಯ ಭಾರತದ ಹೆಮ್ಮೆಯ ಪುತ್ರಿ.

ಈಕೆ ಹಳ್ಳಿಯ ಪಟೇಲ್ (ಮುಖ್ಯಸ್ಥ) ರಾದ ಮಂಕೋಜಿ ರಾವ್ ಶಿಂಧೆ ಯವರ ಮಗಳಾಗಿ 1725 ರ ಮೇ 31 ರಂದು ಮಹಾರಾಷ್ಟ್ರದ ಅಹ್ಮದ್ ನಗರದ ಜಮ್ ಖೇಡ್ ನ ಚೋಂಡಿ ಎಂಬ ಪುಟ್ಟ ಹಳ್ಳಿಯಲ್ಲಿ ಜನಿಸಿದ್ದು. ಆಗಿನ ಕಾಲದಲ್ಲಿ ಮಹಿಳೆಯರಿಗೆ ಶಿಕ್ಷಣ ದೂರದ ಮಾತಾಗಿತ್ತು. ಆದರೆ ಅಹಲ್ಯಾಬಾಯಿ ಶಿಕ್ಷಣದಿಂದ ವಂಚಿತಳಾಗಲಿಲ್ಲ. ಮನೆಯೆ ಪಾಠಶಾಲೆಯಾಯ್ತು; ತಂದೆಯೆ ಮಗಳಿಗೆ ಗುರುವಾದರು. ತಂದೆಯಿಂದ ಓದು ಬರಹ ಸಹಿತ ಭಾಷಾಜ್ಞಾನ, ವ್ಯಾವಹಾರಿಕ ಶಿಕ್ಷಣ ಹಾಗೂ ಸಮರ ಕಲೆ ಕೌಶಲಗಳನ್ನು ಕಲಿತರು. ಅಪಾರ ದೈವ ಭಕ್ತೆಯೂ, ಸನಾತನ ಧರ್ಮದ ಪರಿಪಾಲಕಿಯೂ ಹಾಗೂ ಅಪ್ರತಿಮ  ರಾಷ್ಟ್ರಾಭಿಮಾನಿಯೂ ಆಗಿದ್ದ ಅಹಲ್ಯಾಬಾಯಿ ಕೇವಲ ದಿಟ್ಟೆ, ಸಾಹಸಿ ಮಾತ್ರವಲ್ಲದೆ ಕರುಣಾಮಯಿ, ಮಾತೃಹೃದಯಿ ಕೂಡಾ.

ಪ್ರತಿನಿತ್ಯ ತನ್ನ ತಂದೆಯೊಂದಿಗೆ ಊರಿನ ದೇವಾಲಯದಲ್ಲಿ ಹಸಿದವರಿಗೆ, ಬಡ ಬಗ್ಗರಿಗೆ ಅನ್ನ ಸಂತರ್ಪಣೆ ಮಾಡುತ್ತಿದ್ದಳು.ಒಮ್ಮೆ ಒಂದನೇ ಪೇಶ್ವೆ ಬಾಜೀರಾವ್ ನ ಆಡಳಿತದಲ್ಲಿ ವೀರ ಸೇನಾನಿಯಾಗಿದ್ದ ಮಾಲ್ವಾ ಪ್ರದೇಶದ ಜನರಿಗೆ ಅಕ್ಷರಶಃ ದೇವರು ಎನಿಸಿಕೊಂಡಿದ್ದ ಮಲ್ಹಾರ್ ರಾವ್ ಹೋಳ್ಕರ್ ಜಮ್ ಖೇಡ್ ಮಾರ್ಗವಾಗಿ ಪುಣೆಗೆ ಹೋಗುವಾಗ ಅನ್ನ ಸಂತರ್ಪಣೆ ಕಾರ್ಯದಲ್ಲಿ ತೊಡಗಿದ್ದ ಎಂಟು ವರ್ಷದ ಪುಟ್ಟ ಬಾಲಕಿ ಅಹಲ್ಯಾಬಾಯಿಯನ್ನು ಕಂಡು ಆಶ್ಚರ್ಯದಿಂದ ಅಲ್ಲೆ ಇದ್ದ ಜನರ ಬಳಿ ಆಕೆಯ ಬಗ್ಗೆ ವಿಚಾರಿಸಿದಾಗ ಅದರಿಂದ ಪ್ರಭಾವಿತನಾಗಿ ನೇರವಾಗಿ ಅಹಲ್ಯಾಬಾಯಿಯ ತಂದೆ ಮಂಕೋಜಿ ರಾವ್ ಶಿಂಧೆ ಬಳಿ ಹೋಗಿ ತನ್ನ ಮಗ ಖಂಡೇರಾವ್ ಹೋಳ್ಕರ್ ನಿಗಾಗಿ ಕನ್ಯಾಭಿಕ್ಷೆ ಕೇಳುತ್ತಾನೆ.

ಕೆಲ ದಿನಗಳ ನಂತರ….. ಇದರಿಂದ ಸಂತುಷ್ಟನಾದ ಮಂಕೋಜಿ ರಾವ್ ಶಿಂಧೆ 1733 ರಲ್ಲಿ ಮುದ್ದು ಮಗಳು ಎಂಟು ವರ್ಷದ ಪುಟ್ಟ ಪೋರಿ ಅಹಲ್ಯಾಬಾಯಿ ಯನ್ನು ಮಲ್ಹಾರ್ ರಾವ್ ಹೋಳ್ಕರ್ ಪುತ್ರನಾದ ಖಂಡೇರಾವ್ ಹೋಳ್ಕರ್ ನೊಂದಿಗೆ ವಿವಾಹ ಮಾಡಿ ಕೊಡುತ್ತಾನೆ. ವಿವಾಹಾನಂತರ ಅಹಲ್ಯಾಬಾಯಿ ಸಾಹೀಬ್ ಹೋಳ್ಕರ್ ಆಗಿ ಮಾವ ಮಲ್ಹಾರ್ ರಾವ್ ಹೋಳ್ಕರ್ ನ ಮುದ್ದಿನ ಸೊಸೆಯಾಗಿ ಮಾಲ್ವಾಗೆ ಬಂದು ತನ್ನ ಸಂಸಾರದೊಂದಿಗೆ ನೆಲೆಸುತ್ತಾಳೆ. ಅಹಲ್ಯಾಬಾಯಿ ಖಂಡೇರಾವ್ ಹೋಳ್ಕರ್ ದಂಪತಿಗಳಿಗೆ ಇಬ್ಬರು ಮಕ್ಕಳು – ಮಗ ಮಾಲೇರಾವ್ ಹೋಳ್ಕರ್ ಮಗಳು ಮುಕ್ತಾಬಾಯಿ ಹೋಳ್ಕರ್. ಮಾಲೇರಾವ್  ಹೋಳ್ಕರ್ ಹುಟ್ಟುತ್ತಲೇ ಮಾನಸಿಕ ಅಸ್ವಸ್ಥತೆ ಹಾಗೂ ದೈಹಿಕ ದುರ್ಬಲತೆಯನ್ನು ಹೊಂದಿದ್ದ.

1754 ರಲ್ಲಿ ಮೊಘಲರು ಹಿಂದೂಗಳ ಸ್ವತ್ತುಗಳನ್ನು ಮುತ್ತಿಗೆ ಹಾಕಿದ್ದ ಸಮಯದಲ್ಲಿ ರಾಜಧಾನಿ ಮಾಹೇಶ್ವರ್ ಅನ್ನು ರಕ್ಷಿಸುತ್ತಿದ್ದ ಖಂಡೇರಾವ್ ಹೋಳ್ಕರ್ ಕುಂಭೇರ್ ಕದನದಲ್ಲಿ ಮೋಘಲರೊಂದಿಗೆ ಹೋರಾಡಿ ವಿಫಲನಾಗಿ ಗಾಯಗೊಂಡು ಮೃತ್ಯು ಹೊಂದುತ್ತಾನೆ. ಆಗ ಮಲ್ಹಾರ್ ರಾವ್ ಹೋಳ್ಕರ್ ರವರು ತಮ್ಮ ಸೊಸೆ ಅಹಲ್ಯಾಬಾಯಿಯನ್ನು ಸತಿ ಸಹಗಮನ ಹೊಂದುವುದನ್ನು ತಡೆದು ರಕ್ಷಿಸಿ ಆಕೆಗೆ ರಾಜ್ಯಸೂತ್ರಗಳನ್ನು ನಿರ್ದೇಶಿಸಿ ಇಂದೋರ್ ನ ಆಡಳಿತಾಧಿಕಾರವನ್ನು ವಹಿಸುತ್ತಾರೆ. ಕ್ರಮೇಣ 1767 ರಲ್ಲಿ ಮಲ್ಹಾರ್ ರಾವ್ ಅವರು ತಮ್ಮ ಸೊಸೆ ಅಹಲ್ಯಾಬಾಯಿಯನ್ನು ಅಧಿಕೃತವಾಗಿ ಇಂದೋರ್ ನ ಮಹಾರಾಣಿ ಯಾಗಿ ಪಟ್ಟಾಭಿಷೇಕ ಮಾಡುವ ಮೂಲಕ ಮಾಲ್ವ ಪ್ರಾಂತ್ಯದ ಸಮಸ್ತ ಅಧಿಕಾರವನ್ನು ಆಕೆಗೆ ಹಸ್ತಾಂತರಿಸಿ ಅವರು ತಮ್ಮ ಜವಾಬ್ದಾರಿಯಿಂದ ವಿಮುಕ್ತಿ ಹೊಂದುತ್ತಾರೆ. ಮತ್ತು ಇದರ ಬೆನ್ನಲ್ಲೇ ಕೆಲವೇ ದಿನಗಳಲ್ಲಿ ಮಲ್ಹಾರ್ ರಾವ್ ಹೋಳ್ಕರ್ ವಯೋಸಹಜ ಸಾವನ್ನಪ್ಪುತ್ತಾರೆ.

ಆದ್ದರಿಂದ ಅಹಲ್ಯಬಾಯಿ ಇಂದೋರ್ ನ ಆಂತರಿಕ ಭದ್ರತಾ ಉಸ್ತುವಾರಿಯನ್ನು ಮೈದುನ ತುಕೋಜಿ ರಾವ್ ಹೋಳ್ಕರ್ (ಮಲ್ಹಾರ್ ರಾವ್ ಹೋಳ್ಕರ್ ರ ದತ್ತು ಪುತ್ರ) ನಿಗೆ ವಹಿಸುತ್ತಾಳೆ. ಮತ್ತು ಅಂದಿನಿಂದಲೇ ವೀರಗಚ್ಚೆ ತೊಟ್ಟು ಟೊಂಕ ಕಟ್ಟಿ ಖಡ್ಗ ಹಿಡಿದು ಕುದುರೆಯೇರಿ ಪೂರ್ತಿ ಭಾರತ ಪರ್ಯಟನೆ ಮಾಡಿ ದೇಶದ್ರೋಹಿಗಳ ದಾಳಿಗೆ ಸಿಲುಕಿ ಧ್ವಂಸಗೊಂಡ ಸಾವಿರಾರು ಹಿಂದೂ ದೇವಾಲಯಗಳನ್ನು ರಕ್ಷಿಸಿ ಪುನರುತ್ಥಾನ ಕಲ್ಪಿಸುವ ಮೂಲಕ ಸನಾತನ ಧರ್ಮ ಪರಿಪಾಲನೆಯ ಮಹತ್ಕಾರ್ಯದಲ್ಲಿ ತೊಡಗುತ್ತಾಳೆ.

ಮಹಾರಾಣಿ ಅಹಲ್ಯಾಬಾಯಿಯು ದ್ವಾದಶ ಜ್ಯೋತಿರ್ಲಿಂಗ ಕ್ಷೇತ್ರಗಳು, ಹರಿದ್ವಾರ, ಹೃಷಿಕೇಶ,ಬದರೀನಾಥ, ಕಾಂಚಿ, ಅಯೋಧ್ಯ, ಅವಂತಿ,‌ದ್ವಾರಕಾ, ಮಥುರಾ,‌ಗಯಾ, ರಾಮೇಶ್ವರ ಹಾಗೂ ಪುರಿ ಜಗನ್ನಾಥ್ ಸಹಿತವಾಗಿ ಸಾವಿರಾರು ಶಿವ ಮತ್ತು ರಾಮ ದೇವರ ಚಿಕ್ಕಪುಟ್ಟ ಗುಡಿ ಗೋಪುರಗಳು ಸೇರಿ ಒಟ್ಟು ಮೂರು ಸಾವಿರದ ಐನೂರು ಹಿಂದೂ ದೇವಾಲಯಗಳನ್ನು ಮೋಘಲರಿಂದ ರಕ್ಷಿಸಿ ಎಲ್ಲಾ ದೇವಾಲಯಗಳಿಗೂ ಪುನರುತ್ಥಾನ ಕಲ್ಪಿಸುತ್ತಾಳೆ.

ಅಹಲ್ಯಾಬಾಯಿಯ ಆಡಳಿತಾವಧಿಯಲ್ಲಿ ಇಂದೋರ್ ಹಾಗೂ ಆಸುಪಾಸಿನ ಅನೇಕ ಹಳ್ಳಿಗಳು ಸಮೃದ್ಧವಾಗಿತ್ತು. ಸದಾ ಪ್ರಜೆಗಳ ಅಹವಾಲು ಆಲಿಸಿ ಅವರ ಅಗತ್ಯಗಳನ್ನು ಅರಿತು ಪೂರೈಸಿ, ಕಾಲಕಾಲಕ್ಕೆ ಅವರ ಕೃಷಿ ವ್ಯಾಪಾರ ವಹಿವಾಟುಗಳಿಗೆ ಎಲ್ಲ ರೀತಿಯಿಂದ ಸಹಕರಿಸುವುದೇ ಅಹಲ್ಯಾಬಾಯಿಯ ಮುಖ್ಯ ಧ್ಯೇಯವಾಗಿತ್ತು. ಕೃಷಿ ಹಾಗೂ ದೈನಂದಿನ ಬಳಕೆಗೆ ಅಗತ್ಯವಿರುವ ಕೆರೆ ಬಾವಿ ನಿರ್ಮಿಸಿ ಪ್ರಜೆಗಳನ್ನು ನೀರಿನ ಅಭಾವದಿಂದ ಪಾರುಮಾಡುತ್ತಾಳೆ. ಪ್ರಜೆಗಳ ಪಾಲಿಗೆ ಆಕೆ ಮಹಾತಾಯಿ ಆಗಿದ್ದಳು.

ಒಮ್ಮೆ ತನ್ನ ಅನುಪಸ್ಥಿಯಲ್ಲಿ ಮಗ ಮಾಲೇರಾವ್ ಹೋಳ್ಕರ್ ಮಾಲ್ವಾ ದ ರಸ್ತೆಯಲ್ಲಿ ಅಡ್ಡಾದಿಡ್ಡಿಯಾಗಿ ರಥ ನಡೆಸುವಾಗ ಜೋಲಿ ತಪ್ಪಿ ಮೇಯುತ್ತಿದ್ದ ಆಕಳ ಕರುವಿನ ಮೇಲೆ ಹಾಯ್ದುಕರು ಮೃತ ಪಟ್ಟಿತ್ತು. ವಿಷಯ ತಿಳಿದ ಅಹಲ್ಯಾಬಾಯಿ ಮುಗ್ಧ ಕರುವನ್ನು ಕಳೆದುಕೊಂಡ ತಾಯಿ ಆಕಳ ಸ್ಥಿತಿಯನ್ನು ಕಂಡು ಮರುಗಿ ಈ ನೋವು ತನ್ನನ್ನು ಬಂಧಿಸಬೇಕು ಆಗಲೇ ಆಕಳಿಗಾದ ನಷ್ಟವನ್ನು ಭರ್ತಿ ಮಾಡಲು ಸಾಧ್ಯ ಎಂದು ನಿರ್ಧರಿಸಿ ಕೂಡಲೇ ತನ್ನ ಮಗ ಮಾಲೇರಾವ್ ಹೋಳ್ಕರ್ ನನ್ನು ರಸ್ತೆಯಲ್ಲಿ ಅಡ್ಡಲಾಗಿ ಮಲಗಿಸಿ ಆತನ ಮೇಲೆ ರಥವನ್ನು ಹಾಯಿಸಿ ಸಾಯಿಸಲು ಪ್ರಯತ್ನಿಸುತ್ತಾಳೆ. ಆದರೆ ಇದನ್ನು ಗಮನಿಸಿದ ಆಕಳು ಅವಳನ್ನು ಅಡ್ಡ ಗಟ್ಟಿ ತಡೆಯುತ್ತದೆ. ಇದನ್ನು ಕಡೆಗಣಿಸಿ ಅಹಲ್ಯಾಬಾಯಿ ಹಲವು ಬಾರಿ ಯತ್ನಿಸಿ ಸೋತು ಮರಳಿ ಹೋಗುತ್ತಾಳೆ. ಈ ಘಟನೆ ಅಹಲ್ಯಾಬಾಯಿಯ ಧರ್ಮನಿಷ್ಠ ಆಡಳಿತಕ್ಕೆ ಸಾಕ್ಷಿಯಾಗುತ್ತದೆ. ಇದಾದ ಕೆಲ ದಿನಗಳ ಬಳಿಕ ಮಗನು ಅನಾರೋಗ್ಯದಿಂದ ತೀರಿಕೊಳ್ಳುತ್ತಾನೆ. ಈಗಲೂ ಈ ಘಟನೆ ನಡೆದ ಇಂದೋರ್‌ನ ಪ್ರದೇಶವನ್ನು “ಅಡ್ಡ ಬಝಾರ್” ಎಂದು ಕರೆಯಲಾಗುತ್ತದೆ.

ಪತಿ ಮತ್ತು ಪುತ್ರ ವಿಯೋಗದಿಂದ ದುಃಖಿತಳಾಗಿದ್ದ ಅಹಲ್ಯಾಬಾಯಿ ಯನ್ನು ಕಂಡು ಕುಟಿಲ ಬುದ್ಧಿಯ ಗಂಗಾಧರ ಎಂಬಾತನು ಆಕೆಯನ್ನು ಕುರಿತು “ನೀನೊಬ್ಬ ಅಬಲೆ ಹೆಣ್ಣು ಆಡಳಿತ ನಡೆಸಲು ನಿನಗೆ ಕಷ್ಟವಾಗಬಹುದು. ಆದ್ದರಿಂದ ಒಬ್ಬ ಗಂಡು ಮಗುವನ್ನು ದತ್ತು ತೆಗೆದುಕೊಂಡು ಬೆಳೆಸು. ಅವನು ವಯಸ್ಸಿಗೆ ಬರುವವರೆಗೆ ನಾನೇ ಆಳ್ವಿಕೆ ನಡೆಸುತ್ತೇನೆ” ಎಂದು ಬುದ್ಧಿ ಹೇಳಲು ಬರುತ್ತಾನೆ. ಆದರೆ ಅಹಲ್ಯಾಬಾಯಿ ಅವನ ಮಾತಿಗೆ ಸೊಪ್ಪು ಹಾಕದೆ ಬೈದು ಕಳಿಸುತ್ತಾಳೆ. ಇದರಿಂದ ಕೋಪಿಷ್ಠನಾದ ಗಂಗಾಧರನು ಪೇಶ್ವೆ ಮಾಧವರಾವ್ ನ ತಮ್ಮ ರಘುನಾಥ ರಾವ್ ನಿಗೆ “ಇಂದೋರ್ ನೋಡಿಕೊಳ್ಳಲು ಗಂಡು ದಿಕ್ಕಿಲ್ಲದ ಕಾರಣ ಈ ರಾಜ್ಯವನ್ನು ಸುಲಭವಾಗಿ ವಶ ಪಡಿಸಿಕೊಳ್ಳಬಹುದು” ಎಂದು ಪತ್ರ ಬರೆಯುತ್ತಾನೆ.

ಇದರಿಂದ ಉತ್ತೇಜಿತನಾದ ರಘುನಾಥನು ತನ್ನ ಸೇನ್ಯೆಯನ್ನು ಕಟ್ಟಿಕೊಂಡು ಇಂದೋರ್ ಮೇಲೆ ಆಕ್ರಮಣ ಮಾಡಲು ಸಿದ್ಧನಾಗುತ್ತಾನೆ. ಗುಪ್ತಚರರ ಮೂಲಕ ಈ ವಿಷಯ ತಿಳಿದ ಅಹಲ್ಯಾಬಾಯಿಗೆ ಇದು ಗಂಗಾಧರನ ಕುಟಿಲ ತಂತ್ರ ಎಂದರಿಯಲು ಬಹಳ ಸಮಯ ಹಿಡಿಯಲಿಲ್ಲ. ಇದಕ್ಕೆ ಎದೆಗುಂದದೆ ಅಹಲ್ಯಾಬಾಯಿ ಸುತ್ತಮುತ್ತಲ ಹಳ್ಳಿ ಹಳ್ಳಿಗಳಾದ ಗಾಯಕವಾಡ್, ದಾಬಾಡೇ, ಭೋಂಸ್ಲೆ ಯ ಸಾಮಂತರಾಜರಲ್ಲಿ ಸಹಾಯ ಯಾಚಿಸಿ ಸೈನಿಕರನ್ನು ಸಿದ್ಧ ಪಡಿಸಿ ಬೃಹತ್ ಸೈನ್ಯವನ್ನು ಕಟ್ಟುತ್ತಾಳೆ. ಆದರೆ ಯುದ್ಧ ಪ್ರಾರಂಭಿಸುವ ಮುನ್ನ ಆಕೆಗೊಂದು ಸಮರ ತಂತ್ರ ಹೊಳೆಯುತ್ತದೆ. ಹೆಚ್ಚು ಯೋಚಿಸದೇ ಧೈರ್ಯ ಮಾಡಿ ರಘುನಾಥನಿಗೆ ಪತ್ರ ಬರೆಯುವ ಮೂಲಕ ತನ್ನ ಯುಕ್ತಿಯ ಅಸ್ತ್ರವನ್ನು ಪ್ರಯೋಗಿಸುತ್ತಾಳೆ “ಮೀಸೆ ಹೊತ್ತ ಗಂಡಸರು ನೀವು. ಯುದ್ಧ ಮಾಡಿ ಹೆಣ್ಣೊಬ್ಬಳಿಂದ ಸೋತು ಹೋದರೆ ಯಾರಿಗೂ ಮುಖ ತೋರಿಸುವಂತಿಲ್ಲ. ನೀವು ಬದುಕಿರುವವರೆಗೂ ಈ ಕೆಟ್ಟ ಹೆಸರು ನಿಮಗೆ ಅಂಟಿಕೊಂಡಿರುತ್ತದೆ. ಆದ್ದರಿಂದ ಸರಿಯಾಗಿ ಯೋಚಿಸಿಯೇ ಮುಂದೆ ಬನ್ನಿರಿ.” ಇದರಿಂದ ಲಜ್ಜಿತನಾದ ರಘುನಾಥನು ತನಗಾದ ಅವಮಾನವನ್ನು ಮುಚ್ಚಿಡಲು ಅಹಲ್ಯಾಬಾಯಿಯ ಪತ್ರಕ್ಕೆ ಉತ್ತರ ಬರೆದು “ನಿಮಗೆ ಪತಿ ಮತ್ತು ಪುತ್ರನ ವಿಯೋಗದಿಂದ ದುಃಖವಾಗಿದೆ. ನಿಮಗೆ ಸಾಂತ್ವನ ಹೇಳುವ ಸಲುವಾಗಿ ನಾವು ಬಂದಿದ್ದು. ಆದರೆ ನೀವು ತಪ್ಪು ತಿಳಿದಿರುವಂತೆ ಕಾಣುತ್ತದೆ. ದಯವಿಟ್ಟು ಕ್ಷಮಿಸಿ” ಎಂದು ಉಪಾಯದಿಂದ ಯುದ್ಧ ಹಿಂತೆಗೆದುಕೊಂಡು ತನ್ನ ರಾಜ್ಯಕ್ಕೆ ಮರಳುತ್ತಾನೆ.

ಒಮ್ಮೆ ಯಶವಂತ್ ಎಂಬ ಒಬ್ಬ ಅನಾಥ ಯುವಕ ಡಕಾಯಿತರೊಂದಿಗೆ ಸೆಣಸಾಡಿ ಬಡವರನ್ನು ರಕ್ಷಿಸುತ್ತಿರುವುದನ್ನು ಗಮನಿಸಿದ ಅಹಲ್ಯಾಬಾಯಿ ಆತನನ್ನು ತನ್ನ ಮಗಳು ಮುಕ್ತಾಬಾಯಿಯೊಂದಿಗೆ ವಿವಾಹ ಮಾಡಿಸಿ ತನ್ನ ರಾಜಧಾನಿ ಮಾಹೇಶ್ವರದ ಆಡಳಿತದಲ್ಲಿ ಕೆಲವು ಜವಾಬ್ದಾರಿ ವಹಿಸಿ ಯಶವಂತ್ ನನ್ನು ತನ್ನ ಕುಟುಂಬದ ಒಬ್ಬ ಸದಸ್ಯನನ್ನಾಗಿ ಕಾಣುತ್ತಾಳೆ.

ಹೀಗೆ ಸತತವಾಗಿ ಮೂರು ದಶಕಗಳ ಕಾಲ ವೀರರಾಣಿಯಾಗಿ, ಬಡವರ ಬಂಧುವಾಗಿ, ಪ್ರಜೆಗಳ ಮಹಾತಾಯಿಯಾಗಿ, ಧರ್ಮನಿಷ್ಠೆಯಿಂದ ಸನಾತನ ಧರ್ಮದ ಪರಿಪಾಲನೆ ಮಾಡುತ್ತ ದೇವಾಲಯಗಳ ರಕ್ಷಣೆ ಮತ್ತು ಪುನರುತ್ಥಾನ ಕಾರ್ಯದಲ್ಲಿ ತನ್ನನ್ನು ಸಮರ್ಪಿಸಿಕೊಂಡಿದ್ದ ಮಹಾರಾಣಿ ಅಹಲ್ಯಾಬಾಯಿ ಸಾಹೀಬ್ ಹೋಳ್ಕರ್ 1795 ರ ಆಗಸ್ಟ್ 13 ರಂದು ಇಹಲೋಕ ತ್ಯಜಿಸಿದಳು.

ಈಕೆಯ ಸಾಹಸ, ರಾಷ್ಟ್ರಾಭಿಮಾನ, ದೈವ ಭಕ್ತಿ, ಸನಾತನ ಧರ್ಮವನ್ನು ಕಾಪಾಡುವ ಹೃದಯವಂತಿಕೆಯನ್ನು ಮೆಚ್ಚಿ ರಾಜಾರಾಮ್ ಮೋಹನ್ ರಾಯ್, ಆ್ಯನ್ನಿ ಬೆಸೆಂಟ್, ಜೋಹಾನ್ನಾ ಬೇಯ್ಲಿ, ಜಾನ್ ಮೇಲ್ ಕೋಮ್ ಹಾಡಿ ಹೊಗಳಿದ್ದಾರೆ. 1996 ರಲ್ಲಿ ಭಾರತ ಸರ್ಕಾರವು ಅಹಲ್ಯಾಬಾಯಿ ಹೋಳ್ಕರ್ ಳ 200 ನೇ ಜನ್ಮ ಶತಮಾನೋತ್ಸವದ ಅಂಗವಾಗಿ ಆಕೆಯ ಚಿತ್ರವಿರುವ ಅಂಚೆಚೀಟಿಯನ್ನು ಹೊರತಂದರು.

ಈಗಲೂ ಗೋಕರ್ಣ, ಬನವಾಸಿ, ಕಾಶಿ, ಬದರೀನಾಥ ಹಾಗೂ ಮಹಾರಾಷ್ಟ್ರದ ಕೆಲ ದೇವಾಲಯಗಳಲ್ಲಿ ಅಹಲ್ಯಾಬಾಯಿಯ ಹೆಸರಿನಲ್ಲಿ ದಿನನಿತ್ಯ ಅರ್ಚನೆ ಮಾಡಲಾಗುತ್ತದೆ. ಇಂದೋರ್ ಸಮೀಪ ಆಕೆಯದ್ದೆ ಗದ್ದುಗೆ ಇರುವ ಮಂದಿರವಿದೆ. ಅಲ್ಲಿ ದಿನನಿತ್ಯ ಪೂಜೆ ನಡೆಯುತ್ತದೆ. ಹೋಳ್ಕರ್ ಸಂಸ್ಥಾನ ಮಾಹೇಶ್ವರದ ಬೃಹತ್ ಕೋಟೆಯನ್ನು ಈಗಲೂ ಕಾಣಬಹುದಾಗಿದೆ.

ಚಿತ್ರ ಕೃಪೆ: ಗೂಗಲ್

ಮೇಘನಾ ಕಾನೇಟ್ಕರ್

3 Responses

  1. ನಾಗರತ್ನ ಬಿ.ಆರ್ says:

    ಅಹಲ್ಯಾಬಾಯಿ ಹೋಳ್ಕರ್ ಅವರ ಪರಿಚಯ ಅದಕ್ಕೆ ಪೂರಕವಾದ ಚಿತ್ರಣಗಳನ್ನು ಒಳಗೊಂಡ ಲೇಖನ ಚೆನ್ನಾಗಿದೆ.ಅಭಿನಂದನೆಗಳು.

  2. ನಯನ ಬಜಕೂಡ್ಲು says:

    ತುಂಬಾ ಚೆನ್ನಾಗಿದೆ, ಮಾಹಿತಿಪೂರ್ಣ ಲೇಖನ

  3. ಶಂಕರಿ ಶರ್ಮ says:

    ಹೌದು.. ವೀರರಾಣಿ ಅಹಲ್ಯಾಬಾಯಿ ಹೋಳ್ಕರ್ ಬಗ್ಗೆ ಈ ಲೇಖನದಿಂದಲೇ ಅರಿವು ಮೂಡಿತು. ಎಂತಹ ದಿಟ್ಟೆ..!! ಯಾವ ರಾಷ್ಟ್ರ ಭಕ್ತರಿಗೂ ಕಡಿಮೆಯಿಲ್ಲದಂತೆ ನಾಡನ್ನು, ಅದರ ಸಂಸ್ಕೃತಿಯನ್ನು ರಕ್ಷಿಸಿದ ಮಹಾಮಾತೆಗೆ ಶರಣೆಂಬೆ. ಅಪರೂಪದ ಮಾಹಿತಿ ಒದಗಿಸಿದ ತಮಗೂ ನಮನಗಳು.

Leave a Reply

 Click this button or press Ctrl+G to toggle between Kannada and English

Your email address will not be published.

Follow

Get every new post on this blog delivered to your Inbox.

Join other followers: